ಸುಬ್ಬಿ ಮತ್ತು ಸುಂದರಿ..

ಡಾ ಲಕ್ಷ್ಮಿ ಶಂಕರ ಜೋಶಿ
ಸುಬ್ಬಿ ಮತ್ತವಳ ಮಗಳ ಹೆಸರೇ ಸುಂದರಿ. ಸುಬ್ಬಿ ಏನು ಸುಂದರಿ ಅಂತೀರಿ? ಅದನ್ನು ಬೀದಿ ಆಕಳು ಅನ್ನೋ ಹಾಗೇ ಇಲ್ಲ. ಅಷ್ಟು ಸಾಧು…
ಮನೆಯ ಹೊರಗಡೆ ಯಾವಾಗಲೂ ದನಗಳಿಗಾಗಿ ಕುಡಿಯುವ ನೀರು ಇಟ್ಟಿರ್ತೇವೆ. ದನಗಳ ನೀರಿನ ಸಲುವಾಗಿ ತೊಟ್ಟಿ ಖರೀದಿಸುವಾಗ ನನಗೆ, ಇವರಿಗೆ ಜಗಳವೇ ಆಗಿತ್ತು. “ಏನ ದನಾ ಕಟ್ಟಾಕಿ ಇದ್ದಿಯೇನು? ದಿನಾ ಅದಕೆ ನೀರು ತುಂಬುವವರಾರು?ಯಾಕೋ ಅತೀ ಮಾಡತಿ “ಅಂದಾಗ, ನಾನಂದಿದ್ದೆ…”ಬಿಸಿಲೂರಿನಲ್ಲಿ ಅವಕ್ಕೆ ಎಲ್ಲಿವೆ ನೀರು? ಅದರ ಜವಾಬ್ದಾರಿ ನನಗಿರಲಿ. ಈಗ ಆ ಹೌದು ನಿಮ್ಮ ಕಾರಿನ್ಯಾಗ ತರಬೇಕು ಅಷ್ಟ”ಎಂದೆ. ಒಪ್ಪಿ ತಂದಿಟ್ಟರು. ದಿನವೂ ನೀರು ಕುಡಿಯಲು ಬರುವ ಸುಬ್ಬಿ ನಮ್ಮನೆ ಮಗಳಾಗಿ ಬಿಟ್ಟಳು..
ದಿನವೂ ಬೆಳಗಿನ ಎಂಟಕ್ಕೆ ಅದರ ಹಾಜರಿ. ಮಿಕ್ಕಿದ ರೊಟ್ಟಿ.. ಮಕ್ಕಳ ಡಬ್ಬಿಯಲ್ಲಿನ ಚಪಾತಿ, ಒಮ್ಮೊಮ್ಮೆ ಅಕ್ಕಿ ಬೆಲ್ಲ, ಉಂಡಿ.. ಏನಾದರೂ ತಿಂದೇ ಹೊರಡುತ್ತಿತ್ತು. ಬಾಗಿಲಲ್ಲಿ ಯಾರೂ ಕಾಣದಿದ್ದರೆ ಸೀದಾ ಒಳಗೇ ಬರುವ ಧಾಡಸಿತನ ತೋರುತ್ತಿತ್ತು. ಇವರ ಬೆದರಿಕೆಗೆ ಮಾತ್ರ ಹೆದರುವ ಸುಬ್ಬಿಗೆ ನಮ್ಮೆಲ್ಲರ ಜತೆ ಬಲೆ ಸಲಿಗೆ. ಹೊಟ್ಟೆಗೆ ಗೋಣಿನಿಂದ ಉಜ್ಜುತ್ತ ಅಚ್ಛಚ್ಛಾ ಮಾಡಿಸಿಗೋತಿತ್ತು. ಬೆನ್ನು ಕೈಯಾಡಿಸಬೇಕು, ಗಂಗೆದೊಗಲು ನೀವಬೇಕು, ಎರಡು ಕೋಡುಗಳ ಮಧ್ಯೆ ತುರಿಸಬೇಕು.ಅದರ ಸ್ವಭಾವವೆಲ್ಲ ಮನುಷ್ಯರ ಹಾಗೆ. ಎಲ್ಲ ತಿಳೀತಿತ್ತು ಅದಕ್ಕೆ. ಮಲೆನಾಡ ಹೆಂಗಸರು ಕೆಲವರು ಆಕಳುಗಳ ಮುಂದೆ ತಮ್ಮ ದುಃಖ ಬಿಚ್ಚಿಡ್ತಾರಂತೆ.
ಒಮ್ಮೆ  ಇಂಥ ಸುಬ್ಬಿ ಏಳೆಂಟು ದಿನವಾದರೂ ಬರಲೇ ಇಲ್ಲ. ಏನಾಗಿದ್ದೀತು? ನಮ್ಮ ನೆನಪಾದರೂ ಬರ್ತದೋ ಇಲ್ವೋ? ಕಳುವಾಗಿರಬಹುದೇ? ನೂರೆಂಟು ಆಲೋಚನೆಗಳು. ಏನಾಗಿದ್ದೀತು? ಓಣಿಯಲ್ಲೆಲ್ಲ ವಿಚಾರಣೆ. “ಯಾಕ್ರೀ ನಿಮ್ಮ ಸುಬ್ಬಿ ಕಾಣವಲ್ತಲ್ರೀ? “ಹಾಗೆ ಕೇಳಿದಾಗೊಮ್ಮೆಎದೆ ಧಸ್ ಅನ್ನೋದು..
ಮರುದಿನ ಪೇಪರಿನಲ್ಲಿ “ಆಕಳುಗಳ ಕಣ್ಮರೆ…ಸಂಶಯದ ಸುತ್ತ ಪಡ್ಡೆ ಹುಡುಗರು”ಎಂದಿತ್ತು. ನಮ್ಮ ಏರಿಯಾದ ಸೂರ್ಯವಂಶಿ ಎನ್ನುವ ಹೆಣ್ಣು ಮಗಳೊಬ್ಬರು ಪೋಲೀಸ್ ಕಂಪ್ಲೇಂಟ್ ಮಾಡಿದ್ದರು. ಅವರ ಆಕಳು ಕಳುವಾದ ಬಗ್ಗೆ. ಸುಬ್ಬಿಯಂಥ ಆಕಳು, ಕರುಗಳು ನಮ್ಮ ಏರಿಯಾದಿಂದ ಮರೆಯಾಗಹತ್ತಿವೆ. ಕೆಲ ಪಡ್ಡೆ ಹುಡುಗರು ಅವನ್ನು ಕಸಾಯಿಖಾನೆಗೆ ಹಾಕಿರಬಹುದೆಂದು ಊಹಿಸಿದ್ದರು. ಮನೆಯಲ್ಲಿ ಬರೀ ಅದರದೇ ಮಾತು. ಅಣ್ಣ ತಂಗಿ ಕೂಡಿ ಸುಬ್ಬಿ ಅಡ್ಡಾಡುವ ಜಾಗ ನೋಡಿ ಬಂದರು..
ಸ್ವಾತಿ ಕನಸಲ್ಲಿ ಸುಬ್ಬಿ ಬಂಧಂಗಾಗೋದಂತೆ. ಪಾಪ ಅವಳ ಕಣ್ಣಲ್ಲಿ ಸಣ್ಣ ನೀರ ಪೊರೆ.. ಥೂ ಹಚ್ಚಕೋಬಾರದಿತ್ತು. ಮೋಹ ಅತೀ ಆಗಬಾರದು. ಮನಸ್ಸು ಆಧ್ಯಾತ್ಮದತ್ತ ವಾಲುತ್ತಿತ್ತು. ಮಗ ಅವನ ಗೆಳೆಯರು ಕೂಡಿ ಸೂರ್ಯವಂಶಿ ಮಾಮಿ ಮನೆಗೆ ಹೋಗಿ ಬಂದರು. ಅವರಂದರಂತೆ.”ತಮ್ಮಾ…ಮನ್ಯಾಗ ಕಟ್ಟಿದ ಆಕಳಾನ ಬಿಡಂಗಿಲ್ಲ.ಇನ್ನ ನಿಮ್ಮದಂತೂ ಬೀದಿ ಆಕಳಾ..ಬಂದೀತ ಬಿಡು” ರಾತ್ರಿ ಊಟಕ್ಕೆ ಕೂತಾಗ ಅಪ್ಪನ ಜತೆ ಚರ್ಚಿಸಿದವು. “ಬರ್ತದಳ ಎಲ್ಲಿ ಹೋಗ್ತದ?”ಎಂದಿನ ಉಡಾಫೆ ಉತ್ತರ ತಯಾರಿಯೇ ಇತ್ತು. “ಬೀದಿ ಆಕಳು ಪ್ಲಾಸ್ಟಿಕ್ ತಿಂತಾವು. ಅಂಥ ಆಕಳಾ ಕಸಾಯಿಖಾನೆಗೆ ಹಾಕೂದಿಲ್ಲ “ಏನೋ ಒಂದು ಹೇಳಿ ಮಕ್ಕಳ ಬಾಯಿಯೇನೋ ಮುಚ್ಚಿಸಿದರು. ಆದರೆ ತಲೆ ವೇಗವಾಗಿ ಓಡುತ್ತಿತ್ತು. ಏನೂ ಆಗಬಾರದಪಾ ದೇವರೆ!..ದೇವರಿಗೆ ನಾನಾ ಪರಿಯಿಂದ ಕೈ ಮುಗಿದೆ.
ಮನೆಗೆ ಹಾಲು ಹಾಕುವ ಗೌಳಿ ಹೆಂಡತಿ ದ್ರೌಪತಿ ಹೇಳಿದಳು.”ಅಯ್ಯ ನಿಮ್ಮ ಸುಬ್ಬಿ ಭಾಳ ಬೆರಿಕಿ ಅದರಿ. ಒಮ್ಮೊಮ್ಮೆ ಹಿಂಡಕೋತೀವಿ ಅಂತ ಕರಕ್ಕ ರಸ್ತೆದಾಗ ನಿಂತು ಹಾಲು ಕುಡಿಸ್ತದರಿ”. ಅಂದಳು.”ಅಂದ್ರ ನೀ ಹಾಕೂ ಹಾಲು ಸುಬ್ಬಿದೇನು?”ಕೇಳಿದೆ. “ಇಲ್ರೀ ಬಾಯಿ.. ನಮ್ಮ ಎಮ್ಮಿ ಹಾಲ ಹಾಕ್ತೀನ್ರೀ”ಅಂದಳಾದರೂ ಮನೆಕೆಲಸದ ಶ್ರೀದೇವಿ “ನಿಮ್ಮ ಸುಬ್ಬಿ ಹಾಲು ಯಾರ ಬೇಕಾದವ್ರು ಹಿಂಡಕೋತಾರ್ರಿ. ಭಾಳ ಸಭ್ಯ ಅದರೀ” ಅಂದಿದ್ದಳು. ಹಿಂಡಲಿ, ಮಾರಲಿ ಬೇಕಾದ್ದು ಮಾಡಲಿ ಆದರೆ ಹೈದ್ರಾಬಾದ್ ಕಸಾಯಿಖಾನೆಗೆ ಹಾಕಬಾರದಪಾ ದೇವರೆ.. ಮನ ರೋಧಿಸುತ್ತಿತ್ತು
ಆಕಳಾ ಕೊಡೋ ನಮ್ಮಾಕಳಾ ಕೊಡೋ
ಆಕಳಾದರೂ ಕಾಣಲಿಲ್ಲ ಆಕಿ ನಮಗ ಹೇಳಲಿಲ್ಲ.
ಸೆರಗ ಹಿಡಿದು ಕೇಳಿದರೆ ಸಾವಿರಾಕಳ ತಂದ  ಕೊಡತಿನಿ.
ಗೇಣು ಕೊಂಬಿನ ಮುದಿ ಆಕಳವಿತ್ತು.ಬೆನ್ನ ಮೇಲೆ ಬಿಳುಪಿತ್ತು.
ಕರುವಿಗಾದರೂ ಉಣಿಸುತಿತ್ತು.ಮನೆಯ ಹಾದಿ ಹಿಡಿಯುತ್ತಿತ್ತು.
ಗೇಣು ಕೊಂಬಿನ ಮುದಿ ಆಕಳು ಕಾಣೆ.
ಬೆನ್ನ ಮೇಲೆ ಬಿಳುಪಿರುವುದ ಕಾಣೆ
ಕರುವಿಗಾದರೂ ಉಣಿಸೂದ ಕಾಣೆ
ಮನೆಯ ಹಾದಿ ಹಿಡಿಯೂದ ಕಾಣೆ.
ಹಳ್ಳ ಸರುವಿನಲಿ ನಿಂತಿತ್ತು. ಕಳ್ಳಿ ಸಾಲಲಿ ಮೇಯುತ್ತಿತ್ತು. ಕೊರಳ ಸರಪಳಿ ಮಿನುಗುತ್ತಿತ್ತು. ಬಾಲ ಬೀಸುತ ಬರುತಲಿತ್ತು.
ಎಂಟು ಎಂಟು ದಿನದ ರೊಕ್ಕ ಎಣಿಸಿಕೊಂಡು ಹೋಗುವಿಯಲ್ಲೋ. ಗಂಟುಗಳ್ಳ ಗೋವ್ಗಳ ರಾಯಾ ನೆಂಟರ ಮನೆಗೆ ಹಚ್ಚಿ ಬಂದೆ.
ಅರಸನಲ್ಲಿಗೆ ಹೋಗುತ್ತೀನೋ. ಅಲ್ಲಿಗೆ ನಿನ್ನನು ಕರೆಸುತ್ತೀನೋ. ಕದ್ದುದೆಲ್ಲವ ಹೇಳುತ್ತೀನೋ ಕಪಟ ಬುದ್ಧಿಯ ಬಿಡಿಸುತ್ತೀನೋ…
ಯಾವ ಅರಸಗೆ ಹೇಳುತ್ತೀಯೋ. ಯಾರನಲ್ಲಿಗೆ‌ ಕರೆಸುತ್ತೀಯೋ. ಬಾಯಿ ಬಡುಕ ಹೆಣ್ಣೆ ನೀನು ಯಾರನ್ನಿಲ್ಲಿಗೆ ಬೆದರಿಸ ಬಂದೆ..
ಆಕಳ ತಂದು ಮನೆಗೆ ಬಿಟ್ಟರೆ ಹೂವಿನ ಹಚ್ಚಡ ಹೊಚ್ಚುತ್ತೀನೋ. ತುಪ್ಪದ ದೀವಿಗೆ ಹಚ್ಚುತ್ತೀನೋ. ಸಕ್ರಿ ಖೊಬ್ರಿ ಹಂಚುತ್ತೇನೋ.‌‌‌..
ಬಾಲ್ಯದಲ್ಲಿ ಹಾಡಿದ ಹಾಡು ಮನದುಂಬಿ ಬರುತ್ತಿತ್ತು.
ಅದರ ಅಮಾಯಕ ಮುಖ ತೇಲಿ ತೇಲಿ ಬರುತ್ತಿತ್ತು. ಸುಬ್ಬಿ ಒಮ್ಮೊಮ್ಮೆ ಮದುವೇ ಸೀಸನ್ ಇದ್ದಾಗ ಕಲ್ಯಾಣ ಮಂಟಪದಲ್ಲಿ ಊಟದ ಎಲೆಗಳನ್ನು ತಿನ್ನುತ್ತಿದುದನ್ನು ನೋಡಿದ ಮಗಳು ಅಲ್ಲೂ ಅಣ್ಣನ ಜತೆಗೂಡಿ ನೋಡಿ ಬಂದಳು. ಅಲ್ಲಿಯೂ ಇಲ್ಲ. ಎಲ್ಲಿಯೂ ಕಾಣದ ಸುಬ್ಬಿ ಒಂದು ಪ್ರಶ್ನೆಯಾಗಿಬಿಟ್ಟಳು… ಎಲ್ಲಿ ಹೋಗಿರಬಹುದು? ಎಂಟು ದಿನ ಕಳೆದು ಹೋಯಿತು. ಸುಬ್ಬಿ ಇರದ ಬದುಕು ನಿಧಾನ ನಡೀತಿತ್ತು. ಬೆಳಗಾಗೂತಲೇ ವಿಷಾದ ಛಾಯೆ ಆವರಿಸುತ್ತಿತ್ತು. ಪ್ರಾಣಿಗಳನ್ನು ಈ ಪರಿ ಹಚ್ಚಿಕೊಳ್ಳುವದೇ? ತಂಗಿ ಬೈದಿದ್ದಳು ಫೋನಿನಲ್ಲಿ.
       
ಆ ದಿನ ಬೆಳಿಗ್ಗೆ ರಂಗೋಲಿ ಹಾಕುವ ಹೊತ್ತು. ಉದ್ದಾನುದ್ದದ ರಸ್ತೆ ಬಿಕೋ ಅಂತಿದೆ. ಸುಬ್ಬಿ ಇದ್ದರೆ ಏನು ಚಂದ ಬರೋದು. ನಿಧಾನವಾಗಿ ನಡೀತಾ ಬರುತ್ತಿದ್ದರೆ ನಿಂತು ನೋಡೋ ಹಾಗೆ. ಅಷ್ಟು ಸುಂದರಿ. ಮೈದುನ ಊರಿಂದ ಬಂದಾಗ ಹೇಳಿದ್ದ. “ವೈನಿ ಪಕ್ಕಾ ಜವಾರಿ ಆಕಳ ನೋಡ್ರಿ ಇದು” ಅಂತ. ಏನೇನೋ ನೆನಪುಗಳು. ಮಗ ಸುಬ್ಬೀನ ಊರಿಗೆ ಕಳಿಸುವುದಾಗಿ ಅವರ ಕಾಕೂಗೆ ಕೇಳಿದಾಗ ಮನೇಲಿ ಎಲ್ಲರೂ ನಕ್ಕಿದ್ದರಂತೆ.. ಏನೇನೋ ಹಳವಂಡ..
ಒಂಬತ್ತಕ್ಕಿ ರಂಗೋಲಿ ಮುಗೀತು. ಗೋಣೆತ್ತಿದರೆ ಸುಬ್ಬಿ ಒಳೇ ಅವಸರವಾಗಿ ಬರ್ತಿದೆ. ಜತೇಲಿ ಪುಟ್ಟ ಕರು. ಥೇಟ್ ಸುಬ್ಬಿ ಹಾಗೆ… ಅಕ್ಷರಶಃ ಕೂಗಿಕೊಂಡೆ. ಒಂದೇ ಹಾರಿಕೆಗೆ ಮಗ ಮಗಳು ಹಾಜರ್.
“ದನದಂಥಾದ ಸ್ವಲ್ಪರ ಬುದ್ಧಿ ಅದ ನಿನಗ? ಬಾಣಂತನ ನಡೆದಿತ್ತೇನೆ ನಿಂದೂ? ಗಾಬರಿಗೆ ಹಾಕಿದ್ಯಲ್ಲೇ ನಿನ ಸುಡ್ಲಿ”….ಸುಬ್ಬಿಗೆ ತಿವಿಯುತ್ತಿದ್ದ ನನ್ನ ನೋಡಿ ಮಗ ನಗುತ್ತ ನನ್ನ ಫಾರ್ಸ ತೋರಿಸುತ್ತಿದ್ದ.”ದನಾನೇ ಅದ ಅದು. ಅದನೇನ ದನಾ ಅಂತ ಬೈತಿ”… ಒಳಗಿನಿಂದ ಬೆಲ್ಲದ ಕರಣಿಗಳೊಂದಿಗೆ ಬಂದ ರಾಯರು ಪುಟ್ಟ ಕರುವಿಗೆ ಬೆಲ್ಲ ತಿನಿಸುತ್ತ ನಮ್ಮ ಹುಚ್ಚಾಟಕ್ಕೆ ಜೊತೆಯಾದರೆನ್ನಿ..
ಆಕಿ ಹರಕಿ ಮಾಡೂದ ಕೇಳಿ
ಆಕಳ ತಂದು ಮನೆಗೆ ಬಿಟ್ಟ
ಜೋಕೆ ಜೋಕೆ ಆಕಳವೆಂದ
ಮನೆಗೆ ನಡೆದ ಪುರಂದರ ವಿಠಲ.
ಆಕಳ ಬಂತು ನಮ್ಮ ಆಕಳ ಬಂತು..

Leave a Reply