ಪುಸ್ತಕ ಪ್ರಾಧಿಕಾರ ಚೊಚ್ಚಲ ಕೃತಿ ಅರ್ಜಿ ಆಹ್ವಾನ

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2017 ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು, ಪ್ರೋತ್ಸಾಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿದಾರರು ಕನಿಷ್ಟ 18 ರಿಂದ 35 ವರ್ಷ ವಯೋಮಿತಿಯವರಾಗಿರಬೇಕು. ಸ್ವ-ವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರದ ಪ್ರತಿ ಅಥವಾ ಅಧಿಕೃತವಾದ, ದೃಢೀಕರಿಸಲ್ಪಟ್ಟ ಜನ್ಮ ದಾಖಲಾತಿ ಪ್ರಮಾಣ ಪತ್ರದ ಪ್ರತಗಿಯನ್ನು ಸಲ್ಲಿಸಬೇಕು. ಅಲ್ಲದೆ ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು.

ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ ಮಾಡಿಸಿ ಕಳಿಸಬೇಕು. 1/8 ಡೆಮ್ಮಿ ಅಳತೆಯಲ್ಲಿ ಕನಿಷ್ಟ 60 ಪುಟಗಳಿರಬೇಕು. ಅನುವಾದ ಪಠ್ಯಪುಸ್ತಕ ಹಾಗೂ ಬೇರಾವುದೇ ಪದವಿಗೆ ಸಿದ್ಧಪಡಿಸಿದ ಪ್ರಬಂಧಗಳನ್ನು ಹೊರತುಪಡಿಸಿ, ಕಥೆ, ಕಾದಂಬರಿ, ಕವನ, ನಾಟಕ, ವಿಮರ್ಶಾ ಲೇಖನ, ಪ್ರಬಂಧ ಮುಂತಾದ ಕನ್ನಡ ಸಾಹಿತ್ಯದ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಸ್ತಪ್ರತಿ ಇರಬೇಕು.

ಕೃತಿಯು ಪಠ್ಯದಲ್ಲಿ ಯಾವುದೇ ಧರ್ಮ, ದೇವರು, ಜಾತಿ, ಕೋಮು, ವೃತ್ತಿ, ಸಮುದಾಯ, ಭಾಷೆ, ಆಚರಣೆ, ಪದ್ಧತಿ, ಇತ್ಯಾದಿ ಸಂಗತಿಗಳಿಗೆ ಸಂಬಂಧಿಸಿದಂತೆ ಹಾಗೂ ರಾಷ್ಟ್ರೀಯ ನಾಯಕರುಗಳ ಕುರಿತಂತೆ ನೇರವಾಗಿಯೇ ಆಗಲಿ ಅಥವಾ ಪರೋಕ್ಷವಾಗಿಯೇ ಆಗಲಿ ಮನನೋಯಿಸುವಂತಹ ವಿಷಯವಾಗಲಿ ಇರಬಾರದು. ಅಲ್ಲದೆ, ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವಂತಹ ವಿಷಯ/ಸಂಗತಿಗಳು ಪ್ರಸ್ತಾಪವಾಗಿರಬಾರದು.

ಪ್ರಾಧಿಕಾರಕ್ಕೆ ಸಲ್ಲಿಸಲ್ಪಡುವ ಅರ್ಜಿಗಳನ್ನು/ಹಸ್ತಪ್ರತಿಗಳನ್ನು ಹಿಂದಿರುಗಿಸಲಾಗುವುದಿಲ್ಲ. ಆದ ಕಾರಣ ಹಸ್ತಪ್ರತಿಯ/ಡಿ.ಟಿ.ಪಿ. ಪ್ರತಿಯ ಎರಡನೇ ಪ್ರತಿಯನ್ನು ಸಲ್ಲಿಸಲು ತಿಳಿಸಿದೆ.

ಅರ್ಜಿಗಳನ್ನು ದಿನಾಂಕ: 30-06-2018 ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು – 560 002 ಅವರಿಗೆ ಕಳಿಸಿಕೊಡಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಮೊದಲನೇ ಮಹಡಿ, ಜೆ.ಸಿ. ರಸ್ತೆ, ಬೆಂಗಳೂರು – 560 002 ದೂರವಾಣಿ ಸಂಖ್ಯೆ 080-22484516/22017704

ಇಲ್ಲಿ ಸಂಪರ್ಕಿಸಬಹುದಾಗಿದೆ. ಅಥವಾ ಪ್ರಾಧಿಕಾರದ ವೆಬ್‍ಸೈಟ್ www.kannadapustakapradhikara@gmail.com ಅನ್ನು ಅವಲೋಕಿಸಬಹುದಾಗಿದೆ.

Leave a Reply