ಬಾರಪ್ಪ ಬಂಟಮಲೆಗೂ..

ಈ ಜೇಡನ್ ಸ್ಮಿತ್ ಯಾರು? ಹಾಗಂತ ನಾವು ನೇರವಾಗಿ ಕೇಳಿದ್ದು ದಿನೇಶ್ ಕುಕ್ಕುಜಡ್ಕರಿಗೆ. ಅಯ್ಯೋ ಆ ಸ್ಮಿತ್ ಮಹಾಶಯ ಗೊತ್ತಿಲ್ವಾ ಎನ್ನುತ್ತಾ ನಗಾಡುತ್ತಲೇ ಆತನ ಜಾತಕ ಕೊಟ್ಟರು.

ಈ ಒಂದು ವಾರದಿಂದ ಎಲ್ಲರ ಮೆಸೆಂಜರ್ ನಲ್ಲಿ ಒಂದೇ ಸುದ್ದಿ. ಜೇಡನ್ ಸ್ಮಿತ್ ಎನ್ನುವವನಿದ್ದಾನೆ. ಅವನು ಫ್ರೆಂಡ್ ರಿಕ್ವೆಸ್ಟ್ ಕಳಿಸ್ತಾನೆ. ಅದನ್ನ ಒಪ್ಪಿಕೋಬೇಡಿ. ಒಪ್ಪಿಕೊಂಡರೆ ನಿಮ್ಮ ಫೇಸ್ ಬುಕ್ ಹ್ಯಾಕ್ ಆಗುತ್ತೆ. ಆತ ಅಶ್ಲೀಲ ಫೋಟೋ ಎಲ್ಲಾ ಹಾಕಿಬಿಡ್ತಾನೆ ಅಂತ 

ಹೇಳಿ ಕೇಳಿ ದಿನೇಶ್ ವ್ಯಂಗ್ಯಚಿತ್ರಕಾರ. ತಮಾಷೆ ಅವರಿಗೆ ಚೆನ್ನಾಗಿ ಗೊತ್ತು. ಅವರು ಆ ಸ್ಮಿತ್ ನಿಗೆ ಪತ್ರ ಬರದೇಬಿಟ್ಟರು ಬರೋದಾದ್ರೆ ಬಂದೇಬಿಡಯ್ಯಾ ಅಂತ..

ಆ ಪತ್ರ ಏನು? ಇಲ್ಲಿದೆ ಓದಿ..

ನನ್ನ ಪ್ರೀತಿಯ ಜೇಡನ್ ಸ್ಮಿತ್,

ಅದ್ಯೇನಯ್ಯಾ ಮಣ್ಣು ಮಸಿ ಅಧ್ವಾನ ನಿಂದು?? ಬೇಡದ ಉಪದ್ವ್ಯಾಪ ಎಲ್ಲಾ ಬಿಟ್ಟು
ಈ ಕಡೆ ಏನಾದ್ರೂ ಬರೋ ಹಂಗಿದ್ರೆ ನೇರ ನಮ್ಮನೆ ಕಡೆ ಬಂದ್ಬಿಡು. ಅಡ್ರೆಸ್ಸು ಸರಳ. ಇನ್ಬಾಕ್ಸಲ್ಲಿದೆ ನೋಡು…

ಅಮ್ಮ ಮೆತ್ತಿಟ್ಟ ಗರಿಗರಿ ಹಲಸಿನ ಹಪ್ಳಾ ಕಾಯ್ತಿದೆ ನಿನ್ನ.
ಒಣಗಿಸಿಟ್ಟ ಸಾಂತಾಣಿ ಬೀಜ ಇದೆ.
ಜೋರು ಮಳೆ ಬಂದಾಗ ಇರಲಿ ಅಂತ ಎತ್ತಿಟ್ಟ ಗೋಡಂಬಿ ಅಮ್ಮನ ಪರ್ಸನಲ್ ಗೋಡೌನಲ್ಲಿದೆ.

ಬಿಸಿಬಿಸಿ ಕಪ್ಪು ಚಹಾ, ಜತೆಗೊಂದಿಷ್ಟು ಮಾತು ನಗು ನುಲಿದು, ಮಗಳ ಗೀಚು ಚಿತ್ರಗಳನ್ನೆಲ್ಲ ನೋಡ್ತಾ ಸಂಜೆ ಕಳೆಯೋಣ.
ಮಲೆನಾಡ ಬಚ್ಚಲ ಬಿಸಿಬಿಸಿ ಸ್ನಾನದ ಮಜಾ ಅನುಭವಿಸಿದೋರಿಗೇ ಗೊತ್ತು ಕಣಾ! ಆ ಹಾಳು ಆನ್ಲೈನು- ಪಾಸ್ವರ್ಡು -ಹಾಳು ಮೂಳು ಎಲ್ಲಾ ಬಿಟ್ಟು ಒಂದು ಸಂಜೆ ಮಟ್ಟಿಗೆ ಇಸ್ಪೀಟೆಲೆ ಹಿಡಕೊಂಡು ಅಟ್ಟ ಸೇರೋಣ ನನ್ನಣ್ಣಯ್ಯಾ…..

ದೂರದ ಬಂಟಮಲೆಯಲ್ಲಿ ಆನೆ ಬೀಡಿ ಸೇದಿದಂಥ ಮಂಜುಬೆಟ್ಟದ ಚಿತ್ರ ಕಣ್ಣಲ್ಲಿ ಹೊದ್ದು, ನಮ್ಮವ್ವನ ಬಾಯಿಂದ ಹೊಮ್ಮುವ ಹಸೆ ಸೋಬಾನೆ ಕೇಳತಾ ನಿದ್ರಿಸೋಣ ನನ ರಾಜಾ…..

ಬೆಳಗ್ಗೆ ಮತ್ತೆ ಬಿಸಿಬಿಸಿ ಸ್ನಾನ! ಸೂರ್ಯನ ಕುದುರೆ! ಅಕ್ಕಿ ತಂಬಿಟ್ಟು! ರಕ್ಷಿದಿ ಕಾಫಿ……!

ಎಂಟೂವರೆಗೆಲ್ಲ ಕೆಂಪು ಬಸ್ಸು ಕುಕ್ಕುಜಡ್ಕದ ಅಶ್ವತ್ಥಕಟ್ಟೆಗೆ ರವುಂಡ್ ಹಾಕಿ ನಿಲ್ಲುತ್ತೆ. ಅಷ್ಟರೊಳಗೆ ಹೊರಟು ನಿಂತಿರು. ಗಂಧ ಕಲರಿನ ದಾಸವಾಳದ ಗೆಲ್ಲು ಕಡಿದು ಕೊಡುವೆ. ಮಿಸೆಸ್ ಸ್ಮಿತ್ ಹತ್ರ ಪುಟ್ಟನೆ ಪಾಟ್ ಗೆ ಸುಡುಮಣ್ಣು ತುಂಬಿಡಲು ಹೇಳು. ಫೋನಿಸುವಾಗ ಮಕ್ಕಳು ಶಾಲೆಗೆ ತಲುಪಿದುವೋ ವಿಚಾರಿಸಿಕೋ. ಮಾವಿನ ಹಣ್ಣಿನ ಮಾಂಬಳ ತರುತ್ತೇನೆ ಅನ್ನು. ಅದೋ, ಅಮ್ಮ ಬೆಚ್ಚಗೆ ಸುತ್ತಿಟ್ಟಿದ್ದಾರದನ್ನು. ಹೆಚ್ಚಾಗಿ ಅವರಿಗಿಷ್ಟ ಆದೋರಿಗೆ ಮಾತ್ರ ಕಟ್ಟಿಕೊಡುತ್ತಾರೆ: ಅದೂ ಹೊರಟು ನಿಲ್ಲುವ ವೇಳೆ ಸರ್ಪ್ರೈಸ್ ಗಿಫ್ಟೆಂಬಂತೆ!

ಹಾಂ! ಮಗಳು ಬಿಡಿಸಿದ ಬಣ್ಣದ ಚಿತ್ರ ಅಂದೆನಲ್ಲ? ಮನೆ ಹಿಂಬದಿ ಗೋಡೆ ತುಂಬೆಲ್ಲಾ ಇವೆ. ಕ್ಯಾಮೆರಾ ಇದ್ದರೆ ಒಂದಿಷ್ಟು ಒಳಸೇರಿಸಿಕೋ. ಕನಸುಗಾರ ನೀನು! ಹಾಗೇ ಎದೆಯೊಳಗೆ ಮಲೆನಾಡ ಬಿರುಮಳೆಯ ಆಹ್ಲಾದಕರ ಸದ್ದನ್ನೂ ತುಂಬಿಕೋ…..
ಒಂದು ಅರೆಹಗಲು; ಜೀರುಂಡೆ ಸದ್ದಿನ ಕಂಬಳಿ ರಾತ್ರಿ…… ಕಿರುತೋಡಿನ ದನಿಯ ಕಲಕಲ ಮಾತು,… ಕುಳಿರ್ಗಾಳಿಯ ಎಲೆಯಲುಗಿನಂಥ ನಗು….. ಮಂಜಿನಂಥ ಪ್ರೀತಿ……

ಬಾ…… ಕಾಯುತ್ತಿರುತ್ತೇನೆ……

6 comments

  1. Aha, aha neevu ishtu sogasagi aahvanisidare Smith irli namag kooda, janjatagalanella toredu ododi barona ansutte. Lekhana sogasagide.

    • ಥ್ಯಾಂಕ್ಸ್. ಬನ್ನಿ.

  2. ನಾನು ಅಷ್ಟು ವರ್ಷ ಅಲ್ಲಿಯೇ ಇದ್ದರೂ ಕರಿಯಲಿಲ್ಲ ಈಗ ಸ್ಮಿತ್ ನ ಕರಿತಿದೀರಾ ?

Leave a Reply