ಲವ್ ಯು ಜಿಂದಗಿ..

30-35 ವರ್ಷದ ಹಿಂದಿನ ಮಾತು..

ನನ್ನದೊಂದು ಗಾರ್ಮೆಂಟ್ ಶಾಪ್ ಇತ್ತು. ಮಹಿಳೆಯರ ಒಳ ಉಡುಪು ಹಾಗೂ ನೈಟಿಗಳ ಸಣ್ಣ ಅಂಗಡಿ. ಬಾಳಿಕೆ ಹಾಗೂ ಬೆಲೆಗೆ ಹೆಸರೂ ಮಾಡಿದ್ದೆ. ಒಮ್ಮೆ ಬಂದವರು ಬೇರೆ ಕಡೆ ಹೋಗುವ ಮಾತೇ ಇಲ್ಲ. ಸ್ನೇಹಿತರನ್ನೂ ಶಿಫಾರಸು ಮಾಡಿ ಕಳುಹಿಸುತಿದ್ದರು. ಎಲ್ಲರನ್ನೂ ಪ್ರೀತಿ ವಿಶ್ವಾಸ ದಿಂದ ಅಟೆಂಡ್ ಮಾಡ್ತಿದ್ದೆ.

‘ಮೊನ್ನೆ 3 ಪೀಸ್ ತೊಗೊಂಡು ಹೋದ್ರಲ್ಲ’ ಅಂತ ಒಂದು ಹೆಸರು ಹೇಳಿ, ಅವರು ಕಳಿಸಿದ್ದು ಅಂತ ಹೇಳಿದಾಗ ‘ಒಹ್, ಅವರ ಕಡೆಯವರಾ…’ ಅಂತ ಹೇಳಿ ಸಡಗರದಿಂದ ಮಾತಾಡುತಿದ್ದೆ.

ಹೀಗೆ ಯಾರದೋ ಹೆಸರು ಹೇಳಿ ಬಂದವಳು ಆಕೆ. ಉದ್ದನೆಯ ದಟ್ಟ ಕೂದಲು, ಪುಟ್ಟ ಮಗುವಿನ ಮುಗ್ದತೆ, ತೀರಾ ಸಣ್ಣ ದೇಹ.. ಹಾಲಿನ ಬಣ್ಣದ ಹುಡುಗಿ. ಅಲ್ಲೇ ಟಿ ಆರ್ ಮಿಲ್ ಹತ್ರ ಮನೆ. ತ್ಯಾಗ್ರಾಜ್ ನಗರದಲ್ಲೊಂದ್ ಸಣ್ಣ ಕೆಲಸ. ತಾಯಿ ಅಡಿಗೆ ಕೆಲಸಕ್ಕೆ ಹೋಗುತಿದ್ದರು. ಬೇಜವಾಬ್ದಾರಿ ತಂದೆಯನ್ನು ಪಡೆದ ಮಕ್ಕಳ ಕಷ್ಟದ ಬಗ್ಗೆ ಎಷ್ಟುಹೇಳಿದರೂ ಕಮ್ಮಿನೇ. ಒಂದೇ ದೋಣಿಯ ಪಯಣಿಗರು ನಾವು…ಬಿಡಿ.

ನನ್ನ ಹಾಗೆ ಅವಳಿಗೂ ಅಮ್ಮನ ಜವಾಬ್ದಾರಿ ಇತ್ತು. ಸಮಾನ ಅಂತಸ್ತು ಸ್ನೇಹ ಬೆಳೆಸುವ ಹಾಗೆ, ಸಮಾನ ದುಃಖಿಗಳು ನಾವಾಗಿದ್ದೆವು. ನಾನು ಅವಳಷ್ಟು ಸಾಫ್ಟ್ ಇರಲಿಲ್ಲ. ಆಕೆಗೆ ಧೈರ್ಯ ತುಂಬುತಿದ್ದೆ. ಸ್ವಾಭಿಮಾನದಲ್ಲಿ ಬದುಕುವ ಎಲ್ಲರ ನಾಳೆಗಳು ಹೇಗಿರುತ್ತೆ ಅಂದ್ರೆ… ಅಂತ ನಾನು ಆಕೆಗೆ ಹೇಳುವಾಗ ಆಕೆಯ ಕಣ್ಣಲ್ಲಿನ ಹೊಳಪು ನೋಡ್ಬೇಕು..

ಅಷ್ಟಕ್ಕೂ ಈ ಎಲ್ಲಾ ಸಮಾಧಾನದ ಮಾತುಗಳು, ಅವಳಿಗೆ ಮಾತ್ರ ಅಲ್ಲಾ ನನಗೂ ಅವಶ್ಯಕತೆ ಇತ್ತಲ್ಲ… ಆಕೆ ಎಲ್ಲಾ ನೋವನ್ನು, ಸಣ್ಣ ಸಣ್ಣ ಖುಷಿಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು.. ನಾನು?.. ಉಹೂ… ಆಕೆಯೆದುರು ಎಂದೂ ಪೂರ್ಣವಾಗಿ ತೆರೆದುಕೊಳ್ಳಲಿಲ್ಲ.. ಆಕೆಗೆ ತಂದೆಯ ಬಗ್ಗೆ ಮಾತ್ರ ಸಿಟ್ಟಿತ್ತು.. ಗಂಡಸು ಜಾತಿಯ ಬಗ್ಗೆ ಅಲ್ಲ… ಹೀಗಾಗಿ.. ನನ್ನ ನೋವು, ಸಿಟ್ಟುಗಳು ಅವಳೆಂದು ನೋಡಲೇ ಇಲ್ಲ

ಫೋನ್ ಸಂಪರ್ಕ ಹೆಚ್ಚು  ಇಲ್ಲದ ಜಮಾನಾ.. ವಾರದಲ್ಲಿ 3-4 ಬಾರಿ ಆಕೆ ನನ್ನನೋಡಲು ಬರುತಿದ್ದಳು.. ನಾನು ಬೆಳಿಗ್ಗೆ ೮ಕ್ಕೆ ಬಂದರೆ.. 2-3 ಬಸ್ ಬದಲಾಯಿಸಿ ಮನೆ ಸೇರೋದು ರಾತ್ರಿ 9 ರಮೇಲೆಯೇ.. ನಾನು ಆಕೆಗೆ ಮುಂದೆ ಓದುವುದಕ್ಕೆ ಒತ್ತಾಯಿಸುತಿದ್ದೆ.

ರಾತ್ರಿ ಬಸ್ಸಲ್ಲಿ ಮನೆಗೆ ಹಿಂತಿರುಗುವಾಗ, ನನ್ನ ಬಗ್ಗೆ ಯೋಚಿಸುತಿದ್ದೆ ಎಷ್ಟು ವರ್ಷ ಹೀಗೆ?.. ಹೇಗೆ ಎಲ್ಲವೂ ಟಕ್ಕ್ ಅಂತ  ಹೇಗೆ ಬದಲಾಗಬಹುದು.. ಆಗುತ್ತಾ?

ಆಕೆಯೂ ಒಮ್ಮೆ ಮುಖ ಚಿಕ್ಕದು ಮಾಡಿ  ಇದೇ ಪ್ರಶ್ನೆ ಕೇಳಿದಳು.. ಹೇಗೆ? ಎಲ್ಲಿಂದ? ಬದಲಾಗುತ್ತೆ?..ಆಗುತ್ತಾ? ನನ್ನ ಸ್ನೇಹಿತರೆಲ್ಲಾ ಮದ್ವೆ ಆಗ್ತಿದ್ದಾರೆ… ಅವಳ ಕಣ್ಣಲ್ಲಿ ನೀರು ತುಂಬಿತ್ತು.. ಅವಳ ಕೈ ಹಿಡಿದು, ಕಣ್ಣನ್ನು ನೋಡುತ್ತಾ.. ನೋಡೂ, ನಿನ್ನ ಅಗಲವಾದ ಕಪ್ಪು ಕಣ್ಣು, ಉದ್ದದ ಜಡೆಗೆ ಖಂಡಿತಾ ಸಿಗ್ತಾರೆ..

ಹೌದಾ?..ಹೇಗೆ?.. ಪುಟ್ಟ ಮಗುವಿನಂತೆ ಕಣ್ಣರಳಿಸಿ ಕೇಳುತಿದ್ದಳು.

ಹೇಗೆ ಅಂತ ಹೇಳೋದು? ಸಿನಿಮಾ, ಕಥೆಗಳಲ್ಲಿ ಆದ ಹಾಗೆ, ನಿನ್ನ ಬಾಸ್ ಮಗ ಫಾರಿನ್ ನಿಂದ ಬಂದವನು.. ನಿನ್ನ ಆಫೀಸಿಗೆ ಬರ್ತಾನೆ… ಹಿಂದಿನಿಂದ ನಿನ್ನ ಜಡೆ ನೋಡಿ.. ಕೆಮ್ಮಿ, ನೀನು ಅವನನ್ನು ನೋಡಿದಾಗ.. ನಿನ್ನ ಕಣ್ಣಿನ ಹೊಳಪಿಗೆ ಫಿದಾ ಆಗ್ತಾನೆ…

ಮಕ್ಕಳಂತೆ ಆಕೆ ನಗುವಾಗ,

ಇದ್ದಾನಾ ನಿನ್ನ ಬಾಸ್ ಗೆ ಮಗ?

ಹುಂ….ನನ್ ಬಾಸ್ ಮಗ ಈ ಸಲ  ಸೆವೆಂತ್ …

ಮೊದ್ಲೇ ಯಾಕೆ ಹೇಳ್ಲಿಲ್ಲ..

ಕೇಳೋದಕ್ಕೆ ಚೆನ್ನಾಗಿತ್ತು.. ಇನ್ನೂ ಬೇರೆ ಏನಾದ್ರು ಹೇಳು

ಗಿರಾಕಿ ಬಂದ ಕೂಡಲೇ ಮಾತುಕತೆ ಬಂದ್.. ಹೋದ ಕೂಡಲೇ ಎಲ್ಲಿ ನಿಲ್ಲಿಸಿದ್ದೆ ಅಂತ ಜ್ಞಾಪಿಸುತ್ತಿದ್ದಳು..

ನಮ್ಮಲ್ಲಿಗೆ ವಿದೇಶೀ ಬಟ್ಟೆಯನ್ನು ಒಬ್ರು ತಂದು ಕೊಡ್ತಿದ್ರು.. ತುಂಬಾ ಬೆಲೆಯ ಬಟ್ಟೆ ಬರಿ 3 ಪೀಸ್ ಇಡ್ತಿದ್ದೆ.. ಅದೊಮ್ಮೆ.. ಹನಿಮೂನ್ nightees ಅಂತ ತಂದುಕೊಟ್ಟ… ನಾನಂತೂ ನೋಡಿರಲಿಲ್ಲ.. ತೀರಾ ಟ್ರಾನ್ಸ್ ಪರೆಂಟ್… ಒಂದರ ಮೇಲೆ ಒಂದು.. ಒಟ್ಟು ೫ ಪೀಸ್.. ಒಳಗೋದು..ಅದರ ಮೇಲೆ ಸ್ಲೀವ್ಲೆಸ್ಸ್.. ಅದರ ಮೇಲೆ.. ಕೋಟ್.. ನನಗಂತೂ ಇಂತಹ ಬಟ್ಟೆಗಳ ಮೇಲೆ ಕೋಪವಿದ್ದರೂ.. ಬಿಸಿನೆಸ್ ಅಂದಾಗ ನಾನು ಬೇರೆಯೇ…. ಆಕೆಗಂತೂ ಪಿಂಕ್ ಕಲರಿನ ನೈಟ್ ಡ್ರೆಸ್ ತುಂಬಾ ಇಷ್ಟವಾಗಿತ್ತು.. ಬಂದಾಗಲೆಲ್ಲ ಅದೆಷ್ಟು ಸಲ ನೋಡಿ ನೋಡಿ ಇಡ್ತಿದ್ಲು..

ಆಕೆ ಬೇಸರದಲ್ಲಿ ಇದ್ದಾಳೆ ಅಂದಾಗೆಲ್ಲ ನಾನು ಆಕೆಗೆ… ನೋಡು,  ರೇಷನ್ ಡಿಪೋ ಹೋಗ್ತಿ..ಅಲ್ಲಿ ಕ್ಯೂನಲ್ಲಿ..ಒಬ್ಬ…ಅಂತ ಶುರು ಮಾಡುವಾಗಲೇ..ಆಕೆ ಗಲ್ಲ ಉಬ್ಬಿಸಿ..

ಓ..ಬೇಡಾ..ಮದ್ವೆ ಆದ್ಮೇಲೇನೂ ಕ್ಯೂ ನಿಲ್ಬೇಕ..

ಓಕೆ ಬಸ್ಸಲ್ಲಿ ಹೋಗ್ತಾ..ಇರ್ತಿ….

ಬೇಡ..ಪ್ಲೀಸ್ಬೇಡ..

ಓಕೆ.. ನಾಡಿದ್ದು ಅದ್ಯಾರೋ ಮನೇಲಿ.. ಪೂಜೆ ಅಂದಿಯಲ್ಲ.. ಅಲ್ಲಿಗೆ ಹೋಗ್ತಿ… ಅಜ್ಜಿನೋ.. ಅಮ್ಮನ್ನೋ  ಬಿಡೋಕ್ಕೆ ಅಂತ ಒಬ್ಬ ಬರ್ತಾನೆ…. ನಿನ್ನ ನೋಡ್ತಾನೆ..

ನನ್ನ ಕಲ್ಪನೆ ಜೊತೆಯಲ್ಲಿ ಆಕೆ ಹೋಗ್ತಿರಬೇಕು….. ಮುಖದಲ್ಲಿ ಮಲ್ಲಿಗೆ ಅರಳಿತ್ತು : ಹುಂ ..ಆಮೇಲೆ ?.

ವರದಕ್ಷಿಣೆ ಚಿನ್ನ ಏನೂ ಬೇಡ.. ಈ ಬೆಳದಿಂಗಳನ್ನು ನಂಗೆ ಕೊಡಿ …. ಅಂತಾನೆ..

ನಾಲಕ್ಕು ದಿನ ನಾನು ಬಟ್ಟೆ ತರಲು ಮುಂಬೈಗೆ ಹೋಗಿ ಬಂದೆ .. ಹಬ್ಬದ ಸಮಯ. ತುಂಬಾ busy ಇದ್ದೆ…. ಸಂಜೆ  ಆಕೆ ಬಂದಳು.. ಗಿರಾಕಿ ಹೋದ ಕೂಡಲೇ ನನ್ನ ಕೈ ಹಿಡಿದು ಕಣ್ಣಿಗೆ ಒತ್ತಿಕೊಂಡಳು.. ಕೈಯಲ್ಲಿ ಹೂವಿತ್ತು.

ಏನು?.. ಆ ಫ್ಲವರ್ ಶಾಪ್ ನವನು ಪ್ರಪೋಸ್ ಮಾಡಿದ್ನಾ..ಅಂದೆ.

ಡಿ.ವಿ.ಜಿ. ರಸ್ತೆಯಲ್ಲಿರೋ ಎಲ್ಲಾ ಅಂಗಡಿಯವರ ಜೊತೆ ನಾನು ಆಕೆಗೆ ತಮಾಷೆ ಮಾಡ್ತಿದ್ದೆ…

ರಾತ್ರಿ ಬಸ್ಸಲ್ಲಿ ಹೋಗದೆ ಆಟೋದಲ್ಲಿ ಹೋದೆ.. ಅವಳದೇ ಚಿತ್ರ.. ನನ್ನ ಕಲ್ಪನೆ ನಿಜವಾದ ಬಗ್ಗೆ.. ಸಣ್ಣದೊಂದು ಖುಷಿ…. ಪೂಜೆಗೆ ಬಂದ ಆ ಮನೆಯ ನೆಂಟರ ಹುಡುಗ. ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿ.. ಆಕೆಯ ಮನೆಗೆ ಹೋಗಿ  ಆಕೆಯ ಕೈ ಬೇಡಿದ್ದ… ಮಾರನೆ ದಿನ ಆಕೆ ಬಂದಳು.. ನನ್ನ ತಬ್ಬಿ ಹಿಡಿದು ಆತನ ಬಗ್ಗೆ ಬಹಳಷ್ಟು ಹೇಳಿದ್ಳು.. ಥೇಟ್ ರಾಜಕುಮಾರ್  ತರಾನೆ ಕಾಣ್ತಾರೆ .. ಅವರನ್ನ ಇಲ್ಲಿಗೆ ಕರ್ಕೊಂಡ್ ಬರ್ತೀನಿ.. ನೀನ್ ನೋಡು ಅಂದ್ಲು.. ಅಂಗಡಿಯಲ್ಲಿ ರಶ್ ಇದ್ದ ದಿನಾ ಆಕೆ ಬಂದ್ಲು. .ಅಲ್ಲಿ ನಿಂತಿದ್ದಾರೆ ಅಂದಾಗ ಹೊರಗೆ ನೋಡಿದೆ.. ಉದ್ದನೆ ಮೂಗಿನ ಚೆಂದದ ಹುಡುಗ.. ನಿಜಕ್ಕೂ ರಾಜಕುಮಾರ್ ಹೋಲಿಕೆ ಇತ್ತು…. ಗಿರಾಕಿ ತುಂಬಿದ್ದರಿಂದ ಒಳಕರೆಯಲಾಗಲಿಲ್ಲ… ಮತ್ತೆ ಬರ್ತೀನಿ ಅಂತ ಹೋದವಳು ಬರ್ಲಿಲ್ಲ ಅಂತ ನೆನಪಾದದ್ದು ರಾತ್ರಿ ಬಸ್ಸಲ್ಲಿ ಕೂತಾಗ..

ಹೌದೂ ಮದ್ವೆಗೆ ಹಣ ಹೇಗೆ ಹೊಂದಿಸ್ತಾಳೆ… ನಾವೆಂದೂ ಹಣದ ಬಗ್ಗೆ ಚರ್ಚೆ ಮಾಡಿರಲಿಲ್ಲ ಆಕೆಯ ಮನೆಗೆ ಬಹಳಷ್ಟು ಬಾರಿ ಕರೆದಿದ್ರೂ .. ಹೋಗಲಾಗಿರಲಿಲ್ಲ… ಮದುವೆಗೆ ಹಣದ ಸಹಾಯ ಬೇಕಾದ್ರೆ ನಾನು ಈಗಲೇ ಪ್ಲಾನ್ ಮಾಡಬೇಕು.. 4 ದಿನದ ನಂತರ ಭೇಟಿಯಾದಾಗ ಕೇಳಿದೆ.

ಬೇಡಾ…ಅಮ್ಮ ಕೆಲಸ ಮಾಡೋ ಮನೆಯ ಓನರ್ ಸಾಲ ಕೊಡುವುದಾಗಿ ಹೇಳಿದರಂತೆ…

ವರ ಮದುವೆ ದೇವಸ್ಥಾನದಲ್ಲಿ ಮಾಡಿ ಕೊಟ್ರೆ ಸಾಕು. ಸಾಲಾ ಮಾಡ್ಕೋಬೇಡಿ ಅಂದನಂತೆ ..ಎಲ್ಲಾ  ನೀನು ಹೇಳಿದ ಹಾಗೆಯೇ.ಆಯಿತಲ್ಲ..ವಿಜಿ. … ಸ್ವಾಭಿಮಾನದ ಬದುಕಿಗೆ ಬೆಲೆ ಕಟ್ತೋಕ್ಕೆ ಆಗದ ಫಲಿತಾಂಶ ಸಿಗುತ್ತೆ ಅಂತ ನೀನು ಹೇಳಿದ್ದನ್ನುಹೇಳಿದೆ.. ತುಂಬಾ ಇಷ್ಟವಾಯ್ತು ಅವರಿಗೆ.. ಹುಡುಗನಿಗೆ ತಂದೆ ಇಲ್ಲ.. ತಾಯಿ, ಹಾಗೂ ಅಣ್ಣ-ಅತ್ತಿಗೆ ಇದ್ದಾರೆ.. ೫ ವರ್ಷದ ವೃಷಬ್.. ತುಂಬಾ ಚೂಟಿ..ನನ್ನ ತುಂಬಾ ಹಚ್ಹ್ಕೊಂಡಿದ್ದಾನೆ ಗೊತ್ತಾ.. ಈಗಲೇ ಚಿಕ್ಕಿ ಅಂತ ಕರಿತಿದ್ದಾನೆ .. ಇದೀಗ.. ಆಕೆ ಅವಳದೇ ಪ್ರಪಂಚದಲ್ಲಿ…

ಆಕೆ ಕೆಲಸ ಬಿಟ್ಟ ಮೇಲೆ ಬರೋದು ಕಮ್ಮಿ ಆಯ್ತು. .ಆಕೆಯ ಮದುವೆಗೆ ಹಿಂದಿನ ರಾತ್ರಿ “ನಾಳೆ ರಜ” ಚೀಟಿಯನ್ನು ಅಂಗಡಿಯ ಬಾಗಿಲಿಗೆ ಅಂಟಿಸಿದೆ . ಆಕೆ ಇಷ್ಟಪಟ್ಟ ಪಿಂಕ್ ಕಲರ್ ಹನಿಮೂನ್ ನೈಟಿ ಪ್ಯಾಕ್ ಮಾಡಿಸಿದೆ.. ರಾತ್ರಿ ಕಾಟನ್ ಜುಬ್ಬಾಗೆ ಇಸ್ತ್ರೀ ಮಾಡುವಾ ಅಮ್ಮ “ಸೀರೆ ಉಟ್ಕೊಂಡು ಹೋಗೆ… ಯಾರಾದ್ರು ಹುಡುಗ…. ನಿನ್ನ ಇಷ್ಟಪಟ್ಟಾನು.. ಅಂತ ಹೇಳಿ.. ಜೋರಾಗಿ ನಕ್ಕರು… ಪ್ರತಿಯೊಂದು ವಿಷಯವನ್ನು ಅಮ್ಮನಿಗೆ ಹೇಳ್ತಿದ್ದೆ.. ಜೋರಾಗಿ ನಕ್ಕ ಅಮ್ಮನಿಗೆ ಒಮ್ಮೆಲೇ ಉಸಿರುಗಟ್ಟಿ ನಿಸ್ತೇಜರಾದಾಗ.. ಆಸ್ಪತ್ರೆಗೆ ಸೇರಿಸಲಾಯಿತು..ಇಡೀ  ಬದುಕಿನಲ್ಲಿ ನನಗಿದ್ದದ್ದು ಆಕೆ ಮಾತ್ರ.. ಪ್ರತಿಯೊಂದನ್ನು ಕಲ್ಪಿಸಿಕೊಳ್ಳುವವಳಿಗೆ ಹೀಗೆ ಆಗಬಹುದೆಂಬ ಕಲ್ಪನೆ ಯಾವತ್ತೂ ಮಾಡಿರಲಿಲ್ಲ.. ತೀರಾ ಶಾಕ್ ಗೆ   ಒಳಗಾಗಿದ್ದೆ.. ರಾತ್ರಿ ಎಲ್ಲಾ ತುಂಬಾ ನೋವಿನಲ್ಲಿ ಕಳೆದೆ..  ಮಧ್ಯಾನ್ಹ 4 ಗಂಟೆಗೇ ಅಮ್ಮನಿಗೆ ಅರಿವು ಬಂತು.. ಸಂಜೆ  ಅಮ್ಮ ಕೇಳಿದ್ರು ನಿನ್ ಮಲ್ಲಿಗೆ ಮದ್ವೆ ಇತ್ತಲ್ವೆ… ಅಯ್ಯೋ ಸುಮ್ನಿರು..ಅಂದೆ.. ತಲೆ ಬ್ಲಾಂಕ್ ಆಗಿತ್ತು..

ಅದಾಗಿ ತಿಂಗಳು.. ..ಟಿಆರ್ ಮಿಲ್..ಅವಳ ಮನೆ.. ಅವಳು ಹೇಳುತಿದ್ದ ಅವಳ ಆಫೀಸ್ ಹುಡುಕಿದೆ… ಎಲ್ಲೂ ಸುದ್ದಿ ಸಿಗಲಿಲ್ಲಾ… ಬದುಕು ಹೊಸ ಹೊಸ್.. ಕ್ವಿಜ್ ಇಡ್ತಾ ಹೋಯ್ತು. ನನ್ನ ಅಂಗಡಿ ಓನರ್, ಬಿಲ್ದಿಂಗನ್ನು ಮಾರಿ ಬಿಟ್ಟಿದ್ದ .. ಹೊಟ್ಟೆ ಪಾಡಿಗೆ ಮುಂಬೈಯಲ್ಲಿರುವ ಹಿಂದಿ ಚಲನಚಿತ್ರ ನಾಯಕಿಯ ಆಫೀಸೀನಲ್ಲಿ ಕೆಲಸಕ್ಕೆ ಹೊರಟಿದ್ದೆ.. ಬುಕ್ ಮಾಡಿದ ಟಿಕೆಟ್ ಹಿಡಿದು ಬರುತಿದ್ದವಳಿಗೆ ಕಾಫಿಬೋರ್ಡ್ ಹತ್ರ ಆಕೆ ಕಾಣಿಸಿದ್ದಳು!!!!! ಅಬ್ಬಾ…ಆದ ಖುಷಿ ಅವಳನ್ನು ಸಮಿಪಿಸುತಿದ್ದಂತೆ ಮಾಯ…ಕಣ್ಣ ಸುತ್ತ ಕಪ್ಪು… ಬಿಳಿಚಿ ಹೋದ ಮುಖ.. ನಾನು ಹಿಡಿತ ತಪ್ಪಿಬೀಳುವವಳಿದ್ದೆ.. ಆಕೆ ಗಟ್ಟಿಯಾಗಿ ನನ್ನಹಿಡಿದಿದ್ದಳು.. ಆಕೆಯ ಮದುವೆಗೆ ಹೋಗದಿರಲು ಕಾರಣ ಹೇಳಿದರೆ ಆಕೆ ಅರ್ಥ ಮಾಡಿಕೊಳ್ಳುವ ಭರವಸೆ ಇತ್ತು…..

sorry ಕಣೆ…ಅವತ್ತು ಅಮ್ಮ ಹೆಲ್ತ್ ಕೆಟ್ಟು ಹಾಸ್ಪಿಟಲ್ ಸೇರಿದ್ರು…..sorry ಬರಕ್ಕಾಗಲಿಲ್ಲ… ನನ್ನ ಕಣ್ಣಲ್ಲಿ ನೀರು ನೋಡಿ ಆಕೆ..ಬಿಡು ಮದುವೆ ನಡೆಯಲೇ ಇಲ್ಲ..”.ಅಂದಾಗ ಶಾಕ್ ಆಯ್ತು.

ಮಂಗಳೂರಿನಿಂದ ಬರ್ತಿದ್ದ ಬಸ್ಸು ನೆಲಮಂಗಲದ ಹತ್ರ ಆಕ್ಷಿಡೆಂಟ್”…ಅಳು ತಡೆಯಲಾಗಲಿಲ್ಲ ಅವಳಿಗೆ..

ಏನಾಯ್ತು?

ಅತ್ತೆ ಕಾಲು ಹೋಯ್ತು…ನನ್ನ ವೃಷಭ…ಹೋಗಿ ಬಿಟ್ಟ.. ವೃಶಬ್?..ನಂಗೆ ಹೆಸರುಗಳೇ ಮರ್ತು ಹೋಗಿತ್ತು…ಇಬ್ಬರೂ ಅತ್ತೆವು..

ಹುಡುಗನ ಅಣ್ಣನ ಮಗ ವೃಷಬ್…೫ ವರ್ಷದವನು  ಆಕ್ಸಿಡೆಂಟಲ್ಲಿ ತೀರಿ ಹೋಗಿದ್ದ,,  ..

ನೀನು ಅವನೊಂದಿಗೆ ಆಮೇಲೆ ಮಾತಾಡಿದ್ಯ? ಎಂದೆ.. ಸೌಮ್ಯಮುಖದ  ರಾಜ್ಕುಮಾರ್ ನೆನಪಿದ್ದ…

ಆಸ್ಪತ್ರೆಗೆ ಹೋಗಿದ್ನಲ್ಲ..ಯಾರೂ ನನ್ ಮುಖ ನೋಡೋಕ್ಕೆ ರೆಡಿ ಇಲ್ಲ.. ಆಕೆ ಜೋರಾಗಿ ಅಳುತಿದ್ದಳು..

ನೋಡೂ. ಸಮಾಧಾನ ಮಾಡ್ಕೋ.. ಮತ್ತೆ ಮೀಟ್ ಆಗೋಕ್ಕೆ ಟ್ರೈ ಮಾಡು … ಮುಂದಕ್ಕೆ ಓದು..ಇದನ್ನ ಚಾಲೆಂಜ್ ಆಗಿ ತೊಗೋ.. ಇದಕಿಂತ ದೊಡ್ಡ ನೋವು ಖಂಡೀತಾ..ಇಲ್ಲಾ. ಇದೇ ಕೊನೆದ್ದು ಕಣೆ…ಇನ್ನೂ ಬರೋದೆಲ್ಲಾ.. ಬರೀ ಖುಷಿ..ನಂಬು ನನ್ನ..ಕಣ್ಣಲ್ಲಿ ನೀರಿಳಿಯುತಿದ್ದರೂ ಅವಳಿಗೆ ಧೈರ್ಯ ಹೇಳಿದೆ.

ಅಳುನಿಲ್ಲಿಸಿ  ನನ್ನನ್ನೇ  ನೋಡುತಿದ್ದಳು…ನನ್ನ ಮಾತಿನ ಮೇಲೆ ಅದೆಷ್ಟು ನಂಬಿಕೆ.!!!!….ಪುಟ್ಟ ಮಗು, ತನಗೆ ಬೇಕಾದ್ದು ಸಿಕ್ಕಿದಾಗ ಅಳು ನಿಲ್ಲಿಸುವ ರೀತಿ ನಿಲ್ಲಿಸಿದಳು.. ಅದೇ..ಕೊನೆಯ ಭೇಟಿ…ಮಾರನೆಯ ದಿನಾ ಮುಂಬೈ ಹೊರಟ ನಾನು..ನನ್ನದೇ ಸಮಸ್ಯೆಗಳ ಸುಳಿಯಲ್ಲಿ ತೇಲುತ್ತಾ..ಮುಳುಗುತ್ತಾ…ಮುಳುಗುತ್ತಾ.ತೇಲುತ್ತಾ…ಅದೊಂದು ದಿನಾ ದಡ ಸೇರಿದೆ …

ಈಗ ಬದುಕು..ನನಗೆ ಬೇಕಾದ ರೀತಿಯಲ್ಲಿ….ನಾನು ಹೇಳಿದಂತೆ ಕೇಳುತಿತ್ತು…

ಮೊನ್ನೆ ಡೆಲ್ಲಿ ಏರ್ಪೋರ್ಟ್ ನಲ್ಲಿ ಫ್ಲೈಟ್ 3 ಗಂಟೆ ತಡವಾದಾಗ,..

ಆರಾಮವಾಗಿ ಸುತ್ತುತಿದ್ದವಳಿಗೆ.. ಬೆನ್ನು ಯಾರೋ ಮುಟ್ಟಿದಂತೆನಿಸಿ  ಹಿಂದೆ ನೋಡಿದೆ.. ಒಮ್ಮೆ ಎದೆಬಡಿತ ನಿಂತ ಅನುಭವ. ಪರಸ್ಪರ ಅಪ್ಪುಗೆಯಲ್ಲಿ ಅದೆಂಥಾ ಸುಖಾ… ಬಹಳ ಹೊತ್ತು ಕೈ ಹಿಡಿದು ಕೂತಿದ್ದೆವು. ಬದುಕಿನ ಬಾಕಿ ಇರುವ ಎಲ್ಲಾ ಖುಶಿಗಳನ್ನು ಪಡೆದ ಅನುಭವ. ನನ್ನಲ್ಲಿ ಹೆಚ್ಚು ಪ್ರಶ್ನೆಗಳಿರಲಿಲ್ಲ. ಆಕೆ ಸಂತೋಷವಾಗಿ ಇದ್ದಾಳೆ ಅನ್ನೋದು ಆಕೆಯನ್ನ ನೋಡಿದರೆ ತಿಳಿಯುತ್ತಿತ್ತು.

ಆಕೆ ಕಥೆ ಅದ್ಭುತವಾಗಿತ್ತು. ಓದು ಮುಂದುವರಿಸಿದ ಆಕೆಯನ್ನು ಮೂರು ವರ್ಷಗಳ ನಂತರ ಅದೇ ಹುಡುಗ ಮದುವೆಯಾಗಿದ್ದ. ಇಬ್ಬರು ಮಕ್ಕಳು. ಟ್ವಿನ್ಸ್. ಅದರಲ್ಲಿ ಒಬ್ಬನ ಹೆಸರು ವೃಷಬ್. ಅತ್ತೆ, ಭಾವ, ಓರಗಿತ್ತಿ ಎಲ್ಲಾ ಒಂದೇ ಮನೆಯಲ್ಲಿ. ಎಲ್ಲರೂ ಮುಂಬೈಯಲ್ಲಿ ಸೆಟ್ಲ್.

ಆಕೆ ನನ್ನನ್ನು ಆಗಾಗ ನೆನಪು ಮಾಡಿಕೊಳ್ಳುತಿದ್ದ ಬಗ್ಗೆ.. ಬೆಂಗಳೂರಿಗೆ ಬಂದಾಗ ಹುಡುಕಿದ ಬಗ್ಗೆ ಹೇಳಿದರೆ, ಆಕೆಯನ್ನು ಹುಡುಕುತ್ತ ಬಂದ ರಾಜಕುಮಾರ, ‘ಹೌದೂ.. ಮೊದಲ ಸಲ ಅವಳನ್ನು ನೋಡಿದಾಗ ಅದೇ ದಿನ ಅವಳನ್ನು ಪ್ರಪೋಸ್ಮಾಡ್ತೀನಿ ಅಂತ ಕರೆಕ್ಟ್ ಆಗಿ ಹೇಗೆ ಹೇಳಿದ್ರಿ? ಅಂದ ಎದುರು ಖುರ್ಚಿಯಲ್ಲಿ ಕೂರೂತ್ತಾ..

ಖುಷಿಯಲ್ಲಿ ಮಾತು ಹೊರಡದೆ ನಕ್ಕೆ.. ಟೇಬಲ್ ಮೇಲಿದ್ದ ನನ್ನ ಕೈ ಮೇಲೆ ಕೈ ಇಟ್ಟು ಹೇಳಿದ..

ಅಂದ ಹಾಗೆ ನನ್ನ ಇನ್ನೊಬ್ಬ ಮಗನ ಹೆಸರು ವಿಜಯ್…

14 comments

 1. ಆತ್ಮೀಯವಾದ ಬರಹ. ನಿಜಕ್ಕೂ ಲವ್ ಯೂ ಜಿಂದಗಿ..

 2. ವಿಜಯಕ್ಕ ಕಣ್ಣಲ್ಲಿ ನೀರು ಬರುವಷ್ಟು ಚೆನ್ನಾಗಿದೆ

 3. ವಿಜಯಕ್ಕ ಮನಸು ತುಂಬಿ ಬಂತು. ತುಂಬು ಅಕ್ಕರೆ ನಿಮಗೆ

 4. ಆತ್ಮವಿಶ್ವಾಸ ಹಾಗೂ ಆಶಾವಾದ ತುಂಬಿ ತುಳುಕುತ್ತಿದೆ

 5. ಆತ್ಮವಿಶ್ವಾಸ ಮತ್ತು.ಆಶಾವಾದ ತುಂಬಿತುಳುಕುತ್ತಿದೆ

 6. ತುಂಬಾ ಸುಂದರ ಲೇಖನ.ಜೀವನದ ಪ್ರತಿ ಕ್ಷಣವನ್ನೂ ಜೀವಿಸು, ಪ್ರತಿ ಕ್ಷಣವನ್ನೂ ಮನಸಾರೆ ಪ್ರೀತಿಸು ಎಂಬ ಸಂದೇಶ ಹೊತ್ತು ಬಂದ ಬರಹ.
  ಸರೋಜಿನಿ ಪಡಸಲಗಿ

 7. Vijayakka, life is so wonderful , full of amazing co incidences and hopes..

  After reading I touched my heart..

  Nutana Doshetty

 8. ವಿಜಯಕ್ಕಾ ಈಗ ಓದಿದೆ, ತುಂಬಾ ತುಂಬಾ ಇಷ್ಟ ಆಯ್ತು….ನಿಜ್ಜ, ಲವ್ ಯೂ ಜಿಂದಗಿ!!

Leave a Reply