ಕಾಗದದ ದೋಣಿಗಳು ಕೂಡಿ..

ಒಂದು (ಮಾಡಿದ) ಮಳೆ

ಸತ್ಯಕಾಮ ಶರ್ಮಾ ಕಾಸರಗೋಡು

ಸುರಿದದ್ದು ಒಂದೇ ಒಂದು ಮಳೆ
ತುಂಬಿ ಹರಿದವು ಎಷ್ಟೊಂದು ತೊರೆ
ತುಂಬಿದ ಮೋರಿ ಅಗಲವಾಯಿತು ಬೀದಿ
ಎಂಬಂತೆ ತೋರಿ ಹರಿದು ಹೋದವೆಷ್ಟು ನೀರು

ಖೀರು, ಸಿಪ್ಪೆ, ಗುಪ್ಪೆ, ಹಿಕ್ಕೆ, ಪುಕ್ಕ,
ಉಂಡದ್ದು, ಉಗಿದದ್ದು
ಕೊಳೆತದ್ದು, ಎಸೆದದ್ದು,
ಮಸೆದದ್ದು ಎಲ್ಲ ಸೇರಿ
ತಿಂದು ಬಿಟ್ಟದ್ದು, ತಿನ್ನಲಾಗದ್ದಕ್ಕೆ ಜೋಡಿ

ಕಣ್ಣೆದುರೆ ತೇಲುವ
ಕಣ್ಮರೆಯಾದರೆ ಮುಳುಗುವ
ಮಾಗದ ಕನಸುಗಳ
ಕಾಗದದ ದೋಣಿಗಳು ಕೂಡಿ

ಮುಟ್ಟಾದವರು, ಮುಟ್ಟಲಾಗದವರು,
ಮೈಮಾರುವವರು, ಮೈಮರೆತವರು
ಬಣ್ಣಬಣ್ಣದವರು, ಕಣ್ಣು ಕಾಣದವರು
ಕಂಡೂ ಕಾಣದವರು
ಎಂಥೆಂಥವರೆಲ್ಲ ಒಂದೇ ಸೂರಿನಡಿ
ಮೆತ್ತಗಾಗಿ ಇದೇ ಮಳೆಗಾಗಿ
ಮಾಡಿದ್ದೆವು ತಪ, ಪರ್ಜನ್ಯ ಜಪ
ಹೋಮ, ಹವನ, ಯಾಗ,
ಕಪ್ಪೆಗಳ, ಕತ್ತೆಗಳ ಮದುವೆ
ಹೂತಿಟ್ಟ ಪಾಂಡು ರೋಗಿಯ
ಶವವನು ತೆಗೆದಿದ್ದೆವು ಹೊರಗೆ
ಎಂಬುದನೆಲ್ಲಾ ಮರೆತೇ ಮರೆತು
ಒಮ್ಮೆ ಮುಗಿದರೆ ಸಾಕೆಂದು
ಹಾಕಿದ ಹಿಡಿಶಾಪದ ಮಳೆಗೆ
ಬೇಸತ್ತು ಕೈಕೊಡಲು ವಿದ್ಯುತ್ತು

ಸಿಡಿಲ ಒಡಲಲಿರಿಸಿಕೊಂಡೇ ಮಿಂಚಿ
ಕೃತಾರ್ಥವಾದ ಮುಗಿಲ ಜೋಡಿ
ಒಂದಾದ ಎಲ್ಲರನೂ, ಎಲ್ಲವನೂ
ಒಮ್ಮೆ ಬೆಳಗಿ ಇಳೆಗೆ ಸಾಧ್ಯವಾಗದ್ದು
ಮಳೆಗೆ ಸಾಧ್ಯವಾಯಿತು ಎಂದು ಬೀಗಿ
ನೀರು ನೀರೆಂಬುದ ಮರೆತು
ಕಲಸು ಮೇಲೋಗರವಾಗಿ,
ಎಲ್ಲೋ ಹೋಗಿ ಕೆಂಬಣ್ಣಕೆ ತಿರುಗಿ
ಸಂಕೇತವಾಗಿ
ಬರುಬರುತಾ ಮಳೆಯಬ್ಬರವು
ತುಂತುರು ಆದ ತರುವಾಯ

ನಡೆಯತೊಡಗಿದರು ಒಬ್ಬೊಬ್ಬರೇ
ನಿಧಾನವಾಗಿ ಬೇರೆಬೇರೆಯಾಗಿ
ಮರೆತು ಕಳೆದುದನು ಎಲ್ಲರೂ ಒಂದಾಗಿ
ಅರೆತಾಸು ತಂಗಿ

ಒಂದಾದರೆ ಮಳೆಯಾಗುವುದೋ
ಮಳೆಯಾದರೆ ಒಂದಾಗುವುದೋ
ಒಂದೂ ತೋಚದಾಗಿ

Leave a Reply