ಶಯ್ಯಾಗೃಹದ ಸುದ್ದಿಗಳು

ಶೋಭಾ ನಾಯಕ

ಅವರೊಂದಿಗೆ ಎದ್ದೆ
ಇವರೊಂದಿಗೆ ಮಲಗಿದೆ
ಮತ್ತೊಬ್ಬರೊಂದಿಗೆ ಇನ್ನೇನೋ…
ಅದ್ಯಾಕೊ ನನ್ನ ಶಯ್ಯಾಗೃಹ
ಇವರ ಕುತೂಹಲ !

ದೇಹದೊಳಗೆ ದೇಹ ಬೆರೆತು
ಮೌನವಾದ ಕ್ಷಣ
ಇವರಿಗೆ ಸಂಬಂಧಿಸಿದ್ದಲ್ಲ.
ನನ್ನ ಅರಮನೆ
ನನ್ನ ರಾಜಕುಮಾರ
ಕೇವಲ ನನಗೆ ಮಾತ್ರ.

ಅವರಿಗೋ ನನ್ನದೇ
ಚಿಂತೆ : ರೂಪ, ಬಣ್ಣ, ಧಿರಿಸು,
ಹಾವ-ಭಾವ, ಅಷ್ಟೇ ಏಕೆ?
ತುಟಿಯ ಗಾಯ, ಮುತ್ತಿನ ಕಲೆ
ಮೋಜಿನ ಮಾತು…

ಮತ್ತೆ ಮತ್ತೆ ಇಣುಕಿ, ಕೆಣುಕಿ
ಮೈಯೆಲ್ಲ ಪರಚಿಕೊಳ್ಳುವ ಅವರು
ನನ್ನನ್ನೇ ಅನುಕರಿಸಿ, ಅನುಸರಿಸಿ
ನನ್ನನ್ನೇ ದ್ವೇಷಿಸುವ ಇವರೂ
ನನಗೆ ಕೊಟ್ಟ ಗೌರವ ಎನ್ನಲೇ?

ನನ್ನ ಅವನ ಕಣ್ಣುಗಳು ಕಲೆತು
ನಮ್ಮಿಬ್ಬರಿಗೆ ಮಾತ್ರ ತಿಳಿಯುವ
ಸಂಭಾಷಣೆ
ಕಣ್ಣು ತೆರೆದು ನೋಡಿದರೆ
ಇವರಿಗೂ ಅರ್ಥವಾದೀತು

ಆದರೂ

ಶಯ್ಯಾಗೃಹದ ಸುದ್ದಿಗಳು
ಇನ್ನೊಬ್ಬರ ಬಾಯಿಯ ತಾಂಬೂಲವಾಗುವುದು
ಅವರವರ ಶಯ್ಯೆಗಳು ಶವಗಾರಗಳಾದಾಗ.

5 comments

  1. ಪೂರ್ತಿ ಕವಿತೆಯನ್ನ ಕೊನೆಯ ಸಾಲು ಮಾರ್ಮಿಕವಾಗಿ ಕಟ್ಟಿಕೊಡುತ್ತದೆ, ಕವಿತೆಯೆಂದರೆ ಹೀಗೆ ಅನಿಸುವಂತೆ.

    ಅನುಪಮಾ ಪ್ರಸಾದ್

  2. ಕೊನೆಯ ಸಾಲುಗಳು ತುಂಬಾ ಮಾರ್ಮಿಕವಾಗಿವೆ . ಅಭಿನಂದನೆಗಳು .

  3. ಅರ್ಥಗರ್ಭಿತವಾಗಿದೆ, ಲೇಖಕರಿಗೆ ಮತ್ತು ಅವಧಿ ತಂಡಕ್ಕೆ ಧನ್ಯವಾದಗಳು.

  4. ನನಗೆ ಕೊಟ್ಟ ಗೌರವ ಎನ್ನಲೇ ಎನ್ನುವಲ್ಲಿಯ ವ್ಯಂಗ್ಯ ತುಂಬ ಹಿಡಿಸಿತು….

Leave a Reply