ಹೀಗೊಂದು ‘ಸುಬ್ರಹ್ಮಣ್ಯ ಪುರಂ’

‘ಸೃಜನ್’ ಎಂಬ ಪ್ರತಿಭೆಗೆ ಹಲವು ಮುಖ. ‘ಅವಧಿ’ ಓದುಗರಿಗಂತೂ ಈ ಮೊದಲಿನಿಂದಲೂ ಸುಪರಿಚಿತ. ಚಿತ್ರ ಕಲಾವಿದ, ಅನುವಾದಕ, ಬರಹಗಾರ ಹೀಗೆ ಏನೆಲ್ಲಾ.

ಆದರೆ ಇವರು ವೃತ್ತಿಯಿಂದ ಎಂಜಿನಿಯರ್ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಪ್ರಸ್ತುತ ನಾರಾಯಣಪುರದಲ್ಲಿ ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿರುವ ಸೃಜನ್ ಮೂಲ ಹೆಸರು ಶ್ರೀಕಾಂತ್.

ಜಿ ಎನ್ ಮೋಹನ್ ಅವರ ನನ್ನೊಳಗಿನ ಹಾಡು ಕ್ಯೂಬಾ ಅಗ್ನಿ ಶ್ರೀಧರ್ ಅವರ ಎದೆಗಾರಿಕೆ ಪ್ರಕಾಶ್ ರೈ ಅವರ ಇರುವುದೆಲ್ಲವ ಬಿಟ್ಟು.. ಹೀಗೆ ಅನೇಕ ಕೃತಿಗಳನ್ನು ತೆಲುಗಿಗೆ ಅನುವಾದಿಸಿದ್ದಾರೆ. ಅಂತೆಯೇ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಹಲವು ತೆಲುಗು ಲೇಖಕರನ್ನು ಕನ್ನಡದ ಅಂಗಳಕ್ಕೆ ಕರೆತಂದಿದ್ದಾರೆ.

ಚಿತ್ರರಂಗದಲ್ಲಿ ಸೃಜನ್ ಅವರದ್ದು ಇನ್ನಿಲ್ಲದ ಆಸಕ್ತಿ. ಸಿನೆಮಾಗಳೆಲ್ಲವನ್ನೂ ಭಾರಿ ಹಸಿವಿನಿಂದ ನೋಡುವುದರೊಂದಿಗೆ ಶುರುವಾದ ಬಂಧ ಈಗ ರಾಮ್ ಗೋಪಾಲ್ ವರ್ಮಾ ಅವರ ಸಿನೆಮಾಗೆ ಹಾಡು ಬರೆಯುವವರೆಗೂ ಬಂದು ನಿಂತಿದೆ.

ಇಂದಿನಿಂದ ಅವರು ವಾರಕ್ಕೊಮ್ಮೆ ‘ಅವಧಿ’ ಓದುಗರು ನೋಡಲೇಬೇಕಾದ ಚಿತ್ರಗಳನ್ನು ರೆಕಮೆಂಡ್ ಮಾಡಲಿದ್ದಾರೆ.

4೦ ವರ್ಷಗಳ ಹಿಂದೆ ತಮಿಳುನಾಡಿನಲ್ಲಿ  ನಡೆದಿದ್ದ ಘಟನೆಯನ್ನು ಆಧರಿಸಿದ ಸಿನಿಮಾ ‘ಸುಬ್ರಹ್ಮಣ್ಯಪುರಂ’

‘ಸುಬ್ರಹ್ಮಣ್ಯಪುರಂ’ ಸಾಧಾರಣ ಮಾರಾಮಾರಿ, ಗ್ರಾಮ ರಾಜಕೀಯದ ದ್ವೇಷ ದಳ್ಳುರಿಗಳ ಹಿನ್ನೆಲೆಯಲ್ಲಿ ತಮ್ಮ ಅಮೂಲ್ಯ ಬದುಕನ್ನು ಮುಗ್ಧವಾಗಿ ನಾಶಮಾಡಿಕೊಳ್ಳುವ ಸ್ನೇಹಿತರ ಕತೆ. ಚಿತ್ರದಲ್ಲಿನ ಆ ಕಾಲದ ಪ್ರೀತಿ ,ಪ್ರೇಮ, ಆಕರ್ಷಣೆ, ಪರಿಸರಗಳು ಪ್ರೇಕ್ಷಕನಿಗೆ ಮುದ ಕೊಡುತ್ತವೆ. ಇಲ್ಲಿ ಪರಮ್ (ಶಶಿಕುಮಾರ್) ಪಾತ್ರದ  ನಟನೇ ಸಿನೆಮಾದ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥಾ ಲೇಖಕ.

ಜೈ ಮತ್ತು ಶಶಿಕುಮಾರ್ (ಅಳಗರ್ ಮತ್ತು ಪರಮ್ ) ಇಬ್ಬರೂ ನಿರುದ್ಯೋಗಿಗಳು. ಜೀವದ ಗೆಳೆಯರು ಕೂಡ. ಹಾಯಾಗಿ ತಿಂದುಂಡು ಕಾಲ ಕಳೆಯುತ್ತಾ ಸುಬ್ರಹ್ಮಣ್ಯಪುರಂ ಹಳ್ಳಿಯಲ್ಲಿ ತಿರುಗಾಡಿಕೊಂಡಿರುತ್ತಾರೆ. ಊರಿನ ಪುಟ್ಟ ರಾಜಕೀಯ ಪುಡಾರಿಯೊಬ್ಬ ಇವರನ್ನು ತನ್ನ ಕಾನೂನು ಬಾಹಿರ ಅಗತ್ಯಗಳಿಗೆ ಬಳಸಿಕೊಳ್ಳುತ್ತಿರುತ್ತಾನೆ. ತಮ್ಮಂಥ ಮೂರು ಜನರನ್ನು ಕಟ್ಟಿ ಕೊಂದು ಆಗಾಗ ಸಣ್ಣ ಪುಟ್ಟ ಕಳ್ಳತನ ಮಾಡುತ್ತಾ, ಪೊಲೀಸರಿಗೆ ಸಿಕ್ಕಿ ಬಿದ್ದು ಸ್ಟೇಷನಲ್ಲಿರೋದು, ರಾಜಕೀಯ ಪುಡಾರಿಯ ಶಿಫಾರಸ್ಸಿನಿಂದ ಹೊರಬರೋದು.. ಇದು ಅವರ ದಿನಚರಿ.

ಒಂದು ಕೊಲೆಗಾಗಿ ರಾಜಕೀಯ ಪುಡಾರಿ ಈ ಗುಂಪಿನ ಮೂವರನ್ನು ಬಳಸಿಕೊಳ್ಳುತ್ತಾನೆ. ಅಳಗರ್, ಪರಮ್ ಮತ್ತು ಕಾಶಿ ಸುಪಾರಿ ಮುಗಿಸಿದ ನಂತರ  ನಗುತ್ತಲೇ ಜೈಲಿಗೆ ಹೋಗುತ್ತಾರೆ. ಆದರೆ ತಿರುವು ಇಲ್ಲೇ ಇರೋದು. ಪುಡಾರಿ ಹುಡುಗರ ಕಡೆ ತಿರುಗಿ ಸಹಿತ ನೋಡುವದಿಲ್ಲ. ತಣ್ಣಗೆ ತನ್ನ ಪಾಡಿಗೆ ತಾನಿದ್ದು ಬಿಡುತ್ತಾನೆ. ಹುಡುಗರು ಭಯದಿಂದ ಹತಾಶರಾಗುತ್ತಾರೆ. ಎಲ್ಲೂ ದಾರಿ ಕಾಣುವುದಿಲ್ಲ.

ಆ ಊರಿನ ಮತ್ತೊಬ್ಬ ಮರಿ ಪುಡಾರಿ ಹುಡುಗರ ಕಡೆ ಆಸಕ್ತಿ ತೋರುತ್ತಾನೆ. ಅವನಿಗೆ ರಾತ್ರಿಯಲ್ಲಿ ಜೈಲಿನ ಹುಡುಗರು ತನ್ನ ಆಯುಧಗಳಂತೆ ಗೋಚರಿಸುತ್ತಾರೆ. ಮತ್ತು ಅವನಿಗಾಗಿ ಮತ್ತೊಂದು ಭೀಕರ ಕೊಲೆಗೈಯಲು ಸಿದ್ಧರಾಗುತ್ತಾರೆ. ತಾವು ಬದುಕಲ್ಲಿ ನೆಲೆಯೂರಲು ಆರ್ಥಿಕವಾಗಿ ಸಹಕರಿಸುತ್ತಾನೆಂಬ ಒಂದೇ ಒಂದು ಕಾರಣದಿಂದ ಮುಗ್ಧರಾಗಿ ಆತ   ಹೇಳಿದ್ದಕ್ಕೆಲ್ಲ ಹೂಂ ಎನ್ನುತ್ತಾರೆ. ಇಲ್ಲೂ ಅವನ ಮೋಸದ ಮತ್ತೊಂದು ಮುಖದ ಕರಾಳತೆ ಹುಡುಗರನ್ನು ಬೆಚ್ಚಿ ಬೀಳಿಸುತ್ತದೆ. ಈ ಅಮಾನುಷತೆಗೆ ತೆರೆ ಎಳೆಯಲು ಅವರು ಪುಡಾರಿಯ ತಮ್ಮನನ್ನೇ ಕೊಲೆಮಾಡಲು ಸಂಚು ಹೂಡುತ್ತಾರೆ. ಊಹಿಸಲಸಾಧ್ಯವಾದ ತಿರುವುಗಳು ಸಿನಿಮಾದಲ್ಲಿವೆ.

ಪೋಲಿ ಗೆಳೆಯರ ಸಣ್ಣಪುಟ್ಟ ಕಳ್ಳತನಗಳು, ಯಾರಿಗಾಗಿಯೋ ಮಾಡುವ ಬರ್ಬರ ಕೊಲೆಗಳ ನಡುವೆ ಬೆಳದಿಂಗಳಂಥ ಪ್ರೇಮ ಕಥೆಯೊಂದು ನಡೆಯುತ್ತದೆ. ಪುಡಾರಿಯ ಮಗಳು ನೈದಿಲೆಯಂಥ ಚಂದನೆ ಬೆಡಗಿ ತುಳಸಿ, ಜೈ ನನ್ನು ಪ್ರೀತಿಸುವ ಪರಿ ಮತ್ತು ಅದರ ವಿಲಕ್ಷಣ ಅಂತ್ಯ ಚಿತ್ರದ ಮುಖ್ಯ ಘಟ್ಟಗಳಾಗಿ ಕಾಡುತ್ತವೆ. ತುಳಸಿಯಾಗಿ ಸ್ವಾತಿ ಅದ್ಭುತವಾಗಿ ಅಭಿನಯಿಸಿದ್ದಾಳೆ.

ತುಳಸಿಯ ಮುಗ್ಧ ಪ್ರೀತಿ, ಆಕರ್ಷಣೆ ಆಕೆಯ ಬೊಗಸೆ ಕಂಗಳು, ಕಳೆದು ಹೋದ  ಬಾಲ್ಯದ ಗೆಳತಿಯಂತೆ, ಲಂಗ  ದಾವಣಿಯಲ್ಲಿ ಅಪ್ಪಟ ಮಣ್ಣಿನ ನೆಲದ ಹುಡುಗಿಯಾಗಿ ಗಮನ  ಸೆಳೆಯುತ್ತಾಳೆ. ಸಿನೆಮಾದಲ್ಲಿ ಪ್ರೀತಿ ಕುರಿತಂತೆ ಎಲ್ಲೂ  ಪುಟಗಟ್ಟಲೆ ಗಂಟೆಗಟ್ಟಲೆ ಭಾಷಣಗಳಿಲ್ಲ. ಮನೆಯವರ ಎಮೋಶನಲ್ ಬ್ಲಾಕ್ ಮೇಲ್ ಗೆ ಸ್ವಾತಿಯ ಸಂಯಮ ನಟನೆ ಬೆರಗು ಗೊಳಿಸುತ್ತದೆ. ಪರಮ್ ಪಾತ್ರದಲ್ಲಿ ಶಶಿಕುಮಾರ್, ಕಾಶಿ ಪಾತ್ರದಲ್ಲಿ ಗಾಂಜಾ ಕುರುಪ್ಪು ಇಷ್ಟವಾಗುತ್ತಾರೆ.

ಜೇಮ್ಸ್ ವಸಂತನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಸ್.ಆರ್. ಕಥಿರ್ ರ ಸಿನಿಮಾಟೋಗ್ರಫಿ ಆಹ್ಲಾದವಾಗಿದೆ.ಚಿತ್ರದ ಪ್ರತಿ ಫ್ರೇಮ್ ೧೯೮೦ ರ ಪರಿಸರಗಳನ್ನು ಗಾಢ ವಾಗಿ ನೆನಪಿಸುತ್ತದೆ.ಆ ಸಮಯದ ಉದ್ದ ಹಿಪ್ಪಿ ಮಾದರಿಯ ಕೇಶ ವಿನ್ಯಾಸ

ದಟ್ಟ ಬಣ್ಣಗಳ ಬೆಲ್ ಬಾಟಂ ಪ್ಯಾಂಟುಗಳು, ಬಿಗಿಯಾದ ದೊಡ್ಡ ಕಾಲರಿನ ಹೂಗಳ, ಚೆಕ್ಸ್ ಶರಟುಗಳು, ಆಗಾಗ ಹಾದು ಹೋಗುವ ಅಂಬಾಸಿಡರ್ ಕಾರುಗಳು, ಹಳೆಯ  ಮನೆಗಳು, ಬಸ್ಸುಗಳು, ಕರೆನ್ಸಿ ನೋಟುಗಳು, ನೇಪಥ್ಯದ ರೇಡಿಯೋ ಹಾಡುಗಳು ನಮ್ಮನ್ನು ನಲವತ್ತು ವರ್ಷ ಗಳ ಹಿಂದಕ್ಕೆ ಕರೆದೊಯ್ಯುತ್ತವೆ.

ಕೊನೆಯಲ್ಲಿ ನಾಯಕನನ್ನು ಅವನ ಜೀವದ ಗೆಳೆಯ ನಂಬಿಕೆ ದ್ರೋಹದಿಂದ ಕೊಲೆ ಮಾಡಿಸಿದ ಮೇಲೆ ಅವನು ಬೂತಿನಿಂದ ಹಾಲು ತರುವಷ್ಟೇ ಮತ್ತು ತರಕಾರಿ ತರುವಷ್ಟೇ ಸಹಜವಾಗಿ ನಿರ್ಲಿಪ್ತವಾಗಿ ಸುಮಾರು ಹೊತ್ತು ಕೆರೆಯ ದಡದ ಮೇಲೆ ನಡೆದು ಬರುವ ಸಿಂಗಲ್ ಶಾಟ್ ದೃಶ್ಯವಂತೂ ಇಡೀ ಚಿತ್ರಕ್ಕೆ ಮುಕುಟ ಪ್ರಾಯವಾಗಿದೆ. ಚಿತ್ರದ ಸೂತ್ರಧಾರ ಶಶಿಕುಮಾರ್ ನ ಪ್ರತಿಭೆಯ ಬಗ್ಗೆ ಹೆಮ್ಮೆಯಾಗುತ್ತದೆ.ಚಿತ್ರದಲ್ಲಿ ಕೆಲವು ಬರ್ಬರ ಕೊಲೆಗಳು ಜಗುಪ್ಸಾಕರವಾಗಿದ್ದರೂ ಒಟ್ಟಾರೆ ಚಿತ್ರ ಹೊಸ ಅನುಭವ ನೀಡುತ್ತದೆ.

ಚಿತ್ರ; ಸುಬ್ರಹ್ಮಣ್ಯ ಪುರಂ

ನಿರ್ದೇಶನ, ನಿರ್ಮಾಣ ಮತ್ತು ಸ್ಕ್ರೀನ್ ಪ್ಲೇ : ಶಶಿಕುಮಾರ್

ತಾರಾಗಣ:ಜೈ, ಶಶಿಕುಮಾರ್, ಸ್ವಾತಿ, ಗಾಂಜಾ ಕುರುಪ್ಪು, ಸಮುದ್ರ ಕನಿ.

ಸಂಗೀತ:ಜೇಮ್ಸ್ ವಸಂತನ್

ಸಿನಿಮಾಟೋಗ್ರಫಿ :ಎಸ್.ಆರ್.ಕಥಿರ್

ಬಿಡುಗಡೆ: ೨೦೦೮

ಸಮಯ: ೧೬೦ ನಿಮಿಷ

ಭಾಷೆ:ತ ಮಿಳು

Leave a Reply