ಕಥೆ ಯಾವಾಗ್ಲೂ ಮುಗೀತು ಅಂತಿಲ್ಲ. ಕೇಳೋರು ಇರೋವರ್ಗೂ ನಡೆತಾನೇ ಇರ್ತದೆ..

ಸುಮಾರು ನಾಲ್ಕೈದು ವರ್ಷಗಳ ಹಿಂದಿನ ಮಾತು. ಯಾರೋ ಸಂಬಂಧಿಗಳ ಮನೆಗೆ ಹೋಗಿದ್ದೆ.

ಅವರ ಮನೆಯ ಅಕ್ವೇರಿಯಂ ತುಂಬಾ ಚೆನ್ನಾಗಿತ್ತು. ಮೀನು ತಿನ್ನುವುದಷ್ಟೇ ಅಲ್ಲ, ಮೀನು ಸಾಕಾಣಿಕೆಯೂ ನನಗೆ ತುಂಬಾ ಇಷ್ಟವಾದ ಕೆಲಸವಾದ್ದರಿಂದ ಅವರ ಮನೆಗೆ ಹೋದವಳೇ ಆ ದೊಡ್ಡ ಅಕ್ವೇರಿಯಂ ಬಳಿ ಧಾವಿಸಿದ್ದೆ.

ನನ್ನ ಆಶ್ಚರ್ಯಕ್ಕೆ ಅಲ್ಲಿ ಮೀನುಗಳಿರಲಿಲ್ಲ. ಬದಲಾಗಿ ಎರಡು ದೊಡ್ಡ ಆಮೆಗಳಿದ್ದವು. ಆಮೆಯನ್ನು ಮೀನಿನಂತೆ ಸಾಕಬಹುದು ಎಂಬ ಕಲ್ಪನೆಯೇ ನನಗೆ ಹೊಸದು ಮತ್ತು ತೀರಾ ಖುಷಿ ಕೊಡುವಂತಹುದ್ದಾಗಿತ್ತು ಬೆಳಗಿನ ಒಂದಿಷ್ಟು ಹೊತ್ತು ನೇರ ಸೂರ್ಯನ ಕಿರಣ ಬೀಳುವ ವ್ಯವಸ್ಥೆ. ಆ ವೇಳೆಗೆ ಬಿಸಿಲು ಕಾಯಿಸಿಕೊಳ್ಳಲು ಅನುಕೂಲವಾಗುವಂತೆ ಆಮೆಗಳಿಗೆ ಮೇಲೆ ಹತ್ತಿ ಕುಳಿತುಕೊಳ್ಳಲು ಒಂದು ಆಸನ ವ್ಯವಸ್ಥೆ.

ಎಷ್ಟೊಂದು ರಾಜ ವೈಭವ ಈ ಆಮೆಗಳದ್ದು? ಅಷ್ಟಷ್ಟು ಹೊತ್ತಿಗೆ ಯಾರಾದರೂ ಬಂದು ಹೊಟ್ಟೆಗೆ ಹಾಕೋದೇನು… ಎರಡೂ ಆಮೆಗಳನ್ನು ಎತ್ತಿ ಬಿಸಿಲ ಕಾಯಿಸಲು ತಡವುವುದೇನು? ಮುದ್ದು ಮುದ್ದಾಗಿ ಮನೆ ಮಕ್ಕಳಂತೆ ಕರೆಯುತ್ತ ಮಾತನಾಡಿಸುವುದೇನು? ಅವೆರಡಕ್ಕೂ ಒಂದೊಂದು ಹೆಸರಟ್ಟು, ಹೆಸರು ಕೂಗಿದಾಗ ಅದೇ ಆಮೆ ಬರ್ತದೆ ಗೊತ್ತಾ ಅಂತಾ ಸಂಭ್ರಮ ಪಡೋದೇನು.. ಅವುಗಳ ಹೆಸರು ಹಿಡಿದು ಕರೆದು ಅವು ನೀರಿನಿಂದ ಮೇಲೆ ಬಂದು ಕುತ್ತಿಗೆಯನ್ನಷ್ಟೇ ಹೊರ ಚಾಚಿ ನೋಡುವ ಪರಿಯೇನು.. ನನಗೆ ಅದೇನೋ ತಮಾಷೆ ಅನ್ನಿಸ ತೊಡಗಿತು. ನಾನು ಸುಮ್ಮನೆ ದೂರದಲ್ಲೇ ನಿಂತು ಅದೆಲ್ಲವನ್ನೂ ಕಣ್ಣು ತುಂಬಿಸಿಕೊಂಡೆ.

ಆದರೆ ಅವರು ಮತ್ತೇನೋ ಕಥೆ ಹೇಳಿದರು. ಕೂರ್ಮಾವತಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಂತೆ. ಆಧುನಿಕ ಜೀವನದ ಎಲ್ಲ ಒತ್ತಡಗಳಿಗೆ ಆಮೆಯನ್ನು ಸಾಕುವುದರಿಂದ ಪರಿಹಾರ ಸಿಗುತ್ತದೆ ಎಂಬ ಹೊಸದೇ ಆದ ಇಲ್ಲಿಯವರೆಗೆ ನಾನೆಂದೂ ಕೇಳದ ವಿಷಯವನ್ನು ತುಂಬಾ ರಸವತ್ತಾಗಿ ಹೇಳಿದರು.

ನಮ್ಮ ವರ್ತಮಾನದ ತಲ್ಲಣಗಳು ಆಮೆ ಸಾಕುವುದರಿಂದ ಕಡಿಮೆ ಆಗುತ್ತದೆ ಎಂಬ ದೃಢವಾದ ನಂಬಿಕೆ ಅವರಿಗೆ. ಆ ಆಮೆ ಮನೆಗೆ ಬಂದ ಮೇಲೆ ಎಷ್ಟೊಂದೆಲ್ಲ ಒಳ್ಳೆಯದಾಯಿತು ಎನ್ನುವ ಉದ್ದದ ಲಿಸ್ಟ್ ಕೂಡ ಕೊಟ್ಟರು.

ನನಗೂ ಯಾಕೋ ನಾನೂ ಒಂದು ಆಮೆ ಸಾಕೋ ಹಾಗಿದ್ದರೆ…ರೆ.. ಅನ್ನಿಸತೊಡಗಿತು. ಅದು ನನ್ನ ಒತ್ತಡ ನಿವಾರಣೆಗಲ್ಲ, ನನ್ನ ತಲ್ಲಣಗಳೆಲ್ಲ ‘ಉಫ್’ ಎಂದು ಗಾಳಿಗೆ ತೂರಿದಂತೆ ಹಾರಿ ಹೋಗಲಿ ಎಂದು ಆಮೆ ಸಾಕುವ ಬಯಕೆ ಅಲ್ಲ. ಆದರೆ ಅವುಗಳನ್ನು ಸಾಕಬೇಕು ಅನ್ನಿಸಿದ್ದು ತೀರಾ ಮುದ್ದಾಗಿ ಯಾರಾದರೂ ಮಾತನಾಡಿಸುತ್ತಿರುವಾಗಲೇ ಚಿಪ್ಪಿನೊಳಗೆ ಮುಖ ಹುದುಗಿಸಿ ತನಗೂ ಈ ಲೋಕಕ್ಕೂ ಯಾವ ಸಂಬಂಧವೂ ಇಲ್ಲ ಎಂಬ ಸೋಗು ಹಾಕಿಬಿಡುವುದು ತೀರಾ ಆಸಕ್ತಿ ಹುಟ್ಟಿಸಿಬಿಟ್ಟಿತ್ತು.

ಜಗತ್ತೆಲ್ಲ ತನ್ನ ಸುತ್ತಲೂ ಖುಷಿಯಿಂದ ಇರುವಾಗ ತಾನೇ ತಾನಾಗಿ ತನ್ನದೇ ಚಿಪ್ಪಿನೊಳಗೆ ಹುದುಗಿಕೊಳ್ಳುವುದಿದೆಯಲ್ಲ ಅದು ನನಗೆ ಯಾವಾಗಲೂ ಇಷ್ಟವಾಗುವ ವಿಷಯ. ಅದು ಒಂದಿಷ್ಟು ನನ್ನ ಸ್ವಭಾವವೂ ಹೌದು. ಇಡೀ ಜಾತ್ರೆಯನ್ನೇ ಮೈಗೆ ಸುತ್ತಿಕೊಂಡಂತೆ ಆಡುತ್ತಿದ್ದರೂ ನನಗೆ ಬೇಕಾದ ಕ್ಷಣದಲ್ಲಿ ತಕ್ಷಣ ನನ್ನ ಸುತ್ತ ಒಂದು ಗೂಡು ಕಟ್ಟಿಕೊಳ್ಳಬಲ್ಲೆ. ಸುತ್ತ ಎಷ್ಟೇ ಗಲಾಟೆ ಇದ್ದರೂ ನಾನು ನನ್ನದೇ ಏಕಾಂತದಲ್ಲಿ ಕುಳಿತು ಪುಸ್ತಕ ಓದಬಲ್ಲೆ. ಕಡಲ ಅಬ್ಬರಿಸುವ ಅಲೆಗಳ ನಡುವೆಯೂ ಒಂದು ನಿರ್ವಾತವನ್ನು ಸೃಷ್ಟಿಸಿಕೊಳ್ಳಬಹುದು ಎಂಬ ನಂಬಿಕೆ ನನ್ನದು. ಹೀಗಾಗಿ ಬೇಕು ಬೇಕೆಂದಾಗ ತನ್ನೊಳಗೆ ಹುದುಗಿ ಹೋಗುವ ಆಮೆ ನನಗೆ ತೀರಾ ಇಷ್ಟವಾಗಿ ಬಿಟ್ಟಿತ್ತು.

ಅದಾದ ನಂತರ ಹಿಂದಿನ ವರ್ಷ ಧಾರವಾಡಕ್ಕೆ ಹೋಗಿದ್ದೆ. ಅಲ್ಲಿಯೂ ಒಂದು ಚಂದದ ಗಾಜಿನ ಪಾತ್ರೆಯಲ್ಲಿ ಎರಡು ಪುಟ್ಟ ಆಮೆ ಮರಿಗಳಿದ್ದವು. ಅದನ್ನು ನೋಡಿದ್ದೇ ನಾನು ಖುಷಿಯಲ್ಲಿ ಕುಪ್ಪಳಿಸುವುದೊಂದೇ ಬಾಕಿ. ನನ್ನ ಸಂತೋಷ ಕಂಡು ಆ ಮನೆಯವರು ಅದನ್ನು ನೀರಿನಿಂದ ತೆಗೆದು ನನ್ನ ಕೈಯ್ಯಲ್ಲಿಟ್ಟರು. ಆ ದಿನವಿಡೀ ಆ ಆಮೆಯ ಮರಿಗಳ ಜೊತೆಗೇ ಆಟ ಆಡುತ್ತ ಕಳೆದೆ. ನನ್ನ ಅಂಗೈನಷ್ಟು ದೊಡ್ಡದಾಗಿದ್ದ ಮರಿಗಳು ಪೂರ್ತಿ ದೊಡ್ಡದಾದರೆ ಎಷ್ಟು ದೊಡ್ಡದಾಗಬಹುದು ಎಂಬ ಕುತೂಹಲ ನನಗೆ. ಆದರೆ ಈ ಆಮೆಗಳು ದೊಡ್ಡದಾಗೋದೇ ಇಷ್ಟು ಮತ್ತೂ ದೊಡ್ಡದಾಗೋಲ್ಲ ಎಂದು ತಿಳಿದದ್ದೇ ಏನೋ ಕುತೂಹಲ. ಆಮೆಯ ಕುರಿತಾದ ನನ್ನ ಕುತೂಹಲ ಕಂಡು ನನಗೂ ಎರಡು ತಂದುಕೊಡ್ತೇನೆ ಇರು ಎಂದು ಆಶ್ವಾಸನೆ ನೀಡಿದರು..

ಮುಟ್ಟಿದರೆ ಮುಖ ಒಳಗೆಳೆದುಕೊಳ್ಳುತ್ತ ನಂತರ ನಿಧಾನವಾಗಿ ಇಣುಕುವ ಆಮೆಯನ್ನು ತೊಡೆಯ ಮೇಲಿಟ್ಟುಕೊಂಡು ಕುಳಿತ ನನಗೆ ಅದನ್ನು ಪುನಃ ನೀರಿಗೆ ಸೇರಿಸಲು ಮನಸ್ಸೇ ಆಗಿರಲಿಲ್ಲ.

ಮನೆಗೆ ಬಂದವಳೇ “ನಾವೂ ಆಮೆ ಸಾಕುವ” ಎಂದು ವರಾತೆ ಹಚ್ಚತೊಡಗಿದೆ. “ನಾವು ವಾರ ವಾರವೂ ಊರಿಗೆ ಹೋಗ್ತೀವಿ. ತಿಂಗಳಲ್ಲಿ ನಾಲ್ಕೈದು ದಿನ ನೀನೂ ಆ ಪ್ರೋಗ್ರಾಂ ಪ್ರೋಗ್ರಾಂ ಎಂದು ಹೊರಟು ಬಿಡ್ತೀಯಾ. ಆಗ ಆಮೆಯನ್ನೇನು ಮಾಡೋದು? ನೀನು ಅದನ್ನು ಕಟ್ಕೊಂಡೇ ಓಡಾಡ್ತೀಯಾ?” ಇವರು ಅದನ್ನು ಬಿಲ್ ಕುಲ್ ನಿರಾಕರಿಸಿ ಬಿಟ್ಟರು. ಹೀಗಾಗಿ ಆಮೆ ಸಾಕುವ ನನ್ನ ಆಸೆ ಇನ್ನೂ ಎದೆಯಲ್ಲಿ ಹಾಗೇ ಇರುವಾಗಲೇ ಮಸಾರಿಯನ್ನು ಎದುರಿಗಿಟ್ಟುಕೊಂಡು ಪ್ರಕಾಶ ನಾಯಕ “ಅಮೂರ್ತ ಚಿತ್ತ” ವನ್ನು ನನ್ನ ಕನಸಿಗೆ ತುಂಬಿದ್ದಾರೆ.

ಸುಮಾರು ವರ್ಷಗಳ ಹಿಂದೆ ‘ಅವಧಿ’ ನೀವು ಓದುತ್ತಿರುವ ಪುಸ್ತಕ ಯಾವುದು ತಕ್ಷಣ ಹೇಳಿ ಎಂಬ ಮೇಲ್ ಕಳಿಸಿತ್ತು. ಆ ಕ್ಷಣದಲ್ಲಿ ನನ್ನ ಕೈಯ್ಯಲ್ಲಿದ್ದದು ಇದೇ ಅಮೂರ್ತ ಚಿತ್ತ. ಎಲ್ಲಿದ್ದರು ಈ ಕಥೆಗಾರ ಇಷ್ಟು ದಿನ ಎಂಬ ಶೀರ್ಷಿಕೆ ಇಟ್ಟು ನಾಲ್ಕು ಸಾಲು ಬರೆದು ಕಳಿಸಿದ್ದೆ. ಆಗ ಬಹಳಷ್ಟು ಜನ ಆ ಪುಸ್ತಕದ ಬಗ್ಗೆ ವಿಚಾರಿಸಿದ್ದರು.

ಹೌದು, ತೀರಾ ಅಪರೂಪದ ಶೈಲಿಯಲ್ಲಿ ಕಥೆ ಬರೆಯುವ ಈ ಕಥೆಗಾರ ನಮ್ಮ ಕಣ್ಣು ತಪ್ಪಿಸಿ ಎಲ್ಲಿದ್ದರು? ನನ್ನ ಪಕ್ಕದ ಊರಿನವರಾಗಿದ್ದೂ ಇವರ ಬಗ್ಗೆ ನನಗೇಕೆ ಗೊತ್ತೇ ಇರಲಿಲ್ಲ ಎಂದು ನಾನು ಬಹಳಷ್ಟು ಸಲ ಯೋಚಿಸಿದ್ದೇನೆ. ಬಹುಶಃ ಭಾರತವನ್ನು ಬಿಟ್ಟು ಕುಪರ್ಟಿನೋದಲ್ಲಿ ವಾಸವಾಗಿರುವ ಪ್ರಕಾಶ ನಾಯಕರು ಇಲ್ಲಿ ಯಾರ ಗಮನಕ್ಕೂ ಬಂದಿರಲಾರರು. ಆದರೆ ಒಮ್ಮೆ ಗಮನಿಸಿದ್ದೇ ತಡ, ಅವರ ಸಂಪರ್ಕ ಸಾಧಿಸಲು ತಡವಾಗಲಿಲ್ಲ. ಒಮ್ಮೆ ಅವರು ನಮ್ಮದೇ ಅಂಕೋಲೆಯವರು ಎಂದು ಗೊತ್ತಾಗಿದ್ದೇ ತಡ, ಅಂಕೋಲೆಯ ಮಾಮೂಲಿ ಏಕವಚನ ಬಳಸಿ ಅಣ್ಣಾ ಎಂದು ಸಲಿಗೆ ಬೆಳೆಸಲು ಸಮಯ ಹಿಡಿಯಲಿಲ್ಲ. ಅಪರೂಪದ ಕಥೆ ಬರೆಯುವ ಪ್ರಕಾಶ ನಾಯಕರು ಅಷ್ಟೇ ಸೌಜನ್ಯಪೂರ್ಣರು ಎಂಬುದು ಮಾತ್ರ ಅವರು ಆಡಿದ ಕೆಲವೇ ಮಾತುಗಳಲ್ಲಿಯೂ ಕಂಡುಕೊಳ್ಳಬಹುದು.

ಅಪರೂಪದ, ವಿನಾಶದ ಅಂಚಿನಲ್ಲಿರುವ ಆಮೆಯನ್ನು ಸಾಕಿದ ವಿದೇಶದಲ್ಲಿರುವ ಭಾರತೀಯ ಕುಟುಂಬವೊಂದರ ಕಥೆಯನ್ನು ಇಲ್ಲಿ ತುಂಬಾ ಚಂದವಾಗಿ ವಿವರಿಸಿದ್ದಾರೆ. ಮಾನಸಾಳ ಒಡ್ಡೋಲಗದ ಕೇಂದ್ರ ಬಿಂದುವಾದ ಮಸಾರಿ ಎಂಬ ಆಮೆ ಆಕೆಯ ಗಂಡ ಹಾಗು ಮಗನ ಅನುಪಸ್ಥಿತಿಯಲ್ಲಿ ಅವಳ ಮಾತಿನ ಜೊತೆಗಾರನಾಗುವುದಾದರೂ ಕೊನೆಗೆ ಆ ಆಮೆ ಕಳೆದು ಹೋದ ನಂತರದ ತಲ್ಲಣ, ಅದನ್ನು ಹುಡುಕೋದಕ್ಕೆ ಆಕೆ ಪಟ್ಟ ಕಷ್ಟವನ್ನು ವಿವರಿಸುತ್ತಾರೆ.

ಕೊನೆಗೆ ಆಮೆ ಸಿಕ್ತು ಎಂದು ಬಂದವನು ಅವಳ ಮನೆಯ ಪರಿಸರವನ್ನೆಲ್ಲ ಗಮನಿಸಿ ಆಮೆ ತಂದುಕೊಡುತ್ತೇನೆ ಎಂದು ಹೇಳಿದರೂ ಆಮೆಯನ್ನು ತರದೇ ಅದರ ಫೋಟೊವನ್ನು ನೋಡಿ ಅದು ತೀರಾ ಅಪರೂಪದ ಆಮೆ ಮತ್ತು ಅದನ್ನು ಸಾಕುವುದು ಕಾನೂನಿನ ಪ್ರಕಾರ ಅಪರಾಧ ಎಂದು ಮನವರಿಕೆ ಮಾಡಿಸುತ್ತಾನೆ. ಕೊನೆಗೂ ತೋಟ ನೋಡಿಕೊಳ್ಳಲು ಬಂದ ಮಾಲಿಯ ಅಣ್ಣನ ಮಗ ಆ ಆಮೆಯನ್ನು ಕೊಂಡೊಯ್ದಿರುವುದು ತಿಳಿದು ಸಮಾಧಾನಗೊಳ್ಳುತ್ತಾಳೆ. ಒಟ್ಟಿನಲ್ಲಿ ಮಸಾರಿಯನ್ನು ಮತ್ತೆ ಮತ್ತೆ ಓದುತ್ತ ನಾನು ಆಮೆಯ ಲೋಕದಲ್ಲಿ ಕಳೆದು ಹೋಗುತ್ತೇನೆ. ಇದೆಲ್ಲಕ್ಕಿಂತ ಹೆಚ್ಚಾಗಿ ಈ ಕಥೆಯೊಳಗಿನ ಭಾವ, ಅದರ ನಿರೂಪಣೆ ಎಲ್ಲವೂ ತೀರಾ ವಿಶಿಷ್ಟವಾಗಿದೆ.

ಒಂದು ದಿನ ಯಾವುದೋ ಕೆಲಸಕ್ಕೆಂದು ಕುಮಟಾಕ್ಕೆ ಹೋದಾಗ ಅಲ್ಲಿ ಸ್ನೇಹಿತರೊಬ್ಬರು ಅವಸರವಸರವಾಗಿ ಬಂದು “ಈ ಪುಸ್ತಕ ನಿನಗೆ ಕೊಡಲು ಹೇಳಿದ್ದಾರೆ” ಎಂದು ಕೊಟ್ಟಿದ್ದರು. “ಇದ್ಯಾರಿದು ಪ್ರಕಾಶ ನಾಯಕ.. ಹೊಸದಾಗಿ ಹೆಸರು ಕೇಳ್ತಿದ್ದೀನಲ್ಲ?” ಎನ್ನುತ್ತ ನಂತರ ಓದಿದರಾಯಿತು ಎಂದು ಎತ್ತಿಟ್ಟು ಬಿಟ್ಟಿದ್ದೆ.

ಆದರೆ ಯಥಾ ಪ್ರಕಾರ ಪುಸ್ತಕ ಕೈಗೆ ಬಂದ ತಕ್ಷಣ ಓದಿ ಬಿಡುವ ನನ್ನ ಅಪ್ಪ “ಈ ಕಥೆಗಳು ತುಂಬಾ ಚೆನ್ನಾಗಿವೆ. ನೀನು ಓದಿದೆಯಾ?” ಎಂದು ಕೇಳಿದರು. ಇಲ್ಲ ಎಂದರೆ ಮತ್ತೆ ಬೈಯ್ಯಿಸಿಕೊಳ್ಳಬೇಕೆಂದು “ಹೌದು..ಚೆನ್ನಾಗಿವೆ” ಎಂದು ಬಿಟ್ಟಿದ್ದೆ. “ಧೃತರಾಷ್ಟ್ರ ಉವಾಚ ಕತೆ ನೋಡು…. ಎಷ್ಟೋ ಕಡೆ ಹೀಗೆ ಆಗ್ತದೆ ಅಲ್ವಾ? ನಮ್ಮನ್ನು ನಾವು ಬೇರೆಯೆವರೆಂದು ಆರೋಪಿಸುತ್ತ ಬದುಕುವುದನ್ನು ಎಷ್ಟೆಲ್ಲ ನೋಡಿದ್ದೇವೆ. ಇದೊಂದು ತರಹ ದ್ವಂದ್ವ ಮನಸ್ಥಿತಿ ಅನ್ನಿಸಲ್ವಾ? ಬಹಳಷ್ಟು ಕಡೆ ಹೀಗೇ ಆಗತದೆ. ನಾವು ನಮ್ಮತನವನ್ನು ಬಿಟ್ಟು ಬೇರೆ ಯಾರನ್ನೋ ನಾವು ಅಂತಾ ಭ್ರಮಿಸಿಕೊಂಡು ಬದುಕ್ತೇವೆ. ಈಗ ನಾವು ಶೂದ್ರರೆಲ್ಲ ನಮ್ಮ ಸ್ವಂತಿಕೆಯನ್ನು ಬಿಟ್ಟು ಬ್ರಾಹ್ಮಣಿಕೆ ಶ್ರೇಷ್ಟ ಎಂಬ ವ್ಯಸನಕ್ಕೆ ಬಿದ್ದು ಅದನ್ನು ನಮ್ಮ ಮೇಲೆ ನಾವೇ ಆರೋಹಿಸಿಕೊಳ್ಳುವ ಹಾಗೆ” ಎಂದಿದ್ದರು.

ಆ ಕಥೆಯನ್ನೇ ಓದಿರದ ನಾನು ನಾನು ಪೆಕರು ಪೆಕರಾಗಿ ನಕ್ಕಿದ್ದೆ. ನನ್ನ ನಗು ನೋಡಿಯೇ ನಾನು ಓದಿಲ್ಲ ಎಂಬುದನ್ನು ಅಪ್ಪ ಅರ್ಥ ಮಾಡಿಕೊಂಡಿದ್ದರು. “ಯಾರಾದರೂ ನಿನಗೆ ಅವರು ಬರೆದ ಪುಸ್ತಕ ಕೊಡ್ತಾರೆ ಅಥವಾ ಯಾವುದಾದರೂ ಪುಸ್ತಕ ಕೊಡ್ತಾರೆ ಅಂದರೆ ಅದರ ಅರ್ಥ ನೀನು ದೊಡ್ಡ ವ್ಯಕ್ತಿ ಅಂತಲ್ಲ. ತಾನು ಬರೆದದ್ದನ್ನು ಓದಲಿ ಅಂತಲ್ಲ. ಅದೊಂದು ಪ್ರೀತಿಯ ಸಂಕೇತ. ಗೌರವದ ಸಂಕೇತ. ನೀನು ಓದಲಿಲ್ಲ ಅಂತಾದರೆ ಅವರು ತೋರಿಸುವ ಪ್ರೀತಿ, ಗೌರವಕ್ಕೆ ನೀನು ಅರ್ಹಳಲ್ಲ ಎಂದಾಗುತ್ತದೆ. ಅರ್ಹತೆ ಇಲ್ಲದಿದ್ದಲ್ಲಿ ಪ್ರೀತಿ ತೋರಿಸುವುದು ತಪ್ಪಲ್ಲವೇ? ಅದೂ ಅಲ್ಲದೇ ಪ್ರೀತಿಯಿಂದ ಕೊಟ್ಟ ಪುಸ್ತಕವನ್ನು ಒಮ್ಮೆಯಾದರೂ ಓದದೇ ಇದ್ದರೆ ನಿನ್ನ ಯೋಗ್ಯತೆಯನ್ನು ನೀನೇ ಹೇಳಿಕೊಂಡಂತೆ ಆಗುವುದಿಲ್ಲವೇ?” ಚಿಕ್ಕವಳಿದ್ದಾಗ ಕೇಳಿದಂತೆ ಕಣ್ಣು ಕೆಂಪಾಗಿಸಿಕೊಂಡು ಹೇಳದೇ ಬೇಸರದಲ್ಲಿ ಎಂಬಂತೆ ಹೇಳಿದ್ದರು. “ನೀನು ಓದ್ತಿದ್ದೆಯಲ್ಲ, ಅದಕ್ಕೆ ಓದಲು ಆಗಲಿಲ್ಲ. ಇವತ್ತೇ ಓದಿ ಮುಗಿಸ್ತೀನಿ.” ನಾನು ಸಮಾಧಾನ ಪಡಿಸಿದ್ದೆ.

ಅಪ್ಪ ಹೇಳಿದಂತೆ ‘ದೃತರಾಷ್ಟ್ರ ಉವಾಚ’ ಕಥೆ ಇಡೀ ಪುಸ್ತಕದಲ್ಲೇ ಹೆಚ್ಚು ಗಮನ ಸೆಳೆಯುವ ಕಥೆ. ಅದರ ನಿರೂಪಣೆ ಮಾಮೂಲಿಯಾಗಿದ್ದರೂ ಕಥೆ ಹೇಳುವ ಶೈಲಿ ಮಾತ್ರ ಆಕರ್ಷಿಸುತ್ತದೆ. ದ್ವಾಪರಾ ಯುಗದ ಕೊನೆಯ ಕೊಂಡಿಯೇ ತಾನು ಎಂಬಂತೆ ಸಂಕಯ್ಯ ಶೆಟ್ಟರು, ತಾನು ಸ್ವತಃ ದೃತರಾಷ್ಟ್ರನಾಗಿದ್ದೆ ಎಂದು ಇಡೀ ಮಹಾಭಾರತಕ್ಕೇ ಹೊಸ ಭಾಷ್ಯ ಬರೆಯ ಹೊರಟು ಬಿಡುತ್ತಾರೆ. ನಾಟಕದ ಅಭಿನಯ ಮಾಡುತ್ತ, ನೂರು ಮಕ್ಕಳು ಸತ್ತ ಪುತ್ರ ಶೋಕವನ್ನು ತೋಡಿಕೊಳ್ಳುತ್ತ ಸಂಕಯ್ಯ ಶೆಟ್ಟರು ಅಲ್ಲಿಯೇ ಕುಸಿದು ಬಿದ್ದದ್ದು, ನಂತರ ಪ್ರಥಮೋಪಚಾರ ಮಾಡಿದ್ದು ಯಾವುದೂ ನೆನಪಿರದಿದ್ದರೂ ಜನ್ಮಾಂತರಕ್ಕೆ ಹಾರಿ ಥೇಟ್ ಸಂಜಯ ಕುರುಕ್ಷೇತ್ರದ ವೀಕ್ಷಕ ವಿವರಣೆಯನ್ನು ಕೊಟ್ಟಂತೆ ತಾನೇ ದೃತರಾಷ್ಟನಾಗಿ ಇಡೀ ಮಹಾಭಾರತವನ್ನು ತನ್ನದೇ ವ್ಯಾಖ್ಯೆಯಲ್ಲಿ ಹಿಡಿದಿಡತೊಡಗುತ್ತಾರೆ.

ಇನ್ನೂ ಸ್ವಂತ ಮನೆಯಾಗದೇ ಬಾಡಿಗೆ ಮನೆಯಲ್ಲಿಯೇ ಉಳಿಯುವ ಸಂಕಟ, ಓದು ಮುಗಿಸಿದರೂ ಇನ್ನೂ ಉದ್ಯೋಗ ಹತ್ತದ ಮಗ ಇವೆಲ್ಲದರ ನಡುವೆ ತಾನೇ ದೃತರಾಷ್ಟ್ರ ಎಂದು ಕುಳಿತ ಶೆಟ್ಟರ ಮಾತು ಕೇಳಲು ಕುತೂಹಲದಿಂದ ಬಂದವರು, ಮನರಂಜನೆಗೆಂದು ಇಣುಕಿದವರು ಮನೆ ತುಂಬಾ ತುಂಬಿಕೊಂಡಾಗ ಹೆಂಡತಿ ಮಗ ಆಸಹನೆ ತೋರಿಸತೊಡಗುತ್ತಾರೆ. ಯಾರ ಮಾತೂ ಕೇಳದ ಶೆಟ್ಟರ ದೃತರಾಷ್ಟ್ರನ ಕಥೆ ಕೊನೆ ಕೊನೆಗೆ ಹುಚ್ಚಿನ ಅತಿರೇಕ ಎಂಬುದು ಗೊತ್ತಾದರೂ ಟಿವಿಯವರು ತಮ್ಮ ಟಿ ಆರ್ ಪಿ ಹೆಚ್ಚಿಳಕ್ಕಾಗಿ ಶೆಟ್ಟರ ಹುಚ್ಚಿಗೆ ಔಷಧ ಕೊಡಿಸಲು ಪ್ರಯತ್ನಿಸದೇ ದ್ವಾಪರದ ಏಕೈಕ ಕೊಂಡಿ ಎಂಬಂತೆ ಬಿಂಬಿಸುವುದು ನಮ್ಮ ಸಮಾಜದ ವ್ಯಂಗ್ಯಕ್ಕೆ ಹಿಡಿದ ಕನ್ನಡಿಯಂತಿದೆ.

ಹಿರೇಗುತ್ತಿಯ ಮತ್ತೊಂದು ಕೇರಿಯಲ್ಲಿ ನಮ್ಮದೊಂದಿಷ್ಟು ಗದ್ದೆ ಇದೆ. ಬಸ್ತಿ ಗದ್ದೆ ಎಂಬ ಹೆಸರು ಅದಕ್ಕೆ. ಚಿಕ್ಕವಳಿದ್ದಾಗ ನಾನು ಮತ್ತು ನನ್ನ ಚಿಕ್ಕಪ್ಪನ ಮಗಳು ಅಕ್ಟೋಬರ್ ರಜೆಯ ಸಮಯದಲ್ಲಿ ಅಲ್ಲಿಗೆ ಹೋಗುತ್ತಿದ್ದೆವು ಗದ್ದೆ ಕೊಯ್ಲಿಗೆ ಬಂದ ಕೆಲಸದವರಿಗೆ ಚಹಾ ತಿಂಡಿ ಕೊಟ್ಟ ಬರಲು. ಅಲ್ಲಿಗೆ ಹೋದಾಗಲೆಲ್ಲ ಹತ್ತಿರದ ಮನೆಯವರಲ್ಲಿ ಕೆಲವರು ನಮ್ಮನ್ನು ಕಂಡಾಗಲೆಲ್ಲ ಮರ ಹತ್ತಿ, ಗಡಿಬಿಡಿಯಿಂದ ನಮಗೆ ಎಳನೀರು ತಂದು ಕೊಡುತ್ತಿದ್ದರು.

ನಮಗೋ ಮುಜುಗರ. ಇವರು ಯಾಕೆ ಹೀಗೆ ಪ್ರತಿ ಸಲವೂ ನಮಗೆ ಎಳನೀರು ಕೊಡಬೇಕು ಎಂಬುದೇ ಅರ್ಥ ಆಗುತ್ತಿರಲಿಲ್ಲ. ಬೇಡ ಎಂದೇನಾದರೂ ನಿರಾಕರಿಸಿದರೆ “ನಿಮ್ಮದೇ ತೋಟದ್ದು ಇದು, ಹಂಗೆ ಹೇಳಬೇಡಿ” ಎಂದು ಅಲವತ್ತು ಕೊಳ್ಳುತ್ತಿದ್ದರು. ಮನೆಗೆ ಬಂದು ಅಪ್ಪನನ್ನು ಕೇಳಬೇಕು ಎಂದು ಎಷ್ಟೇ ನೆನಪಿಟ್ಟು ಕೊಂಡರೂ ಗದ್ದೆ ಪಾಳಿಯ ಮೇಲೆ ನಡೆದು ಬರುವ ಉಮ್ಮೇದಿಯಲ್ಲಿ, ಹರಿವ ನೀರಿನಲ್ಲಿ ಆಟ ಆಡುತ್ತ, ಆ ನೀರಿನಲ್ಲಿ ಈಜುವ ಚಿಕ್ಕ ಮೀನುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತ ಮನೆಗೆ ಬರುವಷ್ಟರಲ್ಲಿ ಆ ವಿಷಯವೇ ಮರೆತು ಹೋಗಿರುತ್ತಿತ್ತು.

ಮತ್ತೆ ನೆನಪಾಗುವುದು ಬಸ್ತಿಗದ್ದೆಗೆ ಹೋದಾಗಲೇ. ಸುಮಾರು ಒಂದೆರಡು ವರ್ಷ ಹೀಗೆಯೇ ಕಳೆದು ಹೋಗಿರಬಹುದು. ಒಮ್ಮೆ ಆ ಬಸ್ತಿ ಗದ್ದೆಯ ಹತ್ತಿರದ ಮನೆಯವರೊಬ್ಬರು ನಮ್ಮ ಮನೆಯ ತೆಂಗಿನ ಕಾಯಿ ಕೊಯ್ಯಲು ಬಂದಾಗ ಈ ವಿಷಯ ನೆನಪಾಯಿತು. ಆಗ ಅಪ್ಪನ ಬಳಿ ಕೇಳಿದಾಗ ಅವರು “ನಮ್ಮ ರೈತರು” ಎಂದಿದ್ದರು. ರೈತರು ಎಂದರೆ ನಮ್ಮ ಗದ್ದೆಯ ಕೆಲಸ ಮಾಡುವವರಿರಬಹುದು ಎಂದು ನಾನು ತಿಳಿದುಕೊಂಡಿದ್ದೆ.

ಆದರೆ ಅವರು ತಮ್ಮ ಮನೆಯ ಸುತ್ತಲಿನ ತೋಟದ ಎಳನೀರನ್ನು “ನಿಮ್ಮದೇ ತೋಟದ್ದು, ಕುಡಿರಿ,” ಎಂದು ಯಾಕೆ ಹೇಳುತ್ತಿದ್ದರು ಎಂಬುದು ಮಾತ್ರ ಅರ್ಥ ಆಗಿರಲಿಲ್ಲ. ಆಗ ಅಪ್ಪ ಉಳುವವನೇ ರೈತ ಎಂಬ ಕಾನೂನಿನ ಬಗ್ಗೆ ಹೇಳಿದ್ದರು ಆ ಬಸ್ತಿ ಗದ್ದೆಯ ಪಕ್ಕದಲ್ಲಿದ್ದ ತೋಟ, ಉಳುವವನೇ ರೈತ ಎಂಬ ಕಾನೂನಿಗೆ ಸಿಲುಕಿ ಅಲ್ಲಿಯೇ ಇದ್ದವರ ಪಾಲಾಗಿತ್ತು. ಹೀಗಾಗಿ ನಾವು ಅಲ್ಲಿಗೆ ಹೋದಾಗಲೆಲ್ಲ ಅವರ ಮುಖದಲ್ಲೊಂದು ಮುಜುಗರ ಎದ್ದು ಕಾಣುತ್ತಿತ್ತು.

ಅಮೂರ್ತ ಚಿತ್ತದ ‘ಅನಾಥರು’ ಕಥೆ ಓದುವಾಗ ನನಗೆ ಈ ಮುಜುಗರದ ಘಟನೆ ಪದೇ ಪದೇ ಕಣ್ಣೆದುರಿಗೆ ಬರುತ್ತಿತ್ತು. ಅದು ನಮ್ಮದೇ ತೋಟವಾಗಿತ್ತು ಎಂದು ತಿಳಿದ ನಂತರ ಅಷ್ಟು ಚಂದದ ತೋಟವನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಅಜ್ಜನ ಮೇಲೇ ಕೋಪವೂ ಬಂದಿತ್ತು. ಆ ತೋಟವೂ ನಮ್ಮದಾಗಿದ್ದರೆ ಎಷ್ಟೊಂದು ಆಸ್ತಿ ನಮ್ಮ ಬಳಿ ಇರ್ತಿತ್ತುಎನ್ನುವ ಆಸೆ. ಆದರೆ ಅಪ್ಪ ಮಾತ್ರ ಈ ವಿಷಯದಲ್ಲಿ ನಿರುಮ್ಮಳರಾಗಿದ್ದರು. ನಮಗೆ ಆ ತೋಟದ ಬಗ್ಗೆ, ಬಿಟ್ಟು ಹೋದ ಬಸ್ತಿ ಗದ್ದೆಯ ಬಗ್ಗೆ ಏನೂ ಗೊತ್ತಿಲ್ಲ, ರೈತರು ಗೇಣಿ ಎಂದು ಒಂದಿಷ್ಟು ಭತ್ತ, ಕಾಯಿ ತಂದು ಕೊಡ್ತಿದ್ದುದು ಅಷ್ಟೇ ಗೊತ್ತು. ನಾವು ಬಳಸದ, ಶ್ರಮ ಪಡದ ಜಾಗ ಅದು. ಯಾರು ನೋಡ್ಕೊಳ್ತಿದ್ರೋ ಅವರಿಗೇ ಅದು ಸೇರಿದ್ದು. ಎಂದು ಬಿಟ್ಟಿದ್ದರು.

ಆದರೂ ನನಗೆ ಒಂದು ರೀತಿಯ ತಳಮಳ. ಇತ್ತೀಚೆಗೆ ಕೊಂಕಣ ರೈಲು ಹಳಿಗಳ ಮೇಲೆ ವಾಕಿಂಗ್ ಎಂದು ಹೋದವಳಿಗೆ ದೂರದಿಂದಲೇ ಕಾಣುವ ಆ ತೋಟ ನೋಡಿದಾಗ ಮತ್ತದೇ ನೆನಪು. “ಅಕ್ಕ ಯಾವಾಗ್ ಬಂದ್ರಿ? ಮನೆ ಹತ್ರ ಬಂದು ಹೋಗಿ…” ಆ ಮನೆಗಳ ಸಾಲಿನಲ್ಲಿ ಒಬ್ಬಾತ ನನಗಿಂತ ಹಿರಿಯರು ತೀರಾ ವಿನಯದಿಂದ ಮುಖದಲ್ಲಿ ಮುಜುಗರ ತುಂಬಿಕೊಂಡು ಹೇಳಿದಾಗ ನಾನು ಯೋಚಿಸಿದ ರೀತಿಗೆ ನನಗೇ ಬೇಸರವಾಗಿಬಿಟ್ಟಿತ್ತು.

ಎರಡು ತಲೆಮಾರುಗಳ ಹಿಂದೆ, ಅದೂ ನಾನು ಹುಟ್ಟುವುದಕ್ಕೂ ಮೊದಲೇ ಬಿಟ್ಟು ಹೋದ ಜಾಗದ ಕುರಿತು ಅದು ನಮ್ಮದಾಗಿತ್ತು ಎಂದು ಯೋಚಿಸುವ ನನ್ನ ರೀತಿಗೆ ನನಗೆ ನಾಚಿಕೆಯಾಗಿತ್ತು. ಅನಾಥರು ಕತೆಯಲ್ಲೂ ಅಷ್ಟ. ರಾಯರು ತಮ್ಮ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡವರಿಗೆ “ಹ್ಯಾಂಗೆ ಹೊಟ್ಟೆಗೆ ಹೋಗ್ತದೋ… ಮೋಸಗಾರರು..” ಎಂದಾಗಲೆಲ್ಲ ಅಲ್ಲಿಯೇ ಕೆಲಸ ಮಾಡುತ್ತಿರುತ್ತಿದ್ದ, ರಾಯರ ಒತ್ತಾಯಕ್ಕೆ ಎಂಟು ಗುಂಟೆ ಜಾಗವನ್ನು ತನ್ನ ಹೆಸರಿಗೆ ಮಾಡಿಸಿಕೊಂಡ ಗಣಪುವಿಗೆ ಉಗುಳು ಸಿಕ್ಕಿಹಾಕಿಕೊಂಡ ಅನುಭವ.

ರಾಯರ ಕಾಲದ ವೈಭವಗಳೆಲ್ಲ ಮುಗಿದು, ಮನೆ ಮಾರುವುದಕ್ಕೆ ಹೊರಟ ರಾಯರ ಮಗನಿಗೆ ಮನೆಯಲ್ಲಿರುವ ಹಳೆಯ ವಸ್ತುಗಳನ್ನೆಲ್ಲ ಮಾರಿಬಿಡುವ ಅವಸರ. ರಾಯರ ನಾಯಿ ಟೈಗರ್ ಗೊಂದು ಸರಿಯಾದ ಮನೆ ಹುಡುಕುತ್ತೇನೆಂದು ಹೊರಟ ಗಣಪುಗೆ ಗೊತ್ತಾಗದಂತೆ ನಾಯಿಯೂ ಮಾರಾಟವಾಗಿ ತಾನು ತಿಂದುಂಡ ಮನೆಗೆ ಯಾವ ಸಹಾಯವೂ ಮಾಡಲಾಗಲಿಲ್ಲ ಎಂಬ ಹಳಹಳಿಕೆ. ಕೊನೆಯಲ್ಲಿ, ನಾಯಿಯನ್ನು ದುಡ್ಡು ಕೊಟ್ಟು ಕೊಂಡು ಹೋದರೋ ಎಂಬ ಗಣಪುವಿನ ಅನುಮಾನಕ್ಕೆ “ಈವಾಗ ಎಲ್ಲದಕ್ಕೂ ದುಡ್ಡೇ. ನಾನು ನೀನು ಅಷ್ಟೇ ಪುಕ್ಕಟೆ ಎಂಬ ಮಾತು” ಪ್ರತಿಯೊಬ್ಬರ ಮನಸ್ಸಿನ ವೇದನೆಯೇನೋ ಎಂಬಂತೆ ಭಾಸವಾಗುತ್ತದೆ.

‘ಮೂಕ ಮರ್ಮರ’ ನನಗೆ ಇಷ್ಟವಾದ ಇನ್ನೊಂದು ಕಥೆ. ವಿದೇಶದ ನೆಲದಲ್ಲಿ ಮನೆ ಕೊಂಡಾತನೊಬ್ಬನಿಗೆ ಮನೆಯ ಎದುರಿಗಿರುವ ದೇವದಾರು ಮರ ಹೇಗೆ ಮುಖ್ಯವಾಗುತ್ತದೆ ಎಂಬುದನ್ನು ವಿವರಿಸುತ್ತ, ಆ ಮರದ ಜೋಡಿಯಾಗಿ ಅದೇ ಊರಿನ ಸಾಂತಾಕ್ರೂಸ್ ಎಂದು ತಮಾಷೆಗೊಳಗಾಗಿ ಕೊನೆಗೆ ಸಾಂತಜ್ಜ ಕರೆಯಿಸಿಕೊಳ್ಳುವ ವಿಲ್ಸನ್ ನ ಕಥೆ ಕೂಡ ನಿರೂಪಣೆಗೊಳ್ಳುತ್ತದೆ.

ಮರದೊಂದಿಗೆ ಸಾಂತಜ್ಜನ ಅನುಬಂಧ ಮಾತಿನಲ್ಲಿ ಹೇಳಲಾಗದ್ದು. ಕೆಲವು ವರ್ಷಗಳ ಹಿಂದೆ ಮರವನ್ನು ಕಡಿಯುವ ಪ್ರಸ್ತಾಪವನ್ನು ತೀರಾ ವಿರೋಧಿಸಿ ಅದನ್ನು ಉಳಿಸಿಕೊಂಡವನು ಅವನೇ. ಆದರೆ ಮರದ ಆಯಸ್ಸು ಮುಗಿದಿದೆ. ಅದು ಅಳುತ್ತಿದ್ದುದು ಕೇಳಿಸುತ್ತಿದೆ ಎಂದು ಹಳಹಳಿಸುತ್ತ ಮರವನ್ನು ಕಡಿಸೋಣ ಎಂದು ಬೆನ್ನು ಬಿದ್ದವನೂ ಅವನೇ. ಆದರೆ ಸಾಂತಜ್ಜ ಕೊನೆಗೆ ಮರ ಬೀಳುವ ಮುನ್ನವೇ ಇಹಲೋಕ ತ್ಯಜಿಸುವುದು ಕಾಕತಾಳಿಯವೋ ಅಥವಾ ಅದಕ್ಕೊಂದು ಅಲೌಕಿಕ ಕಾರಣವಿದೆಯೋ ಎಂದು ಯೋಚಿಸುವಂತಾಗುತ್ತದೆ.

ಹಿರೇಗುತ್ತಿಯ ನಮ್ಮ ಮೂಲ ಮನೆಯ ಪಕ್ಕದಲ್ಲೊಂದು ಜಟಕವಿದೆ. ಸುರಗಿ ಮರದಡಿ ನಿಂತ ಆ ಜಟಕನ ಬಳಿ ಸಾಮಾನ್ಯವಾಗಿ ಯಾರೂ ಓಡಾಡುವುದಿಲ್ಲ. ತೀರಾ ಉಗ್ರ ಸ್ವರೂಪಿ ಎಂದೇ ಹೆಸರು ಪಡೆದ ಆ ಜಟಕನಿಗೆ ತಲೆಯ ಮೇಲೊಂದು ಸೂರೂ ಇಲ್ಲ. ತನಗೆ ಬಯಲೇ ಇಷ್ಟ, ಗುಡಿ ಕಟ್ಟುವಂತಿಲ್ಲ ಎಂದು ನಿರಾಕರಿಸಿದ ಜಟಕನಿಗೆ ಆ ಸುರುಗಿಯ ಮರವೇ ಆಸರೆ. ನಾನು ಚಿಕ್ಕಂದಿನಲ್ಲಿದ್ದಾಗ ಈ ಜಟಕನ ಉಗ್ರತೆಯ ಅರಿವಿಲ್ಲದೇ ಸುರುಗಿಯ ಪರಿಮಳದ ಬೆನ್ನೇರಿ ಅಲ್ಲಿಗೆ ಹೋಗುತ್ತಿದ್ದೆ.

ಒಮ್ಮೆ ಅಲ್ಲಿ ಹೋಗಿ ನಾನು ಹೂವು ಕೊಯ್ಯುತ್ತಿರುವುದು ನಮ್ಮ ಚಿಕ್ಕಮ್ಮನ ಕಣ್ಣಿಗೆ ಬಿದ್ದು, ಅವರು ಜಟಕನ ಸ್ಥಾನವನ್ನು ಹೊಲಸು ಮಾಡಬಾರದು ಎಂದು ಹೇಳಿದ್ದಲ್ಲದೇ ನನಗೊಂದಿಷ್ಟು ಭಯ ಹುಟ್ಟಿಸುವುದಕ್ಕಾಗಿ ಅದು ರಾತ್ರಿ ಮನೆಯ ಬಳಿ ಬಂದು ಹೆದರಿಸುತ್ತದೆ ಎಂದಿದ್ದರು. ಎಷ್ಟೋ ವರ್ಷಗಳಿಂದ, ರಜೆಗೆಂದು ಊರಿಗೆ ಬಂದ ದಿನಗಳಲ್ಲೆಲ್ಲ ಹೀಗೆ ಹೂ ಕೊಯ್ದರೂ ಹೆದರಿಸದ ಜಟಕ ಅಂದು ನನ್ನನ್ನು ತನ್ನ ಗೆಜ್ಜೆಯ ಸದ್ದಿನಿಂದ ಕಂಗಾಲಾಗಿಸಿ ಬಿಟ್ಟಿದ್ದ.

ಯಾವತ್ತೂ ಮನೆಯ ಹೊರ ಜಗಲಿಯಲ್ಲೇ ಮಲಗುತ್ತಿದ್ದ ನಾವು ಅಂದು ನಮ್ಮ ನಿದ್ರೆಯ ಸ್ಥಳವನ್ನು ಒಳ ಕೋಣೆಗೆ ಸ್ಥಳಾಂತರಿಸಿ ಬಿಟ್ಟಿದ್ದೆವು. ದೂರದಲ್ಲೆಲ್ಲೋ ಕೇಳುತ್ತಿದ್ದ ಗೆಜ್ಜೆ ಶಬ್ಧ ಜಟಕನ ಸ್ಥಾನದಿಂದಲೇ ಹೊರಟಿದ್ದು, ಆ ಸದ್ದು ಮನೆಯ ಸಮೀಪ ಬರುತ್ತಿದೆ ಎಂಬ ಕಲ್ಪನೆಗಳೇ ನಮ್ಮನ್ನು ನಡುಗುವಂತೆ ಮಾಡಿಬಿಟ್ಟಿತ್ತು.

ವಿಚಿತ್ರ ಎಂದರೆ ಮಧ್ಯ ರಾತ್ರಿಯಾದರೂ ಮಲಗದೇ ಗುಸುಗುಸು ಮಾತನಾಡುತ್ತ, ಕುಸುಕುಸು ನಗುತ್ತ ಅರ್ಧ ತಾಸಿಗೊಮ್ಮೆ ಮರದ ಬುಡಕ್ಕೆ ಓಡುತ್ತಿದ್ದ ನಾವು ಬಾಯಿ ಮುಚ್ಚಿ ನಿದ್ದೆ ಬಂದ ಸೋಗು ಹಾಕಿದ್ದೆವು. ರಾತ್ರಿ ಎದ್ದು ಮರದ ಬುಡಕ್ಕೆ ಹೋಗುವುದಕ್ಕೂ ಭಯ. “ಯಾಕೇ? ಹೊರಗೆ ಹೋಗಬೇಕಾ? ಬಾ, ನಾನು ಕರ್ಕೊಂಡು ಹೋಗ್ತೆ” ಎನ್ನುತ್ತ ಒಬ್ಬರನ್ನೊಬ್ಬರು ಕರೆದುಕೊಂಡು ಹೋಗುವ ಸೋಗು ಹಾಕಿದರೂ ಕಣ್ಣು ಪೂರ್ತಿ ಜಟಕನ ಸ್ಥಾನದ ಕಡೆಗೇ. ಎಲ್ಲಾದರೂ ಆ ಜಟಕನ ಪಿತ್ತ ಕೆರಳಿ ಸುರುಗಿ ಹೂವು ಬೇಕು ಅಂತ ಬಂದು ಬಿಟ್ಟರೆ……. ಕೊನೆಗೂ ವರ್ಷಗಳಿಂದ ನಾನು ಸುರಗಿ ಹೂ ಕೊಯ್ದಾಗಲೂ ಬರದ ಜಟಕ ಈಗ ಒಮ್ಮೆಲೆ ಬಂದು ಬಿಡಲು ಹೇಗೆ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಂಡಿದ್ದು ನಾನು ಹತ್ತನೇ ತರಗತಿಗೆ ಬಂದ ಮೇಲೆಯೇ.

ಹೀಗಾಗಿ ‘ಬಕುಳದ ನೆರಳು’ ಓದಿದಾಗ ಈ ಜಟಕ ಕೂಡ ಸುರುಗಿಯ ಘಮದೊಂದಿಗೆ ಕಣ್ಣೆದುರು ಬಂದಂತಾಯಿತು.
ಈ ಹೂವು-ಹಣ್ಣಿನ ಕಥೆಗಳೇ ಒಂಥರಾ ವಿಚಿತ್ರ. ಅದರಲ್ಲೂ ಆ ಕಥೆಗಳ ಜೊತೆ ದೇವಲೋಕದ ನಂಟೇನಾದರೂ ಸೇರಿಕೊಂಡು ಬಿಟ್ಟರೆ ಇಡೀ ಕಥೆಯ ತುಂಬ ಅಪ್ಸರೆಯರ ಘಮ, ಸೋಮರಸದ ಅಮಲು ಮತ್ತು ದೇವತೆಗಳ ರಸಿಕತೆ. ಈ ದೇವತೆಗಳು ಖುಷಿಯಿಂದ ಕಣ್ಣು ತೆರೆದರೂ ಏನೋ ಒಂದು ಹುಟ್ಟುತ್ತದೆ, ದುಃಖದಲ್ಲಿ ಕಣ್ಣು ಮುಚ್ಚಿದರೂ ಮತ್ತೊಂದು ಜನಿಸುತ್ತದೆ. ಕೋಪದಲ್ಲಿ ಕೆಂಪಾದರಂತೂ ಸರಿಯೇ ಸರಿ.

ನಮ್ಮ ನದಿಗಳ ಹುಟ್ಟಿಗೆಲ್ಲ ಇಂತಹುದ್ದೇ ಕಥೆಗಳು. ಆಡಂ ಮತ್ತು ಈವ್ ಸೇಬು ತಿಂದಿದ್ದಕ್ಕೇ ಅವರಿಗೆ ಬುದ್ಧಿ ಬಂದಿದ್ದಂತೆ. ಅವರಿಗೆ ಬುದ್ಧಿ ಬಂತು ಎಂಬ ಕಾರಣಕ್ಕಾಗಿಯೇ ಆ ದೇವರು ಅವರಿಗೆ ಶಾಪ ಕೊಟ್ಟನಂತೆ. ಇತ್ತ ನಮ್ಮ ಕೆಂಪು ತೊಟ್ಟಿನ ಪಾರಿಜಾತದ ಕಥೆ ಗೊತ್ತಿದೆಯಲ್ಲ? ದೇವಲೋಕದ ಹೂ ಪಾರಿಜಾತ ರುಕ್ಮಿಣಿ ಸತ್ಯಭಾಮೆಯರ ನಡುವೆ ನಲುಗಿ ಭೂಲೋಕಕ್ಕೆ ಬಂದದ್ದು,

ಹಾಗೆಯೇ ಈ ಬಕುಳದ್ದೂ ಒಂದು ಕಥೆ. ಆದರೆ ಪ್ರಕಾಶ ನಾಯಕರು ಈ ಬಕುಳದ ಜೊತೆ ಕಂಗಾಲಜ್ಜಿಯನ್ನು ಸೇರಿಸುತ್ತಾರೆ. ಕಂಗಾಲಜ್ಜಿಯೋ ಕಥೆ ಹೇಳುವುದರಲ್ಲಿ ಭಾರಿ ನಿಪುಣೆ. ಕಥೆ ಹೇಳುವ ಆಸೆ ಹುಟ್ಟಿಸಿ ಮಕ್ಕಳಿಂದ ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳುವುದರಲ್ಲಿ ಕೂಡ. ಅಂತಹ ಕಂಗಾಲಜ್ಜಿಯ ಹುಂಜವನ್ನು ಯಾರೋ ಕದ್ದೊಯ್ದು ಆಕೆ ಹುಂಜ ಸಿಗುವವರೆಗೂ ಅನ್ನ ನೀರು ಮುಟ್ಟೋದಿಲ್ಲ ಎಂದು ಭೀಷ್ಮ ಪ್ರತಿಜ್ಞೆ ಮಾಡಿ ಕೂಡಿಟ್ಟ ಹತ್ತು ಸಾವಿರ ರೂಪಾಯಿಗಳನ್ನು ಅನಾಥವಾಗಿಸಿ ಸತ್ತ ಕಥೆ ಹೇಳುವ ಶಂಕರಣ್ಣ ಕೂಡ ಕಥೆ ಹೇಳುವುದರಲ್ಲಿ ಯಾವ ಕಂಗಾಲಜ್ಜಿಗೂ ಕಡಿಮೆ ಇಲ್ಲದವ.

ಈ ಅಮೂರ್ತ ಚಿತ್ತವು ವಿದೇಶಿ ನೆಲದಿಂದ ಸೀದಾ ಉತ್ತರ ಕನ್ನಡದ ಕಾಡಿಗೆ, ಈ ಅಂಕೋಲೆ, ಕುಮಟಾದ ಪುಟ್ಟ ಪುಟ್ಟ ಹಳ್ಳಿಗಳಿಂದ ಸೀದಾ ನ್ಯೂಯಾರ್ಕಗೆ ನೆಗೆವ ಅಚ್ಚರಿಯ ಕಾಲಚಕ್ರದಂತೆ ನನಗೆ ಗೋಚರಿಸುತ್ತದೆ. ಏಕಕಾಲದಲ್ಲಿ ವಿದೇಶಕ್ಕೂ, ಇಲ್ಲಿರುವ ಹಳ್ಳಿಗೂ ನಂಟು ಬೆಸೆಯುವ ತೂಗು ಸೇತುವೆಯಾಗುತ್ತದೆ. ಕೆಲವೊಂದು ಕಡೆ, ಉದಾಹರಣೆ ಬಹುರೂಪಿಗಳು, ಕ್ಷಣ ಭಂಗುರದಂತಹ ಕಥೆಗಳು ಅಲ್ಲಲ್ಲಿ ತೀರಾ ಹೆಚ್ಚಿನ ವಿವರಣೆಗಳಾಗಿ ಪ್ರಬಂಧದಂತೆ ತೋರಿದರೂ ಕತೆ ಹೇಳುವ ವಿಭಿನ್ನ ಶೈಲಿಯಿಂದಾಗಿಯೇ ಅಮೂರ್ತ ಚಿತ್ತ ಓದಲೇಬೇಕಾದ ಪುಸ್ತಕದ ಸಾಲಿನಲ್ಲಿ ಸೇರಿಕೊಳ್ಳುತ್ತದೆ. ಅದರಲ್ಲಿಯೂ ಅಮೂರ್ತ ಚಿತ್ತ ಎಂಬ ಕಥೆಯನ್ನಂತೂ ಬರೀ ಬಾಯಿ ಮಾತಿನಲ್ಲಿ ಹೇಳಿ ಮುಗಿಸಿಬಿಡುವಂತಿಲ್ಲ. ಅದರ ನಿರೂಪಣೆ, ಅದರ ಅಂಕು ಡೊಂಕುಗಳನ್ನೆಲ್ಲ ಓದಿಯೇ ಅನುಭವಿಸಬೇಕು.

“ಕಥೆ ಯಾವಾಗ್ಲೂ ಮುಗೀತು ಅಂತಿಲ್ಲ. ಕೇಳೋರು ಇರೋವರ್ಗೂ ನಡೆತಾನೇ ಇರ್ತದೆ”. ಎನ್ನುವ ಕಂಗಾಲಜ್ಜಿಯ ಮಾತನ್ನು ಇಲ್ಲಿನ ಎಲ್ಲಾ ಕಥೆಗಳನ್ನು ಓದುವಾಗ ನಾವೂ ಅನುಭವಿಸುತ್ತೇವೆ. ಕತೆ ಮುಗಿಯುವುದೇ ಬೇಡ ಎಂಬ ಭಾವ ಹುಟ್ಟಿಸುವ ಕಥೆಗಳಿಗಾಗಿ ಪ್ರಕಾಶ ನಾಯಕರು ಅಭಿನಂದನಾರ್ಹರು.

16 comments

 1. ಶ್ರೀದೇವಿ ಮೇಡಂ ನೀವು ಈ ವಾರದ ‌ಅವಧಿಯಲ್ಲಿ ಶ್ರೀದೇವಿ ರೆಕಮೆಂಡ್ಸ್ ಅಂಕಣದ ಲೇಖನ ತುಂಬಾ ಚೆನ್ನಾಗಿ ಬರೆದಿರುವಿರಿ…ಪ್ರತಿವಾರ ನಿಮ್ಮ ಅಂಕಣ ತುಂಬಾ ಚೆನ್ನಾಗಿ ಬರುತ್ತಿದೆ…ಪ್ರಕಾಶ ನಾಯಕರ ಅಮೂರ್ತ ಚಿತ್ತ ಕಥಾ ಸಂಕಲನದ ಕುರಿತು ನಿಮ್ಮ ವಿಮರ್ಶೆ ತುಂಬಾ ಚೆನ್ನಾಗಿದೆ ನಾನು ಈ ಪುಸ್ತಕ ಸಿಕ್ಕರೆ ಖಂಡಿತ ಕೊಂಡು ಓದುವೆ ..ನಿಮಗೆ ಅಭಿನಂದನೆಗಳು

 2. ಓದುತ್ತಿದ್ದಂತೆ ನಾನು ಕೂಡಾ ಅಮೆಯೊಂದಿಗೆ ಮಾತಾಡಿದೆ,

 3. ಶ್ರೀದೇವಿ ಕೆರೆಮನೆಯವರ ಬರಹದ ವಿಶೇಷತೆ ಅಂದ್ರೆ ಅವರು ಯಾವ ವಿಷಯದ ಬಗ್ಗೆ ಅಂದ್ರೆ ಕವಿತೆ, ಕಥೆ, ಅಂಕಣ ಬರಹ ಬರೆಯಲಿ ಅವರ ಸ್ವಂತ ಅನುಭವದ ಉಪಕಥೆಗಳ ಪ್ರಸ್ತಾಪ ಬರಹ ಓದಿಸಿಕೊಳ್ಳುವಂತೆ ಮಾಡುತ್ತೆ.

 4. ನಮ್ಮನೆಯಲ್ಲಿ ಎರಡು ಆಮೆಗಳಿದ್ದವು. ಒಂದು ರಿಂ ಜಿಮ್ ಇನ್ನೊಂದು ಋತುಪರ್ಣ. ಮನೆಯ ಒಳ ಅಂಗಳದಲ್ಲಿ ನೀರಿನ ತೊಟ್ಟಿ ಇಟ್ಟು ಮೀನುಗಳೊಡನೆ ಇಟ್ಟಿದ್ದೆವು. ಆಗಾಗ ಮೇಲೆ ಬಂದು ಮನೆಯಲ್ಲಿ ಸುತ್ತಾಡುವುದು ಇತ್ತು. ಅವುಗಳಿಗೆ ತಿನ್ನಿಸುವುದೇನು ಎಂದು ಪ್ರಯೋಗ ಮಾಡಿ ಮಾಡಿ ಅವು ಮೊಸರನ್ನ, ಚಪಾತಿ ಹಿಟ್ಟು, ಬ್ರೆಡ್ಡು ಪ್ರೀತಿಯಿಂದ ತಿನ್ನುವುದು ಕಂಡು ಅವನ್ನೇ ಕೊಡುತ್ತಿದ್ದೆವು. ನಾವು ನಮಗಾಗಿ ಬ್ರೆಡ್ ತರುವುದಿಲ್ಲವಾಗಿ ಅವುಗಳಿಗೆಂದೇ ಬ್ರೆಡ್ ಇಡುವುದು ಮಾಮೂಲಾಗಿತ್ತು. ತೊಟ್ಟಿಯ ಸಮೀಪ ಹೋದರೆ ಕತ್ತು ಮೇಲೆತ್ತಿ ತಿನ್ನಲು ಕೊಡಿ ಎನ್ನುತ್ತಿದ್ದವು. ನಮ್ಮ ಕೈಯಿಂದಲೇ ತಿನ್ನುತ್ತಿದ್ದವು.ದಿನವೂ ತಿನ್ನುವ ಪ್ರಾಣಿಗಳಲ್ಲ ಅವು. ಮನೆಯೊಳಗೆ ಬೀಳುವ ಬಿಸಿಲನ್ನು ಹುಡುಕಿ ಅಲ್ಲಿ ಕುಳಿತು ಮೈ ಕಾಸಿಕೊಳ್ಳುತ್ತಿದ್ದವು. ಅವುಗಳ ಪಚನ ಕ್ರಿಯೆಗೆ ಉಷ್ತ್ನತೆ ಬೇಕು.
  ರಿಂ ಜಿಮ್ ನಾವು ಊರಲ್ಲಿಲ್ಲದಾಗ ಎಲ್ಲೋ ಹೋದವ ಮತ್ತೆ ಸಿಗಲಿಲ್ಲ. ಋತುಪರ್ಣ ಒಬ್ಬನೇ ನಮ್ಮೊಟ್ಟಿಗೆ ೧೦ ವರ್ಷಗಳ ಮೇಲಿದ್ದ. ಮತ್ತೆ ಅವನಿಗೂ ಸ್ವಾತಂತ್ರ್ಯದ ಬಯಕೆ ಆದಂತೆನಿಸಿತು. ಮನೆ ಬಾಗಿಲು ತೆರೆದಾಗಲೆಲ್ಲ ಹೊರ ಹೋಗಿಬಿಡುತ್ತಿದ್ದ. ತಿರುಗಿ ತಂದು ತೊಟ್ಟಿಯಲ್ಲಿ ಬಿಡುತ್ತಿದ್ದೆವು. ಇದು ತಿರುತಿರುಗಿ ಆದ ಮೇಲೆ ಮನಸ್ಸು ಗಟ್ಟಿ ಮಾಡಿ ಅವನಿಗೆ ಮನೆ ಬಿಟ್ಟು ಹೋಗುವ ಸ್ವಾತಂತ್ರ್ಯ ಕೊಟ್ಟೆವು.
  Dr Prakash Bhat
  Dharwad

 5. ನಿಮ್ಮದೇ ಅನುಭವಗಳೊಂದಿಗೆ ತಾಳೆ ಹಾಕಿ ಪ್ರಕಾಶ ನಾಯಕರ ಕಥೆಗಳನ್ನು ವಿಶ್ಲೇಷಿಸಿರುವ ರೀತಿ ಚೆನ್ನಾಗಿದೆ… ಇಷ್ಟವಾಯಿತು. ಪ್ರತಿಸಲವೂ ಪುಸ್ತಕವನ್ನು ಪ್ರಕಟಿಸಿದವರು, ಅದರ ಬೆಲೆ, ಫೋನ್ ನಂ. ತಿಳಿಸಿದರೆ, ನೀವು ಪರಿಚಯಿಸುವ ಪುಸ್ತಕವನ್ನು ಆಸಕ್ತ ಓದುಗರು ಕೊಳ್ಳಲು ಅನುಕೂಲವಾಗುತ್ತೆ.. ಅನೇಕ ಪತ್ರಿಕೆಗಳಲ್ಲಿ ಈ ಮಾಹಿತಿ ಇರುತ್ತೆ. ಇಲ್ಲೂ ಇದ್ರೆ ಚೆನ್ನ

 6. ಶ್ರೀದೇವಿ, ನಿಮ್ಮದೇ ಅನುಭವಗಳೊಂದಿಗೆ ತಾಳೆಹಾಕಿ ಪ್ರಕಾಶ ನಾಯಕರ ಕಥೆಗಳನ್ನು ವಿಶ್ಲೇಷಿಸಿರುವ ರೀತಿ ಚೆನ್ನಾಗಿದೆ.. ಇಷ್ಟವಾಯಿತು.
  ಪ್ರತಿಸಲವೂ ಯಾವುದೇ ಪುಸ್ತಕವನ್ನು ಪರಿಚಯಿಸುವಾಗ, ಪುಸ್ತಕವನ್ನು ಪ್ರಕಟಿಸಿದವರು,
  ಅವರ ಫೋನ್ ನಂಬರ್, ಅದರ ಬೆಲೆ, ಮುಖಪುಟಗಳ ಮಾಹಿತಿಯನ್ನೂ ಕೊನೆಗೆ ಕೊಟ್ಟರೆ, ಆಸಕ್ತ ಓದುಗರು ಕೊಂಡುಕೊಳ್ಳಲು ಅನುಕೂಲವಾಗುತ್ತೆ ಸಾಮಾನ್ಯ ಎಲ್ಲಾ ಪತ್ರಿಕೆಗಳಲ್ಲೂ ಈ ಮಾಹಿತಿ ಇರುತ್ತೆ. ಇಲ್ಲೂ ಇದ್ದರೆ ಚೆನ್ನ..

 7. ತುಂಬಾ ಸುಂದರ ಶೈಲಿಯ , ವೈಶಿಷ್ಟ್ಯ ಪೂರ್ಣ ಬರಹ.

 8. ಶ್ರಿಿದೇವಿ ಹಿಡಿದುಕೊಟ್ಟಷ್ಟರಲ್ಲಿಯೆ ಕತೆಗಳು ಚನ್ನಾಗಿವೆ ಅನ್ನಿಸುತ್ತದೆ. ಕತೆಗಳು ಮತ್ತು ಕತೆ ಹೇಳುವ ಕ್ರಮ ಕುತುಹಲಕರ.

  ನಿನ್ನ ಅನುಭವಗಳನ್ನು ಹೇಳುವುದಕ್ಕೆ ಬೇರೆಯ ಪುಸ್ತಕಗಳನ್ನು ಓದಿ ಹೇಳ್ತಿಯೋ

  ಅಥವಾ
  ಬೇರೆಯವರ ಪುಸ್ತಕ ಪರಿಚಯಿಸುವಾಗ ನಿನ್ನ ಅನುಭವಗಳನ್ನು ಬರೀತಿದೆಯೊ? –

  ಎರಡರಲ್ಲಿ ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತಾಗದಷ್ಟು ಕುತೂಹಲಕಾರಿಯಾಗಿಯಂತೂ ಬರೆದು ಎಲ್ಲರಿಗೂ ಓದಿಸ್ತಿದಿಯಾ.
  ಅಂತೂ ನೀನು ಕನ್ನಡದಲ್ಲಿ ಒಂದು ವಿಶಿಷ್ಟ ಪುಸ್ತಕ ಪರಿಚಯದ ಬರೆಹವನ್ನು ಹುಟ್ಟುಹಾಕಿರುವೆ.

  ಪ್ರಕಟಿಸಿದರೆ ಇದೇ ಒಂದು ಪುಸ್ತಕವಾಗ್ತದೆ.

  ಕೀಪ್ ಇಟ್ ಅಪ್.

  • ಗುರುಗಳು ತಮ್ಮ ಗರಡಿಯಲ್ಲಿ ಪಡೆದ ತರಬೇತಿ ಇದು..

 9. ಶ್ರೀ ಪುಸ್ತಕಗಳ ಪರಿಚಯಿಸುವ ರೀತಿಯೇ ಚೆಂದ .
  ಮೊದಲು ಈ ಪುಸ್ತಕ ಓದಬೇಕು ಅನಿಸುತ್ತಿದೆ .

 10. ಎಷ್ಟೊಳ್ಳೆ ಪುಸ್ತಕ ಪರಿಚಯ… ಲೇಖನ ಯಾಕಾದರೂ ಮುಗೀತು ಅನಿಸಿತು… Aesthetic narration… loved it Shreedevi ma’am 🙂

 11. please let me know where to get the books you recommend. I tried on Navakaranataka, Prajodaya – without success

Leave a Reply