ನಿನ್ನ ನಿಘಂಟಿನಲ್ಲಿ ನನ್ನುಸಿರಿನ ಕೆಲವು ಶಬ್ದಗಳಿವೆ..

ಸುಗತ 

ಒಂದು ಮಳೆಯರಾತ್ರಿ…

ಅರ್ಥವಾಗದ ನಿನ್ನ ನಿಘಂಟಿನಲ್ಲಿ
ನನ್ನುಸಿರಿನ ಕೆಲವು ಶಬ್ದಗಳಿವೆ
ತೂಕದ ದಲ್ಲಾಳಿ ಮೂಟೆಕಟ್ಟುವ ಮುನ್ನ
ಒಂದೆರೆಡನ್ನಾದರೂ ಅರ್ಥೈಸಿಕೊ
ಯಾರಿಗೆ ಗೊತ್ತು
ಮರುವ್ಯಾಖ್ಯಾನದ ವಿಲೇವಾರಿಯಲ್ಲಿ
ನನ್ನ ಕಣ್ಣೀರಿಗೆ
ಆನಂದಭಾಷ್ಪವೆಂಬ ಅರ್ಥ ಬರಬಹುದು

ಪ್ರತಿಬಾರಿ ನೀನು ನನ್ನಮುಂದೆ ಹಾಯ್ದಾಗಲೆಲ್ಲಾ
ಗಾಳಿ ಪಾರದರ್ಶಕವೆಂಬ
ನಾನು ನಂಬಿದ ವಿಜ್ಞಾನವೇ
ನನ್ನನ್ನು ಮೋಸಗೊಳಿಸಿದೆ
ಕ್ಷಮಿಸು
ಗಾಳಿಯಲ್ಲ… ಅದು ನೀರು
ಕಣ್ಣಿನ ಸಂಗ ಸಾಕೆಂದು
ರೆಪ್ಪೆಯನು ಒದ್ದು ಬಂದ ಕಣ್ಣೀರು

ಸರಿ
ಈಗ ರಾತ್ರಿ
ನಾನು ಮಲಗಬೇಕಿದೆ
ಸುರಿಯುವ ಈ ಮಳೆಗೆ
ನನ್ನ ಕನಸಲ್ಲದೆ
ಬೇರಾವ ಆಶ್ರಯ ನಿನಗೆ ದೊರಕೀತು…

ನಾನು ಹಾಡುವುದು ಕಲಿತದ್ದು ಹೀಗೆ…

ನಡೆಯುವುದ ಮರೆತ ನದಿಗೆ
ಕಾಲು ಕಳೆದುಕೊಂಡ ಭಯ
ಅದಕ್ಕೆ ನೆನಪಿಲ್ಲ
ತಾನು ಹರಿಯುವಾಗ ಕಾಲುಗಳು ಬೇಕಿರಲಿಲ್ಲವೆಂದು
ಸುದೀರ್ಘ ಅನುಕಂಪದ ನೆಲ
ಕೊಳೆತರೂ ಗುಟ್ಟುಬಿಡದ ಪಾದ
ಇವು ಯಾವುವೂ ಕನಿಕರಿಸಲಿಲ್ಲ
ನನಗೆ ಕಾಲುಗಳಿವೆಯೆಂದು

ದೂರ ಕಣಿವೆಯ ಹತ್ತಿರ ಸಾಗುತ್ತಿದ್ದೇನೆ
ನನ್ನ ಗುರುತ್ವವೇ ನನಗೆ ಸಿಗುತ್ತಿಲ್ಲ
ಗಾಳಿಗೆ ಹೆದರಿದ ಕಡ್ಡಿಗಳು
ಕಸಬರಿಗೆಯ ಕಡುಚೂಪಿಗೆ ಸಿಲುಕಿವೆ
ತೇವವಿಲ್ಲದ ನೆಲದ ತೈಲತನಕ್ಕೆ
ಜಾರದ ಜಾರಬದುಕು ಭಂಡಹೋರಾಟ ನಡೆಸಿದೆ
ಈಗ ಕಣಿವೆಯೇ ನನ್ನ ನೆತ್ತಿ ಹಾಯ್ದರೂ
ಸಾಕಾದ ಮಳೆಗಾಲದ ಮೋಡದಂತೆ ಅದನ್ನು ಧಿಕ್ಕರಿಸಬೇಕಿದೆ

ಈಗ ಕೇಳು
ಮತ್ತೊಂದು ಮಗ್ಗುಲಿನ ನನ್ನ ಆತ್ಮವೇ
ನಾನು ಹಾಡುವುದನ್ನು ಕಲಿತಿದ್ದೆ
ನಾನೀಗ ಹಾಡಬಲ್ಲೆ ಶುದ್ಧಬೇವರ್ಸಿಯಂತೆ
ಶಬ್ದ ತಾಳ ನಾದವಿಲ್ಲದೆ
ಆಗಾಗ್ಗೆ ಅರೆಜೀವದ ಧ್ವನಿಯೊಂದನ್ನು ಬಿಟ್ಟು
-ಸುಗತ

Leave a Reply