ಕಾವ್ಯ ಕನ್ನಿಕೆ ಮತ್ತು ಉಯ್ಯಾಲೆ

ರಾಜಹಂಸ

ಮೌನ ಸಂಯೋಜನೆಯಲಿ ಜೇನಕಂಠ ಬೆರೆಸಿ
ಮಾಧುರ್ಯ ಪರಿಮಳ ಬೀರುತ್ತಾ ಬಣ್ಣ ಬಣ್ಣದ
ಹಕ್ಕಿಗಳೆಲ್ಲಾ ನಲ್ಮೆಯಿಂದ ತೂಗಿಸುತಿವೆ
ಸೌರಮಂಡಲದ ಆ ಮೊಗಸಾಲೆಯೊಳಗೆ
ಬೆಳದಿಂಗಳಿಂದ ಮಾಡಿದ ಕನ್ಯೆಯೊಂದಿಗೆ
ನಾನು ಜೀಕುತಿರುವ ಉಯ್ಯಾಲೆಯ

ಬುಗುರಿಯ ತಥಾ ಗಿರ್ರನೆ ತಿರುಗುವ
ಗ್ರಹಗಳೆಲ್ಲಾ ಮೂಕವಿಸ್ಮಿತವಾಗಿವೆ
ಶಶಿ ಮಹಾಶಯ ಅಚ್ಚರಿ ನುಂಗಿದ್ದಾನೆ
ಯಾವುದೋ ಘನ ಕಾರಣಕ್ಕಾಗಿ
ಸೂರ್ಯನಿಗೆ ಸುತ್ತುತ್ತಲೇ ಇರುವ
ಬುಧ ಗ್ರಹಕ್ಕೊಂದು ತುದಿ
ಮತ್ತೊಂದು ತುದಿ ನೆಪ್ಚೂನ್ ಗ್ರಹಕ್ಕೆ ಕಟ್ಟಿ
ಉಕ್ಕಿನಷ್ಟೇ ಗಟ್ಟಿಯಾಗಿ ಭಾವನೆಗಳಿಂದ
ಹೊಸೆದ ಹಗ್ಗದಲ್ಲಿ ನಾನು ಕಟ್ಟಿದ
ಆ ಅನೂಹ್ಯ ಜೋಕಾಲಿ ಕಂಡು!

ಕೆಂಪು ಮುಗಿಲು ಸೂರ್ಯನಿಗೆ
ಜನ್ಮ ನೀಡುವ ಆ ಶುಭ ಘಳಿಗೆ
ನೇತ್ರದ ಗಿಡದಲಿ ಅರಳುವ ಸ್ವಪ್ನಕೆ
ಬೆಳಕು ಸ್ಪರ್ಶಿಸಿದ ಆ ಕ್ಷಣವೇ
ಅನಂತ ನಭದಲ್ಲಿ ಚೆಲ್ಲಾಪಿಲ್ಲಿ ಬಿದ್ದಿದ್ದ
ನಕ್ಷತ್ರಗಳೆಲ್ಲಾ ಕಾಣೆಯಾಗುತ್ತವೆ

ಪ್ರಜ್ಞಾ ಮಂಡಲದಿಂದ ಇರುಳು
ತನ್ನ ನೆರಳು ಉಳಿಸಿ ಹೋದ ಮೇಲೆ
ಬುಧ ಮಾಯಾಲೋಕವೂ
ನೆಪ್ಚೂನ್ ವಾಙ್ಮಯವೂ
ಬದುಕು ಜೋಕಾಲಿಯೂ ಆಗಿರಲು
ಅನುಕ್ಷಣ ಜೀಕುತ್ತಲೇ ಇರುವೆನು
ಒಲವ ಕಾವ್ಯ ಕನ್ನಿಕೆಯೊಂದಿಗೆ!!sss

***

Leave a Reply