ನೂತನ ದಂಪತಿಗಳನ್ನು ನೋಡಲು ಅಭಿನಂದಿಸಲು ನೂಕು ನುಗ್ಗಲು ಆರಂಭವಾಯಿತು..

ಕ್ರಾಂತಿಕಾರಿ ಸರಳ ವಿವಾಹಕ್ಕೆ 46 ರ ಸಂಭ್ರಮ

ಚಿನ್ನಸ್ವಾಮಿ ವಡ್ಡಗೆರೆ

ದಣಿವರಿಯದ ಹೆಂಗರುಳಿನ ಅಂತಃಕರಣದ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅವರ ಕ್ರಾಂತಿಕಾರಿ ಸರಳ ವಿವಾಹಕ್ಕೆ ನಲವತ್ತಾರು ವರ್ಷದ ಸಂಭ್ರಮ. (8 ಜೂನ್ 1972)

ಅವರಿಗೆ ಈಗ ಎಪ್ಪತ್ತೊಂದು ವರ್ಷ. ಆದರೂ ಬತ್ತದ ಜೀವನ ಪ್ರೀತಿ. ಸದಾ ಸಮಾಜವಾದ, ಜಾತ್ಯತೀತ ಸಮಸಮಾಜ ನಿರ್ಮಾಣದ ಧ್ಯಾನ. ಕುವೆಂಪು, ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರಧಾರೆಗಳ ಬಗ್ಗೆ ವಿಶೇಷ ಆಸಕ್ತಿ. ಕುಮಾರವ್ಯಾಸನೆಂದರೆ ಇನ್ನಿಲ್ಲದ ಪ್ರೀತಿ. ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅವರ ತರಗತಿಗಳೆಂದರೆ ನಮಗೆಲ್ಲ ವೈಚಾರಿಕತೆಯ ಜೊತೆಗೆ ಹಳಗನ್ನಡ-ಹೊಸಗನ್ನಡ ಸಾಹಿತ್ಯದ ಮಂಗಳಕರ ವಿಚಾರಗಳ ರಸದೂಟ.

ತೋಳನ್ನು ಮೇಲೇರಿಸುತ್ತಾ ಪೋಡಿಯಂ ಬಳಿ ಪಾಠ ಮಾಡಲು ನಿಂತರೆ ಒಂದು ಗಂಟೆ ಅವಧಿ ಮುಗಿದು ಹೋದದ್ದೆ ಗೊತ್ತಾಗುತ್ತಿರಲಿಲ್ಲ.ಕುಮಾರವ್ಯಾಸನ ಜೊತೆಗೆ ರಾಮ ಸೀತೆ, ಶಾಂತವೇರಿ ಗೋಪಾಲ ಗೌಡ, ಕುವೆಂಪು, ತೇಜಸ್ವಿ, ಲಂಕೇಶ್, ಅನಂತಮೂರ್ತಿ ಹೀಗೆ ಎಲ್ಲರೂ ಬಂದು ಹೋಗುತ್ತಿದ್ದರು. ಎದುರಿಗೆ ಕುಳಿತ ವಿದ್ಯಾರ್ಥಿಗಳನ್ನು ಮಂತ್ರಮುಗ್ಧಗೊಳಿಸಿ ವೈಚಾರಿಕ ಚಿಂತನೆಗೆ ಹಚ್ಚಬಲ್ಲ ಅವರ ತರಗತಿಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ಕಾಲದ ಹಂಗಿಲ್ಲದ ಹಿರಿಕಿರಿಯರೆನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುವ ಕಾಳೇಗೌಡ ನಾಗವಾರ ಅವರಿಗೆ ಲೆಕ್ಕಚಾರದ ಕೊಳಕು ಆಲೋಚನೆಯ ವ್ಯಕ್ತಿಗಳೆಂದರೆ ಕೆಂಡದಂತಹ ಕೋಪ. ಅಂತಹ ವ್ಯಕ್ತಿಗಳನ್ನು ತಮ್ಮೆದುರಿನ ಖಾಲಿ ಖುರ್ಚಿಯಲ್ಲೂ ಕೂರಲು ಬಿಡದ ನಾಗವಾರರಿಗೆ ಹೊಸ ಆಲೋಚನೆಯ, ನಿಷ್ಕಲ್ಮಷ ವ್ಯಕ್ತಿತ್ವದ ಜಾತ್ಯತೀತ ಮನೋಭಾವದ ವ್ಯಕ್ತಿಗಳನ್ನು ಕಂಡರೆ ತುಂಬು ಪ್ರೀತಿಯ ಅಕ್ಕರೆ.

ಅಂತಹವರೊಂದಿಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಬಿಡುವಿನ ವೇಳೆಯಲ್ಲಿ ಪ್ರವಾಸ ಹೋಗುವುದು, ವನಭೋಜನ ಮಾಡುವುದು, ಬೆಟ್ಟಗುಡ್ಡ ನದಿ ದಡ ಹೀಗೆ ಹಸಿರು ಪ್ರಕೃತಿಯ ನಡುವೆ ಕಳೆದುಹೋಗುವುದು ಎಂದರೆ ನಾಗವಾರ ಅವರಿಗೆ ತುಂಬಾ ಇಷ್ಟವಾದ ಹವ್ಯಾಸಗಳಲ್ಲೊಂದು. ಅವರೊಂದಿಗೆ ಸುತ್ತಾಟದಲ್ಲಿ ಜೊತೆಯಾಗುವುದೆಂದರೆ ನನಗೂ ಖುಷಿ. ಆ ಸುಖವನ್ನು ನಾನೂ ಅನುಭವಿಸಿದ್ದೇನೆ.

ಕೊಡಗಿನ ಹಸಿರು ಮುಕ್ಕಳಿಸುವ ಪರಿಸರ ನಾಗವಾರರ ಮನಸ್ಸನ್ನು ಗೆದ್ದಷ್ಟು ಮತ್ಯಾವ ಸೀಮೆಯೂ ಅವರಿಗೆ ಅಷ್ಟೊಂದು ಇಷ್ಟವಾದಂತಿಲ್ಲ. ಅದಕ್ಕೆ ಅವರೇ ಆಗಾಗ ಹೇಳುವ “ಎಲ್ಲ ದಾರಿಗಳು ಕೊಡಗಿನ ಕಡೆಗೆ” ಎನ್ನುವ ಮಾತೇ ಸಾಕ್ಷಿ. ಇಂತಹ ಅಪರೂಪದ ಹೃದಯವಂತ, ಪರಿಶುದ್ಧ ಅತಃಕರಣದ, ಸದಾ ಮಾನವೀಯ ಸಂಬಂಧಗಳಿಗೆ ಹಾತೊರೆಯುವ, ವಿದ್ಯಾರ್ಥಿಗಳನ್ನು ಗೆಳೆಯರಂತೆ ಕಾಣುವ ಕಾಳೇಗೌಡ ನಾಗವಾರ ಅವರ ಚಿರ ಯೌವ್ವನದ ಗುಟ್ಟು ಅಲ್ಲಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ.

ಶುಚಿರುಚಿಯಾದ ಊಟ ಉಪಚಾರ. ಮೈತುಂಬ ಸ್ನಾನ, ಕಣ್ತುಂಬ ನಿದ್ರೆ, ದಣಿವಾಗುವವರೆಗೆ ವಾಕಿಂಗ್, ಆತ್ಮೀಯರೊಂದಿಗೆ ಒಡನಾಟ, ಮಂಗಳಕರ ಮಾತ್ರವಾದ ಮುಕ್ತ ಚಿಂತನೆ, ಬಾಯ್ತುಂಬಾ ನಗು, ಆರೋಗ್ಯಕರ ಚರ್ಚೆ, ಅಧ್ಯಯನ, ಬರವಣಿಗೆ – ಈ ಎಲ್ಲಾ ಗುಣಗಳು ಒಂದು ವ್ಯಕ್ತಿಯಲ್ಲಿ ಆವಿರ್ಭವಿಸಿದರೆ ಪ್ರಾಯಶಃ ವೈದ್ಯರ ಗೊಡವೆಯೇ ಬೇಡ. ಇದಕ್ಕೆ ಸ್ಪಷ್ಟ ನಿದರ್ಶನ ಪ್ರೊ.ಕಾಳೇಗೌಡ ನಾಗವಾರ (ಒಡನಾಟದ ನೆನಪುಗಳು ಪುಸ್ತಕದಲ್ಲಿ ಜೆ.ಸೋಮಣ್ಣ) ಎಂಬ ಮಾತು ಅವರ ವ್ಯಕ್ತಿತ್ವ ಗೊತ್ತಿದ್ದವರಿಗೆಲ್ಲಾ ಸತ್ಯ ಎನಿಸುತ್ತದೆ.

ಅವರ ಮದುವೆಯಾಗಿದ್ದು 8.6.1972 . 46 ವರ್ಷದ ಹಿಂದೆ. ಸಮಾಜದಲ್ಲಿ ಮೌಢ್ಯ, ಅಸ್ಪ್ರಶ್ಯತೆ, ಕಂದಾಚಾರಗಳೆ ತುಂಬಿದ ಆ ಕಾಲಘಟ್ಟದಲ್ಲಿ ನಡೆದ ಸರಳ ಮದುವೆ ದೊಡ್ಡ ಸಂಚಲನವನ್ನೇ ಉಂಟುಮಾಡಿತ್ತು.

“ಯಾರಿಗೂ ಹೊರೆಯಾಗದಂತೆ ಮದುವೆಯಾಗಬೇಕು ; ಕೊಡುವುದು ತೆಗೆದುಕೊಳ್ಳುವುದು ಇರಕೂಡದು. ಜಾತಿ ಪದ್ಧತಿಯ ಕುರುಡು ಕೊಂಡಿಯಾಗಿರುವ ಮೇಲು-ಕೀಳಿನ ನೀಚತನ ನಿಲ್ಲಬೇಕು. ನಾವೆಲ್ಲ ಈ ತನಕ ಕಡೆಗಣಿಸಿರುವ ನಮ್ಮ ಅಸ್ಪ್ರಶ್ಯ ಸೋದರನೇ ನನ್ನ ಮದುವೆಯ ಪುರೋಹಿತನಾಗಲಿ. ನಮ್ಮ ಹಳ್ಳಿಗಾಡಿನಲ್ಲೇ ಈ ಆಶಯಗಳನ್ನು ಆಧರಿಸಿ ಶುಭಕಾರ್ಯಗಳನ್ನು ಹಮ್ಮಕೊಳ್ಳೋಣ” ಎಂದು ದೃಢವಾಗಿ ನಿಂತೆ ಎನ್ನುವ ನಾಗವಾರ 8.6.1972 ರಲ್ಲಿ ಹುಟ್ಟೂರಾದ ಚನ್ನಪಟ್ಟಣ ತಾಲೂಕು ನಾಗವಾರದಲ್ಲಿ ಮದುವೆಯ ಕಾರ್ಯಕ್ರಮ ನಿಶ್ಚಯ ಮಾಡುತ್ತಾರೆ. ಐದು ಸಾವಿರ ಜನರ ಸಮ್ಮುಖದಲ್ಲಿ ಕ್ರಾಂತಿಕಾರಿ ಸರಳ ಮದುವೆ ದಲಿತ ಪುರೋಹಿತರ ಸಮ್ಮಖದಲ್ಲಿ ನಡೆದು ಇತಿಹಾಸದ ಪುಟ ಸೇರುತ್ತದೆ.

ಆ ಮದುವೆಯ ಬಗ್ಗೆ ಅಂದಿನ 09.06.1972 ರ ಶುಕ್ರವಾರದ ಪ್ರಜಾವಾಣಿಯಲ್ಲಿ ಸುದ್ದಿಯಾದ ವರದಿಯನ್ನು ನಿಮ್ಮ ಕುತೂಹಲಕ್ಕಾಗಿ ಇಲ್ಲಿ ನೀಡಲಾಗಿದೆ.

ಎರಡು ತಲೆಮಾರಿನ ಸಂಕಥನದಂತೆ ಕಾಣುವ ಈ ವರದಿಯನ್ನು ಕುತೂಹಲಕ್ಕಾಗಿ ಗಮನಿಸಿ ಖಾದ್ರಿ ಶಾಮಣ್ಣ ಸಂಪಾದಕರಾಗಿದ್ದ ಪತ್ರಿಕೆಯಲ್ಲಿ ಎಂ.ವಿ,ಜಯಶೀಲರಾವ್ ವರದಿ ಮಾಡಿದ ಸುದ್ದಿಯಲ್ಲಿ ಬಳಸಿರುವ ಭಾಷೆ, ಸುದ್ದಿಗೆ ನೀಡಿರುವ ಪ್ರಾಮುಖ್ಯತೆ. ಎಪ್ಪತ್ತರ ದಶಕದಲ್ಲಿ ಯುವಕರಲ್ಲಿದ್ದ ವೈಚಾರಿಕ ಪ್ರಜ್ಞೆ ಅದಕ್ಕೆ ರಾಜಕಾರಣಿಗಳ ಬೆಂಬಲ ಹೀಗೆ ಎಲ್ಲವೂ ವಿಶೇಷವಾಗಿ ಕಾಣುತ್ತವೆ.

ಮೌಡ್ಯ ಕಂದಾಚಾರಗಳಲ್ಲಿ ಸಿಲುಕಿ ನರಳುತ್ತಿರುವ ಪ್ರಸ್ತುತ ಸಮಾಜದಲ್ಲಿ ಆಗಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಯಥಾವತ್ತಾಗಿ ಇಲ್ಲಿ ಕೊಡಲಾಗಿದೆ….
==============================
ಮೂಢಸಂಪ್ರದಾಯ ವಿರೋಧಿ ಸಮ್ಮೇಳನವೇ ಶುಭ ಸಂದರ್ಭ. ಶುಭ ಮುಹೂರ್ತ. ಮಾರಿಯಮ್ಮನ ಗುಡಿಯ ಬಯಲೇ ಕಲ್ಯಾಣ ಮಂಟಪ. ಸುತ್ತಮುತ್ತಲ ಹಳ್ಳಿಗಳಿಂದ ಬಂದಿದ್ದ ಐದು ಸಾವಿರಕ್ಕಿಂತ ಹೆಚ್ಚುಮಂದಿ ಪುರುಷರು, ಮಹಿಳೆಯರೇ `ಹತ್ತು ಸಮಸ್ತರು’.

ನೆರದಿದ್ದವರ ಕರತಾಡನವೇ ಆರತಿ-ಅಕ್ಷತೆ ಹಾಗೂ ಆಶೀರ್ವಾದ. ಪ್ರದೇಶ ಕಾಂಗ್ರೇಸ್ ಅಧ್ಯಕ್ಷ, ಹರಿಜನ ಬಂಧು ಶ್ರೀ ಕೆ.ಎಚ್. ರಂಗನಾಥ್ ಅವರದೇ ಪೌರೋಹಿತ್ಯ. ಅಭಿವೃದ್ಧಿ ಸಚಿವ ಮತ್ತೊಬ್ಬ ಹರಿಜನ ಬಂಧು ಶ್ರೀ ಎಂ.ಮಲ್ಲಿರ್ಜುನಸ್ವಾಮಿ ಅವರು ಉದ್ಘಾಟಿಸಿದುದೇ ಮಂಗಳವಾದ್ಯ.

ದಕ್ಷಿಣೆ ಪಡೆಯದ “ಪುರೋಹಿತ” ಶ್ರೀ ರಂಗನಾಥ್ ಪ್ರಮಾಣ ವಚನ ಹೇಳುತ್ತಾ ಹೋದರು. ಮೊದಲು ವರ, ಆನಂತರ ವಧು ಪ್ರಮಾಣವಚನ ಸ್ವೀಕರಿಸಿದರು. ವರ “ನೀಡಿದ ಭರವಸೆಯ” ಸಂಕೇತವಾಗಿ ತಾಳಿಯೊಂದನ್ನು ಕಟ್ಟಿದರು. ಚಿ.ಕಾಳೇಗೌಡ ಮತ್ತು ಚಿ.ಸೌ.ಕೆಂಪಮ್ಮ ಅವರುಗಳು ಬಾಳ ಸಂಗಾತಿಗಳಾದರು.

ಚನ್ನಪಟ್ಟಣಕ್ಕೆ ಐದು ಮೈಲಿ ದೂರದಲ್ಲಿರುವ ನಾಗವಾರದಲ್ಲಿ ಇಂದು ಈ ಅಪರೂಪದ ಘಟನೆ. ನೆರದಿದ್ದವರಿಗೊಂದು ಹೊಸ ಅನುಭವ. ಮೂಢ ಸಂಪ್ರದಾಯದ ವಿರೋಧದ ಅಂಗವಾಗಿ ಈ ಸರಳ, ನಿರಾಡಂಬರ ಸಮಾರಂಭ. ಮೂಢನಂಬಿಕೆಯ ಆಧಾರದ ಮೇಲೆ ನಡೆಯದ, ದುಂದು ವೆಚ್ಚವಿಲ್ಲದಿದ್ದ ಮದುವೆ.

ನಾಗವಾರದಲ್ಲಿ ಸಾಮಾಜಿಕ ಆರ್ಥಿಕ ಕ್ರಾಂತಿ ದಳವೊಂದುಂಟು. ಪ್ರಗತಿಪರ ವಿಚಾರದ ಯುವಕರು ಇದರ ಸದಸ್ಯರು. ಇಂದಿನ ಮದುವೆಯ ವರನಾದ ಶ್ರೀ ಸಿದ್ದೇಗೌಡರ ಮಗ ಶ್ರೀ ಕಾಳೇಗೌಡರೇ ದಳದ ಸಂಚಾಲಕರು. ಕೊಡಗಿನ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು. ಎಂ.ಎ ಪದವಿಧರರು. ದಿವಂಗತ ಚನ್ನಯ್ಯ ಅವರ ಪುತ್ರಿ ಚಿ.ಕೆಂಪಮ್ಮ ವಧು. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ.

ಮೂಢಸಂಪ್ರದಾಯ ಹಾಗೂ ನಂಬಿಕೆಗಳ ವಿರೋಧ, ಈ ಯುವಕರ ವಿಚಾರ ವ್ಯಾಪ್ತಿಯಲ್ಲೊಂದು ಭಾಗ. ಈ ವಿಚಾರದ ಕ್ರಾಂತಿಯನ್ನು ಜನರಲ್ಲೆಬ್ಬಿಸಬೇಕೆಂಬುದು ಈ ದಳದ ಗುರಿ. ತಾವೇ ನಿದರ್ಶನವಾಗಬೇಕೆಂದು ಶ್ರೀ ಕಾಳೇಗೌಡರಿಗಿದ್ದ ಆಸೆ.

ಅದಕ್ಕಾಗಿಯೇ ಅವರು ವರದಕ್ಷಿಣೆಯ ಕಾಟ ಹಾಗೂ ದುಂದು ವೆಚ್ಚದ ಆಡಂಬರವಿಲ್ಲದ ಈ ವಿವಾಹದ ಏರ್ಪಾಡು.
ತಮಗಿರುವ ವಿವಾಹದ ಪ್ರಚಾರದ ಅಂಗವಾಗಿ ಸಾಮಾಜಿಕ ಆರ್ಥಿಕ ಕ್ರಾಂತಿದಳ ಮೂಢ ಸಂಪ್ರದಾಯ ವಿರೋಧಿ ಸಮ್ಮೇಳನ ಕರೆದಿತ್ತು. “ಕಂದಾಚಾರಗಳಿಲ್ಲದೆ ಮದುವೆ”ಗಾಗಿ ಹಸ್ತ ಪ್ರತಿಗಳ ಮೂಲಕ `ಲಗ್ನ ಪತ್ರಿಕೆ’ಗಳನ್ನು ಹಂಚಲಾಗಿತ್ತು.

“ನಮ್ಮ ಸಮಾಜದ ಪ್ರಗತಿಗೆ ಕಂಟಕವಾಗಿರುವ ಮೂಢ ನಂಬಿಕೆಗಳು ಹಾಗೂ ಸಂಪ್ರದಾಯಗಳ” ಬಗ್ಗೆ ಭಾಷಣ ಕಾರ್ಯಕ್ರಮದ ಅಂಗವಾಗಿತ್ತು. “ಊಟ ಅಥವಾ ಉಪಹಾರದ ವ್ಯವಸ್ಥೆಗಳು ಇರುವುದಿಲ್ಲ” ಎಂದು ಮುನ್ಸೂಚನೆ ನೀಡಿ “ಪ್ರಗತಿಪರ ವಿಚಾರಗಳಲ್ಲಿ ನಂಬಿಕೆಯಿರುವ ಎಲ್ಲ ಜನರನ್ನು ಈ ಸಮ್ಮೇಳನದಲ್ಲಿ ಪ್ರೀತಿಯಿಂದ ಸ್ವಾಗತಿಸುತ್ತೇವೆ” ಎಂದು ತಿಳಿಸಲಾಗಿತ್ತು.

ಸಂಜೆ ಆರು ಗಂಟೆಯ ಸಮಯ 2300 ಜನಸಂಖ್ಯೆಯ ನಾಗವಾರದಲ್ಲಿ ಅದರ ಮೂರರಷ್ಟು ಜನ ಸೇರಿದ್ದರು.

ವರನಾದ ಶ್ರೀ ಕಾಳೇಗೌಡ ಅವರು ಸ್ವಾಗತಿಸಿ- ಮೂಢ ಸಂಪ್ರದಾಯ, ಅಂಧ ಪದ್ಧತಿ ಹಾಗೂ ಕಂದಾಚಾರಗಳನ್ನು ಹೋಗಲಾಡಿಸಬೇಕೆಂಬ ದಳದ ಧ್ಯೇಯಗಳನ್ನು ವಿವರಿಸಿದರು. ಗ್ರಾಮಾಂತರ ಜನರಿಗೆ ತಿಳಿವಳಿಕೆ ನೀಡಲು “ಅಂಧ ಪದ್ಧತಿಯ ಅನುಷ್ಠಾನವಿಲ್ಲದ, ಯಾರಿಗೂ ಕಿಂಚಿತ್ತೂ ಹೊರೆಯಾಗದ ಈ ಮದುವೆಯನ್ನು ಏರ್ಪಡಿಸಿಕೊಂಡಿದ್ದೇವೆ” ಎಂದರು.

ಸಮ್ಮೇಳನವನ್ನು ಉದ್ಘಾಟಿಸಿದ ಅಭಿವೃದ್ಧಿ ಸಚಿವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಬುದ್ಧನ ಕಾಲ, ಆತನ ಬೋಧನೆಯಿಂದ ಇಲ್ಲಿಯವರೆಗೆ ಸಮಾಜ ಬೆಳೆದುಬಂದದ್ದರ ವಿಚಾರಪೂರಿತ ಪ್ರಸ್ತಾಪ. “ಮೂಢನಂಬಿಕೆ ಮೂಢ ಸಂಪ್ರದಾಯ, ಕಂದಾಚಾರ ನಮ್ಮ ಶತ್ರುಗಳು” ಎಂದು ವರ್ಣಿಸಿ ಜಾತಿ ಉಪಜಾತಿಗಳ ಉಪಟಳದಿಂದಾಗುವ ಅನಾಹುತದ ವಿವರಣೆ. “ಬ್ರಾಹ್ಮಣರಲ್ಲೇ 800 ಉಪಜಾತಿಗಳಿವೆ. ಹರಿಜನರಲ್ಲಿ 427 ಉಪಜಾತಿಗಳಿವೆ” ಎಂದು ಒಂದು ನಿದರ್ಶನ. “ನಾವೆಲ್ಲ ಒಂದು ಎಂಬ ಭಾವನೆ ಬರಬೇಕು” ಎಂದು ಒತ್ತಿ ಹೇಳಿದರು.

ಭಾರತದಲ್ಲಿ ಪ್ರತಿ ಮದುವೆಗಳಿಗಾಗಿ ಜನರಿಂದ 1250 ಕೋಟಿ ರೂಪಾಯಿಗಳು ಖರ್ಚು. ಇದು ಯೋಜನಾ ಆಯೋಗದ ಅಂದಾಜು. “ಬ್ರಾಹ್ಮಣರಲ್ಲಿದ್ದ ವರದಕ್ಷಿಣೆ ಈಗ ಹರಿಜನರವರೆಗೂ ಬಂದಿದೆ”ಎಂದು ಸಚಿವ ಮಲ್ಲಿಕಾರ್ಜುನಸ್ವಾಮಿ ಅವರು ವರದಕ್ಷಿಣೆ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದರು.

“ನಿರುದ್ಯೋಗಿ ಎಂಜಿನಿಯರ್ ಮದುವೆಯಾಗಲು ಸ್ಕೂಟರ್ ಬೇಕು ಅನ್ನುತ್ತಾನೆ. ಪ್ರೀತಿಯಿಂದ ಬೆಳೆಸಿದ ಹೆಣ್ಣನ್ನು ಕೊಟ್ಟರೆ ಜೊತೆಗೆ ಸ್ಕೂಟರ್ ಬೇಕು. ಹಾಗಾದರೆ ಸ್ಕೂಟರನ್ನೇ ಮದುವೆಯಾಗಬಾರದೇಕೆ?” ವರೋಪಚಾರದ ಪದ್ಧತಿಯನ್ನು ಟೀಕಿಸಿದರು. ಈ ಹಣವನ್ನು ಜನೋಪಯುಕ್ತ ಕಾರ್ಯಗಳಿಗೆ ನೀಡಬೇಕೆಂದು ಸಲಹೆ ಮಾಡಿದರು. “ಮೂಢನಂಬಿಕೆ ಸಂಪ್ರದಾಯಗಳ ಸಂಕೋಲೆಗಳಿಂದ ಮುಕ್ತವಾದರೆ ಮಾತ್ರ ನಿಜವಾದ ಸ್ವರಾಜ್ಯ ಸ್ಥಾಪನೆಯಾಗುತ್ತದೆ” ಎಂದರು.

ಸರಳ ವಿವಾಹ ಮಹೋತ್ಸವ ಆರಂಭವಾಯಿತು.

ಅಧ್ಯಕ್ಷ ಶ್ರೀ ರಂಗನಾಥ್ ನೀಡಿದ ಪ್ರಮಾಣ ವಚನವನ್ನು ಚಿ.ಕಾಳೇಗೌಡ ಚಿ.ಸೌ.ಕೆಂಪಮ್ಮ ಅವರುಗಳು ಒಬ್ಬರಾದಮೇಲೆ ಒಬ್ಬರು ಪಠಿಸಿ “ಈ ಕ್ಷಣದಿಂದ ನನ್ನ ಜೀವನದ ಸಂಗಾತಿಯನ್ನಾಗಿ ತುಂಬು ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದೇನೆ. ಜೀವನದುದ್ದಕ್ಕೂ ಮನಸ್ಸು ಮತ್ತು ನಡವಳಿಕೆಗಳಲ್ಲಿ ಪ್ರೇಮದಿಂದ ಕಾಣುತ್ತಾ ಅನುಭವಾತ್ಮಕ ವಿಚಾರಗಳು ಮತ್ತು ಚರ್ಚೆಯ ಮೂಲಕ ಈ ಬದುಕಿನಲ್ಲಿ ಯಾವುದು ಸತ್ಯ ಹಾಗೂ ಅರ್ಥಪೂರ್ಣವಾಗಿ ಕಂಡುಬರುತ್ತದೊ ಈ ಕಡೆಗೆ ನಡೆಯಲು ನಾನು ನಿರಂತರವಾಗಿ ಶ್ರಮಿಸುತ್ತೇನೆ ಎಂದು ಸತ್ಯದ ಹೆಸರಿನಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ.” ಎಂದು ಪ್ರಮಾಣ ಮಾಡಿದರು. ಶ್ರೀ ಕಾಳೇಗೌಡ ತಾಳಿಕಟ್ಟಿದರು. ವಧುವರರು ಪರಸ್ಪರ ಹಾರ ಹಾಕಿದರು.

ನೆರದಿದ್ದ ಜನ, ಅದರಲ್ಲೂ ಮಹಿಳೆಯರು ಅಷ್ಟು ಹೊತ್ತಿಗೆ ಎದ್ದು ನೂಕು ನುಗ್ಗುತ್ತ ಮುಂದಕ್ಕೆ ಬಂದಿದ್ದರು. ಅಷ್ಟು ಉತ್ಸಾಹ ಕುತೂಹಲ ಉಂಟಾಗಿತ್ತು. “ಇಷ್ಟೇ ಮದುವೆ ಶಾಸ್ತ್ರ, ಮಂತ್ರ,ಮುಗಿದು ಹೋಯಿತು.- ಶ್ರೀ ರಂಗನಾಥ್ ಸಾರಿದರು. ದುಂದುವೆಚ್ಚಕ್ಕೆ ಬದಲಾಗಿ ಜನೋಪಯೋಗಿ ಕಾರ್ಯಕ್ಕೆ ಹಣಕೊಡಬೇಕೆಂಬ ಧ್ಯೇಯವನ್ನನುಸರಿಸಿ ಶ್ರೀ ಕಾಳೇಗೌಡರು ನಾಗವಾರದಲ್ಲಿ ಆರೋಗ್ಯಕೇಂದ್ರ ನಿರ್ಮಾಣಕ್ಕಾಗಿ ಐದುನೂರು ರೂಪಾಯಿ ಕಾಣಿಕೆ ನೀಡಿದರು.

ಅನೂಚಾನವಾಗಿ ಬಂದಿರುವ ಅಂಧ ಸಂಪ್ರದಾಯಗಳನ್ನು ಹಳ್ಳಿಗಳಲ್ಲಿ ತಡೆಯಲು ಮಾಡಿರುವ ಪ್ರಯತ್ನವನ್ನು ಮೆಚ್ಚಿದ ಶ್ರೀ ಕೆ.ಎಚ್. ರಂಗನಾಥ್ ಅವರು “ಇದು ಕಷ್ಟದ ಕೆಲಸ” ಎಂದರು. ಮೂಢನಂಬಿಕೆಗಳಿಗೆ ಬಲಿಯಾಗಿ, ಮನೆಮಾರಿ ಮಾಡುವ ಮದುವೆಯ ಆಡಂಬರದ ಖರ್ಚಿನ ಭಯವೇ ಕಾರಣವೆಂದು ಹೇಳಿ “ಈ ರೀತಿ ಮಾಡದಿದ್ದರೆ ಏನು ಆಗುತ್ತೆ ಅಂತ ಯಾರೂ ಧೈರ್ಯದಿಂದ ಯೋಚನೆ ಮಾಡದಿರುವುದೇ ಅದು ಬೆಳೆದು ಬರಲು ಕಾರಣ” ಎಂದರು. “ಮೂಢ ಸಂಪ್ರದಾಯಗಳನ್ನು ಕಿತ್ತೊಗೆದರೆ ಏನು ಆಗೋದಿಲ್ಲ” ಎಂದು ಭರವಸೆ ನೀಡಿ ಮದುವೆ ಲಜ್ಞವಿಲ್ಲದಿದ್ದ ದಿನ ತಾವು ತಮ್ಮ ತಂಗಿಯ ಮದುವೆ ಮಾಡಿದುದಾಗಿಯೂ ಅವರು ಸುಖವಾಗಿದ್ದಾರೆಂದೂ ತಿಳಿಸಿದರು.

ವರದಕ್ಷಿಣೆ ಅನಿಷ್ಟವನ್ನು ಹೋಗಲಾಡಿಸಬೇಕೆಂದು ಒತ್ತಿ ಹೇಳಿ “ನೂತನ ದಂಪತಿಗಳಿಗೆ ಆಯುರಾರೋಗ್ಯ ಸಂಪತ್ತನ್ನು ಕರುಣಿಸಲಿ” ಎಂದು ಹಾರೈಸಿದರು.

ಸಮ್ಮೇಳನ ಉದ್ಘಾಟಿಸಬೇಕಿದ್ದ ಸಚಿವ ಶ್ರೀ ಎಸ್.ಎಂ.ಕೃಷ್ಣ ಕಾರ್ಯಗೌರವದ ನಿಮಿತ್ತ ಬರಲಿಲ್ಲ. “ನೀವು ನಡೆಸುತ್ತಿರುವ ಸಮ್ಮೇಳನದ ಧ್ಯೇಯ ಮತ್ತು ಔಚಿತ್ಯಗಳ ಬಗ್ಗೆ ನನಗೆ ಸಂಪೂರ್ಣ ಮೆಚ್ಚಿಗೆಯಿದೆ. ಪ್ರಗತಿಗೆ ಕಂಟಕಗಳಾಗಿರುವ ಮೂಢನಂಬಿಕೆಗಳು ಹಾಗೂ ಸಂಪ್ರದಾಯಗಳನ್ನು ತೊಡೆದು ಹಾಕಲು ತ್ವರಿತ ಕಾರ್ಯಕ್ರಮಗಳನ್ನು ರೂಪಿಸುವುದು ವಿಚಾರಸ್ಥರ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ” ಎಂದು ಹೇಳಿ ಸಮ್ಮೇಳನಕ್ಕೆ ಯಶಸ್ಸು ಕೋರಿದ್ದರು.
ನವದಂಪತಿಗಳಿಗೆ ಕಡೆಯದಾಗಿ ಅಭಿನಂದಿಸಿದವರು ಶ್ರೀ ಕಪನಯ್ಯ ಅವರು. ವಂದನಾರ್ಪಣೆ ಮಾಡಿ ಮುಗಿಸಿ “ನವದಂಪತಿಗಳಿಗೆ ಹರಸುವಾ” ಎಂದು ಹೇಳಿ ಚಪ್ಪಾಳೆ ತಟ್ಟಿದರು.

ಭಾರೀ ಜನಸ್ತೋಮ ದೀರ್ಘ ಕರತಾಡನ ಮಾಡಿತು. ನೂತನ ದಂಪತಿಗಳನ್ನು ನೋಡಲು ಅಭಿನಂದಿಸಲು ನೂಕು ನುಗ್ಗಲು ಆರಂಭವಾಯಿತು.

1 comment

  1. ಗುರುಗಳ ಸಾಹಸಗಾಥೆ ಓದಿ ಅವರ ಬಗ್ಗೆ ಇದ್ದ ಗೌರವ ಇನ್ನೂ ಹೆಚ್ಚಿತು

Leave a Reply