ಗೋಂಗ್  ಕ್ಷ್ಸಿಫ಼ ಶಾಯಿ…

ಶ್ರೀವಿದ್ಯಾ ಧರ್ಮಸ್ಥಳದ ಬಸ್ಸೇರಿ ಹೈದ್ರಾಬಾದ್ ನ ಫಿಲಂ ಸಿಟಿಗೆ ಬಂದು ನನ್ನೆದುರು ಕುಳಿತಾಗ ಆಕೆಯೆಯೊಳಗೆ ಅಡಗಿದ್ದ ಸಂಕೋಚ, ತೀರಾ ಮೆಲು ಎನಿಸುವ ಮಾತು ನನ್ನನ್ನು ಗೊಂದಲಕ್ಕೆ ದೂಡಿತ್ತು. ವೇಗವನ್ನೇ ನಂಬಿರುವ ಈ ನ್ಯೂಸ್ ರೂಮ್ ನಲ್ಲಿ ಸಾವಧಾನವೇ ಮೈವೆತ್ತಂತೆ ಕುಳಿತಿರುವ ಈ ಹುಡುಗಿ ಬದುಕಿಯಾಳೆ ಅನಿಸಿತು.

ಶ್ರೀವಿದ್ಯಾ ತನ್ನ ಎಲ್ಲಾ ನೇಟಿವಿಟಿ ಮಧ್ಯೆಯೇ ನ್ಯೂಸ್ ರೂಮ್ ನಲ್ಲಿ ಯಶಸ್ಸು ಗಳಿಸಿದಳು. ಆಮೇಲೆ ಗೊತ್ತಾಯಿತು ಈಕೆ ಯಕ್ಷರಂಗದ ಮೂಲಕ ಟಿವಿ ರಂಗ ಪ್ರವೇಶ ಮಾಡಿದಾಕೆ ಎಂದು. ತಂದೆ ಕುಬಣೂರು ಶ್ರೀಧರ ರಾಯರು ಖ್ಯಾತ ಯಕ್ಷಗಾನ ಭಾಗವತರು.

ಚಿಕ್ಕಂದಿನಿಂದಲೇ ಯಕ್ಷಗಾನ ತಾಳ ಮದ್ದಳೆ ನೋಡುತ್ತಾ ಬೆಳೆದ ಹುಡುಗಿ ಈಗ ಸಿಂಗಾಪುರ್ ನಿಂದ ನಮಗೆ ಪ್ರತೀ ವಾರ ಒಂದು ಪತ್ರ ಬರೆಯಲಿದ್ದಾಳೆ. ಸಿಂಗಾಪುರ್ ನ ಕೌತುಕಗಳು ನಿಮ್ಮೆದುರು ಬಿಚ್ಚಿಕೊಳ್ಳಲಿವೆ.

ಗೋಂಗ್  ಕ್ಷ್ಸಿ ಫ಼ ಶಾಯಿ…

ಚೈನೀಸ್ ಭಾಷೆಯಲ್ಲಿ ಹೊಸ ವರ್ಷದ ಶುಭಾಶಯಗಳು ಎಂದು ಅರ್ಥ.

ಚೀನೀಯರಿಗೆ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಆರಂಭದಲ್ಲಿ ಹೊಸ ವರ್ಷದ ಸಡಗರ. ಚೈನೀಸ್ ಸಮುದಾಯಕ್ಕೆ ಅತ್ಯಂತ ಶುಭದಿನ. ಭಾರತೀಯರಿಗೆ ದೀಪಾವಳಿ ಹೇಗೋ, ಚೀನೀಯರಿಗೆ ಈ ಹೊಸ ವರ್ಷ.

ಚೀನೀಯರಿಗೆ ಕೆಂಪು ಬಣ್ಣ ಅದೃಷ್ಟ ಸಂಕೇತ. ಹೊಸ ವರ್ಷ ಬರೋದೇ ತಡ, ಪೇಪರ್ ನಿಂದ ತಯಾರಾದ ಕೆಂಪು ಬಣ್ಣದ ತೂಗು ದೀಪಗಳಿಗೆ ಫುಲ್ ಡಿಮ್ಯಾಂಡ್. ಮನೆ, ಬೀದಿ, ಮಾಲ್ ಹೀಗೆ ಎಲ್ಲೆಂದರಲ್ಲಿ ಈ ಲ್ಯಾಂಟ್ರನ್ ಗಳದ್ದೇ ಕಾರುಬಾರು. ಈ ಮೂಲಕ ಅಧೃಷ್ಟ ಲಕ್ಷ್ಮಿಗೆ ಅದ್ಧೂರಿ ಸ್ವಾಗತ.

ಚೀನಿ ಪ್ರಾಬಲ್ಯವಿರುವ ಚೀನಾ, ಮಲೇಶಿಯಾ ದೇಶಗಳೊಂದಿಗೆ ಸಿಂಗಾಪುರ ಕೂಡ ಒಂದು. ಹೊಸ ವರ್ಷದ ಸಂಭ್ರಮದ ದಿನಕ್ಕೆ ಸಿಂಗಾಪೂರದಲ್ಲೂ ಸಕಲ ಸಿದ್ಧತೆಗಳು ನಡೆಯುತ್ತವೆ. ಏರ್‌ಪೋರ್ಟ್, ಪ್ರಮುಖ ಮಾಲ್‌ಗಳು, ಸಣ್ಣ ಪುಟ್ಟ ಅಂಗಡಿಗಳು, ಹೋಟೆಲ್‌ಗಳು ವಿಭಿನ್ನ ಅಲಂಕಾರಗಳೊಂದಿಗೆ ಆಕರ್ಷಣೆಯ ಕೇಂದ್ರ ಬಿಂದುವಾಗಿರುತ್ತವೆ.

ಚೀನಿಯರ ಹೊಸ ವರ್ಷವನ್ನು ಸ್ಪ್ರಿಂಗ್ ಫೆಸ್ಟಿವಲ್, ಲೂನರ್ ಈಯರ್ ಅಂತಲೂ ಕರೀತಾರೆ. ಚೈನೀಸ್ ಕ್ಯಾಲಂಡರ್ ಪ್ರಕಾರ ಈ ವರ್ಷವನ್ನು ‘ಈಯರ್ ಆಫ್ ದ ಡಾಗ್’  ಎಂದು ಹೇಳಲಾಗುತ್ತೆ. ಅಲ್ಲದೆ ಚೈನೀಸ್ ಜ್ಯೋತಿಷ್ಯ ಪ್ರಕಾರ ‘ನಾಯಿ’ ರಾಶಿಯನ್ನು ಹೊಂದಿರುವ ವ್ಯಕ್ತಿಗಳು ಈ ವರ್ಷದಲ್ಲಿ ಅತ್ಯಂತ ಕ್ರಿಯಾಶೀಲರಾಗಿರುತ್ತಾರೆ ಎಂದು ಬಣ್ಣಿಸಲಾಗುತ್ತೆ.

ಈ ಚೈನೀಸ್  ನ್ಯೂ ಈಯರ್ ಶತ ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ.  ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ತಮ್ಮ ತಮ್ಮ ಮನೆಗಳಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತೆ. ಈ ಕಾರ್ಯಗಳು ಅಪೂರ್ಣಗೊಂಡರೆ ‘ಅಶುಭ’ದ ಸೂಚನೆ ಅನ್ನೋದು ಇವರ ನಂಬಿಕೆ. ಈ ಹೊಸ ವರ್ಷವನ್ನು ಪ್ರಪಂಚದಾದ್ಯಂತ 15 ದಿನಗಳ ಕಾಲ ಆಚರಿಸಲಾಗುತ್ತೆ. ಈ ಎಲ್ಲಾ ದಿನಗಳು ಚೀನೀಯರಿಗೆ ಮಹತ್ವದ ದಿನಗಳಾಗಿವೆ. ಶಾಯಿ ಶೆನ್ ಹಾಗೂ ಶಿ ಗಾಂಗ್ ಎಂಬ ಹೆಸರುಗಳನ್ನು ಹೊಂದಿದ ದೇವರನ್ನು ಈ ಸಂದರ್ಭದಲ್ಲಿ ಪೂಜಿಸಲಾಗುತ್ತೆ.

ಮಧ್ಯರಾತ್ರಿಯಿಂದಲೇ ಹೊಸ ವರ್ಷ ಆಚರಣೆಯ ವಿಧಿ-ವಿಧಾನಗಳು ಆರಂಭವಾಗುತ್ತೆ. ಮೊದಲ ದಿನ ಕುಟುಂಬದ ಹಿರಿಯರನ್ನ ಪೂಜಿಸಿ ಕಿರಿಯರು ಆಶೀರ್ವಾದ ಪಡೀತಾರೆ. ಎರಡನೇ ದಿನ ಮದು ಮಕ್ಕಳು ತಮ್ಮ ತವರು ಮನೆಗೆ ತೆರಳೋ ಕಾರ್ಯಕ್ರಮ. ಜೊತೆಗೆ ವ್ಯಾಪಾರಿಗಳು ತಮ್ಮ ಮುಂದಿನ ವರ್ಷದ ವ್ಯಾಪಾರ ಸುಗಮವಾಗಲಿ ಎಂದು ಹಾರೈಸಿ ಪೂಜೆಗಳನ್ನ ನಡೆಸ್ತಾರೆ. ಮೂರನೇ ದಿನ ಕಡ್ಡಾಯವಾಗಿ ಎಲ್ಲೇ ಇದ್ದರೂ ತಮ್ಮ ತಮ್ಮ ಊರುಗಳಿಗೆ ತೆರಳಿ ಕುಟುಂಬ ಸಮೇತರಾಗಿ ಸವಿಯೂಟ ಸವಿಯುವ ಸಂಭ್ರಮದಲ್ಲಿ ತೊಡಗ್ತಾರೆ. ಚೀನಾದಂತ ದೇಶಗಳಲ್ಲಿ, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಉದ್ಯೋಗಿಗಳು, ಕೂಲಿ ಕಾರ್ಮಿಕರಿಗಾಗಿ ವಿಶೇಷ ಸಾರಿಗೆ ವ್ಯವಸ್ಥೆಗಳನ್ನ ಈ ಸಂದರ್ಭದಲ್ಲಿ ಮಾಡಲಾಗುತ್ತೆ.

‘ರಿಯೂನಿಯನ್ ಡಿನ್ನರ್ ‘ಎಂದು ಕರೆಯಲಾಗುವ ಈ ಹಬ್ಬದ ಊಟದಲ್ಲಿ ರೆಡ್ ಪ್ಯಾಕೆಟ್  ಗಳನ್ನು ಹಂಚಲಾಗತ್ತೆ. ಇದು ಕೆಂಪು ಬಣ್ಣವನ್ನು ಹೊಂದಿರುವ ಕವರಾಗಿದ್ದು, ಇದರಲ್ಲಿ ಹಣ, ಗಿಫ್ಟ್, ಹಣ್ಣುಗಳೊಂದಿಗೆ ಕುಟುಂಬದ ಸದಸ್ಯರಿಗೆ ಉಡುಗೊರೆಯಾಗಿ ನೀಡಲಾಗುತ್ತೆ. ವಿಶೇಷವೆಂದರೆ, ಹಣದ ನೋಟುಗಳು ಹೊಸತಾಗಿದ್ದು ಅದರಲ್ಲೂ ಬೆಸ ಸಂಖ್ಯೆಯಾಗಿರಬೇಕು. ಹಣ್ಣುಗಳಲ್ಲಿ ಕಿತ್ತಳೆ ಹಣ್ಣನ್ನ ನೀಡೋದು ಹಬ್ಬದ ವಿಶೇಷ. ಹೀಗಾಗಿಯೇ ಈ ಸಂದರ್ಭದಲ್ಲಿ ಮಾರುಕಟ್ಟೆ ತುಂಬಾ ಕೆಂಪು ಬಣ್ಣದ ಕವರುಗಳು, ತೂಗು ದೀಪಗಳು, ಕಿತ್ತಳೆ ಹಣ್ಣುಗಳು ರಾರಾಜಿಸುತ್ತಿರುತ್ತವೆ. ಇಂತಹ ಗಿಫ್ಟ್‌ಗಳನ್ನ ವಿತರಿಸುವಾಗ ಕೆಲವು ರೂಲ್ಸ್‌ಗಳು ಇವರಲ್ಲಿವೆ. ಕಿರಿಯರು ಯಾವುದೇ ಉಡುಗೊರೆಗಳನ್ನ ನೀಡುವ ಹಾಗಿಲ್ಲ. ಹಿರಿಯರು ಹಾಗೂ ಮದುವೆಯಾದವರು ಮಾತ್ರ ಕಿರಿಯರಿಗೆ ಗಿಫ್ಟ್‌ಗಳನ್ನ ಕೊಡ್ತಾರೆ.

 

ಒಂದೆಡೆ ಚೀನಿಯರ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಸಾಗ್ತಾ ಇದ್ರೆ, ಮತ್ತೊಂದೆಡೆ ಯುವಕರು-ಯುವತಿಯರು ಟ್ರಡೀಶನಲ್ ಡ್ರೆಸ್ ತೊಟ್ಟು ಸಂಭ್ರಮದಲ್ಲಿ ತೇಲಾಡ್ತಾರೆ. ಈ ಸಂದರ್ಭದಲ್ಲಿ ಪಟಾಕಿಗಳ ಸದ್ದು ಮಾಮೂಲು. ನಿರಂತರವಾಗಿ ಒಂದಾದ ಮೇಲೆ ಒಂದು ಎಂಬಂತೆ ಆಚರಣೆಯಲ್ಲಿ ಬ್ಯುಸಿಯಾಗುತ್ತೆ ಚೀನಿ ಸಮುದಾಯ. ಹೀಗೆ 15 ದಿನಗಳಿಂದ ನಡಿಯೋ ಈ ಸಂಭ್ರಮಕ್ಕೆ, ಕೊನೆಯ ದಿನ ಲ್ಯಾಂಟ್ರನ್ ಹಬ್ಬದೊಂದಿಗೆ ತೆರೆಬೀಳುತ್ತೆ.

8 Responses

 1. ಬಬಿತಾ says:

  ವಿದ್ಯಾ ಬರಹ ತುಂಬಾ ಚೆನ್ನಾಗಿದೆ. ನಿನ್ನ ಪ್ರಯತ್ನ ಹೀಗೆಯೇ ಮುಂದುವರಿಯಲಿ. ಅಕ್ಷರ ರೂಪದಲ್ಲಿ ಸಿಂಗಾಪುರ ನೋಡುವ ಅವಕಾಶ ನಮ್ಮದಾಗಲಿ. ಗುಡ್ ಲಕ್.

 2. Vishwanadh says:

  Very good article. Informative & interesting to know about Chinese new year.

 3. Abhishek R B says:

  wow… very nice… waiting for next episode

 4. Mahipalreddy Munnur says:

  ಬರಹದ ಮೂಲಕ ಕರ್ನಾಟಕವನ್ನು ಮತ್ತು ಚೀನಿ ನೆಲವನ್ನು ಮೇಳೈಸಿರುವ ವಿದ್ಯಾ ಅವರಿಗೆ ಧನ್ಯವಾದ.

Leave a Reply

%d bloggers like this: