ಮನೆಗೆ ಚಿಲುಕದ ಹಂಗಿದೆಯಲ್ಲ?

ತಪ್ಪೆಂದು  ಗೊತ್ತು ಗೆಳೆಯಾ….

ಡಾ. ಪ್ರೇಮಲತ ಬಿ

 

ಗೊತ್ತು ಗೆಳೆಯಾ…

ನೀಹಾರಿಕೆಗಳು ಕೈಗೆ ಸಿಗವು ಎಂದು

ಅವಾಗಲೆ ಬಾನ ಪಾಲಾಗಿವೆಯಲ್ಲ?

ನೈದಿಲೆಯಾಗಿ ಅರಳಲೆಂದು ಮನ

ಬಯಸಿದರೂ ಚಂದ್ರನ ಕರಿ ರಾತ್ರಿ ಕದ್ದಿದೆಯಲ್ಲ?

ನಿನ್ನದೆಯ ಬಾಗಿಲು ಬಡಿದರೂ

ಮನೆಗೆ ಚಿಲುಕದ ಹಂಗಿದೆಯಲ್ಲ?

ಬೇಡವೆಂದು ಮನಕೆ ಬರೆ ಹಾಕಿದರೂ

ಆಳದ ಕನವರಿಕೆಗಳಿಗೆ ನಿನ್ನ ದನಿಯಿದೆಯಲ್ಲ?

ಕನಸಿನ  ಬಳ್ಳಿಯ  ಕಡಿಯಲು ಕೈ ಗೊಡಲಿ

ಹಿಡಿದರೆ ನನ್ನ ನೆತ್ತರಿಗೂ ನಿನ್ನ ಬಿಸಿಯಿದೆಯಲ್ಲ?

ಬೀಸುವ ಗಾಳಿಯಲಿ ತೇಲಿ ನಿನ್ನ ಸೋಕಲು

ಏಳು ಕೋಟೆಯ ಗೋಡೆಯ ತಡೆಯಿದೆಯಲ್ಲ?

ನಿನ್ನೆಡೆಗೆ ತುಡಿವ ಒಂದೊಂದು ಹೆಜ್ಜೆಗೂ

ಕಾಲ ಸುತ್ತಿದ ನಾಗರನ ಬಂಧನವಿದೆಯಲ್ಲ?

ಇರಲಿ ಬಿಡು, ಮೌನವಹಿಸಿರುವೆ ನೀನು

ಅವನ ಪಾಲಾಗಿ ಬದುಕು ದುಡುಕಿರುವ ಈ ಗಳಿಗೆ

ವೇಷ ಹಚ್ಚಿದ ಬರಿಯ ಪಾತ್ರಧಾರಿ ನಾನು

ಚಡಪಡಿಕೆ, ಬಡಬಡಿಕೆಗಳ ಕೂಗುಗಳಿಗೆ ದನಿಯಿಲ್ಲ

ಮೌಲ್ಯನಿಷ್ಠರ ಮನೋವಿಲಾಸವ ಒರೆಗೆ ಹಚ್ಚುವ

ಪ್ರೀತಿಯಲಿ, ಸಂವೇದನಾಶೀಲ ಸಹೃದಯಿ ಕಥನ.

ಇರಲಿ ಬಿಡು, ನಾನು  ನಾನೇ ಆಗಿರದೆ

ಕುದಿವ ಮನದ ಭುಗಿಲು  ನಂದಿ ಹರಿಯೆ ನೀನು

ಅವಳವನಾಗಿ ಆಡುವ  ನಾಟಕದ ಅಂಕ ಮುಗಿಯೆ

 

ಪರಿಶುದ್ದೆ ಗಂಗೆ, ಪವಿತ್ರ ಅಗ್ನಿ,  ಪುಟವಿಟ್ಟ ಚಿನ್ನದ

ಹೊಳಹಿನಲಿ ಕಾಣುವ ನಾಡಲ್ಲಿ ನಾಳೆ

ನಮ್ಮದು ಈಗಲೇ ಬರೆದಿಟ್ಟಿರುವ ಭೇಟಿ !!

 

Leave a Reply