ತಣ್ಣಗಾಗುವುದು ಅಮೃತಧಾರೆಯೊಂದಿಗೆ..

ನಿಟ್ಟುಸಿರು

ರೇಖ ಮಾಲುಗೋಡು

ದಟ್ಟೈಸಿದ ಕಾರ್ಮುಗಿಲು
ಉರಿಬಿಸಿಲಿನ ಸುಡುಧಗೆ
ತಣ್ಣಾಗಾಗುವುದು ಭೋರ್ಗರೆತದ ಮಳೆಯೊಂದಿಗೆ

ಮನದೊಳಗೆ ಮೂಡುವ ಭಾವನೆ
ಕೈಯೊಳಗಿನ ಹಪಹಪಿತನ
ತಣ್ಣಗಾಗುವುದು ಕಾಗದದಲ್ಲಿ ಮೂಡಿದ ಚಿತ್ತಾರದೊಂದಿಗೆ

ನವಮಾಸದ ಬಸಿರಿನ ಕಾಯುವಿಕೆ
ಬಳಲಿಕೆ ಸಂಕಟ
ತಣ್ಣಗಾಗುವುದು ಪ್ರಸವ ವೇದನೆಯೊಂದಿಗೆ

ಬಿರಿದಂತಾದ ಎದೆ
ಎದೆಯಲ್ಲಿ ಮಡುಗಟ್ಟಿದ ನೋವು
ತಣ್ಣಾಗಾಗುವುದು ಅಮೃತಧಾರೆಯೊಂದಿಗೆ

ಪ್ರಿಯಕರನ ಕಾಯುವಿಕೆ
ವಿರಹದ ಧಗೆ
ತಣ್ಣಾಗಾಗುವುದು ಉತ್ತುಂಗಕ್ಕೇರಿದ ಮಿಲನದೊಂದಿಗೆ

Leave a Reply