ಸಪ್ಪೆ ಮಾಡಿಕೊಂಡು ‘ಎಷ್ಟು ಮಾರ್ಕ್ಸು’ ಎಂದರು. ‘93.8 ಪರ್ಸೆಂಟ್’ಎಂದುತ್ತರಿಸಿದ ಸೂರ್ಯ

ಜ್ಯೋತಿ ಅನಂತಸುಬ್ಬರಾವ್ 

ಮಗನನ್ನು ಕಾಲೇಜಿಗೆ ಸೇರಿಸಲೆಂದು ಹೋದೆ. ಅಲ್ಲಿ ನಮ್ಮನ್ನು ವಿಚಿತ್ರವಾಗಿ ನೋಡಲಾಗುತ್ತಿತ್ತು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಪ್ರಾಂಶುಪಾಲರ ಬಳಿ ಹೋದೆವು. ನನ್ನನ್ನು ಕುಳ್ಳಿರಿಸಿ ದಾಖಲೆಗಳನ್ನು ಪರಿಶೀಲಿಸಲು ಆರಂಭಿಸಿದರು.

ಅಂಕಪಟ್ಟಿಯನ್ನು ಗಮನಿಸುತ್ತಾ ಯಾವ ವಿಭಾಗವಮ್ಮ ಎಂದರು? ನಾನು, ಕಲಾ ವಿಭಾಗ ಎಂದೆ. ಮತ್ತೊಮ್ಮೆ ಅಂಕಪಟ್ಟಿಯನ್ನು ಗಮನಿಸುತ್ತಾ ಮೌನವಾಗಿಯೇ ಹುಬ್ಬೇರಿಸಿದರು. ನನಗೆ ಅವರೊಳಗಿನ ತಳಮಳ ಗೊಂದಲಗಳು ಅರ್ಥವಾಯಿತು.

ನನ್ನ ಊಹೆ ಸರಿಯಾಗಿಯೇ ಇತ್ತು. ಅವರ ಪ್ರಶ್ನೆಗೆ ಮುನ್ನವೇ ನನ್ನ ಮಾತು ಆರಂಭಿಸಿದೆ, “ಸರ್, ಇವನಿಗೆ ಕಲಾ ವಿಷಯಗಳಲ್ಲಿ ಆಸಕ್ತಿ. ಸಾಹಿತ್ಯ, ಕಲೆಗಳಿಗೆ ಅಪಾರ ಅಭಿರುಚಿ ವ್ಯಕ್ತಪಡಿಸುತ್ತಿದ್ದಾನೆ. ಅದೂ ಅಲ್ಲದೆ ರಂಗಕಲೆಯಲ್ಲಂತೂ ಈಗಾಗಲೇ ಅಂಬೆಗಾಲಿರಿಸಿದ್ದಾನೆ. ನಾಟಕ ರಚನೆ, ನಿರ್ದೇಶನ ಮತ್ತು ಅಭಿನಯಗಳಲ್ಲಿ ಸಾಕಷ್ಟು ಪ್ರೀತಿ ಹೊಂದಿದ್ಧಾನೆ. ನನ್ನ ಸ್ನೇಹಿತರೊಬ್ಬರು ಹೇಳಿದರು, ತಮ್ಮ ಕಾಲೇಜಿನಲ್ಲಿ ಪಠ್ಯದ ಜೊತೆಜೊತೆಗೂ ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆಂದು. ಹಾಗಾಗಿ ಇಲ್ಲಿ ಆಯ್ಕೆ ಮಾಡಿಕೊಂಡೆವು” ಎಂದು.

ಅವರ ಮುಖದಲ್ಲಿ ಒಂದು ಹೆಮ್ಮೆಯ, ಸಂತಸದ ನಗು ಅರಳಿತು. “ನಾನೂ ಅದನ್ನೇ ಆಲೋಚಿಸುತ್ತಿದ್ದೆ, ನನ್ನ ಮುಂದಿನ ಪ್ರಶ್ನೆ ಅದೇ ಆಗಿತ್ತು. ಇಷ್ಟು ಒಳ್ಳೆಯ ಅಂಕಗಳನ್ನು ಪಡೆದು ಹುಡುಗ ನಮ್ಮ ಕಾಲೇಜಿನಲ್ಲಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ಅಚ್ಚರಿ ಮೂಡಿತು.” ಎನ್ನುತ್ತಾ ಇನ್ನೂ ಕೆಲವು ಮಕ್ಕಳು ಹೀಗೆ ಒಳ್ಳೆಯ ಅಂಕಗಳನ್ನು ಪಡೆದು ಸೇರಿದ್ದಾರೆ; (ಓರ್ವ ಹೋರಾಟಗಾರರ ಹೆಸರನ್ನು ಉಲ್ಲೇಖಿಸಿ) ನಿಮಗೆ ಅವರು ಗೊತ್ತಿರಬಹುದಲ್ಲವೇ, ಅವರ ಮಗನನ್ನೂ ಇಲ್ಲೇ ಸೇರಿಸಿದರು” ಎಂದು ಹೇಳಿ ನಮ್ಮಲ್ಲಿ ವಿಶ್ವಾಸ ತುಂಬಿದರು.

ಆದರೆ ನಮಗೆ ಆ ವಿಶ್ವಾಸ ಇದ್ದುದರಿಂದಲೇ ಅಲ್ಲಿಗೆ ಹೋಗಿ ಮಗನನ್ನು ಸೇರಿಸಿದ್ದೆವು! ಅಲ್ಲದೆ ಪಠ್ಯೇತರ – ಸಾಂಸ್ಕೃತಿಕ ಕಾರ್ಯಕ್ರಮಗಳು ಯಥೇಚ್ಛವಾಗಿ ನಡೆಯುತ್ತವೆ, ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕಷ್ಟೇ ಎಂದೂ ಮನವರಿಕೆ ಮಾಡಿಕೊಡುತ್ತಿರುವಾಗಲೇ “ಕರಿಮಾಯೆ” ನಾಟಕದ ರಂಗಗೀತೆ ಅದ್ಭುತವಾಗಿ,
ಮಧುರವಾಗಿ ಸಭಾಂಗಣದಲ್ಲಿ ಮೊಳಗುತ್ತಿತ್ತು!

ಸರಿ ಶುಲ್ಕ ಪಾವತಿ ಮಾಡುವ ಕೆಲಸ ಮುಗಿಸಿ ರಸೀದಿ ಪಡೆಯಲು ಹಜಾರದಲ್ಲಿ ಕುಳಿತಿರುವಾಗ ಪಕ್ಕದಲ್ಲಿ ಕುಳಿತಿದ್ದ ತಾಯಿಯೊಬ್ಬರಿಂದ ಮತ್ತದೇ ಪ್ರಶ್ನೆ.. “ಹೊಸ ಅಡ್ಮಿಷನ್ನಾ? ಯಾವ ವಿಭಾಗ, ಸೈನ್ಸೋ ಕಾಮರ್ಸೋ?”.. ನಾನು ಮತ್ತು ಸೂರ್ಯ ಪರಸ್ಪರ ಮುಖ ನೋಡಿಕೊಳ್ಳುತ್ತಾ, ಮುಗುಳುನಗೆ ಬೀರುತ್ತಾ “ಹೌದು, ಹೊಸ ಅಡ್ಮಿಷನ್. ಕಲಾ ವಿಭಾಗಕ್ಕೆ” ಎಂದೆವು. ಆಕೆಯ ಕುತೂಹಲ ತಣಿದಂತೆ ಕಾಣಲಿಲ್ಲ.

ಕೊಂಚ ಮುಖ ಸಪ್ಪೆ ಮಾಡಿಕೊಂಡು “ಎಷ್ಟು ಮಾರ್ಕ್ಸು?” ಎಂದರು. “93.8 ಪರ್ಸೆಂಟ್” ಎಂದುತ್ತರಿಸಿದ ಸೂರ್ಯ. ಅಚ್ಚರಿಯಿಂದ, “ಸಿಬಿಎಸ್ಇ ನಾ” ಎಂದು ಆಕೆಯ ಕೂಡಿದ್ದ ಹುಬ್ಬುಗಳು ಏರಿ ಬಿಡಿಯಾದವು. “ಹೌದು” ಎಂದೆವು. “ಅಷ್ಟೊಂದು ಮಾರ್ಕ್ಸ್ ತೊಗೊಂಡು ಆರ್ಟ್ಸ್ ಯಾಕೆ ತೊಗೊಂಡಿದ್ದು?” ಎಂಬ ‘ಭಯಾನಕ’ ಪ್ರಶ್ನೆ ಮತ್ತೊಮ್ಮೆ ನಮ್ಮನ್ನು ಎದುರಾಯಿತು! “ನನಗೆ ಅದರಲ್ಲಿ ಆಸಕ್ತಿ, ನಾನು ರಂಗಭೂಮಿಯನ್ನು ಮುಂದುವರಿಸಿಕೊಂಡುಹೋಗುವ ಆಸೆ ಇದೆ ಆಂಟಿ” ಎಂದು ಚೊಕ್ಕದಾಗಿ ಉತ್ತರಿಸಿದ ಸೂರ್ಯ. ಅಲ್ಲಿಗೇ ಅವರಿಗೆ ನಾವು ಅನ್ಯಗ್ರಹಗಳ ವಿಚಿತ್ರ ಪ್ರಾಣಿಗಳಂತೆ ಕಂಡೆವು!

ಇಂತಹ ಅನುಭವಗಳಾಗಿದ್ದು ಒಂದೇ ಎರಡೇ! ಪಾಪ, ಅವರ ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ಇಡೀ ಸಮಾಜ ತಾನು ಎಷ್ಟೇ ಬಹುಮುಖಿಯಾಗಿದ್ದರೂ ಶಿಕ್ಷಣ-ವೃತ್ತಿಗಳಿಗೆ ಸಂಬಂಧಪಟ್ಟಂತೆ ಏಕತಾನತೆಯನ್ನು ಬಯಸುತ್ತದೆ.. ಎಲ್ಲರೂ ಏಕೆ ವಿಜ್ಞಾನ ಅಥವಾ ವಾಣಿಜ್ಯ ವಿಭಾಗವನ್ನೇ ಆಯ್ದುಕೊಳ್ಳಬೇಕು? ಅದಕ್ಕಿಂತ ಬದುಕಿನಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳುವುದು ಮುಖ್ಯ. ಎಷ್ಟು ಜನ ವೈದ್ಯರು ತಮ್ಮ ವೈದ್ಯಕೀಯ ವಿಜ್ಞಾನಕ್ಕಿಂತ ಹೆಚ್ಚಾಗಿ ದೇವರ ಮೊರೆ ಹೋಗುವುದನ್ನು ನೋಡುತ್ತಿದ್ದೇವೆ! ಇಂತಹ ವಿಜ್ಞಾನ ಅಧ್ಯಯನಗಳಿಂದ ಪ್ರಯೋಜನವಾದರೂ ಏನು??

ವಿಜ್ಞಾನವನ್ನು ಕಲಾತ್ಮಕವಾಗಿ ಅಧ್ಯಯನ ನಡೆಸಿ ಆನಂದಿಸಬೇಕು;
ಕಲೆಯನ್ನು ವೈಜ್ಞಾನಿಕವಾಗಿ ಕಲಿತು ನಲಿಯಬೇಕು;
ಆದರೆ ಯಾವುದನ್ನೂ ವಾಣಿಜ್ಯ ದೃಷ್ಟಿಯಿಂದ ಮಾತ್ರ ಅಭ್ಯಾಸ ಮಾಡಬಾರದು…

ನನಗೆ ಆಂಗ್ಲ ಕವಿ ರಾಬರ್ಟ್ ಫ್ರಾಸ್ಟ್ ನ “The Road Not Taken” ಬಹಳಷ್ಟು ಬಾರಿ ನೆನಪಾಗುತ್ತದೆ. ಸಮಾಜ ಆಲೋಚಿಸುವುದಕ್ಕಿಂತ ಭಿನ್ನವಾದ, ಆದರೆ ಸೂಕ್ತವಾದ ಇಂತಹ ತೀರ್ಮಾನಗಳನ್ನು ತೆಗೆದುಕೊಂಡಾಗ ಅದನ್ನು ಎದುರಿಸಿ ಜೀರ್ಣಿಸಿಕೊಳ್ಳುವ ಆತ್ಮಸ್ಥೈರ್ಯವೂ ಬೇಕು! ಬದ್ಧತೆ ಇದ್ದಾಗ ಇದೇನೂ ಕಷ್ಟವಲ್ಲ ಎಂಬುದು ನನ್ನ ಅನುಭವದ ಮಾತೂ ಸಹ…

1 comment

Leave a Reply