ನಮ್ಮೂರಿನ ರೇಲ್ವೆ ಸ್ಟೇಷನ್ ಗೆ ಹೋಗಿದ್ದೆವು..

ಹೀಗೊಂದು ಸುಳ್ಳು..

ಸಿದ್ಧರಾಮ ಕೂಡ್ಲಿಗಿ

ನಾನಾಗ 6-7 ನೇ ತರಗತಿ ಇರಬಹುದು.

ಒಮ್ಮೆ ನಾನು ನನ್ನ ಗೆಳೆಯ ನಮ್ಮೂರಿನ ರೇಲ್ವೆ ಸ್ಟೇಷನ್ ಗೆ ಹೋಗಿದ್ದೆವು.

ಆಗ ಈಗಿನಷ್ಟು ಗಲಾಟೆ, ಜನಸಂದಣಿ ಇರಲಿಲ್ಲ. ನಿಧಾನವಾಗಿ ನಡೆಯುತ್ತ ಪ್ಲಾಟ್ ಫಾರಂ ನಿಂದ ಕೆಳಗಿಳಿದು, ಅಲ್ಲಿಯೇ ಡಬ್ಬಿಗಳೊಂದಿಗೆ ನಿಂತಿದ್ದ ಉಗಿಬಂಡಿಯ ಹತ್ತಿರ ಹೋಗಿ ಕುತೂಹಲದಿಂದ ನೋಡುತ್ತ ನಿಂತೆವು. ಉಗಿ ಬಂಡಿಯ ಇಂಜಿನ್ ನ್ನು ಅಷ್ಟು ಸಮೀಪ ನೋಡುತ್ತಿದ್ದುದು ಅದೇ ಮೊದಲ ಬಾರಿಯಾದ್ದರಿಂದ ಅದ ಬೃಹತ್ ಗಾತ್ರದ ಚಕ್ರಗಳು, ಇಂಜಿನ್, ಅದರ ಮೂತಿ ಎಲ್ಲವೂ ನಮಗೆ ಅಗಾಧವೆನಿಸಿ ನೋಡುತ್ತ ಮೈಮರೆತು ನಿಂತೆವು. ಪಕ್ಕದಲ್ಲಿಯೇ ಉಂಗಿಬಂಡಿಯ ಬಿಸಿ ಬಿಸಿ ಉಗಿಯ ಕೊಳವೆ ಬುಸ್ ಎಂದು ಶಬ್ದ ಮಾಡುತ್ತ ಉಗಿ ಬಿಡುತ್ತಿತ್ತು. ಅದರ ಅಗಾಧ ಶಾಖದ ಮಧ್ಯೆಯೇ ನಮಗೆ ಇಂಜಿನ್ ನ್ನು ನೋಡುವ ಕುತೂಹಲ.

ಹಾಗೇ ನಿಂತಾಗ ” ಹೇ ಯಾರವ್ರು ಅಲ್ಲಿ ನಿಂತವ್ರು, ಬರ್ರೀ ಈಕಡೆ ” ಎಂದು ಇಂಜಿನ್ ಚಾಲಕ ಕೂಗುತ್ತ ಬಂದ. ನಾವು ತಬ್ಬಿಬ್ಬಾಗಿ ನಿಂತೆವು. ಅವನು ಬಂದವನೇ ” ಏ, ಇಲ್ಲೆಲ್ಲ ಬರ್ಬಾರ್ದು, ಇಂಜಿನ್ ಭಾಳ ಬಿಸಿ ಇರ್ತೈತಿ, ಹೋಗ್ರಿ ಹೋಗ್ರಿ ” ಎಂದ. ಆದರೂ ನಾವು ಬೆಪ್ಪರಾಗಿ ಅಲ್ಲೇ ನಿಂತಿದ್ದೆವು. ಅವನಿಗೆ ಕೋಪ ಬಂದು ” ಹೋಗ್ತೀರ ಇಲ್ರಲ್ಲೆ ಒದಿಕಿ ಬೇಕಾ ? ” ಎಂದು ಗದರಿದ. ನನಗೇನು ತಿಳಿಯಿತೋ ಏನೋ ಒಂದು ಸುಳ್ಳು ಹೇಳಿಬಿಟ್ಟೆ ” ನಮ್ ಶಾಲ್ಯಾಗ ಮಾಸ್ತರ್ ಹೇಳ್ಯಾರ್ರಿ, ಇಂಜಿನ್ ನೋಡ್ಕೊಂಡ್ ಬರ್ರಿ ಅಂತ ಪಾಠದಾಗ ಐತ್ರಿ ” ಎಂದುಬಿಟ್ಟೆ.

ಪಾಪ ಅವನಿಗೆ ತಕ್ಷಣ ತನ್ನ ವರ್ತನೆ ತಪ್ಪಾಯಿತೇನೋ ಅನಿಸಿಬಿಟ್ಟು, ” ಮೊದಲ ಹೇಳ್ಬೇಕಿಲ್ಲ ಬರ್ರಿ ಹಂಗಾರ ” ಎಂದು ನಮ್ಮನ್ನು ಇಂಜಿನ್ ಒಳಗೇ ಹತ್ತಿಸಿಬಿಟ್ಟ. ನಮಗೋ ಖುಷಿಯೋ ಖುಷಿ. ಪಾಪ ಅವನು ಪಾಠ ಮಾಡಿದಂತೆ ಎಲ್ಲವನ್ನೂ ಒಂದೊಂದಾದಿಗಿ ವಿವರಿಸಿದ. ಕಲ್ಲಿದ್ದಲು ಸಂಗ್ರಹ, ಇಂಜಿನ್ ಓಡಿಸುವ ವಿಧಾನ, ಉಗಿಯ ಶಕ್ತಿ, ಶಾಖದ ಮೀಟರ್, ಎಷ್ಟು ವೇಗವಾಗಿ ಹೋಗುವದೆಂಬ ಮೀಟರ್, ಸೀಟಿ ಹೊಡೆಯುವ ಯಂತ್ರ, ಇಷ್ಟಲ್ಲದೆ ನನಗೆ ಅಗಾಧವೆನಿಸಿದ್ದು ಆತ ಒಮ್ಮೆಲೆ ಉಗಿಬಂಡಿಯೊಳಗಿನ ಬೆಂಕಿಯ ದರ್ಶನ ಮಾಡಿಸಿದ್ದು.

ಒಂದು ಮುಚ್ಚಳ ತೆರೆದುಬಿಟ್ಟ ಅಬ್ಬಾ ಅದರೊಳಗಿನ ಬೆಂಕಿಯೇ. ನೋಡಿ ನನಗೇ ಕೈಕಾಲು ನಡುಕ ಬಂದುಬಿಟ್ಟಿತು. ಅಲ್ಲೋ ಧಗಧಗ ಎಂಬ ಶಾಖ. ಬೆವರಿಳಿಯೋದರ ಜೊತೆಗೆ ಒಳಗಿನ ಬೆಂಕಿ ನೋಡಿ ಹೌಹಾರಿಬಿಟ್ಟೆವು. ಆ ಶಾಖದಿಂದ ನೀರು ಕಾಯ್ದು, ಶಕ್ತಿಯಾಗಿ ಹೇಗೆ ಇಂಜಿನ್ ಚಕ್ರಗಳು ತಿರುಗುತ್ತವೆ ಎಂದು ಸಣ್ಣ ವಿವರಣೆ ಕೊಟ್ಟ. ನಂತರ ನಮ್ಮನ್ನು ಕೆಳಗಿಳಿಸಿ ” ಚೆನ್ನಾಗಿ ಓದ್ರಪಾ ” ಎಂದು ಶುಭ ಹಾರೈಸಿದ. ಆ ಪುಣ್ಯಾತ್ಮ ಯಾರೋ ಏನೋ ಪಾಪ ಎಷ್ಟು ಚೆನ್ನಾಗಿ ಹೇಳಿಬಿಟ್ಟ ಎಂದರೆ ಇಂದಿಗೂ ನನಗೆ ಉಗಿಬಂಡಿಯ ಇಂಜಿನ್ ನ ಕಾರ್ಯವೈಖರಿ ಹೇಗೆಂಬುದು ಆತ ಹೇಳಿದ್ದು ನೆನಪಿದೆ.

ನಾನು ಹೇಳಿದ್ದು ಒಂದು ಸುಳ್ಳಾದರೂ ನನಗೆ ಎಷ್ಟೋ ಲಾಭವಾಗಿಬಿಟ್ಟಿತು. ಈ ರೀತಿಯಲ್ಲೂ ಪಾಠ ಹೇಳಿದ ಆ ಚಾಲಕ ಗುರುವಿಗೆ ನನ್ನ ಸಲಾಂ !

1 Response

  1. ಅನುಭವ ನಿಜಕ್ಕೂ ಛಂದದ. ನಾ ಮತ್ತ ನನ್ನ ಗೆಳತಿ ಸಣ್ಣವ್ರಿದ್ದಾಗ ಪ್ರಾಜೆಕ್ಟರ್ ಹಿಂದ ಕೂತ ಸಿನಿಮಾ ನೋಡಿದ್ವಿ… ಡೋಲಿ ಅಂತ. ಈಗ ಹೆಣ್ಣು ಹುಡುಗೀರು ಹಂಗ ಬಿಂದಾಸ್ ತಿರುಗೋ ಕಾಲ ಇಲ್ಲೇ ಇಲ್ಲ ನೋಡ್ರಿ.

Leave a Reply

%d bloggers like this: