ಇದ್ದದ್ದು ಹಾಗೂ ಇಲ್ಲದ್ದು..

ಎಚ್.ಎಸ್.ಮಧು

ದಿನದ ಜಾಮಕ್ಕೆ ಹೊತ್ತಿ ಉರಿದು
ತಾನೇ ಸುಟ್ಟು ಬೆಳಕಾದ ನೇಸರನು..
ಮಹಲಿನ ಗಾಜಿನ ಕಿಟಕಿಗಳ ಪರದೆ ಸರಿದಿದ್ದರೂ
ಗಾಜೊಡೆದು ಒಳಬರಲಾರದೇ
ಕಿರಣಗಳ ತೂರಿಬಿಟ್ಟು
ರೋಸಿ ಮಲಗಿದ್ದ ಹಾಲುಬಿಳಿ ಲಲನೆಯ
ಕೆನ್ನೆ ನೇವರಿಸಿ ಮೈ ಸವರಿ ಎಬ್ಬಿಸುವಾಗ..

 

ಮಹಲಿನ ಗುಡಿಯಲ್ಲಿ ನೈವೇದ್ಯ ತುಪ್ಪದಾರತಿ
ತೀರ್ಥ ಪ್ರಸಾದ ಉಪಾಯನಗಳು
ಬೆಳ್ಳಿ ತಟ್ಟೆಯಲಿ ನಗುತ್ತಿವೆ…
ಅವನು ತಿಂದನೋ ಬಿಟ್ಟನೋ
ಪ್ರತಿಷ್ಠೆಯ ಕುರುಹಾಗಿ ಮೆರೆಯುತಿವೆ
ಹೋಮದ ಹೊಗೆಗಂಟಿ ಸ್ವರ್ಗ ತಲುಪುವ
ರಾಶಿ ರಾಶಿ ರೇಷಿಮೆಯ ನುಣುಪು
ಹವಿಸ್ಸಿನಲಿ ಬೆಂದ ನಾಣ್ಯಗಳು
ಮರಳಿ ಪೂಜೆಗೆ ದೇವರಾಗುತ್ತವೆ

ಕಿರಣಗಳ ಸ್ಪರ್ಶವಿಲ್ಲದ ಗೋಡೆಗಳ ಮೇಲೆ
ಹರಿದಾಡುವ ಬಣ್ಣಬಣ್ಣದ ಹುಳಗಳ ಪಕ್ಕ
ನೆಮ್ಮದಿಯ ನಿದ್ದೆ…
ಹರಿದ ಬಟ್ಟೆಗೆ ದಿನವೂ ಹಚ್ಚುವ ತೇಪೆ
ಪ್ರೀತಿಯಂತೂ ಎಂದೂ ಹರಿಯದಂತೆ ಕಾಪಾಡಿದೆ
ತುಪ್ಪದ ವಾಸನೆಯೂ ಬಡಿಯದ ಮೂಗುಗಳು
ಗಂಜಿಗೇ ತುಪ್ಪ ಆರೋಪಿಸಿ ಸುಖಿಸುತಿವೆ

 

ದೇವರ ಒದ್ದೆ ಪಟದ ಮುಂದೆ ಕೈಮುಗಿದು
ಸೋರುವ ಸೂರಿಗೆ ಮಮತೆಯ ತೇಪೆ ಹಾಕಲು ಕಸರತ್ತು
ಅಂಗಳ ನೆರಳಾದರೆ
ಯಾರೋ ಏನೋ ತಂದರೆಂಬ ಹವಣಿಕೆ
ಛೇ, ಹೋಮದ ಹೊಗೆಗೂ ಹಟ್ಟಿಯ ನಗೆಗೂ
ಯಾಕಾದರೂ ತುಪ್ಪದ ಘಮವಿದೆಯೋ..?
ರೇಷಿಮೆ ಕಾಣದ ಮೈಗೆ ಹರಿದ ಕಂಚುಕವಸ್ತ್ರ
ಆಪಾದಮಸ್ತಕ ಸುಂದರಿಯ ಮೈಮುಚ್ಚಿ
ಸೂರ್ಯನನೂ ನಾಚಿಸಿ ಮೋಡದ ಹಿಂದೆ
ಅಡಗುವಂತೆ ಮಾಡಿದೆ.

ಸೂರ್ಯನಿಗೂ ಗೊತ್ತು,
ಹವಿಸ್ಸಿನ ನಾಣ್ಯ ಅಂಗಡಿಯವ
ಒಪ್ಪಲಾರ, ಅಲ್ಲವಾ..?

Leave a Reply