‘ಆರ್ ವಿ ಭಂಡಾರಿ, ಹೊನ್ನಾವರ’ ಅಂತ ಹಾಕಿದರೂ ಸರಿಯಾಗಿ ಮನೆಗೆ ಬರುತ್ತಿತ್ತು..

ನೆನಪು 14.
ಬಂಡಾಯ ಪ್ರಕಾಶನದ ಪರದಾಟ

ಈಗೇನೂ ತೊಂದರೆ ಇಲ್ಲ. ನೀವು ತಿಂಗಳಿಗೆ ಒಂದು ಪುಸ್ತಕ ಬರೆದರೂ ಪ್ರಕಟಿಸುವ ಪ್ರಕಾಶನ ಸಂಸ್ಥೆಗಳಿವೆ.

ಪುಸ್ತಕದಲ್ಲಿ ಏನಿದೆ? ಇದು ಸಮಾಜಕ್ಕೆ ಏನಾದರೂ ಪ್ರಯೋಜನಕಾರಿಯೇ? ಬರೆದ ಲೇಖನ ಸ್ವಂತ ವಿಚಾರವೆ? ಇತ್ಯಾದಿ ಯಾವುದೂ ಮುಖ್ಯವಾಗುವುದಿಲ್ಲ. (ಕೆಲವು ಪ್ರಕಾಶನಕ್ಕೆ ಮಾತ್ರ ಸೀಮಿತವಾಗಿ ನಾನು ಈ ಮಾತನ್ನು ಹೇಳುತ್ತಿರುವುದು.)

ಪುಟಗಳು ಹೆಚ್ಚಿದ್ದಷ್ಟೂ ಒಳ್ಳೆಯದು. ಲೇಖಕರಿಗೆ 25-50 ಪುಸ್ತಕ ಕೊಟ್ಟು ಕೈ ತೊಳೆದುಕೊಳ್ಳುವುದು. ನಂತರ ಗ್ರಂಥಾಲಯಕ್ಕೆ ಸಾಕಾಗುವಷ್ಟು ಪುಸ್ತಕ ಮುದ್ರಿಸಿ ಒದಗಿಸುವುದು, ಹಣ ಗಳಿಸುವುದು. ಪುಸ್ತಕ ಎನ್ನುವುದು ಕೇವಲ ವ್ಯವಹಾರವಾಗಿ ಕುಳಿತಿದೆ.

ಇತ್ತೀಚೆಗೆ ಪುಸ್ತಕ ಪ್ರಾಧಿಕಾರ ಹಲವು ಲೇಖಕರಿಂದ ಪುಸ್ತಕ ಖರೀದಿಸಿ ಗ್ರಾಮೀಣ ಗ್ರಂಥಾಲಯಕ್ಕೆ ಒದಗಿಸುವ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಅವರಿಂದ ನಮ್ಮ ಗ್ರಂಥಾಲಯಕ್ಕಾಗಿ ಒಮ್ಮೆ ನಾನೂ ಒಂದೆರಡು ಬಾಕ್ಸ್ ಪಡೆದುಕೊಂಡಿದ್ದೆ. ಆದರೆ ಒಂದು ಬಾಕ್ಸ್ ನಲ್ಲಿ ನನಗೆ ಕನಿಷ್ಠ 10 ಒಳ್ಳೆಯ ಪುಸ್ತಕವನ್ನು (200-250 ಟೈಟಲ್ ಗಳ 20 ರಿಂದ 25 ಸಾವಿರ ಮುಖ ಬೆಲೆಯ ಪುಸ್ತಕಗಳಿರುತ್ತವೆ.) ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹಲವು ಗ್ರಾಮೀಣ ಗ್ರಂಥಾಲಯಕ್ಕೆ ಬರುವ ಪುಸ್ತಕಗಳನ್ನು ನೋಡಿದರೆ ವ್ಯಥೆಯಾಗುತ್ತದೆ. ಈ ಪುಸ್ತಕಕ್ಕಾಗಿ ನಮ್ಮದೆ ಜಿಲ್ಲೆಯ ಕಾಡಿನ ಎಷ್ಟೊಂದು ಮರ ನಾಶವಾಗಿರಬಹುದು? ಎಂದು ವ್ಯಥೆಯಾಗುತ್ತದೆ.

ಆದರೆ ಹಿಂದೆ ಪುಸ್ತಕ ಪ್ರಕಾಶನಗಳೇ ಅಪರೂಪ. ಹಾಗಾಗಿ ಪುಸ್ತಕ ಪ್ರಕಟಿಸುವುದೆಂದರೆ ಹರಸಾಹಸದ ಕೆಲಸ. ಅದರಲ್ಲೂ ಗ್ರಾಮೀಣ ಭಾಗದ ಲೇಖಕರಿಗೆ, ಅದರಲ್ಲೂ ಪ್ರಾಥಮಿಕ ಶಾಲೆ ಹೈಸ್ಕೂಲಿನ ಮಾಸ್ತರರಿಗಂತೂ ಇದು ಕನಸಿನ ಮಾತು. ನಮ್ಮ ಜಿಲ್ಲೆಯಲ್ಲಿ ವಿಷ್ಣು ನಾಯ್ಕ ಅವರು ರಾಘವೇಂದ್ರ ಪ್ರಕಾಶನವನ್ನು ಹುಟ್ಟುಹಾಕಿ ಈ ಜಿಲ್ಲೆಯ ದನಿ ಇಲ್ಲದ ಹಲವು ಲೇಖಕರಿಗೆ ವರದಾನವಾಗಿದ್ದರು. ಅವರಲ್ಲೂ ಇವರ ಪ್ರಕಾಶನದಡಿ ಹಲವು ಲೇಖಕರು ಮೊದಲ ಪುಸ್ತಕ ಪ್ರಕಟಿಸಿದರು. ಕವನ ಸಂಕಲನವನ್ನು ಪ್ರಕಟಿಸಲು ಸಾಹಸ ಮಾಡಿದರು. ಇದಕ್ಕಿಂತ ಹಿಂದೆ ಮತ್ತು ನಂತರ ಕೂಡ ಉತ್ತರ ಕನ್ನಡದಲ್ಲಿ ಕೆಲವು ಪ್ರಕಾಶನ ಸಂಸ್ಥೆಗಳು ಹುಟ್ಟಿ ಕೈಸುಟ್ಟುಕೊಂಡಿದ್ದೂ ಇದೆ.

ಇನ್ನು ಹಲವು ಲೇಖಕರೇ ಪ್ರಕಾಶಕರಾಗಿ ತಮ್ಮ ಪುಸ್ತಕ ತಾವೇ ಪ್ರಕಟಿಸಿಕೊಳ್ಳುತ್ತಿದ್ದರು. ಮಕ್ಕಳನ್ನು ಹಡೆದಷ್ಟು ಸಂತಸ ಅವರಿಗೆ. ಒಂದೆರಡು ಪುಸ್ತಕ ಪ್ರಕಟಿಸುವುದರೊಳಗೆ ಗಳಿಸಿದ ಹಣವೆಲ್ಲ ಖಾಲಿಯಾಗುತ್ತಿತ್ತು. ಮಾರಾಟದ ವ್ಯವಸ್ಥೆ ಇಲ್ಲದ್ದರಿಂದ ಮತ್ತು ಲೇಖಕರು ವ್ಯವಹಾರ ನಿಪುಣವಾಗಿಲ್ಲದ್ದರಿಂದ ಅಲ್ಲಿಗೆ ಪ್ರಕಾಶನ ವ್ಯವಸ್ಥೆ ಮುಚ್ಚುತ್ತಿತ್ತು.

ಅಣ್ಣನೂ ಇಂತದ್ದೊಂದು ಸಾಹಸಕ್ಕೆ ಕೈ ಹಾಕಿದ. ಹಾಗೆ 1981-82ರಲ್ಲಿ ‘ಬಂಡಾಯ ಪ್ರಕಾಶನ’ ಹುಟ್ಟಿಕೊಂಡಿತು. 1982 ರಲ್ಲಿ ಅವನ ಆತ್ಮೀಯ ಗೆಳೆಯ ಜಿ.ಎಸ್. ಅವಧಾನಿಯವರ ಕವನ ಸಂಕಲನ ‘ಹೊತ್ತು ಮುಳುಗುವ ಮುನ್ನ’ ಪ್ರಕಟವಾಯಿತು. ಆಮೇಲೆ ಪ್ರಕಟವಾಗಿದ್ದು ಮೈಸೂರಿನ ಮುನಿವೆಂಕಟಪ್ಪ ಅವರ ‘ಕೆಂಡದ ನಡುವೆ’, ಗಂಗಾರಾಮ ಚಾಂಡಾಲರ ‘ಚಾಂಡಾಲರ ಕೂಗು’.

ಈ ಮಧ್ಯೆ 1984 ರಲ್ಲಿ ಆತನ ಮೊದಲ ಮಕ್ಕಳ ನಾಟಕ ಸಂಕಲನ ‘ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು’ ಪ್ರಕಟವಾಗಿದ್ದವು. ಬಹುಶಃ ವಿ. ಮುನಿವೆಂಕಟಪ್ಪನವರ ಪುಸ್ತಕಕ್ಕೆ ಅವರೇ ಹಣ ಹಾಕಿಕೊಂಡಿರಬೇಕು.

ಆಗೆಲ್ಲಾ ಇರುವುದು ಮೊಳೆ ಜೋಡಿಸುವ ಮುದ್ರಣಾಲಯ. ಮುಖ್ಯವಾಗಿ ಹೊನ್ನಾವರದಲ್ಲಿ ಜನರಲ್ ಪ್ರೆಸ್, ಶ್ರೀಧರ ಪ್ರೆಸ್, ಗಣಪತಿ ಪ್ರೆಸ್ ಹೀಗೆ ಕೆಲವೇ ಕೆಲವು ಮುದ್ರಣಾಲಯಗಳಿದ್ದವು. ಪ್ರತಿದಿನ ಶಾಲೆ ಬಿಟ್ಟ ಮೇಲೆ ಸಂಜೆ ಹೊನ್ನಾವರದ ಜನರಲ್ ಪ್ರೆಸ್ಸಿಗೆ ಹೋಗಿ ಪ್ರೂಫ್ ನೋಡಿ 10-12 ಪುಟವನ್ನು ಮಾತ್ರ ಪ್ರಿಂಟಿಗೆ ಹಾಕಿ ಬರುವುದು.

ಆ ಪ್ರೆಸ್ಸಿನಲ್ಲಿ ಇದ್ದ ಮೊಳೆ ಅಷ್ಟೆ. ದಿನನಿತ್ಯದ ವ್ಯವಹಾರಕ್ಕೆ ಬಿಟ್ಟು (ಹ್ಯಾಂಡ್ ಬಿಲ್, ಲಗ್ನ ಪತ್ರ, ವೈಕುಂಠ ಸಮಾರಾಧನೆ ಕಾರ್ಡ್, ಅಡಾವೆ ಪತ್ರಿಕೆ, ರಶೀದಿ ಪುಸ್ತಕ… ಇತ್ಯಾದಿ ದಿನನಿತ್ಯ ಇರುವ ಮುದ್ರಣ ಕೆಲಸ) ಉಳಿದಂತೆ 10-15 ಪುಟ ಜೋಡಿಸುವಷ್ಟು ಮೊಳೆ.

ಮುಖಪುಟವೂ ಹಾಗೆ ದೊಡ್ಡ ಅಕ್ಷರದಲ್ಲಿ ತಲೆಬರಹ, ಸ್ವಲ್ಪ ಸಣ್ಣದಾಗಿ ಲೇಖಕರ ಹೆಸರು. ಆಮೇಲೆ ಮೇಲೆ ಕೆಳಗೆ, ಬದಿಗೆ ಎಲ್ಲೋ ಒಂದೆರಡು ಗೆರೆ ಅಥವಾ ಸ್ಟಾರ್ ಅಥವಾ…. ಹೀಗೆ ಅವನಲ್ಲಿರುವ ಯಾವುದಾದರೂ ಒಂದೆರಡು ಬ್ಲಾಕ್‍ನ್ನು ಹಾಕುವುದು. ಅದು ಪುಸ್ತಕದ ವಸ್ತುವಿಗೆ ಸಂಬಂಧ ಪಟ್ಟಿದ್ದೋ ಅಲ್ಲವೋ ಎನ್ನುವುದರ ಬಗ್ಗೆ ಮುದ್ರಣಾಲಯದ ಚಂದ್ರುವಾಗಲಿ, ಪುಸ್ತಕ ಬರೆದ ಲೇಖಕರಾಗಲಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.

ಕವರ್ ಪೇಜ್ ಸ್ವಲ್ಪ ದಪ್ಪ ಶೀಟಿನಲ್ಲಿದ್ದರೆ ಆಯಿತು. ಹಿಂಬದಿಗೆ ಲೇಖಕರ ಫೋಟೋದ ಬ್ಲಾಕ್‍ನ್ನು ಹುಬ್ಬಳ್ಳಿ, ಧಾರವಾಡ ಅಥವಾ ಗದಗದಿಂದ ಮಾಡಿಕೊಂಡು ಬರುತ್ತಿದ್ದರು. ಮುಖಪುಟಕ್ಕೋ, ಹಿಂಬದಿ ಪುಟಕ್ಕೋ ಫೋಟೋ ಅಥವಾ ಚಿತ್ರ ಹಾಕಿ ಮುದ್ರಿಸುವುದೆಂದರೆ ಒಂದು ಪ್ರತಿಷ್ಠೆಯ ಕೆಲಸವೇ ಆಗಿತ್ತು ನಮ್ಮಂತ ತಾಲೂಕಿನಲ್ಲಿ.

ಮುದ್ರಣಗೊಂಡು ಮನೆಗೆ ಪುಸ್ತಕ ಬಂದಾಗ ಮದುವೆ ಆಗಿ ಸೊಸೆ ಮನೆಗೆ ಬಂದಷ್ಟು ಸಡಗರ. ಸಣ್ಣ ಪುಸ್ತಕವಾದರೆ 25 ರಂತೆ, ದೊಡ್ಡ ಪುಸ್ತಕವಾದರೆ 10 ರಂತೆ ಕಟ್ಟುಕಟ್ಟಿ, ಅದಕ್ಕೆ ಮೇಲೆ ಪೇಪರ್‍ನಿಂದ ಸುತ್ತಿ ಪ್ಯಾಕ್ ಮಾಡಿಡುವುದು ನಮ್ಮ ಸಂಭ್ರಮದ ಕೆಲಸದಲ್ಲಿ ಒಂದು.

ಮಾರಾಟ ಆಗಲು ಕೆಲವು ವರ್ಷಗಳೇ ಹಿಡಿಯುತ್ತಿದ್ದವು. ಆಗ ರಾಜ್ಯದ ಕೆಲವು ಜಿಲ್ಲೆಗಳ ಗ್ರಂಥಾಲಯಗಳು ನೇರವಾಗಿ ಲೇಖಕರಿಂದ ಪುಸ್ತಕ ಖರೀದಿಸುತ್ತಿದ್ದವು. ಕೆಲವು ಪುಸ್ತಕಗಳಿಗೆ ಕನಿಷ್ಠ 4-6 ಜಿಲ್ಲಾ ಗ್ರಂಥಾಲಯದಿಂದಾದರೂ ಪತ್ರ ಬರುತ್ತಿತ್ತು. (ಈಗ ಎಲ್ಲವೂ ಕಮಿಷನ್ ವ್ಯವಹಾರ) ಅದನ್ನು ತೆರೆದ ಅಂಚೆ ಯು.ಆರ್.ಪಿ. ಮಾಡಿ ಅಣ್ಣನೇ ಪೋಸ್ಟ್ ಮಾಡುತ್ತಿದ್ದ. ಬುಕ್ ಪೋಸ್ಟ್ ಅಲ್ಲದಿದ್ದರೆ ಒಮ್ಮೊಮ್ಮೆ ಪುಸ್ತಕಕ್ಕೆ ಬರುವ ಹಣಕ್ಕಿಂತ ಸ್ಟಾಂಪಿಗೆ ಹೆಚ್ಚು ಹೋಗುತ್ತಿತ್ತು.

ಹೊನ್ನಾವರದ ಅಂಚೆ ಕಚೇರಿಯಲ್ಲಿ ಇವನನ್ನು ತೀರಾ ಗೌರವದಿಂದಲೇ ನೋಡುತ್ತಿದ್ದರು. ಯಾಕೆಂದರೆ ಅತಿ ಹೆಚ್ಚು ಪತ್ರ ಬರೆಯುವ ಮತ್ತು ಪತ್ರ ಬರುವ ವ್ಯಕ್ತಿಗಳಲ್ಲಿ ಈತ ಪ್ರಮುಖನಾಗಿದ್ದ. ತಿಂಗಳು ಪಗಾರ ಬಂದಾಗ ಮನೆಗೆ ರೇಷನ್ ತರುವುದನ್ನಾದರೂ ಮರೆಯಬಹುದಾಗಿತ್ತು. ಆದರೆ ಅಂತರ್‍ದೇಶಿ, ಕಾರ್ಡ್, ಸ್ಟಾಂಪ್ ತರುವುದನ್ನಂತೂ ಎಂದೂ ಮರೆಯುತ್ತಿರಲಿಲ್ಲ.

ನಾನು ಹೈಸ್ಕೂಲಿಗೆ ಹೋಗಲು ತೊಡಗಿದಾಗ ಎಲ್ಲಾ ಪೋಸ್ಟಿನ ಜವಾಬ್ದಾರಿ ನನ್ನದೇ ಆಗಿತ್ತು. ಯಾಕೆಂದರೆ ನನ್ನ ಹೈಸ್ಕೂಲಿನ ವರಾಂಡದಲ್ಲಿಯೇ ಅರೆಅಂಗಡಿ ಅಂಚೆ ಕಚೇರಿ ಕೂಡಾ ಇತ್ತು. ಅಲ್ಲಿದ್ದ ಪಿ.ಎಸ್. ಹೆಗಡೆ ಇವರು ನಮ್ಮ ಶಾಲೆಯ ಗುಮಾಸ್ತರೂ ಆಗಿದ್ದರು ಮತ್ತು ಅಂಚೆ ಕಚೇರಿಯ ಪೋಸ್ಟ್ ಮಾಸ್ತರ್ ಆಗಿದ್ದರು. ಸರಿಯಾಗಿ ತೂಕ ಮಾಡಿ ಅವರೇ ಸ್ಟಾಂಪ್ ಹಚ್ಚಿಕೊಡುತ್ತಿದ್ದರು. ನಮ್ಮ ಮನೆಗೆ ಬಂದ ಪತ್ರಗಳನ್ನೆಲ್ಲಾ ಒಂದೆಡೆ ಕಟ್ಟಿಡುತ್ತಿದ್ದರು. ನಾನು ಶಾಲೆ ಬಿಟ್ಟು ಮನೆಗೆ ಬರುವಾಗ ತರೋದು. ನನ್ನ ಬಾಲ್ಯದ ಅತ್ಯಂತ ಗೌರವಾನ್ವಿತ ಕೆಲಸದಲ್ಲಿ ಅದೂ ಒಂದಾಗಿತ್ತು.

ಅಂಚೆ ಕಚೇರಿಯಲ್ಲಿ ಇವನ ವಿಳಾಸ ಎಷ್ಟು ಪ್ರಸಿದ್ಧವಾಗಿತ್ತೆಂದರೆ ಆರ್.ವಿ. ಭಂಡಾರಿ, ಹೊನ್ನಾವರ ಅಂತ ಹಾಕಿದರೂ ಸರಿಯಾಗಿ ಮನೆಗೆ ಬರುತ್ತಿತ್ತು. ಇವನ ಅಕ್ಷರವೂ ಅಷ್ಟೇ ಪ್ರಸಿದ್ಧ. ಎಲ್ಲಾದರೂ ಬುಕ್ ಪೋಸ್ಟ್ ಮಾಡುವಾಗ ಸ್ಟಾಂಪ್ ಕಡಿಮೆ ಹಚ್ಚಿದರೆ ಕಚೇರಿಯವರೇ ಉಳಿದ ಅಂಚೆ ಚೀಟಿ ಹಚ್ಚಿ ಪೋಸ್ಟ್ ಕಳಿಸುತ್ತಿದ್ದರು. ಮರುದಿನ ಹೋದಾಗ ಹಣ ಪಡೆಯುತ್ತಿದ್ದರು. ಒಮ್ಮೊಮ್ಮೆ ಪೋಸ್ಟ್ ಕಾರ್ಡಿಗೆ ವಿಳಾಸ ಬರೆಯುವುದನ್ನೇ ಮರೆಯುತ್ತಿದ್ದ. ಆಗ ಅದನ್ನು ಕಸದ ಡಬ್ಬಿಗೆ ಹಾಕುವ ಬದಲು ನಮ್ಮ ಮನೆಗೆ ವಾಪಸ್ ಕಳಿಸುತ್ತಿದ್ದರು. ತುಂಬಾ ವರ್ಷಗಳವರೆಗೆ, ಯಾರದಾದರೂ ಹೆಸರಿನ ತುದಿಗೆ ಪೂರ್ಣ ವಿಳಾಸ ಇಲ್ಲದೇ ‘ಭಂಡಾರಿ’ ಅಂತಿದ್ದರೆ ಆ ಪತ್ರ ನಮ್ಮ ಮನೆಗೇ ಬರೋದು. ಆ ವ್ಯಕ್ತಿಯ ವಿಳಾಸ ಅರಸಿ ಮತ್ತೆ ಕಳಿಸುವ ಎನ್ನೊಂದು ಎಕ್ಸ್ಟ್ರಾ ಕೆಲಸ ಅಣ್ಣನದು.

ನಾನು ಹೇಳಲು ಹೊರಟಿದ್ದು ಬಂಡಾಯ ಪ್ರಕಾಶನದ ಕುರಿತು ಮಾತ್ರ. ಆದರೆ ಬೇರೆಡೆ ತಿರುಗಿದೆ, ಕ್ಷಮಿಸಿ.

ಸಾಮಾನ್ಯವಾಗಿ ಆತ ಬರೆದ ಪುಸ್ತಕದ 100-150 ಪ್ರತಿ ಅವನ ಲೇಖಕ ಸ್ನೇಹಿತರಿಗೆ ಪೋಸ್ಟ್ ಆಗುತ್ತಿತ್ತು. 75-100 ಜನರಿಗೆ ಕೈಯಲ್ಲಿ ಕೊಡುತ್ತಿದ್ದ. ರಾಜ್ಯದ ಯಾವುದೇ ಮುಖ್ಯ ಪುಸ್ತಕದಂಗಡಿಯವರು ಮಾರಾಟಕ್ಕಾಗಿ ಪುಸ್ತಕ ಕೊಂಡು ಕೊಳ್ಳುತ್ತಿರಲಿಲ್ಲ. ಈಗಲೂ ಹಾಗೆ; ಏನೂ ಬದಲಾವಣೆಯಿಲ್ಲ. (ಅವರು ಮುದ್ರಿಸಿದ ರದ್ದಿಪುಸ್ತಕವಾದರೂ ಸರಿಯೇ ಸಾವಿರಾರು ಪ್ರತಿ ಮಾರಾಟ ಮಾಡುತ್ತಾರೆ. ಗ್ರಾಮೀಣ ಭಾಗದ ಯಾವುದೇ ಒಂದು ಒಳ್ಳೆಯ ಪುಸ್ತಕವನ್ನೂ ತಮ್ಮ ಮಳಿಗೆಯಲ್ಲಿಟ್ಟು ಮಾರಾಟ ಮಾಡುವ ದೊಡ್ಡತನ ತೋರಿಸುವುದಿಲ್ಲ. ಒಂದು ರೀತಿಯಲ್ಲಿ ಪುಸ್ತಕ ಮಾರಾಟದ ಮೋನೊಪೊಲಿ ಈ ನಗರ ಕೇಂದ್ರಿತ ಪ್ರಕಾಶಕರದ್ದು.)

15-20 ಪ್ರತಿ ಕೆಲವು ಸಾದರ ಸ್ವೀಕಾರಕ್ಕೆ. ಸಾದರ ಸ್ವೀಕಾರ ನೋಡಿ 50-75 ಜನರಿಂದ ಮನಿಯಾರ್ಡರ್ ಬರುತ್ತಿತ್ತು. ಅವರಿಗೆ ಪೋಸ್ಟ್ ಮಾಡುವುದು. ಪುಸ್ತಕದ ಬೆಲೆ 5 ರೂ. ಸ್ಟಾಂಪಿಗೆ 15-20 ಪೈಸೆ. ಅದನ್ನು ಪೋಸ್ಟ್ ಮಾಡಲು ಹೊನ್ನಾವರಕ್ಕೆ ಹೋದರೆ ಅಪ್ & ಡೌನ್ ಎರಡು+ಎರಡು 4 ರೂಪಾಯಿ. ಉಳಿಯುವುದು ಎಷ್ಟು ಅಂತ ನೀವೇ ಲೆಕ್ಕ ಹಾಕಿ!!. ಉಳಿದ ಪುಸ್ತಕ ಎಲ್ಲಾದರೂ ಅಪರೂಪಕ್ಕೆ ಗ್ರಂಥಾಲಯದ ಆದೇಶ ಬಂದರೆ, ಇಲ್ಲದಿದ್ದರೆ ಮುದ್ರಿಸಿದ 500 ಪ್ರತಿಯಲ್ಲಿ 100-200 ಪ್ರತಿ ಹಾಗೆಯೇ ಉಳಿಯುವುದು ವಾಡಿಕೆ.

ಪುಸ್ತಕ ಮಾರಾಟವಾಗುವುದಿಲ್ಲ ಎನ್ನುವುದು ಎಲ್ಲಾ ಲೇಖಕರ (ಪ್ರಕಾಶಕರು ಆಗಿರುವ) ಬೇಸರ ಆಗಿತ್ತು. ತಮಾಷೆಯೆಂದರೆ ಕೊಂಡುಕೊಳ್ಳಬಹುದಾದ, ಓದು ಆಸಕ್ತಿ ಉಳ್ಳ ಸುಮಾರು 300-350 ಜನರಿಗೆ ಪುಕ್ಕಟೆ ಪುಸ್ತಕ ಕೊಟ್ಟು ಬಿಡುತ್ತಿದ್ದರು. ಉಳಿದಂತೆ ಯಾರೇ ಮನೆಗೆ ಬಂದರೂ ಅವರಿಗೆ ಒಂದು ಪುಸ್ತಕ ಗ್ಯಾರಂಟಿ. ಹೀಗಿದ್ದ ಮೇಲೆ ಪುಸ್ತಕ ಖರೀದಿಸುವವರು ಯಾರು? ಹೀಗೆ ಪುಕ್ಕಟೆ ಪುಸ್ತಕ ನೀಡುವ ಕೆಲಸವನ್ನು ಒಂದು ವ್ರತದಂತೆ ಜೀವನದ ಕೊನೆಯವರೆಗೂ ಮುಂದುವರಿಸಿದ ಆತ. ಹಾಗಾಗಿ ಪುಸ್ತಕ ಪ್ರಕಟಣೆ ಅವನಿಗೆ ಎಂದೂ ಲಾಭದಾಯಕ ವ್ಯವಹಾರ ಆಗಿರಲಿಲ್ಲ. ಬದಲಿಗೆ ಆತ್ಮಸಂತೋಷದ ಕೆಲಸ ಮಾತ್ರ ಆಗಿತ್ತು.

ಯಾವುದಾದರೂ ಗ್ರಂಥಾಲಯದಿಂದ ಹಣ ಬಂದಾಗ ಅದನ್ನು ಪ್ರೆಸ್ಸಿಗೆ ಕೊಡುವುದು ಇಲ್ಲದಿದ್ದರೆ ಮುಂದಿನ ಪುಸ್ತಕ ಮುದ್ರಣಕ್ಕೆ ಹಾಕುವ ಮೊದಲು ಹಳೇ ಬಾಕಿ ಚುಕ್ತಾ. ಹಣ ಇಲ್ಲದಿದ್ದರೆ ಇಲ್ಲ. ಮುಂದಿನ ವರ್ಷವಾದರೂ ಒಂದು ಪುಸ್ತಕ ತರಬೇಕು ಎಂದು ಹೇಳುತ್ತಿದ್ದ. ಅದಕ್ಕಾಗಿ ಹಣ ಜೋಡಿಸುವ ಕೆಲಸ ವರ್ಷದಿಂದಲೇ ಪ್ರಾರಂಭ.

ನಾನು ಎಂ.ಎ. ಮುಗಿಸಿ ಬಂದ ಮೇಲೆ ಬಂಡಾಯ ಪ್ರಕಾಶನದ ಅರ್ಧ ಜವಾಬ್ದಾರಿಯನ್ನು ತೆಗೆದುಕೊಂಡೆ. ಹಣ ಅವನದೇ. ಆದರೆ ಲಾಭ ಆಗದಿದ್ದರೂ ಲುಕ್ಸಾನು ಆಗದಂತೆ ಮಾಡಿದೆ. ಆತನದೇ ಹಲವು ಪುಸ್ತಕಗಳನ್ನು ಮುದ್ರಿಸಿದೆ. ಜಿಲ್ಲೆಯ ಬೇರೆ ಲೇಖಕರ -ಬಿ.ಎಚ್.ಶ್ರೀ, ಶಾಂತಾರಾಮ ನಾಯಕ ಹಿಚ್ಕಡ, ಶ್ರೀಪಾದ ಭಟ್, ಸುಧಾ ಆಡುಕಳ, ತಮ್ಮಣ್ಣ ಬೀಗಾರ, ರಾಜು ಹೆಗಡೆ, ಸತೀಶ ಯಲ್ಲಾಪುರ, ಎಂ.ಎ. ಖತೀಬ್, ಸಫ್ದರ್ ಹಶ್ಮಿ, ಎಸ್. ಮಾಲತಿ, ವಿಶ್ವ ಕುಂದಾಪುರ, ಮಾಧವಿ ಭಂಡಾರಿ ಕೆರೆಕೋಣ, ಯಮುನಾ ಗಾಂವ್ಕರ್ ಮೊದಲಾದವರ – ಪುಸ್ತಕಗಳೂ ಬಂಡಾಯ ಪ್ರಕಾಶನದಲ್ಲಿ ಮುದ್ರಣಗೊಂಡವು.

ಅಣ್ಣ ತೀರಿಕೊಂಡ ಮೇಲೂ ಪ್ರಕಾಶನವನ್ನು ಮುಂದುವರೆಸುವ ನಿರ್ಧಾರವನ್ನು ನಮ್ಮ ಕುಟುಂಬ ಮಾಡಿತು. ಅಕ್ಕನ ಮಗ ಅನಿಲ್, ಭಾವ ಕಮಲಾಕರ ಇದರ ದೇಖರೇಖೆ ನೋಡಿಕೊಳ್ಳುತ್ತಿದ್ದರು. ಅಣ್ಣನ ನಿಧನದ ನಂತರ ಅವನ ನೆನಪಿನಲ್ಲಿ ಸುಮಾರು 35 ಪುಸ್ತಕಗಳನ್ನು ಪ್ರಕಟಿಸಲಾಯಿತು. ಬೆಂಗಳೂರಿನ ಕ್ರಿಯಾ ಪ್ರಕಾಶನದ ಚಂದ್ರು ಉದ್ರಿಯ ಮೇಲೆ ಮುದ್ರಿಸಿಕೊಡುತ್ತಾನೆ. (ಬಂಡಾಯ ಪ್ರಕಾಶನದ ಮೊದಲ ಪುಸ್ತಕವನ್ನು ಉದ್ರಿಯ ಮೇಲೆ ಮುದ್ರಿಸಿಕೊಟ್ಟವನು ಜನರಲ್ ಪ್ರೆಸ್ಸಿನ ಮಾಲಕ ಕೂಡ ಚಂದ್ರುವೇ ಆಗಿದ್ದ.)

ಸತೀಶ ಯಲ್ಲಾಪುರ, ಡಾ. ಕೃಷ್ಣ ಗಿಳಿಯಾರ ಕೇಳಿದಾಗೆಲ್ಲ ಪ್ರೀತಿಯಿಂದ ಪುಕ್ಕಟೆ ಚಿತ್ರ ಬಿಡಿಸಿ ಕೊಡುತ್ತಾರೆ. ಗ್ರಂಥಾಲಯ 300 ಪ್ರತಿ ಕೊಳ್ಳುತ್ತದೆ. (ಹಣ ಬರುವುದು 6-8 ತಿಂಗಳ ನಂತರ ಎನ್ನುವುದು ಬೇರೆ ಮಾತು) ಹಾಗೂ-ಹೀಗೆ ವರ್ಷಕ್ಕೆ 50-75 ಸಾವಿರ ಕಿಸೆಯಿಂದ ಹಾಕಿಕೊಳ್ಳುತ್ತೇವೆ. ಅಣ್ಣನ ನೆನಪನ್ನು ಹಸಿರಾಗಿ ಇರಿಸಬೇಕೆನ್ನುವ ಕಾರ್ಯಕ್ರಮದಲ್ಲಿ ಇದೂ ಒಂದು ಎಂದುಕೊಂಡಿದ್ದೇವೆ.

ಮುದ್ರಿಸುವುದಿದ್ದರೆ ಇನ್ನೂ ಹತ್ತು ವರ್ಷಕ್ಕಾಗುವಷ್ಟು ಅಣ್ಣನ ಕೈ ಬರಹದ ಪುಸ್ತಕ ಇವೆ. ವರ್ಷಕ್ಕೆ ಒಂದಾದರೂ ಆತನ ಪುಸ್ತಕ ತರುವುದು ನಮ್ಮ ಉದ್ದೇಶ. ನೋಡಬೇಕು. ಎಷ್ಟು ವರ್ಷ ಕೈನಡೆಯುತ್ತದೆ ಎಂದು.

Leave a Reply