ದಲಿತರು ಮುಖ್ಯಮಂತ್ರಿಗಳಾಗಿಲ್ಲ ಎಂಬುದೊಂದು ದೊಡ್ಡ ಪ್ರಶ್ನೆಯಾಗಿ ನಮ್ಮೆದುರು ನಿಂತಿರುವಾಗ..

ರಾಜಕೀಯ ಚಟುವಟಿಕೆಗಳು ಗರಿಗೆದರಿದೆ. ಚುನಾವಣಾ ಪ್ರಕ್ರಿಯೆ ಮುಗಿದು ಸರಕಾರ ರಚನೆಯೂ ಆಗಿದೆ. ಸಚಿವರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ.

ಆದರೆ ಸುವಾರು ದಶಕಗಳಿಂದ ಕೇಳಿ ಬರುತ್ತಿರುವ ಅಹವಾಲು ಹಾಗೇನೆ ನೆನೆಗುದಿಗೆ ಬಿದ್ದಿದೆ,  ಸ್ವಾತಂತ್ರ್ಯ ಸಿಕ್ಕು ಸುಮಾರು ಎಪ್ಪತ್ತು ವರ್ಷಗಳಾಗಿದೆ. ಹಿಂದುಳಿದ ನಿಮ್ನ ವರ್ಗದವರಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸಿಕೊಟ್ಟಿದ್ದೇವೆ ಎಂದು ನಮ್ಮನ್ನು ಆಳುವವರು ಹೆಮ್ಮೆಯಿಂದ ಹೇಳಿಕೊಳ್ಳುವ ಕಾಲ ಮುಗಿದು ಮತ್ತೆ  ಆ ಸವಲತ್ತುಗಳನ್ನೆಲ್ಲ ಹಿಂದೆ ಪಡೆದು ಕೊಳ್ಳುವ ಹುನ್ನಾರುಗಳೂ ನಡೆಯುತ್ತಿವೆ.

ಶತ ಶತಮಾನಗಳಿಂದಲೂ ಮುಟ್ಟಿಸಿಕೊಳ್ಳಲೂ ಬಾರದ ಸ್ಥಿತಿಯಲ್ಲಿ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ದಲಿತರನ್ನು ಕೈ ಹಿಡಿದು ಮೇಲಕ್ಕೆತ್ತುವ ಬದಲು, ಇಷ್ಟು ದಿನ ಬೆಂಬಲಿಸಿದ್ದೇವೆ, ಮತ್ತೂ ನಿಮಗೆ ಆಸರೆಯಾಗಲು ಸಾಧ್ಯವಿಲ್ಲ ಎಂದು ಕೈ ಕೊಡವಿಕೊಳ್ಳುವ  ಕಸರತ್ತುಗಳು ಎಲ್ಲೆಡೆಯೂ ನಡೆಯುತ್ತಿದೆ.

ಶತಮಾನಗಳ ಶೈಕ್ಷಣಿಕ ವಂಚನೆಗೆ ಹತ್ತಾರು ವರ್ಷಗಳ ಮೀಸಲಾತಿ ತೋರಿಸಿ ‘ಕೊಟ್ಟಿದ್ದು ಹೆಚ್ಚಾಯಿತು’ ಎಂಬಂತೆ  ಬೊಬ್ಬಿರಿಯುತ್ತಿದ್ದೇವೆ, ನೀಡಿದ ಎಲ್ಲಾ ಸವಲತ್ತುಗಳನ್ನು ಒಟ್ಟು ಸೇರಿಸಿದಾಗಲೂ ಒಬ್ಬ ದಲಿತನನ್ನು ನಮ್ಮ ಮುಖ್ಯ ಮಂತ್ರಿಯನ್ನಾಗಿಸುವ ಸ್ಥಿತಿಯನ್ನು ನಮಗೆ ನಿರ್ಮಿಸಲಾಗುತ್ತಿಲ್ಲ ಎಂಬುದನ್ನು ಜಾಣತನದಿಂದ ಮರೆಯುತ್ತಲೇ ಇದ್ದೇವೆ. ಸುಮಾರು ದಶಕಗಳಿಂದಲೇ ಎದ್ದ ದಲಿತ  ಮುಖ್ಯ ಮಂತ್ರಿಯ ಬೇಡಿಕೆಗೆ ಜಾಣ ಕಿವುಡನ್ನು ಪ್ರದರ್ಶಿಸುತ್ತಲೇ ಆ ಸ್ಥಾನಕ್ಕೆ ಹಣ ಉಳ್ಳವರನ್ನು, ಜಾತಿಯ ಬಲವಿದ್ದವರನ್ನು, ಮೇಲ್ವರ್ಗದವರನ್ನು ಕೂರಿಸುತ್ತಲೇ ಇದ್ದೇವೆ.

ದಲಿತ ಮುಖ್ಯಮಂತ್ರಿ ಪ್ರಸ್ತಾವನೆ ತೀರಾ ಮುಂಚೂಣಿಯಲ್ಲಿರುವ ಇಂದಿನ ದಿನಮಾನಗಳಲ್ಲಿ  ಸ್ವಾತಂತ್ರ್ಯ ದೊರೆತು ಇಷ್ಟು ದಿನಗಳಾದರೂ ಒಬ್ಬರೇ ಒಬ್ಬರಾದರೂ ದಲಿತರು ಮುಖ್ಯಮಂತ್ರಿಗಳಾಗಿಲ್ಲ  ಎಂಬುದೊಂದು ದೊಡ್ಡ ಪ್ರಶ್ನೆಯಾಗಿ ನಮ್ಮೆದುರು ನಿಂತಿರುವಾಗ ಡಾ ಓ ನಾಗರಾಜು “ಕುರಂಗರಾಜ ವೈಭವ” ಎಂಬ  ಐತಿಹಾಸಿಕ ಕಾದಂಬರಿಯನ್ನು ನಮ್ಮೆದುರಿಗಿಟ್ಟು ಆ ಕಾಲದಲ್ಲೇ ಮಾದಿಗ ಜನಾಂಗಕ್ಕೆ ಸೇರಿದವನೊಬ್ಬ ತುಮಕೂರು ಜಿಲ್ಲೆಯ ಸುವರ್ಣಗಿರಿಯಲ್ಲಿ ರಾಜ್ಯಕಟ್ಟಿ ಆಳಿದ ಉದಾಹರಣೆಯನ್ನು ನಮ್ಮ ಮುಂದಿಟ್ಟು ಸಮಾಧಾನಗೊಳಿಸಲು ಪ್ರಯತ್ನಿಸಿದ್ದಾರೆ. ಆದಿ ಜಾಂಬವ ಕುಲತೇಜ ಎಂಬ ಮೇಲ್ ಬರಹವನ್ನು ಕೊಟ್ಟು ಕುರಂಗ ರಾಯನ ಕಥೆಯನ್ನು ನಿರೂಪಿಸಿದ್ದಾರೆ.

“ತುಮಕೂರಿಗೆ ಯಾವಾಗ ಬರ್ತಿಯಮ್ಮಾ?” ಇದು ತುಮಕೂರಿನ ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ ಸಿಕ್ಕಾಗಲೆಲ್ಲ ಕೇಳುವ ಮಾಮೂಲಿ ಪ್ರಶ್ನೆ. ಫೋನಾಯಿಸಿದರಂತೂ ಮಾತಿಗೆ ಮೊದಲು ಈ ಪ್ರಶ್ನೆಯನ್ನು ಕೇಳಿಯೇ ಮುಂದುವರೆಯುತ್ತಾರೆ. “ತುಮಕೂರಿಗೆ ಯಾಕೆ ಅಂತ ಬರೋದು ಸರ್? ಅಲ್ಲೇನು ಕೆಲಸ ಇದೆ ನನಗೆ? ಬಂದರೆ ಪ್ರವಾಸಕ್ಕೆ ಅಂತ ಬರಬೇಕು” ಎಂದರೆ, “ಬಾಮ್ಮಾ ನಿನಗೆ ಸಿದ್ದರ ಬೆಟ್ಟಕ್ಕೆ ಕರ್ಕೊಂಡು ಹೋಗ್ತೀನಿ. ಅದಕ್ಕಿಂತ ಮುಖ್ಯವಾಗಿ ಕುರಂಕೋಟೆ ತೋರಸ್ತೀನಿ, ನಿಮ್ಮಂತಹ ಬರೆಯುವವರು ಇಂತಹ ಸ್ಥಳಗಳನ್ನು ನೋಡಬೇಕು. ಇದನ್ನು ನೋಡಿದರೆ ಖಂಡಿತವಾಗಿಯೂ ಒಂದ್ ಹತ್ತು ಕವಿತೆ ನಾಲ್ಕು ಕಥೆ ಬರೆಯೋಕೆ ಸ್ಪೂರ್ತಿ ಸಿಕ್ಕುತ್ತೆ” ಎನ್ನುತ್ತಲೇ ಇರುತ್ತಾರಾದರೂ ನನಗೆ ಒಮ್ಮೆಯೂ ತುಮಕೂರಿಗೆ ಹೋಗಲಾಗುತ್ತಿಲ್ಲ ಎಂಬ ಬೇಸರದ ಜೊತೆ ಜೊತೆಗೆ ಈ ಸಿದ್ದರ ಬೆಟ್ಟದ ಬಗ್ಗೆ ಅಪಾರ ಕುತೂಲಹ ಹುಟ್ಟಿಸಿ ಅದನ್ನು ನೋಡಲೇ ಬೇಕೆಂಬ ಅದಮ್ಯ ಆಕಾಂಕ್ಷೆಯನ್ನು ಹುಟ್ಟಿಸಿ ಬಿಟ್ಟಿರುವುದಂತೂ ಸತ್ಯ.

ರಾಮಾಯಣ ಕಾಲದಲ್ಲಿ ಒಮ್ಮೆ ಬಾಣದ ಸುಳಿಗೆ ಸಿಕ್ಕು ಲಕ್ಷ್ಮಣ ಸತ್ತು ಹೋಗುತ್ತಾನೆ. ಆಗ ರಾಮ ಹನುಮಂತನನ್ನು ಹಿಮಾಲಯದ ಸಂಜೀವಿನಿ ಪರ್ವತದಿಂದ  ಸಂಜೀವಿನಿ ಸಸ್ಯ ತರಲು ಕಳಿಸುತ್ತಾನೆ. ಪಾಪ ಹನುಮಂತನಿಗೆ ಸಂಜೀವಿನಿ ಸಸ್ಯದ ಬಗ್ಗೆ ಏನು ಗೊತ್ತು? ಅಪೂರ್ವ ಕಳೆಯಿಂದ ಮಿನುಗುತ್ತಿರುವ ಸಸ್ಯವೇ ಸಂಜೀವಿನಿ ಸಸ್ಯ  ಎಂದೇನೋ ರಾಮ ಹೇಳಿ ಕೊಟ್ಟಿರುತ್ತಾನಾದರೂ  ಹಿಮಾಲಯದ ಎಲ್ಲ ಗಿಡಗಳೂ ಅತ್ಯಪೂರ್ವವಾದ ತೇಜಸ್ಸು ಹೊಂದಿದ್ದೇ ಆಗಿರುವುದರಿಂದ ಸಂಜೀವಿನಿಯನ್ನು ಪ್ರತ್ಯೇಕ ಗುರುತಿಸಲಾಗದೇ ಅದು ಇರುವ ಶಿಖರವನ್ನೇ ಹೊತ್ತೊಯ್ಯುತ್ತಾನೆ.

ಹಾಗೆ ಹೊತ್ತೊಯ್ಯುವಾಗ ಕೆಲವು ಕಡೆ ಆ ಸಂಜೀವಿನಿ ಪರ್ವತದ ಚೂರುಗಳು ಬಿದ್ದಿದ್ದವು ಎಂಬ ಐತಿಹ್ಯವಿದೆ.  ಅವುಗಳಲ್ಲಿ ತುಮಕೂರಿನ ಸಿದ್ದರ ಬೆಟ್ಟವೂ ಒಂದು ಎಂದರೆ ಕೆಲವೊಮ್ಮೆ ಆ ಸಂಜೀವಿನಿ ಪರ್ವತದ ಚೂರು ಬಿದ್ದಿದ್ದು ಕೊಪ್ಪಳದ ಕಪ್ಪತಗುಡ್ಡದಲ್ಲಿ ಎಂಬ ಮಾತನ್ನೂ ಸ್ಥಳಿಯರು ಹೇಳುತ್ತಾರೆ. ಎರಡೂ ಕಡೆ ಚೂರುಗಳು ಬಿದ್ದಿತ್ತು, ಅದಕ್ಕೇ ಇವೆರಡೂ ಬೆಟ್ಟಗಳು ಸಾದು ಸಂತರ ತಪಸ್ಸು ಮಾಡುವ ಮಾಹಾ ಮಹಿಮ ಸ್ಥಳವಾಗಿದೆ, ಇಲ್ಲಿ ಬೇರೆಲ್ಲೂ ಸಿಗದ ಔಷಧೀಯ ಸಸ್ಯಗಳು ದೊರಕುತ್ತವೆ ಎಂಬ ನಂಬಿಕೆ ಇದೆ.

ಬೇರೆಡೆ ಬೆಳೆಯುವ ಸಸ್ಯವು ಈ ಬೆಟ್ಟಗಳಲ್ಲಿ ಬೆಳೆದರೆ ಅದಕ್ಕೂ ವಿಶೇಷವಾದ ಔಷಧೀಯ ಗುಣ ಪ್ರಾಪ್ತವಾಗಿರುತ್ತದೆ ಎಂಬುದನ್ನು ಸ್ಥಳಿಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಿಮಾಲಯದ ಸಂಜೀವಿನಿ ಪರ್ವತದ ಚೂರು ಬಿದ್ದ ಕಥೆಯ ಸತ್ಯಾಸತ್ಯತೆ ಏನೇ ಇದ್ದರೂ ಇವೆರಡು ಗುಡ್ಡಗಳು ಇಂದಿಗೂ ಅಪರೂಪದ ಔಷಧೀಯ ಸಸ್ಯಗಳಿಗೆ ಹೆಸರುವಾಸಿ ಎಂಬುದನ್ನು ಮರೆಯುವಂತಿಲ್ಲ.

ಇಂತಹುದ್ದೊಂದು ಅಪರೂಪದ ಸ್ಥಳವನ್ನು ನೋಡುವ ತೀವ್ರವಾದ ಆಸೆ ನನಗೆಂದೋ  ಇತ್ತು. ಆದರೆ ಹೋಗಲಾಗುತ್ತಿಲ್ಲ ಎಂದು ಬೇಸರಪಟ್ಟು ಕೊಳ್ಳುತ್ತಿರುವಾಗಲೇ ಮತ್ತೊಂದು ಬಾಂಬ್ ಹಾಕಿದ್ದರು. ಈ ಕುರಂಕೋಟೆಯನ್ನು ಕಟ್ಟಿದ್ದು ಒಬ್ಬ  ದಲಿತ. ಬಹುಶಃ ಬೇರೆಲ್ಲೂ ಕಾಣದ ದಲಿತ ರಾಜನ ಕೋಟೆಯನ್ನು ಇಲ್ಲಿ ಕಾಣಬಹುದು. ಒಂದು ಒಳ್ಳೆಯ ಲೇಖನ ಆಗಬಹುದು ಎನ್ನುತ್ತಲೇ ಓ ನಾಗರಾಜುರವರು ಬರೆದ ಕುರಂಗರಾಜ ವೈಭವ ಎಂಬ ಕಾದಂಬರಿಯನ್ನು   ಹೆಸರಿಸಿ ಆ ಪುಸ್ತಕವನ್ನು ಓದಲೇ ಬೇಕೆಂದು ನಾನು ಹಪಹಪಿಸುವಂತೆ ಮಾಡಿದ್ದರು. ಆದರೆ ಪುಸ್ತಕ ಸಿಗದೆ  ಹೇಗೋ ಓ ನಾಗರಾಜುರವರ ಫೋನ್ ನಂಬರ್ ಸಂಗ್ರಹಿಸುವಷ್ಟರಲ್ಲಿ ನಾನು ಹೈರಾಣಾಗಿದ್ದೆ. ಅವರಿಂದ ಪುಸ್ತಕ ತರಿಸಿಕೊಂಡು ಓದಿದ ನಂತರವಷ್ಟೇ ನನಗೆ ಸಮಾಧಾನವಾಗಿದ್ದು.

ನನಗೆ ಐತಿಹಾಸಿಕ ಕಾದಂಬರಿಯನ್ನು ಓದುವುದು ತೀರಾ ಇಷ್ಟವಾದ ವಿಷಯ. ಒಂದು ಸ್ಥಳದ, ವ್ಯಕ್ತಿಯ ಸಂಪೂರ್ಣ ಮಾಹಿತಿ ಸಿಗುತ್ತದೆ. ಇದೊಂದು ರೀತಿ ಇತಿಹಾಸವನ್ನು ಓದಿದಂತೆ ಒಣ ಒಣ ಎನ್ನಿಸುವುದಿಲ್ಲ. ತುಂಬಾ ಸ್ವಾರಸ್ಯಕರವಾದ ನಿರೂಪಣೆಯೊಂದಿಗೆ ಓದಿಸಿಕೊಂಡು ಹೋಗುತ್ತದೆ. ಬೇಕಾದ ವಿಷಯವನ್ನು ಹೇಳುತ್ತದೆ. ಒಂದಿಷ್ಟು ಕಲ್ಪನೆ, ಖಾರಾ, ಮಸಾಲೆಗಳಿರುತ್ತವೆ ಎನ್ನುವುದನ್ನು ಹೊರತುಪಡಿಸಿದರೆ ಇತಿಹಾಸದ ಕಾದಂಬರಿಗಳು ಒಳ್ಳೆಯ  ಆಧಾರ ಗ್ರಂಥಗಳು. ಈ ನೆಲೆಯಲ್ಲಿ ನೋಡಿದರೆ  ಕುರಂಗರಾಜ ವೈಭವ ಒಂದು ಉತ್ತಮ ಆಧಾರ ಗ್ರಂಥ.

ಹಾಗೆ ನೊಡಿದರೆ ಇತಿಹಾಸ ಎನ್ನುವುದು ಗೆದ್ದವರ ಕಥೆ ಮಾತ್ರ. ಯಾರಿಗೆ ತಮ್ಮ ಗೆಲುವನ್ನು, ಕಾರ್ಯಗಳನ್ನು ದಾಖಲಿಸುವ ಶಕ್ತಿ ಇದೆಯೋ ಅಂಥವರ ಚರಿತ್ರೆ. ಯಾಕೆಂದರೆ ದಾಖಲಿಸಲಾಗದ್ದು ಮುಂದೆ ಉಳಿಯುವುದಿಲ್ಲ. ಒಂದು ವೇಳೆ ದಾಖಲಿಸಿದ್ದನ್ನು ಅವರ ಮುಂದಿನ ತಲೆಮಾರು ಉಳಿಸಿಕೊಳ್ಳದೇ ಹೋದರೆ, ಯಾವುದೋ ಬಲಿಷ್ಟ ಶಕ್ತಿಯ ಅಡಿಯಲ್ಲಿ ಸಿಕ್ಕಿ ಕೊಂಡರೆ  ಆ ಇತಿಹಾಸ  ಯಾರದ್ದೋ ಕಾಲಡಿಯ ಕಸವಾಗಿ ಬಿಡುತ್ತದೆ.

ಅದರಲ್ಲೂ ಈ ಚರಿತ್ರೆ ಎನ್ನುವುದು ಯಾರು ಬಲಿಷ್ಟರೋ ಅವರದ್ದು. ಅದು ಸಾಮಾಜಿಕ ಬಲಿಷ್ಟವಾಗಿದ್ದಿರಬಹುದು, ರಾಜಕೀಯ ಬಲಿಷ್ಟತೆಯಿರಬಹುದು, ಅಥವಾ ಧಾರ್ಮಿಕವಾಗಿ ಮೇಲ್ವರ್ಗದ್ದಾಗಿರಬಹುದು. ಅಂಥವರಿಗೆ ಮಾತ್ರ ಚರಿತ್ರೆಯಲ್ಲಿ ಸ್ಥಾನ. ಎಷ್ಟೋ ಸಲ ಚರಿತ್ರೆಯ ಮೂಲ ವಿಷಯಗಳು ತಿರುಚಿ ಹೋಗಿ ಗೆದ್ದವರ ಪರವಾದ ಚರಿತ್ರೆ ಮಾತ್ರ ದಾಖಲಾಗಿ ಮುಂದುವರಿಯುತ್ತ ಹೋಗುತ್ತದೆ.

ಮೊನ್ನೆ ಮೊನ್ನೆ ಪರಿಷ್ಕೃತ ಇತಿಹಾಸದ ಪಠ್ಯದಲ್ಲಿ ವಿಜಯನಗರದ ಮೂಲ ಆಂದ್ರದ ಗುತ್ತಿ ಎಂದು ಓದಿದೆ ಒಂದು ಕ್ಷಣ ಆಶ್ಚರ್ಯವಾಯಿತು. ವರ್ಷಗಳ ಹಿಂದೆಯೇ ಹಂಪಿ ವಿಶ್ವವಿದ್ಯಾಲಯವು ವಿಜಯನಗರದ ಮೂಲವನ್ನು ಹಿರೇಗುತ್ತಿಯ ಗುತ್ತಿನ ಮನೆ ಎಂಬುದನ್ನು ಒಪ್ಪಿಕೊಂಡಿದೆ. ಅದಕ್ಕೆ ದೊರೆತ ಆಧಾರಗಳನ್ನು ನಿಜ ಎಂದು ದೃಢಿಕರಿಸಿದೆ. ನರಸಪ್ಪ ನಾಯಕನ ಒಂಬತ್ತು ಮಡದಿಯರು ಜೀವಂತ ಸಮಾಧಿ ಹೊಂದಿದ ಸ್ಥಳದ ಸಮೀಪವೇ ಇದ್ದ ಗುತ್ತಿನ ಮನೆ, ಸುತ್ತಮುತ್ತಲೂ ಇರುವ ಹಕ್ಕ ಬುಕ್ಕರ ಸಹೋದರರಾದ ಸೊಣ್ಣಪ್ಪ, ಉದ್ದಂಡ ಹಾಗೂ ಬೊಮ್ಮಯ್ಯನ ಗುಡಿಗಳು. ಮತ್ತು ನರಸಪ್ಪ ನಾಯಕ ವಿಜಯ ನಗರದ ಸೋದರ ಸಂಬಂಧಿ ಹಾಗೂ ಸೋಂದಾ ಅರಸರಲ್ಲೊಬ್ಬ ಎಂಬುದಕ್ಕೆ ಸಾಕಷ್ಟು ಆಧಾರಗಳನ್ನು ಒದಗಿಸಲಾಗಿದೆಯಂತೆ  ಇಷ್ಟಾಗಿಯೂ ಅದು ಯಾವುದೇ ಪರಿಷ್ಕೃತ ಇತಿಹಾಸ ಪುಸ್ತಕದಲ್ಲಿ ದಾಖಲಾಗಲಿಲ್ಲ.

ನನ್ನ ಚಿಕ್ಕಪ್ಪ ಒಬ್ಬರು ಕೆಲವು ವರ್ಷಗಳಿಂದ ಈ ತಿರುಚಿ ಹೋಗಿರುವ ವಿಜಯನಗರದ ಅರಸರ ಮೂಲದ ಬೆನ್ನು ಬಿದ್ದಿದ್ದಾರೆ. ವಿಜಯನಗರ ಸಾಮ್ರಾಜ್ಯದ ಮೂಲ ದೊರೆಗಳಾದ ಹಕ್ಕ ಮತ್ತು ಬುಕ್ಕರ ಮೂಲ ಸ್ಥಳ ಆಂದ್ರದ ಗುತ್ತಿ ಎಂದು ಚಿಕ್ಕಂದಿನಿಂದ ಓದಿಕೊಂಡು ಬಂದಿದ್ದೇವೆ. ಎಷ್ಟೋ ವರ್ಷಗಳಿಂದ  ಇತಿಹಾಸದಲ್ಲಿ ಅದೇ ರೀತಿ ದಾಖಲಾಗಿದೆ.  ಆದರೆ ಗೋಕರ್ಣದ ತಾತಾಚಾರ್ಯರ ಮೂಲ ಮಠದಲ್ಲಿ ದೊರಕಿದ ತಾಮ್ರಪತ್ರಗಳು ಗುತ್ತಿನ ಮನೆಯನ್ನು ವಿಜಯನಗರದ ಮೂಲ ಮನೆ ಎಂದು ಹೇಳುತ್ತವೆ. ತಾತಾಚಾರ್ಯರು ಕೃಷ್ಣದೇವರಾಯನ ಗುರುಗಳು.ಅವರು ಶಿಷ್ಯರಿಂದಲೇ ಜಲಸಮಾಧಿ ಹೊಂದಿದ  ಐತಿಹ್ಯವಿದೆ.

ಅಂತಹ ತಾತಾಚಾರ್ಯರ ಮಠದ ದಾಖಲೆಗಳನ್ನು, ಶಿಲಾಶಾಸನಗಳನ್ನು ಆಧಾರವಾಗಿಟ್ಟುಕೊಂಡು  ಹಂಪಿ ವಿಶ್ವವಿದ್ಯಾಲಯ ಇದನ್ನು ಒಪ್ಪಿಕೊಂಡಿತ್ತು . ಆದರೂ ಅದಿನ್ನೂ ಇಂದು ಓದುತ್ತಿರುವ ಪರಿಷ್ಕೃತ ಇತಿಹಾಸದ ಪಠ್ಯದಲ್ಲಿ ದಾಖಲಾಗಿಲ್ಲ. ಯಾಕೆಂದರೆ ಬಲಿಷ್ಟವಾದದ್ದು ಯಾವತ್ತೂ ಇತಿಹಾಸದಲ್ಲಿ ತನ್ನ ಮೌಲ್ಯ ಕಡಿಮೆಯಾಗುವುದನ್ನು ಒಪ್ಪಿಕೊಳ್ಳುವುದಿಲ್ಲ.

ಇಂತಹ ಮೇಲ್ವರ್ಗದ ಬಲಿಷ್ಟರ ಹುನ್ನಾರಕ್ಕೆ ಸಿಲುಕಿದ  ಆದಿ ಜಾಂಬವ ಜನಾಂಗಕ್ಕೆ ಸೇರಿದ, ಮಣೆಗಾರ ಕುಲದ ಮಾದಿಗ ಕಳಿಂಗ ರಾಯನ ಚರಿತ್ರೆ ಯಾವ ಇತಿಹಾಸದ ಪುಟಗಳಲ್ಲೂ ದಾಖಲಾಗುವುದೇ ಇಲ್ಲ. ಈತನ ಇತಿಹಾಸ  ಕೇವಲ ಜನಪದರ ಆಡು ಮಾತಿನಲ್ಲಿ, ಅಲೆಮಾರಿಗಳ ಹಾಡುಗಳಲ್ಲಿ, ಹಿರಿಯರ ಕಥೆಗಳಲ್ಲಿ ಮಾತ್ರ ಉಳಿದುಕೊಂಡಿದೆ. ತಾಮ್ರ ಫಲಕಗಳಲ್ಲಿ ಬರೆಯದ, ಶಿಲಾಫಲಕಗಳಲ್ಲಿ ಕೆತ್ತದ, ದಮ್ಮಯ್ಯ ಎಂದರೂ  ಇತಿಹಾಸಕಾರರು ದಾಖಲಿಸಲು ಒಲ್ಲದ ಈ ದಲಿತ ರಾಜನ ಕಥೆ ಎಂದಿಗೂ ಒಬ್ಬ ಇತಿಹಾಸದ ವಿದ್ಯಾರ್ಥಿಯ ಓದಿಗೆ ನಿಲುಕುವುದೇ ಇಲ್ಲ ಈ ಆದಿ ಜಾಂಬವ ಕುಲ ತಿಲಕ ಯಾವ ಚರಿತ್ರೆಯ ವಿದ್ಯಾರ್ಥಿಗೂ ಪರಿಚಯವಾಗುವುದೇ ಇಲ್ಲ.

ಇಂತಹುದ್ದೊಂದು ವ್ಯವಸ್ಥಿತ ಪಿತೂರಿಯ ನಡುವೆಯೂ ಜನರ ಆಡು ಮಾತಿನಲ್ಲಿ, ಹಾಡುಗಳಲ್ಲಿ, ಜನಪದರ ಕಥೆಗಳಲ್ಲಿ ಹುದುಗಿರುವ  ದಲಿತ ರಾಜನ ಕಥೆಯನ್ನು ದಾಖಲಿಸುವ ಧೈರ್ಯ ಮಾಡಿದ  ಓ ನಾಗರಾಜುರವರು ನಿಜಕ್ಕೂ ಅಭಿನಂದನಾರ್ಹರು. ತೀರಾ ಕಡಿಮೆ ಮಾತಿನ, ಕೇಳಿದ್ದಕ್ಕಷ್ಟೇ ಉತ್ತರ ಕೊಡುವ ಡಾ. ಓ ನಾಗರಾಜುರವರು ಕಾದಂಬರಿಯಲ್ಲೂ ಅಕ್ಷರಗಳನ್ನು ಆದಷ್ಟು ಮಿತವಾಗಿಯೇ ಬಳಸಿದ್ದಾರೆ. ಅನವಶ್ಯಕ ವಿವರಣೆಗಳು ಎಲ್ಲಿಯೂ ನುಸುಳದಂತೆ ಎಚ್ಚರಿಕೆ ವಹಿಸಿದ್ದು ಕಂಡು ಬರುತ್ತದಾದರೂ ಆದಿ ಜಾಂಬವ ಕುಲದ, ಮಾದಿಗರ ವರ್ಣನೆಯಲ್ಲಿ ಮಾತ್ರ ಎಲ್ಲಿಯೂ ಕೃಪಣತನ ತೋರಿಸಿಲ್ಲ.

ಮನುಷ್ಯ ಹಾಗೂ ಇತರ ಪ್ರಾಣಿಗಳು ಹುಟ್ಟುವ  ಏಳು ದಿನಗಳ ಮೊದಲೇ ಜನಿಸಿದ್ದ  ಜಾಂಬವಂತ ಈ ಜನಾಂಗದ ಮೂಲ ಪುರುಷ. ಇತಿಹಾಸದ ಪುಟಗಳಲ್ಲಿ ಭಾರತದಾದ್ಯಂತ ಮಾದಿಗ ಜನಾಂಗ  ಬೇರೆ ಬೇರೆ ಹೆಸರುಗಳಲ್ಲಿ ಹರಡಿಕೊಂಡಿರುವುದನ್ನು ಕಾಣಬಹುದು. ಕೆಲವೆಡೆ ಆದಿಜಾಂಬವ, ಆದಿ ಕರ್ನಾಟಕ ಎಂಬ ಹೆಸರಿನಿಂದ ಗುರುತಿಸಿ ಕೊಳ್ಳುತ್ತಾರಾದರೂ, ಮಾದಿಗ, ಮಣೆಕಾರ ಎಂದು ಗುರುತಿಸಿಕೊಳ್ಳುವುದೇ ಹೆಚ್ಚು. ಕೆಲವೆಡೆ ಚಮ್ಮಾರ, ಸಮಗಾರ, ಚಮಗಾರ , ಚಲವಾದಿ ಎಂದೂ ಕರೆಯಿಸಿಕೊಳ್ಳುತ್ತಾರೆ.

ಮಹಾರಾಷ್ಟ್ರದ ಮೂಲ ನಿವಾಸಿಗಳಾದ ಮಹಾರ್  ಜನಾಂಗವೂ ಮಾದಿಗ ಸಮುದಾಯಕ್ಕೆ ಸೇರಿದ್ದೇ ಆಗಿದೆ. ಒಂದು ಕಾಲದಲ್ಲಿ ಬಲಿಷ್ಟವಾಗಿದ್ದ ಈ ಜನಾಂಗ  ಮೇಲ್ವರ್ಗದ, ಪುರೋಹಿತಶಾಹಿಯ ಕುಟಿಲತೆಗೆ ಸಿಲುಕಿ ಅದೆಂದು ಅಸ್ಪ್ರಶ್ಯತೆಯನ್ನು ಪಡೆಯಿತೋ, ಅಂದಿನಿಂದ ಊರ ಹೊರಗಿನ ಕೊಳಚೆ ಪ್ರದೇಶದಲ್ಲಿ ನೆಲೆ ನಿಲ್ಲಬೇಕಾದ ಸ್ಥಿತಿ ಉದ್ಭವವಾಯಿತು. ಅದರಲ್ಲಿಯೂ ಜನಾಂಗದ ಒಳಗೇ  ಬಲಗೈ ಎಡಗೈ ಎಂಬ ಬೇಧಭಾವ, ಎಡಗೈ ಪಂಥದಲ್ಲೇ ಮತ್ತೆ ಮನೆತನಗಳ ಮೇಲು ಕೀಳಿನ ಸೆಣಸಾಟದಲ್ಲಿ ಒಗ್ಗಟ್ಟು ಕುಸಿದದ್ದರಿಂದ  ಮತ್ತಿಷ್ಟು ಕೆಳ ಹಂತಕ್ಕೆ ಇಳಿಯಬೇಕಾಯಿತು ಎಂಬ ವಿವರಣೆ ಇಲ್ಲಿ ಸಿಗುತ್ತದೆ.

ನನ್ನ ಆತ್ಮೀಯ ಸ್ನೇಹಿತನೊಬ್ಬನಿದ್ದಾನೆ. ನಾನು ಯಾವತ್ತೇ ಶಿರಸಿಗೆ ಹೋದರೂ ನನ್ನ ಜೊತೆಯಾಗುವುದು ಆತ ಆಥವಾ ಆತನ ತಮ್ಮ.  ಆತನಿಗೆ ಶಿರಸಿಯ ಮಾರಿಕಾಂಬೆ ಎಂದರೆ ಹೆತ್ತಮ್ಮನಂತೆ. ನಾನೋ ಪದೇ ಪದೇ ಮಾರಿಕಾಂಬೆಯ ಕಥೆಯನ್ನು ಅವನ ಬಳಿ ಹೇಳುತ್ತ, ಆತನ ಜನಾಂಗಕ್ಕೆ ಆಗಿರುವ ಅನ್ಯಾಯವನ್ನು ತಿಳಿಸಿದರೂ ಒಪ್ಪುತ್ತಿರಲಿಲ್ಲ.  ಮೇಲ್ವರ್ಗದ ಮಾರಿಕಾಂಬೆ ನಿಮ್ನ ವರ್ಗದ ಚಮ್ಮಾರ ಜನಾಂಗದವನನ್ನು ಅರಿಯದೇ ಮದುವೆಯಾಗಿ ನಂತರ ಆತನ ತಲೆ ಕಡಿಯಲು ಅಟ್ಟಿಸಿಕೊಂಡು ಹೋಗುತ್ತಾಳೆ, ಆತ ಕೋಳಿ, ಕುರಿ, ಆಡು ಹೀಗೆ ಎಲ್ಲಾ ಪ್ರಾಣಿಗಳ ಗುದದಿಂದ ಹೊಕ್ಕು ಬಾಯಿಂದ ಹೊರಬಿದ್ದು ತಪ್ಪಿಸಿಕೊಳ್ಳುತ್ತಾನೆ. ಆದರೆ ಕೋಣನ ಗುದದಲ್ಲಿ ಪ್ರವೇಶಿಸಿದಾಗ ತಲೆಯ ಬಳಿ ನಿಂತ ಮಾರಿಕಾಂಬೆ ಆತ ಬಾಯಿಂದ ಹೊರಬೀಳುವ ಸಮಯಕ್ಕೆ ಸರಿಯಾಗಿ ಕೋಣನ ತಲೆ ಕಡಿಯುತ್ತಾಳೆ.

ಹೀಗೆ ವರ್ಣ ಸಂಕರಕ್ಕೆ ಹೆಂಡತಿಯಿಂದಲೇ ಗಂಡನ ತಲೆ ಕಡಿಸಿ ಜಾತಿ ವ್ಯವಸ್ಥೆಯನ್ನು ಭದ್ರವಾಗಿ ಕಾಪಿಟ್ಟುಕೊಳ್ಳುವ ವೈದಿಕ ಶಾಹಿಯ ಹುನ್ನಾರದ ಕಥೆಯನ್ನು ಆತ ಯಾವತ್ತೂ  ಒಪ್ಪುವುದೇ ಇಲ್ಲ.  ಆತ  ಚಮ್ಮಾರ ಎಂದಲ್ಲ, ತೀರಾ ಕೆಟ್ಟವನಾಗಿದ್ದ ಕಾರಣಕ್ಕೆ ಆತನಿಗೆ ಶಿಕ್ಷೆ ಆಯಿತು ಎಂದೇ ವಾದಿಸುತ್ತಿದ್ದಾತ  ಇತ್ತೀಚಿನ ಕೆಲವು ದಿನಗಳಿಂದ ಈ ಎಲ್ಲ  ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾನೆ.

ಇಲ್ಲಿಯೂ ಮಾದಿಗ ಜನಾಂಗದವನೊಬ್ಬ ದಳವಾಯಿಯಾಗುವುದನ್ನು, ರಾಜ ಪದವಿಗೆ ಏರುವುದನ್ನು ಸಹಿಸಿಕೊಳ್ಳುವುದು ಹೆಚ್ಚಿನವರಿಗೆ ಸಾಧ್ಯವೇ ಇಲ್ಲ.  ಅಸ್ಪ್ರಶ್ಯನೊಬ್ಬ ರಾಜನಾದರೆ ಆತನ ಕೈ ಕೆಳಗೆ ಕೆಲಸ ಮಾಡುವುದನ್ನು ಊಹಿಸಿಕೊಳ್ಳಲೂ  ಇವರಿಂದ ಸಾಧ್ಯವಿಲ್ಲ. ಹೀಗಾಗಿ ಮಹಾರಾಜರ ಕೃಪಾಕಟಾಕ್ಷವಿದ್ದರೂ ಕಳಿಂಗ ರಾಯ ಅನುಭವಿಸಿದ ಅವಮಾನಗಳಿಗೆ ಕೊನೆಯೇ ಇಲ್ಲ. ಆದರೆ ಆತನ ಆತ್ಮ ಸ್ಥೈರ್ಯ ಮಾತ್ರ ಉನ್ನತವಾದದ್ದು.

ಕಾಡು ಕಡಿದು ನಾಡು ಕಟ್ಟುವ ಅದಮ್ಯ ಕಷ್ಟ, ಆ ಕಷ್ಟವನ್ನು ಕುರಂಗರಾಯ ಎದುರಿಸಿದ ರೀತಿ  ಕಣ್ಣಿಗೆ ಕಟ್ಟುವಂತಿದೆ. ನಾಡು ಕಟ್ಟುವ ಪ್ರತಿಯೊಬ್ಬರೂ ಕಾಡಿನ ಜೀವಿಗಳನ್ನು ಬೇಟೆಯಾಡುವ ಪ್ರಸಂಗ ಮಾತ್ರ ನನ್ನನ್ನು ತೀರಾ ವಿಹ್ವಲಳಾಗುವಂತೆ ಮಾಡುತ್ತದೆ. ಅರ್ಜುನ ಇಂದ್ರಪ್ರಸ್ಥವನ್ನು ಕಟ್ಟುವಾಗ ಯಾವ ನಾಗವೂ ತಪ್ಪಿಸಿಕೊಳ್ಳದಂತೆ ಕಾವಲಿದ್ದು ಇಡೀ ನಾಗ ಜನಾಂಗವನ್ನೇ ನಾಶ ಮಾಡಿದ ಪ್ರಸಂಗ  ಬೇಡ ಬೇಡವೆಂದರೂ ನೆನಪಾಗಿ ಬೆಂಕಿಯಲ್ಲಿ ಚಟಪಟನೆ ಉರಿದ ಹಾವಿನ ವಿಲವಿಲ ಒದ್ದಾಟದ ಚಿತ್ರ ಮೂಡಿ ಭಯ ಹುಟ್ಟಿಸಿದ್ದು ಸುಳ್ಳಲ್ಲ. ಇತ್ತೀಚಿನ ದಿನಗಳಲ್ಲಿ ನನ್ನ ಕಾಡಿನ  ಓಡಾಟ  ಹೆಚ್ಚಾದಂತೆ ಕಾಡಿನ ಸಣ್ಣ ಸಣ್ಣ ಕ್ರಿಮಿ, ಕೀಟಗಳ ಬಗ್ಗೆಯೂ  ಪಾಪ ಎನ್ನುವಂತಾಗಿದೆ.

“ಹೋಯ್… ಹೋಯ್.. ಅಲ್ಲಿ ಜೇಡದ ಬಲೆ ಈದ್ರೋ.  ಬದೀಗಿಂದ್ ಬನ್ನಿ. ಪಾಪ ಅದರ ಬಲೆ ಹರದ್ ಹಾಕುರಿ” ನಾನು ಕಾಡಿಗೆ ಇಳಿದಾಗಲೆಲ್ಲ ತಮ್ಮ ಕಪ್ಪೆಯ ಕುರಿತಾದ ಸಂಶೋಧನೆಗೆ ಸ್ಕಾಟ್ ಲ್ಯಾಂಡ್ ದೇಶದ ಭಾರತೀಯ ಶಾಖೆಯಾದ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ ಲ್ಯಾಂಡ್ ನವರು ಕೊಡಮಾಡುವ ಗ್ಲೋಬಲ್ ಅರ್ಥ್ ಹೀರೋಸ್ ಪ್ರಶಸ್ತಿಯ ಗ್ರೀನ್ ವಾರಿಯರ್ ವಿಭಾಗದಲ್ಲಿ  ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಅರಣ್ಯಾಧಿಕಾರಿ  ಸಿ. ಆರ್ ನಾಯ್ಕ ಎಚ್ಚರಿಸುತ್ತಿರುತ್ತಾರೆ.

“ಕಾಲ್ ಕೆಳಗೆ ಒಂದ್ ಹುಳಾನೂ ಸಾಯುಕಿಲ್ಲ. ಹಂಗೆ ಬರ್ತರಿ ಅಂದ್ರೆ ಮಾತ್ರ ಕಾಡೊಳಗೆ ಪ್ರವೇಶ.” ಎಂದು ಭಾರಿ ಸ್ಟ್ರಿಕ್ಟ್ ಆಗಿ ಹೇಳುವ ಇವರೇನಾದರೂ ಈ ಕಾಡು ಕಡಿದು, ಪ್ರಾಣಿಗಳ ಬೇಟೆಯಾಡಿ ನಾಡು ಕಟ್ಟುವ ಪ್ರಕ್ರೀಯೆಯನ್ನು ಓದಿದ್ದರೆ ಎಷ್ಟು ಸಿಟ್ಟಿಗೇಳುತ್ತಿದ್ದರೋ ಎಂದು ಊಹಿಸಿಕೊಳ್ಳುತ್ತಲೇ “ಹಾವೇನಾರೂ ಕಂಡ್ರೆ ಹೊಡಿ ಬೇಡಿ, ನಂಗೆ ಫೋನ್ ಮಾಡಿ.” ಎಂದು ಹಳ್ಳಿ ಹಳ್ಳಿಗಳಿಗೆ ಹೋಗಿ ತಿಳಿ ಹೇಳಿ ಜಾಗ್ರತಿ ಮೂಡಿಸುವ ಇವರಿಂದಾಗಿ ಇತ್ತೀಚೆಗೆ ಮನೆಯಲ್ಲಿ ಕಟ್ಟಿರುವ ಜೇಡದ ಬಲೆ ತೆಗೆಯಲೂ ನಾನು ನೂರು ಸಲ ಯೋಚಿಸುವಂತಾಗಿ ಬಿಟ್ಟಿದೆ.

ಕಾದಂಬರಿಯ ಬೇಟೆಯ ಮೋಜಿನ ಕಥೆಯನ್ನು ಓದುವಾಗ ಪದೇ ಪದೇ ಇವರು ನೆನಪಾಗಿದ್ದು ಇದೇ ಕಾರಣಕ್ಕೆ.  “ಇಷ್ಟಿಷ್ಟ್ ದೊಡ್ಡ ಡಾಂಬರ್ ರಸ್ತೆ ಎಂತಕ್ ಮಾಡ್ತಾರೋ, ಬೇಸಿಗೆಲಿ ಡಾಂಬರ್ ಕರಗ್ತದೆ. ರಸ್ತೆ ದಾಟುವ ಚೇಳು, ಹಾವು, ಹುಳ ಹುಪ್ಪಡಿ ಆ ಕರಗಿದ ಡಾಂಬರ್ ನಲ್ಲಿ ಬೆಂದು ಹೋಗ್ತಾವೆ.” ಎಂದು ತೀರಾ ಬೇಸರಿಂದ ಹೇಳುವ ಮಾತೇ ಕಿವಿಯೊಳಗೆ  ರಿಂಗಣಿಸುತ್ತದೆ.

ನಾವು ಹೈಸ್ಕೂಲ್ ಗೆ ಹೋಗುವಾಗಲೇ ಜಿಲ್ಲೆಯ ಒಂದೆರಡು ಕಡೆ ತೂಗು ಸೇತುವೆಯ ನಿರ್ಮಾಣವಾಗಿತ್ತು. ನಮಗೆ ಶಾಲಾ ಪ್ರವಾಸಕ್ಕೆಂದು ಅದೇ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು.ಒಮ್ಮೆ ಹೊನ್ನಾವರದ ಕರ್ಕಿ ಹಾಗೂ ಇನ್ನೊಮ್ಮೆ ಅಂಕೋಲಾದ ಕಲ್ಲೇಶ್ವರ. ನಾವು ಶಿಕ್ಷಕರಾದ ಮೇಲೂ ನಮ್ಮ ವಿದ್ಯಾರ್ಥಿಗಳನ್ನು ಅದೇ ಸ್ಥಳಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದೇವೆ.

ಹೀಗಿರುವಾಗ ಶತಮಾನಗಳ ಹಿಂದೆಯೇ ಒಂದು ಗುಡ್ಡದಿಂದ ಇನ್ನೊಂದು ಗುಡ್ಡದ ತುದಿಗೆ ತೂಗು ಸೇತುವೆ  ನಿರ್ಮಿಸಿ ಉಡದ ನೆರವಿನಿಂದ ರಥವನ್ನು ಎಳೆದೊಯ್ಯುವ ವ್ಯವಸ್ಥೆ ಕಲ್ಪಿಸಿದರೆ ಅದು ಎಂತಹ ಸಂಚಲನ ಮೂಡಿಸಬಹುದು?  ಕಾದಂಬರಿಯಲ್ಲೂ  ಕುರಂಗರಾಯ  ಇಂತಹುದ್ದೊಂದು ಸೇತುವೆ ನಿರ್ಮಿಸುತ್ತಾನೆ ತನ್ನ ಅತ್ಯಂತ ಪ್ರೀತಿ ಪಾತ್ರ ರಂಗನಾಯಕಿಗಾಗಿ. ಈ ರಾಜ ಮಹಾರಾಜರಿಗೆ ಆಸ್ಥಾನದ ನರ್ತಕಿಯೊಬ್ಬಳು ಉಪಪತ್ನಿಯಾಗಿ ಇರಲೇ ಬೇಕು.

ಅತ್ಯಂತ ಪ್ರೀತಿಸುವ ರಂಗನಾಯಕಿ ಸಂಶಯದ ಸುಳಿಗೆ ಸಿಲುಕಿ ರಾಜನ ಉಡುಪನ್ನೇ ಧರಿಸಿ ರಾಜನನ್ನು ಹುಡುಕಿ ಹೊರಟರೆ, ಅವಳಿಗೋಸ್ಕರ ಬಂದ ರಾಜ ಯಾರೋ ಪರಪುರುಷ ಎಂದು ತಿಳಿದು ಅವಳ ರುಂಡ ಹಾರಿಸುತ್ತಾನೆ. ಈ ಸಂಶಯ ಹೇಗೆ ವಿವೇಚನೆಯನ್ನು ನಾಶ ಮಾಡಿ ಅತ್ಯಂತ ಪ್ರೀತಿಪಾತ್ರರನ್ನೇ ಕೊಲೆಗೈಯ್ಯುವಂತೆ ಮಾಡುತ್ತದೆ ಎಂಬುದು ಇಲ್ಲಿ ತೀರಾ ಮನೋಜ್ಞವಾಗಿ ನಿರೂಪಿತವಾಗಿದೆ.

ಇಲ್ಲಿ ಓದಲೇ ಬೇಕಾದ  ಅಂಕಣ  ಒಂದಿದೆ. ಅದು ಪುಟಗೋಸಿ  ಪ್ರಕರಣ.  ಎಲ್ಲೆಲ್ಲೂ ಪುಟಗೋಸಿಯ ಮಾತೇ ನಡೆದಿರುವಾಗ ಹೊಸ ರಾಜ್ಯಕ್ಕಾಗಿ ಕೋಟೆಯನ್ನು ಕಟ್ಟುವ ಕಾಯಕದಲ್ಲಿ ನಿರತರಾಗಿರುವ ಕೆಲಸಗಾರರ ಪುಟಗೋಸಿಗಳು ಪರಸ್ಪರ ಮಾತನಾಡಿಕೊಳ್ಳುವ ಪ್ರಸಂಗ ಕುತೂಹಲಕಾರಿಯಾಗಿದೆ. ಪುಟಗೋಸಿಯ ಕಥೆ ವ್ಯಥೆಗಳನ್ನು ವಿವರಿಸುವ ಕಾದಂಬರಿಕಾರರು, ಬಿಗಿ ಇಲ್ಲದ ಪುಟಗೋಸಿ ಮಾಡುವ ಅವಾಂತರಗಳನ್ನೂ ಇಲ್ಲಿಯೇ ನವಿರಾಗಿ ಬಿಚ್ಚಿಡುತ್ತಾರೆ.

ಕಾದಂಬರಿಯಾಗಷ್ಟೇ ನೋಡಿದರೆ ಈ ಪುಸ್ತಕ ಪೂರ್ತಿಯಾಗಿ ಗೆಲ್ಲುವುದಿಲ್ಲ. ಕಾದಂಬರಿಗೆ ಬೇಕಾದ ಫ್ಯಾಂಟಸಿಗಳು, ರೋಮಾಂಚನಗಳು, ನವಿರುತನ ಅಲ್ಲಲ್ಲಿ ಮಿಂಚಿನಂತೆ ಸುಳಿದು ಹೋಗುತ್ತದೆಯಾದರೂ ಕಾದಂಬರಿಗೆ ಬೇಕಾದ ಒಂದು ಸುಲಲಿತ ಭಾಷೆ ಇಲ್ಲದಿರುವುದು ಒಂದಿಷ್ಟು ತೊಡಕಾಗಿ ಭಾಸವಾಗುತ್ತದೆ. ಆದರೆ ಒಂದು ಜನಾಂಗೀಯ ಅಧ್ಯಯನಕ್ಕೆ ಬೇಕಾದ  ಆಕರ ಗ್ರಂಥವಾಗಿ ಈ ಪುಸ್ತಕ ಖಂಡಿತವಾಗಿ ಗೆಲ್ಲುತ್ತದೆ.

ಮೇಲ್ವರ್ಗದ ಹುನ್ನಾರುಗಳು ಯಥೇಶ್ಚವಾಗಿದ್ದು, ಉಳಿದವರನ್ನು ಮೇಲೇರಲು ಬಿಡದಂತಹ ವೈದಿಕಶಾಹಿ ಸಮಾಜದ ಶ್ರೇಣಿಕೃತ ವ್ಯವಸ್ಥೆಯಲ್ಲಿ   ತೀರಾ ಕೆಳ ಹಂತದ ಜನಾಂಗದ  ಕುರಂಗರಾಯ ರಾಜನಾಗುವುದು ಸಣ್ಣ ಮಾತೇನೂ ಅಲ್ಲ. ಹೀಗಾಗಿ ಕೇವಲ ಇತಿಹಾಸದ ವಿದ್ಯಾರ್ಥಿಗಳು ಮಾತ್ರ ಓದಬೇಕಾದ ಕಾದಂಬರಿಯಾಗದೇ ಸಮಾಜದ ವ್ಯವಸ್ಥೆಯನ್ನು ತಿಳಿದುಕೊಳ್ಳ ಬಯಸುವ ಪ್ರತಿಯೊಬ್ಬರೂ ಓದಲೇ ಬೇಕಾದ ಪುಸ್ತಕವಾಗಿ ಇದು ಹೊರಹೊಮ್ಮಿದೆ.

ಕುರಂಗ ಎಂದರೆ ಜಿಂಕೆ. ಜಿಂಕೆಯ ಹೆಸರು ಹೊತ್ತ ರಾಜ, ಜಿಂಕೆಯ ಚಿನ್ಹೆಯನ್ನು ತಾನು ಹೊಸದಾಗಿ ಟಂಕಿಸಿದ ಚರ್ಮದ ನಾಣ್ಯದ ಮೇಲೂ ಹಾಕಿಸಿ ಯಶಸ್ವಿಯಾದ. ಚರ್ಮದ ನಾಣ್ಯವನ್ನು ಠಂಕಿಸಿದ ತುಘಲಕ್ ಅದನ್ನು  ಹೇಗೆ ಕಾರ್ಯರೂಪಕ್ಕೆ ತರುವುದೆಂದೇ ಯೋಚಿಸದೇ  ಹುಚ್ಚ ಎನ್ನಿಸಿಕೊಂಡ. ಆದರೆ ಕುರಂಗರಾಯ ಎರಡು ವರ್ಷಗಳ ಸತತ ಬರಗಾಲದಲ್ಲೂ  ಚರ್ಮದ ನಾಣ್ಯಗಳ ಸಮರ್ಪಕ ಬಳಕೆಯಿಂದಾಗಿ ರಾಜ್ಯದ ಬೊಕ್ಕಸವನ್ನು ತುಂಬಿಸಿಕೊಂಡ. ಕುರಂಗರಾಯ ಒಬ್ಬ ಚತುರ ಆಡಳಿತಗಾರನಷ್ಟೇ ಅಲ್ಲ, ವೈಜ್ಞಾನಿಕ ಹಾಗೂ ಪ್ರಾಯೋಗಿಕ ಮನಸ್ಥಿತಿಯವನು ಎಂಬುದರ ನಿದರ್ಶನವೆಂಬಂತೆ ಸುವರ್ಣಗಿರಿ ಹಾಗು ಕೋಡಗಲ್ಲಿನ ನಡುವೆ ನಿರ್ಮಿಸಿದ ತೂಗು ಸೇತುವೆ ಹಾಗೂ ಚರ್ಮದ ನಾಣ್ಯದ ಪರಣಾಮಕಾರಿ ಅನುಷ್ಟಾನದಿಂದ ತಿಳಿದು ಬರುತ್ತದೆ.

ಬೇಕಾದಲ್ಲಿ ಮೃದು, ಅವಶ್ಯ ಬಿದ್ದರೆ ಬೆಂಕಿಯಾಗುವ ದಿಟ್ಟತೆಯಲ್ಲಿ  ರಾಜ್ಯಭಾರ ಮಾಡಿದ ಒಬ್ಬ ದಲಿತ ರಾಜನ ಕುರಿತು ತಿಳಿಯುವುದಕ್ಕಾದರೂ ಈ ಪುಸ್ತಕವನ್ನು ಓದಲೇಬೇಕು.

11 Responses

 1. Nice article akka

 2. Shashi says:

  AAdre south canara area dalli bairarasa Nandu Rayana bagge ondu gadhe maatide…nanduraayana bhanDaara naayi tintu atnta….

 3. ನಿಜಕ್ಕೂ ಅತ್ಯದ್ಭುತ ಬರಹ
  ಅಭಿಮಾನದ ಅಭಿನಂದನೆಗಳು ಶ್ರೀ

 4. Sudha Hegde says:

  Very interesting..small writing but great thoughts..it rounds me in 3-4 stories..

 5. Sudha Hegde says:

  Nice Shridevi

 6. Ramanand says:

  Arhate eroru padavi alankarisali.aadare dalita anno karanakke padavi kododu estu sari?

 7. Chi na hally kirana says:

  Dalita Rajanobba rajyabhara madiddaru embudannu tilisikotta nimage abinandanegalu haagu neevu tilisidante e bagge kalaji vahisida Ugama Srinivasarigu danyavadagalu..

 8. ಮಂಜುನಾಥ ಬನಸೀಹಳ್ಳಿ says:

  ಪ್ರಸ್ತುತ ಕಾಲಕ್ಕೆ ಕನ್ನಡಿ ಹಿಡಿಯುವಂತ ಬರಹ ಧನ್ಯವಾದಗಳು

 9. Sreedhar says:

  ,ನಿಜಕ್ಕೂ ಮೈ ಮರೆಯುವ ಬರಹ

 10. ರಾಜು ಪಾಲನಕರ ಕಾರವಾರ says:

  ಶ್ರೀದೇವಿ ಮೇಡಂ ಈ ವಾರದ ಅವಧಿಯಲ್ಲಿ ನಿಮ್ಮ ಶ್ರೀದೇವಿ ರೆಕಮೆಂಡ್ಸ್ ಅಂಕಣದ ಬರಹ ತುಂಬಾ ಚೆನ್ನಾಗಿದೆ…ನೀವು ಹೀಗೆ ಬರೆಯುತ್ತಿರಿ ನಿಮ್ಮ ಬರಹಗಳ ರಸದೌತಣ ನಮಗೆ ಉಣಬಡಿಸುತ್ತಿರಿ …ನಿಮಗೆ ಅಭಿನಂದನೆಗಳು

 11. Kiran Bhat says:

  ಚೆನ್ನಾಗಿದೆ.

Leave a Reply

%d bloggers like this: