ಕೊನೆಗೂ ಆತ ಬ್ಯಾಂಕಿಗೆ ಹೋಗುವುದನ್ನೇ ಬಿಟ್ಟ..

 ೧೬

ಕನ್ನಡ ಶಾಲೆಯ ಮಾಸ್ತರನಾದ ಅಣ್ಣನ ನಿವೃತ್ತಿ ಅಂಚಿನ ಪಗಾರ ಆಗುತ್ತಿರುವುದು ಹೊನ್ನಾವರದ SBI ನಲ್ಲಿ. ತಿಂಗಳಿಗೆ ಎರಡು ಬಾರಿ ಮಾತ್ರ ಆತ ಬ್ಯಾಂಕಿಗೆ ಹೋಗುತ್ತಿದ್ದ. ಪಗಾರ (ತಿಂಗಳ ಸಂಬಳ) ಬಂದಾಗ ಒಮ್ಮೆ, ಮತ್ತೆ ತಂದ ಹಣ ಎಲ್ಲಾ ಖರ್ಚಾದ ಮೇಲೆ ಮತ್ತೇನಾದರೂ ಏಕೌಂಟಿನಲ್ಲಿ ಇದೆಯೇ? ಎಂದು ನೋಡಲು ಇನ್ನೊಮ್ಮೆ.

ಪಗಾರು ಬರುತ್ತಿದ್ದಂತೆ ಹಣ ತಂದು ಸುಬ್ರಾಯ ಹೆಗಡೆಯವರಿಗೆ ಪೇಪರ್ ಬಿಲ್, ಅಪ್ಪಚ್ಚಿ ಅಂಗಡಿ ಸಾಮಾನು ಹಣ, ವೈದ್ಯರಾದ ಅಚ್ಚುತ ಪಂಡಿತರಿಗೆ ಔಷಧಿ ಹಣ, ವಿವಿಧ ಪತ್ರಿಕೆಗಳಿಗೆ ಚಂದಾ ಹಣ, ಹಳೆ ಸಾಲದ ಪಾವತಿ, ಮೀನಿಗೆ, ನನ್ನ ಖರ್ಚಿಗೆ, ಪುಸ್ತಕಕ್ಕೆ, ಅಯ್ಯನಿಗೆ ಮನೆ ಹಿತ್ತಲಗೆಲಸ ಮಾಡಿದ್ದಕ್ಕೆ, ಸಹಾಯ ಮಾಡಿ ಎಂದು ಯಾರಾದರೂ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಕ್ಕೆ ಎಂ.ಓ… ಹೀಗೆ ಬಂದ ಹಣದಲ್ಲಿ ಹಂಚಿಕೊಡುತ್ತಿದ್ದ. ಕಡಿಮೆ ಬಿದ್ದರೆ (ಕಡಿಮೆ ಬಿದ್ದೇ ಬೀಳುತ್ತಿತ್ತು) ಅಕ್ಕ ಮೆನೇಜ್ ಮಾಡಿಕೊಳ್ಳುತ್ತಿದ್ದಳು.
ನಿವೃತ್ತನಾಗುವಾಗ ಅವನ ಸಂಬಳ ಬಹಳ ಕಡಿಮೆ. ನಿವೃತ್ತನಾದ ಮೇಲೆ ಕೊನೆ ಕೊನೆಗೆ ಸರ್ವಿಸ್ಸಿನಲ್ಲಿದ್ದಾಗ ಪಡೆದ ಸಂಬಳಕ್ಕಿಂತ ಹೆಚ್ಚು ವೇತನ ನಿವೃತ್ತಿ ನಂತರ ಬರುತ್ತಿತ್ತು ಎಂದು ಖುಷಿಯಿಂದ ಹೇಳ್ತಿದ್ದ.

ಆತ ತನಗೆ ಅಂತ ಒಂದಿಷ್ಟು ಇಟ್ಟುಕೊಂಡು ಉಳಿದಿದ್ದನ್ನು ಯಾವುಯಾವುದಕ್ಕೆ ಖರ್ಚು ಮಾಡಬೇಕೆಂದು ಚೀಟಿ ಬರೆದು ನನಗೆ ಕೊಡುತ್ತಿದ್ದ. ಆಗ ಅವನ ಮ್ಯಾನೇಜರ್ ನಾನು. ಮೊದಲಿನಂತೆ ಎಲ್ಲರಿಗೆ ಅವನೇ ಕೊಡಬಹುದಾಗಿತ್ತಲ್ಲ ಎನ್ನಿಸಬಹುದು ನಿಮಗೆ! ಕೊಡಬಹುದಾಗಿತ್ತು. ಆದರೆ ನಾನಾಗ ಕಮ್ಯುನಿಷ್ಟ ಪಕ್ಷದ ಪೂರ್ಣಾವಧಿ ಕಾರ್ಯಕರ್ತನಾಗಿದ್ದೆ. ಆಗ ನನಗೆ ತಿಂಗಳು ಎರಡು ತಿಂಗಳಿಗೆ 1000 ರೂ ಕೊಡುತ್ತಿದ್ದರು. ಕೈಯಲ್ಲಿ ಹಣ ಇರುತ್ತಿರಲಿಲ್ಲ. ವಯಸ್ಸಿಗೆ ಬಂದ ಮಗ, ಅವನಿಗೆ ತನ್ನಲ್ಲಿ ಹಣ ಇಲ್ಲ ಎಂದು ಕೀಳರಿಮೆ ಬರಬಾರದೆಂದು ಆತ ಇಷ್ಟೆಲ್ಲಾ ಮಾಡುತ್ತಿದ್ದ. ಮತ್ತೆ ನಿನಗೆ ಬೇಕಾದರೆ ಕೇಳು ಅನ್ನುತ್ತಿದ್ದ. ಪಾಪ ಅವನ ತಿಂಗಳ ಖರ್ಚಿಗೆ 2-3 ಸಾವಿರವೂ ಇರುತ್ತಿರಲಿಲ್ಲ; ಮತ್ತೆಲ್ಲಿ ನಾನು ಕೇಳುವುದು?

ಯಾವಾಗಲೂ ಆತ ಬ್ಯಾಂಕಿಗೆ ಹೋಗಲಿ, ವಿದ್ಯುತ್, ಫೋನ್ ಬಿಲ್ ತುಂಬಲು ಹೋಗಲಿ, ಸರತಿ ಸಾಲಿನಲ್ಲೇ ನಿಲ್ಲುವುದು. ಒಮ್ಮೆಯೂ ಸಾಲು ಮುರಿದದ್ದಿಲ್ಲ. ಹೆಂಗಸರು ಮಕ್ಕಳು ಬಂದರೆ ತನ್ನ ಸರತಿ ಬಿಟ್ಟು ಅವರಿಗೆ ಅವಕಾಶ ಕೊಡುತ್ತಿದ್ದ. ಎಂಥಾ ಸಂದರ್ಭ ಬಂದರೂ ಬೇರೆಯವರಿಂದ ಇನ್ಫ್ಲುಯೆನ್ಸ್ ಮಾಡುವುದಾಗಲಿ, ತನ್ನ ಸ್ವಂತ ಪ್ರಭಾವ ಬೆಳೆಸಿ ಸವಲತ್ತು ಪಡೆಯುವುದಾಗಲಿ ಮಾಡಿದವನಲ್ಲ.

ಇದು ಇಡೀ ಬ್ಯಾಂಕಿನ ಎಲ್ಲರಿಗೂ ಗೊತ್ತಿದ್ದ ಸಂಗತಿ. ತುಂಬಾ ಜನ ಪರಿಚಿತರು ‘ಮುಂದೆ ಬನ್ನಿ’ ಎಂದು ಕರೆದರೂ ಹೋಗುತ್ತಿರಲಿಲ್ಲ. ನನ್ನನ್ನು ಕರೆದು “ತಂದೆಯವರಿಂದ ಚೆಕ್ ಪಡೆದು ನೀವೇ ಬನ್ನಿ. ಪಾಪ ಅವರಿಗೆ ವಯಸ್ಸಾಗಿದೆ. ಸಾಲಿನಲ್ಲಿ ನಿಂತಿರುವಾಗಲೂ ಒಮ್ಮೊಮ್ಮೆ ಪುಸ್ತಕ ಓದುತ್ತ ನಿಂತಿರ್ತಾರೆ. ಮುಂದೆ ಬನ್ನಿ ಎಂದರೂ ಬರೋದಿಲ್ಲ. ಸಾಲಿನಲ್ಲಿ ನಿಂತಿರ್ತಾರೆ. ನೀವೆ ಹಣ ಒಯ್ಯಬಾರದೇ?” ಎಂದು ಅಲ್ಲಿದ್ದ ಸಿಬ್ಬಂದಿಗಳು ಆಗಾಗ ನನಗೆ ಹೇಳುತ್ತಿದ್ದರು.

ನಾನು ಅಣ್ಣನನ್ನು ಕೇಳಿದೆ. ನಾನೆಲ್ಲಾದರೂ ಯೂನಿಯನ್ನಿನ ವಶೀಲಿ ಹಚ್ಚಿ(ನಾನು ಹೋರಾಟದಲ್ಲಿ ಇರುವುದರಿಂದ ಬ್ಯಾಂಕ್ ನೌಕರರ ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದುದು ಅಣ್ಣನಿಗೆ ಗೊತ್ತಿತ್ತು.) ಸಾಲು ಮುರಿದು ಹಣ ತರಬಹುದೆಂಬ ಶಂಕೆಯಿಂದ ಆತ ನನಗೆ ಒಪ್ಪಿಗೆ ನೀಡಿರಲಿಲ್ಲ.

ಒಂದು ದಿನ ಎಂದಿನಂತೆ ಆತ ಸಾಲಿನಲ್ಲಿ ನಿಂತು ಹಣ ಪಡೆದೆ. ಆದರೆ ತಾಂತ್ರಿಕ ತೊಂದರೆಯಿಂದ ಆಕ್ಷಣ ಪಾಸ್‍ಬುಕ್ ಎಂಟ್ರಿ ಆಗಿರಲಿಲ್ಲ. “ನಂತರ ಬಂದು ಮಾಡಿಸಿಕೊಂಡು ಹೋಗಿ” ಎಂದು ಅಲ್ಲಿಯ ಸಿಬ್ಬಂದಿ ಹೇಳಿದ್ದಾರೆ. ಪೇಟೆಯಲ್ಲಿ ಬೇರೆ ಕೆಲಸ ಮುಗಿಸಿ ಈತ ಒಂದು ತಾಸು ಬಿಟ್ಟು ಹೋದಾಗಲೂ ಉದ್ದ ಸಾಲೇ ಇತ್ತು. ಹಾಗಾಗಿ ಮತ್ತೆ ಸಾಲಿನಲ್ಲಿ ನಿಂತಿದ್ದ. ಇದನ್ನು ನೋಡಿದ ವಾಚ್‍ಮನ್ “ಆಗ್ಲೇ ಬಂದು ಹೋದ್ರಲ್ಲಾ ನೀವು; ಎಂಟ್ರಿ ಮಾಡೋದು ಮಾತ್ರ ಅಲ್ವಾ? ಪಕ್ಕದ ಕೌಂಟರಿಗೆ ಹೋಗಿ ಹಾಕಿಸಿಕೊಳ್ಳಿ” ಅಂತ ಪ್ರೀತಿಯ ಸಲಹೆ ಕೊಟ್ಟಿದ್ದ. ಆದರೂ ಅಣ್ಣ ಇವನ ಸಲಹೆಯನ್ನು ಪ್ರೀತಿಯಿಂದಲೇ ಸ್ವೀಕರಿಸಿರಲಿಲ್ಲ. ಆಮೇಲೆ ಪಕ್ಕದ ಕೌಂಟರಿನಲ್ಲಿದ್ದ ಅಸಿಸ್ಟೆಂಟ ಮ್ಯಾನೇಜರ್ ಆಗಿದ್ದವರು ‘ಭಂಡಾರಿ ಮಾಸ್ತರರು ಆಗಲೇ ಬಂದಿದ್ದರು. ಅವರಿಗೆ ಪಕ್ಕದ ಕೌಂಟರಿನಲ್ಲಿ ಎಂಟ್ರಿ ಹಾಕಿಸಿಕೊಳ್ಳಿ’ ಎಂದು ಹೇಳಿ ಕಳಿಸಿದರು. ಹಾಗಾಗಿ ತಂದೆಯವರು ಪಕ್ಕದ ಕೌಂಟರಿಗೆ ಹೋಗಿ ಪಾಸ್‍ಬುಕ್ ನೀಡಿದ್ದೇ ಅಲ್ಲಿದ್ದ ಇನ್ನೊಬ್ಬ ಸಿಬ್ಬಂದಿ “ಯಾಕೆ ಸಾಲು ಮುರಿದು ಬಂದ್ರಿ, ಸಾಲಲ್ಲಿ ಬರಬೇಕು. ಇಷ್ಟು ವಯಸ್ಸಾಗಿದೆ, ಕೂದಲು ಬೆಳ್ಳಗಾಗಿದೆ. ಆದರೂ ಸಾಲಲ್ಲಿ ಬರಬೇಕೆಂಬ ಕಾಮನ್ ಸೆನ್ಸ್ ಇಲ್ಲವೇ?” ಎಂದು ಮುಖ ಸಿಂಡರಿಸಿಕೊಂಡು ಗಟ್ಟಿಯಾಗಿ ಹೇಳಿದ್ದಾನೆ. ಆಗ ಈ ಮಾತು ಕೇಳಿದ ಅಣ್ಣ ತನಗಾದ ಆಘಾತದ ನಡುವೆ ಕೂಡ ತಾನು ತಪ್ಪು ಮಾಡಿಲ್ಲವೆಂದು, ಸಹಾಯಕ ಮ್ಯಾನೇಜರ್ ಹೇಳಿದ್ದೆಂದು ಹೇಳಲು ಪ್ರಯತ್ನಿಸಿದರೂ ಸಿಬ್ಬಂದಿ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಯಾವುದೋ ಪೂರ್ವಾಗ್ರಹದಿಂದ ಪಾಸ್‍ಬುಕ್‍ನ್ನು ಕೈಗೆ ವಾಪಾಸು ನೀಡಿದ.

ಅದೇ ಸಾಲಿನ ಹಿಂದಿದ್ದವರೂ ಅಣ್ಣನ ಪರವಾಗಿ ಮಾತನಾಡಿದ್ದಾರೆ. ಆದರೂ ಈತ ಅಪಮಾನದಿಂದ ತಲೆ ತಗ್ಗಿಸಿಕೊಂಡು ಮನೆ ಸೇರಿದ. ಅಕ್ಷರಶಃ ಆತನಿಗೆ ಕಣ್ಣಲ್ಲಿ ನೀರು ಬಂದಿತ್ತು. ಈ ಅಪಮಾನವನ್ನು ಅವನಿಗೆ ವರ್ಷವಾದರೂ ಮರೆಯಲು ಸಾಧ್ಯವಾಗಲಿಲ್ಲ. ಒಂದೇ ಒಂದು ದಿನ ಸಾಲು ಬಿಟ್ಟು ಹೋಗದಿದ್ದರೂ ಹೀಗೆ ಅಷ್ಟೊಂದು ಜನರ ಎದುರು ಹೇಳಿಸಿಕೊಳ್ಳಬೇಕಾಯಿತಲ್ಲಾ ಎಂದು ಮರುಗುತ್ತಿದ್ದ.

ಅದೇ ಕೊನೆ; ಆ ಮೇಲೆ ಆತ ಬ್ಯಾಂಕಿಗೆ ಹೋಗಲೇ ಇಲ್ಲ. ATM ಕಾರ್ಡ್ ಮಾಡಿಸಿಕೊಟ್ಟೆ. ಮೊದಮೊದಲು ಅದಕ್ಕೂ ಆತ ಒಪ್ಪಿಗೆ ಕೊಟ್ಟಿರಲಿಲ್ಲ. ATM ವ್ಯವಸ್ಥೆ ಕೂಡ ಯುವಜನರ ಉದ್ಯೋಗ ಕಸಿಯುತ್ತದೆಂದು ಅದನ್ನು ಆತ ವಿರೋಧಿಸುತ್ತಿದ್ದ. ಎಲ್ಲರೂ ATM, ಕಂಪ್ಯೂಟರ್ ಎಂದು ಯಂತ್ರದ ಮೊರೆ ಹೋದರೆ ಯುವಜನರ ಉದ್ಯೋಗದ ಸ್ಥಿತಿ ಏನು ಎನ್ನುವುದು ಆತನ ಆತಂಕವಾಗಿತ್ತು.

ಆದರೂ ನನ್ನ ಅನುಕೂಲಕ್ಕೆ ATM ಕಾರ್ಡ ಮಾಡಿಸಿದ್ದೆ. ಆನಂತರ ಬ್ಯಾಂಕಿನಿಂದ ಹಣ ತರುವ ಸರದಿ ನನ್ನದೇ ಆಗಿತ್ತು. ಚೆಕ್ ನೀಡುತ್ತಿದ್ದ ತಂದು ಕೊಡುತ್ತಿದ್ದೆ. ಆತ ಆಸ್ಪತ್ರೆ ಸೇರಿದಾಗ ಈ ATM ಹೆಚ್ಚು ಉಪಯೋಗವಾಗಿತ್ತು.

ಹಾಗೆ ನೋಡಿದರೆ ಆತ ಮಹಾ ಸ್ವಾಭಿಮಾನಿ. ಯಾವ ಕಾರಣದಿಂದಲೂ ರಿಯಾಯಿತಿಯನ್ನು ಬಯಸುತ್ತಿರಲಿಲ್ಲ. ಬಸ್ಸಲ್ಲಿ ಹೋಗುವಾಗಲೂ ಕೂಡ ಭಂಡಾರಿ ಸರ್ ಬಂದ್ರು ಅಂತ ಯಾರಾದರೂ ಸೀಟು ಬಿಟ್ಟುಕೊಟ್ಟರೂ ಆತ ಅಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ಪುನಃ ಅವರನ್ನೇ ಕೂಡ್ರಿಸುತ್ತಿದ್ದ. ಇನ್ನೇನು, ತೀರಾ ಅನಾರೋಗ್ಯದ ಕಾಲದಲ್ಲಿ, ಅಂದರೆ ಇನ್ನು ನಿಂತಿರಲಾರೆ ಎಂಬ ಸ್ಥಿತಿಯಲ್ಲಿ ಬಹುಶಃ ಒಂದೆರಡು ಬಾರಿ ಕೂತಿರಬಹುದೇನೋ!

ಯಾರೇ ಒತ್ತಾಯ ಮಾಡಿದರೂ ತನ್ನ ಕಿಸೆಯಲ್ಲಿ ಹಣ ಇದ್ದರೆ ಮಾತ್ರ ಹೊಟೇಲಿಗೆ ಹೋಗುತ್ತಿದ್ದ. ಶಿಕ್ಷಕನಾಗಿರುವಾಗಲೂ ಕೂಡ ಯಾವುದೇ ಮೇಲಾಧಿಕಾರಿಗಳಿಗೆ ಗೌರವ ನೀಡುತ್ತಿದ್ದನೇ ಹೊರತು ಅವರ ಚಾಕರಿ ಮಾಡುತ್ತಿರಲಿಲ್ಲ.

ಶಾಲೆಗೆ ಹೋಗುವಾಗಲೂ ಕೂಡ. ಹೇಗಾದರೂ 15-20 ನಿಮಿಷ ಶಾಲೆಗೆ ತಡವಾದರೂ ರಜಾವನ್ನೇ ಹಾಕ್ತಿದ್ದ. ಶಾಲೆಯ ಕೆಲಸವಲ್ಲದೇ ಬೇರೆ ಯಾವ ಕಾರಣದಿಂದಲೂ ಶಾಲೆ ಬಿಟ್ಟು ಮೊದಲೇ ಹೋಗುತ್ತಿರಲಿಲ್ಲ. ಯಾವ ರಾಜಕಾರಣಿಯ ಜೊತೆಗೂ ಅಗತ್ಯಕ್ಕಿಂತ ಹೆಚ್ಚಾಗಿ ಸಂಬಂಧ ಇಟ್ಟುಕೊಳ್ಳುತ್ತಿರಲಿಲ್ಲ. ಶಾಲೆಯೆಂದರೆ ಅವನಿಗೆ ಶಾಲೆಗೆ ಬರುವ ಮಕ್ಕಳನ್ನು ಹಡೆದ ಕುಟುಂಬವನ್ನೂ ಸೇರಿದ ಇಡೀ ಊರು. ಆ ಊರೇ ಅವನ ಕರ್ಮಭೂಮಿ.

ಆತನಿಗೆ ಅಪಮಾನ ಸಹಿಸುವುದು ಹೊಸ ಸಂಗತಿ ಏನೂ ಆಗಿರಲಿಲ್ಲ. ಬದುಕಿನಲ್ಲಿ ಆತನಿಗೆ ಸಿಕ್ಕ ಆಸ್ತಿಯೆಂದರೆ ಜಾತಿ ಮತ್ತು ಬಡತನದಿಂದೊದಗಿದ ಅಪಮಾನಗಳೇ. ಅದೆಲ್ಲವನ್ನೂ ಸೈದ್ಧಾಂತಿಕವಾಗಿ ಆತ ಎದುರಿಸಿದ್ದ. ಆದರೆ ಇದು ಆತನ ಪ್ರಾಮಾಣಿಕತೆಯ ಕುರಿತು ಆದ ವೈಯಕ್ತಿಕ ಮಟ್ಟದ ಅಪಮಾನವಾಗಿದ್ದರಿಂದ ಆತನಿಗೆ ಅದನ್ನು ಮರೆಯಲಾಗಲೇ ಇಲ್ಲ. ಹಾಗಾಗಿ ಕೊನೆಗೂ ಬ್ಯಾಂಕಿಗೆ ಕಾಲಿಡುವುದನ್ನೇ ಬಿಡಬೇಕಾಯಿತು.