ಕೇಂದ್ರ ಸರಕಾರದ ಉನ್ನತ ಹುದ್ದೆಗಳಿಗೆ ನೇರ ನೇಮಕಾತಿಯ ಅಪಾಯಗಳು!

ಕು.ಸ.ಮಧುಸೂದನ ರಂಗೇನಹಳ್ಳಿ

ಕೇಂದ್ರ ಸರಕಾರದ ನೀತಿ ನಿರೂಪಣೆಯಲ್ಲಿ ಸಂಘಪರಿವಾರ ಹಸ್ತಕ್ಷೇಪ ಮಾಡುತ್ತಿದೆಯೆಂದು ಬಹುತೇಕ ಬಾಜಪೇತರ ಪಕ್ಷಗಳು ಮತ್ತು ಹಲವು ಚಿಂತಕರು ಆರೋಪ ಮಾಡುತ್ತಿದ್ದಾರೆ. ಇಂತಹ ಸೂಕ್ಷ್ಮ ಸಂದರ್ಭದಲ್ಲಿಯೇ ಕೇಂದ್ರ ಸರಕಾರ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೇಂದ್ರದ ಹಲವು ಸಚಿವಾಲಯದ ಅತ್ಯುನ್ನತ ಹುದ್ದೆಗಳಿಗೆ ಖಾಸಗಿ ವಲಯದ ಪರಿಣಿತರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಸಾರ್ವಜನಿಕ ನೀತಿನಿರೂಪಣೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಹಾಗು ಗುಣಮಟ್ಟದ ಸೇವೆಯನ್ನು ನೀಡುವ ಸಲುವಾಗಿ ಇಂತಹ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ.

ಸರಕಾರದ ಮೂಲಗಳ ಪ್ರಕಾರ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಹಲವು ಪ್ರತಿಭಾನ್ವಿತರು  ರಾಷ್ಟ್ರದ ಪ್ರಗತಿಗೆ  ತಮ್ಮ ಕೊಡುಗೆ ನೀಡಲು ತಯಾರಿದ್ದು, ಅವರ ಸೇವೆಯನ್ನು ಬಳಸಿಕೊಂಡು ರಾಷ್ಟ ನಿರ್ಮಾಣ ಮಾಡುವುದಷ್ಟೆ ಸರಕಾರದ ಉದ್ದೇಶವೆಂಬ ಸಮರ್ಥನೆಯನ್ನೂ ಅದು ನೀಡಿದೆ.

ಈ ಯೋಜನೆಯ ಪ್ರಕಾರ ಖಾಸಗಿಯವರನ್ನು(ನಲವತ್ತು ವರ್ಷ ವಯಸ್ಸಾಗಿರುವ ಮತ್ತು ಖಾಸಗಿ ಕ್ಷೇತ್ರದಲ್ಲಿ ಹದಿನೈದು ವರ್ಷಗಳ ಸೇವೆ ಸಲ್ಲಿಸಿದವರು ಮಾತ್ರ) ಮೂರು ವರ್ಷದ ಗುತ್ತಿಗೆಗೆ ನೇಮಿಸಿಕೊಳ್ಳಲಾಗುವುದು ಮತ್ತು ಅವರ ತೋರಿಸುವ ದಕ್ಷತೆಗೆ ಅನುಗುಣವಾಗಿ ಗುತ್ತಿಗೆಯನ್ನು ಗರಿಷ್ಠ ಐದು ವರ್ಷದ ಅವಧಿಗೆ  ವಿಸ್ತರಿಸಲಾಗುವುದು.

ಸರಕಾರದ  ಜಂಟಿ ಕಾರ್ಯದರ್ಶಿ ಹುದ್ದೆಗೆ ನೀಡುತ್ತಿರುವ ವೇತನ ಮತ್ತಿತರೆ ಭತ್ಯೆಗಳನ್ನು ಹೀಗೆ ನೇಮಿಸಿಕೊಂಡವರಿಗೂ ನೀಡಲಾಗುವುದು. ಸರಕಾರದಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ನಿರ್ವಹಿಸುವ ದಕ್ಷ ಅಧಿಕಾರಿಗಳ ಕೊರತೆಯನ್ನು ಈ ನೇಮಕಾತಿಯ ಮೂಲಕ ತುಂಬಲಾಗುವುದೆಂಬುದು ಸರಕಾರದ  ಮಾತು.

ಇಂತಹ ಖಾಸಗಿ ನೇರ ನೇಮಕಾತಿಯನ್ನು ವಿರೋಧ ಪಕ್ಷಗಳು ವಿರೋಧಿಸುತ್ತಿರುವಾಗಲೇ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರದ ಶಿಕ್ಷಣ ಸಂಸ್ಥೆಗಳಿಗೂ ಇದನ್ನು ವಿಸ್ತರಿಸುವ  ಹಾದಿಯಲ್ಲಿ  ನಡೆಯುತ್ತಿದೆ. ಅದರಲ್ಲು ಬಹುಮುಖ್ಯವಾಗಿ ಸರಕಾರದ ಹತ್ತು ಮುಖ್ಯ ಕ್ಷೇತ್ರಗಳಾದ ಕಂದಾಯ ಇಲಾಖೆ, ಹಣಕಾಸು ಇಲಾಖೆ, ಕೃಷಿ, ಸಹಕಾರ ಮತ್ತು ರೈತಾಭಿವೃದ್ದಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ನಿರ್ವಹಣೆ, ಹಡಗು ನಿರ್ಮಾಣ, ಅರಣ್ಯ ಸಂರಕ್ಷಣೆ, ಪರಿಸರ ಖಾತೆ, ನಾಗರಿಕ ವಿಮಾನ ಯಾನ, ಇಂಧನ ಇಲಾಖೆಯಂತಹ ಬಹು ಮುಖ್ಯ ಕ್ಷೇತ್ರಗಳಿಗೆ ಖಾಸಗಿಯವರನ್ನು ನೇಮಿಸಿಕೊಂಡು ಅವರ ಕಾರ್ಯದಕ್ಷತೆಯ ಲಾಭ ಪಡೆಯುವುದು ನಮ್ಮ ಉದ್ದೇಶವೆಂದು ಸರಕಾರ ಹೇಳುತ್ತಿದೆ. ವಿಶೇಷವೇನೆಂದರೆ  ಈ ಜಂಟಿ ಕಾರ್ಯದರ್ಶಿ ಹುದ್ದೆಗಳು ಆಯಾ ಇಲಾಖೆಯ ನೀತಿ ನಿರೂಪಣೆ ತಯಾರಿಸುವ ಮತ್ತು ಅವುಗಳನ್ನು ಜಾರಿಗೆ ತರುವಲ್ಲಿ ಅತ್ಯಂತ ಮುಖ್ಯಹುದ್ದೆಗಳಾಗಿರುವುದು.

ಕೇಂದ್ರ ಸರಕಾರದ ಇಂತಹ ಕ್ರಮವನ್ನು ವಿರುದ್ದ ವಿರೋಧಪಕ್ಷಗಳು  ವಿರೋಧಿಸುತ್ತಿದ್ದರೂ, ಸರಕಾರ ತನ್ನ ನಿಲುವನ್ನು ಬದಲಾಯಿಸಿಕೊಳ್ಳುವ ಮಟ್ಟಿಗೆ ವಿರೋಧ ಪಕ್ಷಗಳು ಒಂದಾಗಿ ಇದರ ವಿರುದ್ದ ದ್ವನಿ ಎತ್ತುತ್ತಿಲ್ಲ. ಅದಕ್ಕೆ ಕಾರಣ ಕೇಂದ್ರದ ಈ ನೀತಿಯು ಭವಿಷ್ಯದಲ್ಲಿ ಬೀರಬಹುದಾದ ಪರಿಣಾಮಗಳ ಬಗ್ಗೆ ವಿರೋಧಪಕ್ಷಗಳಿಗೆ ನೈಜ ಅರಿವು ಇದ್ದಂತೆ ಕಾಣುತ್ತಿಲ್ಲ. ಸರಕಾರದಲ್ಲಿ ಖಾಸಗಿ  ವ್ಯಕ್ತಿಗಳಿಗೆ ಸ್ಥಳಾವಕಾಶ ಮಾಡಿಕೊಟ್ಟು ಕೂರಿಸುವದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿರೋಧ ಪಕ್ಷಗಳಿಗೆ  ಮಾಹಿತಿ ಇರುವಂತಿಲ್ಲ. ಇದ್ದರೂ ಅದನ್ನೂ ತಮ್ಮ ಹಿತಾಸಕ್ತಿಗಳಿಗೆ ಬಳಸಿಕೊಳ್ಳಬಹುದಾದ ಆಲೋಚನೆ ಇದ್ದರೂ ಇರಬಹುದು.

ಆದರೆ ಸರಕಾರದ ಆಯಕಟ್ಟಿನ ಜಾಗಗಳಿಗೆ ಖಾಸಗಿ ವ್ಯಕ್ತಿಗಳನ್ನು ತಂದು ಕೂರಿಸುವುದರಿಂದ ಆಗಬಹುದಾದ ಕೆಲವು ಮೂಲಭೂತ ಸಮಸ್ಯೆಗಳ ಬಗ್ಗೆ ಸಂಕ್ಷಿಪ್ತವಾಗಿ ನೋಡೋಣ:

ನಮ್ಮಲ್ಲಿ ದಕ್ಷ ಅಧಿಕಾರಿ ವೃಂದವಿಲ್ಲವೆಂಬ ಸರಕಾರದ ಹೇಳಿಕೆ ತೀರಾ ಬಾಲೀಶ.  ಅಧಿಕಾರಿಗಳ ಕೊರತೆಯಿರಬಹುದಾದರು ಅದು ಸರಕಾರದ ನೇಮಕಾತಿ ವ್ಯವಸ್ಥೆಯ ಲೋಪವಷ್ಟೆ. ಇನ್ನು ಖಾಸಗಿಯವರನ್ನು ಸರಕಾರದ ಆಯಕಟ್ಟಿನ ಜಾಗದಲ್ಲಿ ತಂದು ಕೂರಿಸುವುದು ಸರಕಾರದ ಮಾಹಿತಿಗಳ ಗೌಪ್ಯತೆಗಳನ್ನು ಕಾಪಾಡುವುದಕ್ಕೆ  ಬೀಳಬಹುದಾದ ದೊಡ್ಡ ಹೊಡೆತ.

ಯಾಕೆಂದರೆ ಮೂರು ವರ್ಷ, ಐದು ವರ್ಷಗಳ ಗುತ್ತಿಗೆಯ ಆಧಾರದಲ್ಲಿ ನೆಮಿಸಿಕೊಳ್ಳುವವರ ಮೇಲೆ  ಸರಕಾರಿ ಸೇವೆಗಳ ನಿಯಮಗಳನ್ನು ಹೇರಲಾಗುವುದಿಲ್ಲ. ಹಾಗೊಮ್ಮೆ ಹೇರಿದರೂ ಬೇಕೆಂದಾಗ ಬಿಟ್ಟು ಹೋಗುವ ಅವರನ್ನು ಅವರ ತಪ್ಪುಗಳಿಗಾಗಿ ಶಿಕ್ಷಿಸುವ  ಅಧಿಕಾರ ಸರಕಾರಕ್ಕೆ ಇರುವುದಿಲ್ಲ.

ಇನ್ನು ಸರಕಾರದ ಖಾಯಂ ಅಧಿಕಾರಿಗಳು ಹೀಗೆ ಬಂದು ಹಾಗೆ ಹೋಗಬಹುದಾದ ಖಾಸಗಿ ಅಧಿಕಾರಿಗಳ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಾರೆಂದು ನಂಬಲಾಗುವುದಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ  ಅರ್ಜಿ ಹಾಕಿಕೊಳ್ಳುವ ಈ ಖಾಸಗಿ ವ್ಯಕ್ತಿಗಳು ಯಾವುದೇ ವಶೀಲಿ ಬಾಜಿ ಇರದೆ ಆಯ್ಕೆಯಾಗಲಾಗುವುದಿಲ್ಲ. ಸರಕಾರದ ಉನ್ನತ ಸ್ಥಾನದಲ್ಲಿ ಇರುವವರ ಶಿಫಾರಸ್ಸಿನ ಮೇರೆಗೆ ಇವರು ಆಯ್ಕೆ ಆಗುವುದರಿಂದ ಸಂಬಂದಿಸಿದ ಇಲಾಖೆಯ ಇತರೆ ಅಧಿಕಾರಿಗಳ ಬಗ್ಗೆ ಇವರಿಗೆ ಗೌರವ ಇರುವುದಿಲ್ಲ. ತಮ್ಮ ದಕ್ಷತೆಯಿಂದ ನೇರ  ನೇಮಕಾತಿ ಆಗಿದೆಯೆಂಬ ಅಹಮ್ಮು ಅವರ ದೈನಂದಿನ ಕೆಲಸ ಕಾರ್ಯಗಳಲ್ಲಿ  ನುಸುಳುವುದು ಸಹಜವಾಗಿಬಿಟ್ಟು ಕಚೇರಿಗಳಲ್ಲಿ ಸಮನ್ವಯತೆಯ ಕೊರತೆ ಎದುರಾಗುತ್ತದೆ.

ಇನ್ನು  ಹೀಗೆ ನೇಮಕಗೊಳ್ಳುವವರು ಖಾಸಗಿ ಕ್ಷೇತ್ರದಲ್ಲಿ ತೋರಿಸಿದ ದಕ್ಷತೆಯನ್ನು ಸರಕಾರದಲ್ಲೂ ತೋರಿಸುತ್ತಾರೆಂಬುದು  ಭ್ರಮೆಯಷ್ಟೆ!. ಯಾಕೆಂದರೆ ಎಷ್ಟೇ ಆಗಲಿ ಖಾಸಗಿ ಕ್ಷೇತ್ರ ಲಾಭಗಳಿಸುವ ಏಕೈಕ ಗುರಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಅಲ್ಲಿನ ಕೆಲಸ ಮಾಡುವ ವಾತಾವರಣ ಮತ್ತು ಆದ್ಯತೆಗಳೇ ಬೇರೆಯಾಗಿರುತ್ತವೆ.

ಸರಕಾರಿ ಕೆಲಸಗಳೆಂದರೆ ಲಾಭಗಳಿಸುವ ಉದ್ಯಮಗಳಲ್ಲ. ಬದಲಿಗೆ ಸರಕಾರ ಒಂದು ಸೇವಾ ಕ್ಷೇತ್ರ. ಇಲ್ಲಿ ಜನಪರವಾದ ಲಾಭರಹಿತ ಯೋಜನೆಗಳೇ ಅಧಿಕವಾಗಿದ್ದು ಇಂತಹ ಕ್ಷೇತ್ರಗಳಲ್ಲಿ ನೀತಿ ನಿರೂಪಣೆಗಳನ್ನು ರೂಪಿಸುವುದು ಖಾಸಗಿ ಕ್ಷೇತ್ರದಷ್ಟು ಸುಲಭವಲ್ಲ. ಇದರ ಜೊತೆಗೆ ಸರಕಾರದಿಂದ ನಿಯುಕ್ತಿಗೊಂಡ ಅಧಿಕಾರಿಗಳಿಗೆ ಇರುವ  ಬದ್ದತೆ ಮತ್ತು ಹೊಣೆಗಾರಿಕೆಯನ್ನು ನಾವು ಖಾಸಗಿ ಕ್ಷೇತ್ರದಿಂದ ಬಂದವರಿಂದ ನಿರೀಕ್ಷಿಸಲಾಗುವುದಿಲ್ಲ.

ಆದರೆ ಇವೆಲ್ಲಕ್ಕಿಂತ  ಬಹುದೊಡ್ಡ ಅಪಾಯವೆಂದರೆ ಈ ನೇರ ನೇಮಕಾತಿಗಳು ಕೇವಲ ದಕ್ಷತೆಯ ಮಾನದಂಡದಿಂದ ಆಗುವುದರಿಂದ ಇಲ್ಲಿ ಮೀಸಲಾತಿಯಂರಹ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಜಾಗ ಇರುವುದಿಲ್ಲ. ಇವತ್ತು ಬಹುತೇಕ ಖಾಸಗಿ ಕಂಪನಿಗಳ ಉನ್ನತ   ಹುದ್ದೆಗಳಲ್ಲಿ ಮೇಲ್ವರ್ಗದವರೇ ಹೆಚ್ಚಾಗಿದ್ದು ಅವರುಗಳೇ ಸರಕಾರದ ಹುದ್ದೆಗಳನ್ನು ಅಲಂಕರಿಸ ತೊಡಗುತ್ತಾರೆ. ಸಾಮಾಜಿಕ ನ್ಯಾಯದ ಯಾವ ಕಲ್ಪನೆಯೂ ಇರದ ಇಂತವರಿಂದ ಸರಕಾರಿ ಕೆಲಸ ಕಾರ್ಯಗಳಲ್ಲಿ  ಸಾಮಾಜಿಕ ನ್ಯಾಯ ಪರಿಪಾಲನೆಯನ್ನು ಬಯಸುವುದು ನಮ್ಮ ಮೂರ್ಖತನದ ಪರಮಾವಧಿಯಾಗಿಬಿಡುತ್ತದೆ.

ಇಷ್ಟಲ್ಲದೆ  ಹೀಗೆ ನೇಮಕವಾಗಬಹುದಾದ ಬಹುತೇಕರು ಆಳುವ ಪಕ್ಷದ ಪರ ಸಹಾನುಭೂತಿ ಉಳ್ಳವರೇ ಆಗಿರುತ್ತಾರೆ. ಕಳೆದ ಹತ್ತು ವರ್ಷಗಳ ಬೆಳವಣಿಗೆಗಳನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಬಹುತೇಕರು ಮೇಲ್ವರ್ಗದವರೇ ಆಗಿದ್ದು, ಬಾಜಪ ಮತ್ತದರ ಪರಿವಾರದವರ ಪರ ಇರುವವರೇ ಆಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಇಂತಹವರನ್ನೇ ಸರಕಾರ  ನೇರವಾಗಿ ನೇಮಕ ಮಾಡಿಕೊಳ್ಳುವುದು ಖಚಿತ. ಅಲ್ಲಿಗೆ ಸರಕಾರದ  ಆಯಕಟ್ಟಿನ ಹುದ್ದೆಗಳಿಗೆ ನೇಮಕವಾಗಿರುವವರು ಒಂದೋ  ಬಾಜಪದ ಬೆಂಬಲಿಗರಾಗಿರುತ್ತಾರೆ ಇಲ್ಲ ಸಂಘ ಪರಿವಾರದ ಸಮರ್ಥಕರೇ ಆಗಿರುತ್ತಾರೆ. ಬಲಪಂಥೀಯ ವಿಚಾರಧಾರೆಯಿಂದ ಪ್ರಭಾವಿತರಾಗಿರುವ ಈ  ಖಾಸಗಿಯವರಿಂದ   ಕಲ್ಯಾಣ ರಾಜ್ಯದ ಕನಸುಗಳನ್ನು ಸಾಕಾರಗೊಳಿಸುವಂತಹ ಯಾವುದೇ ನೀತಿಗಳೂ ರಚನೆಯಾಗುವುದು ಕನಸಿನ ಮಾತು.

ಇವತ್ತು ಕೇವಲ ಉನ್ನತ ಹುದ್ದೆಗಳ ಬಗ್ಗೆ ಮಾತ್ರ ನೇಮಕದ ಮಾತಾಡುತ್ತಿರುವ ಸರಕಾರ ನಿದಾನವಾಗಿ ಸರಕಾರದ ಎಲ್ಲ ಹಂತಗಳಲ್ಲಿಯೂ ಇದನ್ನು ಜಾರಿಗೆ ತರಲು ಮುಂದಾಗುವ ಸಾಧ್ಯತೆಯನ್ನು ನಾವು ತಳ್ಳಿ ಹಾಕುವಂತಿಲ್ಲ. ಇದರಿಂದ ಇಡೀ ಆಡಳಿತ ವ್ಯವಸ್ಥೆಯ ನೌಕರವರ್ಗ ಒಂದು ಸಿದ್ದಾಂತದ ಅಡಿ ಕೆಲಸ ಮಾಡುವಂತಾಗುತ್ತದೆ. ನಮ್ಮ ಸರಕಾರಿ ನೇಮಕಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ನಡೆಯುವ ಇಂತಹ ಪ್ರಕ್ರಿಯೆಗಳು ಮುಂದೊಂದು ದಿನ ಕೆಳ ವರ್ಗದವರಿಗೆ ಮತ್ತು ದಮನಿತ ಸಮಾಜಗಳಿಗೆ ಉದ್ಯೋಗವಕಾಶಗಳನ್ನು, ದಕ್ಷತೆಯ ಹೆಸರಿನಲ್ಲಿ ನಿರಾಕರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.ಈಗಾಗಲೇ ಸರಕಾರ ಈ ನೇರ ನೇಮಕಾತಿಯ ಬಗ್ಗೆ ಪ್ರಕಟಣೆ ನೀಡಿದ್ದು ಇದೇ ತಿಂಗಳ ಮುವತ್ತನೇತಾರೀಖಿನವರೆಗು ಆನ್ಲೈನ್ ನಲ್ಲಿ ಅರ್ಜಿ ಹಾಕಿಕೊಳ್ಳುವ ಅವಕಾಶ ನೀಡಿದೆ.

ಇನ್ನಾದರು ವಿರೋಧಪಕ್ಷಗಳು ಮತ್ತು ಹಿಂದುಳಿದ ಮತ್ತು ಪೆರಿಶಿಷ್ಟ ಜಾತಿ ಮತ್ತು ಪಂಗಡಗಳ ಯುವ ಸಮುದಾಯ ಎಚ್ಚೆತ್ತುಕೊಳ್ಳದಿದ್ದರೆ ಆ ಸಮುದಾಯಗಳಿಗೆ ಸರಕಾರಿ ಉದ್ಯೋಗಗಳೇ ದೊರೆಯದಂತಹ ಸನ್ನಿವೇಶ ನಿರ್ಮಾಣವಾಗುವುದು ಖಚಿತ! ಅಷ್ಟೇನೂ ಪ್ರತಿಭಾವಂತರಲ್ಲದ ಮೇಲ್ವರ್ಗಗಳ ಯುವ ಜನತೆಗೂ ಇದು ಅಪಾಯಕಾರಿ ಎಂಬುದನ್ನು  ಅರ್ಥ ಮಾಡಿಕೊಳ್ಳಬೇಕಿದೆ.

1 Response

  1. Kiran says:

    ಏನಾದರೂ ಒಂದು ಬದಲಾವಣೆ, ಹೊಸ ಯೋಜನೆ, ಹೊಸ ಯೋಚನೆ ಬಂದರೆ ಅದನ್ನು ನೆಗೆಟಿವ್ ಆಗಿ ನೋಡಿ, ಅದಕ್ಕೆ ಕಲ್ಲು ಹಾಕೋದೇ ನಮ್ಮ ಭವ್ಯ ಭಾರತ ಪ್ರಜೆಗಳ ಬುದ್ದಿ!

Leave a Reply

%d bloggers like this: