ದಾರಿ ತಪ್ಪಿದ ಚಿಟ್ಟೆಯ ಬಣ್ಣ ನೀಲಿ..

ಭುವನಾ ಹಿರೇಮಠ

 

ನೀಲಿ ಚಿಟ್ಟೆಯ ಪಾದಧೂಳು

ಹೊಲಿಗೆ ಬಿದ್ದ ಎದೆಗಳಿಗೆ
ಮುಲಾಮು ಅನ್ವೇಷಿಸುತ್ತ
ದಾರಿ ತಪ್ಪಿದ ಚಿಟ್ಟೆಯ ಬಣ್ಣ ನೀಲಿ,
ಒಂದೇ ಎರಡೇ ಹಜಾರು ಬಣ್ಣದ ಹೂಗಳು,
ಎಸೆದ ಕನಸೊಂದು ಅಲ್ಲಿಯೆ
ಆ ಮೊಗ್ಗಿನ ಸುತ್ತ
ಗಿರಕಿ ಹೊಡೆಯುತ್ತಿದೆ.
ಮುಂದೊಂದು ದಿನ
ಮೊಗ್ಗುಕೇಂದ್ರಿತ ವ್ಯವಸ್ಥೆಯ
ಪ್ರಪಂಚದಲ್ಲಿ
ಕನಸಿಗೂ ಒಂದು ಅಸ್ತಿತ್ವ ಸಿಗಬಹುದು
ಚಿಟ್ಟೆಯಂತೆ ಕನಸ ಪಾದವೂ
ಹೂವಧೂಳಿನಲ್ಲಿ ಪವಿತ್ರವಾಗಬಹುದು.
ಹರಿದ ಎದೆಗಳಿಂದ
ಸೋರುತ್ತಿರುವ ಜೀವಗಳಿಗೆ
ಸ್ವರ್ಗದ ಹಾಡು ಕೇಳದಿರಲಿ ತಂದೆ,
ನೀಲಿ ಚಿಟ್ಟೆಯ ಪಾದದ
ರಂಗುರಂಗಿನ ಧೂಳು ಮುಕ್ತಿ ನೀಡಲಿ

ಯಾವ ಮುದುಕನೂ ಗಿಟಾರು ಹಿಡಿಯುವುದಿಲ್ಲ

 

ನಮ್ಮ ಉದ್ಯಾನಗಳಲ್ಲಿ

ಯಾವ ಮುದುಕನೂ ಗಿಟಾರು ಹಿಡಿಯುವುದಿಲ್ಲ,

ಮುಪ್ಪು ತೊಡಿಸಿದ ಬಿಳಿ ಗಡ್ಡ ಮೀಸೆಗಳಲ್ಲಿ ಸಿಮೆಂಟಿನ ಸಿಕ್ಕು,

ಬಣವೆಯ ಹುಲ್ಲು ಗಡ್ಡದ ಮೇಲೆ ತನ್ನ ಅಧಿಪತ್ಯ ಸಾಧಿಸಿದೆ,

ಕೈಕಾಲುಗಳ ನೆರಿಗೆಗಳೆಂದೂ ನಿವೃತ್ತಿಯ ಕನಸ ಕಾಣಲಾರವು,

ಉಸಿರ ನೌಕರಿಯ ಮುಕ್ತಾಯದ  ದಿನದಂದೇ

ಗಾರೆ ಬುಟ್ಟಿಗಳ ತುಂಬ ದುಗುಡ ತುಂಬಿ

ಅವನನ್ನು ಕೆಲಸ ನಿಕಾಲು ಮಾಡಬಹುದೇನೊ,

ಮರುದಿನದಿಂದ ಗೈರು ಒತ್ತುವ ಅನ್ನ

ಆ ದಿನದ ಉಪವಾಸದ ಹಾಜರಿಯಾಗುತ್ತದೆ.

ಖಾಲಿ ಹೊಟ್ಟೆಗಳ ನಾದ

ಮುದುಕಿಯ ಕಿವಿಯ ಕಿವುಡುತನಕ್ಕೂ ಮಾರ್ದನಿಗೊಳ್ಳುತ್ತದೆ.

ಉದ್ಯಾನದ ಮುಂಭಾಗದಲ್ಲಿ ಕವಳೆಕಾಯಿ ಮಾರುತ್ತಾ

ತನ್ನ ಮುದುಕನ ಅಗಲಿಕೆಯ ದುಃಖವನ್ನೇ ಚಟಾಕಿನಲ್ಲಿ ತುಂಬಿ

ಚಿಲ್ಲರೆಗೆ ಅಳೆಯುತ್ತಾಳೆ

ಬೆಂಚಿನ ಮೇಲೆ ಮಗುವೊಂದರ ನಗೆಯ ಗಂಧದಲ್ಲಿ

ಆಕೆಯ ಜೀವ ಬೆರೆತಂತೆ ಕನಸುತ್ತಾಳೆ,

ಮರದ ರೆಂಬೆಯೊಂದರಿಂದ ಹೂವು ಉದುರುತ್ತದೆ

ಹೂವಿನ ಹೆಸರಿಗೂ ಮರಕ್ಕೂ ಬಿಡಿಸಲಾಗದ ಬಂಧವಿದೆ

ಮಗು ಕವಳೆಕಾಯಿಗಾಗಿ ಚಿಲ್ಲರೆ ಎಸೆದ ಸದ್ದಾಗುತ್ತದೆ

ಬಂಧಗಳೆಲ್ಲ ಕಳಚಿಕೊಂಡು ಬಿದ್ದ ಸದ್ದಿಗೂ ಚಿಲ್ಲರೆಯ ಸದ್ದಿಗೂ ಸಾಮ್ಯತೆಯಿದೆ

ಮುದುಕಿಯ ನಿಟ್ಟುಸಿರು

ಮುಗಿಲಿಗೆ ಅಪ್ಪಳಿಸುತ್ತದೆ

3 Responses

  1. ಆನಂದ ಕುಂಚನೂರ says:

    ವಾ! ಸುಂದರ ಕವಿತೆ 🙂

  2. Chidambar Nanavate says:

    Bahala arthagarbhita saalugalu

  3. Shreedevi keremane says:

    ಚಂದದ ಕವಿತೆ

Leave a Reply

%d bloggers like this: