ನನ್ನ ಫ್ರಿಟ್ಜ್ ಬೆನೆವಿಟ್ಜ್..

ಫ್ರಿಟ್ಜ್ ಬೆನೆವಿಟ್ಜ್ ಫೋಟೋ ತೆಗೆದಿದ್ದು

ವಿನತೆ ಶರ್ಮ

ಎಷ್ಟೋ ದಿನಗಳು ಕಾದು, ಸ್ಕಾಲರ್ ಶಿಪ್ ಹಣವನ್ನು ಕೂಡಿಟ್ಟು ೧೯೮೬ರಲ್ಲಿ ಕೊಂಡಿದ್ದ ಫ್ಯೂಜಿಕಾ ಎಸ್ಎಲ್ಆರ್ ಕ್ಯಾಮೆರಾ.

ನನ್ನ ಎರಡನೇ ಮುದ್ದಿನ ಛಾಯಾಚಿತ್ರ ಪೆಟ್ಟಿಗೆ.

ಇವ್ಳಿಗೇನಿದು ಈ ಹುಚ್ಚು ಎಂದು ಎಲ್ಲರೂ ಆಡಿಕೊಂಡರೂ ನನ್ನ ಗುರಿ ತಲುಪಿದ ಮಹಾನ್ ಆಕಾಂಕ್ಷೆಯ ವರ್ಷವದು. ಆಗಿನ ವಿದ್ಯಾರ್ಥಿ ಜೀವನದಲ್ಲಿ ನಾನು ಖರ್ಚು ಮಾಡುತ್ತಿದ್ದುದು ಪುಸ್ತಕಗಳಿಗೆ ಮತ್ತು ಈ ಕ್ಯಾಮೆರಾ ಬಳಸಲು ಫಿಲಂ ಮತ್ತು ಅದರ ಪ್ರಿಂಟಿಂಗ್.

ಅಪರೂಪದ ಪುಸ್ತಕಗಳನ್ನು ಹುಡುಕಿಕೊಂಡು ಬೆಂಗಳೂರಿನ ಬಡಾವಣೆಗಳನ್ನು ಅಲೆಯುತ್ತಿದ್ದೆ. ಫ್ಯೂಜಿಕಾ ಬಂದ ಮೇಲೆ ಫೋಟೋಗ್ರಫಿಗೆ ಹೆಚ್ಚು ಹಣ ಹೋಯ್ತು. ಬಲು ಮಿತವ್ಯಯದ ಆ ದಿನಗಳಲ್ಲಿ ಒಂದೊಂದು ಫ್ರೇಮೂ ಅತ್ಯಮೂಲ್ಯ. ಪ್ರಿಂಟ್ ಮಾಡಿಸಲು ಕೊಟ್ಟು ಬಂದಮೇಲೆ ಜೀವ ಹಿಡಿದುಕೊಂಡು ಕಾಯುತ್ತಿದ್ದೆ. ಮೂವತ್ತಾರರಿಂದ ಮೂವತ್ತೆಂಟು ಫೋಟೋಗಳು ಪ್ರಿಂಟ್ ಆಗಿ ಬಂದರೆ ಮುಖ ಅರಳುತ್ತಿತ್ತು. ಸದ್ಯ, ಒಂದು ಫ್ರೇಮೂ ವ್ಯರ್ಥವಾಗಲಿಲ್ಲ ಎಂಬ ಸಮಾಧಾನ.

ಅಪರೂಪಕ್ಕೆ ಮೂವತ್ತೊಂಭತ್ತು ಫೋಟೋಗಳು ಬಂದರೆ ಹರ್ಷೋದ್ಗಾರ! ಇವೆಲ್ಲ ಕಾತರ, ದುಗುಡ, ಚಡಪಡಿಕೆ, ಹರ್ಷ ಅಮ್ಮನಿಗೆ ಮಾತ್ರ ತಿಳಿಯುತ್ತಿತ್ತು. ಪ್ರತಿ ತಿಂಗಳೂ ತಪ್ಪಿಸದೇ ಒಂದು ಫಿಲಂ ರೋಲ್ ಕೊಳ್ಳಲು, ಪ್ರಿಂಟ್ ಮಾಡಿಸಲು ದುಡ್ಡು ಕೊಡುತ್ತಿದ್ದರು. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಹುಡುಗಿ ಕ್ಯಾಮೆರಾ ಹಿಡಿದು, ತಾನು ತೆಗೆಯುವ ಫೋಟೋಗಳ ಬಗ್ಗೆ ಸಂಭ್ರಮದಿಂದ ಮಾತನಾಡುವುದನ್ನು ಹೇಗೆ ಸ್ವೀಕರಿಸಬೇಕು ಎನ್ನುವ ಗೊಂದಲ ಜನರಿಗೆ.

ಕೆ.ವಿ.ಸುಬ್ಬಣ್ಣ ಮತ್ತು ನೀನಾಸಂ ಹೆಗ್ಗೋಡಿನಲ್ಲಿ ನಡೆಸುತ್ತಿದ್ದ ಚಲನಚಿತ್ರ ಮೆಚ್ಚುಗೆ (ಫಿಲಂ ಅಪ್ರಿಸಿಯೇಷನ್) ಶಿಬಿರ, ಅಕ್ಟೋಬರ್, ೧೯೮೬. ನಾನು ಶಿಬಿರದಲ್ಲಿ ಭಾಗವಹಿಸಿದ್ದೆ. ಆ ಸಮಯದಲ್ಲಿ ಹೆಗ್ಗೋಡಿಗೆ ಬಂದಿದ್ದ ಖ್ಯಾತ ಜರ್ಮನ್ ರಂಗಭೂಮಿ ನಿರ್ದೇಶಕ ಫ್ರಿಟ್ಜ್ ಬೆನೆವಿಟ್ಜ್ ಅವರ ಫೋಟೋ ತೆಗೆಯಬೇಕೆಂದು ಆಸೆಯಾಗಿತ್ತು.

ಆಗಾಗ ಅಲ್ಪಸ್ವಲ್ಪ ಮಾತನಾಡಿಸಿದ್ದು, ಅವರು ಸ್ನೇಹಪರ ವ್ಯಕ್ತಿ ಎಂದು ಗೊತ್ತಾಯ್ತು. ಒಂದು ದಿನ ಅವರು ಆರಾಮಾಗಿ ಅಡ್ಡಾಡುತ್ತಿದ್ದಾಗ ಸ್ನೇಹಿತೆಯನ್ನು ಎಳೆದುಕೊಂಡು, ಕ್ಯಾಮೆರಾ ಹಿಡಿದು ಅವರ ಹತ್ತಿರ ಹೋಗಿ ನಿಮ್ಮ ಫೋಟೋ ತೆಗೆಯಬೇಕೆಂದು ಆಸೆ ಎಂದೆ. ತಕ್ಷಣ ಅವರು ಯಸ್, ವೈ ನಾಟ್ ಎಂದರು. “ನಿನ್ನ ಕ್ಯಾಮೆರಾಕ್ಕೆ ಮುಖ ಮಾಡಿ ನಿಲ್ಲಲೇ”, ಎಂದು ಕೇಳಿದರು. ಉಹು, ಬೇಡ, ನೀವು ಹಾಗೆ ನಿಮ್ಮ ಪಾಡಿಗೆ ಮಾತನಾಡುತ್ತಿರಿ ಎಂದೆ. ಕ್ಯಾಮೆರಾ ಜೊತೆಯೇ ಅಥವಾ ನಿನ್ನ ಜೊತೆಯೇ ಎಂದು ಕೇಳಿದರು.

ನಿಮ್ಮ ಊರಿನ ಬಗ್ಗೆ ಸ್ವಲ್ಪ ಹೇಳಿ ಎಂದೆ. ಹೇಳುತ್ತಾ ಹೋದರು. ನನ್ನ photographer’s moment ಬಂದೇ ಬಂತು. ಫೋಟೋ ತೆಗೆದೆ. ತಿಂಗಳು ಬಿಟ್ಟು ಪ್ರಿಂಟ್ ಮಾಡಿಸಿಯಾದ ಮೇಲೆ ನೋಡಿದೆ. ಬೆನೆವಿಟ್ಜ್ ರ ಫೋಟೋ ಚೆನ್ನಾಗಿ ಬಂದಿದೆ ಎನ್ನಿಸಿತು. ಪುನಃ ಹಲವಾರು ಕಾಪಿಗಳನ್ನ ಮಾಡಿಸಿ ಹೆಗ್ಗೋಡಿಗೆ ನನ್ನ ಜೊತೆ ಹೋಗಿದ್ದ ಸ್ನೇಹಿತೆಯರಿಗೆ ಕೊಟ್ಟೆ.

ಅವರಲ್ಲಿ ಒಬ್ಬಳು ಅವಳ ಪ್ರಖ್ಯಾತ ಸಾಹಿತಿ ತಂದೆಗೆ ಅದನ್ನ ತೋರಿಸಿದಳಂತೆ. ಅವರು ಆ ಫೋಟೋವನ್ನ ಕೆ.ವಿ.ಸುಬ್ಬಣ್ಣರಿಗೆ ತೋರಿಸಿದರು. ಸುಬ್ಬಣ್ಣರು ಫೋಟೋವಿನ ನೆಗೆಟಿವ್ ಕೇಳಿದರಂತೆ. ಸ್ನೇಹಿತೆ ಬಂದು ಹೇಳಿದಳು. ನಾನು ನೆಗೆಟಿವ್ ಕೊಡಲೊಪ್ಪಲಿಲ್ಲ. ಅದು ನನ್ನ ಫೋಟೋಗ್ರಾಫರ್ ಹಕ್ಕು, ಅವರು ಫೋಟೋವನ್ನ ಬಳಸುವುದಾದರೆ ನನ್ನ ಹೆಸರನ್ನು ಸೂಚಿಸಬೇಕು, ಎಂದೆ.

ವಿಷಯ ವಾಪಸ್ ಸುಬ್ಬಣ್ಣರಿಗೆ ಹೋಯಿತು. ಹಾಗೆ ಮಾಡುವುದಾಗಿ ಹೇಳಿದರಂತೆ. ನಾನು ಸ್ನೇಹಿತೆಯ ಮೂಲಕ ಅವರಿಗೆ ನೆಗೆಟಿವ್ ಕಳಿಸಿಕೊಟ್ಟೆ. ಅವರು ಮರೆಯದೆ, ಮಾತು ಕೊಟ್ಟಹಾಗೆ, ನನಗೆ ಫೋಟೋ ಕ್ರೆಡಿಟ್ ಕೊಟ್ಟರು. ಸುಮಾರು ಎರಡರಿಂದ ಮೂರು ವರ್ಷಗಳ ಕಾಲ ನನ್ನ ಪತ್ರಸ್ನೇಹಿತರಾಗಿದ್ದರು. ಒಂದು ಪತ್ರದಲ್ಲಿ ಆ ಫೋಟೋ ಕುರಿತು ತಮ್ಮ ಮೆಚ್ಚುಗೆಯನ್ನು ತಿಳಿಸಿ, ನನ್ನ ಫೋಟೋಗ್ರಫಿ ಹವ್ಯಾಸವನ್ನು ಮುಂದುವರೆಸುವಂತೆ ಪ್ರೋತ್ಸಾಹದ ಮಾತುಗಳನ್ನು ಹೇಳಿದ್ದರು.

ಮುಂದೆ ೧೯೯೨ ರಲ್ಲಿ ಒಮ್ಮೆ ಇದೇ ಫೋಟೋವನ್ನ ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯಲ್ಲಿ ಬೆನೆವಿಟ್ಜ್ ರವರ ಕುರಿತು ಪ್ರಕಟವಾದ ಲೇಖನಕ್ಕೆ ಪೂರಕವಾಗಿ ಬಳಸಲಾಗಿತ್ತು. ಆಗಲೂ ನನಗೆ ಫೋಟೋ ಕ್ರೆಡಿಟ್. ಖುಷಿಯಾಗಿತ್ತು. ಒಬ್ಬ ಸಾಮಾನ್ಯ ವಿದ್ಯಾರ್ಥಿಯ ಕೋರಿಕೆಯನ್ನು ಸುಬ್ಬಣ್ಣರು ಮುತುವರ್ಜಿಯಿಂದ, ಗೌರವದಿಂದ ಕಂಡದ್ದನ್ನ ಕುರಿತು ಮತ್ತೆಮತ್ತೆ ಹೇಳಬೇಕೆನ್ನಿಸುತ್ತದೆ.

ಫೋಟೋ ನೋಡಿದಾಗಲೆಲ್ಲಾ ತೆಗೆದ ಸಂದರ್ಭದ, ಬೆನೆವಿಟ್ಜ್ ರ ನೆನಪಿನ ಜೊತೆಗೆ ಸುಬ್ಬಣ್ಣರವರ ಅಪರೂಪದ ಮೇರು ವ್ಯಕ್ತಿತ್ವ ಕಣ್ಣ ಮುಂದೆ ಬಂದು ಅವರ ಬಗ್ಗೆ ಇರುವ ಅಭಿಮಾನ ಮತ್ತಷ್ಟು ಹೆಚ್ಚುತ್ತದೆ.

2 comments

  1. ಸುಮಾರು38 ವರ್ಷಗಳ ಹಿಂದೆ ತೆಗೆದ FOTO ಗೆ ನಾನೂ ಒಬ್ಬ ಸಾಕ್ಷಿ ಪುರುಷ- ವಿನತೆ, ಆ ಅದೇ ನೀ ನನಗೂ ಆ FOTO ಕಳಿಸಿದ್ದೆ: ಇದೆ .

Leave a Reply