ಸಮೀಕ್ಷೆ ಎಂಬ ಕುರುಡ ಮುಟ್ಟಿದ ಆನೆಯ ಕಥೆ!

ಎನ್.ರವಿಕುಮಾರ್ / ಶಿವಮೊಗ್ಗ

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೆ ಬಕಪಕ್ಷಿಗಳಂತೆ ಕಾದು ಕುಳಿತಿದ್ದ ನಮ್ಮ ಮಾಧ್ಯಮದ ಮಂದಿಗಳು ಎಕ್ಸಿಟ್‍ ಪೋಲ್ ಎಂಬ ಬಹುತೇಕ ಪ್ರಾಯೋಜಿತ ಸ್ಕ್ರಿಪ್ಟ್ ಹಿಡಿದುಕೊಂಡು ಗದ್ದಲವೆಬ್ಬಿಸತೊಡಗಿದ್ದಾರೆ.

ನಾನು ಟಿವಿಯ ರಿಮೋಟ್ ಗುಂಡಿ ಒತ್ತುತ್ತಾ ಚಾನಲ್ ಗಳನ್ನು ತಿರುವು ಹಾಕುತ್ತಾ ಕುಳಿತೆ. ಈ ಎಕ್ಸಿಟ್‍ಪೋಲ್ ಎಂಬುದನ್ನು ಕುರುಡುನೊಬ್ಬ ಆನೆಯೊಂದನ್ನು ಮುಟ್ಟಿ ಮುಟ್ಟಿ ವರ್ಣಿಸುವಂತೆ ನನಗೆ ಕಾಣಿಸತೊಡಗಿತ್ತು.

ಹಾಗಂತ ಈ ಮತಸಮೀಕ್ಷೆಯನ್ನು ಸಾರಾಸಗಟಾಗಿ ತಳ್ಳಿಹಾಕಲಾರೆ. ಆದರೆ ಈ ಚುನಾವಣೋತ್ತರ ಮತಸಮೀಕ್ಷೆ ಎಂಬುದು ಮಾಧ್ಯಮ ಕ್ಷೇತ್ರದ ದಂಧೆಯ ಭಾಗವಾಗಿ ಹೋಗಿರುವುದರಿಂದ ಅದನ್ನು ನಾನು ಅನುಮಾನದಿಂದ ನೋಡಲೇ ಬೇಕಾಗಿದೆ.

ನಾನು ಆಗಷ್ಟೆ ಓಟು ಹಾಕಿ ಮತಗಟ್ಟೆಯಿಂದ ಹೊರ ಬರುವಾಗ ನಾನೂ ಒಂದು ‘ಎಕ್ಸಿಟ್‍ ಪೋಲ್’ ಮಾಡುವ ಉತ್ಸಾಹದಲ್ಲಿ ಮತ ಹಾಕಿ ಮೆತ್ತಗೆ ಕಾಲಾಕುತ್ತಿದ್ದ ಹಿರಿಯರೊಬ್ಬರನ್ನು ಮಾತಿಗೆಳೆದೆ.

‘ ಏನು ಸ್ವಾಮಿ ಓಟಾಕಿದ್ರಾ,?’,
‘ಹ್ಞೂಂ ಸಾಮಿ, ಹಾಕ್ ಬಂದೆ.’
‘ಯಾರಿಗಾಕಿದ್ರಿ?’
‘ಯಾರಿಗೊ ಒಬ್ರಿಗೆ ಹಾಕಿ ಬಂದೆ ಬಿಡ್ರಿ ಸಾಮಿ, ಯಾರ್ ಬಂದ್ರೂ ನಮ್ ಪರ್ದಾಟ ತಪ್ಪಾಕಿಲ್ಲ.’
‘ಮತ್ಯಾಕೆ ಓಟು ಹಾಕಿದ್ರಿ ?’
‘ಅದು ನಮ್ ಧರ್ಮ ಸಾಮಿ, ಮೊದ್ಲಿಂದಲೂ ಹಾಕೊಂಡ್ ಬತ್ವೀನಿ’
‘ಯಾವ ಪಕ್ಷಕ್ಕಾಕಿದ್ರಿ?’
‘ಅಯ್ಯೋ ಯಾವ್ದೋ ಒಂದು ಪಕ್ಷಕ್ಕೆ ಹಾಕಿದ್ವಿ ಬುಡಿ, ಹಂಗೆಲ್ಲಾ ಹೇಳಾಂಗಿಲ್ಲ.’

ನನ್ನ ಕಸರತ್ತು ವ್ಯರ್ಥವಾಯಿತು. ಏನೇ ಪೂಸಿ ಹೊಡೆದರೂ ಕೊನೆಗೂ ಅಜ್ಜ ಗುಟ್ಟು ಬಿಟ್ಟು ಕೊಡಲಿಲ್ಲ.

ಅದೇ ಸಮಯದಲ್ಲಿ ಮೊದಲ ಬಾರಿಗೆ ಓಟು ಹಾಕಿದ ಒಂದು ಯುವಕರ ದಂಡು ಅಲ್ಲೆ ದಾರಿ ಮಗ್ಗಲಲ್ಲಿ ನಿಂತು ಬೆರಳು ನೋಡಿಕೊಳ್ಳುತ್ತಾ, ಸೆಲ್ಫಿಗೆ ಒಡ್ಡುತ್ತಾ ಕೇಕೆ ಹಾಕುತ್ತಿತ್ತು. ಹಾಗೆಯೇ.. ಆ ದಂಡಿನ ಮಗ್ಗಲಲ್ಲೆ ನಿಂತು ಕೊಂಡು ಅವರ ಮಾತುಗಳಿಗೆ ಕಿವಿಗೊಟ್ಟೆ.

ಅವರ ಮಾತುಗಳಲ್ಲಿ ಮತದಾನ ಒಂದು ಷೋಕಿಯಾಗಿತ್ತು. ಯಾವುದೋ ಒಂದು ರಾಜಕೀಯ ಸನ್ನಿಗೆ ತುತ್ತಾಗಿ ನರಳುವಂತೆ ಕಾಣುತ್ತಿತ್ತು. ಅವರ ಮತದಾನ ನಾನು ಮೊದಲು ಮಾತನಾಡಿಸಿದ ಅನಕ್ಷರಸ್ಥ ಅಜ್ಜನ ಮತದಷ್ಟು ಗುಪ್ತವಾಗಿ, ಬದ್ಧತೆಯಿಂದ ಉಳಿದಿರಲಿಲ್ಲ ಎಂಬುದು ಖಾತರಿಯಾಯಿತು.

ಇಂತಹ ಅವಕಾಶಗಳನ್ನೆ ಗುರುತು ಮಾಡಿಕೊಳ್ಳುವ ಎಕ್ಸಿಟ್‍ಪೊಲ್‍ಗಳು ‘ಮತ ಗೌಪ್ಯತೆ’ ಎಂಬ ಸಂವಿಧಾನ ವಿಧಿತವನ್ನು ಪ್ರಜ್ಞಾಪೂರ್ವಕವಾಗಿ ಉಲ್ಲಂಘಿಸುತ್ತಿವೆ. ಮತ್ತು ಅದೊಂದು ದುಡಿಮೆಯ ಮಾರ್ಗವೂ. ರಾಜಕೀಯ ಕುತಂತ್ರಗಳ ಭಾಗವೂ ಆಗಿ ಮತಸಮೂಹದ ಬದ್ಧತೆಯನ್ನು ಪ್ರಶ್ನಿಸುವ ಜನವಿರೋಧಿ ಕ್ರಮವೂ ಆಗಿದೆ.

ಕರ್ನಾಟಕದ ಚುನಾವಣೋತ್ತರ ಮತ ಸಮೀಕ್ಷೆಯಲ್ಲಿ ಬಿಜೆಪಿಯ ಮುನ್ನಡೆಯನ್ನು ತೋರಲಾಗುತ್ತಿದೆ. ಕೆಲವು ವಾಹಿನಿಗಳು ಕಾಂಗ್ರೆಸ್ ನ್ನು ಅಧಿಕಾರದ ಅಂಚಿಗೆ ತಂದು ನಿಲ್ಲಿಸಿವೆ. ಆಡಳಿತರೂಢ ಕಾಂಗ್ರೆಸ್ ನ ವಿರೋಧಿ ಅಲೆ ಕಾಣದೆ ಇದ್ದಾಗ ಈ ಪ್ರಮಾಣದಲ್ಲಿ ಅದಕ್ಕೆ ಹಿನ್ನಡೆಯಾಗಲು ಕಾರಣವನ್ನು ಮಾತ್ರ ಸಮೀಕ್ಷೆಗಳು ಬಹಿರಂಗಪಡಿಸುತ್ತಿಲ್ಲ.

ಬಿಜೆಪಿಗೆ ಪ್ರಧಾನಿ ಮೋದಿ ಅವರ ಮೇನಿಯ ಬಲತಂದು ಕೊಡುವುದೇ ಆದರೆ ಕಾಂಗ್ರೆಸ್ ನ ಬಲ ಕುಸಿಯಲು ಇದ್ದ ಕಾರಣಗಳನ್ನು ಸಮೀಕ್ಷೆಗಳು ಜನರ ಮುಂದಿಡಬೇಕು. ಇಲ್ಲಿ ಅದಾಗುತ್ತಿಲ್ಲ. ಬಿಜೆಪಿಯನ್ನು ಮುನ್ನಡೆಗೆ ತಂದು ಮೋದಿಯನ್ನು ಸಂತೃಪ್ತಿಗೊಳಿಸುವ ಕೆಲಸ ಫಲಿತಾಂಶ ಪ್ರಕಟಣೆಗೆ ಮುಂಚೆಯೇ ಮಾಡಲಾಗುತ್ತಿದೆಯಾ?.

ಹಾಗೊಮ್ಮೆ ಪ್ರಾಯೋಜಿತ ಸಮೀಕ್ಷೆಗಳಂತೆ ಬಿಜೆಪಿ ಬಲಗೊಂಡರೆ ಅದು ಮೋದಿಯ ಪ್ರಭಾವವನ್ನಾಗಿಸುವ ಅಥವಾ ಹಿನ್ನಡೆಯಾದರೆ ಯಡಿಯೂರಪ್ಪ ಅವರ ತಲೆಗೆ ಕಟ್ಟುವ ಒಳಸಂಚು ಇದರಲ್ಲಿದೆಯಾ? ಎಂಬುದು ಬಯಲಾಗಲು ಕೆಲವೇ ಗಂಟೆಗಳು ಬಾಕಿ ಇವೆ.

ಮತಗಟ್ಟೆಯ ಸಮೀಕ್ಷೆಯಿಂದಲೇ ಸರ್ಕಾರ ರಚನೆ ಆಗಿಬಿಡುತ್ತದೆಯೇ? ರಾಜ್ಯ ವಿಧಾನ ಸಭೆ ಚುನಾವಣೆಗೆ ಮತದಾನ ನಡೆದ ನಂತರ ರಾಷ್ಟ್ರೀಯ ವಾಹಿನಿಗಳು ಸೇರಿದಂತೆ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಅತಂತ್ರ ವಿಧಾನಸಭೆಯ ಜಪ ನಡೆದಿದೆ.ಅದು ಎಂತಹ ನಿಶ್ಚಲ ನಿರ್ಧಾರ ಹೊಂದಿದವರ ಎದೆಯನ್ನೇ ನಡುಗಿಸಿ ಬಿಟ್ಟಿದೆ.

ಈವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೇ ಮುಖ್ಯಮಂತ್ರಿ ಅನ್ನುತ್ತಿದ್ದವರು ದಲಿತ ಮುಖ್ಯಮಂತ್ರಿ ಆಗುವುದಾರೆ ತಾವು ಸ್ಥಾನ ಬಿಟ್ಟುಕೊಡುವ ಮಾತನ್ನು ಚುನಾವಣೋತ್ತರ ಹೇಳಿದ್ದಾರೆ. ಈ ಮೊದಲು ತಾನೂ ದಲಿತ ಎಂದು ಹೇಳಿದವರು ಮತದಾನದ ಮರುದಿನವೇ ಮನಪರಿವರ್ತನೆಗೆ ನಡೆದ ಪವಾಡವಾದರೂ ಏನು?

ಅದಕ್ಕೆ ಇದೇ ಸಮೀಕ್ಷಾ ವರದಿಗಳೇ ಒಂದೆಡೆ ಕಾರಣವಾಗುತ್ತವೆ. ಹೇಗೂ ಜಿಡಿಎಸ್ ಬೆಂಬಲದಿಂದ ತಾವು ಸಿಎಂ ಆಗುವುದಿಲ್ಲ ಅದಕ್ಕೆ ದಲಿತ ಟ್ರಂಪ್ ಕಾರ್ಡ್ ತೇಲಿಬಿಟ್ಟರೆ ಕ್ಷೇಮ ಎನ್ನುವುದು ಅವರ ಲೆಕ್ಕಾಚಾರ. ನಿಚ್ಚಳ ಬಹುಮತ ಬಂದಿದ್ದೇ ಆದರೆ ಯಾವ ಕಾರಣಕ್ಕೂ ಸಿಎಂ ಸ್ಥಾನ ತ್ಯಜಿಸಲಾರರು.

ಬಿಹಾರ, ಗೋವಾದಲ್ಲಿ ಬಿಜೆಪಿ ಆಟ ನೋಡಿದರೆ ಅವರೂ ಸಮ್ಮಿಶ್ರ ಸರ್ಕಾರಕ್ಕೆ ಯಾವ ಬೆಲೆಯನ್ನಾದರೂ ತೆರಲು ಸಿದ್ಧರಿದ್ದಾರೆ. ಇದೇ ಸಂದರ್ಭದಲ್ಲಿ ವಿಶ್ರಾಂತಿಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಂಗಾಪುರಕ್ಕೆ ಹೋಗಿರುವುದೂ ಕೂಡ ರಾಜಕೀಯ ನಡೆ. ಇದೇ ಸಮೀಕ್ಷಾ ಚರ್ಚೆಗಳ ಅನುಸಾರ ಕುಮಾರಸ್ವಾಮಿ ಕಿಂಗ್ ಮೇಕರ್..ಯಾವುದೇ ಸರ್ಕಾರ ಬಂದರೂ ತಮ್ಮದೇ ಪ್ರಮುಖ ಪಾತ್ರ . ಅದಕ್ಕೆ ಯಾರ ಸಂಪರ್ಕವೂ ಇಲ್ಲದೆ ತಮ್ಮದೇ ರಾಜಕೀಯ ಚಕ್ರವ್ಯೂಹ ಹೆಣೆಯಲು ಅಲ್ಲಿಗೆ ಹೋಗಿದ್ದಾರೆ ಎನ್ನಿಸುತ್ತದೆ. ಎರಡು ದಿನದ ವಿಶ್ರಾಂತಿಗೆ ಅಷ್ಟು ದೂರ ಹೋಗುವ ಅಗತ್ಯ ಸೃಷ್ಟಿಸಿದ್ದು ಇದೇ ಸಮೀಕ್ಷೆಗಳೆ.

ನನ್ನ ಕ್ಷೇತ್ರಕಾರ್ಯ, ಸುತ್ತಾಟದ ಅನುಸಾರ ಕಾಂಗ್ರೆಸ್ ಸರಳ ಬಹುಮತ ಗಳಿಸುತ್ತದೆ ಎನ್ನುವುದಾಗಿತ್ತು. ಆದರೆ ಈ ಸಮೀಕ್ಷೆ ಬೇರೆಯೇ ಹೇಳುತ್ತಿವೆ ಅಂದರೆ ಅದು ಎಷ್ಟು ಸತ್ಯದಿಂದ ಕೂಡಿರಲು ಸಾಧ್ಯ ಎನ್ನುವ ಪ್ರಶ್ನೆ ಕಾಡುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಗುಪ್ತ ಮತದಾನ ಹೇಗೆ ತಾನೆ ನಿಖರತೆಯನ್ನು ಹೇಳಲು ಸಾಧ್ಯ.

ನನಗೆ ನನ್ನ ಪತ್ನಿ ಯಾವ ಪಕ್ಷಕ್ಕೇ ವೋಟು ಹಾಕಿದ್ದಾರೆ ಎನ್ನುವುದು ಖಚಿತವಾಗಿ ಖಂಡಿತ ಗೊತ್ತಿಲ್ಲ. ಅಂದ ಮೇಲೆ ಜನರ ಮುಂದಿಡುವ ಪ್ರಶ್ನಾವಳಿ ಹಾವಭಾವಗಳೆ ರಾಜಕೀಯ ದಿಕ್ಸೂಚಿ ಆಗಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಇಂದಿನ ನಡೆ ಯಡಿಯೂರಪ್ಪ ಅವರ ಕಳಾಹೀನ ಮುಖಭಾವ ಸಮೀಕ್ಷೆ ನಡುಕವನ್ನು ಹುಟ್ಟಿಸಿದೆ.

ಖಂಡಿತಾ ಸಮೀಕ್ಷೆ ಸತ್ಯ ಆಗಲಾರದು ಎನ್ನುವು ಖಚಿತವಾದ ನಿಲುವು ನನ್ನದು. ಅದಕ್ಕೆ ಕಾರಣ ಹಲವು. ಬಿಜೆಪಿ ಕೂಡ ಸಮ್ಮಿಶ್ರ ಸರ್ಕಾರಕ್ಕೆ ತಾನೂ ಸಿದ್ಧ ಎನ್ನುವ ನಿಲುವನ್ನು ತಾಳಿದೆ.

ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವ ನಿರ್ಧಾರ ಪಕ್ಷದ ಹೈಕಮಾಂಡ್ ತೀರ್ಮಾನಿಸಿದರೆ ಅದಕ್ಕೆ ನನ್ನ ವಿರೋಧವಿಲ್ಲ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯವರು ತಮ್ಮ ರಾಜಕೀಯ ನಿಲುವನ್ನು ಮುಕ್ತವಾಗಿರಿಸಿಕೊಂಡಿದ್ದೇ ಆದರೆ ಇದೊಂದು ಸಂತೋಷದ ವಿಷಯ.

ಇದೇ ಮಾತನ್ನು ಸಿದ್ದರಾಮಯ್ಯ ಅವರು ಚುನಾವಣಾ ಕಾಲದಲ್ಲೇ ಹೇಳಿದ್ದಿದ್ದರೆ ಬಹುಶಃ ಅದರ ಪಲಿತಾಂಶ ಬೇರೆಯದ್ದೇ ಆಗಿರುತ್ತಿತ್ತು. ಬಿಜೆಪಿ ತಾನು ಅಧಿಕಾರಕ್ಕೆ ಬಂದರೆ ದಲಿತ ಶ್ರೀರಾಮುಲು ಅವರನ್ನು ಡಿಸಿಎಂ ಮಾಡುತ್ತೇನೆ ಎಂದು ಹೇಳಿತ್ತು. (ಆದರೆ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಯಡಿಯೂರಪ್ಪ ಮೇ.10 ಹೇಳಿದ್ದಾರೆ) , ಮತ್ತೊಂದೆಡೆ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ದಲಿತ ಮತಗಳ ಸೆಳೆಯಲು ಹೊರಟಿದ್ದ ಜೆಡಿಎಸ್ ತಾಕತ್ತಿದ್ದರೆ ಕಾಂಗ್ರೆಸ್ ದಲಿತರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲು ಕೂಡ ಹಾಕಿತ್ತು.

ಇದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಹೊಡೆದ ಕಲ್ಲು . ಸಿದ್ದರಾಮಯ್ಯ ಅವರು ದಲಿತರಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿದ್ದಾರೆ ನಿಜ, ಕುಮಾರಸ್ವಾಮಿ ಎಸೆದ ಸವಾಲಿಗೆ ಎದುರಾಗಿ ಇವತ್ತು ಆಡಿದ ಮಾತನ್ನೆ ಅವತ್ತು ಆಡಿಬಿಟ್ಟಿದ್ದರೆ ಬಿಎಸ್ಪಿ ಯ ಕಾರಣಕ್ಕಾಗಿ ದಲಿತ ಮತಗಳ ಬಲದಲ್ಲಿದ್ದ ಜೆಡಿಎಸ್ ಸ್ಥಿತಿ ಇನ್ನಷ್ಟು ಧಾರುಣವಾಗುತ್ತಿತ್ತು. ಮತ್ತು ಕಾಂಗ್ರೆಸ್‍ಗೆ ದಲಿತ ಮತಗಳ ಹರಿವಿನ ಪ್ರಮಾಣ ಹೆಚ್ಚಳವಾಗುತ್ತಿತ್ತು. ಅದೇ ಕಾಲಕ್ಕೆ ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಕೂಡ ಗೌರವಿಸಲ್ಪಡುತ್ತಿತ್ತು.

ದಲಿತರ ರಾಜಕೀಯ ಐಡೆಂಟಿಟಿ ಎಲ್ಲಾ ಕಾಲದಲ್ಲೂ ರಾಜಕೀಯ ಪಕ್ಷಗಳ ಕಾಲಾಳುಗಳಾಗಿಯೇ ಬಂದಿದೆ. ಕಾಂಗ್ರೆಸ್ ದಲಿತರನ್ನು ಓಟು ಬ್ಯಾಂಕ್ ಆಗಿ ಬಳಸಿಕೊಂಡಿದ್ದು ಬಿಟ್ಟರೆ ಅವರಿಗೆ ಮುಖ್ಯಮಂತ್ರಿ ಪಟ್ಟಕೊಡುವ ಬಗ್ಗೆ ಬದ್ದತೆಯನ್ನು ಎಂದಿಗೂ ತೋರಿದ್ದಿಲ್ಲ.

1999 ರ ವೇಳೆಗೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಪಟ್ಟಕ್ಕೆ ಅರ್ಹರಾಗಿದ್ದರು. ಅವರ ಹೆಸರೂ ಮಾತಿಗೂ ಪ್ರಸ್ತಾಪವಾಗಲಿಲ್ಲ. 2008 ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪೋಕಸ್ ಮಾಡಲಾಗಿತ್ತಾದರೂ ಅದು ಕಾಂಗ್ರೆಸ್ ಪಾಲಿಗೆ ಉಪವಾಸದ ಕಾಲವೇ ಆಗಿತ್ತು. 2013 ರಲ್ಲಿ ಸಿದ್ದರಾಮಯ್ಯ ಅವರು ಅನಾಯಸವಾಗಿ ಅಧಿಕಾರಕ್ಕೆ ಬಂದರು ನಿಜ. ಆ ಮೂಲಕ ಹಿಂದುಳಿದ ವರ್ಗಕ್ಕೆ ಮತ್ತೊಮ್ಮೆ ಅಧಿಕಾರ ದಕ್ಕಿದಂತಾಯಿತು ಇದು ಸಂತೋಷದ ವಿಷಯವೇ.

ಆದರೆ ಸಾಮಾಜಿಕ ನ್ಯಾಯದ ಸರತಿ ಸಾಲಿನಲ್ಲಿ ನಿಂತ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ದಕ್ಕುವುದಾದರೂ ಯಾವಾಗ ಎಂಬ ಪ್ರಶ್ನೆ ಎಲ್ಲಾ ಕಾಲಕ್ಕೂ ಕಾಡುತ್ತಿದೆ.

ಸಿದ್ದರಾಮಯ್ಯ ಕೂಡ ದಲಿತ ಮುಖ್ಯಮಂತ್ರಿ ಎನ್ನುವ ಮೂಲಕ ಪಕ್ಷದಲ್ಲಿ ತಮ್ಮಹಿಂದುಳಿದ ನಾಯಕತ್ವದ ಪ್ರಾಮುಖ್ಯತೆ ಉಳಿಸಿಕೊಂಡು ಮತ್ತೊಬ್ಬ ಹಿಂದುಳಿದ ನಾಯಕ ಮುನ್ನಲೆಗೆ ಬರದಂತೆ ನೋಡುವುದೂ ಅದೇ ಸಮೀಕ್ಷೆಯ ಫಲ.

1 Response

  1. Prabhakar says:

    ಒಳ್ಳೆಯ ಬರಹ
    ಪ್ರಭಾಕರ
    ಕನ್ನಡ ವಿವಿ

Leave a Reply

%d bloggers like this: