ಅಪ್ಪ ನೀನು ಜೈಲಿಂದ ಯಾವಾಗ ಬರುತ್ತೀಯಾ…?

ಕೆ ವಿ ಎನ್ ಸ್ವಾಮಿ 

“ಅಪ್ಪ ನಾನು ಮೂರನೇ ಕ್ಲಾಸ್ ಪಾಸಾದೆ.. ನೀನು ಜೈಲಿಂದ ಯಾವಾಗ ಮನೆಗೆ ಬರುತ್ತೀಯಾ…?”
ಆವತ್ತು ನಾನು ಬರೆದ ಆ ಪತ್ರವೇ ನನ್ನ ಮೊದಲ ಬರಹವಾಗಿತ್ತು.

1975 ಮತ್ತು 1977ರ ನಡುವಿನ ಸಮಯ. ಒಂದು ದಿನ ನನ್ನ ಅಮ್ಮ ಹಾಸಿಗೆ ಮೇಲೆ ಕುಳಿತಿದ್ದಳು. ಹತ್ತು-ಹನ್ನೆರಡು ತಿಂಗಳ ಮಗುವಿನ ಬಾಣಂತಿ. ಎಂದಿನಂತೆ ತಲೆಗೆ ಮಫ್ಲರ್ ಸುತ್ತಿಕೊಂಡಿದ್ದಳು. ಕೈಯಲ್ಲಿ ಪತ್ರ ಹಿಡಿದಿದ್ದಳು. ಅದು ಇನ್ ಲ್ಯಾಂಡ್ ಲೆಟರ್. ಅಪ್ಪನಿಗೆ ಪತ್ರ ಬರೆಯುತ್ತಿದ್ದಳು. ನಾನೂ ಪಕ್ಕದಲ್ಲೇ ಹೋಗಿ ಕೂತೆ. ಮುದ್ದಾದ ನನ್ನ ತಂಗಿಯನ್ನು ಹಾಗೇ ಆಟ ಆಡಿಸುತ್ತಾ ಅಮ್ಮನನ್ನು ಕೇಳಿದೆ.

“ಅಪ್ಪನಿಗೆ ಲೆಟರ್ ಬರೆಯುತ್ತಿದ್ದೀಯಾ ಅಮ್ಮಾ?”
“ಹೌದು, ನೀನೂ ಬರೆಯುತ್ತೀಯಾ” ಅಮ್ಮ ಕೇಳಿದಳು
ನನಗೆ ಖುಷಿಯಾಯ್ತು. ತಲೆ ಆಡಿಸಿದೆ. ಜೀವನದ ಮೊಟ್ಟ ಮೊದಲ ಬರಹಕ್ಕೆ ನಾನು ಸಿದ್ಧವಾಗಿದ್ದೆ.
“ಸರಿ ನಾನು ಬರೆದ ಮೇಲೆ ಕೊನೆಯಲ್ಲಿ ನಿನಗೆ ಕೊಡುತ್ತೇನೆ. ಪಾಪುನ ಆಟ ಆಡಿಸ್ತಾ ಇರು” ಅಂದಳು ಅಮ್ಮ.
ಸ್ವಲ್ಪ ಹೊತ್ತಿನ ನಂತರ ಕೂಗಿ, ಕೈಗೆ ಲೆಟರ್ ಇಟ್ಟಳು.
“ಏನು ಬರೆಯುತ್ತೀಯೋ ಬರಿ”
“ನನಗೆ ಗೊತ್ತಿಲ್ಲ, ನೀನೇ ಹೇಳು” ಅಂತ ನಾನು ಅಮ್ಮನತ್ತಲೇ ಪತ್ರ ಹಿಡಿದ ಕೈ ಚಾಚಿದೆ.
‘ನೀನು ಮೂರನೆ ಕ್ಲಾಸ್ ಪಾಸಾಗಿದ್ದು, ಅಪ್ಪನಿಗೆ ಗೊತ್ತೇ ಇಲ್ಲ ನೋಡು. ಅದನ್ನೇ ಬರಿ” ಅಂತ ಅಮ್ಮ ನನ್ನನ್ನು ಹುರಿದುಂಬಿಸಿದಳು.
ಸರಿ, ಒಂದೊಂದೇ ಅಕ್ಷರಗಳನ್ನು ನಾನು ಅಮ್ಮನಿಂದ ಕೇಳಿ, ಅದನ್ನು ಬರೆಯುತ್ತಾ ಹೋದೆ.
“ಅಪ್ಪಾ.., ನಾನು ಮೂರನೇ ಕ್ಲಾಸ್ ಪಾಸಾದೆ” ಇಷ್ಟು ಸಾಕಾ ಅಮ್ಮ ಎಂದೆ.
ಇನ್ನೂ ಏನಾದರೂ ಬರಿ ನೋಡೋಣ ನಿನಗೆ ಬರುತ್ತೇನೋ ಅಂತ ಸವಾಲು ಎಸೆದಳು ಅಮ್ಮ.
ಸರಿ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದದ್ದು ತಾನೇ ತಾನಾಗಿ ಹೊರಗೆ ಬಂತು.
“ಅ….ಪ್ಪಾ..ಪ್ಪಾ .., ನೀ..ನೀ..ನು ಮ..ನೆ..ಗೆ ಯಾ..ವಾ..ಗ ಬರುತ್ತೀಯಾ..?” ಎಂದು ಜೋರಾಗಿ ಬಾಯಲ್ಲಿ ಹೇಳಿಕೊಳ್ಳುತ್ತಾ ಪತ್ರದಲ್ಲಿ ನನಗೆ ತೋಚಿದಂತೆ ಗೀಚಿದೆ.

ನಾನು ಇಷ್ಟು ಬರೆಯುವ ಹೊತ್ತಿಗೆ ಅಮ್ಮನ ಕಣ್ಣಂಚಿನಲ್ಲಿ ನೀರೂರಿತ್ತು. ಅಪ್ಪ ಜೈಲು ಸೇರಿ ಅದಾಗಲೇ ಸುಮಾರು ಒಂದು ವರ್ಷದ ಮೇಲಾಗಿತ್ತು. ಅಪ್ಪ ಯಾವಾಗ ಮನೆಗೆ ಬರ್ತಾರೆ ಅಂತಾ ನಾನು ಕೇಳುವ ಪ್ರಶ್ನೆಗೆ ಅಮ್ಮ ಪ್ರತಿಬಾರಿಯೂ ಕೊಡುತ್ತಿದ್ದ ಉತ್ತರ ಇನ್ನೇನು ಒಂದು ವಾರದಲ್ಲಿ ಬಂದುಬಿಡ್ತಾರೆ ಅಂತ. ನನ್ನ ಅಪ್ಪ ಆವಾಗ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದರು.

ನನಗಿನ್ನೂ ಚೆನ್ನಾಗಿ ಜ್ಞಾಪಕ ಇದೆ. ಜೈಲಿಗೆ ಹೋಗೋಕೂ ಮುಂಚೆ ನನ್ನ ಅಪ್ಪ ವೇಷ ಬದಲಿಸಿ ಓಡಾಡುತ್ತಿದ್ದರು. ಕೃತಕ ಮೀಸೆ ತಂದಿಟ್ಟುಕೊಂಡಿದ್ದರು. ಬಡಪಾಯಿಗಳು ಹಾಕೋ ಕೋಟು ಸಹ ಆಗ ನನ್ನ ಅಪ್ಪನ ನೆರವಿಗೆ ಬರುತ್ತಿತ್ತು. ಒಂದು ಸಾರ್ವಜನಿಕ ಸಭೆ ನಡೆಸಲು ತಯಾರಿ ನಡೆಸುತ್ತಿದ್ದ ನನ್ನ ಅಪ್ಪ, ವೇಷ ಮರೆಸಿಕೊಂಡು ಓಡಾಡುತ್ತಿದ್ದರು. ಒಂದು ದಿನ ಪೊಲೀಸಿಗೆ ಅನುಮಾನ ಬಂದು ಹಿಡಿದುಕೊಂಡಿದ್ದರು. ಅವರಿಂದ ತಪ್ಪಿಸಿಕೊಂಡು ಬಂದಿದ್ದ ಅಪ್ಪ, ಮನೆಯ ಅಟ್ಟದ ಮೇಲೆ ಅವಿತುಕೊಂಡು ಅವತ್ತು ಬಚಾವಾಗಿದ್ದರು. ಹೋರಾಟ ಮಾಡೋದು, ಜೈಲಿಗೆ ಹೋಗೋದು, ಬಿಡಗಡೆಯ ನಂತರ ಮತ್ತೆ ಜೈಲು ಸೇರೋದು. ಇವು ಅಪ್ಪನ ಆಗಿನ ಕಾರ್ಯಚಟುವಟಿಕೆಯಾಗಿತ್ತು.

ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ದಿನಗಳವು. ಮುಂಬರುವ ಚುನಾವಣೆಯಲ್ಲಿ ತಮಗೆ ಸೋಲು ಖಚಿತ ಎನಿಸುತ್ತಲೇ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದ್ದರು. ಪತ್ರಿಕಾ ಸೆನ್ಸಾರ್ ಘೋಷಣೆಯಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ಜನಾಕ್ರೋಶ ಭುಗಿಲೆದ್ದಿತ್ತು. ಜನಾಂದೋಲನವನ್ನು ಮಟ್ಟಹಾಕಲೆಂದೇ ಇಂದಿರಾಗಾಂಧಿ ಸರ್ವಾಧಿಕಾರಿಯಾಗಿ ಮಾರ್ಪಾಟಾಗಿದ್ದರು. ಸರ್ಕಾರಿ ವಿರೋಧಿ ದನಿಯನ್ನು ಹತ್ತಿಕ್ಕಲಾಗುತ್ತಿತ್ತು. ನನ್ನ ಅಪ್ಪ ಆ ಕರಾಳ ಆಡಳಿತದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದರು. ನನ್ನ ಅಪ್ಪನಂತೆಯೇ ನೂರಾರು ಜನ ಜೈಲು ಸೇರಿದ್ದರು. ಅವರ ಪೈಕಿ ಮೂವರನ್ನು ಮೀಸಾ ಕಾಯ್ದೆಯಡಿ ಬಂಧಿಸಲಾಗಿತ್ತು. ಅಪ್ಪನೂ ಸೇರಿದಂತೆ ಮೂವರನ್ನು ಬೆಂಗಳೂರು ಸೆಂಟ್ರಲ್ ಜೈಲಿಗೆ ಕರೆದೊಯ್ಯಲಾಗಿತ್ತು. ಹೀಗೆ ಬೆಂಗಳೂರು ಕಾರಾಗೃಹ ಸೇರಿದ್ದ ನನ್ನ ಅಪ್ಪನಿಗೆ ನಾನು ನನ್ನ ಜೀವನದ ಮೊದಲ ಪತ್ರ ಬರೆದಿದ್ದೆ.

Leave a Reply