ಪ್ರಶಸ್ತಿಯೇ ಬೇಕಾಗಿಲ್ಲ ಎಂದವರನ್ನು ಪ್ರಶಸ್ತಿ ಹುಡುಕಿ ಬಂತು..

ಬಂಡಾಯ ಸಾಹಿತ್ಯ ಜನರ ಕೈಗೆ ಲೇಖನಿ ಕೊಡುವ ತವಕದಲ್ಲಿದ್ದಾಗ ಭಂಡಾರಿ ಅವರು ತಮ್ಮ ಊರಿನಲ್ಲಿ ನಡೆಸುತ್ತಿದ್ದ ಕೆಲಸಗಳು ಅದಾಗಲೇ ಆ ಎಲ್ಲಕ್ಕೂ ನಾಂದಿ ಹಾಡಿತ್ತು. ಬರೆಯಲು ಪ್ರೇರೇಪಿಸಿದ್ದರು, ಪ್ರಶ್ನಿಸಲು ಧೈರ್ಯ ಕೊಟ್ಟಿದ್ದರು. ಕ್ರಮೇಣ ಮನೆಯಿಂದ ಆರಂಭಿಸಿ ಸಮಾಜದಲ್ಲೂ ಇರುವ ಕಟ್ಟು ಕಟ್ಟಲೆಯನ್ನು ದಾಟುವ ಬಗೆ ಎಲ್ಲರಿಗೂ ಹೇಳಿಕೊಟ್ಟಿದ್ದರು.

ಇಲ್ಲಿ ಮಗ ವಿಠ್ಠಲ ಭಂಡಾರಿ ತಾನು ಅಪ್ಪನನ್ನು ಕಂಡ ಬಗೆಯನ್ನು ಬಣ್ಣಿಸಿದ್ದಾನೆ. ಒಂದಷ್ಟು ಕಂತಿನಲ್ಲಿ ಅವರ ಬಗೆಗೆ ಒಂದು ನೋಟವನ್ನು ಕಟ್ಟಿಕೊಡಲು ‘ಅವಧಿ’ ಪ್ರಯತ್ನಿಸುತ್ತದೆ.

ಈ ಹಿಂದೆ ಖ್ಯಾತ ಪ್ರೊಫೆಸರ್ ಎಚ್ ಎಸ್ ಈಶ್ವರ್ ಅವರು ತನ್ನ ಅಣ್ಣ , ಕನ್ನಡ ಲೋಕ ಕಂಡ ಮಹತ್ವದ ವಿಮರ್ಶಕ ಡಾ ಹಾಮಾ ನಾಯಕ್ ಅವರ ಬಗ್ಗೆ ಬರೆದಿದ್ದರು. ಡಾ ಹಾ ಮಾ ನಾಯಕ್ ಅವರ ಬದುಕು ಹೀಗಿತ್ತು ಎಂದು ಎಷ್ಟೋ ಓದುಗರಿಗೆ ಗೊತ್ತಾಗಿದ್ದು ಆ ಬರಹ ಸರಣಿಯಿಂದಾಗಿಯೇ

ಈಗ ವಿಠ್ಠಲನ ಸರದಿ. ಅಪ್ಪನನ್ನ ಅಂತೆಯೇ ನಮ್ಮ ಮುಂದೆ ನಿಲ್ಲಿಸಲಿದ್ದಾನೆ

ನೆನಪು 11
‘ಪ್ರಶಸ್ತಿಯೇ ಬೇಕಾಗಿಲ್ಲ. ನನಗೆ ನನ್ನ ವೃತ್ತಿಯಲ್ಲಿ ಸಂಪೂರ್ಣ ಸಂತೃಪ್ತಿ ಇದೆ’

ಅಣ್ಣ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ನಿವೃತ್ತನಾಗುವ ವರ್ಷವೇ (1994ರಲ್ಲಿ) ಆತನಿಗೆ ರಾಜ್ಯ ಸರ್ಕಾರ ನೀಡುವ ಶಿಕ್ಷಕ ರಾಜ್ಯ ಪ್ರಶಸ್ತಿ ಲಭಿಸಿತು.

ಇದಕ್ಕೆ ಮೊದಲು 1992-93ರ ರಾಜ್ಯ ಶಿಕ್ಷಣ ಕಲ್ಯಾಣ ಜಿಲ್ಲಾ ಪ್ರಶಸ್ತಿಯು ಬಂದಿತ್ತು.

ಈಗೆಲ್ಲಾ ನಿವೃತ್ತಿಗೆ 10-15 ವರ್ಷ ಇರುವ ಮೊದಲೇ ರಾಜ್ಯ ಪ್ರಶಸ್ತಿ ಪಡೆದುಕೊಳ್ಳುವವರೂ(!)ಇದ್ದಾರೆ. ಹಾಗೆ ಪಡೆದುಕೊಂಡವರೆಲ್ಲಾ ವಶೀಲಿಬಾಜಿ ಹಚ್ಚಿ ಪಡೆದುಕೊಂಡವರು ಎನ್ನುವ ವಾದವೂ ನನ್ನದಲ್ಲ. ನಿಜವಾಗಿ ಸಿಗಬೇಕಾದವರೂ ತುಂಬಾ ಜನ ಇದ್ದರು. ಕೆಲವೊಮ್ಮೆ “ಪ್ರಶಸ್ತಿ ಎಂದರೆ ಕೇಳಿ ಪಡೆಯುವುದು; ಅಲೆದಾಡಿ ಪಡೆಯುವುದು” ಎಂದಾಗಿ ಬಿಟ್ಟಿದೆ.

ಆದರೆ ಅಣ್ಣನ ಕಾರ್ಯವ್ಯಾಪ್ತಿ ನೋಡಿದ ಹಲವರು ಅವನಿಗೆ ಈಗಾಗಲೇ ರಾಜ್ಯ ಶಿಕ್ಷಕ ಪ್ರಶಸ್ತಿ ಬಂದು ಬಿಟ್ಟಿದೆ ಅಂದುಕೊಂಡಿದ್ದರು. ಬರಲಿಲ್ಲ ಎಂದು ಗೊತ್ತಾದಾಗ ಆಶ್ಚರ್ಯದಿಂದ ಯಾಕೆ ಇನ್ನೂ ಬಂದಿಲ್ಲ ಎಂದು ಕೇಳುತ್ತಿದ್ದರು. ಆತ “ಪ್ರಶಸ್ತಿಯನ್ನು ಅರ್ಜಿ ಹಾಕಿ ಪಡೆಯುವ ಹರಕತ್ತು ತನಗಿಲ್ಲ. ಪ್ರಶಸ್ತಿ ಯಾರನ್ನೂ ದೊಡ್ಡವರನ್ನಾಗಿಸುವುದಿಲ್ಲ. ನನಗೆ ನನ್ನ ವೃತ್ತಿಯಲ್ಲಿ ಸಂಪೂರ್ಣ ಸಂತೃಪ್ತಿ ಇದೆ.” ಎಂದು ಹೇಳುತ್ತಿದ್ದ.

ಪ್ರಶಸ್ತಿ ಬಂದಿಲ್ಲವೆಂದು ಅವನ ಆತ್ಮೀಯರು ಬೇಸರ ಪಟ್ಟಿದ್ದಿದೆಯೇ ಹೊರತು ಅವನೆಂದೂ ತಲೆಕೆಡಿಸಿಕೊಂಡಿದ್ದಿಲ್ಲ. ಒಂದೆರಡು ಬಾರಿ ಆತನ ಇಲಾಖೆಯಿಂದ ಸೂಚನೆ ಬಂದಾಗಲೂ ಅರ್ಜಿ ಹಾಕಿ ಪಡೆಯುವ ಪ್ರಕ್ರಿಯೆಯನ್ನೇ ಆತ ವಿರೋಧಿಸಿದ್ದ.

ಒಂದು ದಿನ ಉತ್ತರ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದ (ಡಿ.ಡಿ.ಪಿ.ಐ) ಶ್ರೀ. ಜಿ.ಎಲ್. ಹೆಗಡೆಯವರೂ ಅಣ್ಣನೂ ಒಂದು ಕಾರ್ಯಕ್ರಮದಲ್ಲಿ ಒಂದೇ ವೇದಿಕೆ ಹಂಚಿಕೊಂಡಿರುವಾಗ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಅರ್ಜಿ ತುಂಬಿ ಕೊಡುವಂತೆ ಸೂಚಿಸಿದರು.

ಈ ಮೊದಲೇ ಶಿಕ್ಷಕರಿಗೆ ನೀಡುವ ವಾಜಂತ್ರಿ ಪ್ರಶಸ್ತಿ, ಜಿಲ್ಲಾ ಪ್ರಶಸ್ತಿ, ಹಾಗೂ ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ ಬಂದಿದ್ದು ಅವರಿಗೆ ತಿಳಿದಿತ್ತು. ಅವರು ಒಬ್ಬ ಪ್ರಾಮಾಣಿಕ ಅಧಿಕಾರಿಯೆಂದೂ ಯಾವ ರಾಜಕೀಯ ಒತ್ತಡಕ್ಕೆ ಒಳಗಾಗುವ ವ್ಯಕ್ತಿಯಲ್ಲವೆಂದೂ ಪ್ರಸಿದ್ಧರಾಗಿದ್ದರು. ನಂತರ ಅವರು ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರೂ ಆಗಿ ನಿವೃತ್ತರಾದರು.

ಶ್ರೀ ಜಿ.ಎಲ್. ಹೆಗಡೆಯವರಿಗೆ ಅಣ್ಣನ ಬಗ್ಗೆ ಅಪಾರ ಗೌರವ. ‘ಆರ್.ವಿ ಯಂಥವರು ನಮ್ಮ ಇಲಾಖೆಗೆ ಗೌರವ’ ಎಂದು ಅವರು ಹಲವರಲ್ಲಿ ಹೇಳಿದ್ದಿದೆ. ಮೇಲಾಧಿಕಾರಿಗಳ ಈ ಸೂಚನೆಯನ್ನೂ ಆತ ವಿನಯದಿಂದ ತಿರಸ್ಕರಿಸಿದ್ದ.

ಆಮೇಲೆ ಬೇರೆ ದಾರಿ ಕಾಣದೇ ಶ್ರೀ. ಜಿ.ಎಲ್. ಹೆಗಡೆಯವರು ಕಾರವಾರದಿಂದ ಹೊನ್ನಾವರಕ್ಕೆ ಬಂದಾಗಲೂ ಇದೇ ಆತಂಕವನ್ನು ಆತ ವ್ಯಕ್ತಪಡಿಸಿದಾಗ (ಬಹುಶಃ ನಮ್ಮ ಮನೆಗೆ ಬಂದಿದ್ದರೆಂದು ನನ್ನ ನೆನಪು.) ‘ನಿನಗೆಲ್ಲಿ ಅರ್ಜಿ ಹಾಕಲು ಹೇಳಿದರು? ಮಾಹಿತಿ ತರಿಸಿಕೊಳ್ಳುವುದು ನನ್ನ ಕೆಲಸ. ಇಲ್ಲಿ ಬಂದು ನಾನು ಮಾಡಲಾಗುತ್ತದೆಯೇ? ಮಾಹಿತಿ ಕಳಿಸಿ. ಈ ಅರ್ಜಿ ನೀವು ತುಂಬ ಬೇಕಾಗಿದ್ದಲ್ಲ. ಯಾವ ಶಿಕ್ಷಕನೂ ತಮ್ಮ ಅರ್ಜಿಯನ್ನು ತಾವೇ ಹಾಕಿ ಪ್ರಶಸ್ತಿ ಪಡೆಯುವುದಲ್ಲ.

ಇದು ನಿಮ್ಮ ತಪ್ಪು ಅಭಿಪ್ರಾಯ. ಅದನ್ನು ನಮ್ಮ ಅಧಿಕಾರಿಗಳು ಮಾಡಬೇಕು. ಆದರೆ ಅವರು ತಮ್ಮ ಕೆಲಸ ತಪ್ಪಿಸಿಕೊಳ್ಳಲು ನಿಮಗೆ ಹೇಳಿ ಬಿಡುತ್ತಾರೆ. ಡಿ.ಡಿ.ಪಿ.ಐ ಆಗಿ ನಾನು ತುಂಬಬೇಕು. ಆದರೆ ನಿಮ್ಮ ಹಲವು ಚಟುವಟಿಕೆಯ ವಿವರವಾಗಲಿ, ನೀವು ಸಲ್ಲಿಸಬೇಕಾದ ಶಾಲಾ ಚಟುವಟಿಕೆಗಳ ವಿವರವಾಗಲಿ ನನ್ನಲ್ಲಿ ಇರಲು ಹೇಗೆ ಸಾಧ್ಯ? ನಾನು ಇಲಾಖೆಗೆ ಸಲ್ಲಿಸಬೇಕಾದ ನಿಮ್ಮ ವಿವರವನ್ನು ನನ್ನ ಪರವಾಗಿ ನೀವು ಸಂಗ್ರಹಿಸಿ ನನಗೆ ಕೊಡಿ. ನಾನು ಮುಂದೆ ಕಳಿಸಬೇಕೋ ಬೇಡವೋ ಎಂದು ತೀರ್ಮಾನಿಸುತ್ತೇನೆ.” ಎಂದು ವಿನಂತಿಸಿದ ಮೇಲೆ ಆತ ಇದಕ್ಕೆ ಒಪ್ಪಿದ.

ಆತ ಒಪ್ಪಿದ್ದು ನನಗಂತೂ ತುಂಬಾ ಖುಷಿಯಾಯಿತು. ಆಗ ತಾನೆ ಎಂ.ಎ ಮುಗಿಸಿ ಬಂದಿದ್ದೆ. ಹಲವು ದಾಖಲೆ ಸಂಗ್ರಹಿಸುವಲ್ಲಿ ನಾನೂ ಸಹಕರಿಸಿದೆ. ಪ್ರತಿಗಳನ್ನು ಮಾಡಿ ನಾನು ಕಾರವಾರ ಡಿ.ಡಿ.ಪಿ.ಐ ಕಛೇರಿಗೆ ಸಲ್ಲಿಸಿ ಬಂದೆ. “ನಿನ್ನ ಅಪ್ಪನಿಂದ ಈ ಕೆಲಸ ಮಾಡಿಸಲು ನಾನು ಸುಸ್ತಾದೆ” ಎಂದು ಹೇಳಿ ತಂದ ದಾಖಲೆಯನ್ನು ಟೇಬಲ್ ಮೇಲೆ ಇರಿಸಲು ಹೇಳಿದರು. ಇಷ್ಟರ ಒಳಗೇ ಕೆಲವು ಶಿಕ್ಷಕರು ಯಾವ ಒತ್ತಾಯವೂ ಇಲ್ಲದೇ ತಾವೇ ಸಿದ್ಧಪಡಿಸಿಕೊಂಡು ಬಂದು ಸಲ್ಲಿಸಿದ 3-4 ಅರ್ಜಿಗಳು ಅವರ ಟೇಬಲ್ ಮೇಲೆ ಅನಾಥವಾಗಿ ಬಿದ್ದಿದ್ದವು.

ಅಣ್ಣ ಸಲ್ಲಿಸಿದ ದಾಖಲೆಯೇ ಸುಮಾರು ಇನ್ನೂರುಮುನ್ನೂರು ಪುಟ ಆಗಿತ್ತು. ಝೆರಾಕ್ಸ ಮಾಡಿಸಲು ಹಣ ಖರ್ಚಾಗುತ್ತದೆ ಎಂದು ಹಲವು ಡಾಕ್ಯುಮೆಂಟ್ ಗಳನ್ನು ಕೈಬಿಡಲಾಗಿತ್ತು. ಮನೆಯಲ್ಲಿ ಇದ್ದ ಒಂದು ಪ್ರತಿ ವರಲೆ ಹಿಡಿದು ಹಾಳಾಯಿತು. ಆತನ ಶೈಕ್ಷಣಿಕ ಹಿರಿಮೆಯ ಕುರಿತು ಇರುವ ಹಲವು ದಾಖಲೆಗಳು ಇದರೊಂದಿಗೆ ನೇಪಥ್ಯಕ್ಕೆ ಸರಿಯಿತು. ಅಣ್ಣ ನಮ್ಮೊಂದಿಗೆ ಇರುವವರೆಗೂ ಇದು ಮುಖ್ಯ ಅನಿಸಲೇ ಇಲ್ಲ. ಆಮೇಲೆ ಕೆಲವು ವರ್ಷಗಳ ಹಿಂದೆ ಡಿಡಿಪಿಐ ಮತ್ತು ಬಿಇಓ ಕಛೇರಿಯಲ್ಲಿ ಅರಸಿದರೂ ಅದರ ಕಛೇರಿ ಪ್ರತಿಗಳು ಕೂಡ ಸಿಕ್ಕಲೇ ಇಲ್ಲ.

ಈ ಬಾರಿ ಡಾ. ಎಚ್. ನರಸಿಂಹಯ್ಯನವರು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರೆಂದೂ, ಯಾರಿಗೂ, ಮೂಗುತೂರುವ ಅವಕಾಶ ಇದ್ದಿರಲಿಲ್ಲವೆಂದೂ ತಿಳಿಯಿತು. ಈತನ ವಿವರ ನೋಡಿದ ಡಾ. ಎಚ್. ನರಸಿಂಹಯ್ಯನವರೇ ಸ್ವತಃ ಜಿ.ಎಲ್.ಹೆಗಡೆಯವರಿಗೆ ಎರಡು ಸಲ ಫೋನ್ ಮಾಡಿ ಖಾತ್ರಿ ಮಾಡಿಕೊಂಡರಂತೆ.

ಅದೇ ವರ್ಷ(1994 ರಲ್ಲಿ) ಆತನಿಗೆ ರಾಜ್ಯ ಪ್ರಶಸ್ತಿ ಬಂತು. ಆಗಿನ ಮುಖ್ಯಮಂತ್ರಿ ಶ್ರೀ ವೀರಪ್ಪ ಮೊಯಿಲಿಯವರ ಕೈಯಿಂದ ಅದನ್ನು ಸ್ವೀಕರಿಸಿದ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ನಾನು ಹೋಗಬೇಕಾಗಿತ್ತು ಎಂದು ಈಗ ಅನ್ನಿಸುತ್ತದೆ. ಹೋಗಿರಲಿಲ್ಲ ನಾನು.

ಎಚ್ ನರಸಿಂಹಯ್ಯನವರ ಅಧ್ಯಕ್ಷತೆಯಲ್ಲಿ ಸಿಕ್ಕ ಪ್ರಶಸ್ತಿಯೆನ್ನುವ ಕಾರಣಕ್ಕೂ ಲಂಚ, ಪ್ರಭಾವ ಮುಂತಾದ ಕೆಟ್ಟ ರಾಜಕೀಯವೇ ಪ್ರಶಸ್ತಿ ಕೊಡುವಲ್ಲಿ ಕೆಲಸ ಮಾಡುತ್ತದೆ ಎಂಬ ಪ್ರಚಾರದ ವಾತಾವರಣ ಇರುವಾಗ ಅದ್ಯಾವುದೂ ಇಲ್ಲದೇ ತನ್ನನ್ನು ಗುರುತಿಸಿದ ಬಗ್ಗೆ ಆತನಿಗೆ ಖುಶಿಯಿತ್ತು. ಹಾಗೆ ನೋಡಿದರೆ ಪ್ರಶಸ್ತಿ ಬಂದಿರುವುದು ಆತನಿಗಿಂತ ಆತನ ಸ್ನೇಹಿತರಿಗೆ ಖುಶಿ ಕೊಟ್ಟಿತ್ತು.

ಆಗೇನಾದರೂ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಿದ್ದರೆ ಅದನ್ನು ತಿರಸ್ಕರಿಸುತ್ತಿದ್ದನೋ ಏನೋ !?

ಅವನು ಶಿಕ್ಷಕನಾಗಿ ಮಾಡಿದ ಹಲವು ಪ್ರಯೋಗಗಳು, ಶಾಲೆಯಾಚೆ ಮಾಡಿದ ಸಾಹಿತ್ಯ-ಸಾಂಸ್ಕೃತಿಕ ಕೆಲಸಗಳು ಆತನ್ನು ಆದರ್ಶ ಶಿಕ್ಷಕನನ್ನಾಗಿಸಿದ್ದವು. ಅಣ್ಣನಂತೆ ಶಿಕ್ಷಕನಾಗಬೇಕೆಂದು ಅನ್ನಿಸಿದ್ದು ಕೂಡ ಆಗಲೇ.

ಬಹುಶಃ 3-4 ಪ್ರಶಸ್ತಿ ಕೊಡಬಹುದಾದಷ್ಟು ಮಹತ್ವದ ವಿವರಗಳಿದ್ದವು. ರಾಜ್ಯ ಸರ್ಕಾರ ಮುತುವರ್ಜಿಯಿಂದ ರಾಷ್ಟ್ರ ಪ್ರಶಸ್ತಿಗೆ ಇದೇ ವಿವರಗಳನ್ನು ಕಳಿಸಿದ್ದರೂ ಆತನಿಗೆ ಮಹತ್ವದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯೂ ಸಿಗಬಹುದಾಗಿತ್ತು. ಆದರೆ ಸಿಗಲಿಲ್ಲ. ಇದು ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನಕ್ಕೆ ಒಂದು ಉದಾಹರಣೆ ಅಷ್ಟೆ.

Leave a Reply