ಇವರು ಸುಮಿತ್ರಾ ಮೇಡಂ..

ರೇಣುಕಾ ರಮಾನಂದ

“ಅಮ್ಮ ಸಣ್ಣಸಲಕಿನಿಂದ ಹಣೆದಿದ್ದು,ಗಟ್ಟಿಯಾಗಿದೆ,ನಾನ್ ಸತ್ರೂ ಬುಟ್ಟಿ ನನ್ನ ನೆನಪು ಮಾಡ್ತದೆ” –

 

ಸುಮಿತ್ರಾ ಮೇಡಂ ಅವರ ‘ಗದ್ದೆಯಂಚಿನ ದಾರಿ’ ಪುಸ್ತಕದಲ್ಲಿ ಬಿದಿರ ಬುಟ್ಟಿ ಮಾರಲು ಬಂದ ಕೊರಗರ ಸೇಸಿ ಹೇಳುವ ಮಾತು ಇದು

ಯಾಕೋ ಇದನ್ನೋದುವಾಗ ನನ್ನ ತವರಿನ ಅಟ್ಟದ ಮೇಲಿನ ನೂರು ವರ್ಷ ಹಿಂದಿನ ಬಿದಿರ ಬುಟ್ಟಿ, ಹೆಡಿಗೆ, ಭತ್ತ ಕುದಿಸಿದ್ದನ್ನು ತೋಡಲು ಅವ್ವ ಬಳಸುತ್ತಿದ್ದ ಮೂರು ಮೂಲೆಯ ಮೊರ, ಬಿಸಿ ಬಿಸಿ ಕೊಟ್ಟೆರೊಟ್ಟಿ ತೆಗೆದಿಡಲು ಬಳಸುತ್ತಿದ್ದ ನಾಲ್ಕು ಮೂಲೆಯ ‘ಹಚ್ಚಿಗೆ’ ಎಲ್ಲ ಒಟ್ಟೊಟ್ಟಿಗೆ ನೆನಪಾಗಿಬಿಟ್ಟವು.

ಮೊನ್ನೆಯಷ್ಟೇ ಅಮ್ಮನ ಮನೆಯ ಬೀಗ ತೆರೆದು ಅಟ್ಟದ ಮೇಲಿನ ಇವೆಲ್ಲವನ್ನೂ ಒಮ್ಮೆ ಒರಲೆ ಹತ್ತಿದೆಯಾ ನೋಡಿ ಸರಿಯಾಗಿಟ್ಟು ಸುತ್ತಲೂ ಒಂದಿಷ್ಟು ಇರುವೆ ಪುಡಿ ಚಲ್ಲಿ ಬಂದಿದ್ದೆ.. ಬಂದು ನನ್ನೊಡನೆಯೇ ಇರುವ ಅಮ್ಮನಿಗೆ ಅವಳು ಗಂಡನಮನೆಗೂ ತವರಿಗೂ ಓಡಾಡುವಾಗ ಒಂದೆರಡು ಅರಿವೆ ಚೂರು, ಸೀರೆ, ಕೊಬ್ಬರಿ ಎಣ್ಣೆ ಬಾಟ್ಲಿ, ಹಣೆಗೆ ಹಚ್ಚುವ ಮೇಣ, ಹುಡಿ ಕುಂಕುಮ, ಲಾವಂಚದ ಬೇರು ಎಲ್ಲ ಇಟ್ಟುಕೊಂಡು ಸೊಂಟದ ಮೇಲೆ ಹೊತ್ತು ತಿರುಗುವ ಬೆತ್ತದ ಬುಟ್ಟಿ ಕೂಡ ಇನ್ನೂ ಗಟ್ಟಿಮುಟ್ಟಾಗಿ ಚಂದಗೆ ಇಟ್ಟಲ್ಲಿಯೇ ಇರುವ ಬಗ್ಗೆ ಕೂಡ ಹೇಳಿದ್ದೆ.

ಅವ್ವ ನಕ್ಕು ಅದರಲ್ಲಿ ಬಹುಪಾಲು ನನ್ನವ್ವ ನಂಗೆ ಕೊಟ್ಟದ್ದು.. ಇದ್ರೆ ಏನ್ಬಂತು ಯಾವುದನ್ನೂ ಬಳಸೋದೇ ಇಲ್ವಲ್ಲ ಈಗ.. ಹಿಂದಿನವರ ಸಾಮಾನೇ ಹಂಗೆ ಮಗಾ ಎಂದಿದ್ದಳು..

ಈಗ ಸುಮಿತ್ರಾ ಮೇಡಂ ಅವರ ಪುಸ್ತಕ ಎದುರಿಗಿಟ್ಟುಕೊಂಡು ಒಂದೊಂದಾಗಿ ಪ್ರಬಂಧಗಳನ್ನು ಓದ್ತಾ ಹೋಗೋದಾ ಅಥವ ಹೀಗೆ ಸಾಲು ಸಾಲಿಗೂ ಸಿಗುವ ನನ್ನದೇ ಬಾಲ್ಯದ ನೆನಪುಗಳೇನಾ ಇವು ಅಂತ ನೆನಪಿಸಿ ನೆನಪಿಸಿ ಹನಿಗಣ್ಣಾಗೋದಾ ಅಂತ ಓದಿದ ಸಾಲನ್ನೇ ಇನ್ನೊಮ್ಮೆ ಓದುತ್ತೋದುತ್ತ ಮತ್ತೆ ಮತ್ತೆ ಹಿಂದಕ್ಕೋಡ್ತಿದ್ದೇನೆ.

ಮನೆ ಕೊಟ್ಟಿಗೆ ಗದ್ದೆ ಕಬ್ಬಿನ ಗದ್ದೆ ಎಲ್ಲ ಸಂಭಾಳಿಸಿಕೊಂಡು ಕಾಲಮಾನಕ್ಕೆ ತಕ್ಕಂತೆ ಬರೋ ಕೆಲಸಗಳನ್ನೆಲ್ಲ… ಅಂದ್ರೆ ಚೀಲಗಟ್ಟಲೆ ಭತ್ತ ಕುದಿಸಿ ವರ್ಷಕ್ಕಾಗೋವಷ್ಟು ಕುಚ್ಚಲಕ್ಕಿ ಮಾಡಿಕೊಳ್ಳೋದು… ಎರಡೆರಡು ಗೋಣಿಚೀಲ ವಾಟೆಕಾಯಿ ಹೆಚ್ಚಿ ಹುಳಿ ಮಾಡೋದು ಹೀಗೆ ಎಲ್ಲ ಅಂದ್ರೆ ಎಲ್ಲವನ್ನೂ ಅಮ್ಮ ಅಜ್ಜಿ ಇಬ್ಬರೇ ಸೇರಿ ತೀರ ತಣ್ಣಗೆ ಹಾಡು ಹೇಳಿಕೊಳ್ಳುತ್ತ ಮಾಡಿಕೊಳ್ಳುತ್ತಿದ್ದರು..

ಎಲ್ಲ ಸೌಕರ್ಯಗಳಿದ್ದೂ ಮಾಡೋ ಒಂದು ಸಪ್ಪೆ ಅನ್ನ ಸಾರಿಗೆ ‘ಅಯ್ಯೋ ಮಾಡಿ ಸಾಯ್ಬೇಕಲ್ಲಪ್ಪಾ’ ಅನ್ನೋ ನನ್ನ ತಲೆಮಾರಿನವರಿಗೆ ಕಾಡುವ ಭಾವ.. ಅಸಹನೆ.. ಅವರಿಗೆ ಕಾಡುತ್ತಲೇ ಇರಲಿಲ್ಲ. ಯಾಕೆಂದರೆ ಒಮ್ಮೆಯೂ ಅವರು ಉಸ್ಸೆಂದಿದ್ದು, ಸಿಟ್ಟಿನಲ್ಲಿ ಎಗರಾಡಿದ್ದು ಕಂಡೇ ಇಲ್ಲ ನಾನು..

ಅವ್ವನಂತೂ ಎಲ್ಲದಕ್ಕೂ ಟೈಂ ಟೇಬಲ್ ಇಟ್ಕೊಂಡಂತೆ ಕೆಲಸ ಮಾಡ್ತಿದ್ದಳು.. ಗದ್ದೆಯಿಂದ ಒಂದೊಂದೇ ಬುಟ್ಟಿ ಮಣ್ಣು ತಂದು ಹಸನು ಮಾಡಿ ವಾರಗಟ್ಟಲೆ ಕಲ್ಲಿನಿಂದ ಒರೆದು ಅಂಗಳ ಮಾಡ್ತಿದ್ದಳು ಕಪ್ಪನೆ ಸಗಣಿ ತಂದು ಮಟಮಟ ಮಧ್ಯಾಹ್ನ ಅಂಗಳ ಸಾರಿಸ್ತಿದ್ದಳು.. ಈ ಕೆಲಸ ಮುಗಿದದ್ದೇ ಬಗ್ಗಿ ತುಂಬುವ ಬಾವಿಯಿಂದ ಕೊಡಗಟ್ಟಲೆ ನೀರು ಸೇದಿ ಸೇದಿ ಇರೋ ಒಂದಿಪ್ಪತ್ತೈದು ತೆಂಗಿನಮರಕ್ಕೆ ಹಾಕಿ ಹಿಂಡಿಗೆ ತೂಗಿ ತೊನೆಯೋ ತೆಂಗಿನ ಮರ ನೋಡಿ ಹೆಮ್ಮೆಯಿಂದ ಬೆವರೊರೆಸಿಕೊಳ್ತಿದ್ದಳು…ಮಧ್ಯರಾತ್ರಿ ಒಂದು ಕಾಯಿ ಬಿದ್ರೂ ಅವಳಿಗೆ ತಟ್ಟನೆ ಎಚ್ಚರಾಗಿಬಿಡ್ತಿತ್ತು..”ಜನ ತಿರುಗಾಡೋ ಹಾದಿ. ಕಾಯಿ ಬಿದ್ರೆ ಉಳಿಯಲ್ಲ”ಎಂದು ಆಗ್ಗಿಂದಾಗ್ಲೇ ಹೋಗಿ ಹೆಕ್ಕಿಕೊಂಡು ಬರ್ತಿದ್ದಳು..

ಅಷ್ಟೆಲ್ಲ ಭಾರದ ನಡುವೆಯೂ ಚೂರೂ ಸೋಮಾರಿತನ ಆಲಸ್ಯ ಎಂಬುದು ಸುಳಿಯದ ಹಿಂದಿನವರ ಸಾಮರ್ಥ್ಯಗಳನ್ನು ಬರೀ ನೆನಪಿಸಿಕೊಳ್ಳೋದಷ್ಟೇನಾ ಸಧ್ಯ ನಮಗೀಗ ಉಳಿದಿರೋದು ಅಂತ ಪ್ರಶ್ನೆಹಾಕಿಕೊಂಡು ಸುಮ್ಮನೆ ಕುಳಿತುಬಿಟ್ಟಿದ್ದೇನೆ.

ಒಂದು ಮೂವತ್ತು ವರ್ಷಗಳಿಂದೀಚೆಗೆ ಎಂಥ ಬದಲಾವಣೆ…ಜೊತೆಗೆ ಕೆಲಸ ಕಡಿಮೆಯಾದಷ್ಟೂ, ಸೌಕರ್ಯಗಳು ಹೆಚ್ಚಿದಷ್ಟೂ ಧಾಂಗುಡಿ ಇಡುತ್ತಲೇ ಇರುವ ಇಂದಿನ ಅಸಹನೆ, ಚಂಚಲತೆ, ಸಿಟ್ಟು, ಉದ್ರಿಕ್ತತೆ ಇವನ್ನೆಲ್ಲವನ್ನು ಮೀರಿ ನಿಲ್ಲಲು ನಡೆಸಿರುವ ವ್ಯರ್ಥ ಪ್ರಯತ್ನ ಕೂಡ ಅರಿವಿಗೆ ಬರುತ್ತಿದೆ.. ಅದರಲ್ಲೂ ಕೊಂಚ ಭಾವುಕ ಪ್ರವೃತ್ತಿಯ ನನಗೆ ಅಂತಹುದೇ ಸ್ವಭಾವದ ಶಾಂತ ಸರಳ ಸುಮಿತ್ರಾ ಮೇಡಂ ಅವರ ಬರಹಗಳು ಕವಿತೆಗಳು ಯಾಕೋ ಎದೆಗೆ ಬಹಳ ತಾಕುತ್ತಿವೆ..

ಈ ಜೋಡಿ ಪುಸ್ತಕಗಳೆಷ್ಟು ಚಂದ ನೋಡಿ.. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಇವನ್ನು ಅಗಲಿಸಿಬಿಟ್ಟರೆ ಚಂದವೇ ಅಲ್ಲ “ಗದ್ದೆಯಂಚಿನ ದಾರಿ”” ತುಂಬೆ ಹೂ” ಎರಡೂ ಮತ್ತೆ ನನ್ನ ಬಾಲ್ಯಕ್ಕೆ ಕೊಂಡೊಯ್ಯುತ್ತಿವೆ.

ಕುಪ್ಪಳಿಸುತ್ತ ಓಡುತ್ತ ಹೋಗುವ “ಗದ್ದೆಹಾಳಿ” ಅದರ ಎರಡೂ ಅಂಚಿಗಿನ ಗರಿಕೆ ಹುಲ್ಲು.. ಹೆಸರೇ ಗೊತ್ತಿಲ್ಲದ ಪುಟ್ಟ ಪುಟಾಣಿ ಹೂಗಳು.. ತುಂಬೆಯ ಬಿಳಿ ಹೂ…ಎಲ್ಲ ನೆನಪಾಗ್ತಿವೆ.. ಗಿಡ್ಡಕ್ಕಿದ್ದವರನ್ನ ನೋಡಿ “ತುಂಬೆ ಗಿಡಕ್ಕೆ ಏಣಿ ಹಾಕುವವ” ಅಂತಿದ್ದ ಊರಿನ ಆಡು ಗಾದೆ ಮಾತು ಕೇಳಿ ನಾನೂ ನನ್ನ ಗೆಳತಿಯರು ಐದನೇ ವರ್ಗದಲ್ಲಿರೋವಾಗ ಎರಡು ಹಿಡಿ ಕಡ್ಡಿ ಜೋಡಿಸಿ ಏಣಿ ಮಾಡಿ ಅದನ್ನು ತುಂಬೆ ಗಿಡಕ್ಕೆ ಆನಿಸಿ ಒಂದು ಪಾಪದ ಇರುವೆ ಹಿಡಿದು ತಂದು ಬಿಟ್ಟೇನೆಂದರೂ ಬಿಡದೇ ಅದನ್ನು ಏಣಿ ಹತ್ತಿಸಿದ್ದೆವು.. ಅದೆಲ್ಲ ನೆನಪಾಗಿ ಖುಷಿ ಕೂಡ ಆಗ್ತಿದೆ. ಎರಡೂ ಪುಸ್ತಕಗಳು ಈಡೂ ಜೋಡೂ ಎಷ್ಟು ಚನ್ನಾಗಿವೆ ನೋಡಿ… ಹಾಗೇ ಒಳಗಿನ ಬರಹಗಳೂ ಕೂಡ ಒಂದನ್ನು ಬಿಟ್ಟು ಇನ್ನೊಂದಿಲ್ಲ.

ಅಷ್ಟು ಹೊಂದಿಕೊಂಡಿವೆ..ನಿಜ ಮಣ್ಣಿನ ಸೊಗಡಿನ ಪ್ರಬಂಧಗಳು ಮತ್ತು ಕವಿತೆಗಳು.. ಇನ್ನೂ ಒಂದೆರಡು ಪ್ರಬಂಧ, ಕವಿತೆಗಳನ್ನು ಓದಿದ್ದಷ್ಟೇ.. ತುಂಬ ನೆಮ್ಮದಿ ಖುಷಿ ನೆನಪು ಎಲ್ಲ ಕೊಡ್ತಿವೆ ಪುಸ್ತಕಗಳು..

ಯಾಕೋ ಸುಮಿತ್ರಾ ಮೇಡಂ ಅವರಿಗೆ ನನ್ನ ಮೇಲೆ ಕೊಂಚ ಹೆಚ್ಚಿಗೆಯೇ ಅಕ್ಕರಾಸ್ತೆ. ಒಮ್ಮೆಯೂ ನೋಡಿಲ್ಲ ಅಪ್ಪಿಕೊಂಡಿಲ್ಲ.. ನಾನಿಲ್ಲಿ ಅವರಲ್ಲಿ.. ಆದ್ರೂ ಆಗಾಗ ಅವರಾಗಿಯೇ ಫೋನ್ ಮಾಡ್ತಾರೆ.. ಹೇಗಿದ್ದೀ ರೇಣುಕಾ ಅಂತಾರೆ.. ಅವರಾಗಿಯೇ ವಿಳಾಸ ತರಿಸಿಕೊಂಡು ಪುಸ್ತಕ ಕಳಿಸಿದ್ದಾರೆ..

“ಎಷ್ಟು ಪುಸ್ತಕ ಮಾಡಿದ್ದೀರಿ” ಎನ್ನುತ್ತ ಪುಸ್ತಕದ ಮೇಲಿಂದನೇ ಕವಿಯ ಯೋಗ್ಯತೆ ಅಳೆಯುವ ಇಂದಿನ ದಿನಮಾನದಲ್ಲಿ ಒಂದೂ ಪುಸ್ತಕ ಮಾಡದ ನನ್ನಂತವರ ಕವಿತೆಯನ್ನು ಮೆಚ್ಚಿಕೊಂಡು ಫೋನ್ ಮಾಡಿ ತರಿಸಿಕೊಂಡು ಹೆಗ್ಗೋಡಿನ ನೀನಾಸಂ ಶಿಬಿರದಲ್ಲಿ ತಮ್ಮ ವಿಮರ್ಶೆಗಾಗಿ, ವಾಚನಕ್ಕಾಗಿ ಅದನ್ನೇ ಆಯ್ಕೆ ಮಾಡಿಕೊಂಡ ಸುಮಿತ್ರಾ ಮೇಡಂ ಮತ್ತು ಅವರಂತಹ ಹಮ್ಮು ಬಿಮ್ಮು ಇಲ್ಲದ ಇನ್ನಿತರ ಹಿರಿಯರಿರೋದ್ರಿಂದನೇ ನಮ್ಮಂತಹ ಹೊಸಬರು ಕೀಳರಿಮೆ ತೊರೆದು ಇನ್ನೂ ಬರೀತಾ ಇರೋದು..!!

3 Responses

  1. Girijashastry says:

    ಗದ್ದೆಯಂಚಿನ ದಾರಿ ಓದುವ ಕುತೂಹಲವಾಗಿದೆ. ಅಭಿನಂದನೆಗಳು ಸುಮಿತ್ರಾ, ರೇಣುಕಾ

  2. Shreedevi keremane says:

    ಚೆನ್ನಾಗಿದೆ

  3. ಆನಂದ್ ಋಗ್ವೇದಿ says:

    ಅರ್ಥಪೂರ್ಣ ಪರಿಚಯ. ದೇಸೀ ಜ್ಞಾನ ಪರಂಪರೆಯ ಅದ್ಭುತ ಜ್ಞಾಪಕ ಚಿತ್ರ ಶಾಲೆ

Leave a Reply

%d bloggers like this: