ಮತಯಂತ್ರಕ್ಕೆ ಜೀವವಿದ್ದಿದ್ದರೆ ಒಮ್ಮೆ ಕೇಳಬೇಕೆನಿಸುತ್ತದೆ..

ಗಾಂಧಿಯಾಗಲು ಹೊರಟವರ ಸರತಿ ಸಾಲು

ಶ್ರೀವಿಭಾವನ

1

ಮತಯಂತ್ರಕ್ಕೆ ಜೀವವಿದ್ದಿದ್ದರೆ

ಒಮ್ಮೆ ಕೇಳಬೇಕಿನಿಸುತ್ತದೆ

ಒಬ್ಬ ಕೆಟ್ಟ ನಾಯಕನ ಪ್ರಸವ ವೇದನೆಯ

ಅನುಭವ

ತನ್ನ ಸುತ್ತಲೂ ಜನ

ಕೆಟ್ಟದನ್ನು ಅನುಭವಿಸುವ ಕ್ಷಣದಲ್ಲಿ

ಹಾದುಹೋಗವ ಯೋಚನೆಗಳನ್ನು….

2

ಮತಯಂತ್ರಗಳನ್ನು ಗುಡ್ಡೆಹಾಕಿರುವ

ಕಟ್ಟಡ ನೋಡಿದಾಗಲೆಲ್ಲಾ

ಅನಾಥ ಊರುಗಳೆಲ್ಲಾ

ಕಣ್ಣಮುಂದೆ ಹಾದುಹೋಗುತ್ತವೆ..

ಬೀದಿಯಲ್ಲಿ ದಿನಾ ಕಾಣಸಿಗುವ

ಒಂದಿಷ್ಟು ಹಸಿದ ಮುಖಗಳು

ನೆನಪಾಗುತ್ತವೆ

ಮತಯಂತ್ರಗಳಿಗೆ

ಅಮಾನುಷ ಶಕ್ತಿ ಇದ್ದಿದ್ದರೆ

ಎಂಬ ಸಣ್ಣ ಯೋಚನೆ ಮೊಳೆಯುತ್ತದೆ..

3

ಮತಯಂತ್ರಗಳಿಗೆ

ತಮ್ಮ ಒಡಲಿನ ರಹಸ್ಯ

ಬದಲಾಯಿಸುವ ಶಕ್ತಿ

ಇದ್ದಿದ್ದರೆ

ನಮ್ಮ ನಡುವಣ ನೂರಾರು ಮಂದಿ

ಮನುಷ್ಯರಾಗೇ ಇರುತ್ತಿದ್ದರೋ ಏನೋ

ನೂರಾರು ಮುಖಗಳನ್ನು

ಹೊತ್ತು ಊರೂರು

ಸುತ್ತುವ ಹಂಗಿರಲಿಲ್ಲ ಅವರಿಗೆ.

ದಿನಕ್ಕೊಂದು ಬಣ್ಣ ಬಳಿದುಕೊಳ್ಳುವ

ಕಷ್ಟವಿರಲಿಲ್ಲ..

ಇರುವ ಹಾಗೆ ಇದ್ದು

ಬಿಡುತ್ತಿದ್ದರೋ ಏನೋ?

ಜನರ ಶಾಪದ ಬಿಸಿತಾಕದೆ.

4

ಓಟು ಒತ್ತಲು

ತನ್ನ ಮುಂದೆ ನಿಂತ ವ್ಯಕ್ತಿಯ

ಕಣ್ಣ ಭಾವಗಳನ್ನು

ಸೆರೆ ಹಿಡಿಯವ ಶಕ್ತಿಯಷ್ಟೇ

ಮತಯಂತ್ರಗಳಿಗೆ ಸಾಕಿತ್ತು

ಊರಿನ ತುಂಬೆಲ್ಲಾ ಹರಡಿದ

ಸುಳ್ಳುಗಳ ಸಂತೆ ನಿಲ್ಲಿಸಲು

ದೊಡ್ಡದೊಂದು ಮೌನದ ನಡುವೆ

ಒಳ್ಳೆಯವರಾಗಲೇ ದೊಡ್ಡ ಪೈಪೋಟಿ

ಗಾಂಧಿಯಾಗಲು ಹೊರಟವರ ಸರತಿ ಸಾಲಿಗೆ

ಕೊನೆಯಿರುತ್ತಿರಲಿಲ್ಲ.

 

1 Response

  1. Mangala says:

    Really awesome. ನಿಜವಾಗಿ ಮತಯಂತ್ರಗಳಿಗೆ ಜೀವವಿಬೇಕಿತ್ತಲ್ವ …

Leave a Reply

%d bloggers like this: