‘ಇದು ಬರೆದದ್ದಲ್ಲ. ಸಂಗ್ರಹಿಸಿದ್ದು. ಕದ್ದಮಾಲು ಎಂದು ಬೇಕಾದರೆ ಎದೆ ತಟ್ಟಿ ಹೇಳಬಲ್ಲೆ’

ತುಂತುರು

ಲೇಖಕರು: ದಂನಆ

ತೇಜು ಪಬ್ಲಿಕೇಷನ್ಸ್

136 ಪುಟಗಳು

‘ತುಂತುರು’ ನಿಜಕ್ಕೂ ಒಂದು ವಿಶಿಷ್ಟ ಪುಸ್ತಕ. ಮೆಲುಕು ಹಾಕುವಂತಹ ಆಯ್ದ ಮಾತುಗಳ ಗುಚ್ಛ. ಇಲ್ಲಿ ನೇರ ಸುಭಾಷಿತಗಳಿವೆ. ರಾಜಕೀಯ ವ್ಯಂಗ್ಯೋಕ್ತಿಗಳಿವೆ. ಸಾಮಾಜಿಕ ಚಾಟೂಕ್ತಿಗಳಿವೆ. ಸಾಹಿತ್ಯ ವಿಮರ್ಶೆಯ ಒಂದೆರಡು ತಿವಿತಗಳಿವೆ. ವ್ಯಕ್ತಿ ವಿಕಸನಕ್ಕೆ ಬೇಕಾಗುವ ಸೋಪಾನಗಳಿವೆ. ತುಂತುರು ಕೃತಿಯಲ್ಲಿ ಏನೆಲ್ಲ ಇದೆ. ರಸಿಕರಿಗಾಗಿ ಒಂದೆರಡು ಪ್ರಚ್ಛನ್ನ ಪೋಲಿಮಾತುಗಳೂ ಇವೆ ಮತ್ತು ಇವೆಲ್ಲಾ ಧ್ವನಿ ಪೂರ್ವಕವಾಗಿ ಕಾವ್ಯಮಯ ಧಾಟಿಯಲ್ಲಿವೆ.

ಸ್ವಲ್ಪ ರುಚಿ ನೋಡಿ;

ನೂರು ಪುಟ ಕಡಿಮೆ ಬರೆದರು ಸಹ ಲೇಖಕ ಹೇಳಬೇಕಾದುದೆಲ್ಲವನ್ನೂ ಹೇಳಬಹುದಿತ್ತು.

ಸರ್ಜನ್ ದಿನಾ ಒಂದು ಹಾರ ತಗೊಂಡು ಹೊರಡುತ್ತಿದ್ದರು. ಏಕೆ ಎಂದು ಕೇಳಿದರೆ ‘ಆಪರೇಷನ್ ಸಕ್ಸಸ್ ಆದರೆ ನನಗೆ ಇಲ್ಲದಿದ್ದರೆ….’

‘ಭಾಜಪದ ಪ್ರಣವ ಮುಖರ್ಜಿ ಯಾರು ಗೊತ್ತಾ? ಅಡ್ವಾಣಿ – ಪ್ರಧಾನಿಯಾಗಲು ಕಾಯುತ್ತಲೇ ಇರುವ ವ್ಯಕ್ತಿ’

‘ಕಾಂಗ್ರೆಸ್ ನವರಿಗೆ ಮಮತಾ ಬ್ಯಾನರ್ಜಿ ದೀದಿ ಅಲ್ಲಾ, ದಾದಾ.’

‘ನಿನ್ನ ಮೂಗು ನನಗೆ ಸಿಕ್ಕಿತು. ಅದು ನನ್ನ ವ್ಯವಹಾರದಲ್ಲಿ.’

‘ಟಿ ಈಸ್ ಸೈಲೆಂಟ್ ಇನ್ ರಾಬರ್ಟ್ ವಾದ್ರಾ.’

‘ಸೀರೆ ಉಟ್ಟರೆ ತೊಂದರೆ ಎಂದು ಅನೇಕ ಹೆಣ್ಣು ಮಕ್ಕಳು ಗೊಣಗುತ್ತಾರೆ. ಆದರೆ ಕಿತ್ತೂರು ರಾಣಿ ಚೆನ್ನಮ್ಮ ಸೀರೆ ಉಟ್ಟುಕೊಂಡೇ ಬ್ರಿಟೀಷರನ್ನು ಇದುರಿಸಿದಳು.’

(ಈ ಉಕ್ತಿಯನ್ನು ಕೇಳಿದ ನನ್ನ ಮೊಮ್ಮಗಳು ‘ಬಹುಶಃ ಪ್ಯಾಂಟ್ ತೊಟ್ಟಿದ್ದರೆ ಗೆಲ್ಲುತ್ತಿದ್ದಳೋ ಏನೋ’ ಎಂದಳು)

ಆನಂದರ ಆಯ್ಕೆಗಳಲ್ಲಿ ಮೇಲಿನವು ‘ಬೆಸ್ಟ್ ಆಫ್ ಆನಂದ’ ಅಲ್ಲ. ಅವರ ಆಯ್ಕೆಗಳೆಲ್ಲವೂ ಬೆಸ್ಟೇ! ಸುಮ್ಮನೇ ಸಹೃದಯರಿಗೆ ರುಚಿ ತೋರಿಸಲು ಕೆಲವನ್ನು random ಆಗಿ ಹೆಕ್ಕಿದ್ದಷ್ಟೇ.

‘ಇದು ಬರೆದದ್ದಲ್ಲ. ಸಂಗ್ರಹಿಸಿದ್ದು. ಕದ್ದಮಾಲು ಎಂದು ಬೇಕಾದರೆ ಎದೆ ತಟ್ಟಿ ಹೇಳಬಲ್ಲೆ’ ಎಂದು ಅವರೇ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ.

ನನಗೆ ಒಂದು ಘಟನೆ ನೆನಪಾಗುತ್ತದೆ.

ಒಂದೆರಡು ದಶಕಗಳ ಹಿಂದೆ ಬೆಂಗಳೂರಿನಲ್ಲಿ ಅಷ್ಟಿಷ್ಟು ಮೈಸೂರು ಉಳಿದುಕೊಂಡಿದ್ದ ದಿನಗಳಲ್ಲಿ; ಬೆಳಗಿನ ವಾಯುವಿಹಾರಕ್ಕೆ ಹೊರಟಿದ್ದ ಕಚ್ಚೆ ಪಂಚೆಯ ಯಜಮಾನರೂ ಜೊತೆಯಲ್ಲಿ ಅವರ ಧರ್ಮಾವರಂಗಳೂ ಉದ್ದನೆಯ ಕೋಲಿಗೆ ಕೊಕ್ಕೆ ಸಿಕ್ಕಿಸಿ  ತಮ್ಮ ಮನೆ ದೇವರ ಪೂಜೆಗೆಂದು ಅವರಿವರ, ಮನೆಯ ಕಾಂಪೌಂಡಿನೊಳಗಿನ ಹೂಗಳನ್ನು ಕಿತ್ತು ಕೈಚೀಲಕ್ಕೆ ಸೇರಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಒಂದು ದಿನ ನಾನು ಏನು ಕಾರಣವೋ ಅಷ್ಟು ಬೆಳಗ್ಗೆಯೇ ಎದ್ದವನು ನಮ್ಮ ಕಾಂಪೌಂಡಿನಿಂದಲೇ ಹೂ ಕೀಳುತ್ತಿದ್ದ  ಸುಮ ಚೌರ್ಯವನು ಆಕ್ಷೇಪಿಸುತ್ತ, ‘ಯಾಕೆ ಸ್ವಾಮಿ ನಮ್ಮ ಹೂ ಕೀಳುತ್ತೀರಿ?’ ಎಂದಾಗ  ಆ ಧರ್ಮಾವರಿ ಮುಖ ಗಂಟಿಕ್ಕುತ್ತ ‘ಹೂಗಳು ಯಾರಿಗೂ ಸೇರಿದ್ದಲ್ಲ. ಅವು ದೇವರ ಪೂಜೆಗೆಂದು ಅವನೇ ಬೆಳಸಿದ್ದು ಎಂದು ಹೇಳಿ ಆ ಮುಂಡೇದಕ್ಕೆ’ ಎಂದು ಯಜಮಾನರಿಗೆ ತಿವಿದದ್ದು ಕೇಳಿಸಿತು.

ಹಾಗೆಯೇ ಸುಭಾಷಿತಗಳೂ, ಜಾಣ್ಣುಡಿಗಳೂ ಯಾರ ಒಡೆತನಕ್ಕೂ ಸೇರಿದ್ದಲ್ಲ. ಅವುಗಳನ್ನು ಕದಿಯುವ ಪ್ರಶ್ನೆಯೇ ಇಲ್ಲ. ಅವು ಕೈಯಿಂದ ಕೈಗೆ ಸಂಚರಿಸುವ ದುಡ್ಡಿನಂತೆ ತಲೆಯಿಂದ ತಲೆಗೆ ಜಾರಿಕೊಳ್ಳುತ್ತಲೇ ಇರಬೇಕು. ಆಗಲೇ ಅವುಗಳ ಸಾರ್ಥಕ್ಯ. ಅದು ನಿಯಮ.

ಆನಂದರು ಈ ಮಾತಿನ ಮೊಗ್ಗುಗಳನ್ನು ತುಂಬ ಜಾಣ್ಮೆಯಿಂದ ಆಯ್ದಿದ್ದಾರೆ. ಅಷ್ಟೇ ಅಲ್ಲಾ, ಅಲ್ಲಲ್ಲಿ ಅವುಗಳನು ಕೆತ್ತುವ ಬಿದರೀ ಕುಸುರಿ ಕಲಾತ್ಮಕತೆಯನ್ನೂ ಮೆರೆದಿದ್ದಾರೆ.

ಆಯ್ಕೆಯಲ್ಲೂ ಆಯ್ದದ್ದನ್ನು ತಿರುಚುವುದರಲ್ಲೂ ಆನಂದರ ಉತ್ತಮ  ಅಭಿರುಚಿ ಮೆಚ್ಚುವಂತಹದು.

‘ಏನೋ ಒಂದಿಷ್ಟು ನೋಡುವಾ’ ಎಂದು ಕೈಗೆತ್ತಿಕೊಂಡ  ಈ ಕೃತಿ ಒಂದು ಪಿ.ಎಚ್.ಡಿ ಗೆ ಆಗುವಷ್ಟು ಆಸ್ಥೆಯನ್ನು ಕೆರಳಿಸಿತು.

ನಿಜಕ್ಕೂ ಆನಂದರು ಅಭಿನಂದನಾರ್ಹರು..

Leave a Reply