ಕತ್ತೆತ್ತಿದರೆ  ಮೊಳೆ ಜೋರಾಗಿ ನಕ್ಕಂತಾಯಿತು..

ಗೀತಾ ಹೆಗ್ಡೆ ಕಲ್ಮನೆ 

ತೂಗಾಕಿದ ತಂತಿಗೆ ನೇತಾಡುವ ಬಾವಲಿಯಂತೆ
ತಗಲ್ಹಾಕಿದ ಪೇಪರ್ ಕಟಿಂಗ್
ಉಂಡೊಟ್ಟೆ ಗುಡಾಣದಂತೆ ತುಂಬಿ
ಇನ್ನೇನು ಹೆರಿಗೆಗೆ ಹತ್ತಿರವಾದ ಹೆಣ್ಣಂತೆ,
ಈಗಲೋ ಆಗಲೋ ಎಂಬ ಹಂತಕ್ಕೆ ಬಂದು ತಲುಪಿದ ಮೂಲೆಯ ಮೊಳೆ
‘ ನನ್ನ ಕೈ ಸೋಲುತ್ತಿದೆ ನೋಡೇ ‘ಅಂದಾಂಗಾಯಿತು.

ಬೆಳಂಬೆಳಗ್ಗೆ ಪಿಸು ಮಾತು
ಪಿಂಡಿ ಕಣ್ಣಿಗೆ ಬಿದ್ದಿದ್ದೇ ತಡ
ನೆನಪಿಲ್ಲದ ಮನಕ್ಕೆ ಅನಿಸಿದ್ದು
ಅವುಗಳನ್ನು ಒಂದೊಂದೇ ಮೇಲೆತ್ತಿ ಕಣ್ಣಗಲಿಸಿ ಸವರಿದಾಗ
“ಪಿಚ್ಚಾ” ಇದೆಲ್ಲಾ ಯಾಕೆ ಸಂಗ್ರಹಿಸಿಟ್ಟೆ?

ಒಂದಷ್ಟು ಥರಾವರಿ ಅದೂ ಇದೂ ಅಡುಗೆ ಮಾಡುವ ಬಗೆಗಳು
ಮೇಕಪ್ಪು ಟಿಪ್ಸುಗಳು
ರಂಗೋಲಿ ಚಿತ್ರಗಳು
ಟೆರೇಸ್ ಗಾರ್ಡನ್ ಪಟಗಳು
ನಾಯಿ ಬೆಕ್ಕು ಸಾಕುವ ಬಗೆಗಳು
ರೋಗ ರುಜಿನಗಳ ಮುಂದಾಲೋಚನೆಗಳು
‘ ಬಚ್ಚಲಿಂದ ಅಂಗಳದ ತುದಿವರೆಗೂ ತಗಳಿ ಕ್ಲೀನ್ ಮಾಡ್ಕಳಿ ‘
ಎಂದೋ ಯಾರೋ ಉತ್ಪಾಧಿಸಿದ ಡೋಂಗೀ ಆಶ್ವಾನೆಗಳ ಅಡ್ವಟೈಸ್ಮೆಂಟುಗಳು……..

ಅಬ್ಬಾ! ‘ ಇವೆಲ್ಲ ಹೇರ್ಕಟ್ ಮಾಡಿ ಸಿಕ್ಕಿಸಲು ಎಷ್ಟು ಸಮಯ ಹಾಳಾಗಿರಲಿಕ್ಕಿಲ್ಲ?’
ಆಗಲೇ ಒಳ ಮನಸ್ಸಿನ ಲೆಕ್ಕಾಚಾರ ಶುರು.

ಅದು ಹಾಗೆ ಹಿಂತಿರುಗಿ ನೋಡಿದಾಗ ನಮ್ಮ ಕೆಲಸವೇ ನಮಗೆ ಹಿಡಿಸೋಲ್ಲ!

ತೆಗೆದು ತೆಗೆದು ಬಿಸಾಕುವ ಕಡೆ ಗಮನ
ರದ್ದಿ ಹೊಟ್ಟೆ ತುಂಬಿಸಿಕೊಂಡ ಗುಡಾಣದಂಥ ಚೀಲ ಹೇಳಿತು
‘ ಇನ್ಮೇಲೆ ನಿಂಗ್ಯಾಕಿದೆಲ್ಲಾ ಹೋಗು ಹೇಗಿದ್ರೂ ಆನ್ಲೈನ್ನಲ್ಲಿ ಸಿಗುತ್ತಲ್ವಾ? ‘

ರಪ್ ಎಂದು ಕೆನ್ನೆಗೆ ಭಾರಿಸಿದಂತಾಯಿತು
ಧಿಗ್ಭ್ರಮೆಗೊಂಡೆ ಗಾಬರಿಯಲ್ಲಿ.

ಹುಟ್ಟುವಾಗಲೆ ಮೊಬೈಲ್ ಹಿಡಿದು ಬೆಳೆಯುವ ಹಸುಗೂಸ ಮುಂದೆ
ಕೂಡಿಟ್ಟ ಕಾಸಲ್ಲಿ ಅಜ್ಜಿ
‘ ನೋಡು ಪುಟ್ಟಾ ಜಾತ್ರೆಯಿಂದ ಎನು ತಂದಿದೀನಿ?’
ಊರಗಲ ಮುಖ ಮಾಡಿ ಅಕ್ಕರೆಯಲಿ ತಂದ ಆಟಿಗೆ ಮೊಬೈಲು ಮುಂದಿಡಿದಾಗ
“ಹೋಗಜ್ಜಿ ಇದು ಬುರ್ನಾಸು” ಎಂದಂತೆ!!

ಹೊಸದು ಬಂದಾಗ ಹಳೆಯ ಪಳಯುಳಿಕೆಗಳ ನಿಷ್ಕಷ್ಟವಾಗಿ ಕಾಣುವ ಕೆಟ್ಟ ಮನಸು
ನನಗೇ ತಿರುಗೇಟು ನಿಡಿತ್ತು ತಲೆಬಾಗಿದೆ ತಪ್ಪಿನರಿವಾಗಿ.

ಕತ್ತೆತ್ತಿದರೆ  ಮೊಳೆ ಜೋರಾಗಿ ನನ್ನ ನೋಡಿ ನಕ್ಕಂತಾಯಿತು
ಖಾಲಿ ತಂತಿ ಕೂಡಾ ಸಾಥ್ ನೀಡಿತ್ತು
ಕಂಡವರೆಲ್ಲ ಅಣುಕಿಸುವಂತಾಯಿತಲ್ಲ!

ಸ್ವಾಭಿಮಾನ ಕೆಣಕಿತು ಹೃದಯದಲ್ಲಿ ಸಣ್ಣ ನೋವಿನಲೆ
ಆ ನಗುವಿಗೆ ಸೆಟೆದು ನಿಂತೆ ಬುಸುಗುಡುವ ನಾಗರನಂತೆ.

ಆಸ್ಥೆಯಲಿ ಕೂಡಿಟ್ಟ ಈ ನನ್ನ ಮನಸ್ಸೇ
ಇಂದಿವೆಲ್ಲ ದೂರ ತಳ್ಳಿರುವಾಗ
ಇನ್ನು ಹೊಸ ಯುಗದ ಕಂದಮ್ಮಗಳ ವಾಂಛೆ!

ತುಟಿ ಪಿಟಕ್ ಎನ್ನದೆ ಒಪ್ಪಿ ಅಪ್ಪಿಕೊಳ್ಳಬೇಕೆಂಬ ಜ್ಞಾನ
ಬಲವಾಯಿತು!!

1 Response

Leave a Reply

%d bloggers like this: