ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ..

”ಬೆವರ ಹನಿಯೊಳಗಣ ಸಾಗರವನ್ನು ಕಾಣುತ್ತಾ…”

 

ಮೇಲೆ ತಲೆಯೆತ್ತಿ ಒಮ್ಮೆ ನೋಡಬೇಕು.

ಕಡುನೀಲಿ ಆಕಾಶ. ಯಾರೋ ಎರಡು ಹನಿ ಹೆಚ್ಚೇ ‘ಉಜಾಲಾ’ ಹಾಕಿದ್ದಾರೆ ಎನ್ನುವಂತೆ. ಆ ನೀಲಿ ಹಿನ್ನೆಲೆಯಲ್ಲಿ ಮತ್ತಷ್ಟು ಬಿಳಿಯಾಗಿ ಎದ್ದು ಕಾಣುವ ಮೋಡಗಳು. ಥೇಟು ಹತ್ತಿಯ ಮುದ್ದೆಗಳಂತೆ. ನಾನು ನನ್ನ ಮೊಬೈಲ್ ಕ್ಯಾಮೆರಾ ಹಿಡಿದುಕೊಂಡು ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಲು ಪ್ರಯತ್ನಿಸುತ್ತೇನೆ. ಕ್ಯಾಮೆರಾ ಮೇಲಕ್ಕೆ ಹಿಡಿದರೆ ಬಿಸಿಲಿನ ಝಳಕ್ಕೆ ಏನೇನೂ ಕಾಣಿಸುತ್ತಿಲ್ಲ. ಸಿಕ್ಕರೆ ಸಿಗಲಿ ಎಂಬ ಆಸೆಯಲ್ಲಿ ಪ್ರಯಾಸಪಟ್ಟು ಕಣ್ಣನ್ನು ತೆರೆಯುತ್ತಾ ಕ್ಲಿಕ್ ಮಾಡುವ ಜಾಗ ಎಲ್ಲಿದೆ ಎಂಬುದನ್ನು ಊಹಿಸಿಕೊಂಡು ಕ್ಲಿಕ್ಕಿಸುತ್ತೇನೆ. ಆ ಬಿಸಿಲ ಝಳಕ್ಕೆ ನಾನೇ ಕಣ್ಣುಬಿಡಲಾಗದೆ ಒದ್ದಾಡುತ್ತಿದ್ದೇನೆ, ಇನ್ನು ಈ ಮೊಬೈಲಿನ ಕ್ಯಾಮೆರಾದಲ್ಲೇನು ಕಾಣುತ್ತದೆ ನನಗೆ!

ನಂತರ ಹಾಗೆಯೇ ನಿಧಾನವಾಗಿ ದೃಷ್ಟಿಯನ್ನು ಕೆಳಕ್ಕೆ ಹರಿಸುತ್ತೇನೆ. ಕಣ್ಣು ಬಹಳ ಕಷ್ಟದಿಂದ ಗಿಡಮರಗಳ ಹಸಿರನ್ನು ಮಣ್ಣಿನ ಕೆಂಪನ್ನು ನೋಡುತ್ತಾ ಸಾವರಿಸಿಕೊಳ್ಳುತ್ತದೆ. ಆದರೆ ಸುಡುಸುಡು ಬಿಸಿಲಿನಿಂದಾಗಿ ನನ್ನ ಕಣ್ಣುಗಳು ಇನ್ನೂ ಚಿಕ್ಕದಾಗಿಯೇ ಅತ್ತಿತ್ತ ನೋಡುತ್ತಿವೆ. ಬೆಂಕಿಯುಂಡೆಯಂತಿರುವ ಸೂರ್ಯ ಬೆನ್ನ ಹಿಂದಿನ ಭಾಗದಲ್ಲಿ ಎಲ್ಲೋ ಇದ್ದರೂ ನನ್ನನ್ನಷ್ಟೇ ಸತಾಯಿಸುವವನಂತೆ, ತನ್ನ ಬೆಂಕಿ ಬೀಸಣಿಗೆಯಿಂದ ನನ್ನ ಕಪಾಳಕ್ಕೆ ರಪರಪನೆ ಬೀಸುತ್ತಿರುವಂತೆ ಭಾಸವಾಗುತ್ತದೆ. ಆ ಮಟ್ಟಿನ ಧಗೆ ಅದು. ಕೈಯ್ಲಲೊಂದು ಕೊಡೆ ಹಿಡಿದಿದ್ದರೂ ಕುಂಭದ್ರೋಣ ಮಳೆಗೆ ಸೋರುತ್ತಿರುವ ಗುಡಿಸಲಿನ ಸೂರಿನಂತೆ ಹಣೆಯಿಂದ ಧಾರಾಕಾರವಾಗಿ ಸುರಿಯುತ್ತಿರುವ ಬೆವರನ್ನು ಒರೆಸಿಕೊಳ್ಳುತ್ತಾ ನೆರಳಿಗೆ ಬಂದು ನಿಲ್ಲುತ್ತೇನೆ. ಎಲೆಗಳು ಒಂದಿಷ್ಟು ಅಲ್ಲಾಡುವ ದಯೆ ತೋರುವಾಗ ಕೊಂಚ ನಿರಾಳವೆನಿಸುತ್ತದೆ.

ನಾನು ಹೀಗೆ ಇತ್ತ ಕೊಸರಾಡುತ್ತಿದ್ದರೆ ನನ್ನಿಂದ ಹತ್ತೇ ಹತ್ತು ಮೀಟರ್ ದೂರದಲ್ಲಿ ಸುಮಾರು ಹೆಣ್ಣುಮಕ್ಕಳು ಗುಂಪುಗೂಡಿದ್ದಾರೆ. ಇರುವೆಗಳಂತೆ ಅತ್ತಿತ್ತ ಲಗುಬಗೆಯಿಂದ ಓಡಾಡುತ್ತಾ ತಮ್ಮದೇ ಕಾರ್ಯಗಳಲ್ಲಿ ಅವರು ವ್ಯಸ್ತರಾಗಿದ್ದಾರೆ. ಸುತ್ತಲೂ ಇಟ್ಟಿರುವ, ಬಿದ್ದುಕೊಂಡಿರುವ ಹಸಿರು, ಹಳದಿ, ಕೆಂಪು, ನೀಲಿ ಬಣ್ಣದ ವಿವಿಧ ಗಾತ್ರದ ಬಕೆಟ್ಟುಗಳು ಮೇಲಿರುವ ಆಗಸದ ಉಜಾಲಾ ನೀಲಿಯೊಂದಿಗೆ ಸ್ಪರ್ಧೆಗೆ ಬಿದ್ದಿರುವಂತೆ ಕಣ್ಣಿಗೆ ರಾಚುತ್ತಿವೆ. ಬಣ್ಣಬಣ್ಣದ ಪೆಪ್ಪರುಮೆಂಟುಗಳಂತಿರುವ ಬಕೆಟ್ಟುಗಳು ಮತ್ತು ಅವುಗಳ ಸುತ್ತಮುತ್ತಲೂ ಇರುವೆಗಳಂತೆ ಲಗುಬಗೆಯಿಂದ ಓಡಾಡುತ್ತಿರುವ ಮಹಿಳೆಯರು.

ಆದರೆ ಅವರು ನನ್ನಂತೆ ನಿಂತಲ್ಲೇ ಮೈಮರೆತಿಲ್ಲ. ನನ್ನ ಇರುವಿಕೆಯಾಗಲಿ ಕೊಡೆ ಹಿಡಿದು ಮಾಡಿಕೊಳ್ಳುತ್ತಿರುವ ಕೊಸರಾಟಗಳಾಗಲಿ ಅವರ ಕಣ್ಣಿಗೆ ಬೀಳುತ್ತಿಲ್ಲ. ಏಕೆಂದರೆ ಸದ್ಯ ಅವರ ಕಣ್ಣುಗಳಿಗೆ ಕಾಣುತ್ತಿರುವುದು ಎರಡೇ. ತಾವು ಮನೆಯಿಂದ ತಂದಿರುವ ಬಣ್ಣದ ಬಕೆಟ್ಟುಗಳು ಮತ್ತು ನೋಡಲು ದೊಡ್ಡ ಬೋನಿನಂತಿರುವ, ನೀರು ಸರಬರಾಜಾಗುತ್ತಿರುವ ಟ್ಯಾಂಕಿನ ನಲ್ಲಿಯಿಂದ ಹೊರಟು ಈ ಬಣ್ಣದ ಬಕೆಟ್ಟುಗಳನ್ನು ತುಂಬಿಸುತ್ತಿರುವ ಉದ್ದನೆಯ ಪೈಪು. ಈ ಪೈಪು ಶಿಸ್ತಿನಿಂದ ಸಾಲಾಗಿ ನಿಂತಿರುವ ಬಕೆಟ್ಟುಗಳನ್ನು ಒಂದೊಂದಾಗಿ ತುಂಬುತ್ತಿದೆ. ಅಷ್ಟರಲ್ಲಿ ಮಗುವೊಂದು ತಮ್ಮ ಹಳದಿ ಬಣ್ಣದ ಕ್ಯಾನ್ ಅನ್ನು ಹಿಡಿದುಕೊಂಡು ಸುಮ್ಮನೆ ಮಧ್ಯದಲ್ಲಿ ನುಗ್ಗಿ ಬರುತ್ತದೆ.

ಅದಕ್ಕೂ ತನ್ನ ಪುಟ್ಟ ಕ್ಯಾನಿನಲ್ಲಿ ನೀರು ತುಂಬಿಸಿಕೊಳ್ಳುವ ಆತುರ. ಅಷ್ಟರಲ್ಲಿ ಯಾರೋ ಸಣ್ಣಗೆ ಬೈದು ಅದರ ಕುಂಡೆಗೊಂದು ಏಟು ಕೊಡುತ್ತಾರೆ. ತಕ್ಷಣವೇ ಮಗು ಭಯಪಟ್ಟು ಗೊಂದಲವಾಗಿ ದೂರಕ್ಕೆ ಹೋಗಿ ನಿಲ್ಲುತ್ತದೆ. ನಂತರ ಆ ಮಗುವಿನ ಅಕ್ಕನೋ, ಅಮ್ಮನೋ ಬಂದು ಮಗುವಿನ ಕೈಯಲ್ಲಿರುವ ಕ್ಯಾನನ್ನು ಕಸಿದುಕೊಂಡು ನೀರಿನ ಸಾಲಿನಲ್ಲಿ ತಮ್ಮ ಬಕೆಟ್ಟಿನೊಂದಿಗೆ ನಿಲ್ಲುತ್ತಾರೆ. ಏಕೆಂದರೆ ಇದು ಜಗಳವಾಡುವ ಸಮಯವಲ್ಲ ಎಂಬುದು ಅವರಿಗೆ ಗೊತ್ತು. ಬೇಕಿದ್ದರೆ ಆಮೇಲಾದರೂ ಕಿತ್ತಾಡಬಹುದು. ಆದರೆ ನೀರು ಇವರಿಗೆ ಕಾಯುವುದಿಲ್ಲ. ಹೀಗಾಗಿ ನಿತ್ಯದ ಗೊಣಗಾಟಗಳು, ಮಿನಿಕಿತ್ತಾಟಗಳು ಎಂದಿನಂತೆ ನಡೆಯುತ್ತಿದ್ದರೂ ಯಾರೂ ಅದರತ್ತ ಹೆಚ್ಚಿನ ಗಮನವನ್ನು ನೀಡದೆ ತುಂಬಬೇಕಿದ್ದ ತಮ್ಮ ಬಕೆಟ್ಟುಗಳ ಮೇಲೆಯಷ್ಟೇ ಗಮನಹರಿಸುತ್ತಾರೆ.

ನೆತ್ತಿಯ ಮೇಲೆ ಸುಡುವ ಸೂರ್ಯ ಇವರೆಲ್ಲರನ್ನು ಒಂದಿಷ್ಟೂ ಸತಾಯಿಸುವಂತೆ ಕಾಣುತ್ತಿಲ್ಲ. ಅಥವಾ ಹಾಗಂತ ನನಗನಿಸುತ್ತಿದೆಯಷ್ಟೇ! ಆದರೆ ಅವರೇನು ರೋಬೋಟುಗಳಲ್ಲವಲ್ಲಾ? ಅವರ ಮೈಯಿಂದಲೂ ಧಾರಾಕಾರವಾಗಿ ಬೆವರು ಸುರಿಯುತ್ತಿದೆ. ಬೆವರಿನ ಹನಿಗಳಿಂದ ಕರಿಮೈ ಮಿರಿಮಿರಿ ಮಿಂಚುತ್ತಿದೆ. ತರುಣಿಯರು ಆ ಬಿಡುವಿಲ್ಲದ ಕೆಲಸದ ಮಧ್ಯದಲ್ಲೂ ಇರುವ ಮಕ್ಕಳೊಂದಿಗೆ ಆಡುತ್ತಾ ಸಮಯ ಕಳೆಯುತ್ತಿದ್ದರೆ ಮಧ್ಯವಯಸ್ಕ ಮಹಿಳೆಯರು ಧಗೆಯನ್ನು ತಾಳಲಾರದೆ ತಲೆಗೆ ಸುತ್ತಿರುವ ಮುಂಡಾಸಿನಂತಹ ಬಟ್ಟೆಯನ್ನೇ ತೆಗೆದು ಬೆವರೊರೆಸಿಕೊಳ್ಳುತ್ತಿದ್ದಾರೆ. ಅವರ ಕಣ್ಣುಗಳು, ಕಾಲುಗಳು ಒಂದು ಮಟ್ಟಿಗೆ ಸೋತಿರುವಂತೆ ಕಂಡರೂ ಅವರು ಸೋಲೊಪ್ಪಿಕೊಳ್ಳುವಂತಿಲ್ಲ. ಏಕೆಂದರೆ ಇದು ಆರಂಭವಷ್ಟೇ. ಇದ್ದುದರಲ್ಲೇ ಅತ್ಯಂತ ಸರಳವಾದ ಹಂತ. ಇನ್ನು ಆ ಬಕೆಟ್ಟುಗಳನ್ನು ಹೊತ್ತುಕೊಂಡು ಅವರುಗಳು ತಮ್ಮ ತಮ್ಮ ಮನೆಗಳತ್ತ ನಡೆಯಬೇಕಿದೆ.

ಇವರ ಮನೆಗಳಾದರೂ ಎಂತೆಂಥಾ ಜಾಗದಲ್ಲಿವೆ? ಕೆಲವರಿಗಂತೂ ಆ ನೀರಿನ ಟ್ಯಾಂಕಿನಿಂದ ಕಮ್ಮಿಯೆಂದರೂ ಎರಡು ಕಿಲೋಮೀಟರುಗಳಷ್ಟು ದೂರ ನಡೆಯಬೇಕು. ಒಂದು ಮಟ್ಟಿನ ದೂರವನ್ನು ತಲುಪಿದ ನಂತರ ಎಲ್ಲೆಲ್ಲೋ ನುಸುಳುತ್ತಾ ತನ್ನ ಮನೆಯನ್ನು ತಲುಪಬೇಕು. ಮುಖ್ಯರಸ್ತೆಯನ್ನು ಬಿಟ್ಟರೆ ಟಾರು ರಸ್ತೆಗಳಾದರೂ ಎಲ್ಲಿವೆ? ಎಲ್ಲವೂ ಮಣ್ಣಿನ ಕಾಲುದಾರಿಗಳೇ. ಕೆಲವು ಕಡೆಗಳಲ್ಲಂತೂ ದಾರಿಗಳೇ ಇಲ್ಲ. ಪುಟ್ಟ ಗುಡ್ಡಗಳನ್ನು ಹತ್ತಿ ಇಳಿದು ಹೋಗಬೇಕಾದಂತಹ ವಿಪರೀತ ಉಬ್ಬುತಗ್ಗಿನ ದಾರಿಗಳು. ಕೆಲವು ಇಕ್ಕಟ್ಟಿನ ಮಾರ್ಗಗಳಲ್ಲಂತೂ ನಾನು ಇಂಥಾ ಮಹಿಳೆಯರನ್ನು ಮುಖಾಮುಖಿಯಾಗುವಾಗ ಒಬ್ಬರೂ ಒಂದು ಕ್ಷಣ ಗೊಂದಲಕ್ಕೀಡಾಗುತ್ತೇವೆ.

ಒಂದೋ ನಾನು ಹೋಗಬೇಕು, ಇಲ್ಲವೋ ಆಕೆ ಹೋಗಬೇಕು. ನಾನು ಕೊಂಚ ಮೈಬಗ್ಗಿಸಿ, ಸರ್ಕಸ್ ಮಾಡಿಯಾದರೂ ಸುಧಾರಿಸಿಕೊಳ್ಳಬಲ್ಲೆ. ಆದರೆ ಆಕೆಯ ತಲೆಯ ಮೇಲೆ ದೊಡ್ಡದಾದ ತುಂಬಿದ ನೀರಿನ ಬಕೆಟ್ ಒಂದಿದೆ. ಹೀಗಾಗಿ ನಾನು ಹೇಗೋ ನಿಭಾಯಿಸಿ ಆಕೆಗೆ ದಾರಿಯನ್ನು ಮಾಡಿಕೊಡುತ್ತೇನೆ. ಬಕೆಟ್ಟಿನೊಳಗಿರುವ ನೀರು ಕೊಂಚ ಅತ್ತಿತ್ತ ತುಳುಕುತ್ತದೆ. ಅವಳು ಮುಗುಳ್ನಗುತ್ತಾ ‘ಒಬ್ರಿಗಾದ ಅಮೀಗು’ (ಧನ್ಯವಾದ ಗೆಳೆಯ) ಎನ್ನುತ್ತಾ ಮುನ್ನಡೆಯುತ್ತಾಳೆ. ಈ ಗಡಿಬಿಡಿಯಲ್ಲೂ ಆಕೆ ಧನ್ಯವಾದವನ್ನು ಹೇಳುವುದು ಮರೆಯಲಿಲ್ಲ ಎಂಬುದನ್ನು ನನ್ನ ಮನಸ್ಸು  ಇತ್ತ ತನ್ನಷ್ಟಕ್ಕೆ ನೋಟ್ ಮಾಡಿಕೊಳ್ಳುತ್ತದೆ.

ನಾನು ನನ್ನ ಕೊಡೆಯಿಂದ ಮುಖವನ್ನು ಸೂರ್ಯನಿಂದ ಮತ್ತಷ್ಟು ಮರೆಮಾಚಿಕೊಳ್ಳುತ್ತಾ ಮುನ್ನಡೆದರೆ ಮತ್ತೊಬ್ಬಳು ಹೆಂಗಸು ಅಷ್ಟೇ ದೊಡ್ಡ ಬಕೆಟ್ಟೊಂದನ್ನು ಹಿಡಿದುಕೊಂಡು ಬರುತ್ತಿದ್ದಾಳೆ. ಇನ್ನು ಈಕೆಗೆ ದಾರಿ ಬಿಟ್ಟು ಕೊಡಬೇಕಲ್ಲವೇ ಎಂದು ನಾನು ಅತ್ತಿತ್ತ ಜಾಗಗಳನ್ನು ನೋಡಿಕೊಳ್ಳುತ್ತೇನೆ. ನನಗೂ ಕಾಲಿಡಲು ಜಾಗ ಬೇಕಲ್ವಾ? ಅತ್ತಿತ್ತ ಪ್ರಪಾತಗಳೇನೂ ಇಲ್ಲ. ಆದರೆ ಕಸದ ರಾಶಿಯು ಕಾಣುತ್ತಿದೆ. ಅದರಲ್ಲಿರುವ ಕಸ, ಪ್ಲಾಸ್ಟಿಕ್ ಗಳಿಂದಾಗಿ ಅದರ ಆಳ ಎಷ್ಟಿದೆ ಎನ್ನುವುದನ್ನು ನನಗೆ ಲೆಕ್ಕಹಾಕಲಾಗುತ್ತಿಲ್ಲ. ಅಂಥಾ ಮುಳುಗುವಂಥಾ ಆಳವೇನಲ್ಲ. ಆದರೆ ಎಡವಿಬೀಳುವಷ್ಟಂತೂ ಇದ್ದೇ ಇರುತ್ತೆ. ಹೀಗಾಗಿ ನಾನು ಅದಕ್ಕಿಂತ ಕೊಂಚ ವಾಸಿ ಎಂಬಂತಿರುವ ಜಾಗವನ್ನು ಕಾಲಿಡಲು ಬಳಸಿಕೊಳ್ಳುತ್ತೇನೆ. ನನ್ನ ದೇಹವನ್ನು ಕುಗ್ಗಿಸಿ, ಆಕೆಯ ಅಗಲವಾದ ಬಕೆಟ್ಟು ನನ್ನನ್ನು ಮುತ್ತಿಕ್ಕದಂತೆ ಜಾಗರೂಕನಾಗಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾ ಇಬ್ಬರಿಗೂ ಸುಲಭವಾಗುವಂತೆ ನೋಡಿಕೊಳ್ಳುತ್ತೇನೆ.

ಆಕೆಯ ಎದೆಗೆ ಬಿಗಿಯಾಗಿ ಬಿಗಿದಿರುವ ಬಟ್ಟೆಯೊಂದು ಅವಳ ಮಗುವನ್ನು ಬೆನ್ನಹಿಂದೆ ಕಟ್ಟಿಕೊಂಡಿದೆ. ಆಫ್ರಿಕನ್ ಗುಂಗುರು ಕೂದಲನ್ನು ಹೊಂದಿರುವ ಪುಟ್ಟ ಮಣ್ಣಿನ ಬೊಂಬೆಯಂತಿರುವ ಮಗುವು ಕಾಂಗರೂ ಚೀಲದಂತಿರುವ ಆ ಪುಟ್ಟ ಜಾಗದಲ್ಲಿ ತೂಕಡಿಸುತ್ತಲೇ ಇದೆ. ಅದಕ್ಕೂ ಪಾಪ ಬಿಸಿಲ ಝಳವನ್ನು ತಡೆಯಲಾಗುತ್ತಿಲ್ಲವೋ ಏನೋ. ಅಮ್ಮ ನೀರು ತುಂಬಿಸುತ್ತಾ ಇದ್ದಾಗ ಅದು ಎಲ್ಲೆಲ್ಲೋ ಆಡಿಕೊಂಡಿರಬೇಕು. ಹೀಗಾಗಿ ಅದರ ಮೈಯೆಲ್ಲಾ ಮಣ್ಣೇ ಮಣ್ಣು. ಮಣ್ಣು ಎನ್ನುವುದಕ್ಕಿಂತ ಕೆಸರು ಎಂದರೆ ಸರಿಯಾಗಬಹುದೇನೋ. ಆದರೆ ಆ ಕೆಸರು ಈ ಸುಡುವ ಬಿಸಿಗೆ ಒಣಗಿ ಆ ಕಪ್ಪು ಮೈಯಲ್ಲಿ ಮತ್ತಷ್ಟು ಪ್ರಖರವಾಗಿ ಎದ್ದು ಕಾಣಿಸುತ್ತಿದೆ.

ಇತ್ತ ಅದರ ಮೂಗಿನ ಎರಡೂ ಹೊಳ್ಳೆಗಳಿಂದ ಸುರಿಯುತ್ತಿರುವ ಗೊಣ್ಣೆಯು ತುಟಿಯವರೆಗೆ ಬಂದು ಇನ್ನೇನು ಒಳಸರಿಯಲು ತಯಾರಾಗಿದೆ. ಮಣ್ಣಿನ ಕಣಗಳೂ ಕೂಡ ಆ ಗೊಣ್ಣೆಯಲ್ಲಿ ಕರಗಿ ಒಂದಿಷ್ಟು ಒಳಹೋದರೂ ಹೋಗಬಹುದೇನೋ! ಇರಲಿ. ರಣಬಿಸಿಲು ಮತ್ತು ಅಮ್ಮನ ನಿಲ್ಲದ ನಡೆದಾಟ ಮಗುವನ್ನು ಮತ್ತಷ್ಟು ತೂಕಡಿಸುವಂತೆ ಮಾಡುತ್ತಿದೆ ಅನ್ನುವುದನ್ನು ಬಿಟ್ಟರೆ ತನ್ನ ಪುಟ್ಟ ಕೈಗಳನ್ನು ಮೆಲ್ಲಗೆ ಒಂದಿಷ್ಟು ಆಡಿಸುತ್ತಾ ಮಗು ತನ್ನಷ್ಟಕ್ಕೆ ತನ್ನ ಲೋಕದಲ್ಲೇ ಆರಾಮಾಗಿದೆ.

ಆ ಹೆಂಗಸಿನ ಹಿಂದೆಯೇ ಮತ್ತೊಬ್ಬಳು ಹುಡುಗಿ ನಡೆದುಕೊಂಡು ಬರುತ್ತಿದ್ದಾಳೆ. ಸುಮಾರು ಏಳು ಅಥವಾ ಎಂಟರ ಆಸುಪಾಸಿನ ಬಾಲೆ. ಸಾಮಾನ್ಯವಾಗಿ ಎಲ್ಲೆಡೆಯೂ ಕಾಣುವ ಮಕ್ಕಳಂತೆ ಮಣ್ಣುಮಣ್ಣಾಗಿರದೆ ಶುಚಿಯಾಗಿದ್ದಾಳೆ. ಅದಕ್ಕೆ ಕಾರಣವೇನೆಂಬುದು ಅವಳ ಕೈಯನ್ನು ನೋಡಿದರೆ ತಿಳಿಯುತ್ತದೆ. ಅವಳ ಎಡಗೈ ಒಂದಿಷ್ಟು ಪುಸ್ತಕಗಳನ್ನು ತನ್ನ ಎದೆಗವಚಿಕೊಂಡಿದೆ. ಬಲಗೈಯು ತಲೆಯ ಮೇಲೆ ಇರಿಸಿಕೊಂಡಿರುವ ಪುಟ್ಟ ಬಣ್ಣದ ಬಕೆಟ್ ಒಂದಕ್ಕೆ ಆಸರೆಯಾಗಿದೆ. ಶಾಲೆಯನ್ನು ಮಗಿಸಿಕೊಂಡು ನೇರವಾಗಿ ಆಕೆ ಅಮ್ಮನಿದ್ದಲ್ಲಿಗೇ ಬಂದಿದ್ದಾಳೆ.

ಅಮ್ಮನ ಬಕೆಟ್ಟಿಗೆ ಹೋಲಿಸಿದರೆ ಇವಳ ಬಕೆಟ್ಟಿನಲ್ಲಿರುವ ನೀರು ಕೊಂಚ ಹೆಚ್ಚೇ ತುಳುಕಾಡುತ್ತಿದೆ. ಇನ್ನೂ ಕಲಿಯುತ್ತಿದ್ದಾಳಲ್ಲವೇ ಪಾಪ! ಅವಳ ಮುದ್ದಾದ ಮುಖವನ್ನು ಕಂಡು ಖುಷಿಯಾಗುವ ನಾನು ಮುಂದಕ್ಕೆ ನಡೆಯುತ್ತಿರುವಂತೆಯೇ ಮೆಲ್ಲಗೆ ಅವಳ ಕೆನ್ನೆಯನ್ನು ಚಿವುಟಿ ನಗುತ್ತೇನೆ. ಅವಳು ನನ್ನನ್ನೇ ಪಿಳಿಪಿಳಿ ನೋಡುತ್ತಾ ತನ್ನ ಅಷ್ಟೂ ಬಿಳಿ ಹಲ್ಲುಗಳನ್ನು ತೋರಿಸಿ ನಗುತ್ತಾಳೆ. ವಿದೇಶೀಯರನ್ನು ಕಂಡಾಗ ಮಕ್ಕಳಲ್ಲಿ ಸಾಮಾನ್ಯವಾಗಿ ಉಂಟಾಗುವ ಸಹಜ ಕುತೂಹಲಗಳು ಅವಳಲ್ಲೂ ಕಾಣುತ್ತವೆ. ಹ್ಹೆಹ್ಹೆಹ್ಹೆ ಎಂದು ನಗುತ್ತಾ ಜೊತೆಯಲ್ಲಿ ಯಾರೂ ಇರದಿದ್ದ ಪರಿಣಾಮವಾಗಿ ‘ಶಿನೇಶ್’ (ಚೈನೀಸ್) ಎಂದು ಅವಳು ತನಗೇ ಹೇಳಿಕೊಳ್ಳುತ್ತಾಳೆ. ಏನೋ ನೆನಪಾದವಳಂತೆ ಮತ್ತಷ್ಟು ಹ್ಹಿಹ್ಹಿಹ್ಹಿ ನಗುತ್ತಾಳೆ. ‘ಅಯ್ಯೋ ಬಿಟ್ಹಾಕಮ್ಮಾ… ನಾನು ಚೈನೀಸ್ ಅಲ್ಲ… ಎಲ್ಲಾ ಮಕ್ಕಳದ್ದೂ ಇದೇ ಆಯಿತು’, ಎಂದು ನಾನು ಒಳಗೊಳಗೇ ನಗುತ್ತಾ ಮುಂದಕ್ಕೆ ಹೆಜ್ಜೆ ಹಾಕುತ್ತೇನೆ.

ಅಷ್ಟರಲ್ಲಿ ನನ್ನ ಕಾರು ಅತ್ತ ಕಡೆಯಿಂದ ಧೂಳೆಬ್ಬಿಸುತ್ತಾ ಬರುವುದು ನನಗೆ ಕಾಣುತ್ತದೆ. ನನ್ನ ಕಾರುಚಾಲಕ ಅಗುಸ್ಟೋ ಸರಿಯಾಗಿ ನನ್ನ ಪಕ್ಕವೇ ಬಂದು ಗಾಡಿಯನ್ನು ನಿಲ್ಲಿಸಿಬಿಡುತ್ತಾನೆ. ನಾನು ನನ್ನ ಕೊಡೆ ಮತ್ತು ಕಡತಗಳನ್ನು ಹಿಂದಿನ ಸೀಟಿಗೆಸೆದು ಬೇಗಬೇಗನೆ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ”ಕ್ಯಾಂತೆ… ಮುಯ್ತು ಮೂಯ್ತು ಕ್ಯಾಂತೆ (ಬಿಸಿ… ತುಂಬಾ ತುಂಬಾ ಬಿಸಿ ಮಾರಾಯ)”, ಎಂದು ಗೊಣಗುತ್ತಾ ಏರ್ ಕಂಡೀಷನಿಂಗ್ ಸರಿಯಾಗಿ ಆಗುವಂತೆ ಸಿಕ್ಕಸಿಕ್ಕಲ್ಲೆಲ್ಲಾ ತಡಕಾಡಿ ಏದುಸಿರು ಬಿಡುತ್ತೇನೆ. ಬಿಸಿಲಿನ ಝಳಕ್ಕೆ ಸಿಕ್ಕಿ ಸುಟ್ಟ ತರಗೆಲೆಯಂತಾಗಿರುವ ನನ್ನ ಸ್ಥಿತಿಯನ್ನು ಕಂಡ ಅಗುಸ್ಟೋ ಮೂಗಿನಡಿಯಲ್ಲೇ ಸಣ್ಣಗೆ ನಗುತ್ತಾ ಸ್ಟೇರಿಂಗ್ ಅನ್ನು ವಿಚಿತ್ರವಾಗಿ ತಿರುಗಿಸುತ್ತಾ ಹೊರಡಲು ತಯಾರಾಗುತ್ತಾನೆ.

ಇನ್ನೇನು ದಾರಿ ಮಾಡಿಕೊಂಡು ಹೊರಡಬೇಕು ಅನ್ನುವಷ್ಟರಲ್ಲಿ ಮಹಿಳೆಯೊಬ್ಬಳು ಎಲ್ಲಿಂದಲೋ ನಡೆದುಕೊಂಡು ಬರುತ್ತಾಳೆ. ಈಕೆ ಆಗುಸ್ಟೊನೊಂದಿಗೆ ನಗುನಗುತ್ತಾ ಮಾತನಾಡುವುದನ್ನು ಕಂಡ ನಾನು ಈಕೆ ಅವನ ಗೆಳತಿಯಾಗಿರಬಹುದೆಂದು ಲೆಕ್ಕಹಾಕುತ್ತಿದ್ದರೆ, ಆಕೆ ತಕ್ಷಣವೇ ತನ್ನ ಕೆನ್ನೆಗಳನ್ನು ನನ್ನ ಎರಡೂ ಕೆನ್ನೆಗಳಿಗೆ ತಾಗಿಸುತ್ತಾ ಬೋಂದಿಯಾ ಅನ್ನುತ್ತಾಳೆ. ಜೊತೆಗೇ ಪೋರ್ಚುಗೀಸ್ ಭಾಷೆಯಲ್ಲಿ ಏನೋ ಬಡಬಡನೆ ಉದ್ದಕ್ಕೆ ಮಾತಾಡುತ್ತಾ ಹೋಗುತ್ತಾಳೆ.

”ತಡಿಯಮ್ಮಾ ಮಹಾತಾಯಿ… ಸ್ವಲ್ಪ ನಿಧಾನ… ಈ ವೇಗದಲ್ಲಿ ನೀನು ಮಾತಾಡುತ್ತಾ ಹೋದರೆ ನನಗೊಂದಿಷ್ಟೂ ಅರ್ಥವಾಗೋದಿಲ್ಲ”, ಎಂದು ನಾನು ನನ್ನ ಕೈಗಳನ್ನಾಡಿಸುತ್ತಾ ಹರುಕುಮುರುಕು ಪೋರ್ಚುಗೀಸ್ ನಲ್ಲಿ ಹೇಳುತ್ತೇನೆ. ”ಇವತ್ತು ಇವರ ದುಭಾಷಿ ಬಂದಿಲ್ಲ. ಹಾಗಾಗಿ ಕೊಂಚ ನಿಧಾನವಾಗಿ ಮಾತನಾಡಿ. ಇವರಿಗೆ ಒಂದಿಷ್ಟು ಅರ್ಥವಾಗುತ್ತದೆ. ಆದರೆ ಮಾತನಾಡೋದೇ ಸಮಸ್ಯೆ”, ಎಂದು ನನಗೆ ಸಾಥ್ ನೀಡುತ್ತಾನೆ ಅಗುಸ್ಟೋ. ಜೊತೆಗೇ ಆಕೆ ಏನು ಹೇಳುತ್ತಿದ್ದಾಳೆ ಎಂಬುದನ್ನು ನನಗೆ ಗೊತ್ತಿರುವಷ್ಟು ಪೋರ್ಚುಗೀಸ್ ಭಾಷೆಯಲ್ಲಿ ಸರಳವಾಗಿ ಅಗುಸ್ಟೋ ವಿವರಿಸುತ್ತಾನೆ.

”ನೀವು ಆ ಹಿರಿಯರೊಂದಿಗೆ ಕಳೆದ ವರ್ಷವೂ ಬಂದಿದ್ರಿ. ನೀರು ಸಿಗುತ್ತೆ ಅಂದಿದ್ರಿ. ಇನ್ನೂ ನೀರು ಬಂದಿಲ್ಲ ಇಲ್ಲಿ. ಪೈಪುಗಳನ್ನು ಹಾಕಿ ಹೋದ ನಿಮ್ಮ ಹುಡುಗರು ಮತ್ತೆ ಈ ಕಡೆ ತಲೆಯೇ ಹಾಕಿಲ್ಲ”, ಎಂದು ದೂರು ಹೇಳುತ್ತಿದ್ದಾಳೆ ಆಕೆ. ಹಿರಿಯರು ಎಂದಾಕ್ಷಣ ಡಾ. ಗೌರ್ ನೆನಪಾಗುತ್ತಾರೆ ನನಗೆ. ಅವರ ಜೊತೆ ಕಳೆದ ಬಾರಿ ಈ ಬೈರೋಗೆ ಬಂದಿದ್ದು ನೆನಪಾಗುತ್ತದೆ. ಹೀಗಾಗಿಯೇ ಆಕೆ ನನ್ನನ್ನು ಗುರುತುಹಿಡಿದು ಆಲಂಗಿಸಿಕೊಂಡಳೆಂದು ಕೂಡಲೇ ಜ್ಞಾನೋದಯವಾಗುತ್ತದೆ. ಜೊತೆಗೇ ಇವರಿಗಿನ್ನೂ ಕುಡಿಯುವ ನೀರನ್ನು ತರಲಾಗಲಿಲ್ಲವೆಂಬ ನಿರಾಶೆಯೂ.

ಆಕೆಗೆ ಯಾವ ಸುಳ್ಳು ಭರವಸೆಯನ್ನೂ ನೀಡದೆ ಪರಿಸ್ಥಿತಿಯು ಹೀಗ್ಹೀಗಿದೆ, ಯಾವಾಗ ಆಕೆಯಿರುವ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯವು ಶುರುವಾಗಬಹುದು ಎಂದು ಕುಳಿತಲ್ಲಿನಿಂದಲೇ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. ನಾನು ರಾಜಕಾರಣಿಯಂತೆ ಆಶ್ವಾಸನೆಯನ್ನಷ್ಟೇ ನೀಡುತ್ತೇನೆ ಎಂದು ಅವಳಿಗನ್ನಿಸುತ್ತಿರಬಹುದೋ? ಗೊತ್ತಿಲ್ಲ! ಆದರೆ ಎಲ್ಲದಕ್ಕೂ ಹೂಂ ಹೂಂ ಎನ್ನುತ್ತಾಳೆ. ನಿಮ್ಮ ಕಷ್ಟ ಎಂಥದ್ದೆಂದು ನನಗರ್ಥವಾಗುತ್ತದೆ ಎಂದು ಅವಳಲ್ಲಿ ನಾನು ಹೇಳಲು ಪ್ರಯತ್ನಿಸುತ್ತೇನೆ. ಅವುಗಳು ನನ್ನ ಮನದಾಳದ ಮಾತುಗಳೂ ಹೌದು. ನನ್ನ ಮಾತಿಗೆಲ್ಲಾ ತಬೋಂ… ತಬೋಂ… (ಆಗಲಿ… ಆಗಲಿ…) ಎನ್ನುತ್ತಾಳೆ ಆಕೆ.

”ನನಗೆ ಪೇಟೆಗೆ ಹೋಗಬೇಕು. ನಡೆದುಕೊಂಡು ಹೋದರೆ ತುಂಬಾ ದೂರ. ಮುಖ್ಯರಸ್ತೆಯವರೆಗೆ ಬಿಟ್ಟರೆ ಸಾಕು. ನನಗೆ ಡ್ರಾಪ್ ಕೊಡುತ್ತೀರಾ ಪ್ಲೀಸ್?”, ಎಂದು ಈಗ ಆಕೆ ಅಂಗಲಾಚುತ್ತಾಳೆ. ಸೂರ್ಯನಿಂದ ತಪ್ಪಿಸಿಕೊಂಡು ಹವಾನಿಯಂತ್ರಿತ ಕಾರಿನಲ್ಲಿ ಕುಳಿತುಕೊಳ್ಳುವವರೆಗೂ ನನ್ನಲ್ಲಿದ್ದ ತಳಮಳವು ಮತ್ತೆ ನನಗೆ ನೆನಪಾಗಿ, ಈಕೆಯನ್ನು ನೋಡುತ್ತಾ ವಿಷಾದವಾಗುತ್ತದೆ. ”ಆಯ್ತು… ಹತ್ತಿ ಹಿಂದಿನ ಸೀಟಿನಲ್ಲಿ ಕುಳಿತುಕೋ”, ಎನ್ನುತ್ತೇನೆ. ಕಾರು ಮುಂದಕ್ಕೆ ಸಾಗುತ್ತಿರುವಂತೆಯೇ ಅಗುಸ್ಟೋ ಮತ್ತು ಆಕೆ ಲೋಕಾಭಿರಾಮದ ಮಾತುಗಳತ್ತ ವಾಲಿದರೆ ನಾನು ಕೂತಲ್ಲೇ ತೂಕಡಿಸುತ್ತೇನೆ. ಆದರೆ ಉಬ್ಬುತಗ್ಗು, ಹೊಂಡಗಳಿಂದ ತುಂಬಿರುವ ಮಣ್ಣಿನ ರಸ್ತೆಯು ನನ್ನ ಪುಟ್ಟನಿದ್ದೆಗೂ ಕಲ್ಲುಹಾಕುತ್ತದೆ.

”ಆಹ್… ಮಾಲ್ ರೂವ… ಮುಯ್ತು ಮಾಲ್ ರೂವ (ಕೆಟ್ಟ ರಸ್ತೆ… ಬಹಳ ಕೆಟ್ಟ ರಸ್ತೆ)”, ಎಂದು ನಾನು ಹತಾಶನಾಗಿ ಗೊಣಗುತ್ತೇನೆ. ಸಿಡಿಮಿಡಿಗೊಂಡ ನನ್ನ ಗೊಣಗಾಟವನ್ನು ಕೇಳುವ ಇವರಿಬ್ಬರೂ ತಲೆಯಾಡಿಸುತ್ತಾ ಗೊಳ್ಳನೆ ನಗುತ್ತಾರೆ.

1 comment

Leave a Reply