ಭೇಟಿಯ ಬಿಂದುವಿನಲ್ಲಿ

ಮಲ್ಲಿಕಾರ್ಜುನಗೌಡ ತೂಲಹಳ್ಳಿ

ನಿನ್ನೆ ರಾತ್ರಿ ಕನಸಿನಲ್ಲಿ
ವ್ಯಾನ್ ಗೋ ನ ಸೂರ್ಯಕಾಂತಿ ಹೂಗಳು
ಭೇಟಿಯಾಗಿದ್ದವು.
ನನಗೂ ಅದೇ ಬೇಕಿತ್ತು
ಕತ್ತಲೆಯ ಕೆಣಕಿ
ಹಳದಿಯ ಜೊತೆ ಹರಟಲು.
ಕ್ಯಾನ್ವಾಸ್ ನಿಂದ ಎದ್ದು ಬಂದಿದ್ದ
ಅವುಗಳ ದಳಗಳ ತುದಿಗೆ
ಅವನ ಹರಿದ ಕಿವಿಯಲ್ಲಿ
ಇಂಗಿ ಹೋಗಿದ್ದ ಶಬ್ದ.

ನಿಶ್ಯಬ್ದ ಶಬ್ದ
ಭೇಟಿಯ ಬಿಂದುವಿನಲ್ಲಿ
ಅರ್ಧ ಹಳದಿ ಅರ್ಧ ಕಪ್ಪು
ಹಾಗೇ ಉಳಿಯಲಿಲ್ಲ
ನನ್ನ ಎದೆಯೊಳಗಿನಿಂದ
ಮತ್ತ್ಯಾವುದೋ ಬಣ್ಣ ಬೆರೆತು
ಮಲಗಿದವನ ಮೈಸುತ್ತಿ
ಸುಸ್ತು ಮಾಡಿ

ಕಿಟಕಿ ಚೌಕಟ್ಟಿಗೆ ಬೆನ್ನು ಕೊಟ್ಟು
ಎದೆಯ ಮೇಲೆ ಕಾಲಿಟ್ಟು
ತೊಡಕ ಕತ್ತರಿಸಿ
ಕರುಳ ಕಿತ್ತು
ನೀಳ ಹಿಡಿದೆತ್ತಿತು.

ಅರೆ! ಹರಟಲು ಬಂದ
ಹಳದಿ ಹೂಗಳು
ನನ್ನನ್ನು ಕರುಳನ್ನೂ
ಭೇಟಿಯ ಬಿಂದುವಿನಲ್ಲೇ
ವಿಂಗಡಿಸಬಹುದೆ?

ಕರುಳಿಲ್ಲದ ನಾನು
ನಾನಿಲ್ಲದ ಕರುಳು
ಹಳದಿ ದಳಗಳ
ಅಡಿಮುಡಿಗೆ ಮೆತ್ತಿಕೊಂಡು
ಕತ್ತಲ ವಶಕ್ಕೆ ಉಸಿರ ಒಪ್ಪಿಸಿ
ಹುಡಿ ಮಣ್ಣಿನಂತೆ ಕನಸ ಉದುರಿಸಿ
ಹಳದಿಯಂದರೆ ಹಳದಿಯಲ್ಲ
ಅಲ್ಲವೆಂದರೆ ಗೊತ್ತಿಲ್ಲ
ಎಂಬ
ಮತ್ತೊಂದು ಹೂವ
ಗೀಚಿ
ಬಿಡಬಹುದೆ?

ಅವನಿಗೂ ಪ್ರಶ್ನೆಗಳು
ನನಗೂ ಪ್ರಶ್ನೆಗಳು
ಉತ್ತರವಿಲ್ಲದ ದಾರಿಯಲ್ಲಿ
ಹುಟ್ಟು ಸಾವು.
ಆರಿ ಹೋದ
ನೀರ ಹನಿಯ ಜಾಗದಲ್ಲಿ
ಸಣ್ಣದೊಂದು ಹೂವು.

Leave a Reply