ನಲ್ಲೆಯನು ಗೆದ್ದವನು, ಶಿವನಿಂದ..

ಮುಪ್ಪು

 

 

 

ಜಿ.ಪಿ.ಬಸವರಾಜು

 

 

ಗಾಂಡೀವಿ, ಮೂರು ಲೋಕದ

ಬಿಲ್ಲಾಳು, ಎದೆ ಸೆಟೆಸಿ ಬಿಲ್ಲನೆತ್ತಿ

ನಲ್ಲೆಯನು ಗೆದ್ದವನು, ಶಿವನಿಂದ

ಪಾಶುಪತಾರ್ಥ ಪಡೆದವನು, ಯುದ್ಧದಲಿ

ತಾನೆ ತಾನಾಗಿ ಮೆರೆದವನು, ಶತ್ರು ಪಡೆಯನು

ಮುರಿದವನು, ಕೃಷ್ಣನೂ ತಲೆದೂಗಿ ಅಹುದ

ಹುದು ಎಂದಾಗ, ತಲೆ ಎತ್ತಿ

ತಾನೆ ನರೋತ್ತಮನೆಂದು ಬೀಗಿದವನು;

ಯಾದವರ ಕದನದಲ್ಲಿ ಕೃಷ್ಣಪಕ್ಷದವನು

ಬಿಲ್ಲು ಎತ್ತಲಾಗದೆ, ಕಾದಲಾಗದೆ ಕಂಗಾಲಾಗಿ

ಕುಳಿತ ತನ್ನ ಕೊನೆಗಾಲ ಕಂಡವನಂತೆ,

ಕಾಲವೆಂಬುದು ಮುಪ್ಪು, ಮೃತ್ಯುವಿಗೆ

ಹೆಬ್ಬಾಗಿಲು, ನಿಲ್ಲಲಾರದೆ, ಕೊಲ್ಲಲಾರದೆ

ದಿಕ್ಕೆಟ್ಟ ಲೋಕದ ಗಂಡ, ಪ್ರಚಂಡ

ತಾಣ ನಿತ್ರಾಣ, ಮುಪ್ಪು ಶೋಭೆಯಲ್ಲ

ಶೂರರಿಗೆ.

                        2

ಕಾವ್ಯದಲ್ಲಿ ಕಲಿ ಏಟ್ಸ್ ಎಲ್ಲ ಕಂಡವನು

ಹೊಸ ದಿಕ್ಕುಗಳ ತೋರಿದವನು, ಹೊಸ

ಅರ್ಥ ವಿಸ್ತಾರಗಳಿಗೆ ಚಾಚಿಕೊಂಡವನು

ಮೊದಲ ಮಾನ್ಯತೆ, ಆದ್ಯತೆ ಎಲ್ಲದರಲ್ಲೂ,

ಯೌವನದಲ್ಲಿ ನಗುವ ಸುಂದರಿಯರು ಸುತ್ತ

ಪ್ರೇಮ ರಾಜಕೀಯ ಹಣ ಪ್ರಭಾವ ಒಂದರಲ್ಲಿ

ಮತ್ತೊಂದು, ಎಲ್ಲ ಕಾಯುವರು ಕವಿಗಾಗಿ,

ಉಕ್ಕುವ ಉತ್ಸಾಹ, ಸೊಕ್ಕಿದ ಯೌವನ

ಸಿದ್ಧಿ ಪ್ರಸಿದ್ಧಿ ಶಿಖರದಲ್ಲಿ ಹೊಳೆವ ಬೆಳಗು;

ವೃದ್ಧಾಪ್ಯದಲ್ಲಿ ಏಕಾಂಗಿ ಏಟ್ಸ್

ದೂರ ಸರಿದ ಮಿತ್ರರ ನೆನೆದು, ಕಡೆಗಣಿಸಿ,

ಕನಿಕರಿಸಿ, ಬಿನ್ನಾಣದಲಿ ನಡೆದುಹೋದ

ಸುಂದರಿಯರ ಸ್ಮರಿಸಿ, ಹಂಬಲಿಸಿ, ತೊಳಲಿ,

ದಣಿದವನು ಅಸಹಾಯಕ ಮುದುಕ; ಗೌರವ

ಬಿರುದುಬಾವಲಿಗಳನೆಲ್ಲ ತೆಗೆದೆಸೆದು

ತಾನೆ ಬಾವಲಿಯಾಗಿ ನೇತಾಡಿದ

ನೆಲಮುಗಿಲುಗಳ ನಡುವೆ ತಬ್ಬಲಿಯಾಗಿ ಪರದಾಡಿದ

ಲೋಕ ಬೇಸರವಾಗಿ ತಾನೆ ಕಟ್ಟಿದ ಬೈಜಾಂಟಿಯಂಗೆ

ಯಾನ ಕೈಗೊಂಡ; ಮರಮರದಲ್ಲಿ ಹಕ್ಕಿ ಸಂಕುಲ

ತೆಕ್ಕೆ ಸಡಿಲಿಸದ ಪ್ರೇಮಿ ಜೋಡಿ, ಉಕ್ಕುವ ಯೌವನ

ಕಣ್ಣು ಕುಕ್ಕುವ ತರುಣತರುಣಿಯರು; ‘ಮುದುಕರಿಗೆ

ಹೇಳಿಸಿದ್ದಲ್ಲ ನಾಡುಎಂದುಕೊಂಡ; ಆದರೂ

ಅಲ್ಲೆ ಬಂಗಾರ ಕೊಂಬೆಯಲ್ಲಿಕೂತು,

ಬೈಜಾಂಟಿಯಮ್ಮಿನ ಒಡೆಯ ಒಡತಿಯರಿಗೆ

ಹಾಡಲುನಿರ್ಧರಿಸಿದ.

                          3

ಮುದಿತನ ಸಹಜ, ಸಹನೀಯವೇನಲ್ಲ

ಅನಾದರ, ನಿರ್ಲಕ್ಷ್ಯ, ನಿರುತ್ಸಾಹ

ತರುಣರಾರೂ ಸುಳಿಯುವುದಿಲ್ಲ ಹತ್ತಿರ

ಅಲ್ಲಿ ಇಲ್ಲಿ ಠಳಾಯಿಸುವುದು ಸಾವು

ಚೆಲ್ಲಾಟವಾಡುತ್ತ ಕಾಡುವುದು.

Leave a Reply