ತಲೇಲಿ ಹೌಸ್ ಫುಲ್ ಬೋರ್ಡು..

ಅಹಲ್ಯಾ ಬಲ್ಲಾಳ

ಧಾವಂತ ಎನ್ನುವುದು ನಗರ ಮಹಾನಗರಗಳಿಗಷ್ಟೇ ಸೀಮಿತವಲ್ಲ ಈಗೀಗ. ಕಣ್ಣೆದುರಿಗೇ ಇರುವುದೂ ಎಷ್ಟೋ ಸಲ ಕಾಣಿಸುವುದೇ ಇಲ್ಲ. ಕಂಡರೂ ಅದು ಅರೆಕ್ಷಣ ರೆಜಿಸ್ಟರ್ ಆಗಿ, ಮುಂದೆ ಮಾಡಬೇಕಾದ ಕೆಲಸಗಳು, ಹೋಗಬೇಕಾದ  ಸ್ಥಳಗಳು, ಭೇಟಿಯಾಗಬೇಕಾದ ಜನರು ತುಂಬಿಕೊಂಡು ತಲೇಲಿ ಹೌಸ್ ಫುಲ್ ಬೋರ್ಡು.

ಅಚ್ಚರಿಯ wonder-ಗಣ್ಣು ಸವೆದು ಹೋಗಿರುವುದು ನಿಶ್ಚಿತ ಎಂದುಕೊಳ್ಳುತ್ತಿರುವಾಗಲೇ.. ಶೀಶೆಗಳು ಒಡೆದು ಒಳಗಿದ್ದ ಹಸಿರು ಹಳದಿ ಕಂದು ಬಣ್ಣ ಚೆಲ್ಲಿದಂತೆ ಹೀಗೊಂದು ಮರ ಪ್ರತ್ಯಕ್ಷವಾಗಬೇಕೇ, ಅದೂ ನಿತ್ಯ ಹಾದುಹೋಗುವ ರೇಲ್ವೇ ನಿಲ್ದಾಣದಲ್ಲಿ? ಅರೆ, ನಿನ್ನೆಯಲ್ಲ ಮೊನ್ನೆ ಎಲ್ಲಿತ್ತು ಈ ‘ಪೇಂಟಿಂಗಿನಂಥ’ ಮರ? ನನಗೇ ಕುರುಡೋ? ಅಥವಾ ರೂಪಾಂತರ ಸಾಧ್ಯ ಎಂದು ಎರಡು ದಿನಗಳಲ್ಲಿ ಸಾಬೀತುಪಡಿಸಲು ಮರವೇ ಪಣತೊಟ್ಟಿತೋ?

ಜೀವಯಾನ ಮಂಜುನಾಥರ ಸಾಲುಗಳು ನೆನಪಾದುವು…

ಕ್ಷಣದ ಎರಡು ಮುಖಗಳು

ನಮ್ಮ ತಂದೆಯರೆಲ್ಲ

ನಮ್ಮ ಮಕ್ಕಳೇ

ಮೊದಲೇ ಆಗಿ ಹೋದವರಷ್ಟೇ.

 

ಮುಂದಿನ ಚಿಗುರುಗಳು

ಇಂದಿನ ಹಣ್ಣೆಲೆಗಳು

ಮರಳಿ ಆಗುವುದಷ್ಟೇ.

 

ಉದುರುತ್ತಿರುವ ಪಕಳೆ

ಮೇಲೇರುತ್ತಿರುವ ಚಿಟ್ಟೆ

ಕ್ಷಣದ್ದೇ ಎರಡು ಮುಖಗಳು.

 

ಇದನ್ನು ಕಂಡವ ಬಿಕ್ಕು

ಅಂದರೆ ಸಂಸಾರಿಯೇ

ಬುದ್ಧ ನಮ್ಮ ಮುದ್ದು ಮುಕುಂದನೇ.

“ಸತ್ತು ಸಂಪಿಗೆ ಮರವಾದರು” ಎಂಬ ಪ್ರಯೋಗ ನನಗೆ ಮೊದಲು ಸಿಕ್ಕಿದ್ದು ಡಾ. ಮಣಿಮಾಲಿನಿ ವಿ.ಕೆ.ಯವರ ‘ಬಾಜಿರ ಕಂಬದ ಒಳಸುತ್ತು’ ಕಥಾಗುಚ್ಛದಲ್ಲಿ. ಜನಮಾನಸದಲ್ಲಿ, ಭಾಷೆಯಲ್ಲಿ ಸೇರಿಹೋಗಿರುವ ನಂಬಿಕೆಯೇ! ಆಹಾ..

ಹಾಗೇ ಮರಗಳ ಬಗ್ಗೆ ನನಗಿಷ್ಟವಾಗುವ ಒಂದೆರಡು ಲಹರಿಗಳು ನಿಮ್ಮ ಓದಿಗಾಗಿ:

*ಕವಿ-ಕಾದಂಬರಿಕಾರ  Czeslaw Milosz:

Not that I want to be a god or a hero. Just to change into a tree, grow for ages, not hurt anyone.

*ಜಯಂತ ಕಾಯ್ಕಿಣಿ:

ಅಘನಾಶಿನಿ ತಡಿಯಲ್ಲಿ ಸಂಪಿಗೆ ಮರ

ರಾಶಿ ಹೂವಿನ ಕಣ್ಣು ಮೈಯಿ ಪೂರ

ಹಿನ್ನೆಲೆಯ ನದಿ ನಿಂತುಬಿಟ್ಟಿದೆ ಒಮ್ಮೆ

ಮರಕೆ ಮರವೇ ಮುಂದೆ ಚಲಿಸಿದ ರಥ…

ಮತ್ತೇನಿಲ್ಲ. ಇದನ್ನೆಲ್ಲ ಹಂಚಿಕೊಳ್ಳಬೇಕೆನಿಸಿತು ಅಷ್ಟೇ. ನಿಮ್ಮನಿಮ್ಮ ದಿನಚರಿ ಕಾದಿದೆ. ಇಗೋ ನಾನೂ ಹೊರಟೆ ಅಡುಗೆಮನೆಗೆ…

9 comments

  1. ಅರೆ! ಇಂಥ “ಪೇಂಟಿಂಗ್ ನಂಥ” ಅದ್ಭುತ ಮರ ನಾಲ್ಕಾರು ದಿನಗಳ ಹಿಂದೆ ಅದೆಲ್ಲೋ ನನ್ನ ಕಣ್ಣಿಗೂ ಬಿದ್ದಿತ್ತಲ್ಲ…ನನ್ನ ತಲೆಯೇನೂ ಹೌಸ್ ಫುಲ್ ಆಗಿರಲಿಲ್ಲ… ಆದರೂ ಕಣ್ಣೆತ್ತಿ ಸಮ ನೋಡಲಿಲ್ಲವಲ್ಲ, ಛೇ! (ಬಹುಶ: ಏಕದಂ ಖಾಲಿಖಾಲಿಯಾಗಿರುವ ತಲೆಯೊಳಗೂ ಇಂಥವು ರೆಜಿಸ್ಟರ್ ಆಗುವುದಿಲ್ಲವೇನೋ :))

  2. ಹೌಸ್ ಫುಲ್ ಎಂಬೋ ಖಾಲಿತನ…. ಲಹರಿ ಚನ್ನಾಗಿದೆ

    ನೂತನ ದೋಶೆಟ್ಟಿ

  3. ಹೌಸ್ ಫುಲ್ ಆಗಿ ಕೆನೆಕಟ್ಟಿ ಉಕ್ಕಿದ್ರೆ ಹೀಗೇ… ಅಹಲ್ಯ ಮತ್ತು ಅವಧಿಯಲ್ಲಿ ಪಾಲು ಪಾಯಸ

Leave a Reply