ಗೋಣಿಚೀಲಗಳನ್ನು ಮಾರ್ಪಡಿಸಿ, ಭಯಾನಕ ಮುಖವಾಡ ಧರಿಸಿ ಕುಣಿಯುತ್ತಾರಲ್ಲವೇ?

ಪೆಡ್ರೋ ಮಕಾಂದಾರ ಪಾಂಡೋರಾ ಡಬ್ಬದೊಳಗೆ

2

ನನ್ನ ಅವಸರಕ್ಕೆ ಸರಿಯಾಗಿ ಮುಂದಿನವಾರವು ಬಲು ವೇಗದಲ್ಲೇ ಬಂದುಬಿಟ್ಟಿತ್ತು.

ನಾನು ಮತ್ತು ದುಭಾಷಿ ಮತ್ತೆ ಪೆಡ್ರೋ ಮಕಾಂದಾರ ಬಿಲದಂತಹ ಕಾರ್ಯಾಲಯದಲ್ಲಿದೆವು. ಈ ಬಾರಿ ದೆಹಲಿಯಿಂದ ಆಗಮಿಸಿದ್ದ ಸಮಾಜಶಾಸ್ತ್ರಜ್ಞರಾದ ಡಾ. ಗೌರ್ ಬೇರೆ ನಮ್ಮ ಜೊತೆಗಿದ್ದರು. ಹೀಗಾಗಿ ಮತ್ತೊಬ್ಬ ಹೆಚ್ಚುವರಿ ಭಾರತೀಯನನ್ನು ಕಂಡು ಪೆಡ್ರೋರ ಸಂತಸ, ಹುಮ್ಮಸ್ಸು ಹೆಚ್ಚಿದಂತಿತ್ತು. ಜೊತೆಗೇ ಮತ್ತೊಮ್ಮೆ ಬರುತ್ತೇನೆ ಎಂಬ ನನ್ನ ಮಾತನ್ನು ನಾನು ಉಳಿಸಿಕೊಂಡ ಬಗೆಗಿನ ಅಚ್ಚರಿಯೂ ಇರಬಹುದು. ಈ ಅಂಗಡಿಯನ್ನು ನೂರಾರು ಬಾರಿ ಹಾದುಹೋದರೂ ಇಲ್ಲಿಗೆ ಭೇಟಿ ನೀಡಲು ನಾವು ಇಷ್ಟು ಸಮಯವನ್ನು ತೆಗೆದುಕೊಂಡ ಬಗ್ಗೆ ನನ್ನಷ್ಟೇ ಅಚ್ಚರಿ ಅವರಿಗೂ ಕೂಡ.

ನಾನೂ ಕೂಡ ಈ ಮಾತಿಗೆ ಹೌದ್ಹೌದೆಂದು ತಲೆಯಾಡಿಸಿದೆ. ‘ನೋಡುವುದು’ ಮತ್ತು ‘ಗಮನಿಸುವುದರ’ ನಡುವಿನ ವ್ಯತ್ಯಾಸವೇ ಅದು. ಅಷ್ಟಿಷ್ಟು ಕಾಣಸಿಗುತ್ತಿದ್ದ ಈ ಪುಟ್ಟಜಾಗದ ಸೌಂದರ್ಯವನ್ನು ನಾನು ಯಾಂತ್ರಿಕವಾಗಿ ನೋಡುವುದನ್ನು ಬಿಟ್ಟು ಸೂಕ್ಷ್ಮವಾಗಿ ಗಮನಿಸಿದ್ದೇ ಆಗಿದ್ದಲ್ಲಿ ಇಲ್ಲಿಗೆ ಬರಲು ಅಷ್ಟು ಸಮಯವನ್ನು ತೆಗೆದುಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ.

ಈ ಬಾರಿ ನಾನು ಪೆಡ್ರೋರ ನೃತ್ಯತಂಡದ ಬಗ್ಗೆ ವಿಚಾರಿಸತೊಡಗಿದ್ದೆ. ಕಾರ್ನಿವಲ್ ಹಬ್ಬದ ಪ್ರಯುಕ್ತ ರಾಜಧಾನಿಯಾದ ಲುವಾಂಡಾದಲ್ಲಿ ನಡೆಯುವ ಅದ್ದೂರಿ ನೃತ್ಯಸಮಾರಂಭಕ್ಕೆ ಅಂಗೋಲಾದ ಎಲ್ಲಾ ಪ್ರಾಂತ್ಯಗಳಿಂದಲೂ ಆಯ್ದ ನೃತ್ಯತಂಡಗಳು ತೆರಳುವುದು ವಾಡಿಕೆ. ಈ ನೃತ್ಯತಂಡಗಳು ಕಾರ್ನಿವಲ್ ಮಂಗಳವಾರದಂದು ರಾಷ್ಟ್ರಪತಿಗಳ ಸಮ್ಮುಖದಲ್ಲಿ ನೇಟೋ ಸ್ಮಾರಕದಲ್ಲಿ ನೃತ್ಯಪ್ರದರ್ಶನವನ್ನು ನೀಡುತ್ತವೆ. ಹೀಗೆ ಇದಕ್ಕಾಗಿ ಎಲ್ಲಾ ಪ್ರಾಂತ್ಯಗಳಲ್ಲೂ ಸ್ಪರ್ಧೆಗಳು ನಡೆದು ಒಂದೊಂದು ಪ್ರಾಂತ್ಯದಿಂದ ಗೆದ್ದ ತಂಡಗಳಷ್ಟೇ ಈ ಮಹಾಸಮಾರಂಭದಲ್ಲಿ ಭಾಗಿಯಾಗಲು ಆಯ್ಕೆಯಾಗುತ್ತಾರೆ.

ಕೊನೆಯಲ್ಲಿ ಲುವಾಂಡಾದಲ್ಲಿ ರಾಷ್ಟ್ರಪತಿಗಳ ಸಮ್ಮುಖದಲ್ಲಿ ನಡೆಯುವ ನೃತ್ಯಪ್ರದರ್ಶನದಲ್ಲೂ ಒಂದು ತಂಡವು ಗೆದ್ದು ದೊಡ್ಡಮಟ್ಟಿನ ನಗದು ಬಹುಮಾನವನ್ನು ಪಡೆಯುತ್ತದೆ. ಇದು ರಾಷ್ಟ್ರಮಟ್ಟದ ಸರಕಾರಿ ಸಮಾರಂಭವಾಗಿರುವುದರಿಂದ ಗೆದ್ದ ತಂಡಗಳಿಗೆ ಇದೊಂದು ಭಾರೀ ಪ್ರತಿಷ್ಠೆಯ ವಿಷಯ.

ಪೆಡ್ರೋ ಹಲವು ವರ್ಷಗಳಿಂದ ವೀಜ್ ನಲ್ಲಿ ತನ್ನ ನೃತ್ಯತಂಡಕ್ಕೆ ತಾಲೀಮನ್ನು ನೀಡುತ್ತಾ ಇಂಥಾ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರಂತೆ. ಹಲವು ಸಂಘಟನೆಗಳು ಅವರಿಗೆ ನೀಡಿದ ಪ್ರಮಾಣಗಳು, ಸಾಂಪ್ರದಾಯಿಕ ದಿರಿಸಿನಲ್ಲೇ ಊರಗಣ್ಯರಿಂದ ಸನ್ಮಾನಿತರಾಗುತ್ತಿರುವ ಛಾಯಾಚಿತ್ರಗಳು, ನೆನಪಿನ ಕಾಣಿಕೆಗಳು… ಹೀಗೆ ಹತ್ತುಹಲವು ದಾಖಲೆಗಳು ಅವರ ಬಳಿಯಿದ್ದವು. ಸಾಮಾನ್ಯವಾಗಿ ಒಂದು ನೃತ್ಯತಂಡದಲ್ಲಿ ಇಪ್ಪತ್ತು ಜನರಷ್ಟಿರುತ್ತಾರೆ.

ಇನ್ನು ಕಾರ್ನಿವಲ್ ನಂತಹ ದೊಡ್ಡ ಮಟ್ಟಿನ ಸಮಾರಂಭಕ್ಕಾದರೆ ಏನಿಲ್ಲವೆಂದರೂ ಎಪ್ಪತ್ತರಿಂದ ಎಂಭತ್ತರಷ್ಟು ಜನರು ಒಂದು ತಂಡದಲ್ಲಿ ಸೇರಿಕೊಳ್ಳುವುದು ಖಚಿತ. ಕಾರ್ನಿವಲ್ ಹಬ್ಬವು ಫೆಬ್ರವರಿಯಲ್ಲಾದರೆ ನವೆಂಬರ್-ಡಿಸೆಂಬರ್ ತಿಂಗಳಿನಿಂದಲೇ ಸ್ಪರ್ಧೆಗಾಗಿ ತಾಲೀಮು ಶುರುವಾಗುತ್ತದೆ. ತನ್ನದೇ ಪ್ರಾಂತ್ಯದಲ್ಲಿರುವ ಇತರ ನೃತ್ಯತಂಡಗಳನ್ನು ಸೋಲಿಸಿ ಲುವಾಂಡಾದ ಪ್ರದರ್ಶನಕ್ಕೆ ಆಯ್ಕೆಯಾಗಬೇಕಲ್ಲವೇ? ಈ ಎಲ್ಲಾ ಕಸರತ್ತು ಅದಕ್ಕಾಗಿಯೇ!

”ಇನ್ನು ಗೋಣಿಚೀಲಗಳನ್ನು ದಿರಿಸಿನಂತೆ ಮಾರ್ಪಡಿಸಿ, ಭಯಾನಕ ಮುಖವಾಡಗಳನ್ನು ಧರಿಸಿ ವಿಚಿತ್ರವಾಗಿ ಕುಣಿಯುತ್ತಾರಲ್ಲವೇ? ಆ ಬಗ್ಗೆಯೂ ಸ್ವಲ್ಪ ಹೇಳಿ”, ಎಂದು ಮತ್ತಷ್ಟು ಕೆದಕಿದೆ ನಾನು. ತಿಂಗಳ ಹಿಂದಷ್ಟೇ ಇಂಥದ್ದೊಂದು ವಿಚಿತ್ರ ನೃತ್ಯವನ್ನು ನಾನು ನೋಡಿದ್ದೆ. ಬಗೆಬಗೆಯ ವಸ್ತುಗಳನ್ನು, ಬಣ್ಣಗಳನ್ನು ವೇಷಕ್ಕೆಂದು ಅಲಂಕಾರ ಸಾಮಗ್ರಿಗಳಂತೆ ಬಳಸಿ ಇಪ್ಪತ್ತೈದರಿಂದ ಮೂವತ್ತು ಜನರು ವೀಜ್ ನ ಹೃದಯಭಾಗದಲ್ಲಿ ಲಯಬದ್ಧವಾಗಿ ಕುಣಿಯುತ್ತಿದ್ದರು.

ಈ ಗುಂಪಿನಲ್ಲಿ ನನ್ನ ಗಮನ ಸೆಳೆದಿದ್ದು ಮಾತ್ರ ಸೆಣಬಿನ ದಿರಿಸನ್ನು ಸಂಪೂರ್ಣವಾಗಿ ಮೈಮುಚ್ಚುವಂತೆ ಧರಿಸಿ, ಕಪ್ಪುಮುಖವಾಡವನ್ನೂ ಹೊಂದಿ ವಿಲಕ್ಷಣವಾಗಿ ಕಾಣುತ್ತಿದ್ದ ನಾಲ್ಕೈದು ನರ್ತಕರು. ಮಕ್ಕಳ್ಯಾರಾದರೂ ಈ ವೇಷವನ್ನು ಹೊಸದಾಗಿ ನೋಡಿದರೆ ಭಯಪಟ್ಟುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎಂಬಂತಿತ್ತು ಆ ವೇಷ.

”ಬೇರೆ ಬೇರೆ ಉದ್ದೇಶಗಳಿಗೆ ವಿವಿಧ ಬಗೆಯ ನೃತ್ಯಪ್ರಕಾರಗಳಿರುತ್ತವೆ”, ಎಂದು ಮಾತನ್ನಾರಂಭಿಸಿದರು ಪೆಡ್ರೋ. ಹಾಗೆಯೇ ಮುಂದುವರಿಸುತ್ತಾ ”ಸಾಮಾನ್ಯವಾಗಿ ನಮ್ಮಲ್ಲಿರುವುದು ನಾಲ್ಕು ಬಗೆಯ ನೃತ್ಯಗಳು. ಒಂದು ಕೌಟುಂಬಿಕ ನೃತ್ಯ. ಕುಟುಂಬದಲ್ಲಿ ನಡೆಯುವ ತರಹೇವಾರಿ ಘಟನೆಗಳಲ್ಲಿ ಮಾಡುವ ನೃತ್ಯಗಳು. ಎರಡನೆಯದ್ದು ‘ಡಾನ್ಸ್ ಡೆ ಕಸ್ಸದೋರ್’. ಇದು ಪೊರಕೆಗಳನ್ನು ಹಿಡಿದು ವಠಾರವನ್ನು ಸ್ವಚ್ಛಗೊಳಿಸುವಾಗ ಮಾಡುವ ನೃತ್ಯ. ಮೂರನೆಯದ್ದು ಸುನ್ನತಿಯ ಸಮಯದಲ್ಲಿ ಸಂಪ್ರದಾಯದಂತೆ ಮಾಡುವ ಒಂದು ಬಗೆಯ ನೃತ್ಯ.

ಇನ್ನು ನಾಲ್ಕನೆಯ ಮತ್ತು ಕೊನೆಯದ್ದೆಂದರೆ ‘ಡಾನ್ಸ್ ಡೆ ವಸ್ಸೋರಾ’. ಇದು ಬೇಟೆಯಾಡುವ ಬಗೆಯದ್ದು. ಬೇಟೆಗಾರರು ಬೇಟೆಯಾಡಲು ಹೋಗುವಾಗ ಮತ್ತು ಭರ್ಜರಿ ಬೇಟೆಯನ್ನು ಹಿಡಿದು ತಂದಾಗ ಮಾಡುವ ನೃತ್ಯ. ಹೀಗೆ ಒಂದೊಂದು ಬಗೆಗೂ ಅದರದ್ದೇ ಆದ ದಿರಿಸುಗಳಿರುತ್ತವೆ. ನೀವು ನೋಡಿದ್ದು ಸುನ್ನತಿಯನ್ನು ಬಿಂಬಿಸುವಂಥದ್ದು”, ಎಂದರಾತ. ನಾನು ನೋಡಿದ್ದ ಆ ನೃತ್ಯದ ಕೆಲ ಭಂಗಿಗಳು ಕಾಮಕೇಳಿಯ ನೃತ್ಯರೂಪಾಂತರದಂತಿದ್ದಿದ್ದು ಮತ್ತೊಮ್ಮೆ ನೆನಪಾಗಿ ನಾನು ಒಪ್ಪಿಗೆಯ ಸಂಜ್ಞೆಯನ್ನು ನೀಡಿದೆ.

ಹಿಂದೆಲ್ಲಾ (ಆಸ್ಪತ್ರೆಗಳು ಬರುವ ಮುನ್ನ) ಸುನ್ನತಿಯನ್ನು ಮನೆಗಳಲ್ಲೇ ಮಾಡಲಾಗುತ್ತಿತ್ತು. ತತ್ಸಂಬಂಧಿ ಕೆಲ ನಿರ್ದಿಷ್ಟ ಆಚರಣೆಗಳಿಗಾಗಿ ಮಕ್ಕಳನ್ನು ದೂರದ ಗುಡ್ಡಗಳಿಗೋ, ಕಾಡುಗಳಿಗೋ ಕಳಿಸುವ ಸಂಪ್ರದಾಯಗಳೂ ಇದ್ದವು. ಇನ್ನು ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳಿಗೆ ಆಗಮಿಸುವಾಗ ಅವರಿಗೆ ಸ್ವಾಗತವನ್ನು ಕೋರುವಂತೆ ವಠಾರವನ್ನು ಸ್ವಚ್ಛಗೊಳಿಸುತ್ತಾ ‘ಡಾನ್ಸ್ ಡೆ ಕಸ್ಸದೋರ್’ ಅನ್ನು ಮಾಡುವ ರೂಢಿಯೂ ಇದೆಯಂತೆ. ನಾನು ನೋಡಿರುವ ಪ್ರಕಾರ ಶವಸಂಸ್ಕಾರದ ಹೊತ್ತಿನಲ್ಲೂ ಮಾಡುವ ನೃತ್ಯಗಳು ಇಲ್ಲಿವೆ. ಯಾವುದೇ ದಿರಿಸುಗಳ ಆಡಂಬರವಿಲ್ಲದೆ ಕಣ್ಣೀರು ಸುರಿಸುತ್ತಾ ಬೈಬಲ್ ನ ಸಾಲುಗಳನ್ನು ಉದ್ಧರಿಸಿ ಮಾಡುವ ನೃತ್ಯವದು.

ಇನ್ನು ಖಾಸಗಿಯಾಗಿ ನೃತ್ಯಕಾರ್ಯಕ್ರಮಗಳನ್ನು ಆಯೋಜಿಸಲು ಕರೆಯುವ ಕೆಲವರೂ ಇರುತ್ತಾರಂತೆ. ”ಸುಮಾರು 2 ಲಕ್ಷ ಕ್ವಾಂಝಾಗಳಷ್ಟು ನಾನು ಆಯೋಜಕರಿಂದ ಪಡೆದುಕೊಳ್ಳುತ್ತೇನೆ”, ಎಂದರು ಪೆಡ್ರೋ. ಅಂಗೋಲಾದಲ್ಲಿ ತಂಡವೊಂದನ್ನು ನಡೆಸುವುದೆಂದರೆ ಎರಡು ಲಕ್ಷ ಯಾವುದಕ್ಕೂ ಸಾಲೋದಿಲ್ಲ ಎಂಬುದನ್ನು ಲೆಕ್ಕಹಾಕಲು ನನಗೆ ಮಹಾಬುದ್ಧಿವಂತಿಕೆಯೇನೂ ಬೇಕಾಗಿರಲಿಲ್ಲ. ಹಾಗೆಂದು ತೀರಾ ದುಬಾರಿಯ ವೆಚ್ಚವನ್ನು ಹೇಳಿದರೆ ತಂಡವು ಸಿಕ್ಕ ಅವಕಾಶವನ್ನೂ ಕಳೆದುಕೊಳ್ಳುವುದು ಖಂಡಿತ.

ಒಂದು ಹೊತ್ತಿನ ಆಹಾರ, ಪ್ರಯಾಣ, ದಿರಿಸು, ಇತರೆ ಖರ್ಚುಗಳು… ಹೀಗೆ ಇಡೀ ತಂಡದ ಖರ್ಚುಗಳನ್ನು ಒಂದೊಂದಾಗಿ ಲೆಕ್ಕಹಾಕಿದರೆ 2 ಲಕ್ಷ ಕ್ವಾಂಝಾ ಕಮ್ಮಿಯೇ. ಇನ್ನು ಇಂಥಾ ಆಹ್ವಾನಗಳು ವರ್ಷವಿಡೀ ಸಿಗುವುದು ಕಷ್ಟವೂ ಆಗಿರುವುದರಿಂದ ಸಿಕ್ಕ ಆದಾಯದಲ್ಲೇ ಒಂದಿಷ್ಟು ವ್ಯಯಿಸಿ, ಒಂದಿಷ್ಟು ಉಳಿಸಿ ನಿಭಾಯಿಸುವ ಜಾಣ್ಮೆ ಅವರದ್ದು.

ಇನ್ನು ನೃತ್ಯವಷ್ಟೇ ಅಲ್ಲದೆ ಚಿತ್ರಕಲೆ, ಸಂಗೀತ ಇತ್ಯಾದಿಗಳ ಬಗ್ಗೆಯೂ ಪೆಡ್ರೋರಿಗೆ ಸಾಕಷ್ಟು ತಿಳಿದಂತಿತ್ತು. ನೋಡಲು ಆನೆಯ ದಂತದಂತಿದ್ದ ‘ಪೂಂಗಿ’, ದಪ್ಪನೆಯ ಕೊಳವೆಯಂತಿದ್ದ ‘ಮೂಂದು’, ಅತ್ತ ಸಂಪೂರ್ಣವಾಗಿ ಗಿಟಾರೂ ಇಲ್ಲದ ಇತ್ತ ತಂಬೂರಿಯೂ ಅಲ್ಲದ ‘ವಸ್ಸೌರಾ’… ಹೀಗೆ ಬಗೆಬಗೆಯ ವಾದ್ಯಗಳಿದ್ದವು ಈ ಕಲಾವಿದರ ಅಡ್ಡಾದಲ್ಲಿ. ‘ಕಿಸ್ಸಾಂಜೆ’ ಇದ್ದುದರಲ್ಲೇ ಬಲು ಜನಪ್ರಿಯ. ಕಿಸ್ಸಾಂಜೆ ಸಾಮಾನ್ಯವಾಗಿ ಪುಸ್ತಕವೊಂದರ ಗಾತ್ರದಲ್ಲಿರುವಂಥದ್ದು.

ಪುಸ್ತಕದಷ್ಟಿರುವ ಮರದ ಹಲಗೆಯ ಮೇಲೆ ವಿವಿಧ ಗಾತ್ರದ ಸಪೂರದ ಲೋಹದ ಪಟ್ಟಿಗಳನ್ನು ಆಂಗ್ಲಭಾಷೆಯ ‘U’ ಆಕಾರದಲ್ಲಿ ತೆಳ್ಳನೆಯ ಸರಿಗೆಗಳ ಮೇಲೆ ಅಳವಡಿಸಿರಲಾಗುತ್ತದೆ. ಈ ಲೋಹದ ಪಟ್ಟಿಗಳನ್ನು ಮೀಟಿದರೆ ವಿವಿಧ ಬಗೆಯ ಸದ್ದುಗಳು ಹೊರಹೊಮ್ಮಬಲ್ಲದು. ಮಕ್ಕಳು ಎರಡೂ ಕೈಗಳ ಹೆಬ್ಬೆರಳನ್ನು ಬಳಸಿ ವೀಡಿಯೋಗೇಮ್ ಆಡುವಂತೆ ಇವುಗಳನ್ನು ಹಿಡಿದು ಮೀಟಲಾಗುತ್ತದೆ. ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಹಿಂದೆಲ್ಲಾ ಇವುಗಳನ್ನು ಜೊತೆಯಲ್ಲೇ ಹಿಡಿದುಕೊಂಡು ಹೋಗುತ್ತಿದ್ದರಂತೆ. ಪ್ರಯಾಣವು ನೀರಸವಾದಾಗಲೆಲ್ಲಾ ಸುಮ್ಮನೆ ನುಡಿಸುತ್ತಾ ಕಾಲಕಳೆಯಲು ಅನುಕೂಲವಾಗುವಂತೆ.

”ನೀವು ಏನು ಕೊಳ್ಳದಿದ್ರೂ ಇದನ್ನು ಮಾತ್ರ ಖರೀದಿಸಲೇಬೇಕು”, ಎಂದು ತನ್ನ ತೋರುಬೆರಳನ್ನು ಗೋಡೆಯತ್ತ ಬೊಟ್ಟುಮಾಡುತ್ತಾ ಹೇಳಿದರು ಪೆಡ್ರೋ. ಅದೇನಪ್ಪಾ ಎಂದು ನೋಡಿದರೆ ಹೈನಾದ ಚರ್ಮವನ್ನು ಅಲ್ಲಿ ನೇತುಹಾಕಲಾಗಿದೆ. ”ನಾನು ಏನನ್ನು ತೆಗೆದುಕೊಂಡು ಹೋದರೂ ಇದು ಮಾತ್ರ ಭಾರತ ತಲುಪುವುದು ಕಷ್ಟ”, ಎಂದು ಇದಕ್ಕುತ್ತರವಾಗಿ ನಗುತ್ತಾ ಹೇಳಿದೆ ನಾನು. ಈ ತೊಗಲು ಹಿಡಿದುಕೊಂಡು ನಾನೇನು ಮಾಡಲಿ ಎಂಬುದು ನನ್ನ ಪ್ರಶ್ನೆಯಾದರೆ, ಯಾಕೆ ಇಟ್ಟುಕೊಳ್ಳಬಾರದು ಎಂಬ ಮರುಪ್ರಶ್ನೆ ಅವರದ್ದು.

ಆದರೆ ಲುವಾಂಡಾದ ಚಿತ್ರಕಲಾವಿದರಿಗೆ ಮತ್ತು ಶಿಲ್ಪಿಗಳಿಗೆ ಹೋಲಿಸಿದರೆ ಪೆಡ್ರೋರ ಕಲಾವಿದರ ತಂಡವು ನನಗೆ ತೀರಾ ಹಿಂದುಳಿದವರಂತೆ ಕಂಡಿದ್ದೂ ಸತ್ಯ. ತರಬೇತಿ ಮತ್ತು ಸಂಪನ್ಮೂಲಗಳ ಕೊರತೆಯೂ ಇದಕ್ಕೆ ಕಾರಣವಾಗಿರಬಹುದು. ಕೊನೆಗೂ ಪೆಡ್ರೋರಿಗೆ ಬೋಣಿಯಾಗಿದ್ದು ನಾವು ‘ಓ ಪೆನ್ಸಡೋರ್’ ಅನ್ನು ಖರೀದಿಸಿದ ನಂತರವೇ. ಕುಳಿತುಕೊಂಡು ಗಾಢವಾಗಿ ಯೋಚಿಸುತ್ತಿರುವ ಮನುಷ್ಯನೊಬ್ಬನ ಮೂರ್ತಿಯೇ ‘ಓ ಪೆನ್ಸಡೋರ್’. ಇದು ಅಂಗೋಲನ್ ಸಂಸ್ಕøತಿಯ ಸೂಚಕವೂ ಹೌದು.

ಈ ಭೇಟಿಯ ನಂತರ ಪೆಡ್ರೋನನ್ನು ನಾನು ನೋಡಿದ್ದು ಕಾರ್ನಿವಲ್ ಹಬ್ಬದ ದಿನವೇ. ಕಾರ್ನಿವಲ್ ಆಚರಣೆಯನ್ನು ನೋಡುವ ಕುತೂಹಲಕ್ಕೆ ಅಂದು ಪೇಟೆಗೆ ಬಂದಿದ್ದರೆ ಕಾಲಿಡಲೂ ಆಗದಷ್ಟು ಜನಜಂಗುಳಿ. ಕೊನೆಗೂ ನಾವು ಕಾರ್ನಿವಲ್ ಮೆರವಣಿಗೆಯನ್ನು ಸಾಧ್ಯವಾಗಿದ್ದು ಗ್ರಾಂದೆ ಹೋಟೇಲಿನ ಬಾಲ್ಕನಿಯನ್ನು ತಲುಪಿದ ನಂತರವೇ. ಪುಡಿಗಾಸಿನ ಬಿಯರ್ ಕ್ಯಾನ್ ಒಂದನ್ನು ಖರೀದಿಸಿ ಹೋಟೇಲಿನ ಗ್ರಾಹಕರು ಎಂದು ಪೋಸು ಕೊಡುತ್ತಾ ನಾವು ನೇರವಾಗಿ ಹೋಟೇಲಿನ ಬಾಲ್ಕನಿಯನ್ನು ತಲುಪಿದ್ದೆವು. ಅಲ್ಲಿ ನಾರ್ವೆಯಿಂದ ಅತಿಥಿಗಳಾಗಿ ಬಂದಿದ್ದ ವೈದ್ಯರ ಗುಂಪೊಂದು ಹಬ್ಬದ ಮೆರವಣಿಗೆಯನ್ನು ಹಾಯಾಗಿ ನೋಡುತ್ತಿದ್ದರೆ ನಾವೂ ಹೋಗಿ ಅವರ ಗುಂಪಿನಲ್ಲಿ ಸೇರಿಬಿಟ್ಟಿದ್ದೆವು.

ಹೀಗೆ ಕಾರ್ನಿವಲ್ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಪೆಡ್ರೋ ಅಚಾನಕ್ಕಾಗಿ ಸಿಕ್ಕಿದ್ದರು. ”ತುಂಬಾ ತಂಡಗಳು ಬಂದಿದ್ದವಲ್ವಾ ಇವತ್ತು? ನಿಮ್ಮದೆಲ್ಲಿ?”, ಎಂದು ಕುತೂಹಲದಿಂದ ಕೇಳಿದೆ ನಾನು. ”ಕಾರ್ನಿವಲ್ ಮಾಡೋ ಬಗ್ಗೆ ಈ ಬಾರಿ ಸರಕಾರಕ್ಕೇ ಖಾತ್ರಿಯಿರಲಿಲ್ಲ. ನಿಧಿಯಿಂದ ಬಿಡುಗಡೆ ಮಾಡುವ ಹಣವನ್ನೂ ಕೂಡ ಸಮಯಕ್ಕೆ ಸರಿಯಾಗಿ ತಂಡಗಳಿಗೆ ಅವರು ಕೊಡಲಿಲ್ಲ. ಹೀಗಾಗಿ ಈ ಬಾರಿ ಬೇಡವೆಂದು ಭಾಗವಹಿಸಲೇ ಇಲ್ಲ”, ಎಂದರು ಪೆಡ್ರೋ. ವೀಜ್ ಪ್ರಾಂತ್ಯದ ನೃತ್ಯತಂಡಗಳಲ್ಲೊಂದಾಗಿ ಕಾರ್ನಿವಲ್ ಮೆರವಣಿಗೆಯಲ್ಲಿ ಭಾಗವಹಿಸಲಾಗಲಿಲ್ಲ ಎಂಬ ಬಗ್ಗೆ ಅವರು ಕೊಂಚ ನಿರಾಶರಾಗಿದ್ದು ಸತ್ಯವಾದರೂ ಅದು ಹಬ್ಬದ ಹುಮ್ಮಸ್ಸನ್ನು ಅವರಲ್ಲಿ ಕುಂದಿಸಿರಲಿಲ್ಲ.

ನಮ್ಮನ್ನು ಜೊತೆಯಲ್ಲೇ ತಮ್ಮೊಂದಿಗೆ ಅಂಗಡಿಗೆ ಕರೆದುಕೊಂಡು ಹೋದ ಪೆಡ್ರೋ ಕೋಕಾಕೋಲಾ ಕುಡಿಯುತ್ತಾ ಅಲ್ಲೂ ಭರ್ಜರಿಯಾಗಿ ಹರಟೆ ಹೊಡೆದರು. ಭಾರತದ ಬಗ್ಗೆ, ಭಾರತದಲ್ಲಿ ಆಚರಿಸಲಾಗುವ ಕಾರ್ನಿವಲ್ ಬಗ್ಗೆ, ಹಬ್ಬದ ರಜಾದಿನಗಳ ಬಗ್ಗೆ… ಹೀಗೆ ಹಲವು ವಿಷಯಗಳನ್ನು ಕೇಳಿ ತಿಳಿದುಕೊಂಡರು. ಒಂದೇ ಒಂದು ಬಿಯರ್ ಕ್ಯಾನ್ ಖರೀದಿಸಿ ತಾರಾ ಹೋಟೇಲಿನ ಗ್ರಾಹಕರಾಗಿ ಒಳಸೇರಿದ ನಮ್ಮ ಬಾಲಿಶ ತಂತ್ರಗಾರಿಕೆಗೆ ನಗುತ್ತಾ ಹಣೆ ಚಚ್ಚಿಕೊಂಡರು. ಮುಂದಿನ ಬಾರಿ ನನ್ನನ್ನೂ ಕೂಡ ಕರೆಯಲು ಮರೆಯಬೇಡಿ ಎಂದು ಹೇಳಿದರು ಕೂಡ.

ಕೊನೆಗೂ ಹಬ್ಬ ಮುಗಿಸಿ ಅಲ್ಲಿಂದ ಹೊರಡುವ ಹೊತ್ತಿಗೆ ನಿಮಗಾಗಿ ‘ಒಂದು ಭರ್ಜರಿ ವಸ್ತು’ ತಂದಿದ್ದೇನೆ ಎಂದು ಒಳನಡೆದ ಪೆಡ್ರೋ ಹಿಡಿದುಕೊಂಡು ಬಂದಿದ್ದು ‘ಪೈಪ್’ ಒಂದನ್ನು. ಅದು ಸಿಗ್ಮಂಡ್ ಫ್ರಾಯ್ಡ್, ಚರ್ಚಿಲ್ ಮುಂತಾದವರು ಸೇದುತ್ತಿದ್ದ ಶೈಲಿಯ ಪೈಪ್. ಆದರೆ ನೋಡಲು ಮಾತ್ರ ರಕ್ತಕೆಂಪು ಬಣ್ಣದ್ದಾಗಿದ್ದು ಹೊಳೆಯುತ್ತಿರುವ ಆಟಿಕೆಯಂತೆ ಕಾಣಿಸುತ್ತಿತ್ತು. ”ನಲವತ್ತು ಸಾವಿರ ಕ್ವಾಂಝಾಗೆ ಮಾರುತ್ತಿದ್ದೇನೆ ನೋಡಿ…”, ಭಾರೀ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿದರು ಪೆಡ್ರೋ. ಆ ಭಯಂಕರ ಬೆಲೆಯನ್ನು ಕೇಳಿ ನಾವು ಹೌಹಾರಿದ್ದೂ, ನನ್ನನ್ನೂ ಸೇರಿದಂತೆ ನಮ್ಮ ಗುಂಪಿನಲ್ಲಿ ಯಾರೂ ಪೈಪ್ ಸೇದುವವರಿಲ್ಲ ಎಂದು ಸಮಜಾಯಿಷಿಗಳನ್ನೂ ನೀಡಿದ್ದೂ ಆಯಿತು. ಅಂತೂ ಪೆಡ್ರೋರ ಪೈಪ್ ವ್ಯವಹಾರ ಅಂದು ನಮ್ಮೊಂದಿಗೆ ಕುದುರಲಿಲ್ಲ.

ಮುಂದೆ ತಿಂಗಳಿಗೊಮ್ಮೆಯಾದರೂ ಪೆಡ್ರೋರ ಅಂಗಡಿಗೊಂದು ಭೇಟಿ ನೀಡುವುದು ಅಭ್ಯಾಸವಾಗಿಬಿಟ್ಟಿತು. ಹೀಗೆ ಹೋದಾಗಲೆಲ್ಲಾ ಹೊಸ ಕಲಾಕೃತಿಗಳ ಮೇಲೆ ಕಣ್ಣೋಟ ಮತ್ತು ಒಂದಿಷ್ಟು ಹರಟೆ. ಏನಾದರೂ ವಿಶೇಷವಾದದ್ದು ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ನಾನು ಈ ಜಾಗಕ್ಕೆ ಹೋಗುತ್ತಲೇ ಇರುತ್ತೇನೆ. ಪೆಡ್ರೋ ಕೂಡ ಏನೇನೋ ಚಿತ್ರವಿಚಿತ್ರ ವಸ್ತುಗಳನ್ನು ಲುವಾಂಡಾದಿಂದ ತಂದು ಇಲ್ಲಿ ಬಿಕರಿಗಿಡುತ್ತಲೇ ಇದ್ದಾರೆ.

Leave a Reply