ನೀನು ಪ್ರಶ್ನೆಯಾಗಿ ಉಳಿಯುವುದೇ ನನಗಿಷ್ಟ..

ಕವಿತಾ ಭಟ್ 

ಕೆಲವೊಂದು ಪ್ರಶ್ನೆಗಳು ಕಾಡಿದರೂ ನಿನ್ನ ಮುಂದೆ ಕೇಳಬೇಕೆನಿಸುವುದಿಲ್ಲ. ನಿನ್ನಿಂದ ಬರುವ ಒಂದು ಉತ್ತರ, ನನ್ನಲ್ಲಿ ನನಗೆ ಬೇಕಾದಂತೆ ಮೂಡುವ ಸಾವಿರ ಉತ್ತರಗಳನ್ನು  ತಡೆಯಿಡಿಯುತ್ತದೆ ಎಂಬ ಭಯದಿಂದ …..
*           *           *
ನೀನು ಪ್ರಶ್ನೆಯಾಗಿ ಉಳಿಯುವುದೇ ನನಗಿಷ್ಟ. ಕೇಳದೆಯೇ ಉತ್ತರಗಳಿಗಾಗಿ ತಡಕಾಡುವುದರಲ್ಲಿ ಸುಖವಿದೆ ಎಂದಲ್ಲ, ನೀನು ಉತ್ತರವಾದರೆ, ನನ್ನಲ್ಲಿ ಪ್ರಶ್ನೆಗಳೇಳುವುದಿಲ್ಲ….
*              *           *
ನಿನ್ನ ಮೌನ ನನಗಿಷ್ಟವಾಗುವುದೇ ಈ ಕಾರಣಕ್ಕೆ.
ಪದಗಳಲ್ಲಿ ಪೋಣಿಸಲಾಗದೇ ಉಳಿದು ಬಿಡುವ  ಮನದಿಂಗತ, ಮಾತಿನ ಹಂಗು ತೊರೆದು ಸಂಭಾಷಣೆಯಾಗುವುದರಿಂದ..
*            *             *
ನಿನ್ನ ಮುಂದೆ ಹೇಳಲಾಗದ ಸಾವಿರ ಮಾತುಗಳು, ಒಳಗೂ ಇರದೇ, ಹೊರಗೂ ಬರದೇ ನನ್ನಲ್ಲಿ ಸೃಷ್ಟಿಸುವ ಒತ್ತಡ, ನಿನ್ನ ಇನ್ನಷ್ಟು ಕನವರಿಸುವಂತೆ  ಮಾಡುತ್ತದೆ. ಹೇಳಿ ಖಾಲಿಯಾಗುವ ಬಯಕೆ ನನಗಿಲ್ಲ.
*           *             *
ನೀ ಹೊರಟ ಹಾದಿಯನ್ನು ಹಿಂದೆ ತಿರುಗಿ ನಾನೆಂದೂ ನೋಡುವುದಿಲ್ಲ. ನೋಡಿದೆನಾದರೇ, ನೋಡಲಿಲ್ಲವೆಂಬ ದುಃಖ ಹುಟ್ಟಿಸುವ ಭಾವ, ಮತ್ತೆ ನೋಡುವ ತವಕ ಉಳಿಯುವುದಿಲ್ಲ…

2 Responses

  1. Ashfaq Ahmed says:

    ಭಾವಪೂರ್ಣ ಸಾಲುಗಳು …. !!

Leave a Reply

%d bloggers like this: