ನೆನಪುಗಳು ಹಸುವಿನ ಕೊರಳ ಗಂಟೆಯಂತೆ..

ನಿರಾಭರಣ ಸುಂದರಿ….

ಡಾ ಲಕ್ಷ್ಮಿ ಶಂಕರ ಜೋಶಿ

ಬೆಳ ಬೆಳಿಗ್ಗೆ ಆರೂವರೆಗೆ ಇವರನ್ನು ಸ್ಟೇಶನ್ನಿಗೆ ಬಿಡಲು ಹೋಗಿದ್ದೆ‌. ಬರುವಾಗ ನಿಧಾನ ಗಾಡಿ ಓಡಿಸುತ್ತಾ, ಬೆಳಗಿನ ಹವೆ ಸುಖಿಸುತ್ತಾ, ಒಂಚೂರೂ ಟ್ರಾಫಿಕ್ ಗದ್ದಲವಿಲ್ಲದ ಉದ್ದಾನುದ್ದದ ರಸ್ತೆಗುಂಟ ನಾನೇ ನಾನು.ನಾನೇ ನಾನು…

ಫಕ್ಕನೇ ತಿರುವಿನಲ್ಲಿ ಸುಂದರ ಬಿಳಿ ಆಕಳು. ಬೋಳುಗೊರಳು, ಕೊರಳಲ್ಲಿ ಗಂಟೆಯಿಲ್ಲ. ಹಗ್ಗವಿಲ್ಲ.. ಯಾವ ಧಾವಂತವೂ ಇಲ್ಲದೇ ನಿಧಾನ ಬರ್ತಾ ಇತ್ತು. “ಎಂಥಾ ಸುಂದರಿ ಇವಳು.! ಮಗಳು ಸ್ವಾತಿ ಹಾಗೆ ಕಾಣ್ತಿದೆ” ಅರಿವಿಲ್ಲದೇ ಬಾಯಿಗೆ ಬಂತು. ಅವಳೂ ಹಾಗೆ…ನಿರಾಭರಣೆ. ಏನೂ ಬೇಡ. ಗಾಡಿ ರಸ್ತೆ ಪಕ್ಕ ನಿಲ್ಲಿಸಿ ಅದು ಹೋಗುವವರೆಗೂ ನೋಡ್ತಾ .. ಪ್ರೀತಿಯುಕ್ಕಿ ಬಂದಿತ್ತು.ಬಾ…ಬಾ..ಕರೆದೆ.. ಉಹೂಂಂ ನೋಡಲಿಲ್ಲ.

ಊರಿಂದ ತಂದ ಅಧಿಕ ನೆನಪುಗಳಲ್ಲಿ ಆಕಳುಗಳ ನೆನಪುಗಳೂ ಅಗಾಧವೇ. ನಮ್ಮ ಮನೇಲಿ ಎಂತೆಂಥ ಸುಂದರ ಆಕಳುಗಳಿದ್ದವು. ಕರುಗಳಂತೂ ಮನಮೋಹಕ. ಪಿಳಿ ಪಿಳಿ ಕಣ್ಣು ಬಿಡುವ ಕರು, ಹುಟ್ಟಿದಾಗ ಎದ್ದು ನಿಲ್ಲಲೂ ಆಗದೇ ಧಬಕ್ಕನೇ ಬಿದ್ದು ಬಿಡುವ ಕರು, ಸ್ವಲ್ಪ ಶಕ್ತಿ ಬಂದ ಮೇಲೆ ಟಣ್ ಟಣ್ ಜಿಗಿದಾಡುವ ಕರು, ಅಮ್ಮನ ಕೆಚ್ಚಲಿಗೆ ಗುದ್ದಿ ಗುದ್ದಿ ಹಾಲು ಕುಡಿದು ಕುಪ್ಪಳಿಸುವ ಕರು, ನೋಡ ನೋಡುತ್ತಲೇ ಬೆಳೆದ ಕರು ಆಕಳಾದದ್ದು, ತಾಯಿ ಆಕಳಾದದ್ದು, ಎಲ್ಲಾ ಮನಸಿನ ಮೂಲೆಯಲ್ಲಿ ದಾಖಲಾಗಿ ಉಳಿದಿವೆ.

ನಾನು ಕೃಷಿ ಮನೆತನದಲ್ಲಿ ಹುಟ್ಟಿದರೂ ಎಂದೂ ಕೊಟ್ಟಿಗೆಗೆ ಕಾಲಿಟ್ಟವಳಲ್ಲ. ಕಾಲಿಡಲು ಬಿಡುತ್ತಿರಲಿಲ್ಲ. ಆಕಳು ಹಿಂಡುವವರು ಇದ್ದರು. ಹಾಲಿನ ದೊಡ್ಡ ದೊಡ್ಡ ಗುಂಡಿಗಳನ್ನು ತಂದು ಅಡಿಗೆ ಮನೆಯ ಹೊರಗಿಟ್ರೆ ಮುಂದಿನ ಕೆಲಸ ನಮ್ಮದಿರುತ್ತಿತ್ತು. ಮಾರುವ ಮಾತಂತೂ ಇಲ್ಲವೇ ಇಲ್ಲ. ರೇಜಿಗೆ ಹುಟ್ಟಿಸುವಷ್ಟು ಹಾಲು, ಹಾಲಿನ ಉತ್ಪನ್ನುಗಳು ಇರುತ್ತಿದ್ದವು.

ದಿನವೂ ಹೊಸ ಹಾಲಿಗಾಗಿ ರಂಗವ್ವಜ್ಜಿ ಬರ್ತಿದ್ದರು. ಅವಳು ಅಜ್ಜನ ಸೋದರ ಮಾವನ ಮಗಳು. ಅಜ್ಜಿ ತೀರಿದ ಮೇಲೆ ಅಪ್ಪನನ್ನು ಜೋಪಾನ ಮಾಡಿದವಳು ಅವಳೇ. ಹೀಗಾಗಿ ಅವಳಿಗಿಷ್ಟು ಹಾಲು ಅಂತ ಇಟ್ಟು ಉಳಿದ ಹಾಲೆಲ್ಲ ಬಳಕೆಗೆ. ರಾತ್ರಿ ಹಾಲು ಕುಡಿದೇ ಮಲಗಬೇಕು. ಮಧ್ಯಾಹ್ನ ಮಜ್ಜಿಗೆ ಕುಡೀಲೇಬೇಕು. ಶ್ರೀಖಂಡದ ಬಟ್ಟಲು ಖಾಲಿಯಾಗಲೇಬೇಕು. ಹೀಗೆ ನೂರೆಂಟು ಕಂಡೀಷನ್ಗಳ ಮಧ್ಯೆ ಹಾಲು, ಆಕಳು, ಗಂಜಲ, ಕೊಟ್ಟಿಗೆ ಇವೆಲ್ಲವುಗಳ ಬಗ್ಗೆ ಒಂಥರಾ ಅಲಕ್ಷಿತ ಭಾವವೇ ಇತ್ತೇನೋ…

ಎಂದಾದರೂ ಪುಟ್ಟ ಕರೂನ ಕೊಟ್ಟಿಗೇಲಿ ನೋಡಿದಾಗ ಕೊಟ್ಟಿಗೇಲಿ ಕಾಲಿಟ್ಟ ಕೂಡಲೇ ಆಳುಗಳು ಓಡೋಡಿ ಬಂದು ಗಾವಳಿ ಎಬ್ಬಿಸಿ ಬಿಡ್ತಿದ್ದರು. “ಏನ ಬೇಕ್ರಿ ಅವ್ವಾರ ನಡ್ರಿ ನಡ್ರಿ ನೀವು ಅನ್ನುತ್ತ ಗಾಬರಿಗೆ ಹಾಕಿ ಬಿಡ್ತಿದ್ದರು. ಹೀಗಾಗಿ ಆಕಳುಗಳ ಬಗ್ಗೆ ಅಂತರವೇ ಉಳಿಯಿತು.

ಮದುವೆಯಾಗಿ ಪೇಟೆ ಸೇರಿದ ಮೇಲೆ ಬಾಲ್ಯದ ನೆನಪುಗಳೆಲ್ಲ ದಾಂಗುಡಿಯಿಡುತ್ತಿದ್ದವು. ಅದರಲ್ಲೂ ಈ ಆಕಳುಗಳ ವ್ಯಾಮೋಹ ಅಧಿಕ ಮಟ್ಟದ್ದೇ ಎನಬಹುದು. ಬಹುಶಃ ಈ ಜಗತ್ತಿನಲ್ಲಿ ಕಲಿಯದೇ, ಕಲಿಸದೇ ಅಪ್ಪನಿಂದ ಮಗನಿಗೆ, ಮಗನಿಂದ ಮೊಮ್ಮಗನಿಗೆ ಬರುವಂಥ ವಿದ್ಯೆ ಎಂದರೆ ಕೃಷಿ ಮತ್ತು ಕೃಷಿ ಸಂಬಂಧಿತ ವ್ರತ್ತಿಗಳೆಂದು ನಾವು ನಂಬಬೇಕು.

ಸಂಗೀತದ ಮಹಾನ್ ಗಾಯಕ ಭೀಮಸೇನ ಜೋಶಿಯವರ ಹತ್ತಿರ ಗಾಯಕರು ಹೋದಾಗ ವರೂ ಹೀಗೇ ಹೇಳುತ್ತಿದ್ದರಂತೆ‌. ಕಲಿಯಿರಿ, ಕಲಿಯಿರಿ ಎಂದು. ಹೇಗೆ ಕಲಿಯುವದು? ಎಂಬ ಪ್ರಶ್ನೆ ಬಂದಾಗ ನೋಡಿ ಕಲಿಯಿರಿ, ಅನುಕರಿಸಿರಿ. ನೋಡುತ್ತಾ ಮಾಡುತ್ತಾ ಕಲಿಯಿರಿ ಎಂಬುದಷ್ಟೇ ಅವರ ಪಠ್ಯವಾಗಿರುತ್ತಿತ್ತೇ ಹೊರತು ತಾಳ, ಶ್ರುತಿ ಹಿಡಿದು, ವಾದ್ಯಗಳನ್ನು ಬಳಸಿ ಹೀಗೆ ಕಲಿಯಬೇಕೆಂದು ಕಲಿಸಲಿಲ್ಲ. ಯಾಕೆಂದರೆ ಅವರು ಹಾಗೆ ಕಲಿತಿರಲಿಲ್ಲ.

ವಿಶ್ವವಿದ್ಯಾನಿಲಯಗಳಲ್ಲಿ ಕಲಿಯದ ಕಲಾವಿದರದ್ದೂ ಕೂಡ ಇದೇ ಪಾಡು. ಅವರು ಮನೆಯಿಂದಲೇ ಅತ್ಯಂತ ಸಹಜವಾಗಿ ಕಲಿತಿರುತ್ತಾರೆ. ಹೈನುಗಾರಿಕೆ ಕೂಡ ಹಾಗೆಯೇ.‌ನೋಡಿ  ಕಲಿತದ್ದೇ ಬಹಳ. ಅದಕ್ಕೆ ಕೃಷಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಬೇಕಾಗಿಲ್ಲ.

5 comments

 1. ಪ್ರಬಂಧ ಬರಹ ನಿಮಗೊಲಿದಿದೆ.. ಒಳ್ಳೆಯ ರೈಟಪ್..

 2. ಹಳ್ಳಿಗಾಡಿನ ಕೃಷಿಕ ಮನೆಯವರಾದರೂ ನಮ್ಮನೆಯಲ್ಲಿ ಹೈನು ಇರಲಿಲ್ಲ.
  ನಮ್ಮ ತಂದೆ ಶಾಲೆಯ ಮಾಸ್ತರಾದ್ದರಿಂದ ನಮ್ಮೂರಿನ ಸಮೀಪದ
  ಇನ್ನೊಂದು ಹಳ್ಳಿಯಲ್ಲಿ ಇರುತ್ತಿದ್ದೆವು.
  ಆ ಊರಲ್ಲಿ ದಿನಾಲು ಹಾಲು,ಮೊಸರು ತರಲು ಬೋಗುಣಿ
  ಹಿಡಿದುಕೊಂಡು ನಾನೇ ಹೋಗುತ್ತಿದ್ದೆ.
  ಹಣದ ರೂಪದಲ್ಲಿ ತಿಂಗಳ ವರ್ತನಿ ಅಥವಾ
  ಜೋಳ ಇತ್ಯಾದಿ ಕಾಳುಕಡಿ ಕೊಟ್ಟು
  ಹಾಲು ಮೊಸರು ತರಬಹುದಿತ್ತು. ಹೈನು ಇದ್ದವರು
  ತಮಗೆ ಬೇಕಾದವರಿಗೆ
  ಉಚಿತವಾಗಿ ಮಜ್ಜಿಗೆ ಕೊಡುತ್ತಿದ್ದರು.
  ನಾನು ತಂಬಿಗೆ ಹಿಡಿದು ಅಲ್ಲಿನ
  ದಫ್ತರದಾರರ (ಶಾನುಭೋಗರು ಅಥವಾ ಕುಲಕರ್ಣಿಗಳು)
  ಮನೆಗೆ ಹೋಗುತ್ತಿದ್ದೆ. ಅವರ ಮನೆಯಲ್ಲೊಂದು
  ಕಪ್ಪುಬಣ್ಣದ ದೊಡ್ಡ ಕಟ್ಟಿಗೆ ಪೆಟ್ಟಿಗೆಯಿತ್ತು.ಅದರ ಮೇಲೆ
  ತಂಬಿಗೆ ಕೈಯಲ್ಲಿ ಹಿಡಿದುಕೊಂಡು ಕುಳಿತು ಕೊಳ್ಳುತ್ತಿದ್ದೆ .
  ಸಂಕೋಚದ ಸ್ವಭಾವದ ನಾನು ಅವರಾಗಿಯೇ ಗಮನಿಸಿ
  ಮಜ್ಜಿಗೆ ಕೊಡುವವರೆಗೂ ಒಂದು ಮಾತಾಡದೇ
  ಸುಮ್ಮನೆ ಕುಳಿತಿರುತ್ತಿದ್ದೆ.
  ನೆನಪುಗಳು ಹಸುವಿನ ಕೊರಳಗಂಟೆಯಂತೆ
  ( ಲೇಖಕರು: ಡಾ.ಲಕ್ಷ್ಮಿ ಶಂಕರ ಜೋಶಿ)
  ಲೇಖನ ಓದಿ ಇದೆಲ್ಲ ನೆನಪಾಯಿತು.
  ಹಳೆಯ ಮಧುರಕ್ಷಣಗಳನ್ನು ನೆನಪಿಸಿದ ಲೇಖಕಿಗೆ ಧನ್ಯವಾದಗಳು.
  ವಿಜಯೇಂದ್ರ ಕುಲಕರ್ಣಿ. ಕಲಬುರಗಿ.9741340525

Leave a Reply