ಜಯಂತ್ ಕಾಯ್ಕಿಣಿ ಕಂಡ ‘ಮೀನು ಬುಟ್ಟಿ’

ಇಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಲ್ಲಿ ರೇಣುಕಾ ರಮಾನಂದ ಅವರ ಚೊಚ್ಚಲ ಕೃತಿ ‘ಮೀನುಪೇಟೆಯ ತಿರುವು’ ಬಿಡುಗಡೆಯಾಗುತ್ತಿದೆ.

ಈ ಕೃತಿಗೆ ಜಯಂತ ಕಾಯ್ಕಿಣಿ ಬರೆದಿರುವ ಮುನ್ನುಡಿ ಇಲ್ಲಿದೆ

 

ಒಳಪ್ಯಾಡ್ಲಿನಿಂದ ಸೀಟಿಗೆ..

ರೇಣುಕಾ ರಮಾನಂದ ಅವರ ಈ ಕವಿತೆಗಳನ್ನು ಒಟ್ಟಿಗೇ ಓದುತ್ತಾ ಹೋದಂತೆ ಒಂದು ನಮೂನೆ ಉಮೇದಿಯ ಅವರ ಮನಸ್ಸು ನಮ್ಮನ್ನು ಆವರಿಸಿಕೊಳ್ಳುತ್ತದೆ.

ಇದು ಕೇವಲ ಬರವಣಿಗೆಯ ಉಮೇದಿಯಲ್ಲ. ಬದಲಿಗೆ ಬದುಕಿನ ಕುರಿತಾದ ಉಮೇದಿ.

ಚಲಿಸುವ ಬದುಕಿನಿಂದ ಬೇರ್ಪಟ್ಟು ನಿಂತು ಮಾತಾಡದೆ, ಒಟ್ಟಾರೆ ಬದುಕಿನ ನಿಬಿಡ ಹೆಣಿಗೆಯಲ್ಲಿ ಒಂದಾಗಿ ಸಂಪರ್ಕ ಸಾಧಿಸುವ ಉಮೇದಿ.

ಈ ಗುಣವೇ ಈ ಕವಿತೆಗಳಿಗೊಂದು ಜೀವನ ಸತ್ವದ ಹಸಿಬಿಸಿತನವನ್ನು ತಂದುಕೊಟ್ಟಿದೆ. ಕವಿತೆ ಕೇವಲ ಪ್ರತಿಸ್ಪಂದನವಾಗದೆ ಸಜೀವ ಸಂಪರ್ಕದ ಆವರಣವಾಗಿರುವುದರಿಂದಲೇ, ಇಲ್ಲಿನ ಅನೇಕ ಸಾಲುಗಳು “ಅಸಂಖ್ಯ ಬಟ್ಟೆ ಒಗೆಸಿಕೊಂಡ ದೋಭಿ ಘಾಟಿನ ಕಲ್ಲಿನ ಹಾಗೇ ಪಳ ಪಳ ಹೊಳೆಯುತ್ತವೆ”. “ಸುಟ್ಟು ತಲೆತಿರುವಿ ಇಟ್ಟ ಒಣಕಬ್ಬಿನಂತೆ” ಘಮ್ಮೆನುತ್ತವೆ. ಅಥವಾ “ಹರಕು ಹವಾಯಿ ಚಪ್ಪಲಿ ಮೀರಿ ಒಳ ಬಂದು ಹಿಂಸಿಸುವ ಮುಳ್ಳಿನಂತೆ” ತಾಗುತ್ತವೆ.

ಯಶವಂತ ಚಿತ್ತಾಲರು ಹೇಳುವಂತೆ “ಅನುಭವ ಯಾವಾಗಲು ನಮ್ಮ ಮನಸ್ಸಿನಲ್ಲಿ ಹಾಜರಿ ಕೊಡುವುದು ಪ್ರತಿಮೆಯ ಮೂಲಕ”. ಈ ಪ್ರತಿಮೆಗಳು ಯಾವ ಅಂಗಡಿಯಲ್ಲೂ ಸಿಗುವುದಿಲ್ಲ. ನಮ್ಮನ್ನು ಪೋಷಿಸಿ ಬೆಳೆಸಿದ ಬದುಕಿನ ವಿವರಗಳೇ, ಮುಟ್ಟಿದರೆ ಮಿಡಿಯಬಲ್ಲ ಪ್ರತಿಮೆಗಳಾಗಿ ರಕ್ತಗತವಾಗಿರುತ್ತವೆ. ಬರವಣಿಗೆಯು ಒಂದು ಪ್ರಾಮಾಣಿಕ ಕ್ಷಣದಲ್ಲಿ ಒದಗಿ ಬರುತ್ತವೆ ಅಷ್ಟೇ. ನಾವು ಇಷ್ಟು ತೀವ್ರವಾಗಿ ಬದುಕುತ್ತೇವೆ ಎಂಬುದೇ ಅದರ ಜೀವಾಳ. ರೇಣುಕಾರ ಬರವಣಿಗೆಯಲ್ಲಿ ಇವು ಬರುವ ರೀತಿ ಆಪ್ತವಾಗಿದೆ.

ಜಡ್ಡುಕಟ್ಟಿದೆ ಅವ್ವನ ಹಸ್ತ

ಒನಕೆಯ ಕುಣಿತಕ್ಕೆ

ಅನುಕೂಲವೇ ಅದು

ಒಲೆಯ ಮೇಲಿನ ತಪ್ಪಲೆ

ಬರಿಗೈಲಿ ಇಳಿಸಲಿಕ್ಕೆ..

 

ಮೆಟ್ಟುಗತ್ತಿಯ ಮೇಲೆ

ಕುಳಿತು ತಾಜಾ ಬಳ್ಳುಂಜೆ ಸಮದಾಳೆಗಳ

ತಲೆಕತ್ತರಿಸುತ್ತ..

 

ಗುತ್ತಿಗೆಗ ಕೊಟ್ಟ ತಬ್ಬಲಿಗೆಯ ಓಳಿ..

 

ರಕ್ತ ವಸರಿದರು ಗೊತ್ತೇ ಆಗದ

ತುಂಬು ಹರೆಯದ ಲಾಮಾಗಳ

ಕೆಂಪು ಬಟ್ಟೆಯಂತೆ

ಅವ್ವ ಮೆಹನತ್ ಮಾಡಿದ

ಗದ್ದೆಯಲ್ಲೀಗ ಗೆದ್ದಲುಗಳ

ಗದ್ದುಗೆಗಳು..

ನಮ್ಮದೀಗ ಹಠಾತ್ ಪಲ್ಲಟದ ಕಾಲ. ಬತ್ತದ ಗದ್ದೆ, ಬ್ಯೂಟಿ ಪಾರ್ಲರು ಎರಡೂ ಒಂದೇ ಆವರಣವನ್ನು ರೂಪಿಸುತ್ತಿರುವ, ಮೀನುಪೇಟೆಯಲ್ಲೆ ಜೀನ್ಸ್ ಅಂಗಡಿ ತೆರೆದಿರುವ ಕಾಲ. ನೆಟ್ಟ ಬೀಜ ಮೊಳಕೆಯೊಡೆವ ಮೊದಲೇ ಬರೆದದ್ದೆಲ್ಲ ‘ಪ್ರಕಟ’ಗೊಳ್ಳುವ ಕಾಲ. ಇಂಥಲ್ಲಿ ಕವಿಯ ಸಂವೇದನೆಗೆ ಸಾಣೆ ಹಿಡಿಯುವ ಸಂಗತಿಗಳು ಎಂದಿಗಿಂತ ವಿಫುಲ. ಆದರೆ ಅವು ಬರೆ ಮಾಹಿತಿಯಾಗಿ ಬಿಟ್ಟರೆ ರದ್ದಿಯಾಗುವ ಸುದ್ದಿಯಾಗುತ್ತವೆ. ಬದಲಿಗೆ ಅಂತರಂಗವನ್ನು ಕೆಣಕಿ ಕಾಡುವ ಸಂಗತಿಯಾದರೆ, ಒಂದು ಜೀವನ ದೃಷ್ಟಿಯನ್ನು ರೂಪಿಸುವಲ್ಲಿ ಸುಪ್ತವಾಗಿ ನಿರತವಾಗಿರುತ್ತವೆ.

ಈ ರಜೆಯಲ್ಲಿ ‘ಮಾಲ್’ಗೆ ಹೋದಾಗಲ್ಲೊಮೆ

ಮನೆಮಂದಿಯ ಕಣ್ಣು ತಪ್ಪಿಸಿ ನನ್ನ ಸೈಜಿನ

ಜೀನ್ಸ್ ಪ್ಯಾಂಟನ್ನೊಂದು ಹುಡುಕಬೇಕು

ತೊಡಲಾಗದಿದ್ದರೂ ಸುಮ್ಮನೆ ಇಟ್ಟು

ಮುಟ್ಟಿ ತಟ್ಟಿ ಸಂಭ್ರಮಿಸಬೇಕು..

 

ಹೊರಟಲ್ಲಿಗೆ ಹೊರಟು ನಿಂತ

ಹಳೆ ಬಸ್ಸಿನ ಸವೆದ ಟಾಯರಿನಂತೆ

ಮೆಟ್ಟಿಗೊಂಡ ದೆವ್ವವನ್ನು

ಬಿಟ್ಟೋಡಿಸಲು ಕಾದು ನಿಂತ

ಕಹಿ ಬೇವಿನ ಗೊಂಚಲಿನಂತೆ

 

ಪಾರ್ಟಿಯಲ್ಲಿ ಚೀರಾಡಿ ತೂರಾಡಿದ್ದನ್ನೆಲ್ಲ

ಕೆಲಸದ ಮುಕುಂದ

ನಿಷ್ಠೆಯಿಂದ ಬಳಿಯುವಾಗ

ಬ್ಯೂಟಿ ಪಾರ್ಲರಿನ

ಹುಡುಗಿ ಬಂದು

ಉದ್ದ ಮೊಗ್ಗಿನ ಜಡೆಯ ಪಿನ್ನು

ಒಂದೊಂದೇ ಕಳಚುವಾಗ..

ಇವೆಲ್ಲ ಚಿತ್ರಗಳ ಚಲನೆ ಒಂದು ಸಂಯುಕ್ತವಾದ ಆವರಣದ ಕಡೆಗೇ ಇದೆ. ಕಾಲೇಜಿಗೆ ಹೋಗುವವರ ಎದುರು ಶಾಲೆಗೆ ಹೋಗದೆ ಬೆಟ್ಟಕ್ಕೆ ಹೋಗುವವರು ಇದ್ದಾರೆ, ಬೋಳು ಮರದ ಒಂಟಿ ಮುತ್ತುಗದ ಹೂವಿನ ಎದುರು ಅಂಗಳದ ಮಲ್ಲಿಗೆ ಇದೆ, ಎ.ಸಿ, ಪರಫ್ಯೂಮಿನ ಎದುರು ಟ್ರಿಮ್ ಮಾಡದ ಹುಬ್ಬು, ತಾಜಾ ಬೆವರು ಇದೆ. ಇಂಥಲ್ಲಿ ಸುಲಭವಾಗಿ ಒಂದು ಬಾಗುವನ್ನು ಸರಳವಾದ ರಾಜಕೀಯ ಸಮರ್ಪಕತೆಯಲ್ಲಿ ಎತ್ತಿ ಮೆರೆಸಿಬಿಡಬಹುದು. ಆದರೆ ರೇಣುಕಾ ಅಂಥ ಪಡಿಯಚ್ಚಿನ ನಿಲುವಿಗೆ ಹಿಂಜರಿಯುತ್ತಾರೆ. ಅಂಥ ಹಿಂಜರಿಕೆಯಲ್ಲೆ ಅವರ ರಚನೆಗಳ ಸಹಜ ಉಸಿರಾಟವಿದೆ.

“ಈಗೀಗ ನನ್ನಪ್ಪ ಸಿಟ್ಟು ಮಾಡುವುದಿಲ್ಲ”. “ಅವನು” “ಮೀನುಪೇಟೆಯ ತಿರುವು”, “ಅಮ್ಮ ಮತ್ತು ಬೆಕ್ಕು”, “ಅವರಿಗೆ.. ಇವರಿಂದ”, “ಬಾರದವರು”, “ಪೇಪರಿನ ಹುಡುಗ”, “ಭತ್ತ ಬೆಳೆಯುವುದೆಂದರೆ”, “ಮೀನು ಫ್ರೈ” – ಈ ಕವಿತೆಗಳು ಗೆದ್ದಿರುವುದೇ ತಮ್ಮ ಮುಕ್ತತೆಯಿಂದಾಗಿ. ಸರಳತೆಯಲ್ಲೇ ಸಾಧಿಸಿದ ತೀವ್ರತೆಯಿಂದಾಗಿ. ರೈತಾಪಿ ಸರಳ ಮನೆವಾರ್ತೆಯ ವಿವರಗಳು ಮೆಲ್ಲಗೆ ಒಂದು ಜೀವನ ಮೌಲ್ಯವಾಗಿ ಬಿಡುವಷ್ಟು ಅಪ್ಪಟವಾದ ಪಾರದರ್ಶಕವಾದ ರಚನೆಗಳು ಇವು. ನಾನು ಯಾವುದೇ ಸಂಕಲನ ಓದುವಾಗ, ಆ ಕವಿ ಮಾತ್ರ ಬರೆಯಬಹುದಾದ ರಚನೆಗಳಿಗೆ ಮಾತ್ರ ಆಕರ್ಷಿತನಾಗುತ್ತೇನೆ.

ಯಾರೂ ಬರೆಯಬಹುದಾದ್ದನ್ನು ಯಾರಾದರು ಯಾಕೆ ಬರೆಯಬೇಕು. ಅಂಥ ಐದಾರು ರಚನೆಗಳು ಸಿಕ್ಕರೂ ಹೊಸ ಒಕ್ಕಣಿಕೆಯೊಂದು ಸಿಕ್ಕಂಥ ಸಂಭ್ರಮವಾಗುತ್ತದೆ. ಈ ಸಂಕಲನದಲ್ಲಿ ಮೇಲೆ ನಮೂದಿಸಿದ ಕವಿತೆಗಳನ್ನೊಳಗೊಂಡು, ಅರ್ಧಕ್ಕಿಂತ ಹೆಚ್ಚು ಅಂಥ ಸ್ವಂತ ಒಕ್ಕಣಿಕೆಯ ಕವಿತೆಗಳಿವೆ. ‘ಗರ್ವ’, ‘ಮೌನ ತಂಗಿದ ಹೊತ್ತು’, ‘ಮಾಗಿಯಲ್ಲೊಂದು ಹಾಡು’, ‘ಕಾವಳದೊಂದಿಗಿನ ಮೌನ ಕಾವ್ಯ’, ‘ಸ್ತಭ್ದ ಚಿತ್ರಗಳು’, ‘ಇರಬಹುದು’, ‘ಇವಳು ನನ್ನವ್ವ’.. ಇವೆಲ್ಲಾ ಆ ಪೈಕಿಗೆ ಸೇರಿದವೇ.

ಸಣ್ಣ ಉತ್ತರ ಕನ್ನಡದ, ಅಂಕೋಲೆ ಸೀಮೆಯ ಮಿಸಳ್ ಬಾಜಿ ಸೊಲ್ಲುಗಳು ಇಲ್ಲಿಯ ಹವಣಿಕೆಗಳ ರುಚಿಯನ್ನು ಹೆಚ್ಚಿಸಿವೆ. “ಫಸಗಿ ಬೀಳುವ ಹುನ್ನಾರು ದಾರಿ”, “ಆಂಖ್ ಮಿಚೋಲಿ”, “ದೇಖರೇಖಿಯ ಹಿಲಾಲು”, “ಮಾಧುರ್ಯದ ಮಖಮಲ್ಲು”, “ಬಿಕರಿಗೆ ಸಿದ್ದವಾಗಿ ಆಖೈರಾಗಿ ನಿಂತವರು”, “ಬಿಲ್ ಕುಲ್”, “ಅಜಿಬಾತ್”, “ಹುಕಿ”, “ಮುಲಾಖಾತ್”..ಇತ್ಯಾದಿ.

ತನ್ನ ಆವರಣದೊಂದಿಗೆ ಮಾತನಾಡುವುದನ್ನೇ ತಮ್ಮ ಭಿತ್ತಿಯಾಗಿಸಿಗೊಂಡಿರುವ ಈ ರಚನೆಗಳು ಬಸ್ ಸ್ಟ್ಯಾಂಡಿನ ಗೌಜಿಯಲ್ಲೂ ಒಮ್ಮೊಮ್ಮೆ ಹಠಾತ್ ಅನಿಯೋಜಿತ ಮೌನವೊಂದು ಕವಿಯುವಂತೆ ಅಲ್ಲಲ್ಲಿ ಮೌನ ತಾಳುವುದುಂಟು.

ಏನಿದೇನೆ ಗೆಳತಿ

ಹುಚ್ಚಾದ ಹೊಸತನ

ಹಿಂಜಿ ಬಿಡಿಸಿ ಹರಡಿದ ನವಿರು

ಹತ್ತಿಯಂತಾಗಿದೆ ಮನ

 

ಎದೆಯ ಸೊಡರಿನ ತುಂಬ

ಒಲುಮೆ ತೈಲವ ತುಂಬಿ

ಜ್ಯೋತಿ ಜನಿಸುವ ತನಕ

ಕಾತರಿಸಿದಿರೆ ಗೆಳತಿ

ಪ್ರಕಟವಾಗುವವರೆಗೆ ಕೊಂಚ ನಿಲ್ಲು

 

ಮೌನ ತಂಗಿದ ಹೊತ್ತು

ಮಾತನೆಬ್ಬಿಸಬೇಡ

ತಂಪು ಪಡೆಯಲಿ ಮನವು

ಕೊಂಚ ಹೊತ್ತು

ಇವರ, “ಕಾವಳದೊಂದಿಗಿನ ಮೌನ ಕಾವ್ಯ” ತುಂಬ ವಿಶೇಷ ಅನುಭೂತಿಯನ್ನು ಉದ್ದೀಪಿಸುವ ವಿಭಿನ್ನ ರಚನೆಯಾಗಿದೆ. ಮೌನವನ್ನೇ ಬೇರೆ ಬೇರೆ ಹತಾರುಗಳಿಂದ ಶ್ರುತಿ ಮಾಡಿದಂತಿದೆ. ದೋಚಲ್ಪಟ್ಟ ಮನೆಯೊಂದರ, “ಖಾಲಿ ಕಪಾಟುಗಳ, ತೆರೆದೇ ಇರುವ ಕದಗಳ, ಕರ್ಣಕಠೋರ”, ನೀರವ ಎದೆ ಝಲ್ಲೆನಿಸುವಂತಿದೆ. ಚೂರು ಮಾತು ಕಮ್ಮಿಯಾಗಿದ್ದರೆ ಈ ನೀರವ ಇನ್ನೂ ಬತ್ತಲಾಗಬಹುದಿತ್ತು, ಆಳವಾಗಬಹುದಿತ್ತು.

ಒಂದು ದೃಷ್ಟಿಯಿಂದ ನೋಡಿದರೆ ರೇಣುಕಾರ ಒಳ್ಳೆಯ ರಚನೆಗಳ ಚಲನಶೀಲವಾದ “ಸ್ತಭ್ದ ಚಿತ್ರಗಳೇ”. ಕವಿತೆ ಅನ್ನೋದು ಕನ್ನಡಿ ಹೌದು. ಆದರೆ ಅದು ಮೆಲ್ಲಗೆ ಕಿಟಕಿಯಾಗಬೇಕು. ಇಲ್ಲವಾದರೆ ಕವಿ ಕನ್ನಡಿಯಲ್ಲಿ ತನ್ನ ಮುಖವನ್ನೇ ನೋಡಿಕೊಳ್ಳುತ್ತಾ ಕೂತು ಬಿಡಬಹದು. ಸ್ವಲ್ಪ ಪ್ರಯತ್ನಪಟ್ಟರೆ ಕವಿಗೆ ತನ್ನ ಹಿಂದೆ, ಅಕ್ಕಪಕ್ಕ ನಿಂತವರೂ ಕಾಣ ತೊಡಗುವರು.

ಹೇಳಿ ಕೇಳಿ ಸೆಲ್ಫೀ ಯುಗ! ಆದರೆ ಕನ್ನಡಿಯೊಂದು ಮೆಲ್ಲಗೆ ಕಿಟಿಕಿಯಾಗುವ ಲಕ್ಷಣಗಳೆಲ್ಲ ಇಲ್ಲಿವೆ. ಅಳಿವಿನ ಅಂಚಿನಲ್ಲಿರುವ ‘ಸಾಮಾಜಿಕ ಕೌಟುಂಬಿಕತೆ’ಯ ಸೊಲ್ಲುಗಳು ಇಲ್ಲಿವೆ. ಇದಕ್ಕೆ ಮೂಲ ಕಾರಣ ರೇಣುಕಾರ ಅದಮ್ಯ ಉಮೇದಿಯೇ ಆಗಿದೆ. ‘ಒಳಪ್ಯಾಡ್ಲಿ’ನಿಂದ ಮೆಲ್ಲಗೆ ಸೀಟಿಗೇರುತ್ತಿರುವ ಇವರ ಕಾವ್ಯ ಪಯಣದ ಉಮೇದಿಗೆ ಹೊಸ ಹೊಸ ತಿರುವುಗಳನ್ನು, ಸೇತುವೆಗಳನ್ನು, ಘಟ್ಟಗಳನ್ನು ಹಾರೈಸುತ್ತೇನೆ.

 

1 Response

  1. Lalitha siddabasavayya says:

    ಅಭಿನಂದನೆಗಳು ರೇಣುಕಾ , ನಿಮ್ಮಿಂದ ಅನೇಕ ಹೊಸತನದ ಕವನಗಳು ಕನ್ನಡಕ್ಕೆ ಸೇರ್ಪಡೆಯಾಗಲಿ.

Leave a Reply

%d bloggers like this: