ಗೌರಿ ಲಂಕೇಶ್ ಹತ್ಯೆಯ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ತಲುಪುವಂತೆ ಕಾಣುತ್ತಿದೆ

ನಾ ದಿವಾಕರ

ಗೌರಿ ಲಂಕೇಶ್ ಹತ್ಯೆಯ ಪ್ರಕರಣ ಕೊನೆಗೂ ತಾರ್ಕಿಕ ಅಂತ್ಯ ತಲುಪುವಂತೆ ಕಾಣುತ್ತಿದೆ.

ಆದರೆ ನ್ಯಾಯ ಕುರುಡು, ನಮ್ಮ ದೇಶದ ನ್ಯಾಯ ವ್ಯವಸ್ಥೆಗೆ ಕೆಲವೊಮ್ಮೆ ಜಾಣಕುರುಡು. ಆರೋಪಿಗಳನ್ನು ಬಂಧಿಸಿ ವರುಷಗಳು ಕಳೆದರೂ ನ್ಯಾಯ ವಿತರಣೆಯಾಗುವುದಿಲ್ಲ. ಆರೋಪಿಗಳ ಹೇಳಿಕೆಗಳೂ ಬದಲಾಗುತ್ತಲೇ ಹೋಗುತ್ತವೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಹತ್ಯೆಗಳ ಸುತ್ತಲಿನ ಸುದ್ದಿ ಕೆಲ ಸಮಯ ಕಳೆದ ನಂತರ ಕೇವಲ ಗುಮಾನಿಗಳಂತೆ ಕಾಣುತ್ತವೆ.

ತಾನೇ ತಪ್ಪು ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡ ಅಪರಾಧಿಯೂ ಸಹ ಪೊಲೀಸರ ಚಿತ್ರಹಿಂಸೆಗೆ ಬೆದರಿ ಹೇಳಿಕೆ ನೀಡಿದೆ ಎಂದು ತಪ್ಪಿಸಿಕೊಳ್ಳುತ್ತಾನೆ. ಪೊಲೀಸ್ ವ್ಯವಸ್ಥೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಸಂಪೂರ್ಣ ವಿಶ್ವಾಸಾರ್ಹತೆ ಇಲ್ಲದಿರುವುದರಿಂದ ಇಂತಹ ತಿರುಚಿದ ಹೇಳಿಕೆಗಳಿಗೆ ಮಾನ್ಯತೆ ದೊರೆಯುತ್ತದೆ.

ಯಾವುದೇ ಗಂಭೀರ ಅಪರಾಧ ನಡೆದಾಗ ಶೀಘ್ರಗತಿಯಲ್ಲಿ ನ್ಯಾಯ ವಿತರಣೆಯಾಗದೆ ಹೋದರೆ ಇಂತಹ ಅಪಭ್ರಂಶಗಳು ಸಂಭವಿಸುವುದು ಸಹಜ. ಪನ್ಸಾರೆ, ಧಬೋಲ್ಕರ್, ಕಲಬುರ್ಗಿ ಮತ್ತು ಗೌರಿ ಲಂಕೇಶ್ ಇಂತಹ ಒಂದು ವ್ಯವಸ್ಥೆಯ ನಿರ್ಲಕ್ಷ್ಯದಿಂದ ಜೀವ ಕಳೆದುಕೊಂಡಿರುವುದೇ ಅಲ್ಲದೆ ತಮ್ಮ ಸಾವಿನ ಹಿಂದಿನ ಕಾಣದ ಕೈಗಳನ್ನೂ ಕಾಣದಂತಾಗಿದ್ದಾರೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಈಗಾಗಲೇ ಹಲವರು ಬಂಧನಕ್ಕೊಳಗಾಗಿದ್ದಾರೆ. ಇತ್ತೀಚೆಗೆ ಬಂಧನಕ್ಕೊಳಗಾದ ಪರಶುರಾಮ ವಾಗ್ಮೋರೆ, ಗೌರಿ ಲಂಕೇಶ್ ಅವರಿಗೆ ತಾನೇ ಗುಂಡಿಟ್ಟು ಕೊಂದಿದ್ದಾಗಿ ಹೇಳಿಕೆ ನೀಡಿದ್ದಾನೆ. ಆದರೆ ಇದು ಅರ್ಧಸತ್ಯ ಮಾತ್ರ. ಒಂದು ವೇಳೆ ವಾಗ್ಮೋರೆ ಅಪರಾಧಿ ಎಂದು ಸಾಬೀತಾಗಿ ನೇಣುಗಂಬ ಏರಿದರೂ ಕುರುಡು ನ್ಯಾಯ ದೇವತೆ ಪರಿತಪಿಸುತ್ತಲೇ ಇರುತ್ತಾಳೆ.

ಏಕೆಂದರೆ ವಾಗ್ಮೋರೆ ನಿಮಿತ್ತ ಮಾತ್ರ. ಮುಂಬೈ ದಾಳಿಯ ಪ್ರಕರಣದಲ್ಲಿ ಕಸಬ್ ಹೇಗೆ ಒಂದು ಪಗಡೆಯ ದಾಳದಂತೆ ಬಲಿಯಾದನೋ ಹಾಗೆಯೇ ವಾಗ್ಮೋರೆ ಸಹ ಬಲಿಯಾಗುತ್ತಾನೆ. ಕೆಲವರಿಗೆ ವಾಗ್ಮೋರೆ ಹುತಾತ್ಮನಾಗುತ್ತಾನೆ, ಕೆಲವರಿಗೆ ಮಹಾತ್ಮನೂ ಆಗುತ್ತಾನೆ. ಇನ್ನು ಕೆಲವರಿಗೆ ಮನುಕುಲದ ಶತ್ರುವಾಗಿ ಕಾಣುತ್ತಾನೆ. ಆದರೆ ವಾಗ್ಮೋರೆಯ ಸಂತತಿ ಕೊನೆಗೊಳ್ಳುವುದಿಲ್ಲ. ಏಕೆಂದರೆ ಈ ಸಂತತಿಗೆ, ಈ ಪೀಳಿಗೆಗೆ ಒಂದು ಇತಿಹಾಸವೇ ಇದೆ.

ಅಧಿಕಾರ ರಾಜಕಾರಣ, ಮತಾಂಧತೆ, ಧರ್ಮ ಮತ್ತು ರಾಜಕಾರಣದ ಮಿಲನ, ಶ್ರೇಷ್ಠತೆಯ ಪಾರಮ್ಯ, ದ್ವೇಷ ರಾಜಕಾರಣದ ಹೊಸ ಮಜಲುಗಳು ಈ ಎಲ್ಲ ವಿದ್ಯಮಾನಗಳಿಗೆ ಶಿಲಾನ್ಯಾಸ ಮಾಡಿದ ಇಟ್ಟಿಗೆ ಹೊತ್ತ ಕೈಗಳೆಲ್ಲವೂ ರಕ್ತಸಿಕ್ತವಾಗಲಿಲ್ಲ ಅಥವಾ ರಕ್ತ ಸಿಕ್ತವಾದ ಕೈಗಳು ಇಟ್ಟಿಗೆಯನ್ನು ಮುಟ್ಟಿ ನೋಡಲೂ ಇಲ್ಲ. ಆದರೆ ಈ ಇಟ್ಟಿಗೆಗಳು ಕಟ್ಟಿದ ಗೋರಿಗಳಿಂದ ವಾಗ್ಮೋರೆಯಂತಹ ವಿಕೃತ ಮನಸುಗಳು ಜನ್ಮ ತಾಳಿರುವುದು ಸತ್ಯ.

ಅಪರಾಧಿಗಳಾಗಿ ಯಾರೂ ಜನಿಸುವುದಿಲ್ಲ ಆದರೆ ಸಮಾಜವೇ ಅಪರಾಧಿಗಳನ್ನು ಸೃಷ್ಟಿಸುತ್ತದೆ ಎಂಬ ನಾಣ್ಣುಡಿ ಇಲ್ಲಿ ಉಲ್ಲೇಖನಾರ್ಹ. ವಾಗ್ಮೋರೆ ಹಂತಕನಾಗಲೆಂದೇ ಜನಿಸಿದವನಲ್ಲ. ಸಾರ್ವಜನಿಕ ಜೀವನದಲ್ಲಿ ಹಂತಕರ ಒಂದು ಸಂತತಿಯೇ ಬೆಳೆದುಬಂದಿದ್ದನ್ನು 1980ರ ನಂತರದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ವಾಗ್ಮೋರೆಯಂತಹ ಸಾವಿರಾರು ಯುವ ಮನಸುಗಳು ಕಂಡುಬರುತ್ತವೆ.

ಕಾಶ್ಮೀರ, ಪಂಜಾಬ್ ಮತ್ತು ಅಯೋಧ್ಯೆಯ ಹಾದಿ ಬೀದಿಗಳಲ್ಲಿ ವಾಗ್ಮೋರೆಯ ಸಂತತಿಯನ್ನು ಬೆಳೆಸಿದ ಬೀಜಗಳ ಬಿತ್ತನೆಯಾದದ್ದನ್ನು ಅಂದಿಗಿಂತಲೂ ಇಂತು ಹೆಚ್ಚು ಗಂಭೀರವಾಗಿ ಕಾಣಬೇಕಿದೆ. ಏಕೆಂದರೆ ಸಮಾಜದ ಶೋಷಕ ವರ್ಗದ ಮಸಲತ್ತುಗಳಿಗೆ ಶೋಷಿತ ಸಮುದಾಯದ ಯುವಕರು ಬಲಿಯಾಗತೊಡಗಿದ್ದು ಈ ಬೀಜಗಳು ಬಲಿತು, ಮೊಳೆತು ಬೆಳೆದು ನಿಂತ ನಂತರವೇ. 1960-70ರ ದಶಕದ ವರ್ಗ ಸಂಘರ್ಷದ ಪರಾಕಾಷ್ಠೆಯ ದಿನಗಳನ್ನು ಕಂಡು ತಮ್ಮ ಅಧಿಪತ್ಯ ರಾಜಕಾರಣಕ್ಕೆ ಸಂಚಕಾರ ಬರಬಹುದೆಂಬ ಭೀತಿಯಿಂದ ತರಗುಟ್ಟಿದ ಆಳುವ ವರ್ಗಗಳಿಗೆ ಈ ಬೀಜ ಬಿತ್ತನೆಯ ಕಾರ್ಯ ಅಗತ್ಯವೂ ಆಗಿತ್ತು.

1980ಕ್ಕೂ ಮುನ್ನ ಭಾರತದ ಸಾಮಾಜಿಕ ಜೀವನದಲ್ಲಿ, ರಾಜಕಾರಣದಲ್ಲಿ ಮತ್ತು ಸಾಂಸ್ಕøತಿಕ ವಲಯದಲ್ಲಿ ರಾಗದ್ವೇಷಗಳಿಗೆ ಆಸ್ಪದವಿರಲಿಲ್ಲ ಎಂದು ಹೇಳಲಾಗದು. ಆದರೆ ಈ ದ್ವೇಷಾಸೂಯೆಗೆ ಸಾಂಸ್ಥಿಕ ಸ್ವರೂಪ ಇರಲಿಲ್ಲ. ಶ್ರೇಣೀಕೃತ ಜಾತಿ ವ್ಯವಸ್ಥೆಯ ಸಹಜ ಪ್ರಕ್ರಿಯೆಯಂತೆ ಸಮಾಜದಲ್ಲಿ ಬೇರೂರಿದ್ದ ತಾರತಮ್ಯ, ದೌರ್ಜನ್ಯ ಮತ್ತು ದ್ವೇಷಾಸೂಯೆಗಳ ಸೂಕ್ಷ್ಮ ತರಂಗಗಳು ಸಮಾಜದ ಅಂತಃಸತ್ವವನ್ನೇ ಕೊಂದು ಹಾಕುತ್ತಿದ್ದ ಸಂದರ್ಭದಲ್ಲೂ ಇಂದು ಕಾಣಲಾಗುತ್ತಿರುವ ದ್ವೇಷ ರಾಜಕಾರಣದ ಛಾಯೆ ಕಾಣುತ್ತಿರಲಿಲ್ಲ.

ಆದರೆ 1960-70ರ ದಶಕದಲ್ಲಿ ದೇಶದಲ್ಲಿ ತಲೆದೋರಿದ ವರ್ಗ ಸಂಘರ್ಷದ ನೆಲೆಗಳು ಸ್ಥಾಪಿತ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಧ್ಯತೆಗಳು ನಿಚ್ಚಳವಾಗಿದ್ದವು. 1960ರ ದಶಕದಲ್ಲಿ ಭಾರತ ಯುದ್ಧ ಭೀತಿಯಿಂದ ಕಂಗೆಟ್ಟಿದ್ದ ಸಂದರ್ಭದಲ್ಲಿ ಉಳುಮೆ ಮಾಡುವ ಕೈಗಳಿಗೆ ಕೋವಿ ನೀಡುವ ಮೂಲಕ ದೇಶ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುವ ತಾತ್ವಿಕತೆ ಸಮಾಜದಲ್ಲಿ ಸೃಷ್ಟಿಯಾಗಿತ್ತು. ಇದೇ ಸಂದರ್ಭದಲ್ಲೇ ಉಳುಮೆ ಮಾಡುವ ಕರಗಳು, ದುಡಿಮೆ ಮಾಡುವ ಕರಗಳು ಆಳುವ ವರ್ಗಗಳ ವಿರುದ್ಧವೂ ಕೋವಿ ಹಿಡಿಯಲು ಸಿದ್ಧರಾಗಿದ್ದನ್ನು ನಿರ್ಲಕ್ಷಿಸಲಾಗುವುದಿಲ್ಲ.

ಈ ಸಂದರ್ಭದಲ್ಲಿ ಸೃಷ್ಟಿಸಲಾದ ಒಂದು ರಾಜಕೀಯ ಪರಿಭಾಷೆ ಮತ್ತು ಸಮಾಜೋ ರಾಜಕೀಯ ಪರಿಸರ ಭಾರತದ ಭೂಪಟವನ್ನೇ ಬದಲಿಸಿದ್ದನ್ನು ಗುರುತಿಸಬಹುದು. ಕೋವಿ ಹಿಡಿಯಲು ಮುಂದಾದ ದುಡಿವ ಕೈಗಳು ತಮ್ಮತ್ತಲೇ ಚಾಚುತ್ತಿರುವುದನ್ನು ಗಮನಿಸಿದ ಆಳುವ ವರ್ಗಗಳಿಗೆ ಈ ಕೈಗಳನ್ನು ಕಟ್ಟಿಹಾಕುವ ಸುಲಭ ಅಸ್ತ್ರಗಳು ಅಗತ್ಯವಾದವು. ಇಂತಹ ಕೈಗಳನ್ನು ನಿಯಂತ್ರಿಸುವ ಮನಸುಗಳನ್ನು ನಿಗ್ರಹಿಸುವ ನೂತನ ಅಸ್ತ್ರಗಳು ಸೃಷ್ಟಿಯಾದವು. ತುಂಡು ಭೂಮಿಗಾಗಿ ರಕ್ತ ಸುರಿಸಲು ಸಿದ್ಧರಾಗಿದ್ದ ಯುವ ಚೇತನವನ್ನು ನಿಷ್ಕ್ರಿಯಗೊಳಿಸಲು ಭೂಮಿಯ ಚಿತ್ರಣವನ್ನೇ ಬದಲಿಸಲಾಯಿತು.

ದುಡಿಯುವ ಜನ ಸಮುದಾಯಗಳ ಕರ್ಮಭೂಮಿ ಪವಿತ್ರ ಧರ್ಮ ಭೂಮಿಯಾಗಿ ಪರಿವರ್ತನೆಯಾಯಿತು. ಮನುಜ ಸಂಬಂಧಗಳು ಅಸ್ಮಿತೆಗಳ ಹಂಗಿಗೆ ಸಿಲುಕಿದವು. ಮನುಷ್ಯರ ನಡುವಿನ ಸಂವಹನ ಪ್ರಕ್ರಿಯೆಯನ್ನು ಸುಪ್ತ ಪ್ರಜ್ಞೆ ನಿಯಂತ್ರಿಸಲಾರಂಭಿಸಿತ್ತು. ಈ ಪ್ರಜ್ಞೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕುಲುಮೆ ಮಾಡುವ ಕಾರ್ಯಾಗಾರಗಳು ಸಿದ್ಧವಾದವು. ಒಮ್ಮೆಲೇ ವರ್ಗದ ನೆಲೆಯಲ್ಲಿ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುತ್ತಿದ್ದ ದುಡಿಯುವ ವರ್ಗಗಳಿಗೆ ಧರ್ಮದ ನೆಲೆ ಆಶ್ರಯ ಒದಗಿಸಿತ್ತು. ಹಾಗಾಗಿಯೇ ಕೆಂಬಾವುಟದಡಿ ಜೀವನ ಕಂಡುಕೊಂಡ ಶ್ರಮಜೀವಿಗಳು ಭಗವದ್ವಜದ ಅಡಿಯಲ್ಲಿ ಬದುಕು ಕಂಡುಕೊಳ್ಳಲಾರಂಭಿಸಿದರು.

“ ನಾವು ” ಅವರಲ್ಲ “ ಅವರು ” ನಾವಾಗಲು ಸಾಧ್ಯವಿಲ್ಲ ಎಂಬ ಬೀಜ ಮಂತ್ರವನ್ನು ವ್ಯವಸ್ಥಿತವಾಗಿ ಬಿತ್ತಲಾರಂಭಿಸಿದ ಧರ್ಮ ರಕ್ಷಕರು “ ನಮ್ಮ ” ನಡುವೆಯೇ “ ಅನ್ಯರ ” ಸೃಷ್ಟಿಮಾಡಲಾರಂಭಿಸಿದರು. ದೇಶಕ್ಕಾಗಿ ದುಡಿಯುವ ಶ್ರಮಜೀವಿಗಳ ಬೆವರು ದೇಶಭಕ್ತಿಯ ಹೆಸರಿನಲ್ಲಿ ಧರ್ಮ ರಕ್ಷಣೆಗಾಗಿ ಶ್ರಮಿಸುವವರ ಬಂಡವಾಳವಾಯಿತು. ಇದರ ಒಂದು ವ್ಯವಸ್ಥಿತ ಛಾಯೆಯನ್ನು ಸೋಮನಾಥ ರಥಯಾತ್ರೆಯಲ್ಲಿ ಕಾಣಬಹುದು. ನಂತರದ ಬೆಳವಣಿಗೆಗಳು ಇತಿಹಾಸದಲ್ಲಿ ದಾಖಲಾದ ಸತ್ಯಗಳೇ ಆಗಿವೆ. ಇದು ಕೇವಲ ಒಂದು ಧರ್ಮ ಅಥವಾ ಮತಧರ್ಮದ ಪ್ರಶ್ನೆಯಲ್ಲ. ದುಡಿಯುವ ವರ್ಗಗಳ ಐಕಮತ್ಯ ಮತ್ತು ಐಕ್ಯತೆಯನ್ನು ಧ್ವಂಸ ಮಾಡಲು ಎಲ್ಲ ಧರ್ಮಗಳೂ ಸಮಾನ ನೆಲೆಯಲ್ಲಿ ಶ್ರಮಿಸಿರುವುದನ್ನು ಇತಿಹಾಸದಲ್ಲೂ ಕಾಣಬಹುದು, ಸಮಕಾಲೀನ ಭಾರತದಲ್ಲೂ ಕಾಣಬಹುದು. ಕಾಶ್ಮೀರ ಮತ್ತು ಪಂಜಾಬ್ ಈ ದುರಂತಗಳಿಗೆ ಎಂದೆಂದಿಗೂ ಸಾಕ್ಷಿಯಾಗಿ ನಿಲ್ಲುತ್ತವೆ.

ಬಹುಶಃ ಇಡೀ ಭಾರತವೇ ಸಾಕ್ಷಿಯಾಗಿ ನಿಲ್ಲುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಮುಂತಾದ ಮತಧರ್ಮಗಳನ್ನು ಪ್ರತಿನಿಧಿಸುವ ಮತಾಂಧರ ವಿಕೃತ ಅಸ್ಮಿತೆಗಳ ಚೌಕಟ್ಟಿನಲ್ಲಿ ಸಿಲುಕಿ ತಮ್ಮ ಮಾನವ ಸಹಜ ಗುಣಗಳನ್ನೇ ಕಳೆದುಕೊಳ್ಳುತ್ತಿರುವ ಒಂದು ಪೀಳಿಗೆ ಇಂದು ದೇಶಾದ್ಯಂತ ವ್ಯವಸ್ಥಿತವಾಗಿ ಬೇರೂರುತ್ತಿರುವ ದ್ವೇಷ ರಾಜಕಾರಣಕ್ಕೆ ಫಲವತ್ತಾದ ಭೂಮಿಕೆಯಾಗಿ ಪರಿಣಮಿಸುತ್ತಿರುವುದನ್ನು ಈ ಸಂದರ್ಭದಲ್ಲಿ ಅಲ್ಲಗಳೆಯಲಾಗುವುದಿಲ್ಲ.

ಇಂತಹ ಭೂಮಿಕೆಯಿಂದ ಸೃಜಿಸಿದ ಜೀವಗಳೇ ಇಂದು ವೈಚಾರಿಕ ಜಗತ್ತಿಗೆ ಜೀವ ಕಂಟಕರಾಗಿ ಪರಿಣಮಿಸುತ್ತಿದ್ದಾರೆ. ವಾಗ್ಮೋರೆಯಂತಹ ಯುವಕರು ವಿಕೃತ ಮನಸ್ಸನ್ನೇ ಹೊತ್ತು ಜನಿಸಿದವರಲ್ಲ. ಕಳೆದ ಮೂರು ದಶಕಗಳ ಸಮಾಜೋ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಇಂತಹ ವಿಕೃತ ಮನಸ್ಸುಗಳು ಅವ್ಯಾಹತವಾಗಿ ಸೃಷ್ಟಿಯಾಗುತ್ತಿವೆ. ಶಾಂತಿ, ಸೌಹಾರ್ದತೆ ಮತ್ತು ಮಾನವ ಪ್ರೀತಿ ಈ ಮೂರೂ ಉದಾತ್ತ ಚಿಂತನೆಗಳ ಸ್ಥಾನವನ್ನು ದ್ವೇಷ, ಮತಾಂಧತೆ ಮತ್ತು ಅಮಾನವೀಯ ಹಿಂಸೆ ಎಂಬ ಮೂರು ವಿಕೃತ ಚಿಂತನೆಗಳು ಆಕ್ರಮಿಸಿಕೊಳ್ಳುತ್ತಿವೆ.

ಈ ಪರಿಸರದಲ್ಲೇ ಸಾವನ್ನು ಸಂಭ್ರಮಿಸುವ ಒಂದು ಪರಂಪರೆಯನ್ನೂ ನಮ್ಮ ಸಮಾಜ ಹುಟ್ಟುಹಾಕಿದೆ. ಹಿಂಸೆಯನ್ನು ವೈಭವೀಕರಿಸುವ ಸಂಸ್ಕøತಿಯನ್ನು ಹುಟ್ಟುಹಾಕಿದೆ. ಹತ್ಯೆಯನ್ನು ಸ್ವೀಕೃತವಾಗಿಸುವ ಸಂಪ್ರದಾಯವನ್ನು ಹುಟ್ಟುಹಾಕಿದೆ. ಇಂತಹ ವಿಕೃತಿಗಳ ಜಗತ್ತಿನಲ್ಲಿ ತಮ್ಮ ಜ್ಞಾನ ಶಾಖೆಗಳನ್ನು ವಿಸ್ತರಿಸಿಕೊಳ್ಳುವ ಯುವ ಮನಸುಗಳು ಸಹಜವಾಗಿಯೇ ತಮ್ಮತನ್ನವನ್ನು ಕಳೆದುಕೊಳ್ಳುತ್ತವೆ. ಮತ್ತಾವುದೋ ಅಗೋಚರ ಶಕ್ತಿಗೆ ಬಲಿಯಾಗುತ್ತವೆ. ತಮ್ಮ ಸ್ವಪ್ರಜ್ಞೆ ಮತ್ತು ಸುಪ್ರಜ್ಞೆಯನ್ನು ಕಳೆದುಕೊಂಡು ಜೀವಂತ ಶವಗಳಂತೆ ಅಣತಿಯನ್ನು ಪಾಲಿಸುತ್ತಿರುತ್ತವೆ.

ಈ ರೀತಿಯ ಪ್ರಜ್ಞಾಹೀನ ಮನಸುಗಳನ್ನು, ವಿಕೃತ ಜೀವಿಗಳನ್ನು ಜಾತಿ ದೌರ್ಜನ್ಯದ ಸಂದರ್ಭದಲ್ಲಿ ಕಾಣುತ್ತೇವೆ, ನದಿ ವಿವಾದಗಳ ಸಂದರ್ಭಗಳಲ್ಲಿ ಕಾಣುತ್ತೇವೆ, ಕಾಶ್ಮೀರದ ಕಣಿವೆಗಳಲ್ಲಿ ಕಾಣುತ್ತೇವೆ, ಹಿಂದೂ ಮುಸ್ಲಿಂ ಕೋಮು ಗಲಭೆಗಳಲ್ಲಿ ಕಾಣುತ್ತೇವೆ. ಊನ, ದಾದ್ರಿ, ಉನ್ನಾವೋ, ಕಥುವಾಗಳಲ್ಲಿ ಕಾಣುತ್ತೇವೆ. ಗೌರಿ, ಕಲಬುರ್ಗಿ, ಪನ್ಸಾರೆ, ಧಬೋಲ್ಕರ್ ಮತ್ತು ಕಾಶ್ಮೀರದ ಪತ್ರಕರ್ತ ಬುಖಾರಿ ಅವರ ಹತ್ಯೆಯ ಸಂದರ್ಭದಲ್ಲೂ ಕಾಣುತ್ತೇವೆ.

ಈ ವಿಕೃತ ಮನಸುಗಳಿಗೆ ಶಿಕ್ಷೆಯಾದಾಗ ಸಹಜವಾಗಿಯೇ ಪ್ರಜ್ಞಾವಂತ ಸಮಾಜ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಕಸಬ್ ನೇಣುಗಂಬ ಏರಿದಾಗ ಮುಂಬೈ ದಾಳಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಸಂಭ್ರಮಿಸುವವರಿಗೆ, ಕಸಬ್‍ನನ್ನು ಸೃಷ್ಟಿಸಿದ ಅಗೋಚರ ಶಕ್ತಿಗಳು ವಿಶ್ವದಾದ್ಯಂತ ಇಂದಿಗೂ ಆತ್ಮಗಳಿಗೆ ಹಿಂಸಾತ್ಮಕ ವಿದಾಯ ಹೇಳುತ್ತಲೇ ಇದ್ದಾರೆ ಎಂಬ ವಾಸ್ತವದ ಅರಿವು ಇಲ್ಲದೆ ಹೋದರೆ ವಾಗ್ಮೋರೆಯಂತಹ ವಿಕೃತಿಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಇರುತ್ತದೆ. ಏಕೆಂದರೆ ವಾಗ್ಮೋರೆಯನ್ನು ಸೃಷ್ಟಿಸಿದ ಅಗೋಚರ ಶಕ್ತಿಗಳೂ ಪ್ರಬಲವಾಗುತ್ತಲೇ ಹೋಗುತ್ತವೆ.

ಇಲ್ಲಿ ಪ್ರಶ್ನೆ ಇರುವುದು ಅಪರಾಧಿ ಮತ್ತು ಶಿಕ್ಷೆಯನ್ನು ಕುರಿತಾದದ್ದಲ್ಲ. ಅಪರಾಧ ಮತ್ತು ಪ್ರಜ್ಞೆಯನ್ನು ಕುರಿತಾದದ್ದು. ಉತ್ತರದ ಕಾಶ್ಮೀರದ ಯುವ ಮುಸಲ್ಮಾನರಿಂದ ಹಿಡಿದು ದಕ್ಷಿಣದ ವಾಗ್ಮೋರೆಯವರೆಗೆ ಯುವ ಮನಸುಗಳಲ್ಲಿ ಮತಾಂಧತೆಯ ವಿಷ ಬೀಜಗಳನ್ನು ನೆಡುವ ಮೂಲಕ ಮನುಕುಲದ ವಿನಾಶಕ್ಕೆ ಮುನ್ನುಡಿ ಬರೆಯುತ್ತಿರುವವರು ಎಲ್ಲಿದ್ದಾರೆ ? ಈ ವಿಷ ಬೀಜಗಳನ್ನು ಬಿತ್ತಲು ವ್ಯವಸ್ಥಿತ ಸಂಚು ನಡೆಸಿದ ವಾಗ್ಮಿಗಳು, ಕಲಾಶಿಲ್ಪಿಗಳು, ಶಿಲ್ಪಕಾರರು, ರಥಯಾತ್ರಿಗಳು ಏಕೆ ತೆಪ್ಪಗಿದ್ದಾರೆ ?

ಸಾವಿರಾರು ಅಮಾಯಕ ಜೀವಗಳು ದ್ವೇಷ ರಾಜಕಾರಣದ ಬಲಿಪೀಠದಲ್ಲಿ ಅಂತ್ಯ ಕಾಣುತ್ತಿವೆ. ಸಾಂಸ್ಕøತಿಕ ಶ್ರೇಷ್ಠತೆ ಮತ್ತು ಪಾರಮ್ಯದ ವಿಷವರ್ತುಲದಲ್ಲಿ ಸಿಲುಕಿ ಅವಸಾನ ಹೊಂದುತ್ತಿವೆ. ಈ ಜೀವಗಳ ರಕ್ಷಣೆಗಾಗಿ ಶ್ರಮಿಸುವ ವೈಚಾರಿಕ , ಮಾನವೀಯ ದನಿಗಳನ್ನೂ ಶಾಶ್ವತವಾಗಿ ಸಮಾಧಿ ಮಾಡಲಾಗುತ್ತಿದೆ. ಒಬ್ಬ ಚಿಂತಕ ಅಥವಾ ಒಂದು ಚಿಂತನೆ ಒಂದು ಧರ್ಮದ ಅಸ್ತಿತ್ವಕ್ಕೇ ಅಪಾಯ ಉಂಟುಮಾಡುತ್ತದೆ ಎಂಬ ಭ್ರಮೆಯಲ್ಲಿ ಅಂತಹ ಚಿಂತಕರನ್ನು ಅಂತ್ಯಗೊಳಿಸುವ ಆಲೋಚನೆ ಹಂತಕರನ್ನು ಸೃಷ್ಟಿಸುತ್ತದೆಯೇ ಹೊರತು ಚಿಂತನೆಯನ್ನು ಅಂತ್ಯಗೊಳಿಸುವುದಿಲ್ಲ.

ಚಿಂತಕರನ್ನು ಹತ್ಯೆ ಮಾಡುವ ಹಂತಕರು ಕಣ್ಣಿಗೆ ಗೋಚರಿಸುತ್ತಾರೆ ಆದರೆ ಚಿಂತನೆಯನ್ನು ಹತ್ಯೆ ಮಾಡುವ ಹಂತಕ ವ್ಯವಸ್ಥೆ ಗೋಚರಿಸುವುದಿಲ್ಲ. ಇದು ಸುಪ್ತವಾಗಿಯೇ ಕಾರ್ಯ ನಿರ್ವಹಿಸುತ್ತದೆ. ಈ ಹಂತಕ ವ್ಯವಸ್ಥೆಯನ್ನು ಕೊನೆಗೊಳಿಸುವುದು ಪ್ರಜ್ಞಾವಂತ, ಮಾನವೀಯ ಪ್ರಜ್ಞೆಯುಳ್ಳವರ ಆದ್ಯತೆಯಾಗಬೇಕಿದೆ.