ಮನಸು ಮರಳಿ ನನ್ನ ಗೂಡಿನಲ್ಲಿ..

ನಾಗ ಐತಾಳ 

ಕವಿ ಲಕ್ಷ್ಮಿನಾರಾಯಣ ಭಟ್ಟರ ಕವನ: ‘ಎಂಥಾ ಹದವಿತ್ತೇ! ಹರಯಕೆ ಏನೋ ಮುದವಿತ್ತೇ….’ ಎಂಬ ಕವನವನ್ನು ಓದಿದಾಗಲೆಲ್ಲ, ನನಗೆ ಬಾಲ್ಯದಲ್ಲಿ ಕೋಟ ಮತ್ತು ಬೆಂಗಳೂರಿನಲ್ಲಿ ಕಳೆದ ಸವಿ ನೆನಪುಗಳು ಮರುಕಳಿಸುತ್ತವೆ.

ಈಗ, ಆ ಹುಟ್ಟೂರಿಂದ ದೂರವಾಗಿದ್ದೇನೆ; ಹಾಗಾಗಿ, ಈ ಕವನವು ನನಗೆ ಒಂದು ವಿಶೇಷ ಅರ್ಥ ಕೊಡುತ್ತದೆ. ಈಗ, ‘ಕಾಣದ ಕೈಯಿ ಎಲ್ಲ ಕದ್ದು ಉಳಿಯಿತು ನೆನಪಷ್ಟೆ!’ ಅಂಥ ಸ್ಮರಣೆ ನನ್ನನ್ನು ಅಮೆರಿಕಕ್ಕೆ ಬೆನ್ನಟ್ಟಿಕೊಂಡೇ ಬಂದಿದೆ.

ಅದು ನನಗೆ ನೋವಿನ ಮಧ್ಯೆಯೂ, ಒಂದು ಹಿತ ಅನುಭವ ಕೊಡುತ್ತಿದೆ. ಇಲ್ಲಿ ನಾನು ಅಂಥದೊಂದು ಅನುಭವವನ್ನು ವಿವರಿಸುತ್ತಿದ್ದೇನೆ. ಇನ್ನೊಬ್ಬರ ಸಮಸ್ಯೆಯನ್ನು, ನಾವು ಅನುಭವಿಸಿದ ವೇದನೆಯೊಡನೆ ಪರಿಶೀಲಿಸಿದಾಗ, ಅಂಥವರ ವೇದನೆಯ ಆಳವನ್ನು ಅರಿತು, ಅನುಕಂಪ ವ್ಯಕ್ತಪಡಿಸಬಹುದು ಎಂಬುದಕ್ಕೆ, ಈ ಕೆಳಗಿನ ಪ್ರಕರಣವು ಒಂದು ನಿದರ್ಶನ:

ಒಮ್ಮೆ ನಾನು ಶಿಕಾಗೋದಲ್ಲಿ, ಒ’ಹೇರ್ ವಿಮಾನ ನಿಲ್ದಾಣದಿಂದ ಮನೆಗೆ ಟ್ಯಾಕ್ಸಿಯಲ್ಲಿ ಬರುತ್ತಿದ್ದಾಗ ಆದ ಅನುಭವವಿದು. ಟ್ಯಾಕ್ಸಿ ಚಾಲಕ ಕೆಲವು ತಿಂಗಳ ಹಿಂದಷ್ಟೆ ರಷ್ಯ(ಯುಕ್ರೈನ್)ದಿಂದ ಬಂದು ನೆಲೆಸಿದ ಒಬ್ಬ ವಲಸೆಗಾರ.

ಟ್ಯಾಕ್ಸಿ ಹತ್ತಿದ ಸ್ವಲ್ಪ ಸಮಯ ನಾವಿಬ್ಬರೂ ಮೌನವಾಗಿಯೇ ಇದ್ದಿದ್ದೆವು. ಆದರೆ, ಆ ಚಾಲಕ ಒಂದು ಸಂಗೀತದ ಟೇಪನ್ನು ಬಹಳ ಸಣ್ಣ ದನಿಯಲ್ಲಿ ಕೇಳಿಸಿಕೊಳ್ಳುತ್ತ ಆನಂದಿಸುತ್ತಿದ್ದ. ಕುತೂಹಲದಿಂದಲೂ, ಸಂಭಾಷಣೆ ಪ್ರಾರಂಭಿಸುವ ಉದ್ದಿಶ್ಯದಿಂದಲೂ, ನಾನು ಅವನೊಡನೆ ‘ನೀನ್ಯಾವ ಸಂಗೀತ ಕೇಳುತ್ತಿದ್ದೀಯ? ಬಹಳ ಚೆನ್ನಾಗಿದೆ’ ಎಂದು ಔಪಚಾರಿಕವಾಗಿ ಕೇಳಿದೆ.

ಅದನ್ನು ಕೇಳಿ ಅವನ ಮುಖ ಅರಳಿತು. ಆತ ‘ನಿನಗೆ ಇದು ಹಿಡಿಸಿತೇ? ಬಹು ಮಂದಿ ಪ್ರಯಾಣಿಕರಿಗೆ ಈ ಸಂಗೀತ ಹಿಡಿಸುವುದಿಲ್ಲ. ಅದಕ್ಕೆಂದೇ ಅತಿ ಸಣ್ಣ ದನಿಯಲ್ಲಿ ಅದನ್ನು ಕೇಳುತ್ತಿದ್ದೆ. ಇದು ನನ್ನ ತಾಯ್ನಾಡಾದ ಯುಕ್ರೈನ್ ಭಾಷೆಯ ಹಾಡು. ನಿನಗೆ ಕೇಳಲು ಇಷ್ಟವಿದ್ದರೆ ದನಿ ಸ್ವಲ್ಪ ಜಾಸ್ತಿ ಮಾಡುವೆ’ ಎಂದು ಹೇಳಿ, ಸ್ವಲ್ಪ ದನಿ ಹೆಚ್ಚಿಸಿದ. ಮಾತ್ರವಲ್ಲ ತಾನೂ ಆ ಹಾಡನ್ನು ಗುನುಗಲು ಪ್ರಾರಂಭಿಸಿದ. ಅದು ನನಗೆ ತೀರ ಅಪರಿಚಿತ ಸಂಗೀತವಾಗಿತ್ತು. ಕೇಳಲು ಹೇಳಿಕೊಳ್ಳುವಷ್ಟು ಇಂಪಾಗಿಲ್ಲದಿದ್ದರೂ, ಕಿವಿ ಮುಚ್ಚಿಕೊಳ್ಳುವಂತಿರಲಿಲ್ಲ. ಸಂಗೀತಕ್ಕಿಂತಲೂ ಅವನ ಮುಖದಲ್ಲಿ ಮೂಡಿದ ಸಂತೋಷವೇ ನನಗೆ ಹಿತ ಕೊಡುತ್ತಿತ್ತು.

ಆ ಸಂಗೀತವನ್ನು ಕೇಳಿ, ಆನಂದಿಸುತ್ತಿರುವೆನೆಂಬಂತೆ ಸ್ವಲ್ಪ ತಲೆಯಾಡಿಸುತ್ತ ನಾನು ಕೇಳಿದೆ ‘ನೀನು ಈ ದೇಶಕ್ಕೆ ಬಂದು ಎಷ್ಟು ಸಮಯವಾಯ್ತು?’ ಎಂದು.
‘ನಾನು ಬಂದು ಐದಾರು ತಿಂಗಳ ಮೇಲಾಯ್ತು. ನಮ್ಮೂರ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದಿದ್ದೇನೆ. ಊರಿನಲ್ಲಿ ನನ್ನ ಮುದಿ ತಾಯಿ ಮತ್ತು ಒಬ್ಬ ತಮ್ಮ ಇದ್ದಾರೆ. ಈ ಹೊಸ ದೇಶಕ್ಕೆ ಬಂದು ನಾನೀಗ ಸಾಂಸ್ಕೃತಿಕ ಆಂದೋಲನದಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ಬಂದ ಕೆಲವು ದಿವಸಗಳಲ್ಲಿ ಕೆಲಸ ಹುಡುಕುವುದೇ ಕಷ್ಟವಾಯ್ತು. ಈಗ, ಈ ಟ್ಯಾಕ್ಸಿ ಚಾಲಕನಾಗಿದ್ದೇನೆ. ಮುಂದೆ, ಇನ್ನೂ ಹೆಚ್ಚಿನ ವಿದ್ಯಾಭ್ಯಾಸ ಪಡೆದು, ಉತ್ತಮ ಉದ್ಯೋಗ ಪಡೆಯಬೇಕೆಂಬ ಆಸೆ ಇದೆ. ಹಾಗೆ ಮಾಡಿ, ನನ್ನ ತಾಯಿಯನ್ನು ಕರೆಯಿಸಿಕೊಳ್ಳುವ ಯೋಚನೆಯೂ ಇದೆ.’ ಎಂದು ಬಹಳ ಉದ್ವೇಗದಲ್ಲಿ ಹೇಳಿದ. ಪಾಪ! ಅವನೊಡನೆ ಇಷ್ಟು ದಿನ ಯಾರೂ ಇಷ್ಟೊಂದು ಮಾತಾಡಿದ್ದಿರಲಿಲ್ಲವಿತ್ತೋ ಏನೋ!

ತನ್ನ ತಾಯಿಯ ವಿಚಾರವೆತ್ತಿದಾಗ, ಅವನ ಮುಖ ಮತ್ತಷ್ಟು ಅರಳಿತ್ತು. ಅದು ನನಗೆ ಭಾರತದಲ್ಲಿ ನನ್ನೂರಲ್ಲಿದ್ದ ನನ್ನ ವಯಸ್ಸಾದ ತಾಯಿಯ ನೆನಪು ತಂದಿತು. ನನ್ನ ತಾಯಿ ಪ್ರತಿ ಬಾರಿ ಫ಼ೋನ್ ಮಾಡಿದಾಗಲೂ, ‘ಮಗೂ, ನೀನೆಂದು ಬರುವೆಯಾ? ನನಗೂ ವಯಸ್ಸಾಗುತ್ತಿದೆ’ ಎಂದು ಕೇಳುತಿದ್ದಳು. ಅದನ್ನು ನೆನೆಸಿ, ಆ ಕ್ಷಣ ನನಗೆ ತುಂಬಾ ವೇದನೆಯಾಯ್ತು. ಅದರಿಂದ ಪಾರಾಗಲೆಂದೂ, ಸಂಭಾಷಣೆ ಮುಂದುವರಿಸಲೆಂದೂ, ‘ನಿನಗೆ ಈ ದೇಶ ಹಿಡಿಸಿತೇ?’ ಎಂದು ಅವನನ್ನು ಕೇಳಿದೆ.

‘ರಷ್ಯದಲ್ಲಿ ಅಮೆರಿಕದ ಬಗ್ಗೆ ಬಹಳಷ್ಟು ತಪ್ಪು ತಿಳುವಳಿಕೆ ಇದೆ. ಆಷ್ಟಿದ್ದೂ, ಅಲ್ಲಿಯ ಜನರು ಅಮೆರಿಕಕ್ಕೆ ಬರಲು ತುಂಬ ಹಾತೊರೆಯುತ್ತಾರೆ. ಇಲ್ಲಿಗೆ ಬರುವ ಮುಂಚೆ, ನನ್ನಲ್ಲಿ ಕೂಡ, ಅಮೆರಿಕದ ಬಗ್ಗೆ ತಪ್ಪು ಭಾವನೆ ಇದ್ದಿತ್ತು. ಇಲ್ಲಿಗೆ ಬಂದ ಮೇಲೆ, ನನಗೆ ಇಲ್ಲಿಯ ಜನರ ಸೌಹಾರ್ದತೆಯ ಅನುಭವವಾಯಿತು. ನಾನಿಲ್ಲಿ ಸ್ವಾಗತಾರ್ಹನಾಗಿದ್ದೇನೆ. ಆದರೆ, ನನ್ನ ತಾಯ್ನಾಡು, ತಾಯ್ನುಡಿ, ಮತ್ತು ಬಿಟ್ಟು ಬಂದ ತಾಯಿಯ ನೆನಪಾಗುತ್ತಲೇ ಇದೆ. ಈ ಸಂಗೀತ ಕೇಳುತ್ತ ಒಂದು ಅವ್ಯಕ್ತ ಹಿತವನ್ನು ಪಡೆಯುತ್ತಿದ್ದೇನೆ. ನಿನಗೆಲ್ಲಿ ಈ ಸಂಗೀತ ಬೇಸರ ತರುವುದೋ ಎಂಬ ಅನುಮಾನದಿಂದ ಅತಿ ಸಣ್ಣ ಸ್ವರದಲ್ಲಿ ಕೇಳುತ್ತಿದ್ದೆ. ನಿನಗೆ ಅದು ಹಿಡಿಸಿದ್ದುದು ನನಗೆ ಬಹಳ ಸಂತೋಷ ಕೊಟ್ಟಿದೆ.’ ಎಂದು ಹೇಳಿದ.

ಅವನು ಪಡುತ್ತಿರುವ ವೇದನೆಯನ್ನು, ನಾನು ಈ ದೇಶಕ್ಕೆ ಬಂದ ಮೊದಲ ದಿನಗಳಲ್ಲಿ ಅನುಭವಿಸಿದ ವೇದನೆಯೊಡನೆ ಗುರುತಿಸಿಕೊಂಡು, ನನಗೆ ತೋಚಿದ ನಾಲ್ಕು ಸಮಾಧಾನದ ಮಾತನ್ನು ಅವನಿಗೆ ಹೇಳ ಹೊರಟೆ:

‘ಇಂತಹ ವೇದನೆ, ಮೂರು ದಶಕಕ್ಕೂ ಹಿಂದೆ (ಈಗ ೪೮ ವರ್ಷಗಳಿಗೂ ಮೇಲಾಗಿವೆಯೆನ್ನಿ!) ಇಲ್ಲಿಗೆ ಬಂದ ನಮ್ಮನ್ನೂ ಕಾಡುತ್ತಿತ್ತು; ಇಂದಿಗೂ ಕಾಡುತ್ತಿದೆ. ಹಾಗಾಗುವುದು ಸ್ವಾಭವಿಕವೇ! ನಿಜ, ನೀನು ಹೇಳಿದಂತೆ ಈ ದೇಶವು ನಿನ್ನ-ನಮ್ಮಂತವರನ್ನು ಸ್ವಾಗತಿಸಿ, ನಮಗೆ ನೆಮ್ಮದಿ ಒದಗಿಸಿದೆ. ಇದೊಂದು ವಲಸೆಗಾರರ ದೇಶ; ಪ್ರತಿಯೊಬ್ಬನೂ ಒಂದಲ್ಲ ಒಂದು ದೇಶದಿಂದ, ಒಂದಲ್ಲ ಒಂದು ಸಮಯ ವಲಸೆಗಾಗಿಯೇ ಬಂದುದು. ಇನ್ನು, ನೀನು ಕೇಳುತ್ತಿರುವ ಸಂಗೀತ ನನಗೆ ಚೂರೂ ಅರ್ಥವಾಗದಿದ್ದರೂ, ಅದನ್ನು ಕೇಳಿ ನಿನ್ನಲ್ಲುಂಟಾದ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲೆ. ಆ ಭಾವನೆಯ ಸೂಕ್ಷ್ಮತೆ ನನ್ನ ಮನಸ್ಸಿಗೆ ನಾಟಿದೆ. ಅದೊಂದು ವಿಶಿಷ್ಟ ಅನುಭವ. ನಿನ್ನ ಸಂಸ್ಕೃತಿ ಮೇಲಿನ ಅಭಿಮಾನ ಬೆಳೆಸಿಕೊಂಡು ಬರುತ್ತಿರು’ ಎಂದೆ.

ಆ ಟ್ಯಾಕ್ಸಿ ಡ್ರೈವರ್ ನನ್ನನ್ನು ಅಭಿನಂದಿಸುತ್ತ ಹೇಳಿದ ಮಾತು ಒಂದು ಪಾಠ ಹೇಳಿಕೊಟ್ಟಂತಿತ್ತು. ‘ನನ್ನ ಸಂಸ್ಕೃತಿ, ನನ್ನ ಭಾಷೆ, ನನ್ನ ಜನರನ್ನು, ನಾನು ಎಂದಿಗೂ ಮರೆಯಲಾರೆ. ಆದರೆ, ಅಮೆರಿಕದಲ್ಲಿ ನೆಲೆಸುವ ಇಚ್ಛೆ ಇದ್ದೇ ಬಂದಿರುವಾಗ, ನಮ್ಮ ಸಂಸ್ಕೃತಿಯನ್ನು ಮರೆಯದೆ, ನಾನು ಇಲ್ಲಿಯ ಸಂಸ್ಕೃತಿಯೊಡನೆ ಬೆರೆಯಲೇಬೇಕು. ಅದನ್ನು ಸಾಧಿಸುವ ವಿಧಾನವನ್ನು ನಾನು ಕಲಿಯಬೇಕು’. ಈ ಸಮಸ್ಯೆ, ಇಲ್ಲಿಗೆ ಹೊಸದಾಗಿ ಬಂದ ಎಲ್ಲ ವಲಸೆಗಾರರನ್ನೂ ಕಾಡುವುದು ಸ್ವಾಭಾವಿಕ!

ಮುಂದುವರಿಯುತ್ತ, ‘ನನ್ನ ವಿದ್ಯಾಭ್ಯಾಸವನ್ನು ಸಂಜೆ ಕ್ಲಾಸಿಗೆ ಸೇರಿ, ಉತ್ತಮಗೊಳಿಸುವ ಯೋಚನೆ ಇದೆ. ಈ ಮಧ್ಯೆ ಹಣಕ್ಕಾಗಿ ಟ್ಯಾಕ್ಸಿ ಡ್ರೈವ್ ಮಾಡುತ್ತಿದ್ದೇನೆ’ ಎಂದು ಹೇಳುತ್ತಿದ್ದಂತೆ ನಮ್ಮ ಮನೆ ಬಂದಿತು. ಆ ಚಾಲಕನನ್ನು ಅಭಿನಂದಿಸಿ, ಅಮೆರಿಕದಲ್ಲಿ ಅವನ ವಾಸ ಸುಖವಾಗಿರಲೆಂದು ಹಾರೈಸಿ, ನನ್ನ ಕೈಮೀರಿ ‘ಟಿಪ್’ ಕೊಟ್ಟು, ಅವನನ್ನು ಆದರದಿಂದ ಬೀಳ್ಗೊಟ್ಟೆ.

ಮನೆಗೆ ಬಂದು ನನ್ನವಳಿಗೆ ನಡೆದ ಸಂಗತಿ ತಿಳಿಸಿದಾಗ ಅವಳು ‘ಪಾಪ! ತನ್ನ ದೇಶ, ಸಂಸ್ಕೃತಿಯನ್ನು “ಕಳೆದುಕೊಂಡ” ಭಾವನೆ ಅವನನ್ನು ಕಾಡುತ್ತಿರಬೇಕು; ನಮಗೂ ಅಂತಹ ಅನುಭವವಾಗುತ್ತಿತ್ತಲ್ಲ!’ ಎಂದು ಹೇಳಿದಳು. ಅವನಿಗೆ ಕೈಮೀರಿ ಟಿಪ್ ಕೊಟ್ಟುದನ್ನು ಕೇಳಿ ಅವಳು ‘ಇರಲಿ, ಅವನ ವಿದ್ಯಾಭ್ಯಾಸಕ್ಕಾದರೂ, ಕೊಂಚ ಸಹಾಯವಾದೀತು, ಅಲ್ಲವೇ?’ ಎಂದು ಅಭಿಪ್ರಾಯ ಪಟ್ಟಳು.

ಇನ್ನೊಬ್ಬರ ಅನುಭವಗಳ ಆಳವನ್ನು ಅರಿಯಬೇಕಾದಲ್ಲಿ, ತಮಗಾದ ಸ್ವಂತ ವೇದನೆಗಳಲ್ಲಿ ಅವನ್ನು ಗುರುತಿಸಿಕೊಳ್ಳಬೇಕು. ಆಗಲೇ ಆ ಬಗ್ಗೆ ಅನುಕಂಪ ಹುಟ್ಟುವುದು. ನಾವು ಬಂದ ಮೊದಲ ದಿನಗಳಲ್ಲಿ ಅನುಭವಿಸಿದ ವೇದನೆಗಳೇ ನಮಗೆ ಆ ರಷ್ಯನ್ ವಲಸೆಗಾರನು ಅನುಭವಿಸುತ್ತಿರುವ ವೇದನೆಗಳನ್ನು ಅರ್ಥ ಮಾಡಿಕೊಳ್ಳಲು ದಾರಿ ಮಾಡಿ ಕೊಟ್ಟಿತು.

ಮನೆಗೆ ಬಂದು ಬಹಳ ಹೊತ್ತು, ಆ ರಷ್ಯನ್ ಟ್ಯಾಕ್ಸಿ ಡ್ರೈವರನ ವಿಚಾರವನ್ನೇ ಯೋಚಿಸುತ್ತಿದ್ದೆ. ಎಣಿಸಿದಷ್ಟೂ, ಅವನ ಮೇಲೆ ಅನುಕಂಪದ ಜೊತೆಗೆ ಅಭಿಮಾನವೂ ಹೆಚ್ಚುತ್ತಿತ್ತು. ಇನ್ನು ನಾನು ಅವನ ಭೇಟಿಯಾಗುವ ಸಂಭವವಿಲ್ಲವೆನ್ನಬಹುದು. ಆದರೆ, ಅವನ ದೃಢ ನಿಲುವು, ಅವನ ಆಶಾದಾಯಕ ಮಾತು ನನ್ನ ಮನಸ್ಸಿನಲ್ಲಿ ಬಹಳ ಕಾಲ ಉಳಿಯುವುದರಲ್ಲಿ ಸಂದೇಹವಿಲ್ಲ.

ಅವನು ಕೇಳುತ್ತಿದ್ದ ಸಂಗೀತದ ಜ್ಞಾಪಕ ಬಂದಾಗ, ನಾವೂ, ನಮ್ಮೂರ ಕನ್ನಡ ಹಾಡುಗಳಿಗಾಗಿ ಹಾತೊರೆಯುತ್ತಿದ್ದ ದಿನಗಳು ನೆನೆಪಿಗೆ ಬರುತ್ತದೆ. ನಾವು ಇಲ್ಲಿಗೆ ವಲಸೆ ಬಂದ ಕಾಲದಲ್ಲಿ ಟೇಪ್ ರೆಕಾರ್ಡರುಗಳ ಬಳಕೆ ಅಷ್ಟಿರಲಿಲ್ಲ. ಕನ್ನಡ ಹಾಡನ್ನು ಕೇಳ ಬೇಕಾದಲ್ಲಿ, ನಮ್ಮ ಮಕ್ಕಳಿಂದ ಹಾಡಿಸಿ ನಮ್ಮ ಹಂಬಲಗಳನ್ನೆಲ್ಲ ತಣಿಸಿಕೊಳ್ಳುತ್ತಿದ್ದೆವು. ಅವರು ಹಾಡಿದ ’ಹೂವು, ಚೆಲುವೆಲ್ಲ ತಂದೆಂದಿತು. … ’, ’ಮುದ್ಡಿನ ಗಿಣಿಯೆ ಬಾರೋ ….’, ’ಮೂಡಲ ಮನೆಯಾ ಮುತ್ತಿನ ನೀರಿನ ….’, ‘ಅವಲಕ್ಕಿ, ಬವಲಕ್ಕಿ, ಕಾಂಚಿಣಿ, ಮಿಣಿ ಮಿಣಿ……’, ಮುಂತಾದ ಹಾಡುಗಳನ್ನು ಕೇಳಿಯೇ ನಾವು ಅತೀವ ತೃಪ್ತಿ ಪಡೆಯುತ್ತಿದ್ದೆವು. ಹಿಂದೆ ಮಕ್ಕಳಿಂದ ಕೇಳಿಯೇ ಪಡೆದ ಆ ಹರ್ಷವು ಎಲ್ಲ ರೀತಿಯಿಂದಲೂ ವಿಶಿಷ್ಟವಾದುದು; ಅದನ್ನು ಮರೆಯಲು ಸಾಧ್ಯವೇ ಇಲ್ಲ!

ನಾನು ಮೇಲೆ ತಿಳಿಸಿದ ರಷ್ಯನ್ ಟ್ಯಾಕ್ಸಿ ಡ್ರೈವರ್ (ಅವನ ಹೆಸರೂ ಈಗ ಜ್ಞಾಪಕವಿಲ್ಲ! ಇದು ವಿಷಾದರೇ!) ಈಗ ಹೆಚ್ಚಿನ ವಿದ್ಯಾಭ್ಯಾಸ ಪಡೆದು, ಒಳ್ಳೆಯ ಉದ್ಯೋಗ ಪಡೆದು, ಅಮೆರಿಕದಲ್ಲಿ ಸುಖ ದಿನಗಳನ್ನು ಅನುಭವಿಸುತ್ತಿರಬಹುದು. ಆದರೆ, ಅವನ ಹುಟ್ಟೂರಿನ ನೆನೆವರಿಕೆ ಅವನನ್ನು ಬಿಟ್ಟಿರಲಾರದು. ಅದು ಅವನನ್ನು ಆಗಾಗ್ಯೆ ಕಾಡುತ್ತಿದ್ದು, ಒಂದು ಅವ್ಯಕ್ತ ‘ಹಿತ’ವನ್ನು ಕೊಡುತ್ತಲೂ ಇರಬಹುದು.

ಎಲ್ಲಿದ್ದರೂ ನಮ್ಮ ಹುಟ್ಟೂರಿನ ಹಲವು ಸ್ಮರಣೆಗಳು ನಮ್ಮನ್ನು ಬೆನ್ನಟ್ಟಿ ಕೊಂಡೇ ಬರುತ್ತವೆ; ನಾವು ಅವನ್ನು ನಮ್ಮ back packನಲ್ಲಿ ಹೊತ್ತೇ ತಂದಿರುತ್ತೇವೆ, ಅಲ್ಲವೇ?

[ಮೂಲ: ನನ್ನ ಗ್ರಂಥ, “ಕಲಬೆರೆಕೆ” (ಮನೋಹರ ಗ್ರಂಥ ಮಾಲಾ, ಧಾರವಾಡ, ೨೦೦೮)]

1 Response

  1. Anagha LH says:

    Lekhana Chennagide sir…

Leave a Reply

%d bloggers like this: