ಯಾರೋ ಲೆಕ್ಕ ಗೀಚುತ್ತಿರುವ ಸದ್ದು!

ದಾಖಲಾಗುತ್ತಿವೆಯೇ ಉಸಿರುಗಳು

ರೂಪಾ ಹಾಸನ 

ಈ ಚುಲ್ಟಾಣಿ ಕ್ರಿಮಿಯ
ನೋಡು ಅದೆಂಥಹ
ಗಾಢ ನಿದ್ರೆ!

ಎಷ್ಟು ಕಾಲದ್ದೋ
ಹೇಗೆ ಮಲಗಿದ್ದೋ
ಯಾವ ಸದ್ದೂ
ಯಾವ ಸ್ಪರ್ಶವೂ
ದುಃಸ್ವಪ್ನವೂ
ಅಲುಗಿಸದ
ಸಂತೃಪ್ತ ನಿದ್ದೆ.

ಎಚ್ಚರಾದ ಎಷ್ಟೋ
ಹೊತ್ತಿನವರೆಗೆ
ಕಣ್ಬಾರ, ಮಂಪರು
ಗ್ರಹಣ ಬುದ್ಧಿಗೂ.

ಕೊನೆಗೊಮ್ಮೆ
ದೂರದಲ್ಲೆಲ್ಲೋ
ಮಿಣಿಮಿಣಿ ಬೆಳಕು.
ಇರುವುದೆಲ್ಲಿ?
ಗುಹೆಯೋ?
ಗೂಡೋ?
ಗರ್ಭವೋ?

ಪ್ರಶ್ನೆಗಳೂ ಒಂದೊಂದಾಗಿ
ಉದುರುದುರಿ ಬಿದ್ದು
ಫಳ್ಳನೆ ಒಡೆದು
ಚೂರಾದ ಸದ್ದು.

ಮತ್ತೆ ಎಲ್ಲ ಸ್ತಬ್ಧ…..

ಆತಂಕವಿಲ್ಲ,
ಉದ್ವೇಗವಿಲ್ಲ,
ಪ್ರಶ್ನೆಗಳಿಲ್ಲ…..

ಕೈ ಕಾಲು ಕಣ್ಣು ಕಿವಿ….
ಎಲ್ಲ ಅಂಗಾಂಗ
ಮರಗಟ್ಟಿವೆ ಇದ್ದಲ್ಲೇ
ಆಡುತ್ತಿದೆ ಉಸಿರೊಂದೇ….
ಹೌದು. ಒಳಗೂ ಹೊರಗೂ!
ಸಧ್ಯ….ಜೀವವಿದೆ!

ಉಸಿರಾಟ ಗಮನಿಸು
ಉಸಿರಾಟ ಗಮನಿಸು
ದೂರದಸ್ಪಷ್ಟ
ಪ್ರಿಯ ಅಶರೀರವಾಣಿ…..

ಸರಾಗ ನಿಸ್ಸಂಗಿಯೊಳನುಗ್ಗಿದ
ಅಶರೀರ ಉಸಿರು
ಒಂದೊಂದೇ ಧಾತುಗಳ
ಮೃದುವಾಗಿ ಸ್ಪರ್ಶಿಸುತ್ತಾ
ನಿಶ್ಚೇತ ಕಣಗಳಲೀಗ
ಸಣ್ಣನೆ ಮಿಡುಕು, ಒಸರು!

ಉಸಿರು ತುಂಬಿಕೊಂಡ
ಕಾಯದೊಳಗಣ ಜೀವ
ತಲೆಯಾಡಿಸುತ್ತಿದೆ
ಪ್ರತಿ ಉಚ್ವಾಸ ನಿಶ್ವಾಸಕ್ಕೂ…

ಯಾರೋ ಲೆಕ್ಕ
ಗೀಚುತ್ತಿರುವ ಸದು!್ದ
ದಾಖಲಾಗುತ್ತಿವೆಯೇ
ಈ ಚುಲ್ಟಾಣಿ ಕ್ರಿಮಿಯ
ಯಕಶ್ಚಿತ್
ಉಸಿರುಗಳೂ?

1 comment

  1. ಅರ್ಥಗರ್ಭಿತ ಕವಿತೆ
    ದನ್ಯವಾದಗಳು

Leave a Reply