ಶ್ಯಾಮ ಬಂದ ರಾಧೆಯೆಡೆಗೆ..

ರಾಧೆ ಎಂಬ ಹೆಸರೇ ಎಷ್ಟೊಂದು ಮೋಹಕ!

ಅವಳ ಹೆಸರಿನೊಂದಿಗೆ ಬೃಂದಾವನವೆಂಬ ಭವದ ಹಂಗಿಲ್ಲದ ತಾಣ ನಮ್ಮೆದುರು ತೆರೆದುಕೊಳ್ಳುತ್ತದೆ. ಅಲ್ಲಿ ಜುಳು ಜುಳು ಹರಿಯುವ ಯಮುನೆಯ ರಾಗಕ್ಕೆ ಲಯವಾಗಿ ಗಾಳಿಯೂ ಮೆಲ್ಲನೆ ಸುಳಿಯುತ್ತದೆ. ಸುತ್ತೆಲ್ಲ ಯಮುನೆಯ ನೀರುಂಡ ಗಿಡಮರಗಳ ಹಸಿರು. ಗಿಡ, ಮರ, ಬಳ್ಳಿಗಳಲೆಲ್ಲ ಹೂವರಳಿ, ಕಾಯಾಗಿ ನಳನಳಿಸುತ್ತಿವೆ.

ಅಗೋ ಅಲ್ಲಿ…. ಆ ಹಸಿರಿನ ನಡುವೆ ರಾಧೆ …. ಅವಳೊಬ್ಬಳೇ ಇರಲು ಸಾಧ್ಯವೇ ಇಲ್ಲ. ರಾಧೆಯೊಂದಿಗೆ ಶ್ಯಾಮನ ಹೆಸರು ಪ್ರಸ್ತಾಪವಾಗಲೇಬೇಕು. ರಾಧೆ ಶ್ಯಾಮರೊಂದಾಗಿ ಆ ಬಯಲ ಬಂಡೆಯ ಮೇಲೆ ನಿಂತು ನರ್ತಿಸುತ್ತಿದ್ದಾರೆ. ಇಬ್ಬರೂ ಒಬ್ಬರೇ ಆದಂತಹ ತಾದ್ಯಾತ್ಮ ಅವರ ನರ್ತನದಲ್ಲಿ.

ಅವರಿಬ್ಬರೇ ಅಲ್ಲ. ಅವರ ಸುತ್ತಲೂ ಗೋಪ-ಗೋಪಿಕೆಯರ ಸಾಲು ಸಾಲು. ಎಲ್ಲರೂ ಒಬ್ಬರನ್ನೊಬ್ಬರು ಒಲಿದು ಬಂದವರು. ಯಾವ ಸಾಮಾಜಿಕ ಬಂಧನವೂ ಅವರನ್ನು ಒಂದುಗೂಡಿಸಿದ್ದಲ್ಲ. ಒಲವು ಎಂಬ ಮೂರೇ ಮೂರು ಅಕ್ಷರಗಳು ಅವರನ್ನು ಒಂದುಮಾಡಿವೆ. ಶ್ಯಾಮನ ಮುರಳಿಯ ಮೋಡಿ ಅವರೆಲ್ಲರ ಭವದ ಬಂಧನವನ್ನು ತೊಡೆದು ಹಾಕಿದೆ. ಅವರಿಗೀಗ ಭೂತದ ಹಂಗಿಲ್ಲ; ಭವಿಷ್ಯದ ಯೋಚನೆಯಿಲ್ಲ. ವರ್ತಮಾನದ ಸುಖ ಅವರನ್ನು ಮೈಮರೆಯುವಂತೆ ಮಾಡಿದೆ. ಎಂಥ ಚೆಂದ ಈ ಬೃಂದಾವನ, ಮುರಳೀಗಾನ, ರಾಸನರ್ತನ…

ವಿಶೇಷವೆಂದರೆ ರಾಧೆ ಮದುವೆಯಾಗಿರುವ ಹೆಣ್ಣು ಅಥವಾ ಮದುವೆ ಗೊತ್ತಾಗಿರುವ ಹೆಣ್ಣು. ಶ್ಯಾಮನಿಗಿಂತ ದೊಡ್ಡವಳು. ಗೋಕುಲದ ಎಲ್ಲ ಹುಡುಗಿಯರಂತೆ ಶ್ಯಾಮನ ಮೋಹದ ಮೋಡಿಯಲ್ಲಿ ಬಿದ್ದಳು. ಅವರೆಲ್ಲ ಅವನಿಂದ ದೂರವೇ ನಿಂತು ಇದ್ದೂ ಇಲ್ಲದಂತೆ ಕುಣಿಯುತ್ತಿದ್ದರೆ ಇವಳು ಮಾತ್ರ ಅವನೊಂದಿಗೆ ಒಂದಾಗಿ ಹಾಡಿ ಕುಣಿದವಳು. ಹಿಂದುಮುಂದಿನ ಯಾವ ಆಲೋಚನೆಯಿಲ್ಲದೇ ಅವನ ಒಲವಿನಲ್ಲಿ ತೇಲಿಹೋದವಳು. ಶ್ಯಾಮನಿಗೂ ರಾಧೆಯೆಂದರೆ ಪ್ರಾಣ. ಅವಳನ್ನು ಅವನು ಪ್ರೀತಿಸುತ್ತಿದ್ದ, ತನ್ನ ಮುಡಿಯಲ್ಲಿರುವ ನವಿಲು ಗರಿಯಷ್ಟು ಮತ್ತು ತಾನೂದುವ ಕೊಳಲಿನಷ್ಟು. ಅವನಿಗೆಲ್ಲಿ ತಿಳಿದಿತ್ತು ತಾನು ರಾಜಕಾರಣಿಯಾಗಿ ಮಧುರೆಗೆ ಹೋಗುವ ಭವಿಷ್ಯ? ರಾಧೆಯೊಂದಿಗೆ ಅನುದಿನವೂ ರಾಸವಾಡುವ ಕನಸಿನಲ್ಲಿಯೇ ಅವನೂ ಇದ್ದಿರಬೇಕು.

ಕಾಲದ ಹೆಜ್ಜೆಗುರುತುಗಳು ಯಾರ ಜೀವನದಲ್ಲಿ ಹೇಗೆ ಆಟವಾಡುತ್ತವೆಯೆಂಬುದನ್ನು ಯಾರು ಬಲ್ಲರು? ಒಂದು ದಿನ ಇದ್ದಕ್ಕಿದ್ದಂತೆಯೇ ಎಲ್ಲವೂ ಬದಲಾಯಿತು. ಗೋವಳ ಶ್ಯಾಮ ದೇವಕಿಯ ಕಂದ ಕೃಷ್ಣನೆಂಬ ಸತ್ಯ ಬೆಳಕಿಗೆ ಬಂತು. ಮಾವ ಕಂಸನನ್ನು ಕೊಲ್ಲಲು ಕೃಷ್ಣನಿಂದ ಮಾತ್ರ ಸಾಧ್ಯವೆಂಬ ವಾಸ್ತವವೂ ತೆರೆದುಕೊಂಡಿತು. ಕೃಷ್ಣನಿಗೂ ಇವೆಲ್ಲ ಪ್ರಿಯವಾಗಿರಲಿಕ್ಕಿಲ್ಲ ನಿಜ, ಆದರೆ ಕರ್ತವ್ಯದ ಕರೆಗೆ ಓಗೊಡದೇ ವಿಧಿಯಿರಲಿಲ್ಲ. ಕರೆಯಬಂದ ಅಕ್ರೂರನೊಂದಿಗೆ ಮಧುರೆಗೆ ಹೊರಟೇಬಿಟ್ಟ. ಹೋಗುವಾಗ ಬೃಂದಾವನದಲ್ಲಿ ತನ್ನ ನವಿಲುಗರಿಯನ್ನು ಮತ್ತು ಕೊಳಲನ್ನು ಮರೆತುಬಿಟ್ಟ. ಮರೆತಿರಲಿಕ್ಕಿಲ್ಲ, ರಾಧೆಗೆಂದು ತೆಗೆದಿಟ್ಟಿರಬೇಕು. ಅವನಿಗೆ ಗೊತ್ತಿತ್ತು ರಾಧೆ ತನ್ನೊಡನೆ ಬರಲಾರಳು ಎಂಬ ಸತ್ಯ.

ರಾಧೆ ಬಯಸಿದರೆ ಮಧುರೆಗೆ ಹೋಗುವುದೇನೂ ಕಷ್ಟವಿರಲಿಲ್ಲ. ಅಸಲಿಗೆ ಅದವಳಿಗೆ ಇಷ್ಟವಿರಲಿಲ್ಲ. ಅವಳು ಬಯಸಿದ್ದು ಗೋವಳ, ಗೋಪಾಲ ಶ್ಯಾಮನನ್ನು. ಭವದ ಬಂಧನವನ್ನೆಲ್ಲವನ್ನು ಮೀರುವಂತೆ ಮೋಹಕವಾಗಿ ಮುರಳಿಯನ್ನು ನುಡಿಸುವ ಮೋಡಿಗಾರನನ್ನು. ಮಧುರೆಯ ರಾಜಕುಮಾರ ಕೃಷ್ಣ ಅವಳಿಗೆ ಅಪರಿಚಿತ. ಅರಮನೆ ಅವಳಿಗೆ ಬಂಗಾರದ ಪಂಜರ. ಅವಳೊಂದಿಗೆ ಬೃಂದಾವನದಲ್ಲಿ ಕುಣಿದ ಗೋಪಿಕೆಯರಿಗೆಲ್ಲ ಲೋಕಾಪವಾದದ ಬಿಸಿ ತಾಗಲಿಲ್ಲ. ಅವರು ಶ್ಯಾಮನೊಲುಮೆಯ ಭಾಗವಾಗಿಯೂ ಅವನಿಂದ ದೂರವನ್ನು ಕಾಪಿಟ್ಟುಕೊಂಡವರಿರಬೇಕು. ಕಾಲವು ಕರೆತಂದವರ ಕೈಹಿಡಿದು ತವರನ್ನು ತೊರೆದರು. ಇನ್ನು ಕೆಲವರು ತೊರೆದುಹೋದ ಗಂಡನನ್ನು ಹುಡುಕಿ ಹೋಗಿ ಸೇರಿಕೊಂಡರು. ಶ್ಯಾಮನ ನೆನಪಾದಾಗಲೆಲ್ಲ ಪುಟ್ಟ ಪೋರನಿಗೋ, ಸಣ್ಣ ಬಾಲೆಗೋ ಶ್ಯಾಮನ ವೇಷ ತೊಡಿಸಿ, ಅವನ ಸುತ್ತಲೂ ನಿಂತು, ನಲಿದು, ಕುಣಿದು ತಮ್ಮ ಮನದಾಸೆಯನ್ನು ನೀಗಿಕೊಂಡರು. ಪಕ್ಕಾ ವ್ಯವಹಾರಸ್ಥರು!

ರಾಧೆ….? ಎಲ್ಲವನ್ನೂ ಕಳಕೊಂಡಿದ್ದಾಳೆ. ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟಿದ್ದಾಳೆ. ಎಲ್ಲವನ್ನು ತೊರೆದು ಯಮುನೆಯ ದಡದ ಗುಡಿಸಲೊಂದರಲ್ಲಿ ಏಕಾಂಗಿಯಾಗಿ ಕುಳಿತು ಹಗಲಿರುಳು ಶ್ಯಾಮನನ್ನೇ ಹಂಬಲಿಸುತ್ತಾ ತನ್ನ ಮುಂದಿನ ದಿನಗಳನ್ನು ಕಳೆಯುತ್ತಾಳೆ. ರಾಧೆಯ ಮುಂದಿನ ಕಥೆ ಎಲ್ಲಿಯೂ ದಾಖಲಾಗಲಿಲ್ಲ. ಅದೊಂದು ಅವಶ್ಯಕತೆಯಾಗಿ ಕಾಣಿಸಲೇ ಇಲ್ಲ. ರಾಜಕಾರಣಿಯಾಗಿ ಬದಲಾದ ಶ್ಯಾಮ ಕೃಷ್ಣನಾಗಿ ಹದಿನಾರು ಸಾವಿರದ ಎಂಟು ಹೆಂಡತಿಯರನ್ನು ವರಿಸಿ ಸುಖವಾಗಿದ್ದಾನೆ. ಇವೆಲ್ಲ ನಮ್ಮ ಕಲ್ಪನೆಗಳಷ್ಟೆ. ನಿಜದ ರಾಧೆಯ ಅನುಸಂಧಾನವನ್ನು ಮಾಡೋಣ.

ರಾಧೆ ದಿಟ್ಟೆ. ತಾಯಿಯಿಲ್ಲದ ತಬ್ಬಲಿಯಾದರೂ ತಾಯಿಯ ತವರಿನಲ್ಲಿ ಅಜ್ಜಿಯ ಮುಚ್ಚಟೆಯಲ್ಲಿ ಬೆಳೆದವಳು. ಓರಗೆಯ ಹುಡುಗರೊಂದಿಗೆ ಲಿಂಗ ತರತಮವನ್ನು ಮೀರಿ ಬೆಳೆದವಳು. ಹಾಗಾಗಿಯೇ ಶ್ಯಾಮನೊಂದಿಗೂ ಬಹುಬೇಗ ಬೆರೆತು ಒಂದಾದಳು. ತನ್ನ ಮನಸ್ಸು ಹೇಳಿದಂತೆಯೇ ನಡೆದವಳು. ಲೋಕಾಪವಾದದ ಭೀತಿ ಅವಳನ್ನು ಕಾಡಿಲ್ಲ. ಹಾಗಾಗಿ ಅವಳೆಂದೂ ಸೋಲಲಾರಳು. ಪ್ರೀತಿ ಎಂದಿಗೂ ಶಕ್ತಿಯಾಗಿ ದಕ್ಕುವುದೇ ವಿನಃ ಸೋಲಾಗಿ ಅಲ್ಲ. ಕೃಷ್ಣನಾದ ಶ್ಯಾಮ ಅವಳವನಲ್ಲ. ಅವನ ಮದುವೆಗಳು ಅವಳನ್ನು ಕಾಡುವುದಿಲ್ಲ.

ಹೆಣ್ಣನ್ನು ಪ್ರಕೃತಿ ಎನ್ನುತ್ತಾರೆ ಪ್ರಾಜ್ಞರು. ರಾಧೆಯೂ ಪ್ರಕೃತಿಯ ಒಂದಂಶ. ತನ್ನೊಳಗೊಂದು ಶ್ಯಾಮನನ್ನು, ತನ್ನ ಸುತ್ತಲೂ ಒಂದು ಬೃಂದಾವನವನ್ನು ಸೃಷ್ಠಿಸಿಕೊಳ್ಳುವುದು ಕಷ್ಟವೇನಲ್ಲ ಅವಳಿಗೆ. ಹಾಗಾಗಿ ಅವಳು ಯಮುನೆಯ ದಡದಲ್ಲಿ ಕುಳಿತು ಕಣ್ಣೀರು ಸುರಿಸುವುದಿಲ್ಲ. ಶ್ಯಾಮನಿಗಾಗಿ ಕಾಯುತ್ತ ದಾರಿ ನೊಡುವುದಿಲ್ಲ. ಯಮುನೆಯ ಸಂಗಾತದೊಂದಿಗೆ ಹೊಸದೊಂದು ಬೃಂದಾವನವ ಸೃಷ್ಠಿಸಿ ತಾನಲ್ಲಿ ಶ್ಯಾಮನೂ, ರಾಧೆಯೂ ಆಗಿ ನರ್ತಿಸುತ್ತಾಳೆ. ರಾಧೆಯೆಂದರೆ ಹಾಗೆ. ಅವಳ ಸೊಬಗು ಎಂದಿಗೂ ಮಾಸದು. ಅವಳ ಒಲವು ಎಂದಿಗೂ ತೀರದು. ಬರೆದಷ್ಟೂ ಮುಗಿಯದ ಅಕ್ಷಯ ಪ್ರೇಮಕಾವ್ಯ ರಾಧೆ!

ಇತ್ತ ಕೃಷ್ಣನೂ ಈಗ ಎಡೆಬಿಡದ ರಾಜಕಾರಣದಿಂದ ಬಸವಳಿದಿದ್ದಾನೆ. ಸಾವಿರಾರು ಮಡದಿಯರಿದ್ದೂ ಅವನನ್ನು ಇತ್ತಿಚಿಗೆ ರಾಧೆ ಮತ್ತೆ ಕಾಡುತ್ತಿದ್ದಾಳೆ. ಕಾರ್ಯಕಾರಣವಿಲ್ಲದೇ ತನ್ನೊಲವನ್ನು ಮೊಗೆಮೊಗೆದು ಕೊಟ್ಟ ರಾಧೆಯ ಪ್ರೀತಿಯನ್ನು ರಾಜಕಾರಣಕ್ಕಾಗಿ ಕೈಹಿಡಿದ ಮಡದಿಯರಿಂದ ಬಯಸಲಾಗದು. ಎಲ್ಲ ಯುದ್ಧಗಳನ್ನು ಜಯಿಸಿಯೂ ಅವನು ರಾಜನಾಗಲಾರ. ಗೋಪಾಲನಾಗಿ ಅಲೆದ ಮನಸ್ಸು ರಾಜನ ಕಟ್ಟುಪಾಡುಗಳಿಗೆ ಒಗ್ಗಲು ಬಯಸದು. ಹಾಗೆ ಕೊನೆಗೊಂದು ದಿನ ತನ್ನೆಲ್ಲ ಆಭರಣಗಳನ್ನು ತೆಗೆದಿಟ್ಟ ಕೃಷ್ಣ ಶ್ಯಾಮನಾಗಿ ರಾಧೆಯನ್ನರಸುತ್ತಾ ಬೃಂದಾವನದ ದಾರಿ ಹಿಡಿಯುತ್ತಾನೆ. ಮುಂದಿನದನ್ನು ಗದ್ಯದಲ್ಲಿ ಹೇಳಲಾಗದು. ಕವಿತೆಗೊಲಿವ ಒಲವಿನ ಸಾಲುಗಳವು.

ಶ್ಯಾಮ ಬಂದ ರಾಧೆಯೆಡೆಗೆ ಸೂರ್ಯನಿಳಿವ ಹೊತ್ತು
ರಾಧೆಯೀಗ ಹಣ್ಣುಮುದುಕಿ ಕುಳಿತಿದ್ದಳು ಕೌದಿಯ ಹೊದ್ದು
ಬಂದೇ ರಾಧೆ ಎಂದ ಶ್ಯಾಮ, ಬರುವಿಯೆಂದು ಗೊತ್ತು
ಕಾಯುತ್ತಿದ್ದೆಯೇನು ರಾಧೆ? ಶ್ಯಾಮ ನುಡಿದ ಸೋತು
ಕಾಯುವ ಮಾತು ಯಾಕೆ ಬಂತು? ಇಲ್ಲೇ ಇದ್ದೆ ನೀನು
ಹೋದೆ ಕಾದೆ ಎಂಬುದೆಲ್ಲ ಬರಿಯ ಭ್ರಮೆಯ ತಂತು
ರಾಧೆ ಕೈಯ್ಯ ಹಿಡಿದ ಶ್ಯಾಮ ಕೈಯ್ಯ ತುಂಬ ಸುಕ್ಕು
ಇಷ್ಟು ಒರಟು! ಎಷ್ಟು ದುಡಿದೆ? ಎಂದ ಮುತ್ತನಿಟ್ಟು
ಲೆಕ್ಕಕ್ಕಿಲ್ಲಿ ಜಾಗವಿಲ್ಲ ಸುರಿದ ಬೆವರ ಧಾರೆ
ಹನಿಹನಿಯಲು ನೀನೆ ಇದ್ದೆ ಈಗ ಬಂದೆ ಎದುರಿಗೆ
ಸುಕ್ಕಲ್ಲ ಇದು ನಿನ್ನ ರುಜು ನನ್ನೆಲ್ಲ ಶ್ರಮದ ದುಡಿಮೆಗೆ
ಹಸಿರ ರಾಶಿ ವನದ ತುಂಬ ಸಾಕ್ಷಿಯಾಗಿದೆ ಒಲವಿಗೆ
ಬೃಂದಾವನವೇ ವಲಸೆ ಬಂದು ನೆಲೆಸಿದಂತಿದೆ ಇಲ್ಲಿಯೆ
ನಾನು ಬರದೆ ಹೇಗೆ ಇರಲಿ? ಶ್ಯಾಮ ನುಡಿದ ರಾಧೆಗೆ
ಕಣ್ಣಾ ನಿನ್ನ ಮೈಯ್ಯ ನುಣುಪು ಚಿಗುರ ತುದಿಯ ನವಿರಲಿ
ನಿನ್ನ ಕೊಳಲ ಮಧುರಗಾನ ಹೂವಿನ ಪಿಸುಮಾತಲಿ
ಕೌದಿಯೊಳಗ ಬಿಸಿಯ ಗಾಳಿ ಶ್ಯಾಮನೆದೆಯ ಸೋಕಿತು
ಸುಕ್ಕುಗಟ್ಟಿದ ರಾಧೆ ಕರವು ಪ್ರೇಮ ಕವನವಾಯಿತು

4 comments

  1. ಎಲ್ಲಾ ಪ್ರೇಮಿಗಳಿಗೂ ಆದರ್ಶದಂತಿರುವ ರಾಧಾಕೃಷ್ಣ ರ ಈ ಬರಹ ,ಪದ್ಯ ಆಪ್ತ.ಆಪ್ತ..

Leave a Reply