ಅಜ್ಜಿ ಹೇಳಿದ ಕನಸಿನ ರಾಜನ ಕತೆಯಲ್ಲಿ..

ಮೇಘನಾ   

ಊರ ಬಿಟ್ಟವರು

ಕನಸನ್ನರುಸುತ್ತ ಊರಬಿಟ್ಟವರು
ಮನಸೊಂದೆಡೆ ದೇಹವೊಂದೆಡೆ ಎನ್ನುವರು
ಅಲ್ಲಿದ್ದಾಗ ಇಲ್ಲಿ, ಇಲ್ಲಿದ್ದಾಗ ಅಲ್ಲಿ ನೆನೆಯುತ್ತ
ಎಂದು ಖುಷಿಯಾಗಿರದವರು

ಸುತ್ತೂರಲ್ಲಿ ಸಂಭ್ರಮದಿ ಮೆರೆದು
ಕೊನೆಗೆ ಹುಟ್ಟೂರ, ಹೆತ್ತೋರ ತೊರೆದು
ಸಂಬಳವನ್ನರಸಿ ಬಂದ ಈ ನೌಕರರು
ಗೂಡು ಬಿಟ್ಟು ಬಾಡಿಗೆ ಮನೆ ಹುಡುಕುತಿರು

ತೆಂಗರಿಯ ತಂಪಾದ ತಂಗಾಳಿಯ ಹರಿಬಿಟ್ಟು
ಮಾಲಿನ್ಯ, ಮಾರ್ದಕದ ಆರ್ಭಟದಲಿ ಸಿಲುಕಿಹೆವು
ಕೆರೆಏರಿಮೇಲಿನ ಇಳಿಸಂಜೆಯ ಬಾನಿನಾಟವು
ಉದಾಹರಣೆಗೆಂದಿರುವ ಉದ್ಯಾನವನದಲ್ಲಿ ಸಿಗದು

ಮಂದಿಯೆಲ್ಲ ಹಳ್ಳಿಬಿಟ್ಟು ನಗರ ಸೇರಿ
ಕ್ರುಷಿ ಭೂಮಿ ಕೂಡ ನೊಂದಿದೆ ಬರಡಾಗಿ
ಊರಲ್ಲಿ ಹಳೆಜೀವವಷ್ಟೆ ನಿಂತಿಹುದು ಬೇರೂರಿ
ಮಾಡದಿರಿ ಗ್ರಾಮವೆಂದರೆ ವ್ರದ್ಧಾಶ್ರಮ ಎಂತಾಗಿ

ಬೆಳದಿಂಗಳ ಒಡೆಯ

ಬರಿ ನೀನೆ ಇದ್ದೆ , ನನ್ನ ಜೋಗುಳದಲ್ಲಿ
ಮುದವಿಟ್ಟು ರಂಜಿಸಿದ ಚಿಣ್ಣರ ಕವನಗಳಲ್ಲಿ
ತುತ್ತನ್ನು ಕಸಿದು ತಿನ್ನುವ ಗುಮ್ಮನಲ್ಲಿ
ಅಜ್ಜಿ ಹೇಳಿದ ಕನಸಿನ ರಾಜನ ಕತೆಯಲ್ಲಿ

ಹಗಲೆಲ್ಲ ನಿನ್ನ ಬರುವಿಕೆಗಾಗಿ ಕಾದು
ದಣಿದ ಜೀವಕ್ಕೆ ಸಾಕು ನಿನ್ನ ನಗುವಿನ ಲತೆ
ನಿನ್ನ ಕಂಡಾಗಲೆಲ್ಲ ಹೆಚ್ಚುವುದು
ಇನ್ನಿಲ್ಲದ ಒಡಳಾಲದ ಭಾವುಕತೆ

ಒಂದೊಮ್ಮೆ ನಗುವ ಪೂರ್ಣ ಚಂದ್ರಮನಾಗಿ
ಬಾನಂಗಳದಲ್ಲಿ ನಡೆಸುವೆ ಬೆಳಕಿನ ಕೂಟ
ಮತ್ತೊಮ್ಮೆ ಕರಿಯ ಛಾಯೆಯಲ್ಲಿ ಮರೆಯಾಗಿ
ಉದ್ಭಣಗೊಳಿಸುವೆ ಹ್ರುದಯದ ಸಂಕಟ

ದಿನ ನಿತ್ಯವು ಇರದೆ ಏಕರೀತಿ
ಕಾಯುವಿಕೆಯಲ್ಲೇ ಹೆಚ್ಚಿದೆ ಅತಿಯಾದ ಪ್ರೀತಿ
ಸರಿದಾಡುವ ಮೇಘರಾಜನಲ್ಲೊಂದು ವಿನಂತಿ ಮರೆಮಾಡದಿರಿ, ತಾಳಲಾರೆನು ಪಜೀತಿ

ಬಾಲ್ಯದಿದಂಲೆ ಬೆಸೆದ ಈ ಒಡನಾಟ
ಇನ್ನು ನಿಂತಿಲ್ಲ ನೋಡು ನಿನಗಾಗಿ ಹುಡುಕಾಟ
ಬೇಗ ಸಿಗಲೊಲ್ಲೆಯಲ್ಲವೆನ್ನುವ ಪರದಾಟ
ಆದರು, ಪರವಾಗಿಲ್ಲ ಮಜವಾಗಿದೆ ಈ ಕಾದಾಟ

ವರುಣಾಗಮನ

ತರಗೆಲೆಗು ಜೀವಬಂದು
ತರತರನೆ ಹಾರುತಿರೆ
ತಂಪಾದ ತಂಗಾಳಿಯು
ಹೊತ್ತಿಳಿಯುವ ಮುಂಚೆಯೇ ತೆರಳುತಿರೆ
ಯಾಕೆಂದು ಕೇಳಿದರೆ
ಮುಂಗುರಳ ಸುಳಿಯಲ್ಲಿ
ಸುಳಿದು ಹಾಗೆ ಸರಿದಾಡಿದವು

ಸ್ವಚ್ಛಂದ ಬಾನಿನಲಿ
ನಿರ್ಭಯದಿ ಆಡುತಿಹ
ಹಕ್ಕಿಗಳ ಗುಂಪು ಚದುರಿ
ಗೂಡಿನಡೆ ತರಳುತಿರೆ
ಯಾಕೆಂದು ಕೇಳಿದರೆ
ಗಜಿಬಿಜಿಯ ಗದ್ದಲದಲಿ

ಬಿಡಿಸೇಳ್ಹದೆ ಹಾರಿ ಹೋದವು

ಕಾರ್ಮೋಡಗಳ ಗುದ್ದಾಟದಲಿ
ಗುಡುಗೊಂದು ಅಬ್ಬರಿಸಿ
ಉರಿವ ಉದಯನಿಗು ಮತ್ತು ಬರಿಸಿ
ಮಿಂಚಾಗಿ ಮಿನುಗಿರಲು
ಯಾಕೆಂದು ಕೇಳಿದರೆ
ಮೈಮರೆತ ಮರವೆಲ್ಲ
ನಿಂತಲ್ಲೇ ತೂರಾಡುತಿಹವು

ಯಾರೆಂದು ತಲೆಯೆತ್ತಿ ನೋಡಿದರೆ
ಹರುಳಾಗಿ ಹನಿಯೊಂದು ಸ್ಪರ್ಶಿಸಲು,
ಓಹೋ! ಇದೋ ವರುಣನ ನಗೆಹೊನಲು
ಕಾದು ಕೆಂಪಾದ ಧರೆಯ ಹದಗೊಳಿಸಲು
ಮುತ್ತಿನ ಮಳೆಯನ್ನೆ ಸುರಿಸಿಹನು

Leave a Reply