ಅಮ್ಮಾ ನಿನ್ನ ಎದೆಯಾಳದಲ್ಲಿ…

ಪೂಜಾ ಗುಜರನ್

 

 

 

 

 

 

 

 

 

 

 

 

ಬದುಕು ಅಂದಾಗ ನನಗೆ ನೆನಪಾಗೋದು ಅಮ್ಮ. ತನ್ನ ಜೀವನದುದ್ದಕ್ಕೂ ಹೋರಾಟದ ಬದುಕು ಅವಳದ್ದು.

ತನಗಾಗಿ ತನ್ನವರಿಗಾಗಿ ಅನ್ನುವ ಜಂಜಾಟದಲ್ಲಿ ತನ್ನ ಆಯುಷ್ಯವನ್ನೇ ಮುಡಿಪಾಗಿಟ್ಟವಳು.

ಭೂಮಿಯ ಮೇಲೆ ದೇವರಿಗೊಂದು ಗುಡಿ ಗೋಪುರವಾದರೂ ಇರುತ್ತೆ. ಆದರೆ ಹೆತ್ತಮ್ಮನಿಗೆ ಮನೆಯೇ ದೇವಾಲಯ. ಮಕ್ಕಳೇ ಅವಳ ಭಕ್ತರು. ಆದರೆ ಎಲ್ಲರಿಗೂ ಬೇಕೆಂದಾಗ ದಕ್ಕುವ, ಆಡಂಬರಗಳಿಲ್ಲದ ದೇವತೆ ಆಕೆ. ದೇವರನ್ನು ಒಲಿಸಲು ಭಕ್ತಿಯು ಮುಖ್ಯವಂತೆ. ಅಮ್ಮನನ್ನು ಒಲಿಸಲು ಭಕ್ತಿಯಂಥಾ ಪ್ರೀತಿ ಇದ್ದರೆ ಸಾಕು. ಅವಳದು ನಿಷ್ಕಲ್ಮಶ ಮನಸ್ಸಿನ ಪ್ರೀತಿ.

ತನ್ನೊಳಗಿನ ನೋವನ್ನೂ ಕೂಡ ಮಗುವಿನ ನಗುವಲ್ಲಿ ಮರೆಯುತ್ತಾಳೆ ಅಮ್ಮ. ಅಂತಹ ಅಮ್ಮನ ಜೊತೆ ಜನುಮದ ಬಾಂಧವ್ಯ, ಮರೆಯದ ಅನುಬಂಧ ನನ್ನದು. ಆಕೆ ನನ್ನ ಬದುಕಿಗೆ ಬದುಕಾಗಿ ಸಿಕ್ಕ ಜೀವದ ಗೆಳತಿ.

ಸದಾ ಮಂದಸ್ಮಿತೆಯಾಗಿ, ಬದುಕಿನ ಗಾಡಿಗೆ ಸಾರಥಿಯಾಗಿ, ಎಲ್ಲ ಏಳುಬೀಳುಗಳನ್ನು ಸಹಿಸಿ ಮುನ್ನಡೆಸಿದ ಧೀರೆ ನನ್ನಮ್ಮ. ಸಂಸಾರದ ಸಾರವನ್ನು ಸರಾಗವಾಗಿ ಉಣಬಡಿಸಿದ ಮಾತೃಹೃದಯಿ ಆಕೆ.

ನವಮಾಸಗಳ ಕಾಲ ಹೊತ್ತು ಹೆತ್ತು ನನ್ನನ್ನು ಭೂಮಿಗೆ ತಂದ ದೇವತೆಯ ಬಗ್ಗೆ ಮನಬಿಚ್ಚಿ ಮಾತನಾಡಲೇಬೇಕು ಅಂದುಕೊಳ್ಳುತ್ತೇನೆ. ಆದರೆ ಕಲ್ಪನೆಗೂ ನಿಲುಕದ ಅಮ್ಮನಿಗೆ ಅಕ್ಷರದ ರೂಪ ಕೊಟ್ಟು ಪದಗಳಲ್ಲಿ ಬಂಧಿಸುವುದು ಕೂಡ ಅಷ್ಟೇ ಕಷ್ಟ. ದೀಪದಂತೆ ಬೆಳಗುತ್ತಾ, ಬೆಳಕಲ್ಲೇ ಅನುಕ್ಷಣವೂ ತಾನೂ ಕರಗುತ್ತಾ ಬದುಕಿದ ಜೀವವಿದು.

ಬದುಕಿಗೆ ಬೆಳಕ ತಂದು ಸನ್ಮಾರ್ಗದ ಜ್ಯೋತಿ ಬೆಳಗಿಸಿದ ದೈವ. ಒಪ್ಪೊತ್ತಿನ ಗಂಜಿಯಲ್ಲೂ ನಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ಸಾಕಿ ಸಲಹಿದವರು ನಮ್ಮಮ್ಮ.

ಬಲು ಕಷ್ಟದಲ್ಲೂ ಅಕ್ಕರೆಯ, ಒಲವ ಸಕ್ಕರೆಯ ಸಿಹಿಯ ನೀಡಿ ಮಹಾಮಯಿಯಾದ ಅಮ್ಮ ನನ್ನ ಉಸಿರೊಳಗೆ ಉಸಿರಾಗಿ ಬೆರೆತವರು. ಅನಕ್ಷರಸ್ಥೆಯಾದರೂ ಎಲ್ಲ ಲೆಕ್ಕಾಚಾರಗಳನ್ನು ನಿಭಾಯಿಸಬಲ್ಲ ಬುದ್ದಿವಂತೆ. ವಿದ್ಯೆ ಇಲ್ಲದೆ ಹೋದರೂ ವಿಧೇಯತೆಯ ಭಾವ ಅವರದು. ಭೂಮಿಗೆ ಅಮ್ಮನನ್ನು ತಂದ ದೇವರು ಎಲ್ಲವನ್ನೂ ನಿಭಾಯಿಸಬಲ್ಲ ಶಕ್ತಿಯನ್ನು ಅಮ್ಮಂದಿರ ಹೃದಯದಲ್ಲಿ ಪ್ರತಿಸ್ಥಾಪಿಸಿಬಿಟ್ಟಿದ್ದಾನೆ ಎಂದು ಕೆಲವೊಮ್ಮೆ ನನಗನ್ನಿಸುವುದಿದೆ. ವಿದ್ಯೆ ಅಕ್ಷರವನ್ನು ಕಲಿಸುತ್ತೆ. ಆದರೆ ವಿಧೇಯತೆ ಬದುಕನ್ನು ರೂಪಿಸುತ್ತೆ. ಅಮ್ಮ ನಮಗೆ ಎರಡನ್ನೂ ಕಲಿಸಿ ಜೀವನವನ್ನು ಪ್ರೀತಿಸಲು ಹೇಳಿಕೊಟ್ಟರು.

ಮಕ್ಕಳಿಗೆ ಜನ್ಮದ ಜೊತೆ ಸಂಸ್ಕಾರವನ್ನು ಕೊಟ್ಟ ದೇವತೆಯಾದ ನನ್ನಮ್ಮನನ್ನು ಪೂಜಿಸಲು ಒಂದು ಜನ್ಮ ಸಾಲದು. ಅಮ್ಮನ ಪ್ರೀತಿ ಸುಧೆಯಲ್ಲಿ ತೇಲಾಡಲು ಬದುಕನ್ನು ಅವರ ಪಾದಕ್ಕೆ ಮೀಸಲಿಡಲೇ ನಾನು?

ಅಮ್ಮನ ಪ್ರತಿ ನಿಟ್ಟುಸಿರಲ್ಲೂ ನಗುವಿದೆ. ಮಕ್ಕಳ ಮೇಲಿನ ಪ್ರೀತಿ, ಅಭಿಮಾನ ಅವರೆದೆಯ ನೋವನ್ನು ಮರೆಸುತ್ತೆ. ಕರುಣಾಮಯಿವನ್ನು ಏನೆಂದು ಬಣ್ಣಿಸಲಿ ನಾನು! ಪದಗಳ ಪರದೆಯೊಳಗೂ ಅಗೋಚರವಾಗಿ ಕಾಡುವ ಶಕ್ತಿಯೇ ಇವರು. ಸಂಸಾರದ ಭಾರವನ್ನು ಹೊತ್ತು ಪ್ರತಿ ಹೆಜ್ಜೆಯಲ್ಲೂ ಸಹನೆಯ ಮೂರ್ತಿಯಂತೆ ಬದುಕುವ ಜೀವಕ್ಕೆ ಯಾರು ಸಾಟಿ? ಅಮ್ಮನ ತ್ಯಾಗದ ಮುಂದೆ ದೇವರೂ ಸೋತಿರುವನಂತೆ.

ನನಗಂತೂ ನೋವಿಗೂ ಅಮ್ಮ ನಗುವಿಗೂ ಅಮ್ಮ. ಜೀವನದ ಪ್ರತಿ ಹೆಜ್ಜೆಗಳನ್ನು ಕೈ ಹಿಡಿದು ನಡೆಸುವ ಗುರು. ಅದೆಂತಹ ಕಷ್ಟದ ಬದುಕಾದರೂ ತನ್ನಿಷ್ಟದಂತೆ ಬದುಕಲೂ ಪ್ರೇರಣೆ ತಾಯಿ. ತನಗಾಗುವ ಅತಿಯಾದ ಸುಸ್ತಿನಲ್ಲೂ ಕೈ ತುತ್ತು ನೀಡಿ, ಮುದ್ದು ಮಾಡಿ ತನ್ನ ನೋವನ್ನು ಮರೆ ಮಾಚಿದ ಹೃದಯವಂತೆ. ಕಷ್ಟ ಯಾವಾಗಲೂ ಬೆನ್ನ ಹಿಂದೆ ಇದ್ದರೂ ನಮ್ಮ ಇಷ್ಟಗಳನ್ನು ಅತೀವ ಶ್ರದ್ಧೆಯಿಂದ ನೋಡಿಕೊಂಡು ಬೆಳೆಸಿದವರು. ಅತ್ತಾಗ ಮಡಿಲು, ನಕ್ಕಾಗ ಒಡಲು, ಸೋತಾಗ ಹೆಗಲು ಕೊಟ್ಟ ಮಹಾತಾಯಿ.

ಅಮ್ಮನಿಲ್ಲದ ಯಾವ ಕ್ಷಣಗಳನ್ನೂ ನಾನು ಒಬ್ಬಂಟಿಯಾಗಿ ಕಳೆಯಲಾರೆ. ಜೀವದ ನೆಲೆಯಾಗಿ, ಭಾವದ ಉಸಿರಾಗಿ ಬದುಕಿಗೆ ಬಣ್ಣ ಹಚ್ಚಿದ ಬಂಧು ಆಕೆ. ನಿಮ್ಮ ಉಸಿರಲ್ಲಿ ನಾನು ಉಸಿರಾಡುವುದೇ ಬದುಕಿನ ಭಾಗ್ಯ. ಆಕೆ ಒಲವಿನ ಮಳೆಯಲ್ಲಿ ಬೆಚ್ಚನೆಯ ಅಪ್ಪುಗೆ ನೀಡಿದ ಪ್ರೇಮಾಮಯಿ, ಬದುಕಿಗೆ ಬಂದ ಕೆಲವೊಂದು ಕಹಿಯ ಕರಗಿಸಿ ಸಿಹಿಯ ಸಾಂತ್ವನ ನೀಡಿದ, ಎದೆಯೊಳಗೆ ಮಾರುತವಿದ್ದರೂ ಶಾಂತ ಮೂರ್ತಿಯಂತೆ ಬದುಕುವ ಆದರ್ಶ ಗೃಹಿಣಿ. ಸುಖ ಸಂಸಾರದ ಸೂತ್ರಕ್ಕೆ ಗುಣಸದ್ಗುಣಗಳನ್ನು ರೂಪಿಸಿಕೊಂಡು ಬದುಕುವ ಅಮ್ಮನ ದಾರಿಯೇ ನಮಗೆ ದಾರಿದೀಪ.

ನಿದ್ದೆಯಿಲ್ಲದ ರಾತ್ರಿಗಳಲ್ಲಿಯೂ ಬೀಡಿ ಚಿರುಟಿ ಬದುಕ ಕಟ್ಟಿದವಳ ನೋವನ್ನು ಬಲು ಹತ್ತಿರದಲ್ಲಿ ಕಂಡವಳು ನಾನು. ಆವಾಗ ದೇವರ ಮೇಲೆ ವಿಪರೀತ ಕೋಪ ಬರುತ್ತಿತ್ತು. ಅಮ್ಮನ ಏದುಸಿರು ನನ್ನ ಕಣ್ಣಿಗೆ ಇಂದು ಕೂಡ ಮರೆಯದ ದುಃಸ್ವಪ್ನದಂತೆ ಕಾಡುತ್ತಿದೆ. ಯಾಕಾದರೂ ದೇವರು ನಮಗೆ ಇಷ್ಟೊಂದು ಕಷ್ಟ ಕೊಟ್ಟು ಚಂದ ನೋಡುತ್ತಿದ್ದಾನೆ ಅನ್ನುವುದೇ ನನ್ನೊಳಗಿನ ನೋವಿನ ಪ್ರಶ್ನೆಯಾಗಿತ್ತು.

ಆದರೆ ಮುಖವನ್ನು ಮರೆಮಾಚಿ ಕಣ್ಣೀರ ಸುರಿಸಿದ ಅಮ್ಮ ತನ್ನ ಕಷ್ಟವನ್ನು ನಮಗೆ ಯಾವತ್ತೂ ತೋರಿಸಲೇ ಇಲ್ಲ. ಅದೆಷ್ಟೋ ನೋವಿನ ನಿಟ್ಟುಸಿರಲ್ಲೂ ನಮಗಾಗಿ ಸದಾ ತನ್ನ ನಗುವನ್ನೆ ನೀಡುವ ನಿಮ್ಮೊಲವಿಗೆ ಮೂಕಿ ನಾನು. ನೊಂದು ಬೆಂದ ಹೃದಯದಲ್ಲೂ ಪ್ರತಿಕ್ಷಣವೂ ಪ್ರೀತಿಯ ಚಿಲುಮೆಯನ್ನೆ ಹರಿಸುವ ಮಹಾತಾಯಿಯಾದ ನಿಮಗೆ ತಲೆಬಾಗಿರುವೆನು.

ಕರುಣೆಗೆ ಹೆಸರು, ನನ್ನೆದೆಯ ಉಸಿರು, ವಾತ್ಸಲ್ಯದ ದೇವರು, ಮನೆಯೆಂಬ ದೇಗುಲದಲ್ಲಿ ಸದಾ ನೆಲೆಸಿರುವ ಸಾಧ್ವಿಯೇ ನೀವು. ಅಮ್ಮನ ಬಗ್ಗೆ ಬರೆದರೂ ಮುಗಿಯದಷ್ಟು ಮಾತುಗಳಿವೆ.  ಪುಟ್ಟ ಹೃದಯಕ್ಕೆ ಬಡಿತ ಕೊಟ್ಟು, ಪ್ರತಿ ಬಡಿತಕ್ಕೂ ಅಮ್ಮ ಅನ್ನುವ ಉಸಿರ ಕೊಟ್ಟು ಉಸಿರಿಗೂ ಜೀವ ಕೊಟ್ಟ ಅಮ್ಮನಿಗೆ ಉಸಿರ ಮುಡಿಪಿಡುವೆ.

1 Response

  1. Manjunatha BT says:

    Printed. Sigatta sir. Very beautiful interesting useful Magzin . thnk u sir

Leave a Reply

%d bloggers like this: