‘ಮೋರ್’ ‘ಮೋರ್’ ‘ಮೋರ್’ ‘ಮೋರ್’

ಮಾವಲಿ ಎಂಬಾತ..
——————————————

‘ದೇವರು ಅರೆಸ್ಟ್ ಆದ’ ಎನ್ನುವ ಕಥಾ ಸಂಕಲದ ಮೂಲಕ ಓದುಗರ ಗಮನ ಸೆಳೆದ ಶಿವಕುಮಾರ ಮಾವಲಿ ಇಂಗ್ಲಿಷ್ ಉಪನ್ಯಾಸಕರು. ಅವರಿಗೊಂದು ತುಂಟ ಕಣ್ಣಿದೆ. ಅದರೊಂದಿಗೆ ಸಮಾಜದ ನೋವಿನ ಅರಿವೂ ಇದೆ. ಹಾಗಾಗಿಯೇ ಅವರು ಘನ ನೋವಿಗೆ ಹಾಸ್ಯದ ಲೇಪ ನೀಡಿ ನಿಮ್ಮ ಮುಂದೆ ಇಡಬಲ್ಲರು.

ರಂಗಭೂಮಿಯನ್ನು ಇನ್ನಿಲ್ಲದಂತೆ ಪ್ರೀತಿಸಿದ ಶಿವಕುಮಾರ್ ಅದರ ಮುಂದುವರಿಕೆಯಾಗಿ ಕಿರುಚಿತ್ರ ಕ್ಷೇತ್ರಕ್ಕೂ ಹೆಜ್ಜೆ ಹಾಕಿದ್ದಾರೆ. ಇವರ ‘ಅವ್ಯಕ್ತ’ ಕಥೆ ಸಾಸ್ವೆಹಳ್ಳಿ ಸತೀಶ್ ನಿರ್ದೇಶನದಲ್ಲಿ ಸಂಚಾರಿ ವಿಜಯ್ ಹಾಗೂ ಡಾ ಜಾಹ್ನವಿ ಅವರ ಅಭಿನಯದಲ್ಲಿ ಪರಿಣಾಮಕಾರಿ ಚಿತ್ರವಾಗಿದೆ. ಇತ್ತೀಚಿಗೆ ಅವರ ಕಥೆ ಆಧರಿಸಿದ ‘ಸುಪಾರಿ ಕೊಲೆ’ ರಂಗವೇರಿದೆ.

‘ಫ್ಲಿಪ್ ಕಾರ್ಟ್ ನಲ್ಲಿ ತರಿಸಿದ ಪ್ರೀತಿ’ ಇವರ ಮುಂದೆ ಬರಲಿರುವ ಕಥಾ ಸಂಕಲನ. ಇಂಗ್ಲಿಷ್ ನ್ನು ಹೀಗೂ ತಲೆಯೊಳಗೆ ತುಂಬಬಹುದೇ ಎಂದು ಬೆರಗಾಗುವಂತೆ ಕಚಗುಳಿ ಇಟ್ಟು ನಗಿಸುತ್ತಲೇ ಇಂಗ್ಲಿಷ್ ಲೋಕಕ್ಕೆ ಪ್ರವೇಶಿಕೆ ನೀಡುವ ಅಂಕಣ ‘ವಿಜಯ ಕರ್ನಾಟಕ’ದಲ್ಲಿ ಪ್ರತೀ ವಾರ ಪ್ರಕಟವಾಗುತ್ತಿದೆ.

ಅವಧಿಗಾಗಿ ಸಾಕಷ್ಟು ಕವಿತೆಗಳನ್ನು ಅನುವಾದಿಸಿರುವ ಇವರು ಈಗ ನಮ್ಮ ಹೆಮ್ಮೆಯ ಅಂಕಣಕಾರ

‘ಬದಲಾವಣೆ ಜಗದ ಸಾರ್ವಕಾಲಿಕ ನಿಯಮ ‘ ಎಂಬುದು ಬದಲಾಗದ ನಿಯಮ. ಒಂದು ಕಾಲಕ್ಕೆ ಯಾವುದು Absolute ಆಗಿರುತ್ತೋ ಅದು ಕಾಲಚಕ್ರದಲ್ಲಿ ಸಿಕ್ಕು ‘ Obsolete’ ಆಗಿಬಿಡುವುದು ಸಹಜ.
ಅದಕ್ಕೇ ಅನ್ನಿಸುತ್ತೆ ಎಚ್. ನರಸಿಂಹಯ್ಯನವರು ಹೇಳುತ್ತಿದ್ದುದು; ‘ ಹಳೆಯದು ಎಂಬ ಕಾರಣಕ್ಕೇ ಯಾವುದೂ ಶ್ರೇಷ್ಠವಲ್ಲ. ಹೊಸತು ಎಂಬ ಕಾರಣಕ್ಕೆ ಮತ್ಯಾವುದೂ ಕನಿಷ್ಠವಲ್ಲ’. ಹಾಗಾಗಿ ‘ ನಮ್ ಕಾಲ್ದಲ್ಲಿ ಹೀಗಿತ್ತು’ ಎಂದು ಉದ್ಘಾರ ತೆಗೆಯುವವರ ಬಗ್ಗೆ ಉದಾಸೀನ ಮಾಡುವುದೇ ಒಳಿತು. ಆದರೆ ಬದಲಾವಣೆಗಳನ್ನು ವಿಮರ್ಶಿಸಬಾರದೆಂಬ ನಿಯಮವಂತೂ ಇಲ್ಲವಲ್ಲ ?
ಜಗತ್ತು ಬದಲಾಗಿದೆ ಎಂಬ ಮಾತನ್ನು ಯಾವಾಗಲೂ ಕೇಳುತ್ತಲೇ ಇರುತ್ತೇವಲ್ಲವೆ? ಹೌದು. ನಮ್ಮ ಅಜ್ಜಂದಿರು ಹೇಳುತ್ತಿದ್ದ ಈ ಮಾತನ್ನೇ ನಾವು ನಮ್ಮ ಮಕ್ಕಳಿಗೆ ಹೇಳುತ್ತಾ ಹೋಗುತ್ತೇವೆ . ಹೀಗಿರುವಾಗ ನಮ್ಮ ಬದಲಾದ ಜೀವನಶೈಲಿಯ ಸುತ್ತ ಒಮ್ಮೆ ಅವಲೋಕಿಸೋಣ .
ಏನು ‘ಕಡಿಮೆ’ಯಾಗಿದೆ ಹೇಳಿ ನಮ್ಮ ಜೀವನಕ್ಕೆ ಅಂತೀರಾ? ಅದೂ ಸರಿ. ಎಲ್ಲ ‘ಹೆಚ್ಚೇ’ ಆಗಿದೆ. ಮನುಷ್ಯನಿಗೆ Consumption (ಅನುಭೋಗ ಅಥವಾ ವಸ್ತುಗಳ ಬಳಕೆ ) ಎಂಬ  ವ್ಯಾಮೋಹ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂಬುದಕ್ಕೆ ನಗರಗಳ ಬಹುಮಹಡಿ ಕಟ್ಟಡಗಳಲ್ಲಿ ನೆಲೆನಿಂತಿರುವ ದೊಡ್ಡ ದೊಡ್ಡ ಮಾಲ್ ಗಳ ಹೆಸರುಗಳನ್ನೇ ಗಮನಿಸಿದರೆ ಸಾಕು ನಮ್ಮ ಬದುಕಿನ ಲಯ ಎತ್ತ ಸಾಗುತ್ತಿದೆ ಎಂಬುದು ಅರಿವಾಗಿಬಿಡುತ್ತದೆ.
ಬಿಗ್ ಬಜಾರ್, ಮೆಗಾ ಮಾರ್ಟ್, ಮೋರ್, ಟೋಟಲ್ , ಇನ್ ಆರ್ಬಿಟ್, ಫೋರಂ.. ಹೀಗೆ ಇನ್ನೂ ಅನೇಕ ಮಾಲ್ ಗಳ ಹೆಸರುಗಳನ್ನು ನಾವು ದಿನನಿತ್ಯ ಎಡತಾಕುತ್ತಲೇ ಇರುತ್ತವೆ .
ಇವುಗಳ ಹೆಸರುಗಳಲ್ಲಿರುವ ಪದಗಳಾದ ‘ಬಿಗ್’ ‘ಮೋರ್’ ‘ಟೋಟಲ್’ ‘ಮೆಗಾ’  ‘InOrbit’ (ಪರಿಧಿಯನ್ನು ಮೀರಿ) ‘ಫೋರಂ’ ಇವೆಲ್ಲವುಗಳ ಸಾಮಾನ್ಯ ಅರ್ಥ ಒಂದೇ – “ಹೆಚ್ಚು‌, ಬಹಳ, ಎಲ್ಲವೂ, ಒಟ್ಟಾಗಿ”.
ಅಂದರೆ ತಮ್ಮ ಹೆಸರುಗಳಲ್ಲೇ ಗ್ರಾಹಕರನ್ನು ಸೆಳೆಯಲು ಅವು ಪ್ರಯತ್ನಿಸುತ್ತವೆ. ಏಕೆಂದರೆ ” ಹೆಚ್ಚು ವಸ್ತುಗಳನ್ನು ಬಳಸುವವ ಅಥವಾ ಮನೆಯಲ್ಲಿ ರಾಶಿ ಹಾಕಿಕೊಂಡಿರುವವ ” ಹೆಚ್ಚೆಚ್ಚು ತೀವ್ರವಾಗಿ ಬದುಕುತ್ತಿದ್ದಾನೆ ಮತ್ತು ಅವನದು ಡಿಗ್ನಿಫೈಡ್ ಲೈಫ್ ಎಂಬ ಅಲಿಖಿತ ನಿಯಮವೊಂದು ಸಮಾಜದಲ್ಲಿಂದು ಜಾರಿಯಲ್ಲಿದೆ .
ಇದಕ್ಕೆ ಆನ್ ಲೈನ್ ಶಾಪಿಂಗ್ ಒಂದು ಸೇರಿ ಈ “ಕೊಳ್ಳುಬಾಕುತನವನ್ನ” ( Consumerism) ಇನ್ನೂ ಹೆಚ್ಚಿಸಿದೆ. ನಮ್ಮ ಅವಶ್ಯಕತೆಗಳಿಗಿಂತ ಹೆಚ್ಚು ವಸ್ತುಗಳು ನಮ್ಮ ಮನೆಗಳಲ್ಲಿ ಜಾಂಡ ಊರಿ ಕೂತಿವೆ. Combo Offer, Mega Offer ಗಳ ಹೆಸರಲ್ಲಿ ನಮ್ಮನ್ನು ಹೀಗೆ ಅನುಭೋಗದ ವ್ಯಾಮೋಹಿಗಳಾಗಿ ಮಾಡುತ್ತಿರುವ ಇವುಗಳಿಂದಾಗಿ ನಮಗೆ Economically Benefit ಆಗಿದೆಯೆಂದು ನಾವು ಭಾವಿಸುತ್ತೇವೆ . ವಾಸ್ತವದಲ್ಲಿ ಅವಶ್ಯಕತೆಗಿಂತ ಹೆಚ್ಚಿನದನ್ನು ಕೊಂಡ ನಮಗೆ ಯಾವ ಆರ್ಥಿಕ ಲಾಭವೂ ಆಗಿರುವುದಿಲ್ಲ .
ಹಾಗಾದರೆ ಈ ಹೊಸತನದಿಂದ ನಾವು ಕಳೆದುಕೊಂಡದ್ದೇನು?
ಖಂಡಿತಾ ಬಹಳ ಅಮೂಲ್ಯವಾದದ್ದನ್ನೇ ಕಳೆದುಕೊಂಡಿದ್ದೇವೆ. ಕಿರಾಣಿ ಅಂಗಡಿಯಲ್ಲಿ ಸಾಮಾನು ಕಟ್ಟಿಸಲು ಹೋದವನು ಶೆಟ್ಟರೊಂದಿಗೆ ಒಂದಷ್ಟು ಮಾತುಕತೆ ನಡೆಸುತ್ತಿದ್ದನಲ್ಲ, ಅದು Online Grocery Shopping ನಲ್ಲಿ‌ ಹೇಗೆ ಸಿಕ್ಕೀತು ಹೇಳಿ ?  ಗಾಂಧಿನಗರದ ರಸ್ತೆಯೊಂದರಲ್ಲಿ ಸ್ವೆಟರ್, ಟೋಪಿ ಮಾರುವವ ಹಿಂದಿಯವನೇ ಆದರೂ ನಮಗೆ ಸ್ವಲ್ಪವೂ ಹಿಂದಿ ಬರದಿದ್ದರೂ ಅವನ ಭಾಷೆಯಲ್ಲಿ ನಾವು, ನಮ್ಮ ಭಾಷೆಯಲ್ಲಿ ಅವನು ಮಾತಾಡಲು ಪ್ರಯತ್ನಿಸಿ ಕೊನೆಗೆ ಹೇಗೋ ವ್ಯಾಪಾರ ಕುದುರಿಸುತ್ತಿದ್ದೆವಲ್ಲ? ಅದು ಸಾಧ್ಯವಾಗುತ್ತಿಲ್ಲ.
ಭಾಷೆಯೇ ಬರದಿದ್ದರೂ ನೀವೊಬ್ಬ “ಚೌಕಾಸಿ ಚಾಂಪಿಯನ್‌” ಆಗಲು ಅಲ್ಲಿ ಅವಕಾಶ ಇತ್ತು.‌ ಆದರೆ ಮಾತುಕತೆಯೇ ಇಲ್ಲದ Price Tag ನೇತು ಹಾಕಿಕೊಂಡಿರುವ, ಚೌಕಾಸಿ ಮಾಡಲು ಅವಕಾಶವೇ ಇಲ್ಲದ ಈ ಮಾಲ್ ಗಳಲ್ಲಿ ಓಡಾಡುತ್ತಿರುವ ಜನ ತಮ್ಮ ತಮ್ಮ ಕಾರ್ಟ್ ಗಳಲ್ಲಿ ಬೇಕಾದ್ದಷ್ಟನ್ನು, ಒಂದು ತಗೋಂಡ್ರೆ ಮತ್ತೊಂದು ಫ್ರೀ ಎಂಬ ಕಾರಣಕ್ಕೆ ಇನ್ನೊಂದು ವಸ್ತುವನ್ನು ಅನಗತ್ಯವಾಗಿ ಕಾರ್ಟ್ ಗೆ ತುಂಬಿಕೊಂಡು ಬಿಲ್ಲಿಂಗ್ ಕೌಂಟರ್ ಬಳಿ ಕಾಯುತ್ತಾ ನಿಂತವನು ಮಾಡೋದಾದರೂ ಏನು?
ಈ ವಸ್ತುಗಳಿಗೆಲ್ಲ ಬೇರೆಬೇರೆ ಕಡೆ ಎಷ್ಟು ಆಫರ್ ಇದೆ ಎಂದು ನೋಡೋದು ಅಲ್ಲವೆ ? ಇದರಿಂದ ಕಾರ್ಟ್ ಗಳಲ್ಲಿ ತುಂಬಿದ ವಸ್ತುಗಳ ಅನುಭೋಗ ಹೆಚ್ಚೀತೇ ಹೊರತು, ಅಂಗಡಿಯವನೊಂದಿಗೋ , ಬೇರೆ ಭಾಷಿಗನೊಂದಿಗೋ ನಡೆಯಬಹುದಾಗಿದ್ದ ಒಂದು ಸುಂದರ “ಸಂಹವನವನ್ನು ” , “ಅನುಭವವನ್ನೂ ”  ಪಡೆಯುವ ಅವಕಾಶವಂಚಿತರಾದಂತೆಯೇ ಅಲ್ಲವೆ ? ಹಾಗಾಗಿಯೇ ಜನ ಮತ್ತಷ್ಟು Self Centered ಆಗುತ್ತಾ, ಪಬ್ಲಿಕ್ ಪ್ಲೇಸ್ ಗಳಲ್ಲಿ “Callous” ಆಗಿ ವರ್ತಿಸುತ್ತಾರೆ .
Luxury ಅಂದ್ರೆ ಏನು ? ಜನರನ್ನು ಮತ್ತಷ್ಟು ಸೋಂಬೇರಿ ಮಾಡುವ ಯಾವುದೇ ವಸ್ತು ಅಥವಾ ಟೆಕ್ನಾಲಜಿಯನ್ನು ಲಕ್ಸುರಿ ಎನ್ನಬಹುದಲ್ಲವೆ ? ಸೆಕೆಂಡ್ ಫ್ಲೋರ್ ನಲ್ಲಿನ ಮನೆಗೆ ಹೇಗೆ ಸಾಮಾನುಗಳನ್ನು ಹೊತ್ತು ಸಾಗಿಸುವುದು ಎಂಬ ಸೋಂಬೇರಿತನವೇ ನಮ್ಮನ್ನು ಎಲ್ಲ  ಗ್ರಾಸರಿಗಳನ್ನು ಆನ್ ಲೈನ್ ನಲ್ಲಿ ತರಿಸುವಂತೆ ಮಾಡುತ್ತೆ.
ಹಾಗೆಯೇ “ಮನುಷ್ಯ ವ್ಯಾಪಾರ” ವಾಗಬಹುದಾಗಿದ್ದ ಒಂದು ಘಟನೆ , ಯಾವುದೇ ಹ್ಯೂಮನ್ ಟಚ್ ಇಲ್ಲದೆ ಕೇವಲ “ವ್ಯವಹಾರ” ಮಾತ್ರ ಆಗಿಬಿಡುತ್ತದೆ. ಹಚ್ಚೆಚ್ಚು ಕೊಳ್ಳಬೇಕೆಂಬ ಆಸೆ ಹುಟ್ಟಿಸುವುದು ಕಂಪನಿಗಳ ಜಾಹೀರಾತುಗಳ ವರಸೆಯಾದರೆ , ಉದಾಹರಣೆಗೆ ಹಬ್ಬಗಳು ಬಂದರೆ ಸಾಕು, “Celebrate this Ugadi with Big Bazar” , ” Pay Rs 0 and get home a Plasma Tv” ಎಂಬಂಥ ಜಾಹೀರಾತುಗಳಿಗೆ ನಮ್ಮನ್ನು ಸಂಪೂರ್ಣವಾಗಿ ಆವರಿಸಿಬಿಡುವ ಮತ್ತು ಒಳಗೊಳ್ಳುವ ಶಕ್ತಿ ಇರುವುದು ಸೋಜಿಗವಲ್ಲವೆ? ಅದರರ್ಥ ನಮ್ಮೊಳಗೇ ಇದ್ದ ” ಮೆಗಾ ಅನುಭೋಗಿ”ಯೊಬ್ಬ, ನಮ್ಮನ್ನು ಅರಿತವನೇ ಒಬ್ಬ  ಅಂಥ ಜಾಹೀರಾತು ತಯಾರು ಮಾಡುತ್ತಾನೆ ಎಂದಾಯಿತಲ್ಲವೆ ?
ಒಂದೆಡೆ ಅನುಭೋಗ ಹೀಗೆ ಹಚ್ಚೆಚ್ಚು ಆಗುತ್ತಲೇ ಇದ್ದರೆ ಮತ್ತೊಂದೆಡೆ ಕೆಲವು ವಿಷಯಗಳಲ್ಲಿ ಜಗತ್ತು ತುಂಬಾ ಚಿಕ್ಕದಾಗುತ್ತಲೇ ಇದೆ. ಉದಾಹರಣೆಗೆ ಮೂರು ತಾಸಿನ ಸಿನಿಮಾದಿಂದ ಶಾರ್ಟ್ ಫಿಲ್ಮ್ ಗೂ, ಶಾರ್ಟ್ ಸ್ಟೋರಿಯೇ ಚಿಕ್ಕವು ಅಂದುಕೊಂಡಿದ್ದವರು ಅವುಗಳಿಗಿಂತಲೂ ಚಿಕ್ಕದಾದ ನ್ಯಾನೋ ಕತೆಗಳಿಗೂ, ರಾಮಾಯಣ- ಮಹಾಭಾರತಗಳ ಅತೀ ಸಣ್ಣ ಪುಸ್ತಕಗಳಿಗೂ, ಒಂಭತ್ತು ವರ್ಷಗಳ ಕಾಲ ಕುವೆಂಪು ಅವರ ತಪಸ್ಸಿನಿಂದ ರಚಿಸಿಲ್ಪಟ್ಟ ಶ್ರೀರಾಮಾಯಣ ದರ್ಶನಂ ನಂಥ ಬೃಹತ್ ಗ್ರಂಥ 42 ಪುಟಕ್ಕೆ ಬರುವುದೋ, ರಾತ್ರಿಯಿಡೀ ಜರುಗುತ್ತಿದ್ದ ಯಕ್ಷಗಾನ, ನಾಟಕಗಳು ಎರಡು ಮೂರು ತಾಸಿಗೂ, ದೀರ್ಘ ಗದ್ಯದಿಂದ ಚುಟುಕು ಪಠ್ಯಕ್ಕೂ, Long Narrative Poems ಗಳಿಂದ ಹನಿಕವನ, ಚುಟುಕು ಪದ್ಯ ಅಥವಾ ಎರಡು ಸಾಲಿನ ಹಾಯ್ಕುಗಳಿಗೋ ಕಡಿತಗೊಂಡಿವೆ ಎಂಬುದು ನಿಸ್ಸಂಶಯ.
ಅಂದರೆ ಯಾವುದು ನಮ್ಮ ಪ್ರಜ್ಜೆಯನ್ನು ವಿಸ್ತರಿಸಿ, ಹೊಸ ಹೊಸ ಅನುಭವಗಳಿಗೆ ಕಾರಣವಾಗುತ್ತಿತ್ತೋ ಅಥವಾ ನಮ್ಮೊಳಗಿನ ಬೆಳಕನ್ನು ಹೊತ್ತಿಸಿ ಒಂದು ಅನುಭವವನ್ನು ಅನುಭಾವವಾಗಿ ಮಾಡಬಲ್ಲದಾಗಿತ್ತೋ ಅದೆಲ್ಲವೂ ಚಿಕ್ಕದಾಗುತ್ತಾ ಹೋಗಿ , ಯಾವುದು ಕೇವಲ ನಮ್ಮನ್ನು ಓರ್ವ ಅನುಭೋಗಿಯಾಗಿ ಮಾಡಬಲ್ಲದೋ ಅದರ ಪಾರಮ್ಯ ಹೆಚ್ಚುತ್ತಿದೆ ಅಂದ ಹಾಗಾಯಿತು. ಏಕೆಂದರೆ ಅದು ಬಳಕೆಯ ಮತ್ತು ಬಳಸಲ್ಪಡುವುದರ ಪ್ರತೀಕ. ಹಾಗಾಗಿಯೇ ನಮಗೆ ಈಗೀಗ “ಅನುಭೋಗ ಬಿಗ್ ಅಂಡ್ ಮೋರ್ ಆಗಿಯೂ, ಅನುಭವ ಮತ್ತು ಅನುಭಾವ ನೋ ಮೋರ್ ಆಗಿಯೂ ಕಾಣ ತೊಡಗಿವೆ.
ಒಂದು ಸಣ್ಣ ಸತ್ಯ :
ದೊಡ್ಡ ದೊಡ್ಡ ಮಾಲ್ ಗಳ ಒಳಗೆ ಒಂದೂ ಮಾತಾಡದೆ ಅಲ್ಲಿದ್ದಷ್ಟು ರೇಟು ಕೊಟ್ಟು , ಕೊಂಡು ತಂದಿರುವ ಹೈ ಫೈ ಗ್ರಾಹಕನೊಬ್ಬ, ಮಾಲ್ ಹೊರಗಿನ ರಸ್ತೆಯಲ್ಲಿ ಜೋಳ ಮಾರುವ ಗಾಡಿ ಅಂಗಡಿಯ ಬಡಪಾಯಿಯ ಬಳಿ “20 ರೂಪಾಯಿ ಜಾಸ್ತಿಯಾಯ್ತು, 15 ಕೊಡ್ತೀನಿ ” ಅಂತಾ ಹೇಳುತ್ತಾನಲ್ಲ ಆಗೆಲ್ಲ ನಾನು ಹೌಹಾರುತ್ತೇನೆ. ಅಲ್ಲೆಲ್ಲೋ ನಮ್ಮ ದೊಡ್ಡತನ ಮತ್ತು ಸಣ್ಣತನಗಳೆರೆಡೂ ಭೇಟಿಯಾಗುತ್ತಿರುತ್ತವೆ ‌.
ಅಂದ ಹಾಗೆ ಟೋಲ್ ಗೇಟ್ ಬಳಿಯ D-Mart ನಲ್ಲಿ ಈ ವೀಕೆಂಡ್ ನಲ್ಲಿ ಕಂಡುಬಂದ ಜನಪ್ರವಾಹವನ್ನು  ನೋಡಿ ಈ ವಾರದ ಶಾಪಿಂಗ್ ಕ್ಯಾನ್ಸಲ್ ಮಾಡಿಕೊಳ್ಳುವ ಅನಿವಾರ್ಯತೆಗೆ ಬಿದ್ದ ಕಾಸ್ಮೋಪಾಲಿಟನ್ ಒಬ್ಬನು ಮಾಡಿಕೊಂಡ ಈ ಟಿಪ್ಪಣಿ ಇತರರಿಗೂ ಹೋಲಿಕೆಯಾದಲ್ಲಿ ಕಾಕತಾಳೀಯವಷ್ಟೇ !

3 comments

Leave a Reply