ನಾನು ರಣಬಿಸಿಲಿನಲ್ಲಿದ್ದಾಗಲೆಲ್ಲಾ ನನಗೆ ನೆರಳಾಗಿದ್ದು ನಿನ್ನ ಈ ಕೇಶರಾಶಿಯೇ…

”ಮೈ ಜಬ್ ಭೀ ಜಹಾಂ ಭೀ

ಕಡೀ ಧೂಪ್ ಮೇ ಥಾ,

ತೆರೇ ಝುಲ್ಫ್ ನೇ

ಮುಝ್ ಕೋ ಸಾಯಾ ದಿಯಾ…”

”ನಾನು ರಣಬಿಸಿಲಿನಲ್ಲಿದ್ದಾಗಲೆಲ್ಲಾ ನನಗೆ ನೆರಳಾಗಿದ್ದು ನಿನ್ನ ಈ ಕೇಶರಾಶಿಯೇ…”, ಎಂದು ಅದೆಷ್ಟು ಚಂದದ ಸಾಲನ್ನು ಬರೆದಿದ್ದರು ಗೀತರಚನೆಕಾರ ಸಯ್ಯದ್ ಕಾದ್ರಿ.

ಕೇಶರಾಶಿಯ ಸೌಂದರ್ಯವನ್ನು ಇದಕ್ಕಿಂತ ಸರಳವಾಗಿ ಸುಂದರವಾಗಿ ಕಟ್ಟಿಕೊಡುವುದು ಕಷ್ಟವೇನೋ. ಫ್ಯಾಷನ್ ವ್ಯಾಖ್ಯಾನಗಳು ಅದೆಷ್ಟೇ ಬದಲಾದರೂ ಹೆಣ್ಣುಮಕ್ಕಳ ಕೂದಲಿನ ಮೋಹ ಮಾತ್ರ ಕೊಂಚವೂ ಕಮ್ಮಿಯಾಗಿಲ್ಲ. ಅಷ್ಟಕ್ಕೂ ಇದು ಹೆಣ್ಣುಮಕ್ಕಳಿಗೆ ಮಾತ್ರ ಎಂದು ಹಣೆಪಟ್ಟಿ ಹಚ್ಚುವ ಅಗತ್ಯವೇನೂ ಇಲ್ಲ.

ಕಣ್ಮನ ಸೆಳೆಯುವ ಹೆಣ್ಣಿನ ಸುಂದರವಾದ ನೀಳ ಕೇಶರಾಶಿಯ ಬಗ್ಗೆ ಪುರುಷ ರಸಿಕ ಕವಿಗಳು ಬರೆದಿಟ್ಟಿರುವುದು ಕಮ್ಮಿಯೇನಿಲ್ಲ. ಒಟ್ಟಿನಲ್ಲಿ ಹೆಣ್ಣಿನ ಸುಂದರವಾದ ಕೇಶರಾಶಿಯು ಎಲ್ಲರನ್ನೂ ಥಟ್ಟನೆ ಆಕರ್ಷಿಸುವಂಥದ್ದು, ತನ್ನ ಸೌಂದರ್ಯದಿಂದ ಕ್ಷಣಮಾತ್ರದಲ್ಲಿ ಎಲ್ಲರ ಗಮನವನ್ನೂ ತನ್ನತ್ತ ಸೆಳೆಯಬಲ್ಲಂಥದ್ದು.

ಕೇಶರಾಶಿಯ ವಿಚಾರಕ್ಕೆ ಬಂದರೆ ನನ್ನದೇ ಬಾಲ್ಯದ ಕೆಲ ತಮಾಷೆಯ ಘಟನೆಗಳು ನನಗೆ ನೆನಪಾಗುವುದುಂಟು. ನನ್ನ ಗೆಳೆಯರಲ್ಲೊಬ್ಬನ ಬಳಿ ಪಾಶ್ಚಾತ್ಯರ ಚಿನ್ನದ ಬಣ್ಣದ ಕೂದಲಿನ ಬಗ್ಗೆ ಅವನದ್ದೇ ಆದ ಕೆಲ ಸ್ವಾರಸ್ಯಕರ ಥಿಯರಿಗಳಿದ್ದವು. ಹಾಗೆಯೇ ಅವರ ಬಿಳಿ ತೊಗಲಿನ ಬಗ್ಗೆಯೂ. ವಾರಿಸ್ ಡಿರೀ ತನ್ನ ಎಳೆಯ ವಯಸ್ಸಿನಲ್ಲಿ ಮೊಟ್ಟ ಮೊದಲಬಾರಿಗೆ ಏಕಾಂಗಿಯಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಬಿಳಿಯರನ್ನು ಕಂಡಾಗ ಅಚ್ಚರಿಗೊಂಡಿದ್ದರಂತೆ.

ಆಫ್ರಿಕನ್ನರನ್ನು ಹೊರತುಪಡಿಸಿ ನೋಡಲು ತನ್ನಂತಿರದೆ ವಿಭಿನ್ನರಾಗಿದ್ದ ಜನರನ್ನು ಅವರು ನೋಡಿದ್ದು ಆ ದಿನವೇ. ಇದೇನು ತೊಗಲೋ ಅಥವಾ ಬಿಗಿಯಾಗಿ ಚರ್ಮಕ್ಕಂಟಿಕೊಂಡಿದ್ದ ಹೊಳಪಿನ ಬಟ್ಟೆಯೋ ಎಂದು ವಾರಿಸ್ ಅಂದು ತಳಮಳಗೊಂಡಿದ್ದರಂತೆ. ಹೀಗೆ ನನ್ನ ಗೆಳೆಯನೂ ಕೂಡ ಪಾಶ್ಚಾತ್ಯರ ಚಿನ್ನದ ಬಣ್ಣದ ಕೂದಲನ್ನು ಯಾವುದೋ ಒಂದು ಅದೃಶ್ಯ ಪ್ರಭಾವಳಿಯೊಂದಕ್ಕೆ ತಳುಕು ಹಾಕಿಕೊಂಡಿದ್ದ. ಅವನೊಂದಿಗಿದ್ದ ನಾವೂ ಇರಬಹುದೇನೋ ಎಂದು ತಲೆಯಾಡಿಸಿದ್ದೆವು. ನಮ್ಮೂರಿನಲ್ಲಿ ಮೊದಲ ಬಾರಿಗೆ ಬಿಳಿಯನೊಬ್ಬನನ್ನು ನೋಡಿದಾಗ ನಾನು ಗಾಬರಿಯಾಗಿದ್ದೂ ಇದೆ.

ಈ ವೈವಿಧ್ಯಗಳು ನಮಗೆ ಬಾಲ್ಯಸಹಜ ಅಚ್ಚರಿಯಷ್ಟೇ ಆಗಿದ್ದವೇ ಹೊರತು ಅದರಲ್ಲಿ ಜನಾಂಗೀಯ ದ್ವೇಷವೋ ಇನ್ನೇನೋ ಇರಲಿಲ್ಲ. ಇಷ್ಟು ದಿನ ಅಂಬೆಗಾಲಿಡುತ್ತಿದ್ದ ಮಗುವೊಂದು ಹೊಸದಾಗಿ ನಡೆಯಲು ಆರಂಭಿಸಿದಾಗ ಜಗತ್ತು ಕೊಂಚ ಬದಲಾಗಿ ಕಾಣುವಂತೆ ಇದೂ ಕೂಡ ಹೊಸದನ್ನು ಕಾಣುವಾಗ ಕಾಡುವ ಅಚ್ಚರಿಯಷ್ಟೇ ಆಗಿತ್ತು. ಇಂಥಾ ವೈವಿಧ್ಯತೆಗಳಿರದಿದ್ದರೆ ಜಗತ್ತು ಅದೆಷ್ಟು ನೀರಸವಾಗುತ್ತಿತ್ತು ಎಂದು ಕೆಲವೊಮ್ಮೆ ನನಗನ್ನಿಸುವುದುಂಟು.

ಅಂಗೋಲನ್ನರ ಅಥವಾ ಒಟ್ಟಾರೆಯಾಗಿ ಆಫ್ರಿಕನ್ನರ ಕೂದಲನ್ನು ಹತ್ತಿರದಿಂದ ನೋಡುವವರೆಗೂ ಇಂಥದ್ದೊಂದು ಕೌತುಕ ನನ್ನಲ್ಲೂ ಇತ್ತು. ಮೇಲಾಗಿ ವಿದೇಶ ಪ್ರಯಾಣದ ಮೊದಲ ಅನುಭವ ಬೇರೆ. ನಮ್ಮಂತೆ ಒಂದೆರಡು ಜಡೆಗಳ ಬದಲಿಗೆ ಕೂದಲುಗಳನ್ನು ಇಷ್ಟಿಷ್ಟೇ ಆರಿಸಿಕೊಂಡು ಸಾವಿರಾರು ಪುಟ್ಟ ಜಡೆಗಳಾಗುವಂತೆ ಹೆಣೆದು ಕೇಶಶೈಲಿಯನ್ನು ಸಿದ್ಧಪಡಿಸುವಲ್ಲಿ ಆಫ್ರಿಕನ್ನರು ನಿಸ್ಸೀಮರು. ಬಹುತೇಕ ಎಲ್ಲಾ ತಾಯಂದಿರೂ ತಮ್ಮ ಪುಟ್ಟ ಮಕ್ಕಳ ಕೂದಲುಗಳೊಂದಿಗೆ ಇಂಥಾ ಪ್ರಯೋಗಗಳನ್ನು ಮಾಡುವುದು ಸಾಮಾನ್ಯ.

ಸ್ವಲ್ಪ ಎತ್ತರಕ್ಕಿರುವ ಮರದ ಕೊರಡಿನ ಮೇಲೋ, ದಂಡೆಯ ಮೇಲೋ ಕುಳಿತು ಮಗುವನ್ನು ತನ್ನೆರಡು ಕಾಲುಗಳ ಕೆಳಗೆ ಕುಳ್ಳಿರಿಸಿ ಹೇನು ತೆಗೆಯುವಂತೆ, ಇವರು ಆಫ್ರಿಕನ್ ಗುಂಗುರು ಕೂದಲುಗಳೊಂದಿಗೆ ಏನೇನೋ ಕೈಚಳಕಗಳನ್ನು ಮಾಡುತ್ತಾರೆ. ಇದು ಸಾಲದ್ದೆಂಬಂತೆ ಅಷ್ಟೂ ‘ಮೈಕ್ರೋಜಡೆ’ಗಳಿಗೆ ಪುಟಾಣಿ ಹೇರ್ ಬ್ಯಾಂಡ್ ಗಳನ್ನು ಕಟ್ಟಿ ಮಗುವಿನ ತಲೆಯ ಮೇಲೆ ಬಣ್ಣದ ಜಾತ್ರೆಯಾಗುವಂತೆ ಮಾಡುತ್ತಾರೆ. ಕಾರ್ನಿವಲ್ ಗಳಂತಹ ಹಬ್ಬದ ದಿನಗಳಲ್ಲಿ ಈ ಹೇರ್ ಬ್ಯಾಂಡ್ ಗಳೊಂದಿಗೆ ಚಾಕ್ಲೇಟುಗಳನ್ನೂ ಕಟ್ಟಿ ಹೊಳಪಿನ ಬೇಗಡೆಗಳಿಂದ ಮಕ್ಕಳನ್ನು ಮತ್ತಷ್ಟು ಮುದ್ದಾಗಿ ಕಾಣುವಂತೆಯೂ ಮಾಡುವಷ್ಟು ಪರಿಣತರು ಇವರು.

ಕೆಲವೊಮ್ಮೆ ಇವರ ಕೂದಲುಗಳು ನಮ್ಮ ಕಾಮಿಡಿ ಚಿತ್ರಗಳಲ್ಲಿ ತೋರಿಸಿದಂತೆ ಆಕಾಶಕ್ಕೆ ಮುಖಮಾಡಿ ಇನ್ನೇನು ತಲೆಯಿಂದ ಉಡಾವಣೆಯಾಗಲಿರುವ ಕ್ಷಿಪಣಿಗಳಂತೆ ನೆಟ್ಟಗೆ ನಿಂತಿರುವುದೂ ಇದೆ. ”ನಿಮ್ಮ ಕೂದಲಿಗೆ ಗುರುತ್ವಾಕರ್ಷಣಾ ಶಕ್ತಿಯು ಅನ್ವಯವಾಗುವುದಿಲ್ಲ ಅಲ್ಲವೇ?”, ಎಂದು ನಾನು ಈ ಬಗ್ಗೆ ಆಗಾಗ ಸ್ಥಳೀಯರ ಕಾಲೆಳೆಯುತ್ತಿದ್ದೆ. ನಮಗಾಗಿ ನಿತ್ಯವೂ ಅಡುಗೆ ಮಾಡಲು ನೇಮಕವಾಗಿದ್ದ ಫೆರ್ನಾಂದಾ ಎಂಬಾಕೆ ವಾರಕ್ಕೆ ಮೂರು ಬಾರಿ ತನ್ನ ಕೇಶಶೈಲಿಯನ್ನು ಬದಲಿಸುತ್ತಿದ್ದಳು.

ಆಕೆಗೆ ಅದುವೇ ಒಂದು ಖಯಾಲಿಯಾಗಿತ್ತು. ನನ್ನ ಸಹೋದ್ಯೋಗಿಯಿಂದ ಭಾರತೀಯ ಖಾದ್ಯಗಳನ್ನು ಮಾಡಲು ಕಲಿತ ಆಕೆ ಕ್ರಮೇಣ ಭಾರತೀಯರು ಸ್ವತಃ ಮೂಗಿಗೆ ಬೆರಳಿಟ್ಟುಕೊಳ್ಳುವಷ್ಟು ಅದ್ಭುತವಾಗಿ ಭಾರತೀಯ ಖಾದ್ಯಗಳನ್ನು ಸಿದ್ಧಪಡಿಸಬಲ್ಲವಳಾಗಿದ್ದಳು. ಇಷ್ಟಾದರೂ ಒಂದೇ ಒಂದು ಬಾರಿಯೂ ಆಕೆ ಭಾರತೀಯ ಖಾದ್ಯಗಳನ್ನು ಕುತೂಹಲಕ್ಕಾದರೂ ಸವಿದವಳಲ್ಲ. ಮಾಂಸಾಹಾರವು ಕಡ್ಡಾಯ ಎಂಬಂತಿರುವ ಅಂಗೋಲನ್ ಆಹಾರವಿಧಾನಕ್ಕೆ ಹೋಲಿಸಿದರೆ ನಮ್ಮ ಶುದ್ಧ ಶಾಖಾಹಾರಿ ಆಹಾರವು ಆಕೆಗೆ ಸಪ್ಪೆಯಾಗಿ ಕಂಡಿರಲೂಬಹುದು.

ಈ ಬಾರಿಯೂ ನಾನು ಭಾರತಕ್ಕೆ ಬಂದಾಗ ಕನಿಷ್ಠ ನಾಲ್ಕೈದು ಸ್ಥಳೀಯ ಮಹಿಳಾ ಸಹೋದ್ಯೋಗಿಗಳು ತಮಗಾಗಿ ಕೂದಲನ್ನು ತರಬೇಕೆಂದು ನನ್ನಲ್ಲಿ ವಿನಂತಿಸಿಕೊಂಡಿದ್ದರು. ಇಂಥದ್ದೊಂದು ಬೇಡಿಕೆಯನ್ನು ಇದೇ ಮೊದಲಬಾರಿಗೆ ಕೇಳಿದ್ದ ನಾನು ಬೆಪ್ಪಾಗಿ ಕಣ್ಣರಳಿಸಿದ್ದೆ. ಹಲವು ವರ್ಷಗಳ ಹಿಂದಿನ ಮಾತು. ನನ್ನ ದೂರದ ಸಂಬಂಧಿಯಾಗಿದ್ದ ಹಿರಿಯ ಮಹಿಳೆಯೊಬ್ಬರು ಇಂಥಾ ಕೃತಕ ಕೂದಲೊಂದನ್ನು ತನ್ನೊಂದಿಗೆ ಇಟ್ಟುಕೊಂಡಿದನ್ನು ನಾನು ನೋಡಿದ್ದೆ.

ಸುಮಾರು ಒಂದಡಿಯಷ್ಟೇ ಉದ್ದವಿದ್ದು ಅದರಲ್ಲಿ ಅದೆಷ್ಟು ಕಮ್ಮಿ ಕೂದಲುಗಳಿದ್ದವೆಂದರೆ ಅದನ್ನು ಬೋಳುತಲೆಯವರು ಧರಿಸುವ ವಿಗ್ ಎಂದು ಕರೆಯುವಂತಲೂ ಇರಲಿಲ್ಲ. ಅದನ್ನು ‘ಉದ್ರಿ’ ಎಂದು ಕರೆಯುತ್ತಿದ್ದರು ಎಂಬುದನ್ನು ಹೊರತಾಗಿ ಇದರ ಬಗ್ಗೆ ಬೇರೇನೂ ನನಗೆ ನೆನಪಿಲ್ಲ. ಆಕೆ ಸ್ನಾನಕ್ಕೆ ಹೋಗುತ್ತಿದ್ದಾಗ ಅದನ್ನು ತೆಗೆದು ಒಂದು ಕಡೆ ಸುರಕ್ಷಿತವಾಗಿಟ್ಟು ಹೋಗುತ್ತಿದ್ದರು. ನಂತರ ಬಂದು ಅದನ್ನು ನಿಮಿಷ ಮಾತ್ರದಲ್ಲಿ ತನ್ನ ಕೂದಲೊಳಗೆ ಅದ್ಹೇಗೋ ತೂರಿಸುತ್ತಿದ್ದರು. ಕೆಟ್ಟ ಕುತೂಹಲಕ್ಕೊಳಗಾಗಿ ಅದರೊಂದಿಗೆ ನಾವು ಮಕ್ಕಳೆಲ್ಲಾ ಸೇರಿ ಯಾವ ಪ್ರಯೋಗವನ್ನೂ ಮಾಡಲಿಲ್ಲ ಎಂಬುದೇ ಅವರ ಅದೃಷ್ಟ. ಹೀಗೆ ವಿಗ್ ಗಳ ಬಗ್ಗೆ ಕೇಳಿದ್ದರ ಹೊರತಾಗಿ ಕೃತಕ ಕೂದಲನ್ನು ಬಳಸುತ್ತಿದ್ದ ದೃಶ್ಯವನ್ನು ನಾನು ಸ್ವತಃ ನೋಡಿದ್ದು ಅದೇ ಮೊದಲು ಮತ್ತು ಅದೇ ಕೊನೆ.

ಹೀಗೆ ಅಂಗೋಲನ್ ಮಹಿಳೆಯರ ಈ ವಿಶಿಷ್ಟ ಬೇಡಿಕೆಯಿಂದಾಗಿ ನನ್ನ ಪೆದ್ದುತನದ ಬಗ್ಗೆ ನನಗೇ ಪೇಚಿಗಿಟ್ಟುಕೊಂಡಿದ್ದಂತೂ ಸತ್ಯ. ತರುವಾಯ ಕೇಶರಾಶಿಯ ತಲಾಶೆಗೆಂದು ಅಲ್ಲಲ್ಲಿ ವಿಚಾರಿಸುತ್ತಿದ್ದರೆ ಲೇಡೀಸ್ ಪಾರ್ಲರುಗಳಲ್ಲಿ ಇವುಗಳು ಸಿಗುತ್ತವೆ ಎಂಬ ಸುಳಿವೊಂದು ದೊರಕಿತು. ಕೃತಕ ಕೂದಲ ಬಗ್ಗೆ ಹಿಂದುಮುಂದೇನೂ ತಿಳಿದಿಲ್ಲದ ನಾನು ಲೇಡೀಸ್ ಪಾರ್ಲರಿಗೆ ಹೋಗಿ ಹಾಸ್ಯದ ವಸ್ತುವಾಗುವುದು ಬೇಡವೆಂದು ಆಗಲೇ ಒಂದು ಮಟ್ಟಿಗೆ ನಿರ್ಧರಿಸಿಯಾಗಿತ್ತು.

”ನನಗೂ ಈ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ನಾನು ನನ್ನ ಮಗಳೊಂದಿಗೆ ಯಾವುದಾದರೂ ಲೇಡೀಸ್ ಪಾರ್ಲರಿಗೆ ಹೋಗಿ ಪರಿಶೀಲಿಸುತ್ತೇನೆ. ನೀವು ತಲೆಕೆಡಿಸಿಕೊಳ್ಳಬೇಡಿ”, ಎಂದು ಹಿರಿಯ ಸಹೋದ್ಯೋಗಿಯೊಬ್ಬರು ನನಗೆ ಪರಿಹಾರವನ್ನು ನೀಡಿದ್ದರಿಂದಾಗಿ ನಾನು ಕೊಂಚ ನಿರಾಳನಾದೆ. ಹೀಗೆ ಕೂದಲಿನ ಬೇಡಿಕೆಯಿಟ್ಟವರಲ್ಲಿ ಅಂಗೋಲನ್ ಸರಕಾರಿ ಇಲಾಖೆಯ ಮುಖ್ಯಸ್ಥರೂ ಒಬ್ಬರಿದ್ದ ಪರಿಣಾಮವಾಗಿ ತರದೇ ಇರುವಂತೆಯೂ ಇರಲಿಲ್ಲ. ಅಂತೂ ಅವರ ಅಭಯದಿಂದಾಗಿ ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟೆ. ಭಾರತದಲ್ಲಿ ರಜಾದಿನಗಳು ನಿಮಿಷಗಳು ಉರುಳಿದಂತೆ ಸರಾಗವಾಗಿ ಮುಗಿದುಹೋದವು.

ಇನ್ನು ಇದರಿಂದಾಗಿ ಹೆಚ್ಚಿನ ಅಂಗೋಲನ್ ಮಹಿಳೆಯರ ಕೂದಲು ನಕಲಿ ಎಂಬ ಅಂಶವೂ ನಮಗೆ ಬೆಳಕಿಗೆ ಬಂದಿತ್ತು. ನಮಗದು ನಿಜಕ್ಕೂ ಹೊಸ ಜ್ಞಾನೋದಯ. ಪಾರ್ಲರುಗಳು ಸಾಮಾನ್ಯವಾಗಿ ಇಲ್ಲಿದ್ದರೂ ಹೆಚ್ಚಿನವರು ಕೇಶಶೈಲಿಗಳನ್ನು ತಮ್ಮಿಷ್ಟಕ್ಕೆ ತಕ್ಕಂತೆ ತಾವೇ ತಯಾರಾಗಿಸುತ್ತಿದ್ದರು. ಮನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣುಮಕ್ಕಳಿದ್ದಾಗ ಇವೆಲ್ಲಾ ದೊಡ್ಡ ಸವಾಲುಗಳೇನೂ ಅಲ್ಲ. ಇನ್ನು ವಠಾರದಲ್ಲಿ ಒಬ್ಬಳು ‘ಹೇರ್ ಎಕ್ಸ್ಪರ್ಟ್’ ಇದ್ದರಂತೂ ಮುಗಿದೇಹೋಯಿತು. ಆಕೆಗೆ ಡಿಮಾಂಡಪ್ಪೋ ಡಿಮಾಂಡು. ಹೀಗೆ ಅಂಗೋಲನ್ ಬೀದಿಗಳಲ್ಲಿ ಮಹಿಳೆಯರು ತಮ್ಮ ಮತ್ತು ಇತರರ ಕೇಶಶೈಲಿಗಳೊಂದಿಗೆ ಧ್ಯಾನಸ್ಥರಾಗಿ ಕೈಯಾಡಿಸುವುದು ಬಲು ಸಾಮಾನ್ಯವಾದ ದೃಶ್ಯ.

‘ಕೂದಲು ಇದ್ದರೆ ನಿಮ್ಮಂತಿರಬೇಕು’ ಎಂಬುದು ಇಲ್ಲಿಯ ಎಲ್ಲರ ಅಭಿಲಾಷೆಯೂ ಹೌದು. ಹಲವರು ಉದ್ದೇಶಪೂರ್ವಕವಾಗಿ ನನ್ನ ತಲೆಯ ಮೇಲೆ ಕೈಯಾಡಿಸುತ್ತಿದ್ದ ದಿನಗಳಲ್ಲಿ ತೀವ್ರ ಇರಿಸುಮುರುಸಾದ ಸಂದರ್ಭಗಳೂ ಸಾಕಷ್ಟಿವೆ. ಕೇವಲ ಕ್ಷೌರಕ್ಕಾಗಿ ವೀಜ್ ನಿಂದ ಲುವಾಂಡಾಕ್ಕೆ ಮುನ್ನೂರು ಚಿಲ್ಲರೆ ಕಿಲೋಮೀಟರುಗಳಷ್ಟು ಪ್ರಯಾಣಿಸುತ್ತಿದ್ದ ಬಗ್ಗೆ ಈ ಹಿಂದೆ ಬರೆದಿದ್ದೇನೆ. ಆದರೆ ಒಮ್ಮೆ ಕಾರಣಾಂತರಗಳಿಂದ ಯಾವುದೋ ಅವಸರಕ್ಕೆ ಬಿದ್ದು ಆದದ್ದಾಗಲಿ ಎಂದು ವೀಜ್ ನ ಕ್ಷೌರಿಕನೊಬ್ಬನಿಗೇ ನನ್ನ ತಲೆಯನ್ನೊಪ್ಪಿಸಿದ್ದೆ.

ಆತ ಬಹಳ ಹೊತ್ತು ನನ್ನ ತಲೆಗೂದಲನ್ನೇ ನೋಡಿ ”ಹೇಗೆ? ಬೋಳಿಸಿಬಿಡಲೇ? ಏನಂತೀರಿ?”, ಎಂದು ಕೇಳಿದ್ದ. ಅಂಗೋಲಾದಲ್ಲಿ ಕೂದಲಿಗೆ ಕತ್ತರಿಯನ್ನು ಹಾಕುವ ಅಭ್ಯಾಸವು ಇರದಿದ್ದರಿಂದ ಆತ ಗೊಂದಲಕ್ಕೊಳಗಾಗಿದ್ದು ಸಹಜವೇ ಆಗಿತ್ತು. ”ಏನಾದರೂ ಮಾಡಪ್ಪಾ… ಆದರೆ ಬಾಚಲು ಒಂದಿಷ್ಟಾದರೂ ಕೂದಲಿರಬೇಕು”, ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ನಾನು ಉತ್ತರಿಸಿದ್ದೆ.

ಅವನೋ ಅಮಾಯಕ, ಗೊತ್ತಿದ್ದಷ್ಟು ಮಾಡಿ ಮುಗಿಸಿದ. ಆ ದಿನ ಮನೆಗೆ ಮರಳಿದ ನಂತರ ನನ್ನ ಮುಖಾರವಿಂದವನ್ನು ನೋಡಿದ ನಮ್ಮ ಮಹಿಳಾ ಸಹೋದ್ಯೋಗಿಗಳಂತೂ ನಿರಾಶರಾದರು. ಇಷ್ಟೊಳ್ಳೆ ಕೂದಲನ್ನು ಬಲಿಕೊಟ್ಟುಬಿಟ್ಟರಲ್ಲಾ ಎಂದು ಹಲುಬಿದರು. ”ಕೂದಲು ತಾನೇ, ಇನ್ನೊಂದು ತಿಂಗಳಲ್ಲಿ ಬೆಳೆಯುತ್ತದೆ ಬಿಡಿ”, ಎಂದು ನಾನು ಅಳುಕಿನಿಂದಲೇ ಸಮರ್ಥಿಸಿಕೊಂಡಿದ್ದೆ. ಹಿಡಿದು ಜಗ್ಗಲು, ಮುದ್ದಾಗಿ ನೇವರಿಸಲು ಸಿಗುವ ಭಾರತೀಯ ಕೂದಲೆಂದರೆ ಅಂಗೋಲನ್ನರಿಗೆ ಅಷ್ಟು ಪ್ರೀತಿ.

ಹಾಗೆಂದು ಅಂಗೋಲಾದಲ್ಲಿ ಮಹಿಳೆಯರಿಗಾಗಿ ಕೃತಕ ಕೂದಲುಗಳು ಸಿಗುವುದಿಲ್ಲವೆಂದೇನೂ ಇಲ್ಲ. ಹಳ್ಳಿಗಳಲ್ಲೂ ಕೂಡ ಇವುಗಳು ವಿವಿಧ ಬಣ್ಣ, ಗಾತ್ರ ಮತ್ತು ಶೈಲಿಗಳಲ್ಲಿ ಲಭ್ಯವಿದೆ. ಎಲ್ಲವೂ ‘ಮೇಡ್ ಇನ್ ಚೈನಾ’ ಉತ್ಪನ್ನಗಳು. ಎಷ್ಟು ಕಾಸು ಕೊಟ್ಟರೂ ಈ ಚೈನಾ ಉತ್ಪನ್ನಗಳು ಗುಣಮಟ್ಟದ ವಿಚಾರದಲ್ಲಿ ಯಾವುದಕ್ಕೂ ಲಾಯಕ್ಕಲ್ಲವಂತೆ. ಸಾಲದ್ದಕ್ಕೆ ದುಬಾರಿ ಬೇರೆ. ಭಾರತದ ಕೂದಲುಗಳು ರಾಸಾಯನಿಕಗಳಿಂದ ಹೊರತಾಗಿರುತ್ತವೆ, ನೋಡಲು ಬಹಳ ಸಹಜವಾಗಿರುತ್ತವೆ, ಹೀಗಾಗಿ ಭಾರತದಿಂದಲೇ ನೀವು ನಮಗಾಗಿ ತರಿಸಿಕೊಡಬೇಕು ಎಂಬ ಅಂಬೋಣ ಇವರೆಲ್ಲರದ್ದು.

ಇನ್ನು ಭಾರತಕ್ಕೆ ಬಂದಿಳಿದ ನಂತರ ಒಬ್ಬಿಬ್ಬರು ಕರೆ ಮಾಡಿ ನೆನಪಿಸಿದ ನಂತರವಂತೂ ಈ ಕೂದಲ ವಿಷಯವು ಅಂಗೋಲನ್ ಮಹಿಳೆಯರಿಗೆ ಅದೆಷ್ಟು ಮುಖ್ಯವಾದದ್ದು ಎಂಬ ಅರಿವು ನಮಗಾಗಿತ್ತು. ನಾನು ನಮ್ಮ ಹಿರಿಯ ಸಹೋದ್ಯೋಗಿಗೆ ಮತ್ತೊಮ್ಮೆ ಕರೆ ಮಾಡಿ ”ಈ ಬಾರಿ ಅಂಗೋಲಾದಲ್ಲಿ ಕಾಲಿಡುವುದು ಕೂದಲಿದ್ದರೆ ಮಾತ್ರ. ಮರೆಯದೆ ನೋಡಿಕೊಳ್ಳಿ” ಎಂದು ನನ್ನ ಒತ್ತಡವನ್ನು ಅವರಿಗೂ ಕೊಂಚ ವರ್ಗಾಯಿಸಿದೆ. ಹೀಗೆ ಈ ಕೂದಲ ಗಡಿಬಿಡಿಯಲ್ಲೇ ಅವರ ಹಲವು ರಜಾದಿನಗಳಿಗೆ ಕಲ್ಲುಬಿತ್ತೆಂದು ನಂತರ ನನಗೆ ತಿಳಿದುಬಂತು.

ಅಂತೂ ಕೆಲ ದಿನಗಳನ್ನು ಭಾರತದಲ್ಲಿ ಕಳೆದು ನಾವು ಅಂಗೋಲಾಕ್ಕೆ ಮರಳಿದೆವು. ”ತಂದ್ರಾ ಇಲ್ವಾ ನೀವು…”, ಎಂದು ವಿಮಾನನಿಲ್ದಾಣದಲ್ಲೇ ನಾನು ಅವರ ಕಾಲೆಳೆದೆ. ”ಹೂಂ… ತಂದಿದ್ದೇನೆ… ಅದೇನು ದುಬಾರಿ ಮಾರಾಯ!”, ಎಂದು ಅವರು ಗೊಣಗಿದರು. ನಿರೀಕ್ಷೆಯಂತೆಯೇ ಅಂಗೋಲಾ ತಲುಪಿದ ಕೂಡಲೇ ಈ ಬಗ್ಗೆ ವಿಚಾರಿಸಿ ಕೆಲ ಕರೆಗಳೂ ಬಂದವು. ”ಇಷ್ಟು ದಿನ ಕಾದಿರಲ್ಲಾ… ಇನ್ನೊಂದೆರಡು ದಿನ ಕಾಯಿರಿ ಪ್ಲೀಸ್”, ಎಂದು ನಾವು ಆಶ್ವಾಸನೆಯನ್ನೂ ಕೊಟ್ಟೆವು. ಬಹುಷಃ ಅವರೆಲ್ಲರಿಗೂ ನಾವು ಕ್ರಿಸ್ಮಸ್ ಉಡುಗೊರೆಯನ್ನು ತರುತ್ತಿದ್ದ ಸಾಂತಾಕ್ಲಾಸ್ ನಂತೆ ಕಾಣುತ್ತಿದ್ದೆವು. ಇನ್ನೇನು ಭಾರತೀಯ ಕೂದಲುಗಳನ್ನು ಮುಡಿಗೇರಿಸುವುದಷ್ಟೇ ಬಾಕಿಯೆಂಬ ಉತ್ಸಾಹ ಅವರದ್ದು.

ಅಂಗೋಲಾ ತಲುಪಿದ ಮುಂದಿನ ವಾರದಲ್ಲೇ ಆ ಹಿರಿಯ ಮಹಿಳಾ ಅಧಿಕಾರಿಯನ್ನು ಭೇಟಿ ಮಾಡಿ ಭಾರತದಿಂದ ತಂದ ಕೇಶರಾಶಿಯನ್ನು ಅವರಿಗೆ ನೀಡಲಾಯಿತು. ಅವರಿಗದು ಸಂಪೂರ್ಣವಾಗಿ ಇಷ್ಟವಾಗದಿದ್ದರೂ, ”ಆಗಲಿ… ನನ್ನ ಮಾತಿಗೆ ಬೆಲೆಕೊಟ್ಟು ಅಷ್ಟು ದೂರದಿಂದ ತಂದಿರಲ್ಲಾ” ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಇನ್ನು ಒಂದು ಸಣ್ಣ ಎಡವಟ್ಟು ಕೂಡ ನಮ್ಮ ಕಡೆಯಿಂದ ಆಗಿತ್ತು. ಕೂದಲಿನ ತಲಾಶೆಯಲ್ಲಿ ಹೊರಟಿದ್ದ ನನ್ನ ಹಿರಿಯ ಸಹೋದ್ಯೋಗಿಗೆ ಭಾರತದಲ್ಲೂ ಕೂಡ ಒಬ್ಬರು ‘ಮೇಡ್ ಇನ್ ಚೈನಾ’ ಕೂದಲನ್ನೇ ಕೊಟ್ಟಿದ್ದರು. ಅವರಿಗೂ ಇದು ಮೊದಲ ಅನುಭವವಾಗಿದ್ದರಿಂದ ಈ ಅಂಶವು ಅವರ ಗಮನಕ್ಕೆ ಬಂದಿರಲಿಲ್ಲ. ”ಅಂಗೋಲಾದಿಂದ ಭಾರತದವರೆಗೂ ಹೋಗಿ ಮತ್ತೆ ಚೈನಾದ ಕೂದಲನ್ನೇ ಎತ್ತಿ ತಂದಿರಲ್ಲಾ”, ಎಂದು ಆಕೆ ಕೇಳಿದರೆ ಎಲ್ಲೆಲ್ಲೂ ನಗೆಯೇ ನಗೆ.

ಅಂತೂ ಭಾರತದಿಂದ ತಂದಿದ್ದ ಕೂದಲನ್ನು ಕೊಡಬೇಕಾದವರಿಗೆಲ್ಲಾ ಕೊಟ್ಟಿದ್ದಾಯಿತು. ನನ್ನ ಸಹೋದ್ಯೋಗಿ ನಿಜಕ್ಕೂ ದೊಡ್ಡ ಮೊತ್ತವನ್ನೇ ಇವುಗಳಿಗಾಗಿ ವ್ಯಯಿಸಿದ್ದರು. ಇನ್ನು ಈ ವಿಚಾರವು ಒಬ್ಬರಿಂದೊಬ್ಬರ ಕಿವಿಗಳಿಗೆ ಮಿಂಚಿನಂತೆ ಸಾಗಿ ”ನಮಗ್ಯಾವಾಗ ತಂದು ಕೊಡುತ್ತೀರಿ?” ಎಂಬ ಪ್ರಶ್ನೆಗಳನ್ನೆದುರಿಸಿದ್ದಾಯಿತು.

”ಛೇ… ಈ ಬಗ್ಗೆ ಮೊದಲೇ ತಿಳಿದಿದ್ದರೆ ನಾವೂ ತರಿಸಿಕೊಳ್ಳುತ್ತಿದ್ದೆವು”, ಎಂದು ಇನ್ನುಳಿದವರು ಕೈಕೈ ಹಿಚುಕಿಕೊಂಡಿದ್ದೂ ಆಯಿತು. ಎಲೆಕ್ಟ್ರಾನಿಕ್ ವಸ್ತುಗಳು ಅಂಗೋಲಾದಲ್ಲಿ ತೀರಾ ದುಬಾರಿಯಾಗಿರುವುದರಿಂದ ಅಂಗೋಲನ್ನರು ಸಾಮಾನ್ಯವಾಗಿ ನಮ್ಮಿಂದ ತರಿಸಿಕೊಳ್ಳುತ್ತಿದ್ದಿದ್ದು ಸ್ಮಾರ್ಟ್‍ಫೋನ್ ಅಥವಾ ಲ್ಯಾಪ್ ಟಾಪ್ ಗಳನ್ನು ಮಾತ್ರ. ಆದರೆ ಈ ಬಾರಿ ಕೆಲ ಹೆಂಗಸರು ಬುದ್ಧಿವಂತಿಕೆಯಿಂದ ಕೂದಲಿಗೆ ಬೇಡಿಕೆಯನ್ನಿಟ್ಟಿದ್ದಲ್ಲದೆ ಈ ಮಾಹಿತಿಯು ಇತರರ ಕಿವಿಗೆ ತಲುಪಿದಂತೆ ರಹಸ್ಯವಾಗಿಯೂ ಇಟ್ಟಿದ್ದರು. ಹೀಗಾಗಿ ಉಳಿದ ಅವಕಾಶವಂಚಿತ ಮಹಿಳೆಯರು ನಿರಾಶರಾಗಿದ್ದಂತೂ ಸತ್ಯ.

”ನೀವು ಯಾವಾಗ ಭಾರತಕ್ಕೆ ಹೋಗೋದು?”, ಎಂದು ಸತತವಾಗಿ ಇಲ್ಲಿಯ ಮಹಿಳೆಯರು ನನ್ನಲ್ಲಿ ಕೇಳುತ್ತಲೇ ಇದ್ದಾರೆ. ನನ್ನನ್ನು ಅಂಗೋಲಾದಿಂದ ಓಡಿಸುವ ಯಾವ ಉದ್ದೇಶಗಳೂ ಇವರಿಗಿಲ್ಲ, ಇದೆಲ್ಲಾ ಕೇಶಮಹಿಮೆಯಷ್ಟೇ ಎಂಬುದನ್ನು ಓದುಗರು ಇಲ್ಲಿ ಅರ್ಥೈಸಿಕೊಳ್ಳಬೇಕಾಗಿ ನನ್ನ ಸವಿನಯ ವಿನಂತಿ.

Leave a Reply