ಹಾಲ್ಮೀಟರ್!

ಹಾಲ್ಮೀಟರ್!

ಬಿ ವಿ ಭಾರತಿ 

ಹಳ್ಳಿ ವಾಸ ಅಂದಕೂಡಲೇ ಪ್ರಕೃತಿ, ಹಸಿರು, ಸಜ್ಜನರು only, ಗಟ್ಟಿಹಾಲು, ಕೆನೆಮೊಸರು, ಮುಗ್ಧತೆ, ನದಿ … ಈ ಥರ ಒಂದು ಫ್ರೇಮ್ ರೆಡಿ ಮಾಡಿ ಚಿತ್ರ ಫಿಕ್ಸ್ ಆಗಿ ಹೋಗಿರುತ್ತದೆ.

ಆದರೆ ವಾಸ್ತವದಲ್ಲಿ ಮೊದಲಿನ ಎರಡನ್ನು ಬಿಟ್ಟರೆ ಉಳಿದವೆಲ್ಲ ಅವರವರ ಅದೃಷ್ಟಕ್ಕೆ ಬಿಟ್ಟಿದ್ದು! ಎಲ್ಲ ಮಹಾನಗರಗಳಲ್ಲಿರುವ ಸಣ್ಣತನ, ಸ್ವಾರ್ಥ, ದ್ರೋಹ, ಸುಳ್ಳು, ಮೋಸ, ಸ್ನೇಹ, ಪ್ರೀತಿ ಹಳ್ಳಿಯಲ್ಲೂ ಇರುತ್ತದೆ. ಹಾಗಾಗಿ ಹಳ್ಳಿ ಎಂದ ಕೂಡಲೇ ಅದನ್ನು ಹೊಗಳಿ, ದೊಡ್ಡ ಊರುಗಳೆಂದರೆ ಪಾಪ ಕೂಪಗಳೇನೋ ಎನ್ನುವಂತೆ ಭ್ರಮಿಸುತ್ತಾರೆ ಪಾಪ.

ಇದಕ್ಕೆ ಪೂರಕವಾಗಿ ನಮ್ಮ ಜಯಮ್ಮನ ಕತೆ ಹೇಳ್ತೀನಿ ಬನ್ನಿ…

ನನ್ನಜ್ಜಿಯ ಮನೆಯಲ್ಲಿ ಹಸು ಕಟ್ಟಿದ್ದರು. ಆ ಆಲದ ಮರದಂಥ ಸಂಸಾರಕ್ಕೆ ದಿನನಿತ್ಯದ ಅವಶ್ಯಕತೆಗೆ ಅಲ್ಲಿಗಲ್ಲಿಗೆ ಸರಿಹೋಗುವಷ್ಟು ಸಾಕಾಗುತ್ತಿತ್ತು. ಅಜ್ಜಿ ತಾನೇ ಪ್ರೀತಿಯಿಂದ ಸಾಕಿ, ಬೆಳೆಸಿ, ಗಟ್ಟಿ ಹಾಲು ಕರೆದು, ಕತ್ತಿಯಲ್ಲಿ ಕುಯ್ಯುವಂಥ ಮೊಸರು ಬಡಿಸಿದ್ದರ ಪರಿಣಾಮವಾಗಿ ಅಮ್ಮನಿಗೆ ಸದಾ ಅದರದ್ದೇ ಕನವರಿಕೆ.

ಸ್ವಭಾವತಃ ತುಂಬ ತಿಂಡಿಪೋತಿಯಾದ ಅಮ್ಮ ಊಟ-ತಿಂಡಿ ಎಲ್ಲದರಲ್ಲೂ ತುಂಬ ಅಚ್ಚುಕಟ್ಟು. ಅವಳೆಂದೂ
ಕಾಟಾಚಾರಕ್ಕೆ ಊಟ ಮಾಡಿದ ನೆನಪೇ ಇಲ್ಲ ನನಗೆ. ಆ ಕಾಲದಲ್ಲಿ ತುಂಬ ಪುಕ್ಕಲಿಯಾಗಿದ್ದ ನಾನು ಅಪ್ಪ ತಡ ರಾತ್ರಿಯಾದರೂ ಮನೆಗೆ ಬಂದಿಲ್ಲ ಅಂತ ಅಂಡು ಸುಟ್ಟ ಬೆಕ್ಕಿನಂತೆ ಓಡಾಡಿ ಚಡಪಡಿಸುತ್ತಿದ್ದರೆ ಅಮ್ಮ ಅನ್ನಕ್ಕೆ ಕೆನೆಮೊಸರು, ಜೊತೆಗಿಷ್ಟು ಹಾಲು, ಉಪ್ಪಿನಕಾಯಿ ಹಾಕಿಕೊಂಡು ಆರಾಮವಾಗಿ ‘ಬರ್ತಾರೆ ಬಾರೇ. ಅದ್ಯಾಕೆ ಹಾಗಾಡ್ತೀಯಾ’ ಅಂತ ನನ್ನನ್ನು
ಬಯ್ಯುತ್ತಾ ಅಚ್ಚುಕಟ್ಟಾಗಿ ಊಟ ಮಾಡುತ್ತಿದ್ದಳು!

ಅಂಥ ನನ್ನಮ್ಮನಿಗೆ ನಾವಿದ್ದ ಹಳ್ಳಿಗಳಲ್ಲಿ ಸಿಗುವ ನೀರು ನೀರು ಹಾಲನ್ನು ಕಂಡು ಸಿಕ್ಕಾಪಟ್ಟೆ ಸಿಟ್ಟು ಬರುತ್ತಿತ್ತು. ಯಾವಾಗಲೂ ಗಟ್ಟಿ ಹಾಲು, ಕೆನೆ ಮೊಸರು ಅಂತ ಹಲುಬುತ್ತಾ ಇರುತ್ತಿದ್ದಳು.

ಆಗೆಲ್ಲ ನಮ್ಮ ಹಳ್ಳಿಯಲ್ಲಿ ಡೈರಿ ಹಾಲು ಅಂತಲೂ ಇರಲಿಲ್ಲ. ನಾವಿದ್ದ ಕಾಲೋನಿಗೆ ಜಯಮ್ಮ ವರ್ತನೆಗೆ ತಂದು ಹಾಕ್ತಿದ್ದ ನೀಈಈಈರು ಹಾಲನ್ನು ನೋಡಿದರೆ ಅವಳಿಗೆ ಸದಾ ಸಿಟ್ಟು.

ಜಯಮ್ಮನಿಗೆ ಪ್ರೀತಿಯಿಂದ ಹೇಳಿದ್ದಾಯಿತು, ಜನ್ಮ ಜಾಲಾಡಿಸಿದ್ದಾಯಿತು … ಏನೇ ಆದರೂ ಜಯಮ್ಮ ತಂದು ಹಾಕುವ ಹಾಲು ಅದೇ ಜೊಳ್ಳುನೀರು. ಅಮ್ಮ ಹೇಳಿ ಹೇಳಿ ದಣಿದಿದ್ದೇ ಬಂತು, ಪರಿಸ್ಥಿತಿ ಸ್ವಲ್ಪವೂ ಸುಧಾರಿಸಲಿಲ್ಲ.

ಒಂದು ದಿನ ಜಯಮ್ಮ ಒಂದು ಮಾಸ್ಟರ್ ಪ್ಲ್ಯಾನ್ ತಯಾರಿಸಿದಳು ಮತ್ತು ಅದರಿಂದ ಅಮ್ಮನಿಗೆ ತವರಿನಲ್ಲಿದ್ದಂಥ ಗಟ್ಟಿ ಹಾಲಿನ ಸುಖ ಮರುಕಳಿಸಿಯೇ ಬಿಡುತ್ತದೆ ಅನ್ನುವ ಆಸೆ ಹುಟ್ಟಿಸಿದಳು! ಅದೇನೆಂದರೆ ಅಮ್ಮ ಅವಳಿಗೆ ಒಂದಿಷ್ಟು ಹಣ ಸಾಲವಾಗಿ ಕೊಡುವುದು, ಆ ದುಡ್ಡಲ್ಲಿ ಅವಳು ಹಸು ಕೊಂಡುಕೊಳ್ಳುವುದು, ದಿನಾ ಮನೆಯ ಹತ್ತಿರ ಹಸು ಹೊಡೆದುಕೊಂಡು
ಬಂದು ಕಣ್ಣೆದುರಿನಲ್ಲೇ ಹಾಲು ಕರೆಯುವುದು, ಅದಕ್ಕೆ ಕೊಡಬೇಕಾದ ಆ ಹಣವನ್ನು ಸಾಲದ ಹಣಕ್ಕೆ ಅಮ್ಮ ವಜಾ ಮಾಡಿಕೊಳ್ಳುವುದು …

ಅಲ್ಲಿಗೆ ಅಮ್ಮನಿಗೆ ಗಟ್ಟಿಹಾಲು ಮತ್ತು ಜಯಮ್ಮನಿಗೆ ಸ್ವಂತಕ್ಕೊಂದು ಹಸು, ಅಲ್ಲಿಗೆ ಸಮಸ್ಯೆ ಪರಿಹಾರ ಅಂತ ಜಯಮ್ಮ ಹೇಳಿದಾಗ ಅಮ್ಮನ ಕಣ್ಣಲ್ಲಿ ನಕ್ಷತ್ರ! ಖುಷಿಯಿಂದ ಕುಣಿದಾಡಿಬಿಟ್ಟಳು.

ನಾವೇ ಆಗ ಕಾಲು ಚಾಚಿದರೆ ಎಲ್ಲಿ ಹಾಸಿಗೆಯಿಂದ ಆಚೆ ಹೋಗಿಬಿಡುತ್ತದೋ ಅನ್ನುವ ಭಯಕ್ಕೆ ಕಾಲು ಮಡಚಿ ಬದುಕುತ್ತಿದ್ದಂಥವರು. ಅಂಥದ್ದರಲ್ಲಿ ಗಟ್ಟಿಹಾಲಿನ ಆಸೆಗೆ ಬಿದ್ದ ಅಮ್ಮ ಅವಳ ಸಾಸಿವೆ ಡಬ್ಬಿಯ ಸೇವಿಂಗ್ಸ್ ಎಲ್ಲ ಹುಡುಕಿ, ಬಳೆದು ಜಯಮ್ಮನ ಕೈಗಿಟ್ಟೇಬಿಟ್ಟಳು.

ಹಸು ವ್ಯಾಪಾರಕ್ಕೆ ಅಂತ ಹೇಳಿ ಆಕೆ ಒಂದೆರಡು ದಿನ ಹಾಲು ಕೊಡುವುದಿಲ್ಲ ಅಂದಾಗ ಅಮ್ಮ ಸ್ವಲ್ಪವೂ ಗೊಣಗದೇ ‘ವಿಜಯಶಾಲಿಯಾಗಿ ಹಿಂತಿರುಗು’ ಅಂತ ಹರಸಿ ಕಳಿಸಿಕೊಟ್ಟಳು ಮತ್ತು ಗಟ್ಟಿ ಹಾಲಿನ ಕನಸು ಕಟ್ಟಲಾರಂಭಿಸಿದಳು.

ಎರಡು ದಿನ ಕಳೆಯಿತು. ಮೂರನೆಯ ದಿನ ಜಯಮ್ಮ”ಅಮ್ಮಾ” ಅಂತ ಕೂಗಿದಾಗ ನಮ್ಮಲ್ಲಿ ವಿದ್ಯುತ್ ಸಂಚಾರ! ಮಾಡುತ್ತಿದ್ದ ಕೆಲಸ ಬಿಟ್ಟು ಹೊರಗೆ ಓಡಿದರೆ ಅಲ್ಲಿ ಹಸು! ಅಯ್ಯೋ ಸಾಕ್ಷಾತ್ ಹಸು ನಿಂತಿತ್ತು ಮನೆಯ ಮುಂದೆ! ಆಹಾ, ಮಿರುಮಿರುಗುವ ಅದರ ಬಾಡಿಯನ್ನು ನೋಡಿ ನೋಡಿ ಹಿಗ್ಗಿದೆವು.

ಅದೆಷ್ಟೋ ಹಾಲು ಕೊಡುತ್ತದೆ ಅಂತ ವರದಿ ಒಪ್ಪಿಸಿದಳು ಜಯಮ್ಮ. ಅಮ್ಮ ಭಕ್ತಿಯಿಂದ ಕೇಳಿಸಿಕೊಂಡಳು. ಎಲ್ಲ ವರದಿ ಆದಮೇಲೆ ಅವತ್ತಿನಿಂದಲೇ ಹಾಲು ಕೊಡುತ್ತೇನೆಂದೂ, ವರ್ತನೆ ಲೆಕ್ಕ ಇಟ್ಟುಕೊಳ್ಳಬೇಕೆಂದೂ ಆಕೆ ಹೇಳಿದಾಗ ಅಮ್ಮ
ಆನಂದಭಾಷ್ಪ ಸುರಿಸುವುದೊಂದು ಬಾಕಿ.

ನಾವೆಲ್ಲ ಹಸುವಿನಿಂದ ಮೂರಡಿ ದೂರದಲ್ಲಿ ಭಕ್ತಿಯಿಂದ ಕುಳಿತೆವು. ಅವಳು ಕೆಚ್ಚಲಿಗೆ ಒಂದಿಷ್ಟು ಎಣ್ಣೆ ಹಚ್ಚಿ ಹಾಲು ಕರೆಯಲು ಶುರು ಮಾಡಿದಳು. ಸ್ಟೀಲ್ ಪಾತ್ರೆಗೆ ಹಾಲು ಬಿದ್ದಾಗಿನ ‘ಚೊಯ್ ಚೊರ್’ ಶಬ್ದ ಸಂಗೀತದ ಹಾಗೆ ಅನ್ನಿಸಿಬಿಟ್ಟಿತು.

ಹತ್ತು ನಿಮಿಷದಲ್ಲಿ ಪಾತ್ರೆ ತುಂಬ ನೊರೆನೊರೆ ಹಾಲು! ಅಮ್ಮನಿಗಂತೂ ಸ್ವರ್ಗವೇ ಇಳಿದ ಹಾಗೆ ಕಾಣಿಸಿತು. ಪಾತ್ರೆ ತಂದು ಅಳೆಸಿಕೊಂಡಳು. ಎಂಥ ಗಟ್ಟಿ ಹಾಲು ಅಂತೀರಿ! ಅವತ್ತು ಕೊಳ್ಳೇಗಾಲದ ಅಜ್ಜಿ ಮನೆಯಲ್ಲಿ ಹೊರತು ಪಡಿಸಿದರೆ ಮತ್ತೆಲ್ಲೂ ಕಂಡಿರದ ರುಚಿರುಚಿ ಕಾಫಿ ಕುಡಿದೆವು.

ಅಮ್ಮನಂತೂ ಅವತ್ತು ಅಪ್ಪನ ಹತ್ತಿರ, ಅಕ್ಕಪಕ್ಕದ ಮನೆಯವರ ಹತ್ತಿರ ಎಲ್ಲರಲ್ಲೂ ಅದೇ ಮಾತು. ರಾತ್ರಿ ಹೆಪ್ಪು ಹಾಕಿ ಮಲಗುವವರೆಗೂ ಅದೇ ಅದೇ ಮಾತು. ಬೆಳಿಗ್ಗೆ ಎದ್ದರೆ ಚಾಕುವಿನಲ್ಲಿ ಕತ್ತರಿಸಬಹುದಾದಂಥ ಗಟ್ಟಿ ಮೊಸರು! ಅಮ್ಮ ಅವತ್ತು
ಕೆನೆ ಹಾಕಿದ ಮೊಸರನ್ನಕ್ಕೆ ಉಪ್ಪಿನಕಾಯಿ ನೆಂಚಿಕೊಂಡು ಚಪ್ಪರಿಸಿ ಹೊಡೆದಳು.

ನಾಲ್ಕಾರು ದಿನ ಕಳೆಯಿತು … ಯಾಕೋ ಕಾಫಿಯ ರುಚಿ ಇದ್ದಕ್ಕಿದ್ದ ಹಾಗೆ ಕಡಿಮೆ ಅನ್ನಿಸಲು ಶುರುವಾಯಿತು ಅಮ್ಮನಿಗೆ. ‘ನಿಮಗೆ ಹಾಗೆ ಅನ್ನಿಸುತ್ತಿಲ್ಲವಾ’ ಅಂತ ಅಪ್ಪನನ್ನು, ನನ್ನನ್ನು ಮತ್ತು ಅಕ್ಕನನ್ನು ಪದೇಪದೇ ಕೇಳಿದಳು. ಅಪ್ಪ ಅದರ ಬಗೆಗೆಲ್ಲ
ತುಂಬ ಗಮನ ಇಲ್ಲದವರು, ಹಾಗಾಗಿ ‘ಏನೋ ಗೊತ್ತಾಗ್ತಿಲ್ಲಪ್ಪ’ ಅಂದರು.

ನಾನು, ಅಕ್ಕ ಯಾತಕ್ಕೂ ಇರಲಿ ಎನ್ನುವಂತೆ ‘ಸ್ವಲ್ಪ ನಂಗೂ ಹಾಗೇ ಅನ್ನಿಸತ್ತೆ’ ಅಂತ ಜಾಣತನದ ಉತ್ತರ ಕೊಟ್ಟೆವು. ‘ಓಹ್! ನೀರು ಹಾಕ್ತಿದಾಳೆ ಅನ್ನಿಸತ್ತೆ. ಮಾಡ್ತೀನಿ ಅವಳಿಗೆ. ಎಲ್ಲರೂ ಮೋಸಗಾರರೇ ಆದರು. ಸ್ವಲ್ಪ ನಿಯತ್ತಿಲ್ಲ’ ಅಂತ ಒಂದಿಷ್ಟು ವಟಗುಟ್ಟಿದಳು.

ಮಾರನೆಯ ದಿನ ಜಯಮ್ಮ ಬಂದಾಗ ಅಮ್ಮ ಶುರು ಮಾಡಿದಳು ‘ಹಾಲು ಗಟ್ಟಿ ಇರಲಿಲ್ಲ’ ಎಂದು. ಜಯಮ್ಮ ಸ್ವಲ್ಪವೂ ವಿಚಲಿತಳಾಗದೇ ಮುಗ್ಧಳಾಗಿ “ಎಲ್ಲೋ ಅಸ ದಾಸ್ತಿ ನೀರ್ಕುಡಿದಿತ್ತೇನೋ ಕನ್ರವ್ವಾ” ಅಂದುಬಿಟ್ಟಳು! ಅಮ್ಮನಿಗೆ ಕಿವಿ ಮೇಲೆ ಸೂರ್ಯಕಾಂತಿ ಇಟ್ಟಂತಾಗಿ, ಸಿಟ್ಟು ಬಂದು “ನೀರು ಕುಡಿದರೆ ಹಾಲು ನೀರಾಗತ್ತಾ! ಸುಮ್ನಿರು ಸಾಕು” ಅಂತ
ಗದರಿಸಿದಳು.

ಜಯಮ್ಮ ಕ್ಯಾರೆ ಅನ್ನದೇ ಸತ್ಯ ಹರಿಶ್ಚಂದ್ರನ ತುಂಡು ಅವಳೇ ಏನೋ ಅನ್ನುವಂತೆ “ಅಯ್ಯಾ ಮತ್ತಿನ್ನೇನು! ನೀರು ಕುಡುದ್ರೆ ಆಲು ನೀರಾಗಾಕಿಲುವ್ರಾ” ಅಂತ authoritative ದನಿಯಲ್ಲಿ ದಬಾಯಿಸಿದಳು. ನಮ್ಮಮ್ಮ ಗಟ್ಟಿ ಹಾಲು ನೋಡಿದ್ದಳೇ ಹೊರತು
ಹಸುವಿನ ಸಾಕುವಿಕೆಯಲ್ಲಿ ಕೈ ಹಾಕಿದವಳಲ್ಲ. ಹಾಗಾಗಿ ಜಯಮ್ಮ ಅಷ್ಟು ಜಬರದಸ್ತಿನಿಂದ ದಬಾಯಿಸಿದಾಗ ಇರಬೋದೇನೋಪ್ಪಾ’ ಅಂತ ಸುಮ್ಮನಾಗಿ ಬಿಟ್ಟಳು.

ಮತ್ತೊಂದು ವಾರ ಕಳೆಯಿತು … ಪರಿಸ್ಥಿತಿ ಮತ್ತಿಷ್ಟು ಬಿಗಡಾಯಿಸಿತು. ಹಾಲು ಮತ್ತಷ್ಟು ನೀರು! ಅಮ್ಮನಿಗೆ ಸಿಟ್ಟು ಏರಿ ಈ ಕಳ್ಳತನವನ್ನು ಪತ್ತೆ ಹಚ್ಚುವ ಕೌಂಟರ್ ಪ್ಲ್ಯಾನ್ ನೀಲಿ ನಕ್ಷೆ ತಯಾರಿಸಿದಳು.

ಅದರಲ್ಲಿ ನಮ್ಮ ಪಾತ್ರ ಹಿರಿದಿತ್ತು ಅನ್ನುವುದು ನಮಗೆ ಗೊತ್ತಾದದ್ದು ಅವತ್ತೊಂದು ಸಂಜೆ ಸ್ಕೂಲಿನಿಂದ ಬಂದ ನಮ್ಮನ್ನು
ಆಟಕ್ಕೆ ಬಿಡದೇ ಮನೆಯಲ್ಲಿ ಕಟ್ಟಿಹಾಕಿದಾಗ! ಅಯ್ಯೋ, ಇದೆಲ್ಲಿಂದ ವಕ್ಕರಿಸಿತು ಈ ಕರ್ಮದ ಕೆಲಸ ಅಂತ ಗಾಬರಿಯಾದೆವು. ಆದರೆ ಆ ಶೆರ್ಲಾಕ್ ಹೋಮ್ಸ್ ಈ ವಾಟ್ಸನ್‌ಗಳ ಡ್ಯೂಟಿ ನಿರ್ಧರಿಸಿ ಆಗಿಹೋಗಿತ್ತು.

ನಾವು ಕಮಕ್ ಕಿಮಕ್ ಎನ್ನುವಂತಿರಲಿಲ್ಲ. ಪಟಪಟನೆ ಯೂನಿಫಾರ್ಮ್ ಬದಲಿಸಿದವರಿಗೆ ಅಮ್ಮ ತಿಂಡಿ ತಟ್ಟೆ ಎದುರು ಹಿಡಿದಳು. ತಿಂದು ಮುಗಿವುದರಲ್ಲಿ ಜಯಮ್ಮನವರು ಬಿಜಯಂಗೈದರು. ನಾವು ಎಚ್ಚೆತ್ತು ಓಡಿದೆವು. ಜಯಮ್ಮನ ಎದುರು ಕುಕ್ಕರುಗಾಲಲ್ಲಿ ಕುಳಿತು ಹಾಲು ಕರೆಯುವ ಮೊದಲು ಪಾತ್ರೆಯಲ್ಲಿ ಮೊದಲೇ ನೀರು ಇಟ್ಟಿಲ್ಲ ಎಂದು confirm ಮಾಡಿಕೊಳ್ಳೋದು ಮತ್ತು ಹಾಲು ಕರೆಯುವಾಗ ಮತ್ತು ಕರೆದಾದ ಮೇಲೆ ನೀರು ಬೆರೆಸದ ಹಾಗೆ ಕಣ್ಣಿಡುವುದು ನಮ್ಮ ಪಾಲಿನ ಕೆಲಸ.

ದಿನವೂ ಬಂದು ಸುಖವಾಗಿ ಕಲ್ಲು-ಮಣ್ಣು, ಅಮಟೆ, ಐಸ್ ಪೈಸ್ ಅಂತ ಆಡಿ ಕುಪ್ಪಳಿಸುತ್ತಿದ್ದ ನಮಗೀಗ ಹಸುವಿನ ಪಕ್ಕ ಕುಳಿತು ಇದನ್ನೆಲ್ಲ ಗಮನಿಸುವ ಕೆಲಸ!

ಶಪಿಸುತ್ತಾ ಅವಳ ಪಕ್ಕ ಕುಳಿತೆವು.  ಅಮ್ಮ ಹೇಳಿದಂತೆ ಮೈಯೆಲ್ಲ ಕಣ್ಣಾಗಿ ಪಾತ್ರೆ ಬಗ್ಗಿಸಿ ನೋಡಿದೆವು. ನೀರು ಇರಲಿಲ್ಲ, ಆ ನಂತರ ಹಾಲು ಕರೆದು ಮುಗಿಯಿತು. ಜಯಮ್ಮ ‘ಅವ್ವಾ’ ಅಂತ ಕರೆದು ಅಮ್ಮ ಆಚೆ ಬರುವವರೆಗೂ ನಾನು ರೆಪ್ಪೆ ಪಿಳುಕಿಸದೇ ಅವಳನ್ನೇ ಗಮನಿಸಿದೆ. ಪಾತ್ರೆಗೆ ಅಳೆದು ಹಾಕುವಾಗ ನೋಡಿದರೆ ಎಂದಿನಂತೆ ನೀರುಜೊಳ್ಳು ಹಾಲು!‌

ನಾವು ಕಣ್ಣಲ್ಲಿ ಕಣ್ಣಿಟ್ಟು ಕಾದದ್ದೂ ಪ್ರಯೋಜನವಿಲ್ಲ! ಅವರಿಬ್ಬರ ವಾಗ್ವಾದ ಮತ್ತೆ ಶುರುವಾಯಿತು. ಜಯಮ್ಮನ ದನಿಯಲ್ಲಿ ಎಂದಿಗಿಂತ ಹೆಚ್ಚು ಪ್ರಾಮಾಣಿಕತೆಯ ಅಹಂಕಾರವಿತ್ತು. ನಾವೇ ಕುಳಿತು ನೋಡಿದ್ದೆವಲ್ಲ, ಹಾಗಾಗಿ ತಾನು ಎಲ್ಲ ಆರೋಪಗಳಿಂದ ಮುಕ್ತಳು ಅನ್ನುವ ಹಮ್ಮಿನಲ್ಲಿ ಅವಳು ಉತ್ತರ ಕೊಟ್ಟಾಗ ಅಮ್ಮನಾದರೂ ಮತ್ತೇನು ಮಾಡಲು ಸಾಧ್ಯ!
ತೆಪ್ಪಗಾದಳು.

ಆದರೆ ಒಳಗೆ ಬಂದವಳು ‘ಅದೇನು ಎಲ್ಲಿ ನೋಡ್ತಾ ಕೂತಿದ್ಯೋ ಏನೋ. ಮೊದಲೇ ಸರಿ. ಆಟದ ಕಡೆ ಗಮನ ಹೋಗಿ ಅಲ್ಲಿಲ್ಲಿ ನೋಡುವಾಗ ನೀರು ಬೆರೆಸಿಟ್ಟಿದ್ದಾಳೆ ನೋಡು. ಹೇಳಿದ ಒಂದು ಕೆಲಸವನ್ನಾದರೂ ನೆಟ್ಟಗೆ ಮಾಡುವವರಾ ನೀವು’ ಅಂತ ನಮಗೆ ಬಯ್ಯಲು ಶುರು ಮಾಡಿದಳು. ನಮಗೆ ಸಿಟ್ಟು ಬರಲು ಶುರುವಾಯ್ತು. ಆಟ ಬಿಟ್ಟು ಕೂತಿದ್ದೂ ಅಲ್ಲದೇ ಇದು ಬೇರೆ ಅನ್ನಿಸಿಕೊಳ್ಳಬೇಕಾ ಅಂತ ಒಂದೇ ಕಿರಿಕಿರಿ.

ನಾಲ್ಕೈದು ದಿನ ಕಳೆದರೂ ಈ ನೀರುಹಾಲಿನ ಮಿಸ್ಟರಿ ಏನೆಂದು ತಿಳಿದಲೇ ಇಲ್ಲ … ಜೊತೆಗೆ ನಮ್ಮ ಬೇಜವಾಬ್ದಾರಿತನಕ್ಕೆ ಅಮ್ಮನ ಸಿಟ್ಟು ಕೂಡಾ. ಇದೇನು ಗೋಳು ಅಂತ ಅಮ್ಮನ ಕಣ್ತಪ್ಪಿಸಿ ಆಟಕ್ಕೆ ಓಡಲು ಶುರು ಮಾಡಿದೆವು. ಯಾವಾಗ ನಾವು ಸೋಲುಂಡೆವೋ ಆಗ ಜಯಮ್ಮ ಅದ್ಭುತ ಸ್ಕ್ರಿಪ್ಟ್ ರೈಟರ್ ಆಗಿ ಹೋದಳು!

ಒಂದೊಂದು ದಿನ ಒಂದೊಂದು ಕಥೆ. ಅದೇನೋ ತಿಂದರೆ ಹಾಲು ನೀರಾಗುತ್ತದೆ ಅನ್ನುವುದರಿಂದ ಹಿಡಿದು, ಸಿಕ್ಕಸಿಕ್ಕ ಹಸಿ
ಸುಳ್ಳುಗಳನ್ನೆಲ್ಲ ಪ್ರಯೋಗಿಸಿ ಬಿಟ್ಟಳು. ಅಮ್ಮ ಅದು ಸುಳ್ಳು ಅಂತ ಹೇಗೆ ಪ್ರೂವ್ ಮಾಡುತ್ತಾಳೆ ಪಾಪ. ಬರಬರುತ್ತಾ ಹಾಲು ಮನೆ ಮುಂದೆ ಕರೆಯುವ ಮೊದಲು, ಮನೆಯಿಂದ ತರುತ್ತಿದ್ದಳಲ್ಲ, ಅಷ್ಟೇ ನೀರಾಗಿ ಹೋಯ್ತು. ಅಮ್ಮನಿಗೆ ಸಂಪೂರ್ಣ ಸೋಲು. ದುಡ್ಡು ಕೊಟ್ಟು ಸಿಕ್ಕಿ ಕೊಂಡಿರುವುದರಿಂದ ಈಗ ಬಿಡಿಸುವ ಹಾಗಿಲ್ಲ, ಬೇರೆಯವರ ಹತ್ತಿರ ತಗೊಳ್ತೀನಿ ಅಂತ ಬೆದರಿಸುವ ಹಾಗಿಲ್ಲ …

ಅವಳಿಗೆ ತಲೆ ಕೆಟ್ಟು ಹೋಗಿ ಸಿಕ್ಕಸಿಕ್ಕವರ ಹತ್ತಿರವೆಲ್ಲ ಹಾಲಿನ ಪುರಾಣ ಹೇಳಲು ಶುರುವಿಟ್ಟುಕೊಂಡಳು. ಬರಬರುತ್ತ ಅದೇ ಒಂದು ಅಬ್ಸೆಷನ್ ಆಗಿಹೋಯಿತು ಅವಳಿಗೆ! ಹೀಗೆ ಹಾಡಿದ್ದೇ ಹಾಡಿ ತನ್ನ ಮನಸ್ಸಿನ ನೆಮ್ಮದಿಯನ್ನೂ ಕೆಡಿಸಿಕೊಂಡು, ನಮ್ಮ ಶಾಂತಿಯನ್ನೂ ಹಾಳು ಮಾಡುತ್ತಿರುವಾಗಲೇ ಯಾರೋ ಹಾಲ್ಮೀಟರ್ ಬಗ್ಗೆ ಹೇಳಿದ್ದು! ಅದರಿಂದ ಹಾಲಿನಲ್ಲಿ ನೀರಿನ ಅಂಶ ಎಷ್ಟಿದೆ ಅಂತ ಪತ್ತೆ ಹಚ್ಚಬಹುದು ಅಂತ ಅವರು ಹೇಳಿದ ಕೂಡಲೇ ಅಮ್ಮ ಆನಂದತುಂದಿಲಳಾಗಿ ನಮ್ಮೂರಿನ ಸರಕಾರಿ
ಬಸ್ಸು ಹತ್ತಿ ಮೈಸೂರಿಗೆ ಹೊರಟು, ಇದ್ದ ಬದ್ದ ಅಂಗಡಿಯೆಲ್ಲ ತಡಕಾಡಿ ಒಂದು ಹಾಲ್ಮೀಟರ್ ತಂದೇ ಬಿಟ್ಟಳು!

ನಾವು ಅಮ್ಮ ಏನೋ ದೊಡ್ಡ ಮೆಷಿನ್ ತರುತ್ತಾಳೇನೋ ಅಂತ ಕಾದರೆ, ಒಂದು ಟೆಸ್ಟ್ ಟ್ಯೂಬ್ ಥರದ ಸಣ್ಣ ಉಪಕರಣ ತಂದಿದ್ದು ನೋಡಿ ಸ್ವಲ್ಪ ನಿರಾಸೆಯಾಯಿತು. ‘ಏ! ನಾವು ಅಷ್ಟೆಲ್ಲ ನೋಡಿದರೂ ಗೊತ್ತಾಗದ್ದನ್ನು ಈ ಪುಟಗೋಸಿ ಹಾಲ್ಮೀಟರ್ ಕಂಡು ಹಿಡಿಯತ್ತಾ’ ಅಂತ ಅನುಮಾನ ಬಂದುಬಿಟ್ಟಿತು. ನಮಗೆ ಏನೇ ಅನುಮಾನವಿರಲಿ, ಅಮ್ಮನಿಗೆ ಮಾತ್ರ ಅದರ ಬಗ್ಗೆ ಸಂಪೂರ್ಣ ಭರವಸೆ ಉಂಟಾಗಿತ್ತು. ‘ಜಯಮ್ಮಾ! ಇರು ಇನ್ನು ನಿನಗೆ ಮಾರಿಹಬ್ಬ’ ಅಂತ ಗಹಗಹಿಸಿ ನಕ್ಕಳು.

ಮಾರನೆಯ ದಿನ ಜಯಮ್ಮ ಎಂದಿನಂತೆ ಬಂದಳು. ಅವಳು ಹಾಲು ಕರೆಯುವವರೆಗೆ ಏನೂ ಸುಳಿವು ಬಿಟ್ಟುಕೊಡದೇ ಸುಮ್ಮನಿದ್ದವಳು, ಆಮೇಲೆ ಕ್ಲೈಮ್ಯಾಕ್ಸ್ ಸೀನಿನಂತೆ ಇದ್ದಕ್ಕಿದ್ದಂತೆ ಹಾಲ್ಮೀಟರ್ ತಂದಾಗ ಜಯಮ್ಮ ‘ಇದ್ಯಾವ ಹೊಸ ವರಸೆ!’ ಅನ್ನುವ ಹಾಗೆ ನೋಡುತ್ತಾ ನಿಂತಳು.

ಅವಳು ಸ್ಥಮ್ಭೀಭೂತಳಾಗುತ್ತಾಳೆ ಅಂತ ಅಮ್ಮ ಎಣಿಸಿದ್ದರೆ ಜಯಮ್ಮ ಅದಕ್ಕೆ ಕ್ಯಾರೆ ಅನ್ನದೇ ಎಂದಿನ ನಿರ್ಲಕ್ಷ್ಯದ ಮುಖದಲ್ಲಿ ಆರಾಮವಾಗಿ ಕುಳಿತುಕೊಂಡಳು. ಅಮ್ಮ ಹಾಲ್ಮೀಟರನ್ನು ಹಾಲಿನೊಳಗಿಟ್ಟು ನೋಡ ನೋಡುತ್ತಿದ್ದಂತೆ ಆ ಹಾಲಿನಲ್ಲಿ ಅದೆಷ್ಟೋ ನೀರಿನಂಶ ಇದೆ ಅಂತ ತೋರಿಸಿಯೇ ಬಿಟ್ಟಿತು!

ಅಮ್ಮನಿಗೆ ಯುದ್ಧದಲ್ಲಿ ಗೆದ್ದ ಸಂಭ್ರಮ! ಕಳ್ಳಿಯನ್ನು ಹಿಡಿದ ಗತ್ತಿನಲ್ಲಿ ‘ನೋಡು! ನೋಡು! ಅವತ್ತಿನಿಂದಾ ಹೇಳಿದರೆ ಇಲ್ಲ ಅಂತ ಸಾಧಿಸ್ತಿದ್ದಿ. ಈಗ ಗೊತ್ತಾಯ್ತಾ? ಎಂಥಾ ಮೋಸಗಾರ್ತಿ ನೀನು. ಏನೋ ಕಷ್ಟ ಅಂತ ಸಾಲ ಕೊಟ್ಟಿದ್ದಕ್ಕೆ ಸರಿಯಾದ ಪಾಠ ಕಲಿಸಿದೆ ಬಿಡು …’ ಅಂತ ಶುರು ಮಾಡುವುದರಲ್ಲೇ ಜಯಮ್ಮ ನಿಜಾಯಿತಿಯ ದನಿಯಲ್ಲಿ ‘ಅಯ್ಯ ತಗಳಿ! ನಿಮ್ಗೆ ಮನುಷ್ರುಗಿಂತ ಇದ್ರ ಮ್ಯಾಗೇನೇ ಜಾಸ್ತಿ ನಂಬ್ಕೆ ಅಲುವ್ರಾ. ಸುಮ್ಸುಮ್ಕೆ ಅನ್ಬಾರ್ದು. ನಾಳೀಕೆ ನೀವೇ ಬಂದು ಕುಂತ್ಕಳಿ ಆಲು ಕರೀವಾಗ’ ಅಂತ ತಿರುಗಿ ಬಿದ್ದಳು.

ಅಮ್ಮ ಅದೂ ಒಂದು ಆಗಿಹೋಗಲಿ ಎನ್ನುವಂತೆ ಒಂದಿಷ್ಟು ದಿನ ಜಯಮ್ಮನ ಪಕ್ಕ ಕುಳಿತು ಬಿಫೋರ್ ಮತ್ತು ಆಫ್ಟರ್ ಪಾತ್ರೆ ನೋಡೇ ನೋಡಿದಳು … ಅದೇ ರಿಸಲ್ಟ್! ಪಾತ್ರೆಯಲ್ಲಿ ನೀರು ಇರ್ತಿರಲಿಲ್ಲ. ಆದರೆ ಹಾಲು ಮಾತ್ರ ನೀರು! ಕೊನೆಗೆ ಅಮ್ಮ ಸೋಲೊಪ್ಪಿಕೊಂಡು ‘ದುಡ್ಡು ಎಲ್ಲೋ ದಾನ ಕೊಟ್ಟೆ ಅಂದ್ಕೊಳ್ತೀನಿ. ನೀನೂ ಬೇಡ, ನಿನ್ನ ಹಸುವಿನ ಹಾಲಿನ
ಸಹವಾಸವೂ ಬೇಡ’ ಅಂತ ಸಿಡಿದೆದ್ದಳು.

ಆಗಲೂ ಯಾವ ಉದ್ವೇಗಕ್ಕೂ ಒಳಗಾಗದವಳು ಜಯಮ್ಮ ಮಾತ್ರ! ‘ಅಯಾ! ನಮಗ್ಯಾಕೆ ನಿಮ್ ದುಡ್ಡು ಕನವ್ವಾ. ಮೈಮುರ್ದು ದುಡ್ದಿದ್ದೇ ನಮ್ಗೆ ಉಳ್ಯಾಕಿಲ್ಲ … ಇನ್ನು ಮೋಸ ಮಾಡಿದ್ರೆ ಉಳೀತದಾ’ ಅಂತೆಲ್ಲ ದೇವರ ಮೇಲೆ ಆಣೆ ಪ್ರಮಾಣ ಎಲ್ಲ ಆಯಿತು.

ಅದಾದ ಮೇಲೂ ಒಂದಿಷ್ಟು ದಿನ ಅದೇ ಸರ್ಕಸ್ ಮಾಡಿ ಮಾಡಿ ಸುಸ್ತಾದ ಅಮ್ಮ, ಬೇಸತ್ತು ಕೊನೆಗೆ ಅವಳನ್ನು ಬಿಡಿಸಿ ಮತ್ತೆ ಯಾರದ್ದೋ ಹತ್ತಿರ ಹಾಲು ಕೊಳ್ಳಲು ಶುರುಮಾಡಿದಳು … ಜಯಮ್ಮನ ನೀರು ಹಾಲಿನ ಬದಲು ಈಗ ಬಸಮ್ಮನ ನೀರು ಹಾಲು ಅಷ್ಟೇ! ಆದರೆ ಅಮ್ಮನಿಗೆ ಸಾಲ ಕೊಟ್ಟಿರಲಿಲ್ಲವಾಗಿ ಅದು ಜಯಮ್ಮನ ಮೋಸಕ್ಕಿಂತ ಕಡಿಮೆ ಮೋಸವಾಗಿ ಕಂಡು
ಸಮಾಧಾನವಾಯಿತು. ಮತ್ತೆ ಹಾಲ್ಮೀಟರ್ ತಂಟೆಗೆ ಹೋಗಲಿಲ್ಲ …

ಇದೆಲ್ಲ ಹಳೆ ಕಥೆ ಯಾಕೆ ನೆನಪಾಯಿತು ಗೊತ್ತೇ?

ಇತ್ತೀಚೆಗೆ ನಾನಾ ಕಾರಣಗಳಿಗೆ ಡಾಕ್ಟರ್ ಅರ್ಜೆಂಟಾಗಿ ತೂಕ ಇಳಿಸಿ ಅಂತ ವಾರ್ನಿಂಗ್ ಕೊಟ್ಟು ನನ್ನನ್ನು ಡಯೆಟಿಷಿಯನ್ ಹತ್ತಿರ ದಬ್ಬಿದರು. ಆಕೆ ನೂರೆಂಟು ಅದು ತಿನ್ನಬೇಡಿ, ಇದು ಮುಟ್ಟಲೇ ಬೇಡಿ ಅಂತ ಲಿಸ್ಟ್ ಕೊಡುವಾಗ ನಂದಿನಿ ನೀಲಿ ಹಾಲಿನ ಪ್ಯಾಕೆಟ್‌ನಲ್ಲಿ 3% ಕೊಬ್ಬು ಇರುತ್ತೆ, ಅದನ್ನು ಬಿಟ್ಟು ನಂದಿನಿ ಸ್ಲಿಮ್ ಮಿಲ್ಕ್‌ನಲ್ಲಿ 0.5% ಕೊಬ್ಬು ಅಷ್ಟೇ. ಅದನ್ನೇ ಉಪಯೋಗಿಸಿ ಅಂದರು. ಅದೂ ಒಂದು ಆಗಿಹೋಗಲಿ ಅಂತ ಕೊಳ್ಳಲು ಹೋದಾಗ ರೇಟ್ ನೋಡಿದರೆ ಕೊಬ್ಬು ಕಡಿಮೆ ಇರೋ ಹಾಲಿಗೆ 42 ರೂಪಾಯಿ, ಕೊಬ್ಬು ಜಾಸ್ತಿ ಇರೋದಕ್ಕೆ ಲೀಟರಿಗೆ 34 ರೂಪಾಯಿ!

‘ನೀರು ಹಾಲಿಗೆ ಕಡಿಮೆ ರೇಟ್ ಇರಬೇಕಲ್ವಾ?! ಇದೇನ್ರೀ ಅದಕ್ಕೇ ಜಾಸ್ತಿ ರೇಟಾ!’ ಅಂತ ಕಣ್ಣು ಕಣ್ಣು ಬಿಟ್ಟೆ. ಅವನು ನನ್ನನ್ನು ಕನಿಕರದಿಂದ ನೋಡಿ ‘ಅದು ಹೆಲ್ತಿ ಅಲ್ವಾ?’ ಅಂದ! ಬದುಕಿನಲ್ಲಿ ಬದಲಾಗುವ equationಗಳು ನನಗೆ ಅದು ಯಾವಾಗ ಅರ್ಥವಾಗುತ್ತದೋ ಅಂದುಕೊಳ್ಳುತ್ತಾ 42 ರೂಪಾಯಿ ತೆತ್ತು ತಂದೆ.

ನೀರುಜೊಳ್ಳನ್ನು ಪಾತ್ರೆಗೆ ಬಗ್ಗಿಸುವಾಗ ಅಂದುಕೊಂಡೆ – ಅಮ್ಮನ ಹಾಲ್ಮೀಟರ್ ಏನಾಯಿತೋ… ಇದ್ದರೆ ಕೊಡು ಅಂತ ಕೇಳಬೇಕು, ಹಾಲಿನ ಅಂಶ ಹೆಚ್ಚಿಲ್ಲ ತಾನೇ ಅಂತ ಪರೀಕ್ಷೆ ಮಾಡಲು….!

17 Responses

 1. Anand says:

  This remains as mystery to me too.

 2. S.P.Vijaya lakshmi says:

  ತುಂಬಾ ಚೆನ್ನಾಗಿದೆ ಬರಹ ಭಾರತಿ…ನಾನೊಂದು ಕತೆ ” ಗಂಗೆ ಬಾರೆ ಗೌರಿ ಬಾರೆ” ಕತೆ ಬರೆದಿದ್ದೆ. ..ನನ್ನಮ್ಮ ಮನೆಯ ಹಾಲಿನ ಕೊರತೆ ನೀಗಿಸಲು ಹೀಗೇ ಕಷ್ಟಪಟ್ಟು ಹಸು ಖರೀದಿಸಿ, ಅದು ಮುಂದೆ ಗಬ್ಬವಾಗದ, ಹಾಲು ಕೊಡದ ಗೊಡ್ಡು ಎನ್ನುವ ಮೋಸಕ್ಕೆ ಒಳಗಾದ ನಿಜವನ್ನು ಕತೆಯಾಗಿಸಿದ್ದು ನೆನಪಾಯ್ತು..
  ನಿಮ್ಮ ಬರಹ ಯಾವಾಗಲೂ ಚಂದ…

  • ಭಾರತಿ ಬಿ ವಿ says:

   ಥ್ಯಾಂಕ್ ಯೂ ವಿಜಯಾ ನಿಮ್ಮ ಪ್ರತಿಕ್ರಿಯೆಗೆ

 3. Kusumapatel says:

  ನಿಮ್ಮ ಬರಹ ನನ್ನ ಬಾಲ್ಯದ ಕಾಲೋನಿ ದಿನ ಗಳನ್ನು ನೆನಪಿಸಿತು. ಹಾಲ್ಮೀಟರ್ ಒಂದನ್ನು ಬಿಟ್ಟು, ಬೇರೆ ಎಲ್ಲಾ ಸೇಮ್ ಟು ಸೇಮ್.

  • ಭಾರತಿ ಬಿ ವಿ says:

   ಥ್ಯಾಂಕ್ ಯೂ ಕುಸುಮಾ
   ನಿಮ್ಮದ್ಯಾವ ಕಾಲೋನಿ?

 4. ಅಗದೀ ಛಂದ ಬರದೀರಿ. ವಿಜಾಪುರದಲ್ಲಿ ನಾವೂ ಇದೇ ತರದ ಗಟ್ಟಿ ಹಾಲಿನ ಆಶಾಕ್ಕ ಬಿದ್ದು ಒಬ್ಬ ಗವಳಿನ್ನ ಹಚ್ಚಿದ್ವಿ. ಅಂವಾ ಬಗಲ ಸಂದೀಯೊಳಗ ನೀರಿನ ಬಾಟಲ್ ಇಟ್ಟುಕೊಂಡಿರತಿದ್ದಾ… ಆ ನೀರ ನಮ್ಮ ಕಣ್ಣು ತಪ್ಪಿಸಿ ಬೆರಸ್ತಿದ್ದಾ. ನಾ ಬ್ಯಾಸತ್ತು ಕಡೀಕ ಹೇಳಿದೆ, “ಶಂಕ್ರಪ್ಪಾ, ನೀ ಆ ಬಾಟಲೀ ಬಗಲಾಗ ಇಟ್ಕೊಂಡು ಆ ನೀರ ಹಾಲಿಗೆ ಹಾಕಬ್ಯಾಡ ಮಾರಾಯಾ… ನೀರ ಹಾಕಾಕ ನಾ ಮನ್ಯಾಗಿನ ನೀರ ಕೊಡತೇನೀ ಅಂತ!!!☺☺☺

 5. Lalitha siddabasavayya says:

  ಭಾರತಿ , ಇನ್ನೂ ನಗ್ತಾನೇ ಇದೀನಿ , ಓದಿ ಒಂದು ದಿನ ಆದರೂ ,,,,:):):):):

  ಹಳ್ಳಿಗರ ಬಗ್ಗೆ ನೀವು ಬರೆದ ಮಾತು ನೂರಕ್ಕೆ ನೂರು ನಿಜ. ಕೆಲವು ಸಿನಿಮೀಯ ಕಲ್ಪನೆಗಳನ್ನು ಅದಾರು ಅದಾವ ಗಳಿಗೆಯಲ್ಲಿ ಸೃಷ್ಟಿಸಿ ಬಯಲಿಗೆ ಬಿಡುತ್ತಾರೋ ಅವು ಚಿರಂಜೀವಿಗಳಾಗಿ ನಿಂತಿರುತ್ತವೆ. ಈ ಹಳ್ಳಿಗರೆಲ್ಲ ಸಜ್ಜನರು ಅನ್ನುವುದು , ಸಾಹಿತಿಗಳೆಲ್ಲ 24×7 ಘನಗಂಭೀರರು ಅನ್ನುವುದು ಇವೆಲ್ಲ ಅದು ಹೆಂಗೆ ಚಾಲ್ತಿಗೆ ಬಂದವೋ ,,,, ಒಂದೊಂದು ಸಲ ಈ ಚಾಲ್ತಿಗಳ ಅಚ್ಚಿಗೆ ನಮ್ಮನ್ನು ನಾವೇ ಕಾಯಿಸಿಕೊಂಡು ಎರಕ ಹುಯ್ಯಿಕೊಳ್ಳಬೇಕಾಗುತ್ತೆ ನೋಡಿ ,,,

  • ಭಾರತಿ ಬಿ ವಿ says:

   ಲಲಿತಾ ಮೇಡಂ ನಿಮ್ಮಿಂದ ಈ ಮಾತು ಬಂದಿದ್ದಕ್ಕೆ ಗಗನವು ಎಲ್ಲೋ ಭೂಮಿಯು ಎಲ್ಲೋ …!

 6. Vivekananda Kamath says:

  What is the mystery of that waterymilk? Nice write up.

  • ಭಾರತಿ ಬಿ ವಿ says:

   ಕೊನೆಗೂ ಗೊತ್ತಾಗ್ಲಿಲ್ಲ ಸರ್ 🙂

 7. ಭಾರತಿ ಬಿ ವಿ says:

  ಥ್ಯಾಂಕ್ ಯೂ ಅವಧಿ
  ಥ್ಯಾಂಕ್ಸ್ ಜಿ ಎನ್ ಮೋಹನ್ ಸರ್

 8. nutana doshetty says:

  ಭಾರತಿ,
  ನಮ್ಮ ಮನೆಗೆ ಮೊದಲು ಹಾಲು ಹಾಕುತ್ತಿದ್ದವನು — ಒಂದು ದಿನ .. ಯಾಕೆ ಲೇಟಾಯ್ತು ಬರೋದಕ್ಕೆ ಅಂತ ಕೇಳಿದ್ದಕ್ಕೆ “ ಕರೆಂಟು ಹೋಗಿತ್ತು. ನೀರಿರಲಿಲ್ಲ. ಪಂಪ್ ಆನ್ ಮಾಡೋಕೆ ಆಗ್ಲಿಲ್ಲ ಅಂದಿದ್ದ.

  ಚೆನ್ನಾಗಿದೆ.

  nutana doshetty

 9. Prabha Adigal says:

  ಎಷ್ಟು ಚಂದದ ಸುರಳೀತವಾಗಿ ಓದಿಸಿಕೊಂಡು ಹೋಗುವ ಬರಹ

Leave a Reply

%d bloggers like this: