ಗಿರಡ್ಡಿ ಸರ್, ತುಂಬಾ ಧಾವಂತ ನಿಮಗೆ, ಅವಸರ ಅವಸರವಾಗಿ ಹೊರಟು ಬಿಡುತ್ತೀರಿ .

ಪ್ರೀತಿಯ ಗಿರಡ್ಡಿ ಗೋವಿಂದರಾಜ್ ಸರ್.

ನಿಮ್ಮನ್ನು ಕಳೆದ ವರ್ಷ ಎಂದಿನಂತೆ ನೀನಾಸಮ್ ನ ಅಂಗಳದಲ್ಲಿ ನೋಡಿದೆ….ಈ ಸಲ ಸ್ವಲ್ಪ ಸೋತವರಂತೆ ಕಾಣಿಸುತಿದ್ದಿರಿ. ನಾನು ನಿಮ್ಮೊಂದಿಗೆ ಹೆಚ್ಚಿಗೆ ಮಾತನಾಡಿದವನಲ್ಲ. ಆದರೂ ‘ಸರ್ ನಾನು ಧಾರವಾಡದ ಕಡೆಯವನು ‘ಎಂದು ಹೇಳಿದಾಗ ಹೆಗಲ ಮೇಲೆ ಕೈ ಹಾಕಿ “ಈ ಸಲ ಸಾಹಿತ್ಯ ಸಂಭ್ರಮಕ್ಕ ತಪ್ಪಿಸಬ್ಯಾಡ ನೋಡ್ರಿ ” ಅಂತ ಪ್ರೀತಿಯಿಂದ ಆಮಂತ್ರಣ ಕೊಟ್ಟಿರಿ.ಆದರೆ  ಸಂಭ್ರಮಕ್ಕೆ ನನಗೆ ಬರಲಾಗಲಿಲ್ಲ ಕ್ಷಮೆಯಿರಲಿ.

ಆ ದಿನ ಸಂಜೆ ನಿಮ್ಮ ಜೊತೆ ಒಂದು ಫೋಟೊ ತೆಗೆಸಿಕೊಳ್ಳುವ ಆಸೆಯಿಂದ ಕ್ಯಾಂಟೀನ್ ಕಡೆಗೆ ಬಂದೆ.ನೀವು ರಮಾಕಾಂತ ಜೋಷಿಯವರ ಜೊತೆಗೆ ಕ್ಯಾಂಟೀನ್  ಹೊರಗಡೆ ಬಾದಾಮಿ ಗಿಡದ ನೆರಳಿನಲ್ಲಿ ಸಿಗರೇಟು ಸೇದುತ್ತ ಏನೊ ಗಂಭೀರವಾಗಿ ಚರ್ಚಿಸುತ್ತಿದ್ದಿರಿ.ನಿಮಗೆ ತೊಂದರೆ ಕೊಡುವ ಮನಸಾಗಲಿಲ್ಲ .ನಾಳೆ ತೆಗೆದುಕೊಳ್ಳೋಣ ಎನ್ನುವಷ್ಟರಲ್ಲಿ ನೀವು ಆಗಲೇ ಧಾರವಾಡದ ಬಸ್ಸು ಹತ್ತಿಬಿಟ್ಟಿದ್ದಿರಿ.

ತುಂಬಾ ಧಾವಂತ ನಿಮಗೆ , ಅವಸರ ಅವಸರವಾಗಿ ಹೊರಟು ಬಿಡುತ್ತೀರಿ .

ಕಳೆದ ಮಾರ್ಚನಲ್ಲಿ ನನ್ನ ಪುಸ್ತಕ ಸಮಾರಂಭದ ಬಿಡುಗಡೆಗೆ ನಿಮ್ಮನ್ನು ಆಹ್ವಾನಿಸಲು ಕಲ್ಯಾಣನಗರದ ನಿಮ್ಮ ಮನೆಯತನಕ ಬಂದಿದ್ದೆ.ನನ್ನ ದುರದೃಷ್ಟ ಆ ದಿನ ನೀವು ಮನೆಯಲ್ಲಿರಲಿಲ್ಲ.ಆಮಂತ್ರಣ ಮನೆಯವರಿಗೆ ನೀಡಿ ಬರುವಾಗ ನಿಮ್ಮ ಮನೆಯ ಗೇಟಿನಲ್ಲಿ ಪೋಲೀಸ ಪೇದೆಯಿದ್ದುದ ನೋಡಿ ನನಗೆ ಒಂದು ಕ್ಷಣ ಗಾಬರಿಯಾಯಿತು.ಸಾಹಿತಿಗಳ ಮನೆಗೆ ಸರ್ಕಾರಿ ಕಾವಲು ಭಟರನ್ನು ನಿಯಮಿಸಿದ್ದು ನೋಡಿ ನನಗೆ  ಹೊಟ್ಟೆ ತೊಳೆಸಿದಂತಾಯ್ತು.ಈ ಆತಂಕ ಯಾಕೆ ಆಯಿತೆಂದು ಈಗ ಹೆಚ್ಚು ವಿವರಿಸಲಾರೆ.ಆದರೆ ಕಲ್ಯಾಣನಗರದ ಸಂತನ ಶಾಂತತೆಯನ್ನು ಹೊತ್ತ ಮಾವಿನ ತೋಪಿನ ತಂಪಾದ ರಸ್ತೆಗಳು ,ಮನೆಯ ಅಂಗಳದಲ್ಲಿ ಮಲ್ಲಿಗೆ ,ಕನಕಾಂಬರ, ದಾಸವಾಳ ,ಹೂ .ಮರದ ಮರೆಯಲ್ಲಿ ಕಟ್ಟಿಕೊಂಡ ಯಾವುದೊ ಗುರುತಿರಲಾದ ಹಕ್ಕಿಯ ಗೂಡು ,……ಇಷ್ಟು ಮಾತ್ರ ಹೇಳಬಲ್ಲೆ ,ಈ ಇಂತಹ ಅಲೌಕಿಕ ವಾತಾವರಣದ  ದಿವ್ಯ ಸಾನಿಧ್ಯದಲ್ಲಿ   ಲೌಕಿಕದ ಆ ಪೋಲೀಸ ಪೇದೆಯ ಚಿತ್ರ   ನೀವಿರುವ  ನಿಮ್ಮ ಮನೆಯ ಫ್ರೇಮಿಗೆ ಒಂಚೂರು ಹೊಂದಾಣಿಕೆಯಾಗುತ್ತಿರಲಿಲ್ಲ. ಯಾರೊ ಒತ್ತಾಯಪೂರ್ವಕವಾಗಿ ಈ ಪೇಂಟಿಂಗ್ ನಲ್ಲಿ  ಪೋಲೀಸನವನನ್ನು ತಳ್ಳಿದಂತಿತ್ತು ,ಇರಲಿ .

ನಿಮಗೆ ಮುಖತಃ ಭೇಟಿಯಾಗಿ ಪುಸ್ತಕ ಕೊಡಬೇಕೆನ್ನುವ ಆಸೆಯಿಂದ ನಿಮಗೆ ಪುಸ್ತಕ ಕಳುಹಿಸಿರಲಿಲ್ಲ.

ಈಗ ನೋಡಿದರೆ “ಖಾಯಂ ವಿಳಾಸ” ವನ್ನು ಶಾಶ್ವತವಾಗಿ ಬದಲಿಸಿದ ಸುದ್ದಿ ತಲುಪಿದೆ.
ಪುಸ್ತಕ ಎಲ್ಲಿಗೆ ತಲುಪಿಸಬೇಕು ಅದನ್ನಾದರೂ ಹೇಳಿ ಹೋಗಿ ಪ್ಲೀಜ್ …..

~ಲಕ್ಷ್ಮಣ್.

Leave a Reply