ತುರ್ತು ಪರಿಸ್ಥಿತಿ ಮರೆಯಲಾದೀತೆ??

ಮರೆಯಲಾದೀತೆ??

ರಾಘವನ್ ಚಕ್ರವರ್ತಿ

ಕನ್ನಡದಲ್ಲೂ ತುರ್ತು ಪರಿಸ್ಥಿತಿ ಕುರಿತಾದ ಸಾಹಿತ್ಯ ವಿಪುಲವಲ್ಲದಿದ್ದರೂ ಸಾಕಷ್ಟಿದೆ.

ರಾಷ್ಟ್ರೋತ್ಥಾನ ಪ್ರಕಟಿಸಿದ ’ಭುಗಿಲು’, ಆ ಕಾಲಘಟ್ಟದ ಒಟ್ಟಾರೆ ಘಟನೆಗಳ, ಭೀಷಣತೆ-ಕ್ರೌರ್ಯಗಳನ್ನು ಪಟ್ಟಿಮಾಡುತ್ತಾ ಸಾಗುತ್ತದೆ. ಗೆಳೆಯ, ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ ಮಲಯಾಳಂ ಮೂಲದ ತುರ್ತುಪರಿಸ್ಥಿತಿ ಸಂದರ್ಭದ ಕರಾಳತೆ ತೋರುವ ’ಪುತ್ರಶೋಕ’ ಕೃತಿಯನ್ನು ಕನ್ನಡಕ್ಕೆ ತಂದಿದ್ದಾರೆ.

ಇಂಜಿನೀರಿಂಗ್ ಓದುತ್ತಿದ್ದ, ಓದು-ಗಾಯನಗಳೆರಡರಲ್ಲೂ ಮುಂದಿದ್ದ ರಾಜನ್, ಈಚರ ವೇರಿಯರ್ ಎಂಬ ಮೇಷ್ಟ್ರ ಮಗ. ಈತನನ್ನು ಕೇರಳದ ಪೋಲೀಸರು ನಿಷ್ಕಾರುಣವಾಗಿ ಬಂಧಿಸಿ ಎಳೆದೊಯ್ಯುತ್ತಾರೆ. ’ವಿಚಾರಣೆ’ಯ ಸಂದರ್ಭದಲ್ಲಿನ ಮಿತಿಮೀರಿದ ಹಿಂಸಾಚಾರದಲ್ಲಿ ಆತ ಸಾಯುತ್ತಾನೆ. ರಾಜನ್ ಶವವನ್ನು ಪೋಲೀಸರು ಸದ್ದಿಲ್ಲದೇ ತಮಿಳುನಾಡಿನ ಗಡಿ ಬಳಿ ಮೂಳೆ ಕೂಡ ಸಿಗದಂತೆ (೫೦ಕೆ.ಜಿ.ಸಕ್ಕರೆ ಸುರಿದು) ಸುಟ್ಟುಹಾಕಿಬಿಡುತ್ತಾರೆ.

ನ್ಯಾಯಕ್ಕಾಗಿ ಇಳಿವಯಸ್ಸಿನ ವೇರಿಯರ್ ಮೇಷ್ಟ್ರ ಅವಿರತ, ಅವಿಚ್ಛಿನ್ನ ಹೋರಾಟ, ಅವರ ಹತಾಶೆ, ಅಸಹಾಯಕತೆ, ಅನುಭವಿಸುವ ಅಪಮಾನ, ಇದೆಲ್ಲವನ್ನೂ ಮೆಟ್ಟಿನಿಂತ ಅವರ ಛಲ-ಸಂಯಮ ಗಳನ್ನೆಲ್ಲಾ ಜಗದೀಶರ ಅನುವಾದ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ.

ಅಚ್ಯುತಮೆನನ್ ತರದ ’ಉಗ್ರ’ ಕಮ್ಮ್ಯುನಿಸ್ಟರೂ ಕೂಡಾ ಅಧಿಕಾರ ಬಂದಾಗ ತೋರಿಸುವ ಠೇಂಕಾರ-ಸೌಜನ್ಯಹೀನತೆ, ಕರುಣಾಕರನ್-ಆಂಟೋನಿ ತರದವರ ಸೋಗಲಾಡಿತನ, ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪೋಲೀಸ್ ಇಲಾಖೆಯಲ್ಲಿ ತಾಂಡವವಾಡುತ್ತಿದ್ದ ಅನಾಗರಿಕತೆ-ಪೈಶಾಚಿಕತೆಗಳೆಲ್ಲಾ ವೇರಿಯರ್ ಮೇಷ್ಟ್ರ ಸ್ವಗತದಲ್ಲಿ ತಣ್ಣಗೆ-ಅಷ್ಟೇ ನಿಷ್ಟುರವಾಗಿ ಮೂಡಿಬಂದಿರುವ ಪರಿ..ಜಗದೀಶ್ ಅನುವಾದವನ್ನೊಮ್ಮೆ ಓದಿಯೇ ಮನನ ಮಾಡಿಕೊಳ್ಳಬೇಕು.

ವೇರಿಯರ್ ತರದ ಬಡ ಮೇಷ್ಟ್ರು ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಎಷ್ಟು ಪ್ರಸ್ತುತರಾಗಿಬಿಡುತ್ತಾರೆಂಬುದು ಗಮನಾರ್ಹವಾಗಿದೆ. ಜಗದೀಶ್ ರ ಈ ಅನುವಾದಿತ ಕೃತಿ ತುರ್ತುಪರಿಸ್ಥಿತಿಯ ಕುರಿತಾದ ಜೀವಂತ ಬರಹಗಳಲ್ಲೊಂದು.

ಪ್ರಾಧ್ಯಾಪಕಿ ಡಾ.ರಶ್ಮಿ ಯವರ ಪಿ.ಎಚ್.ಡಿ. ಪ್ರಬಂಧ ’ಕರ್ನಾಟಕದಲ್ಲಿ ತುರ್ತುಪರಿಸ್ಥಿತಿ – ಪ್ರಭಾವ ಮತ್ತು ಪರಿಣಾಮಗಳು’ ಇತ್ತೀಚೆಗೆ ಅಭಿನವ ಪ್ರಕಟಿಸಿರುವ ಸಂಗ್ರಹಯೋಗ್ಯ ಕೃತಿ. ರಶ್ಮಿಯವರ ಶ್ರಮ ಅವರ ಅಧ್ಯಯನ ಪ್ರಶಂಸಾರ್ಹ. ತುರ್ತುಪರಿಸ್ಥಿತಿಯ ಪೂರ್ವ-ಉತ್ತರ ಕಾಲಘಟ್ಟಗಳಲ್ಲಿ ಕಂಡುಬರುವ ಹಲವು ಆಸಕ್ತಿಕರ ಘಟನೆಗಳ, ರಾಜಕೀಯ ಪಲ್ಲಟಗಳ ಬಗ್ಗೆ ರಶ್ಮಿಯವರ ಕೃತಿ ಬೆಳಕು ಚೆಲ್ಲುತ್ತದೆ.

ಇತಿಹಾಸ ಸೇರಿದ ಈ ಕರಾಳ ದಿನಗಳ ಬಗ್ಗೆ ಇನ್ನಷ್ಟು ಮಾಹಿತಿಸಿಗಬಹುದೇನೋ ಎಂದು (ಬುದ್ಧಿವಂತ) ರಾಜಕಾರಣಿ ವಿಶ್ವನಾಥರ ’ಆಪತ್ ಸ್ಥಿತಿಯ ಆಲಾಪಗಳು’ ತಿರುವಿಹಾಕಿದಾಗ “ರಾಜಕೀಯವಲ್ಲದ ಅನಿಸಿಕೆಗಳು ಓದುಗರಿಗೆ ದಕ್ಕಲಿ ಎಂಬುದೇ ಆಶಯ” ಎಂದವರು ಪೂರ್ವಭಾವಿಯಾಗಿಯೆ ಒಪ್ಪಿಕೊಂಡಿರುವುದರಿಂದ ಹೆಚ್ಚಿನದನ್ನೇನೂ ನಿರೀಕ್ಷಿಸಲಾಗಲಿಲ್ಲ. ಇಡೀ ಪುಸ್ತಕ ಇಂದಿರಾರ ಇಪ್ಪತ್ತಂಶಗಳ ಕಾರ್ಯಕ್ರಮದ ಪ್ರಶಂಸೆ-ಪ್ರಚಾರಗಳಿಗಾಗಿ ಮೀಸಲಾದಂತಿದೆ.

ಅನಂತಮೂರ್ತಿಯವರ ’ಸುರಗಿ’ಯಲ್ಲಿ ಕೂಡಾ ತುರ್ತುಪರಿಸ್ಥಿತಿಯ ಬಗೆಗಿನ ಅಧ್ಯಾಯ ಕೊನೆ-ಕೊನೆಯಲ್ಲಿ ಬಸವಲಿಂಗಪ್ಪ ಸಾಲ್ ಬೆಲ್ಲೋ ಗಳಲ್ಲಿ ಕಳೆದುಹೋಗುತ್ತದೆ. ಪಕ್ಷನಿಷ್ಟೆ-ಇಂದಿರಾನಿಷ್ಟೆಗಳ ನಡುವೆ ಗೆರೆ ಎಳೆಯಲಾರದ ವಿಶ್ವನಾಥ್ ತರದವರ ಅಕ್ಷಮ್ಯ ಮುಗ್ಧತೆ, ಕರಾರುವಾಕ್ಕಾಗಿ ಪೋಸ್ಟ್ ಮಾರ್ಟೆಮ್ ಮಾಡಿಯೂ, ವರದಿ ನೀಡುವಾಗ ಯಾವುದೋ ದಾಕ್ಷಿಣ್ಯಕ್ಕೊಳಗಾಗಿ ಬಿಡುವ ಮೂರ್ತಿ ಮೇಷ್ಟ್ರ ತರದವರ ’ಪ್ರಬುದ್ಧ ಆತ್ಮವಂಚನೆ’ಗಳು ಕೂಡಾ ’ಇಂದಿರಾ’ ಎಂಬ ಪರಿಕಲ್ಪನೆಯನ್ನು ಸಾಕಷ್ಟು ಬಲಗೊಳಿಸಿತು ಎನಿಸುವುದಿಲ್ಲವೇ?

ಹಿರಿಯ ಪತ್ರಕರ್ತೆ ಕೂಮಿ ಕಪೂರ್ ರ “The Emergency, A Personal History”ಎಂಬ ಈ ಕೃತಿ ನಿರಾಭರಣ ಸುಂದರ. ಇಲ್ಲಿ ರೋಚಕತೆಯಾಗಲೀ, ಅವಹೇಳನವಾಗಲೀ ಇಲ್ಲ. ಹಾಗೆಂದು ಘಟನೆಗಳನ್ನು ದಾಖಲಿಸುವಾಗ ಯಾವುದೇ ಉದ್ವೇಗವಾಗಲೀ, ದಾಕ್ಷಿಣ್ಯಪರತೆಯಾಗಲೀ ಇಲ್ಲ.

ಬಿಪಿನ್ ಚಂದ್ರರ “In the name of Democracy (JP Movement and Emergency”, ಕುಲದೀಪ್ ನಯ್ಯರ್ ರ “Emergency Retold” ಕೃತಿಗಳಂತೆಯೇ ಓದಿಸಿಕೊಂಡುಹೋಗುವ ಗುಣವಿದೆ. ಕುಲದೀಪ್ ನಯ್ಯರ್ ರ ಸ್ಪಷ್ಟ ಒಳನೋಟವಾಗಲೀ ಖುಶವಂತಸಿಂಹರ ವ್ಯಂಗ್ಯ-ಕುಚೋದ್ಯವಾಗಲೀ ಇಲ್ಲಿ ಕಾಣದಿರಬಹುದು. ಆದರೆ ಪ್ರಾಮಾಣಿಕ ವರದಿಗಾರ್ತಿಯಾಗಿ ಕೂಮಿ ಗೆಲ್ಲುತ್ತಾರೆ.

ಕೂಮಿ ಕಪೂರ್ ರ ಸಂಗ್ರಹಯೋಗ್ಯ-ಅಧ್ಯಯನಯೋಗ್ಯ ಕೃತಿಯ ಬಗ್ಗೆ
ನನ್ನ ಅನಿಸಿಕೆಯನ್ನು ಕೆಳಗೆ ಹಂಚಿಕೊಂಡಿದ್ದೇನೆ.

June 26, 2016
===========

D.E.M O’Cracy, beloved husband of T Ruth, loving father of L.I.Bertie, brother of Faith, Hope and Justice, expired on June 26
(ತುರ್ತುಪರಿಸ್ಥಿತಿ ಹೇರಿದಾಗ ’ಟೈಮ್ಸ್ ಆಫ್ ಇಂಡಿಯಾ’ ದಲ್ಲಿ ಪ್ರಕಟವಾದ ಶ್ರದ್ಧಾಂಜಲಿ  🙂
====
೧೯೭೫ರ ಒಂದು ದಿನ. ಹೊಸೊರಿನ ಶಾಲೆಯಲ್ಲಿ ಓದುತ್ತಿದ್ದ ಸಮಯ. ಸಿನಿಮಾ ಆಗಲೀ, ರಾಜಕೀಯವಾಗಲೀ, ಇನ್ನು ಸರಿಯಾಗಿ ಅರ್ಥವಾಗದ ಕಾಲ. ಎಸ್.ಎಲ್.ಎನ್ ಟೆಂಟ್ ಗೆ ಬರುತ್ತಿದ್ದ ’ಎದುರುಲೇನಿ ಮನಿಷಿ’, ’ನಿಪ್ಪುಲಾಂಟಿ ಮನಿಷಿ’ ತರದ ಕಿತ್ತೋದ ಚಿತ್ರಗಳನ್ನೋ, ರಾಜಕಮಲ್ ಟೆಂಟ್ ನಲ್ಲಿ ಅಪರೂಪಕ್ಕೊಮ್ಮೆ ಬರುತ್ತಿದ್ದ ಅಣ್ಣಾವ್ರ ಚಿತ್ರಗಳನ್ನೋ ನೋಡಿ ಖುಷಿ ಪಡುತ್ತಿದ್ದ ಕಾಲ.

ಒಂದುದಿನ ಗೌರೀಬಿದನೂರಿಗೆ ಹೊರಟಿದ್ದೆವು. ವಾತಾವರಣ ದಿನನಿತ್ಯದಂತೆ ಇರಲಿಲ್ಲ. ಅಲ್ಲಲ್ಲೇ ಪೋಲೀಸರು. ಯಾರೋ ದೊಡ್ಡ ಮನುಷ್ಯರ ಸಭೆ ಇದೆಯೇನೋ ಎಂದುಕೊಂಡೆವು. ನಾವು ಪ್ರಯಾಣಿಸುತ್ತಿದ್ದ ಬಸ್ ಕಾದಲವೇಣಿ ಎಂಬಲ್ಲಿ ನಿಂತಾಗ ಅಜ್ಜಿ ಯೊಬ್ಬರು ಬಹು ನಿಧಾನವಾಗಿ, ಅತ್ತಿತ್ತ ನೋಡುತ್ತಾ ಇಳಿಯಲಾರಂಭಿಸಿದರು. ಅವಸರಿಸಿದ ಕ್ಲೀನರ್, “ಅಮ್ಮೋ ಅಜ್ಜಿ, ಇಳ್ಯಮ್ಮಾ ಬೇಗಾ…ನೋಡೋದ್ ನೋಡು..ಒಹೋ…ನೀನೇನ್ ಇಂದಿರಾಗಾಂಧಿನಾ…” ಎಂದುಬಿಟ್ಟ. ಎಲ್ಲಿದ್ದರೋ ಖಾಕಿವಸ್ತ್ರಧಾರಿಗಳು. ಕ್ಲೀನರ್ ಮಹಾಶಯನನ್ನು ಎತ್ತಾಕಿಕೊಂಡು ಹೊರಟರು. ನಮಗೆ ಅರ್ಥವಾಗಲಿಲ್ಲ. ಬಹುಶಃ ದೇಶದ ಪ್ರಧಾನಿಯನ್ನು ಹೆಸರಿಡಿದು ಕರೆದದ್ದು ತಪ್ಪಿರಬಹುದು ಎಂಬ ಭಾವ. ಘಟನೆ ಮರೆತುಹೋಯಿತು.

ಪತ್ರಿಕೆಗಳಲ್ಲಿ ಆಗಾಗ ಜೆ.ಪಿ, ಅದ್ವಾನಿ ಇತ್ಯಾದಿ ಹೆಸರುಗಳು ಬಂದು ಹೋಗುತ್ತಿದ್ದವು. ಅವರಾರಿರಬಹುದೆಂಬ ಕುತೂಹಲವೇನೂ ಇರಲಿಲ್ಲ. ೭೮ ರ ಬೇಸಿಗೆ ರಜೆಯ ಸಂದರ್ಭ. ಮಾವ ’ಭುಗಿಲು’ ಎಂಬ ಪುಸ್ತಕ ಕೊಂಡಿದ್ದರು. ಪುಟಗಳನ್ನು ತಿರುವಿ ಹಾಕಿದೆ. ಓದುವ ಮನಸ್ಸಾಯಿತು. ಓದುತ್ತಾ ಅರ್ಥವಾಗಲಾರಂಭಿಸಿತು. ಭಾರತದಲ್ಲಿ ೭೫ರ ಸಮಯದಲ್ಲಿ ’ಆಂತರಿಕ ತುರ್ತು-ಪರಿಸ್ಥಿತಿ’ ಎಂಬುದು ಇತ್ತು. ವಾಕ್ಸ್ವಾತಂತ್ರ್ಯ ವಿರಲಿಲ್ಲ. ಯಾರೂ ’ಹೆಚ್ಚು-ಕಡಿಮೆ’ ಮಾತಾಡುವಂತಿರಲಿಲ್ಲ… ಇತ್ಯಾದಿ..ಒಂದೆರಡು ಬಾರಿಯಾದರೂ ’ಭುಗಿಲು’ ಓದಿದ್ದಾಯಿತು.ಒಂದೆರಡು ವರ್ಷದ ಹಿಂದೆ ಪೋಲೀಸರ ಪಾಲಾದ ಕ್ಲೀನರ್ ಬಗ್ಗೆ ಮರುಕವಾಯಿತು. ಆತ ನಂತರ ಏನಾದನೋ ತಿಳಿಯಲಿಲ್ಲ.

ಲಂಕೇಶ್ ತಮ್ಮ ’ಪತ್ರಿಕೆ’ ಆರಂಭವಾದ ಹೊಸತರಲ್ಲಿ, ಜಾರ್ಜ್, ಸ್ನೇಹಲತಾ ರೆಡ್ಡಿ ಬಗ್ಗೆ ಬಹಳ ಆರ್ದ್ರವಾಗಿ ಬರೆಯುತ್ತಿದ್ದರು. ಆ ದಿನಗಳಿಂದಲೇ ಈ ತುರ್ತು-ಪರಿಸ್ಥಿತಿ ಬಹಳವಾಗಿ ಕಾಡಿದೆ. ಕಾಡುತ್ತಲೇ ಇದೆ. ಕಳೆದ ವಾರ ’ಸಪ್ನ’ ದಲ್ಲಿ ಹಿರಿಯ ಪತ್ರಕರ್ತೆ ಕೂಮಿ ಕಪೂರ್ ಬರೆದ ’The Emergency, A Personal History’ ಪುಸ್ತಕ ಕಂಡಾಗ ತಡಮಾಡಲಿಲ್ಲ.

ವಾಜಪಾಯಿಯಂತಹ ವಾಜಪಾಯಿಯವರಿಂದಲೇ ’ದುರ್ಗೆ’ ಎಂದು ಕರೆಸಿಕೊಂಡ ಇಂದಿರಾ ಎಂಬ ದುರ್ಗೆ, ಅಧಿಕಾರಕ್ಕಾಗಿ ಗ್ರಾಮದೇವತೆಯ ಮಟ್ಟಕ್ಕಿಳಿದ ಇತಿಹಾಸದ ಈ ಕಪ್ಪು ಘಟನೆಯನ್ನು ಕೂಮಿ ತಮ್ಮ ಪತ್ರಕರ್ತರ ಭಾಷೆಯಲ್ಲಿ ತಣ್ಣಗೆ ಒಂದು ವರದಿಯಂತೆ ದಾಖಲಿಸುತ್ತಾ ಹೋಗಿದ್ದಾರೆ. ನೆಹರು-ನೀರಧ್ ಚೌಧರಿ ಗಳ ಉತ್ಕೃಷ್ಟ ಭಾಷೆ ಇಲ್ಲಿಲ್ಲ. ಭಾಷೆ ಸರಳವಾಗಿದೆ.

ಕೂಮಿಯವರ ಈ ಕೃತಿ, “Darkness at Dawn” ಎಂಬ ಅಧ್ಯಾಯದೊಂದಿಗೆ ಆರಂಭವಾಗುತ್ತದೆ. ಹಿನ್ನಲೆಯಲ್ಲಿ ಅಲಹಾಬಾದ್ ಕೋರ್ಟಿನಲ್ಲಿ ನ್ಯಾಯಮೂರ್ತಿ ಜಗ್ ಮೋಹನ್ ಲಾಲ್ ಸಿನ್ಹ ಅವರು, ೧೯೭೧ರಲ್ಲಿ ನಡೆದ ಚುನಾವಣಾ ಅತಿಕ್ರಮಗಳಿಗಾಗಿ ಇಂದಿರಾರರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಚ್ಯುತಿಗೊಳಿಸಿದ ಘಟನೆ ನಡೆದಿದೆ.

ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ ಇಂದಿರಾರ ಅರ್ಜಿ ಪರಿಶೀಲಿಸಿದ ನ್ಯಾಯಾಧೀಶ ವಿ.ಆರ್.ಕೆ (ಕೃಷ್ಣ ಅಯ್ಯರ್) “ಪಾರ್ಲಿಮೆಂಟ್ ಗೆ ಬಂದು ಹೋಗಿ..ಅಷ್ಟೆ..ನಿಮಗೆ ವೋಟುಮಾಡುವ ಅಧಿಕಾರ ಮಾತ್ರ ಕೋಡೊದಿಲ್ಲ” ಎಂದು ಖಡಕ್ ಆಗಿ ಹೇಳಿ ಇಂದಿರಾರ ಅಧಿಕಾರದಲ್ಲೇ ಉಳಿಯುವ ಕನಸಿಗೆ ತಣ್ಣೀರೆರಚಿಬಿಟ್ಟಿದ್ದಾರೆ. ರಾತ್ರೋರಾತ್ರಿ ಹಲವು ಗಣ್ಯರ-ನಾಯಕರ ಬಂಧನಗಳಾಗಿವೆ. ಕೂಮಿ ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿ ಇಡೀ ದಿನ ವಿದ್ಯುತ್ ಕಡಿತವಾಗಿ ಪತ್ರಿಕೆಯ ಪ್ರಕಟಣೆ ದುಃಸ್ಸಾಧ್ಯವಾಗಿದೆ. ನಂತರ ಕೂಮಿಯವರಾದಿಯಾಗಿ ಎಲ್ಲ ಪತ್ರಕರ್ತರಿಗೂ ಮೂಲಭೂತ ಹಾಕ್ಕುಗಳನ್ನು ಕಿತ್ತುಕೊಂಡ ತುರ್ತುಪರಿಸ್ಥಿತಿಯ ಘೋಷಣೆಯಾಗಿದ್ದು ತಿಳಿಯಲಾಂಭಿಸುತ್ತದೆ.

೭೫ರ ಜನವರಿಯಿಂದಲೇ ಸಂಕಷ್ಟಗಳ ಸರಮಾಲೆಗೆ ಒಡ್ಡಿಕೊಂಡಿದ್ದ ಇಂದಿರಾರಿಗೆ ಪ.ಬಂಗಾಲದ ಮುಖ್ಯಮಂತ್ರಿ ಸಿದ್ದಾರ್ಥ ಶಂಕರ ರೇ, ’ಯಾರಿಗೂ ಮಾತನಾಡಲಾಗಂತಹ’ ಪರಿಸ್ಥಿತಿ ತರುವ ಆಲೋಚನೆ ಹರಿಬಿಟ್ಟಿರುತ್ತಾರೆ. ಇಂದಿರಾ ಗಮನ ಕೊಟ್ಟಿರುವುದಿಲ್ಲ. ರೇ, ಕೇಂಬ್ರಿಡ್ಜ್ ನಲ್ಲಿ ಇಂದಿರಾರ ಸಹಪಾಠಿ. ಮೋತಿಲಾಲ್ ನೆಹರು ಹಾಗೂ ರೇ ಯ ತಂದೆ ಸಿ.ಆರ್.ದಾಸ್ ಪರಮ ಮಿತ್ರರು. ಹೀಗಾಗಿ ರೇ ಗೆ ಇಂದಿರಾರ ಬಳಿ ಬಹಳ ಸಲುಗೆ. ಕಲ್ಕತ್ತೆ ಗಿಂತ ಹೆಚ್ಚಾಗಿ ರೇ ದೆಹಲಿಯಲ್ಲೇ ಇರುತ್ತಿದ್ದರು. ಇಂದಿರಾ ತಮಗೊದಗಿದ ಈ ಕ್ಲಿಷ್ಟ ಸಂದರ್ಭದಲ್ಲಿ ಏನಾದರೂ ಮಾಡಿಯೇ ತೀರಬೇಕೆಂದು ಸಂಕಲ್ಪಿಸಿದಾಗ ರೇ ಬರೆದ ಪತ್ರ ಗಮನಕ್ಕೆ ಬರುತ್ತದೆ. ಆಕೆ ತಡಮಾಡುವುದಿಲ್ಲ. ಇಂದಿರಾರ ಸುಪುತ್ರ ಸಂಜಯ್, ಅವರ ಪರಮಾಪ್ತ ಆರ್.ಕೆ.ಧವನ್, ರೇ ಸೇರಿ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಹೇಗೆ ಸಂಚಕಾರ ತಂದರು ಎಂಬುದನ್ನು ಕೂಮಿ ವಿಷದವಾಗಿ ಬರೆಯುತ್ತಾರೆ.

ಇಂದಿರಾರ ಖಾಸಗಿ ಕಾರ್ಯದರ್ಶಿ ಯಾಗಿದ್ದ ಧವನ್. ಇಂದಿರಾ ಪರವಾಗಿ ನಿರ್ದೇಶನ ಮಾಡುವ ಮಟ್ಟಕ್ಕೆ ಬೆಳೆದಿದ್ದು ಸಂಜಯ್ ರಿಂದ. ಜಗ್ ಮೋಹನ್, ನವೀನ್ ಚಾವ್ಲ, ಕೃಷ್ಣ ಚಂದ್, ಬರೂವ, ಬನ್ಸಿಲಾಲ್ ತರದವರನ್ನು ತಮ್ಮ ಒಡ್ಡೋಲಗ ಸೇರಿಸಿಕೊಂಡ ಸಂಜಯ್, ದೆಹಲಿಯಿಂದ ಇಡೀ ದೇಶವನ್ನು ಅಕ್ಷರಶಃ ಆಳಿದರು. ಇಂದಿರಾ ಮಂತ್ರಿಮಂಡಲದಲ್ಲಿ ಗೃಹಸಚಿವರಾಗಿದ್ದ ಬ್ರಹ್ಮಾನಂದ ರೆಡ್ಡಿ ಯವರಿಗೆ ಕೂಡಾ ತುರ್ತುಪರಿಸ್ಥಿತಿ ಹೇರುತ್ತಿರುವ ವಿಚಾರ ತಿಳಿಸುವುದಿಲ್ಲ. ಆದರೆ ಗೃಹ ಖಾತೆಯ ರಾಜ್ಯ ಮಂತ್ರಿ ಓಮ್ ಮೆಹ್ತ ಎಂಬ ಅಪ್ಪಟ ಪುಢಾರಿಗೆ ಮಾತ್ರ ತಿಳಿದಿರುತ್ತದೆ. ಆ ದಿನಗಳಲ್ಲಿ ’ಹೋಂ’ ಖಾತೆಯನ್ನು ’ಓಮ್’ ಖಾತೆಯೆಂದೇ ಬಣ್ಣಿಸಲಾಗುತ್ತಿರುತ್ತದೆ. ಬ್ರಹ್ಮಾನಂದ ರೆಡ್ಡಿ ನೆಪಮಾತ್ರಕ್ಕೆ ಗೃಹಸಚಿವರಾಗಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಓಂ ಮೆಹ್ತಾ, ಸಂಜಯ್-ಧವನ್ ರ ನಿಕಟವರ್ತಿ.

ತುರ್ತುಪರಿಸ್ಥಿತಿ ಹೇರುತ್ತಿರುವುದನ್ನು ಇಂದಿರಾ, ಧವನ್ ಮೂಲಕ ಬ್ರಹ್ಮಾನಂದ ರೆಡ್ಡಿಯವರಿಗೆ ತಿಳಿಸುತ್ತಾರೆ, ತಾವು ನೇರವಾಗಿ ಮಾತಾಡುವುದಿಲ್ಲ. !(ಇಂದಿರಾ ಯಾವ ಮುಖ್ಯಮಂತ್ರಿಗೂ ತುರ್ತುಪರಿಸ್ಥಿತಿಯ ಹೇರಿಕೆಯನ್ನು ನೇರವಾಗಿ ತಿಳಿಸುವುದಿಲ್ಲ. ಬದಲಾಗಿ ಧವನ್ ಗೆ ಆ ಕೆಲಸ ವಹಿಸುತ್ತಾರೆ.) ಮೂಲತಃ ಒಳ್ಳೆಯ ಮನುಷ್ಯರಾದ ಬ್ರಹ್ಮಾನಂದ ರೆಡ್ಡಿಯವರಿಗೆ ಇಂದಿರಾ ಮಾಡುತ್ತಿರುವುದು ತಪ್ಪು ಎಂದು ತಿಳಿಯುತ್ತದೆ. ಆದರೆ ಹೇಳುವ ಧೈರ್ಯವಿಲ್ಲ. ಧವನ್-ಬ್ರಹ್ಮಾನಂದ ರೆಡ್ಡಿ ಮುಖಾಂತರ ಪರಿಸ್ಥಿತಿಯನ್ನು ತಿಳಿಯುವ ’ಕಲ್ಲಹಳ್ಳಿಯ ಪೈಲ್ವಾನ’ ಅರಸರು ಯಾವುದೇ ಪ್ರತಿರೋಧ ತೋರಲಾಗುವುದಿಲ್ಲ. ಅರಸು-ಜಗಜೀವನರಾಮ್-ಬ್ರಹ್ಮಾನಂದ ರೆಡ್ಡಿ-ಕರಣ್ ಸಿಂಗ್-ವೆಂಗಲರಾವ್ ಇನ್ನೂ ನೈತಿಕತೆ ಉಳಿಸಿಕೊಂಡಿದ್ದವರು. ಖಾಸಗಿಯಾಗಿ ಇವರೆಲ್ಲಾ ಇಂದಿರಾರ ನಿರ್ಧಾರವನ್ನು ವಿರೋಧಿಸಿದರೂ ನೇರವಾಗಿ ಹೇಳುವ ಧೈರ್ಯ ಮಾಡದೇ ಹೋಗುತ್ತಾರೆ. ಮೋಹನ್ ಧಾರಿಯಾ ನೇರವಾಗಿ ವಿರೋಧಿಸಿ ಇಂದಿರಾ ಕೆಂಗಣ್ಣಿಗೆ ಪಾತ್ರರಾಗಿ ಗೇಟ್ ಪಾಸ್ ಪಡೆಯುತ್ತಾರೆ.

ಸಂಜಯ್-ಬನ್ಸಿಲಾಲ್ ಇಲ್ಲಿಂದ ಮುಂದೆ ಹೇಗೆ ಇಂದಿರಾರನ್ನು ಆಡಿಸಿದರು ಎಂಬುದನ್ನು ಕೂಮಿ ವಿವರಿಸುತ್ತಾ ಹೋಗುತ್ತಿದಂತೆ, ಓದುಗರಿಗೆ ಅಚ್ಚರಿಯಾಗುತ್ತದೆ. ಸಂಜಯ್ ತನಗಿಂತ ಹಿರಿಯರಾದ ರೇ ಯನ್ನು ಏಕವಚನದಲ್ಲಿ ಸಂಭೋಧಿಸುತ್ತ, ’ನೀನೊಬ್ಬ ” pseudo-communist. ನಿನಗೆಲ್ಲಿ ದೇಶ ನಡೆಸಲು ಬರುತ್ತೆ. ಮಾತಾಡದೇ ಸುಮ್ಮನಿರು’ ಎಂದು ತಾಯಿಯ ಎದುರೇ ಗದರಿಸುವ, ಅದಕ್ಕೆ ರೇ ’ ನಿನ್ನದಲ್ಲದ ಕೆಲಸಕ್ಕೆ ತಲೆ ಹಾಕಬೇಡ’ ಎಂದು ತಿರುಗೇಟು ನೀಡುವಂತಹ ಸನ್ನಿವೇಶಗಳು ಪ್ರಸ್ತಾಪವಾಗಿದೆ. ವಿರೋಧ ಪಕ್ಷಗಳವರ, ತಮ್ಮದೇ ಪಕ್ಷದ ಹಲವು ಸದಸ್ಯರ ಫೋನ್ ಕದ್ದಾಲಿಕೆಗಳು ಎಗ್ಗಿಲ್ಲದೇ ನಡೆಯುತ್ತವೆ. ದೆಹಲಿಯ ಎ.ಡಿ.ಎಮ್(ಅಡಿಷನಲ್ ಡಿವಿಷನಲ್ ಮ್ಯಾಜಿಸ್ಟ್ರೇಟ್) ಆಗಿದ್ದ ಸುಶೀಲ್ ಕುಮಾರ್ ರನ್ನು ತನ್ನ ಬಳಿಗೇ ಕರೆಸಿಕೊಳ್ಳುವ ದಾರ್ಷ್ಟ್ಯ ತೋರುವ ಧವನ್, ಪರಿಸ್ಥಿತಿಯನ್ನು ವಿವರಿಸಿ, ವಿರೋಧಿ ಬಣದ ದೊಡ್ಡ ಪಟ್ಟಿ ನೀಡಿ, ’ಇವರ ಮೇಲೆಲ್ಲ MISA ಕೇಸ್ ಜಡಿಯುವಂತೆ ಆಜ್ಞಾಪಿಸುತ್ತಾರೆ. (ಈ ಕಾನೂನ್ವಯ, ಬಂಧಿತರಿಗೆ ಜೈಲಿಗೆ ಹೋಗುವುದಲ್ಲದೇ ಬೇರೆ ಯಾವುದೇ ದಾರಿಯಿರುವುದಿಲ್ಲ. ಕೋರ್ಟಿನಲ್ಲಿ ಕೂಡಾ ಪ್ರಶ್ನಿಸುವಂತಿಲ್ಲ.).

ಸುಶೀಲ್ ವಿರೋಧಿಸುತ್ತಾರೆ. ಅಷ್ಟು ಜನರನ್ನು ಮೀಸಾ ಅನ್ವಯ ಬಂಧಿಸುವಂತಿಲ್ಲ. CrPC ಮೇಲೆ ಬಂಧಿಸಬಹುದು ಎಂದು ಸಲಹೆ ಕೊಡುತ್ತಾರೆ. ದೆಹಲಿಯ ಅಂದಿನ ಲೆ.ಗವರ್ನರ್ ಕೃಷ್ಣಚಂದ್ ’ಕಾನೂನು ಮಾತಾಡ್ ಬೇಡ..ಸುಮ್ಮನೆ ಇವರನ್ನೆಲ್ಲಾ ಮೀಸಾದಲ್ಲಿ ತಳ್ಳು’ ಎಂದು ಘರ್ಜಿಸುತ್ತಾರೆ. ಸುಶೀಲ್ ಕುಮಾರ್ ವಿರೋಧಿಸಿದಾಗ ಅವರಿಗೆ (ಪ್ರಾಣ) ಬೆದರಿಕೆ ಒಡ್ಡಲಾಗುತ್ತದೆ. ಸುಶೀಲ್ ಕುಮಾರ್ ಆದಿಯಾಗಿ ಎಲ್ಲ ದೆಹಲಿಯ ನ್ಯಾಯಾಧೀಶರುಗಳೂ ಅಸಹಾಯಕರಾಗುತ್ತಾರೆ.

ಧವನ್-ಕೃಷ್ಣಚಂದ್-ರ ಠೇಂಕಾರ, ರಾತ್ರಿಯಿಡೀ ನಿದ್ದೆಗೆಟ್ಟು ಮಿಸಾ ಹೇರಲು ನ್ಯಾಯಾಧೀಶರು ಪಡುವ ಪಾಡು, ಜೂನ್ ೨೫ರ ರಾತ್ರಿ ಹದ್ದಿನ ಕಣ್ಣಿನಿಂದ ಎಲ್ಲರನ್ನೂ ಹೊಂಚುಹಾಕಿ ನೋಡುತ್ತಿದ್ದ ಸಂಜಯ್, “in case of inadequate police info, fabricate evidence” ಎಂದು ಡಿ,ಎಮ್/ಎ.ಡಿ,ಏಮ್ ಗಳಿಗೆ ಘರ್ಜಿಸುವ ನವೀನ್ ಚಾವ್ಲಾ, ಮಾರನೆಯ ದಿನ ಮಧ್ಯಾಹ್ನದವರೆಗೂ ’ಏನೂ’ ತಿಳಿಯದೇ ಕಂಗಾಲಾದ ಗೃಹಖಾತೆಯ ಉನ್ನತ ಅಧಿಕಾರಿಗಳ ಬಗ್ಗೆ ಕೂಮಿ ತಣ್ಣಗೆ ಬರೆಯುತ್ತ ಹೋಗುವ ಪರಿ ಇಷ್ಟವಾಗುತ್ತದೆ. (ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಾದ ವೈಪರೀತ್ಯಗಳ ವಿಚಾರಣೆಗೆ ನೇಮಿಸಿದ ಷಾ ಆಯೋಗದ ಮುಂದೆ ವಿಚಾರಣೆಗೆ ಒಳಗಾಗುವ ಹಲವು ನ್ಯಾಯಾಧೀಶರು ಆ ದಿನಗಳ ತಮ್ಮ ಅಸಹಾಯಕತೆ ವಿವರಿಸುತ್ತಾ ಭಾವುಕರಾಗಿ ಕಣ್ಣೇರಿಟ್ಟಿದ್ದನ್ನು ಕೂಮಿ ನೆನಪಿಸಿಕೊಳ್ಳುತ್ತಾರೆ).

ಅದ್ವಾನಿ-ವಾಜಪಾಯಿ ಇಬ್ಬರೂ ಇನ್ನೂ ಹಲವರೊಂದಿಗೆ ಬೆಂಗಳೂರಿನಲ್ಲಿ ಬಂಧಿತರಾಗುತ್ತಾರೆ. ವಾಜಪಾಯಿ ವಿಪರೀತ ಜ್ವರ-ಹೊಟ್ಟೆನೋವಿನ ಸಮಸ್ಯೆಯಿಂದ ವಿಕ್ಟೋರಿಯಾ ಎಂಬ ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ. ವಿಕ್ಟೋರಿಯಾದ ಧನ್ವಂತರಿಗಳು ’ಇದು ಅಪೆಂಡಿಸೈಟಿಸ್’ ಎಂದು ನಿರ್ಧರಿಸಿ ಶಸ್ತ್ರಚಿಕಿತ್ಸೆ ಮಾಡಿಬಿಡುತ್ತಾರೆ. ವಾಜಪಾಯಿ ಆರೊಗ್ಯ ಮತ್ತಷ್ಟು ಹದಗೆಡುತ್ತದೆ. (ಆದರೆ ಅವರಿಗೆ ಅಪೆಂಡಿಸೈಟಿಸ್ ಇರಲಿಲ್ಲ ಎಂದು ನಂತರ ಖಾತ್ರಿಯಾಗುತ್ತದೆ).ಪರೋಲ್ ಮೇಲೆ ಅವರನ್ನು ದೆಹಲಿಯ AIIMSಗೆ ವರ್ಗಾಯಿಸಲಾಗುತ್ತದೆ. ನಂತರ ದೆಹಲಿಯಲ್ಲಿಯೇ ಬಹಳ ಕಾಲ ಗೃಹಬಂಧನದಲ್ಲಿ ಇಡಲಾಗುತ್ತದೆ. ಪೋಲೀಸರ ವಿಪರೀತ ಕಾಟದಿಂದ ತರಕಾರಿಯವರೂ ಅವರ ಮನೆ ಮುಂದೆ ಬರಲು ಹೆದರುತ್ತಾರೆ.

ಜೆ.ಪಿ-ಚರಣ್ ಸಿಂಗ್ ಆದಿಯಾಗಿ ಬಹುತೇಕ ಎಲ್ಲಾ ವಿರೋಧಿ ಪಡೆ (ಚಂದ್ರಶೇಖರ್ ಕಾಂಗ್ರೆಸ್ ನಲ್ಲಿದ್ದೂ ಜೆ.ಪಿ ವಿಶ್ವಾಸಿಯಾಗಿದ್ದರಿಂದ, ಬಂಧಿತರಾಗಿರುತ್ತಾರೆ.)ಯನ್ನೂ ಜೂನ್ ೨೫ರ ಮಧ್ಯರಾತ್ರಿಯಿಂದ ಬೆಳಗಿನಜಾವದ ಒಳಗೆ ಬಂಧಿಸಿ ದೆಹಲಿಯ ವಿವಿಧ ಜೈಲುಗಳಿಗೆ ಅಟ್ಟಲಾಗುತ್ತದೆ. ಕೂಮಿ ಕೆಲವು ಆಸಕ್ತಿದಾಯಕ ಅಂಕಿಅಂಶಗಳನ್ನು ಕೊಡುತ್ತಾರೆ. ತಿಹಾರ್ ಜೈಲಿನ ಸಾಮರ್ಥ್ಯ ವಿದ್ದಿದ್ದು ೧೨೭೩ ಖೈದಿಗಳಿಗೆ. ಆದರೆ ೨೬ ಜೂನ್೭೫ ರ ಮಧ್ಯರಾತ್ರಿ ಹೊತ್ತಿಗೆ ೨೬೬೯ ಖೈದಿಗಳನ್ನು ಬಂಧಿಸಿ ಜೈಲನ್ನು ತುಂಬುತ್ತಾರೆ. ಕೆಲವು ದಿನಗಳ ನಂತರ ಸಂಖೆ ೪೨೫೦ ಆಗುತ್ತದೆ. ಜೈಲಿನಲ್ಲಿ ಯಾವುದೇ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಉಸಿರುಗಟ್ಟಿಸುವಂತಹ ವಾತಾವರಣ. ಜೆ.ಪಿ ಸ್ವತಃ ನೋಡಿದಂತೆ ಅವರ ಮುಂದೆಯೇ ಮೂವರು ಖೈದಿಗಳು ಜೈಲಿನಲ್ಲೇ ಸಾವನ್ನಪ್ಪುತ್ತಾರೆ. ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆ.

ಉಪ್ಪರಿಗೆಯ ಮೇಲಿನ ಅಂತಃಪುರಗಳಲ್ಲಿ ರಾಣಿ ಬಾಳು ಬಾಳಿದ ವಿಜಯರಾಜೇ ಸಿಂಧ್ಯಾ ಜೈಲಿನ ಗೋಡೆಗಳ ಮಧ್ಯದ ಅಪಮಾನಕಾರಿ ಜೀವನಕ್ಕೆ ಹೊಂದಿಕೊಳ್ಳುತ್ತ ಸಹಜವಾಗಿ ಸಹಖೈದಿಗಳೊಂದಿಗೆ ಬೆರೆಯುತ್ತಿದ್ದದ್ದನ್ನು ಓದುವಾಗ ಅಚ್ಚರಿಯಾಗುತ್ತದೆ. ಇಂದಿರಾ ಷಡ್ಯಂತ್ರದಿಂದ ಜಯಪುರ ಹಾಗೂ ಗ್ವಾಲಿಯರ್ ನ ರಾಜ ಮನೆತನದವರೂ ಜೈಲುಪಾಲಾಗಬೇಕಾಗುತ್ತದೆ. ಭೂಗತ ಸಾಹಿತ್ಯ ಹಂಚಿ ತಲೆತಪ್ಪಿಸಿಕೊಂದಿದ್ದ ಓಮ್ ಪ್ರಕಾಶ್ ಕೊಹ್ಲಿ ಎಂಬ ಪೋಲಿಯೋ ಪೀಡಿತ ವ್ಯಕ್ತಿಯನ್ನು ೨೪ ಗಂಟೆಗಳ ಕಾಲ ಸತತ ನಿಲ್ಲಿಸಿಯೇ ವಿಚಾರಣೆ ಮಾಡಲಾಗುತ್ತದೆ. ವಿದ್ಯಾರ್ಥಿ ಮುಖಂಡರಿಗೆ ಎಂತಹಾ ಶಿಕ್ಷೆ ಕೊಡುತ್ತಿದ್ದರು ಎಂದು ಓದಿಯೇ ತಿಳಿದುಕೊಳ್ಳಬೇಕು.

ಇದರ ಮಧ್ಯೆ, ಆಕಾಶವಾಣಿ-ದೂದ ಗಳಲ್ಲಿ ತುರ್ತು-ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ಪ್ರಸಾರ ಮಾಡುತ್ತಿಲ್ಲ ಎಂದು ವಾರ್ತಾ ಸಚಿವ ಐ.ಕೆ. ಗುಜ್ರಾಲ್ ರನ್ನು ನಡುರಾತ್ರಿ ಮನೆಗೆ ಕರೆಸಿಕೊಂಡು ಸಂಜಯ್ ಗುಟುರು ಹಾಕುತ್ತಾರೆ. ಮಹಮದ್ ಯೂನಸ್ ಎಂಬ ಅಡ್ರೆಸ್ಸ್ ಇಲ್ಲದ ಗಿರಾಕಿ (ಸಂಜಯ್ ರ ಬಂಟ), “ಬಿ.ಬಿ.ಸಿ.ಯಲ್ಲಿ ಮಾರ್ಕ್ ಟುಲಿ ಎಮರ್ಜೆನ್ಸಿ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಿದ್ದಾನೆ” ಎಂದು ಹಾಹಾಕಾರ ಮಾಡುತ್ತಾ ’ಅವನನ್ನು ಮೊದಲು ಇಂಡಿಯಾದಿಂದ ಒದ್ದೋಡಿಸು” ಎಂದು ಆಜ್ಞಾಪಿಸುತ್ತಾನೆ. ಇಂದಿರಾ-ಸಂಜಯ್ ಇಬ್ಬರೂ ಗುಜ್ರಾಲ್ ರನ್ನು ಮನಸೋ ಇಚ್ಚೆ ಟೀಕಿಸುತ್ತಾರೆ. ತಪ್ಪು ಸುದ್ದಿ ಬಿತ್ತರ ಮಾಡಿದ್ದು ಪಾಕಿಸ್ತಾನ್ ರೇಡಿಯೋ, ಬಿ.ಬಿ.ಸಿ.ಅಲ್ಲ ಎಂದು ಮನವರಿಕೆ ಮಾಡಿಕೊಡುವಷ್ಟರಲ್ಲಿ ಗುಜ್ರಾಲ್ ಹೈರಾಣಾಗಿರುತ್ತಾರೆ.ಜೂನ್ ೨೬ ರ ರಾತ್ರಿ ಸಂಜಯ್ ಮಾತಿಗೆ ಎದುರಾಡದ ಇಂದಿರಾ, ಗುಜ್ರಾಲ್ ರನ್ನು ವಾರ್ತಾ ಸಚಿವ ಸ್ಥಾನದಿಂದ ಕಿತ್ತೊಗೆದು, ಸಂಜಯ್ ಭಕ್ತಾಗ್ರೇಸರ ವಿ.ಸಿ.ಶುಕ್ಲಾ ರನ್ನು ಅವರ ಜಾಗದಲ್ಲಿ ಪ್ರತಿಷ್ಟಾಪಿಸಿಬಿಡುತ್ತಾರೆ.

ಮಂತ್ರಿಯಾದ ಒಡನೆಯೇ ಕೆಲಸಕ್ಕಿಳಿಯುವ ಶುಕ್ಲಾ ರಾತ್ರಿಯೇ ಉನ್ನತಮಟ್ಟದ ಸಭೆ ಕರೆದು , ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ವನ್ನು ಮೂಲೆಗುಂಪು ಮಾಡಿ, ಪಿ.ಟಿ.ಐ/ಯು.ಎನ್.ಐ ಗಳನ್ನು ಹೇಗೆಲ್ಲಾ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕೆಂಬ ಬಗ್ಗೆ ಭೀಕರ ಚರ್ಚೆಗಳು ನಡೆಸುತ್ತಾರೆ. ಶುಕ್ಲಾ ತಾನೇ ಸ್ವತಃ ಆಕಾಶವಾಣಿಯ ಎಲ್ಲಾ ನಿಲಯ-ನಿರ್ದೇಶಕರಿಗಳಿಗೆ “ಎಲ್ಲ ವರದಿಗಾರ/ಪ್ರತಿನಿಧಿಗಳ ಹಿನ್ನಲೆಯನ್ನು ಕೂಲಂಕುಷವಾಗಿ ಗಮನಿಸಿ” ತಮಗೆ ವರದಿ ಸಲ್ಲಿಸುವಂತೆ ಆದೇಶಿಸುತ್ತಾರೆ. ಹಲವು ಮಾಧ್ಯಮ ಪ್ರತಿನಿಧಿಗಳಿಗೆ ಜೆ.ಪಿ-ಚಂದ್ರಶೇಖರ್-ವಾಜಪಾಯಿ ಯವರಲ್ಲಿ ಮೃದುಧೋರಣೆ ಯಿದ್ದುದರ ಬಗ್ಗೆ ಶುಕ್ಲಾ ತಿಳಿದು ಕೆಂಡವಾಗಿರುತ್ತಾರೆ. ಮಾಧ್ಯಮಗಳು ಬಿತ್ತರಿಸುವ ಸುದ್ದಿ ಹೇಗಿರಬೇಕು, ಯಾವ ಸುದ್ದಿ ಎಷ್ಟು ಹಾಕಬೇಕು ಎಂಬುದನ್ನೆಲ್ಲ ಸಂಜಯ್ ಪ್ರಣೀತ ದುಷ್ಟಕೂಟ ನಿರ್ಧರಿಸಲಾರಂಭಿಸುತ್ತದೆ. “ಶಂಕರ್ ಸ್ ವೀಕ್ಲಿ” ತರದ ಪತ್ರಿಕೆಗಳು ಮುಚ್ಚಿ ಹೋಗುತ್ತವೆ. ಪ್ರೆಸ್ಸ್ ಮಾಲೀಕರು ಹೆದರಿಕೆಯಿಂದ ಪತ್ರಿಕೆಗಳ ಮುದ್ರಣಮಾಡಲು ನಿರಾಕರಿಸುತ್ತಾರೆ. ಹಲವು ಪತ್ರಿಕೆಗಳು ಸೈಕ್ಲೊಸ್ಟೈಲ್ ಆಗಿ ಪ್ರಸಾರವಾಗುತ್ತದೆ.

ಧೈರ್ಯದಿಂದ ಪತ್ರಿಕೆ ನಡೆಸಿದವರು, ಇಂಡಿಯನ್ ಎಕ್ಸ್ ಪ್ರೆಸ್ಸ್, ಸ್ಟೇಟ್ಸ್ ಮನ್ ತರದ ಪತ್ರಿಕೆಗಳು. ವಿದೇಶಿ ಮಾಧ್ಯಮಗಳ ಮೇಲೂ ಶುಕ್ಲಾ ಸ್ವಾತಂತ್ರ್ಯಹರಣದ ಕಹಳೆ ಮೊಳಗಿಸುತ್ತಾರೆ. ಇದಕ್ಕೆ ಒಪ್ಪದ ಬಿ.ಬಿ.ಸಿ.ಯ ಮಾರ್ಕ್ ಟುಲಿ, ಲಂಡನ್ ನ ’ಟೈಮ್ಸ್’ ನ ಪೀಟರ್ ಹಾಜೆಲ್ ಹರ್ಸ್, ನ್ಯೂಸ್ ವೀಕ್ ನ ಲೋರೆನ್ ಜೆನ್ಕಿನ್ಸ್ ರಿಗೆ ೨೪ ಗಂಟೆಯೊಳಗೆ ದೇಶ ಬಿಡುವಂತೆ ಆದೇಶಿಸಲಾಗುತ್ತದೆ. ಅಬು ಅಬ್ರಹಾಂ ತರದವರು ವಿದೇಶೀ ಪತ್ರಿಕೆಗಳಲ್ಲಿ ತುರ್ತು-ಪರಿಸ್ಥಿತಿ ಸಮರ್ಥಿಸುವ, ಸ್ವದೇಶದ ಪತ್ರಿಕೆಗಳಲ್ಲಿ ವಿರೋಧಿಸುವ ವ್ಯಂಗ್ಯಚಿತ್ರಗಳನ್ನು ಬರೆಯುತ್ತಾರೆ. ಅವರ “Game of Emergency” ಎಂಬ ಪುಸ್ತಕ ೧೯೭೭ರಲ್ಲಿ ತುರ್ತು-ಪರಿಸ್ಥಿತಿ ಹಿಂತೆಗೆದುಕೊಂಡ ಮೇಲೆಯೇ ಪ್ರಕಟವಾಗುತ್ತದೆ. ಹದಗೆಡುತ್ತಿದ್ದ ಜೆ.ಪಿ. ಆರೋಗ್ಯದ ಬಗ್ಗೆ ಯಾವುದೇ ಸುದ್ದಿ ಪ್ರಕಟವಾಗದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ. ’ಕಿಸ್ಸಾ ಕುರ್ಸಿ ಕಾ’ ಚಿತ್ರದ ಎಲ್ಲಾ ರೀಲುಗಳನ್ನು ಅಗ್ನಿಗೆ ಅರ್ಪಿಸಲಾಗುತ್ತದೆ. ಎಂ.ಎಫ್.ಹುಸೇನ್, ಇಂದಿರಾರನ್ನು ಹುಲಿಯಮೇಲೆ ಕುಳಿತಿರುವ ದುರ್ಗೆಯಂತೆ ಚಿತ್ರಿಸಿ ಪ್ರಶಂಸಿಸಲ್ಪಡುತ್ತಾರೆ. ಕಾನೂನು ಸಚಿವ ಎಚ್.ಆರ್.ಗೋಖಲೆ ಇಂದಿರಾ ಸ್ಥಾನ-ಮಾನಗಳಿಗೆ ಚ್ಯುತಿ ಬರದಂತಹ ತಿದ್ದುಪಡಿಗಳನ್ನು ಸಂವಿಧಾನದಲ್ಲಿ ಮಾಡುತ್ತಾರೆ….

ಒಂದೇ ..ಎರಡೇ ದುರ್ಗೆಯ ಲೀಲೆಗಳು…ಇದರ ಮಧ್ಯೆ ಕೂಮಿಯ ಪತಿ ವೀರೆಂದ್ರ ಕಪೂರ್, ಅಂಬಿಕಾ ಸೋನಿ ಎಂಬ ’ಮರಿದುರ್ಗೆ’ಯೊಂದಿಗೆ ವಾದವೊಂದಕ್ಕೆ ಸಿಲುಕಿಕೊಂಡು ಅಕಾರಣವಾಗಿ ಮಿಸಾದಲ್ಲಿ ಬಂಧಿತರಾಗುತ್ತಾರೆ. ಅಂಬಿಕಾ ಸೋನಿ, ಸಂಜಯ್ ರ ಪರಮಾಪ್ತ ಬಳಗದವರು. ಸಂಜಯ್ ರೊಡನೆ ಅವರ ’ಅನ್ಯೋನ್ಯತೆ’ ವೀರೇಂದ್ರರಿಗೆ ತಿಳಿಯದ ವಿಚಾರವೇನೂ ಅಲ್ಲ. ಆದರೂ ಮಹಾ ಭಂಡಧೈರ್ಯದ, ಕಸುಬು ಸೇರಿದಾಗ ’ಕ್ರೈಮ್ಸ್’ ವರದಿಗಾರನಾಗಿದ್ದ ಪಂಜಾಬಿ ವೀರೇಂದ್ರ ಹುತ್ತದೊಳಗೆ ಕೈಹಾಕಿ ಹಾವು ಹಿಡಿಯಹೋಗಿ ತಪ್ಪುತ್ತಾರೆ. ಆ ಒಂದು ಘಟನೆ ತಮ್ಮ ಕುಟುಂಬದ ಮೇಲೆ ಉಂಟು ಮಾಡಿದ ಮಾನಸಿಕ ಯಾತನೆಯನ್ನು ಕೂಮಿ ತೀರ ಎಳೆಯದೇ, ಅನುಕಂಪಗಿಟ್ಟಿಸಿಕೊಳ್ಳಲು ಯತ್ನಿಸದೇ ಚೊಕ್ಕವಾಗಿ ಹೇಳಿ ಮುಗಿಸುತ್ತಾರೆ.
ಮನೆಯಲ್ಲಿ ಪುಟ್ಟ ಮಗು, ಪತಿ ಯಾವ ಜೈಲಿನಲ್ಲಿದ್ದಾರೆ ಎಂಬ ವಿಚಾರವೇ ತಿಳಿಯಲು ಅನುವು ಮಾದಿಕೊಡದಂತಹ ವ್ಯವಸ್ಥೆ, ಪದೆ ಪದೇ ಕಾಟ ಕೊಡುವ ಗುಪ್ತಚರ-ಪೋಲಿಸ್ ಶನಿಗಳು….ಕೂಮಿ ತೊಳಲಾಡುತ್ತಾರೆ. ಕಾರಣವೇ ಇಲ್ಲದೇ ವೀರೆಂದ್ರರಿಗೆ ಕೈ-ಕಾಲು ತೋಳಗಳನ್ನು ತೊಡಿಸಿ ವಿಚಾರಣೆಗೆ ಎಳೆದೊಯ್ಯಲಾಗುತ್ತದೆ. ಯಾವುದೇ ನೋಟೀಸ್ ಕೊಡದೇ ವೀರೆಂದ್ರರನ್ನು ತಿಹಾರ್ ನಿಂದ ಬರೇಲಿ ಜೈಲಿಗೆ ಅಟ್ಟಲಾಗುತ್ತದೆ. ವೀರೆಂದ್ರ ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಬಹಳ ಅಸಹಯಾಯಕಳಾಗಿ ಇದನ್ನೆಲ್ಲಾ ಗಮನಿಸುವ ಕೂಮಿ ಪತ್ರಿಕೋದ್ಯಮದ ಪಾಠ ಮಾಡುತ್ತಾ ವಿದ್ಯಾರ್ಥಿಗಳ ಮುಂದೆ ಭಾವುಕರಾಗಿಬಿಡುತ್ತಾರೆ.

ಮಿಸಾ ವಿರುಧ್ಧದ ಮೊಕದ್ದಮೆಗಳಲ್ಲಿ, ಸರ್ಕಾರದ ವಿರುಧ್ಧ ತೀರ್ಪು ಕೊಟ್ಟ ನ್ಯಾಯಧೀಶರುಗಳನ್ನು ಮನಸೋಇಚ್ಚೆ ವರ್ಗಾಯಿಸಲಾಗುತ್ತದೆ. ಈ ವಿವರಗಳನ್ನು ಕೂಮಿ “Black Diwali” ಅಧ್ಯಾಯದಲ್ಲಿ ನೀಡುತ್ತಾರೆ. ಚಿನ್ನಪ್ಪ ರೆಡ್ದಿ, ಕರ್ನಾಟಕದ ಸದಾನಂದ ಸ್ವಾಮಿ ಅಸ್ಸಾಮ್, ಅರುಣಾಚಲ ಪ್ರದೇಶವೇ ಮೊದಲಾದ ಕಡೆಗೆ ಹೋಗಬೇಕಾಗಿ ಬರುತ್ತದೆ. ವಿ.ಎಮ್.ತಾರ್ಕುಂಡೆ, ಸೊಲಿಸೊರಾಬ್ಜಿ, ಶಾಂತಿಭೂಷಣ್, ಅಶೋಕ್ ದೇಸಾಯಿ ಮುಂತಾದ ಹಲವು ಪ್ರಮುಖ ವಕೀಲರು ಚಿಕ್ಕಾಸೂ ತೆಗೆದುಕೊಳ್ಳದೆ ಹಲವು ಮಿಸಾ ಖೈದಿಗಳ ಪರ ವಾದಿಸಿದ್ದು ಗಮನಾರ್ಹ.

ಇಂತಹ ಸಂದರ್ಭದಲ್ಲಿ ಎಕ್ಸ್ ಪ್ರೆಸ್ ನ ಸಂಪಾದಕ ವಿ.ಕೆ.ನರಸಿಂಹನ್ ಕೂಮಿಯವರಿಗೆ ಸಹಾಯ ಮಾಡುತ್ತಾರೆ. ಕೂಮಿಯ ಸೋದರಿ ರೊಕ್ಸ್ನಾರ ಪತಿ ಸುಬ್ರಮಣ್ಯಮ್ ಸ್ವಾಮಿ ಪೋಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಇಡೀ ಕುಟುಂಬವನ್ನು ಆಭಾಸ-ಅಪಮಾನಕ್ಕೀಡುಮಾಡುತ್ತಾರೆ. ಕೂಮಿ-ರೊಕ್ಸ್ನಾ ಮತ್ತು ಸ್ವಾಮಿಯ ತಂಗಿ ಸುಶೀಲಾ, ಪೋಲೀಸರ ಜೊತೆ ಹೆಣಗಿ ಹೈರಾಣಾಗಿಬಿಡುತ್ತಾರೆ.

ರಾಮನಾಥ ಗೊಯೆಂಕಾ ಎಂಬ ಗಾಂಧೀವಾದಿ, ಜೆಪಿಯ ಪರಮಾಪ್ತ, ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ತೋರಿದ ಅಸಾಧಾರಣ ಹಠದ ಬಗ್ಗೆ ಒಂದು ಇಡೀ ಅಧ್ಯಾಯ ಮೀಸಲಾಗಿದೆ. (“Ramnath Goenka’s Battle”). ಕೂಮಿ ಆಗ ಎಕ್ಸ್ ಪ್ರೆಸ್ ನಲ್ಲಿ ವರದಿಗಾರ್ತಿ. ಗೊಯೆಂಕಾ-ಅಜಿತ್ ಭಟ್ಟಚಾರ್ಜಿ-ಕುಲ್ದೀಪ್ ನಯ್ಯರ್ ರೊಂದಿಗೆ ಕೆಲಸ ಮಾಡುತ್ತಿದ್ದರು. ಶುಕ್ಲಾ, ಗೊಯೆಂಕಾರನ್ನು ಕರೆಸಿ ಎಕ್ಸ್ ಪ್ರೆಸ್ ಷೇರುಗಳನ್ನು ಕಾಂಗ್ರೆಸ್ಸ್ ಪಕ್ಷಕ್ಕೆ ಮಾರಿಬಿಡಬೇಕೆಂದು ಅಬ್ಬರಿಸಿದಾಗ, ಗೊಯೆಂಕಾ ಸೊಪ್ಪುಹಾಕುವುದಿಲ್ಲ. ಕೆರಳಿದ ಶುಕ್ಲಾ, ಗೊಯೆಂಕಾ ಅವರ ಮಗ ಭಗವನ್ ದಾಸ್ ಅವರ ಪತ್ನಿ (ಗೊಯೆಂಕಾರ ಸೊಸೆ)ಯನ್ನು ಮಿಸಾ ಅಡಿ ಬಂಧಿಸಬೇಕಾಗಿ ಬರುತ್ತೆ’ ಎಂದು ಬೆದರಿಸುತ್ತಾರೆ. ಗೊಯೆಂಕಾ ಬಗ್ಗುವುದಿಲ್ಲ. ಆದರೆ ಕೆಲವು ದಿನಗಳ ನಂತರ ಹೃದಯಾಘಾತಕ್ಕೆ ಒಳಗಾಗುತ್ತಾರೆ. ಮಹಾನ್ ಘಟ ಗೊಯೆಂಕಾ ಚೇತರಿಸಿಕೊಳ್ಳುವುದಲ್ಲದೇ ’ಬೋರ್ಡ್ ಆಫ್ ಡೈರೆಕ್ಟರ್ಸ್’ ಸಭೆಗೆ ಅಚ್ಚರಿಯಾಗುವಂತೆ ಹಾಜರಾಗಿಬಿಡುತ್ತಾರೆ. ಕೈ ಬಿಟ್ಟು ಹೋಗುತ್ತಿದ್ದ (ಬಿರ್ಲಾ ಪಾಲಾಗಿಬಿಡಬಹುದಾಗಿದ್ದ) ಪತ್ರಿಕಗಳನ್ನು ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ.

ಎಕ್ಸ್ ಪ್ರೆಸ್ ಪತ್ರಿಕೆಗಳಿಗೆ ಜಾಹೀರಾತು ಕೊಡದಂತೆ ಸಾರ್ವಜನಿಕ-ಖಾಸಗಿ ಉದ್ದಿಮೆಗಳಿಗೆ ಬೆದರಿಕೆ ಒಡ್ಡಲಾಗುತ್ತದೆ. ದೆಹಲಿಯ ಕಾರ್ಪೋರೇಶನ್ ನ ಖುಳಗಳು ’ಟ್ಯಾಕ್ಸ್ ಸರಿಯಾಗಿ ಕಟ್ಟಿಲ್ಲಾ’ ಎಂಬ ಸಬೂಬು ಹೇಳಿ ಎಕ್ಸ್ ಪ್ರೆಸ್ ನ ಮುದ್ರಣಾಲಯಕ್ಕೆ ಬೀಗ ಜಡಿಯುತ್ತಾರೆ. ಆಗ ಗೊಯೆಂಕಾ ರನ್ನು ತೀಕ್ಷ್ಣ ಮತಿಯ ವಕೀಲ ಫ಼ಾಲಿ ನಾರಿಮನ್ ಪಾರುಮಾಡುತ್ತಾರೆ.

ಕೆರಳಿದ ಸರ್ಕಾರ ದೇಶದಾದ್ಯಂತ ೩೦೦ ಕೇಸುಗಳನ್ನು ಗೊಯೆಂಕಾ ಹಾಗವರ ಉದ್ಯಮಗಳ ಮೇಲೆ ಜಡಿದುಬಿಡುತ್ತದೆ. ಅಲ್ಲದೇ ಎಲ್ಲ ವಿಚಾರಣೆಯ ಸಮಯದಲ್ಲೂ ಗೊಯೆಂಕಾ ಹಾಜರಿಯನ್ನು ಕಡ್ಡಾಯಗೊಳಿಸುತ್ತದೆ. ನಾರಿಮನ್ ಗೆ ಸಾಕಾಗುತ್ತದೆ. ’ಗೊಯೆಂಕಾ ಜಿ..ಬಿಟ್ಟುಬಿಡಿ..compromise ಮಾಡಿಕೊಳ್ಳೊಣ.” ಎಂದಾಗ ಖೊಳ್ಳನೆ ನಗುವ ಗೊಯೆಂಕಾ ’ಎಲ್ಲಾದ್ರೂ ಉಂಟಾ’ ಎಂದು ಬಿಡುತ್ತಾರೆ. ಅಷ್ಟೂ ಕೇಸುಗಳಿಗೂ ಹಾಜರಾಗಿಯೇ ತೀರುತ್ತಾರೆ. ’ಮುದುಕನನ್ನು ಮಿಸಾದಲ್ಲಿ ಫಿಕ್ಸ್ ಮಾಡಿ ಒಳಕ್ಕಾಕಿ’ ಎಂಬ ಸಲಹೆ ಬಂದಾಗ ಸ್ವತಃ ಇಂದಿರಾ ಬೇಡವೆನ್ನುತ್ತಾರೆ. ತಮ್ಮ ಪತಿ ಫಿರೊಜ಼್ ಗಾಂಧಿಗೆ ಕಷ್ಟಕಾಲದಲ್ಲಿ ಗೊಯೆಂಕಾ ಎಕ್ಸ್ ಪ್ರೆಸ್ ನಲ್ಲಿ ಕೆಲಸ ಕೊಟ್ಟಿರುತ್ತಾರೆ. ನೆಹರು ತಲೆತಗ್ಗಿಸಬೇಕಾಗಿ ಬಂದ ಮುಂದ್ರಾ ಹಗರಣದ ವರದಿಯಲ್ಲಿ ಫಿರೋಜ಼್ ಪಾತ್ರವಿದ್ದುದರಿಂದ ಆಗಿನ ವಿತ್ತ ಸಚಿವ ಟಿ.ಟಿ.ಕೆ(ಕೃಷ್ಣಮಾಚಾರಿ) ತಮ್ಮ ಮೇಲೆ ಒತ್ತಡ ತಂದಿದ್ದರಿಂದ ಫಿರೋಜ಼್ ರನ್ನು ಮನೆಗೆ ಕಳಿಸಿರುತ್ತಾರೆ ಗೊಯೆಂಕಾ.

ತಮ್ಮ ಪರಮಾಪ್ತ ಕುಲದೀಪ್ ನಯ್ಯರ್ ರನ್ನು ಕರೆದು ಗೊಯೆಂಕಾ “ನನಗೆ ಸಾಕಾಗಿದೆ ಕಣ್ರೀ..ಹಗ್ಗದ ಕೊನೆಯಲ್ಲಿ ನಿಂತಿದ್ದೇನೆ..ಇನ್ನಾಗುವುದಿಲ್ಲ..ನಮ್ಮ ಲಾ ಪ್ರೊಫೆಸರ್ ಎಲ್ಲಿದ್ದಾರೆ? ನೋಡೊಣ ಬನ್ನಿ’ ಎಂದು ಕರೆದೊಯ್ಯುತ್ತಾರೆ. ಆ ’ಲಾ ಪ್ರೊಫೆಸರ್’ ಬೇರಾರೂ ಅಲ್ಲ. ಖುಷವಂತ ಸಿಂಗ್ ಎಂಬ ನರಿಯ ಮೆದುಳಿನ, ತೀಕ್ಷ್ಣ ನಾಲಗೆಯ, ವ್ಯಾಘ್ರಮುಖದ ಸರ್ದಾರ !! ಸಂಜಯ-ಇಂದಿರಾರ ಅಭಿಮಾನಿ ವಲಯದ ಅಗ್ರಗಣ್ಯ ಖುಷವಂತ್, ಆಗ Illustrated Weekly of Indiaದ ಸಂಪಾದಕರು. ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಹೆಚ್ಚಿಗೆ ತೊಂದರೆಗೆ ಒಳಗಾಗದಂತೆ ಮೈಯೆಲ್ಲ ಎಚ್ಚರರಾಗಿದ್ದ ಖುಷವಂತ್, ಸಂಜಯ್ ರ ಮಾರುತಿ ಕಾರ್ ಇನ್ನೂ ಕಾರ್ಖಾನೆಯೊಳಗಿಂದ ಬರುವ ಮುಂಚೆಯೇ , ಅದನ್ನು ವಾಚಾಮಗೋಚರವಾಗಿ ಹೊಗಳಿ ಬೀಸಾಡಿದ್ದಾತ. ಸಂಜಯ್ ರ ಅಂತರಂಗದಲ್ಲಿ ಒಂದು ಸ್ಥಾನ ಗಿಟ್ಟಿಸಿದ್ದಾತ. ಗೊಯೆಂಕಾ ಖುಶವಂತ್ ಮುಂದೆ ಅಪ್ಪಟ ಮಾರ್ವಾಡಿತನ ತೋರುತ್ತಾರೆ. “ಪ್ರೊಫೆಸರ್ ಸಾಬ್ರೇ, ನೀವು ಎಕ್ಸ್ ಪ್ರೆಸ್ ನ ಸಂಪಾದಕತ್ವ ವಹಿಸಿಕೊಳ್ಳಬೇಕು” ಎನ್ನುತ್ತಾರೆ. ಗೊಯೆಂಕಾ ಮೇಲಿನ ಪ್ರೀತಿಗಾಗಿ ಖುಷ್ವಂತ್ ಒಡನೆ ಸಮ್ಮತಿಸಿಯೇ ಬಿಡುತ್ತಾರೆ. ಅಲ್ಲಿಗೆ ಎಕ್ಸ್ ಪ್ರೆಸ್ ಬಳಗವನ್ನು ಅಷ್ಟು ದಿನದಿಂದ ವಕ್ಕರಿಸಿಕೊಂಡಿದ್ದ ಶನಿ ಬಿಡಲಾಂಭಿಸುತ್ತಾನೆ. ಖುಷ್ವಂತ್ ಸಂಪಾದಕತ್ವ ವಹಿಸಿಕೊಂಡಾಗ ಕುಲದೀಪ್ ಗೆ ಹೋದ ಕೈ ಬಂದಂತಾಗುತ್ತದೆ. ತುರ್ತು-ಪರಿಸ್ಥಿತಿ ಇನ್ನೂ ಇದ್ದರೂ, ಕುಲದೀಪ್ ತಮ್ಮ ಜೀವಮಾನದ ಶ್ರೇಷ್ಟ scoopಗಳನ್ನು ಬರೆಯುತ್ತಾರೆ.
ಗೊಯೆಂಕಾ ಮತ್ತವರ ಎಕ್ಸ್ ಪ್ರೆಸ್, ಇಂದಿರಾ ರನ್ನು ಸಿಂಹಸ್ವಪ್ನದಂತೆ ಕಾಡಿದ್ದು ನಿಜ. ತುರ್ತುಪರಿಸ್ಥಿತಿಯ ಬಗ್ಗೆ ಬರೆಯುವಾಗ ತಮ್ಮ ಬಗ್ಗೆ ಬರೆಯಲೇಬೇಕಾದ ಅನಿವಾರ್ಯತೆಯನ್ನು ಈ ಮಾರ್ವಾಡಿ ಕುಳ ಸೃಷ್ಟಿಸಿದರು. ಕೂಮಿ ಈ ಅಧ್ಯಾಯವನ್ನು ಬಹಳ ಸೊಗಸಾಗಿ ಬರೆದಿದ್ದಾರೆ. ತುರ್ತುಪರಿಸ್ಥಿತಿಯ ನಂತರ ಒಮ್ಮೆ ಗೊಯೆಂಕಾರನ್ನು ಕೂಮಿ ’ಇದನ್ನೆಲ್ಲಾ ಹೇಗೆ ನಿರ್ವಹಿಸಿದಿರಿ’ ಎಂದು ಕೇಳಿದಾಗ ಗೊಯೆಂಕಾ ಮಾರ್ಮಿಕವಾಗಿ ಉತ್ತರಿಸುತ್ತಾರೆ: ” I had 2 options: to listen to the dictates of my heart or my purse. I chose to listen to my heart”. ಗೊಯೆಂಕಾ ತಮ್ಮ ನಂತರ ಜೀವಕಾಲದಲ್ಲಿಯೂ ಹೀಗೆಯೇ ಉಳಿದರಾ ಎಂಬ ಪ್ರಶ್ನೆಗೆ ಇಲ್ಲಿ ಅವಕಾಶವಿಲ್ಲ  :-).

“Enigmatic Empress”ಎಂಬ ಅಧ್ಯಾಯ ಇಂದಿರಾರ ರ ಸರ್ವಾಧಿಕಾರಿ ಧೋರಣೆ, ಗುಪ್ತಚರ ಇಲಾಖೆಯ ದುರ್ಬಳಕೆ, ನ್ಯಾಯಾಧೀಶರ ವರ್ಗಾವಣೆಯಲ್ಲಿ ತಮಗನಿಸಿದ್ದನ್ನೇ ಮಾಡುತ್ತಿದ್ದ ಅವರ ಮೊರಡುತನಗಳ ಬಗ್ಗೆ ವಿವರಗಳಿವೆ. ಸಂಜಯ್ ಮೇಲಿನ ಹುಚ್ಚು ವಾತ್ಸಲ್ಯ ಆಕೆಗೆ ಮುಳುವಾಗಿತ್ತು. “JP versus Indira”ಎಂಬ ಅಧ್ಯಾಯದಲ್ಲಿ, ಜೆಪಿಯ ಸ್ಪಷ್ಟ-ಪ್ರಬುದ್ಧ ನಿಲುವುಗಳು, ಅಪಾರ ಸಹನೆ, ಇಂದಿರಾ ಆಕ್ರೋಶ ಹೆಚ್ಚಿಸುವ, ಜೆಪಿ ಬರೆಯುತ್ತಿದ್ದ ಪತ್ರಗಳ ಒಕ್ಕಣೆಗಳ ವಿವರವಿದೆ. ರಾಜಕೀಯ ಸೂಕ್ಷ್ಮತೆ, ದೂರದರ್ಶಿತ್ವ, ನೈತಿಕತೆ ಇವ್ಯಾವುದರಲ್ಲೂ ಜೆಪಿ ಗೆ ಸಮನಾಗದ ಇಂದಿರಾ, ಜೆಪಿ ಯನ್ನು ದ್ವೇಷಿಸಲಾಂಭಿಸುತ್ತಾರೆ. ಮಂತ್ರಿಗಿರಿ, ಕಾರು-ಬಂಗಲೆ-ಹೆಲಿಕಾಪ್ಟರ್ ಗಳನ್ನು ಮೀರಿದ ಜೆಪಿ ಅವರ ರಾಜಕೀಯ ಪಕ್ವತೆ ಇಂದಿರಾರಲ್ಲಿರಲಿಲ್ಲ. ಜೆಪಿ ಅನುಭವಿಸಿದ ಮಾನಸಿಕ ಯಾತನೆಯ ನಿರೂಪಣೆ ಈ ಅಧ್ಯಾಯದಲ್ಲಿದೆ. ಸಂಜಯ್ ರ ’ಮೂಲ’ದ ವಿಶ್ಲೇಷಣೆ ಇರುವ “Sanjay and Coterie” ಅಧ್ಯಾಯ, ’ಮಾಡಿದವರ ಪಾಪ ಆಡಿದವರ ಬಾಯಲ್ಲಿ” ಎಂಬಂತೆ ಇದೆ  :-). ಮಾರುತಿ ಕಾರ್ ನನಸಾಗಿಸುಕೊಳ್ಳುವ ದಿಸೆಯಲ್ಲಿ ಸಂಜಯ್ ಗಾಗಿ ಅವರ ಕುಟುಂಬ, ಅವರ ವಂಧಿಮಾಗದರು, ಅವರ ಸೈನ್ಯ ಮಾಡಿದ ಅನಾಚಾರಗಳ ದಾಖಲೆ ಇದೆ. ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದ ಅರ್ಜಾನ್ ದಾಸ್, ಸಂಜಯ್ ಕೃಪಾಕಟಾಕ್ಷಕ್ಕೆ ಸಿಲುಕಿ, ಸಫ್ದರ್ ಜಂಗ್ ರಸ್ತೆಯ ಮನೆಗೆ ಬಿಡುಬೀಸಾಗಿ ಕಾರ್ ನುಗ್ಗಿಸಿಕೊಂಡು ಬರುತ್ತಿದ್ದನ್ನು ಅಲ್ಲಗಳೆಯುವಂತಿಲ್ಲ. ವಿನೋದ್ ಮೆಹ್ತಾರ “Sanjay Story” ಎಂಬ ಪುಸ್ತಕದಲ್ಲೂ ಈ ರೀತಿಯ ವಿವರಗಳಿವೆ. ಬರೂವಾ ಎಂಬ ಕಾಂಗ್ರೆಸ್ಸ್ ಪಕ್ಷದ ಅಧ್ಯಕ್ಷನನ್ನು ಸಂಜಯ್ ಎಲ್ಲರ ಮುಂದೆಯೂ ’ಏಯ್ ಜೋಕರ್’ ಎಂದು ಕರೆದರೂ, ಅದನ್ನೆಲ್ಲಾ ’ಹೊಟ್ಟೆಗೆ ಹಾಕಿಕೊಂಡು’ ಸಂಜಯ್ ರನ್ನು “ಶಂಕರಾಚಾರ್ಯ, ವಿವೇಕಾನಂದ, ಅಕ್ಬರ್” ಗಳಿಗೆ ಹೋಲಿಸುತ್ತಾ ಕೊಂಡಾಡುವ ಬರೂವಾ, ಬಹುಶಃ ’ಭಕ್ತಿ’ಪಂಥದ ಮೂಲ ಪುರುಷನೇ ಇರಬೇಕು. 🙂

ಜಾರ್ಜ್ ಫರ್ನಾಂಡೀಸ್ ಎಂಬ ಅಪ್ಪಟ ಕನ್ನಡಿಗನ ಮೇಲಿನ “Firebrand Fernandes” ಅಧ್ಯಾಯ ಇಡೀ ಪುಸ್ತಕಕ್ಕೆ ಮುಕುಟಪ್ರಾಯವಾಗಿದೆ. ಜಾರ್ಜ್ ಹೇಗೆಲ್ಲಾ ಇದ್ದರು ಎಂದು ನೆನೆದಾಗ ಅಚ್ಚರಿ-ಪುಳಕಗಳಾಗುತ್ತವೆ. ನಾವುಗಳು ಹೈಸ್ಕೂಲ್ ಓದಿ ಮುಗಿಸುವಾಗಾಗಲೇ ಜಾರ್ಜ್ ದಂತಕಥೆ ಎನಿಸಿದ್ದರು. ಅವರ ರೈಲ್ವೇ ಮುಷ್ಕರ ಇಂದಿರಾರನ್ನು ಕುರ್ಚಿಯ ತುದಿಗೆ ತಂದು ಕೂರಿಸಿದ್ದು ನಿಜ. ಆದರೆ ತುರ್ತುಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳಲು ಇಂದಿರಾ ಜಾರ್ಜ್ ರ ರೈಲ್ವೇ ಮುಷ್ಕರವನ್ನು ಪ್ರಮುಖ ಕಾರಣಗಳಲ್ಲೊಂದಾಗಿ ತೋರಿಸಿದರು. ವಿರೋಧಿ ಪಡೆಯ ಹಲವು ಎಡಬಿಡಂಗಿ ಗಳಿಗಿಂತ ಹೆಚ್ಚು ಸಂವೇದನಾ ಶೀಲರೂ ಪ್ರಬುದ್ಧರೂ ಆಗಿದ್ದ ಜಾರ್ಜ್, ಇಂದಿರಾರನ್ನು “that woman”ಎಂದೇ ಸಂಬೋಧಿಸುತ್ತಿದ್ದದ್ದನ್ನು ಕೂಮಿ ನೆನಪಿಸಿಕೊಳ್ಳುತ್ತಾರೆ. ತುರ್ತುಪರಿಸ್ಥಿತಿ ಜಾರಿಯಾದಂದಿನಿಂದ ಬಹಳ ಕಾಲ ಭೂಗತರಾಗಿ ಉಳಿದ ಜಾರ್ಜ್, ಬ್ರಸೆಲ್ಸ್ ನಲ್ಲಿ ನಡೆದ ಸಮಾಜವಾದಿಗಳ ಸಭೆಗೆ ತಮ್ಮ ಆಪ್ತ ಸಿ.ಜಿ.ಕೆ.ರೆಡ್ಡಿ ಯವರನ್ನು ತಮ್ಮ ಪ್ರತಿನಿಧಿಯಾಗಿ ಕಳಿಸುತ್ತಾರೆ. ಇಂದಿರಾ ವಿರುದ್ಧದ ಅವರ “Indira’s India-Anatomy of a Dictatorship”ಎಂಬ ಭಾಷಣವನ್ನು ಹಲವು ರಾಷ್ಟ್ರಗಳ ಸಮಾಜವಾದಿ ನಾಯಕರು ಮಂತ್ರಮುಗ್ಧರಾಗಿ ಕೇಳುತ್ತಾರೆ. ಹಲವಾರು ಭಾಷೆಗಳಿಗೆ ಅವರ ಭಾಷಣದ ಅನುವಾದವಾಗುತ್ತದೆ. ಜರ್ಮನಿ-ಆಸ್ಟ್ರಿಯಾ-ಸ್ವೀಡನ್ ನ ಪ್ರಧಾನಿಗಳು ಇಂದಿರಾ ಕೃತ್ಯವನ್ನು ಖಂಡಿಸಿ ಹೇಳಿಕೆಕೊಡಲು ಜಾರ್ಜ್ ಕಾರಣವಾಗುತ್ತಾರೆ. ಇಂದಿರಾ ರೋಷಾವಿಷ್ಟರಾಗುತ್ತಾರೆ. ಭೂಗತರಾಗಿದ್ದ ಜಾರ್ಜ್ ಗಾಗಿ ಅವರ ಆಪ್ತವಲಯದ ಸ್ನೇಹಲತಾ ರೆಡ್ಡಿ (’ಸಂಸ್ಕಾರ’ ಚಿತ್ರದ ಚಂದ್ರಿ), ಜಾರ್ಜ್ ಸೋದರ ಲಾರೆನ್ಸ್ ರನ್ನು ಪೋಲೀಸರು ಬಹಳ ಅಮಾನುಷವಾಗಿ ನಡೆಸಿಕೊಳ್ಳುತ್ತಾರೆ. ಆಸ್ತಮಾದಿಂದ ಬಳಲುತ್ತಿದ್ದ ಸ್ನೇಹಲತಾ ಕಷ್ಟಪಟ್ಟು ಪರೋಲ್ ಪಡೆದು ಮನೆ ಸೇರಿದ ಕೆಲವೇ ದಿನಗಳಲ್ಲಿ ಕೊನೆಯುಸಿರೆಳೆಯುತ್ತಾರೆ.

ಕೊನೆಗೂ ಜಾರ್ಜ್ ಕಲಕತ್ತದಲ್ಲಿ ಬಂಧಿತರಾಗುತ್ತಾರೆ. ಪ್ರಖ್ಯಾತ ಬರೋಡಾ ಡೈನಮೈಟ್ ಪ್ರಸಂಗದಲ್ಲಿ ಅವರನ್ನು ಜೈಲಿಗೆ ಅಟ್ಟಲಾಗುತ್ತದೆ. ಸುಮಾರು ೩೦೦೦ ಪುಟಗಳ ಚಾರ್ಜ್ ಶೀಟ್ ಜಾರ್ಜ್ ವಿರುದ್ಧ ಸಲ್ಲಿಸಲಾಗುತ್ತದೆ. ತಮ್ಮ ವಾದವನ್ನು ತಾವೇ ಬರೆದುಕೊಂಡುಬರುವ ಜಾರ್ಜ್, ನ್ಯಾಯಾಧೀಶರನ್ನು ಮೂಕವಿಸ್ಮಿತಗೊಳಿಸುವಂತೆ ವಾದಿಸುತ್ತಾರೆ.

ಇಂದಿರಾಗೂ ತುರ್ತುಪರಿಸ್ಥಿತಿ ಸಾಕಾಗಿರುತ್ತದೆ. ಚುನಾವಣೆಗಳ ಘೋಷಣೆಯಾಗುತ್ತದೆ. ಜಾರ್ಜ್ ಬಗ್ಗೆ ಬಹಳ ಪ್ರೀತಿಯಿದ್ದ ಜೆಪಿ, “ಜೈಲಿನಿಂದಲೇ ಮುಜಫ಼ರ್ ಪುರ್ ದಿಂದ ಸ್ಪರ್ಧಿಸುವಂತೆ ಬಲವಂತ” ಮಾಡುತ್ತಾರೆ. ಜೆಪಿ ಗೆ ಜಾರ್ಜ್ ಇಲ್ಲವೆನ್ನಲಾಗುವುದಿಲ್ಲ. ಜೈಲಿನಳ್ಳಿದ್ದುಕೊಂಡೇ ಜಾರ್ಜ್ ಭಾರಿ ಅಂತರದಲ್ಲಿ ಗೆಲ್ಲುತ್ತಾರೆ. (ಜಾರ್ಜ್ ಪರ ಸುಷ್ಮಾ ಸ್ವರಾಜ್ ಪ್ರಚಾರ ಮಾಡಿರುತ್ತಾರೆ) ಆ ಸಮಯದಲ್ಲಿ ಕೋರ್ಟೊಂದರಲ್ಲಿ ಜಾರ್ಜ್ ರ ’ಕ್ರಾಸ್-ಎಕ್ಸಾಮ್’ ಆಗುತ್ತಿರುತ್ತದೆ. ಗೆಲುವಿನ ಸುದ್ದಿ ಅಪ್ಪಳಿಸುತ್ತಿದ್ದಂತೆ, ನ್ಯಾಯಾಧೀಶರು ಜಾರ್ಜ್ ರನ್ನು ಮುಕ್ತಗೊಳಿಸಿಬಿಡುತ್ತಾರೆ.

ಮಂಗಳೂರಿಗ ಜಾರ್ಜ್…ಫ಼ಾದರ್ ಆಗಲು ಚರ್ಚ್ ಸೇರಿ, ಅಲ್ಲಿನ ಬೂಟಾಟಿಕೆ, ಒಳರಾಜಕೀಯಗಳಿಗೆ ಬೇಸೆತ್ತು ಮುಂಬೈ ಸೇರಿ, ಚೌಪಾಟಿಯ ಸಮುದ್ರ ತೀರದಲ್ಲಿದ್ದ ಕಲ್ಲುಬೆಂಚುಗಳ ಮೇಲೆ ಮಲಗಿ, ಟ್ಯಾಕ್ಸಿ ಚಾಲಕರೊಡಗೂಡಿ ಕಾರ್ಮಿಕ ಸಂಘಟನೆಯಲ್ಲಿ ತೋಡಗುತ್ತಾ, ಅಪ್ಪಟ ನಾಯಕರಾಗಿ ಬೆಳೆದು, ತಮ್ಮದಲ್ಲದ ಬಿಹಾರದಿಂದ ಲೋಕಸಭೆಗೆ ಜೈಲಿನಿಂದಲೇ ಬಹುಮತದಿಂದ ಆರಿಸಿಹೋಗಿದ್ದು ಒಂದು ರೋಚಕ ಅಧ್ಯಾಯ. ಕೂಮಿ ನಿರ್ಭಿಡೆಯಿಂದ ಜಾರ್ಜ್ ಜೀವನದ ಮಜಲುಗಳನ್ನು ಗುರುತಿಸಿದ್ದಾರೆ.

ಇಂದಿರಾರ ೨೦ ಅಂಶದ ಕಾರ್ಯಕ್ರಮ, ಸಂಜಯ್ ರ ಐದಂಶದ ಕಾರ್ಯಕ್ರಮದ ಅನುಷ್ಟಾನ ಸರ್ಕಾರಿ ಅಧಿಕಾರಿಗಳಿಗೆ ಭೂತದ ದರ್ಶನ ಮಾಡಿಸಿತ್ತದೆ.
ಕೊನೆಕೊನೆಯ ಅಧ್ಯಾಯಗಳಲ್ಲಿ, ಇಂದಿರಾರಿಂದ (ಅತಿಯಾದ ಆತ್ಮ ವಿಶ್ವಾಸದಿಂದ, ಗುಪ್ತಚರ ಇಲಾಖೆಯ ವರದಿ ಆಧರಿಸಿ)ಚುನಾವಣೆ ಘೋಷಣೆ, ಅವರ ಪ್ರಚಾರ ಭಾಷಣದ ವೈಖರಿ, ಜನರ ಅಸಡ್ಡೆಗಳ ಬಗ್ಗೆ ಕೂಮಿ ಯವರ ಪ್ರತ್ಯಕ್ಷವರದಿಗಳಿವೆ. ಇಂದಿರಾ ಪ್ರಚಾರ ಭಾಷಣದ ವರದಿಗಾಗಿ ಕೂಮಿ ನಿಯೋಜನಗೊಂಡಿರುತ್ತಾರೆ. ಜೇಪಿ ಬೋಟ್ ಕ್ಲಬ್ ನಲ್ಲಿ ಮಾಡುವ ಭಾಷಣಕ್ಕೆ ಜನ ಹೋಗದಂತೆ ತಡೆಯಲು, ಶುಕ್ಲಾ (ಭಾಷಣದ ಸಮಯಕ್ಕೆ ಸರಿಯಾಗಿ)ದೂರದರ್ಶನದಲ್ಲಿ ಅಂದಿನ ಕಾಲದ ’ಬಾಬ್ಬಿ’ ಎಂಬ ಸೂಪರ್ ಹಿಟ್ ಚಿತ್ರವನ್ನು ಪ್ರಸಾರಿರಸಲು ಆಜ್ಞಾಪಿಸುತ್ತಾರೆ. ಜನ ಸೇರಲಾರರು ಎಂದು ತಿಳಿದು ನಿಟ್ಟುಸಿರು ಬಿಟ್ಟಿರುತ್ತಾರೆ. ಆದರೆ ಅಚ್ಚರಿಯಾಗುವಂತೆ ಜನ ಊಹೆಗೂ ಮೀರಿ ಬೋಟ್ ಕ್ಲಬ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಜಮಾಯಿಸಿಬಿಡುತ್ತಾರೆ. ಶುಕ್ಲಾಗೆ ಮುಖಭಂಗವಾಗುತ್ತದೆ. ೫೦೦೦೦ ಸಾವಿರ ಕಿಲೋಮೀಟರ್ ಕ್ರಮಿಸಿ, ೩೦೦ ಸಾರ್ವಜನಿಕ ಭಾಷಣಗಳಲ್ಲಿ ಭಾಗವಹಿಸಿ, ಹರ್ಪಿಸ್ ನಿಂದ ಬಳಲುತ್ತಿದ್ದರೂ ಗೆಲುವಿಗಾಗಿ ಶತಾಯ-ಗತಾಯ ಪ್ರಯತ್ನಿಸಿದರೂ..ಇಂದಿರಾಸೋಲುಣ್ಣುತ್ತಾರೆ. ಸಂಜಯ್ ಗರ್ವಭಂಗವಾಗುತ್ತದೆ. ಈ ತರದ ಅವಮಾನ ಇಂದಿರಾರಿಗೆ ದೆಹಲಿಯಲ್ಲಿ ಎಂದೂ ಆಗಿರಲಿಲ್ಲ. ವೋಟುಗಳ ಎಣಿಕೆಯ ದಿನ ಮಾಧ್ಯಮದವರಿಗಾದ ದುಗುಡದ ಬಗ್ಗೆ ಬರೆಯುತ್ತ ಕೂಮಿ, ” Mrs.Gandhi is trailing in Rai Bareily”ಎಂಬ ಸುದ್ದಿ ಬಂದಾಗ ಇಡೀ ಎಕ್ಸ್ ಪ್ರೆಸ್ ನ ಸಿಬ್ಬಂದಿ ಕುಣಿದುಕುಪ್ಪಳಿಸಿದ್ದನ್ನು ನೆನೆಸಿಕೊಳ್ಳುತ್ತಾರೆ.

ಇಂದಿರಾ ೫೫೦೦೦ ಮತಗಳ ಅಂತರದಲ್ಲಿ, ಸಂಜಯ್ ೭೫೦೦೦ ಮತಗಳ ಅಂತರದಲ್ಲಿ, ಬನ್ಸಿಲಾಲ್ ೧,೬೧,೦೦೦ ಅಂತರದಲ್ಲಿ ಸೋಲುತ್ತಾರೆ. ಜಾರ್ಜ್ ಎಂಬ ಜಾರ್ಜ್ ಫರ್ನಾಂಡೀಸ್, ೩ ಲಕ್ಷಮತಗಳಿಂದ ಲೋಕಸಭೆಗೆ ಆರಿಸಿಬರುತ್ತಾರೆ !!!
====
ಕೂಮಿಯವರಲ್ಲಿ ಯಾವುದೇ ಪೂರ್ವಾಗ್ರಹಗಳು ಇದ್ದಂತಿಲ್ಲ. ಆದರೂ, ತುರ್ತುಪರಿಸ್ಥಿತಿ ಇದ್ದಾಗ ಪ್ರಮುಖ ಪಾತ್ರ ವಹಿಸಿದ್ದ, ತಮ್ಮ ತೀಕ್ಷ್ಣ ಬರಹಗಳಿದ್ದ ಪತ್ರಗಳಿಂದ ಇಂದಿರಾ ರನ್ನು ಕೆರಳಿಸಿದ್ದ ಅಪ್ಪಟ ಸಮಾಜವಾದಿ ಮಧು ಲಿಮಯೆಯವರ ಬಗ್ಗೆ ಇಲ್ಲಿ ಉಲ್ಲೇಖಗಳಿಲ್ಲ. ಮೊರಾರ್ಜಿ ಸರ್ಕಾರ ಉರುಳಲೂ ಮಧು ಲಿಮಯೆ ಕಾರಣರಾದರು. ನಾನಾಜಿ ದೇಶಮುಖ್ ಹಲವೆಡೆ ಅಪ್ರಯತ್ನಪೂರ್ವಕವಾಗಿ ಬಂದು ಹೋಗುತ್ತಾರೆ. ಅಂತೆಯೇ ಕರ್ಪೂರಿ ಠಾಕೂರ್ ಇಲ್ಲಿ ಕಾಣುವುದಿಲ್ಲ. ಇಡೀ ದೇಶದ ಗಮನ ಸೆಳೆದಿದ್ದ ಕೇರಳದ ರಾಜನ್ ಪ್ರಕರಣ ಇಲ್ಲಿ ಉಲ್ಲೇಖಗೊಂಡಿಲ್ಲ.

ಕೂಮಿಯವರ ಹಿನ್ನಲೆಯನ್ನು ಒಮ್ಮೆ ನೋಡಬೇಕಾಗುತ್ತದೆ. ಅಮೆರಿಕದಲ್ಲಿ ಪತ್ರಿಕೋದ್ಯಮದ ಪದವಿ ಪಡೆದು ಭಾರತಕ್ಕೆ ಬಂದಾಗ ಇಲ್ಲಿನ ಪತ್ರಿಕೆಗಳಲ್ಲಿ ಆಕೆಗೆ ಕೆಲಸ ಸಿಕ್ಕುವುದಿಲ್ಲ. ಜನಸಂಘದಲ್ಲಿದ್ದ ಆಕೆಯ ತಂಗಿಯ ಪತಿ ಸುಬ್ರಮಣ್ಯಮ್ ಸ್ವಾಮಿ ತಮ್ಮ ಪಕ್ಷದ ಪತ್ರಿಕೆ ’ಮದರ್ ಲ್ಯಾಂಡ್’ ನಲ್ಲಿ ವರದಿಗಾರ್ತಿಯ ಕೆಲಸ ಕೊಡಿಸುತ್ತಾರೆ. ನಂತರ ಕೂಮಿ ಎಕ ಪ್ರೆಸ್ ಬಳಗ ಸೇರುತ್ತಾರೆ. ಹಾಗೆಂದು ಇದು ’ಭಕ್ತ’ರ ಪುಸ್ತಕ ಎಂದು ದೂರಮಾಡುವಂತಿಲ್ಲ.

ಈ ಕೃತಿ ತರಲು ಕೂಮಿ ವಹಿಸಿದ ಶ್ರಮ ಪ್ರಶಂಸಾರ್ಹ. ಆಳವಾದ ಓದು, ೭೫ ರಿಂದ ೭೭ ರವರೆಗಿನ ನೂರಾರು ನೈಜ ಘಟನೆಗಳ ಆಕರ, ಆ ಸಮಯದಲ್ಲಿದ್ದ ಹಲವರ ನೇರ (ಮಾರ್ಕ್ ಟುಲಿ, ಆರ್.ಕೆ,ಧವನ್, ಸುಬ್ರಮಣ್ಯಮ್ ಸ್ವಾಮಿ, ವೀರೇಂದ್ರ ಕಪೂರ್)ಸಂದರ್ಶನ, ಷಾ ಆಯೋಗದ ವರದಿಯ ಆಳ ಅಧ್ಯಯನಗಳ ಫಲವಾದ ಈ ಬರಹಗಳಿಗೆ ನೈಜತೆಯ ಅಡಿಪಾಯ ಬಲವಾಗಿದೆ. ತುರ್ತುಪರಿಸ್ಥಿತಿಯ ಕರಾಳ ಅಧ್ಯಾಯದ ಕಥಾನಕಕ್ಕೆ ಪೂರಕವಾದ ’ರೋಚಕ’ ಭಾಷೆಯನ್ನು ಕೂಮಿ ಬಳಸಿಲ್ಲ ಎಂಬುದೂ ಗಮನಾರ್ಹ.

ಹಲವು ಕೊರತೆಗಳ ನಡುವೆಯೂ ಅಪ್ರಯತ್ನಪೂರ್ವಕವಾಗಿ ಓದಿಸಿಕೊಂಡಿಹೋಗುವ ಇತಿಹಾಸದಿಂದ ಹೆಕ್ಕಿ ತೆಗೆದ ನೈಜ ಘಟನೆಗಳ ಕೃತಿಯನ್ನು ಕೂಮಿ ನೀಡಿದ್ದಾರೆ.
ರಾಜಕೀಯ ಇತಿಹಾಸದ ಮೆಲುಕುಹಾಕುವ ಮತ್ತಷ್ಟು ಕೃತಿಗಳು ಕೂಮಿಯವರಿಂದ ಬರಲಿ.

4 comments

  1. Write up is packed with required details about the days of emergency. Thank you Ragavan Acharya sir. . .

  2. ‘ಅಂದಿನ ತುರ್ತು ಪರಿಸ್ಥಿತಿಯಂತಹ ವಾತಾವರಣ ಈಗಲೂ ದೇಶದಲ್ಲಿ ಇದೆ’ ಎಂದು ವಾದಿಸುವವರ ಕಣ್ಣು ತೆರೆಸಬಲ್ಲ ಬರಹ ಇದು.

  3. ಲೇಖನವನ್ನು ಓದುತ್ತಿದ್ದಂತೆ ತುರ್ತುಪರಿಸ್ಥಿತಿಯ ಕ್ರೌರ್ಯಕ್ಕೆ ಬಲಿಯಾಗಿದ್ದ ನಮ್ಮ ಪ್ರೀತಿಯ ಹಿಂದಿ ಮೇಷ್ಟ್ರು ಎಸ್.ವಿ. ಎಲ್.ಎನ್ ಶರ್ಮಾ ನೆನಪಾದರು.ಬದಿಯಡ್ಕದ ನವಜೀವನ ಪ್ರೌಢಶಾಲೆಯಲ್ಲಿ ಅವರು ಅಧ್ಯಾಪಕರಾಗಿದ್ದರು.ಹಿಂದಿಯನ್ನು ಬಹಳ. ಚೆನ್ನಾಗಿ ಬೋಧಿಸುವುದರೊಂದಿಗೆ ಕನ್ನಡಸಾಹಿತ್ಯದಿಂದಲೂ ಧಾರಾಳವಾಗಿ ಉದಾಹರಣೆಗಳನ್ನು ಕೊಡುತ್ತ ವಿದ್ಯಾರ್ಥಿಗಳಲ್ಲಿ ಓದಿನ ಅಭಿರುಚಿಯನ್ನು ಮೂಡಿಸುತ್ತಿದ್ದ ಶಿಕ್ಷಕರಾಗಿದ್ದರು.ಬಹಳ ಸ್ವಾಭಿಮಾನಿಯೂ ಧೈರ್ಯಶಾಲಿಯೂ ಆಗಿದ್ದ ಅವರನ್ನುತುರ್ತುಪರಿಸ್ಥಿತಿಯ ಹೇರಿಕೆಯನ್ನು ವಿರೋಧಿಸಿದ ಕಾರಣಕ್ಕೆ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗಲೇ ಪೊಲೀಸರು ಬಂದು ಬಂಧಿಸಿ ಕೊಂಡುಹೋಗಿದ್ದರು.ಜೈಲಿನಲ್ಲಿ ಅವರನ್ನು ಕ್ಫ್ರೂರವಾಗಿ ನಡೆಸಿದ ಕಾರಣದಿಂದ ಗಟ್ಟಿಮುಟ್ಟಾಗಿದ್ದ ಅವರ ಶರೀರ ಜೈಲಿನಿಂದ ಬಿಡುಗಡೆಯಾಗಿ ಬರುವಾಗ ಜರ್ಜರಿತವಾಗಿತ್ತು.ಬಳಿಕ .ಅಕ್ಷರಶ: ಹಾಸಿಗೆ ಹಿಡಿದ ಅವರು ಮರಣವನ್ನಪ್ಪಿದ್ದರು.ಅವರ ಮಡದಿ ಮತ್ತು ಮಕ್ಕಳು ಬಹಳಕಷ್ಟ ಪಟ್ಟಿದ್ದರು. ಎಂತಹ ಲವಲವಿಕೆಯ ಧೀರೋದಾತ್ತ ಚೇತನವಾಗಿತ್ತು ಅವರದು! ಅವರ ಬಲಿದಾನವನ್ನು ನೆನೆದಾಗ ಕಣ್ಣು ಹನಿಗೂಡುತ್ತದೆ.

  4. ಪುಸ್ತಕದ ವಿಮರ್ಶೆಯಾದರೂ ಈ ಲೇಖನದೊಂದಿಗೆ ತುರ್ತು ಪರಿಸ್ಥಿತಿಯ ಕಾಲಕ್ಕೆ ನಾವು ಅರಿವಿಲ್ಲದೇ ಪ್ರವೇಶಿಸುತ್ತೇವೆ. ನಿರೂಪಣೆ ಬಹಳ ಸತ್ವಯುತವಾಗಿದೆ.

    ನೂತನ ದೋಶೆಟ್ಟಿ

Leave a Reply