ರಾಶಿ ಕಣದ ಎದುರು ನಿಂತ ಜಯಲಕ್ಶ್ಮಿ ಪಾಟೀಲ್

ರಾಶಿ ಕಣದ ಎದುರು ನಿಂತು

’ಬಿತ್ತಿದರೆ ಬಿತ್ತುವುದು ಮುಕ್ಕು ಚಿಕ್ಕಿಯ ಕಾಳು’

ಬೇಂದ್ರೆ ಅವರ ಕವನವೊಂದರ ಈ ಮೇಲಿನ ಸಾಲಿನಂತೆ, ನಾನು ಪುಟ್ಟ ಕತೆಯೊಂದನು ಬೆಳೆಯುವ ಹಂಬಲದಲ್ಲಿ, ಬಿತ್ತಲು ಹೊರಟಿದ್ದು ಮುಕ್ಕು ಕಾಳುಗಳನ್ನಷ್ಟೆ ಕೈಯಲ್ಲಿಟ್ಟುಕೊಂಡು. ಈ ತುಸು ಕಾಳುಗಳು ಮುಕ್ಕಾಗುತ್ತಾ ಆಗುತ್ತಾ, ಚಿಗಿತು, ಬೆಳೆದು ತೆನೆಗಳಾಗಿ, ಕತೆಯಾಗಬೇಕಾಗಿದ್ದುದು ಕಾದಂಬರಿಯಾಗಿ ರೂಪುಗೊಂಡಿದ್ದು ನನ್ನ ಪಾಲಿನ ಸೋಜಿಗ.

೨೦೦೮ರಲ್ಲಿ ನನ್ನ ಕವನ ಸಂಕಲನ ’ನೀಲ ಕಡಲ ಬಾನು’ ಹೊರ ಬಂದಿದ್ದನ್ನು ಬಿಟ್ಟರೆ ಮತ್ತೊಂದು ಪುಸ್ತಕ ಬಂದಿಲ್ಲ. ಬಂದವೇನಿದ್ದರೂ ವಿವಿಧ ಸಂಪಾದನೆಯ ಕೃತಿಗಳಲ್ಲಿ ಬಿಡಿ ಬಿಡಿಯಾಗಿ ಮಾತ್ರ. ಇದೀಗ ದಶಕದ ನಂತರ ಈ ಪುಸ್ತಕ ಪ್ರಕಟಗೊಳ್ಳುತ್ತಿದೆ. ಸಹಜವಾಗಿಯೇ ನನಗೆ ಸಂತೋಷವಾಗಿದೆ. ನನ್ನ ಈ ಪ್ರಥಮ ಕಾದಂಬರಿಯನ್ನು ಪ್ರಕಟಿಸುತ್ತಿರುವ ಅಂಕಿತ ಪುಸ್ತಕದ ಪ್ರಕಾಶ್-ಪ್ರಭಾ ಕಂಬತ್ತಳ್ಳಿಯವರಿಗೆ ಕೃತಜ್ಞತೆಗಳು.

ಅಪ್ಪನ ಓದು, ಅವ್ವನ ಬರವಣಿಗೆ, ಪತಿಯ ಒತ್ತಾಸೆ, ತಮ್ಮ ತಂಗಿಯರ ಪ್ರೋತ್ಸಾಹ, ಮಕ್ಕಳಾದ ಅದಿತಿ ಅಮೋಲ್ ರ ಅಕ್ಕರೆ, ಬಳಗದವರ ಪ್ರೀತಿ ನನ್ನನ್ನು ಸಮಾಜಮುಖಿಯನ್ನಾಗಿಸಿವೆ. ಇವರೆಲ್ಲರ ಪ್ರೀತಿಯ ಋಣಿ ನಾನು.

ಸುಚಿತ್ರ ಫಿಲ್ಮ್ ಸೊಸೈಟಿಯು ೨೦೧೫ರ ಡಿಸೆಂಬರ್ ತಿಂಗಳಲ್ಲಿ ಮೂರು ದಿನಗಳ ಕಥನ ಕಮ್ಮಟವನ್ನೇರ್ಪಡಿಸಿತ್ತು. ಕಮ್ಮಟದ ಅಂತ್ಯದಲ್ಲಿ, ಅಭ್ಯರ್ಥಿಗಳಿಗೆಲ್ಲ ಪರೀಕ್ಷಾರ್ಥವಾಗಿ ಕಥಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಎಲ್ಲ ಅಭ್ಯರ್ಥಿಗಳಂತೆ ನಾನೂ ಕತೆ ಬರೆಯಲು ಕುಳಿತೆ.

ನಿಗದಿತ ತಾರೀಖಿನೊಳಗೆ ಕತೆಯನ್ನು ಮುಗಿಸ ಹೊರಟರೆ, ನಾನೇನನ್ನು ಹೇಳ ಹೊರಟಿದ್ದೆನೋ ಅದಕ್ಕೂ, ಕತೆ ಮುಂದುವರೆದಿದ್ದ ರೀತಿಗೂ ಸಂಬಂಧವೆ ಇಲ್ಲದಂತೆನಿಸಿದಾಗ, ’ಇದೇನಪಾ, ಗಣಪ್ಪನ್ನ ಮಾಡಾಕ ಹೋಗಿ ಅವರಪ್ಪನ್ನ ಮಾಡಿದಂಗಾತಲ್ಲ!?’ ಅನಿಸಿದ್ದೇ, ಹೆಂಗೂ ಅಪ್ಪನ್ನ ಮಾಡಾಯ್ತಲ್ಲ ಇನ್ನರ ಗಣಪ್ಪ ಮೂಡ್ಯಾನು ಅಂದುಕೊಂಡು ಗಣಪ್ಪನ ಹಿಂದೆ ಬಿದ್ದೆ.

ಕಮ್ಮಟದ ಸ್ಪರ್ಧೆ ಹಿಂದೆ ಸರಿಯಿತು. ಬರವಣಿಗೆ ಒಂದು ಹಂತಕ್ಕೆ ಅಂದುಕೊಂಡಂತೆ ಹೆಚ್ಚುಕಮ್ಮಿ ಮುಗಿಯಿತು ಎನಿಸಿ ನೋಡಿದರೆ, ಬರೆದಿದ್ದು ಕತೆಯ ಅಳತೆ ಮೀರಿ ನೀಳ್ಗತೆಗಿಂತಲೂ ದೊಡ್ಡದಾಗಿತ್ತು. ಆದರೂ ಏನೋ ಬರೆದೆ ಅನ್ನುವ ಹುರುಪು.

ಆಪ್ತರಾದ ಬರಹಗಾರರಿಗೆ, ಸ್ನೇಹಿತರಿಗೆ ನನ್ನ ಈ ಬರವಣಿಗೆಯನ್ನು ಕಳುಹಿಸಿದೆ. ‘ಈ ಕತೆಗೆ ಕಾದಂಬರಿಯಾಗುವ ತಾಕತ್ತಿದೆ, ಚೆನ್ನಾಗಿದೆ, ಸಾಧ್ಯವಾದರೆ ಕಾದಂಬರಿಯಾಗಿಸಿ’ ಎನ್ನುವ ಒಟ್ಟು ಸೂಚನೆಗಳು ದೊರೆತವು. ಅವಸರ ಮಾಡದೆ, ಕತೆಯನ್ನು ಸಹಜವಾಗಿ ಬೆಳೆಯಲು ಅದರ ಪಾಡಿಗೆ ಅದನ್ನು ಬಿಟ್ಟೆ. ಹೀಗಾಗಿ ೨೦೧೬ರ ಜನವರಿಯಲ್ಲಿ ಪ್ರಾರಂಭಿಸಿ, ಅದೇ ವರ್ಷ ಮಾರ್ಚಲ್ಲಿ ಮುಗಿಸಿದೆ ಎಂದುಕೊಂಡ ಕತೆ, ಕಾದಂಬರಿಯಾಗಿ ಪೂರ್ಣಗೊಂಡಿದ್ದು ಈ ೨೦೧೮ರ ಜೂನ್‍ನಲ್ಲಿ! ನನ್ನ ಮೊದಲ ಕಾದಂಬರಿಯ ಪರಿ ಇದು.

ಬರೆದಾದ ಮೇಲೆ ಒದ್ದಾಡಿದ್ದು ಶೀರ್ಷಿಕೆಗಾಗಿ!

ಅವ್ವಾ ಎನ್ನುತ್ತಾ ಅಕ್ಕರೆ ತೋರುವ, ಧಾರವಾಡದ ತಮ್ಮನಂಥ ಹುಡುಗ, ಕವಿ ರಾಜಕುಮಾರ ಮಡಿವಾಳರ್ ಮೂಲಕ ನನ್ನ ಕಾದಂಬರಿಗೆ ಶೀರ್ಷಿಕೆ ದೊರೆಯಿತು. ಬೇಂದ್ರೆ ಅಜ್ಜ ನನಗೆ ಆಸರೆಯಾದರು. ರಾಜಕುಮಾರ್ ಗೆ  ನನ್ನ ಪ್ರೀತಿಯ ವಂದನೆಗಳು.

ಆಸರಕ್ಕೂ ಬೇಸರಕ್ಕೂ ಕೊರತೆಯಿಲ್ಲದ ಬೀಜವೇ, ಮಣ್ಣು ಸಿಕ್ಕರೆ ಸಾಕು ಕಣ್ಣುಮುಚ್ಚಿ ಕಣ್ಣು ತೆಗೆಯುದರೊಳಗೆ ಚಿಗುರು, ಚಿಗಿಯಲೆಂದೆ ಇರುವಂಥ ಗಟ್ಟಿ ಕಾಳು, ’ಮುಕ್ಕು ಚಿಕ್ಕಿಯ ಕಾಳು’. ಬೇಂದ್ರೆಯವರ ಸಾಲು ತುಂಬಾ ಸೂಕ್ತವಾದ ಶೀರ್ಷಿಕೆ ಅನಿಸಿತು ನನಗೆ.

ಮುಕ್ಕು ಎನ್ನುವುದಕ್ಕೆ ಗಬಗಬ ತಿನ್ನುವುದು ಎನ್ನುವುದು ಸಾಮಾನ್ಯಾವಾಗಿ ಎಲ್ಲೆಡೆ ಬಳಕೆಯಲ್ಲಿರುವ ಅರ್ಥ. ಇದರ ಜೊತೆಗೆ ಬೀಸುವಕಲ್ಲಿನ ಬಾಯಲ್ಲಿ ಹಾಕುವ ಮುಷ್ಟಿಯಷ್ಟು ಕಾಳಿಗೂ ಮುಕ್ಕು ಎನ್ನುತ್ತಾರೆ, ಭಗ್ನ ಎನ್ನುವುದಕ್ಕೂ ಬಳಸುತ್ತಾರೆ, ಹಾಗೆಯೇ ಉತ್ತರ ಕರ್ನಾಟಕದ ಕೆಲವೆಡೆ ‘ಸ್ವಲ್ಪ’ ಪದದ ಪರ್ಯಾಯವಾಗಿ ಮುಕ್ಕು ಬಳಕೆಯಲ್ಲಿದೆ. ಗಬಗಬ ಎನ್ನುವ ಅರ್ಥದ ಹೊರತಾಗಿ ಉಳಿದೆಲ್ಲ ಅರ್ಥಗಳೂ, ಅವುಗಳ ಜೊತೆಗೆ ‘ಚಿಕ್ಕಿಯ ಕಾಳು’ ನನ್ನ ಈ ಕಾದಂಬರಿಯ ಹಂದರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತದೆ ಅನಿಸಿತು ನನಗೆ. ಹೀಗಾಗಿ ಇದು ಮುಕ್ಕು ಚಿಕ್ಕಿಯ ಕಾಳಿನ ಕತೆ.

ಹೀಗೆ ನನ್ನಿಂದ ಒಂದು ಕಾದಂಬರಿ ಬರಲು ನಿಮಿತ್ತರಾದ ‘ಕಥನ ಕಮ್ಮಟ’ದ ನಿರ್ದೇಶಕರಾಗಿದ್ದ ಮತ್ತು ನಾನು ವಿಶ್ವ ಸಾಹಿತ್ಯದತ್ತ ಗಮನ ಹರಿಸುವಂತೆ ಮಾಡಿದ ಶ್ರೀ. ಎಸ್. ದಿವಾಕರ್ ಸರ್ ಅವರಿಗೂ ಹಾಗು ಸುಚಿತ್ರ ಫಿಲ್ಮ್ ಸೊಸೈಟಿಯ ಆಯೋಜಕರಿಗೂ ನನ್ನ ಹೃತ್ಪೂರ್ವಕ ವಂದನೆಗಳು.

ನಮ್ಮ ಈ ಹೊತ್ತಿಗೆಯ ಕಾರ್ಯಕ್ರಮಗಳಿಗೆ ಉಪನ್ಯಾಸ ಕೊಡಲು ತಾವು ಬರಬೇಕು ಎನ್ನುವ ವಿನಂತಿಯನ್ನೊಳಗೊಂಡು, ನಾನು ಬರೆದುದನ್ನು ಕಳುಹಿಸಿ ಅಭಿಪ್ರಾಯಕ್ಕಾಗಿ ಕೇಳಿಕೊಂಡಾಗಲೆಲ್ಲ ನನ್ನ ಕಾಟವನ್ನು ಪ್ರೀತಿಯಿಂದಲೇ ಸಹಿಸಿಕೊಂಡವರು ನಮ್ಮ ನಾಡಿನ ಹಿರಿಯ ವಿಮರ್ಶಕರಾದ ಡಾ. ಸಿ.ಎನ್ ರಾಮಚಂದ್ರನ್ ಸರ್. ಅವರ ಸಹನೆ, ನನ್ನಂಥ ಕಿರಿಯರನ್ನೂ ಗೌರವದಿಂದ ನಡೆಸಿಕೊಳ್ಳುವ ರೀತಿ, ನೋವಾಗದಂತೆ ತಪ್ಪುಗಳನ್ನು ಸೂಕ್ಷ್ಮವಾಗಿ, ಮೃದುವಾಗಿ ತಿಳಿಸಿ ನಮ್ಮನ್ನು ನಾವು ತಿದ್ದಿಕೊಳ್ಳುವಂತೆ ಪ್ರೇರೇಪಿಸುವ ಪ್ರತ್ಯುತ್ತರಗಳು ನನ್ನಲ್ಲಿ ಇನ್ನಷ್ಟು ವಿನಯವನ್ನು ರೂಢಿಸಿಕೊಳ್ಳುವಂತೆ ಮಾಡಿವೆ. ಈ ಕಾದಂಬರಿಗೆ ಮುನ್ನುಡಿ ಬರೆದು ಹರಸಿದ ಸಿಎನ್‍ಆರ್ ಸರ್ ಅವರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು. ಸಿಎನ್‍ಆರ್ ಅವರಂತೆಯೇ ಕಿರಿಯರನ್ನು ಪ್ರೋತ್ಸಾಹಿಸುವ, ವಿಮರ್ಶಕರೂ, ಸಾಹಿತಿಯೂ ಆಗಿರುವ ಡಾ. ಕೆ. ಸತ್ಯನಾರಾಯಣ ಸರ್ ಅವರಲ್ಲಿ ಬೆನ್ನುಡಿಗಾಗಿ ಕೇಳಿಕೊಂಡಾಗ ಅಕ್ಕರೆಯಿಂದ ಬರೆದು ಶುಭ ಹಾರೈಸಿದರು. ಡಾ. ಕೆ. ಸತ್ಯನಾರಾಯಣ ಸರ್‍ಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು.

ವೃತ್ತಿ, ಕುಟುಂಬದ ಒತ್ತಡಗಳ ನಡುವೆಯೂ ಬಿಡುವು ಮಾಡಿಕೊಂಡು ನನ್ನ ಈ ಕಾದಂಬರಿಗೆ ಒಪ್ಪವಾದ ಮುಖಪುಟ ರಚಿಸಿ ಕೊಟ್ಟ, ನನ್ನ ಮೆಚ್ಚಿನ ವ್ಯಂಗ್ಯಚಿತ್ರಕಾರ ಸೃಜನ್ ಅವರಿಗೆ ವಂದನೆಗಳು.

ಈ ಹೊತ್ತಿಗೆಯ ಕಾರ್ಯಕ್ರಮಗಳಲ್ಲಿ ತಮ್ಮ ಉಪನ್ಯಾಸಗಳ ಮೂಲಕ ನನ್ನ ಸಾಹಿತ್ಯದ ಅರಿವನ್ನು ವಿಸ್ತರಿಸಿಕೊಳ್ಳಲು ಅನುವು ಮಾಡಿಕೊಟ್ಟ ಕನ್ನಡದ ಸಾಹಿತ್ಯ ದಿಗ್ಗಜರಿಗೆಲ್ಲ ನನ್ನ ಪ್ರಣಾಮಗಳು.

“ನಾನು ತುಂಬಾ ಪ್ರೀತಿಸುವ, ಗೌರವಿಸುವ ಹಿರಿಯ ಸಾಹಿತಿ ವೈದೇಹಿ ಅವರಿಗೆ, ನನ್ನ ನಲ್ಮೆಯ ಕತೆಗಾರ್ತಿ, ಕವಿ ತುಳಸಿ ವೇಣುಗೋಪಾಲ್, ನಮ್ಮೆಲ್ಲರ ಪ್ರೀತಿಯ ಸಾಹಿತಿ, ಪತ್ರಕರ್ತರಾದ ಜೋಗಿ, ಪ್ರೀತಿಯ ಕತೆಗಾರ ಕರ್ಕಿ ಕೃಷ್ಣಮೂರ್ತಿ, ಮುಂಬೈನ ಇನ್ನೋರ್ವ ಗೆಳತಿ ಕವಿ ಗಿರಿಜಾ ಶಾಸ್ತ್ರಿ ಹಾಗು ಡಾ. ರಘುನಾಥ್, ಇವರೆಲ್ಲರಿಗೂ ಪ್ರೀತಿಪೂರ್ವಕ ವಂದನೆಗಳು.

ಈ ಕಾದಂಬರಿಯ ಪ್ರತಿ ಹಂತದ ಬೆಳವಣಿಗೆಯ ಸಮಯದಲ್ಲಿ, ಮುಗೀತಾ? ಬರೆಯಿರಿ, ಬರೆದು ಮುಗಿಸಿ ಎನ್ನುತ್ತಾ, ಪ್ರೀತಿಯಿಂದ ಕಾದಂಬರಿಯ ಬೆಳವಣಿಗೆಯನ್ನು ವಿಚಾರಿಸಿಕೊಳ್ಳುತ್ತಾ ಹುರುಪು ತುಂಬಿದವರು, ಮುಂಬೈನ ಕನ್ನಡ ಮತ್ತು ತುಳು ಸಾಹಿತಿ, ರಂಗ ನಿರ್ದೇಶಕ, ಹಿರಿಯಣ್ಣನಂಥ ಸ್ನೇಹಿತರಾದ ಸಾ. ದಯಾ ಮತ್ತು ನಮ್ಮ ಈ ಹೊತ್ತಿಗೆಯ ಆತ್ಮೀಯ ಗೆಳತಿ ಕತೆಗಾರ್ತಿ, ಕಾದಂಬರಿಗಾರ್ತಿ ತೇಜಸ್ವಿನಿ ಹೆಗಡೆ ಅವರು.

ಇಡೀ ಕಾದಂಬರಿಯನ್ನು ಓದಿ ಅಲ್ಲೊಂದು ಇಲ್ಲೊಂದು ಕಂಡ ಕಾಗುಣಿತ ದೋಷಗಳನ್ನು ಸರಿ ಪಡಿಸುವುದರ ಜೊತೆಗೆ ತಮ್ಮ ನೇರ ಅಭಿಪ್ರಾಯ ತಿಳಿಸಿದವರು ಸಾ. ದಯಾ, ಮುಂಬೈ ಕನ್ನಡ ರಂಗಭೂಮಿಯ ಅಭಿನೇತ್ರಿ, ಅಕ್ಕನಂಥ ಗೆಳತಿ ಅಹಲ್ಯ ಬಲ್ಲಾಳ್ ಹಾಗು ಹೃದಯಕ್ಕೆ ಹತ್ತಿರವಾಗಿರುವ ಗೆಳತಿ, ಮರಾಠಿ-ಕನ್ನಡ ಸಾಹಿತ್ಯದ ಅನುವಾದಕಿ ಅಕ್ಷತಾ ದೇಶಪಾಂಡೆ. ಈ ಹೊತ್ತಿಗೆಯ ಆತ್ಮೀಯ ಗೆಳತಿಯರಾದ ಕಾದಂಬರಿಗಾರ್ತಿಯರಾದ ಉಷಾ ರೈ ಮೇಡಂ, ಗೀತಾ ಬಿ.ಯು, ಕತೆಗಾರ್ತಿಯರಾದ ಜಯಶ್ರೀ ದೇಶಪಾಂಡೆ, ಅಪರ್ಣಾ ರಾವ್, ಸಿಂಧು ರಾವ್, ಮಾಲಿನಿ ಗುರುಪ್ರಸನ್ನ, ಅನಿತಾ ನರೇಶ್ ಮಂಚಿ, ರೂಪಾ ಸತೀಶ್, ಕುಮುದವಲ್ಲಿ ಅರುಣಮೂರ್ತಿ, ಸಂಯುಕ್ತ ಪುಲಿಗಲ್ ಹಾಗು ಭಾರತಿ ಬಿ.ವಿ, ಸಂಧ್ಯಾರಾಣಿ, ಕುಸುಮಬಾಲೆ, ಸೋದರಳಿಯ ಪವನ್ ಪಾಟೀಲ್ ಇವರೆಲ್ಲರ ಪ್ರೋತ್ಸಾಹವನ್ನು ಪ್ರೀತಿಯಿಂದ ನೆನೆಯುತ್ತೇನೆ.

ನನ್ನ ಈ ಹೊತ್ತಿಗೆಯ ಪುಟ್ಟ ಬಳಗದ ಪ್ರೀತಿ ಬಲು ದೊಡ್ಡದು. ಎಲ್ಲದಕ್ಕೂ ಜೊತೆಯಾಗಿ ನಿಂತು, ಸಾಹಿತ್ಯಿಕ ಕಾರ್ಯಕ್ರಮಗಳೆಲ್ಲವೂ ಸುಲಲಿತವಾಗಿ ನಡೆಯುವಂತೆ ನೋಡಿಕೊಂಡು, ನನ್ನಲ್ಲೊಂದು ವಿಶ್ವಾಸ ತುಂಬುವ ರೀತಿ ಅನನ್ಯ. ಈ ಹೊತ್ತಿಗರೆಲ್ಲರ ಆಪ್ತ ಸಹವಾಸಕ್ಕೆ ನನ್ನ ನಮನಗಳು.

ಅಂತಃಪುರದ ಸಖಿಯರು, ಜನದನಿಯ ಎಲ್ಲ ಸದಸ್ಯರು ಹಾಗು ನನ್ನ ರಂಗಭೂಮಿ, ಕಿರುತೆರೆಯ ನಿರ್ದೇಶಕರು ಮತ್ತು ಕಲಾವಿದ ಬಳಗವನ್ನೆಲ್ಲ ಈ ಹೊತ್ತಲ್ಲಿ ತುಂಬಾ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿರುವೆ. ಇಲ್ಲದೆ ಹೋದಲ್ಲಿ ನನ್ನ ಈ ಮಾತುಗಳು ಅಪೂರ್ಣ.

ಈ ಕಾದಂಬರಿಯನ್ನು ಓದುಗರು ಹೇಗೆ ಸ್ವೀಕರಿಸಬಹುದು ಎನ್ನುವ ಕುತೂಹಲ ಖಂಡಿತ ಇದೆ. ವಂದನೆಗಳು.

10 comments

 1. ಖುಶಿ!
  ಪ್ರಸವ ಕೋಣೆಯ ಬಾಗಿಲ ಹೊರಗೇ ಕಾದಿದ್ದೆ

  ನನಗೂ ಕುತೂಹಲ..:)

  • ಗರ್ಭವತಿಯ ಆರೈಕೆ ಮಾಡಿದವರು ನೀವು. ನಿಮ್ಮ ಕುತೂಹಲಕ್ಕೂ ನನ್ನಂಥದ್ದೆ ಕಾತರ ಬಲ್ಲೆ ನಾನು. ಲವ್ ಯೂ . 🙂

 2. ದಶಕದ ನಂತರ ಕಾದಂಬರಿಯನ್ನೇ ಕನ್ನಡಿಗರ ಕೈಗೆ ನೀಡುತ್ತಿರುವುದರಿಂದ ವಿಳಂಬ ಕ್ಷಮಾರ್ಹ 🙂 ಅಭಿನಂದನೆ ಮತ್ತು ಶುಭಾಶಯಗಳು.

  • ಧನ್ಯವಾದಗಳು ರಾಜೀವ್.

 3. ಮೇಡಂ ನಮಸ್ಕಾರ, ನಾನು ನಿಮ್ಮ ನೇತೃತ್ವದ ಇ ಹೊತ್ತಿಗೆ ಕಮ್ಮಟದಲ್ಲಿ(2016- ಪ್ರೀಡಂ ಪಾರ್ಕ ಬೆಂಗಳೂರು) ಭಾಗವಹಿಸಿದ್ದೆ. ನೆನಪಿಗಾಗಿ ಹೇಳಿದೆ. ಕಾದಂಬರಿ ಹೊರತಂದಿರುವದಕ್ಕೆ ಶುಭಾಶಯಗಳು. ನಾನು ಬೆಂಗಳೂರಿನಿಂದ ( ರಾಜಕಾರಣ ಬಿಟ್ಟು) ಎಲ್ಲದರಿಂದಲೂ ದೂರವಿರುವ, ಬೇಕೆಂತಲೇ ದೂರವಿರಿಸಿದ ಉತ್ತರಕನ್ನಡದ ಸಿದ್ದಾಪುರದವನು. ನಿಮ್ಮ ಕೃತಿಯನ್ನು ಪೋಷ್ಟನಲ್ಲಿ ಕಳಿಸಲು ಸಾಧ್ಯವಾದರೆ ಕಳಿಸಿ, ಹಣ ಕೊಟ್ಟು ಪಡೆದುಕೊಳ್ಳುತ್ತೇನೆ. ಇಲ್ಲವಾದರೆ ಅಪರೂಪಕ್ಕೆ ಬೆಂಗಳೂರಿಗೆ ಬಂದಾಗ ಪುಸ್ತಕ ಮಳಿಗೆಯಲ್ಲಿ ಕೊಳ್ಳುತ್ತೇನೆ. ಪ್ರೀತಿ ಇರಲಿ

 4. ನಮಸ್ಕಾರ ಗಂಗಾಧರ ಅವರೇ.
  ಧನ್ಯವಾದಗಳು. ಜುಲೈ ೧೬ರರಿಂದಲೇ ಪುಸ್ತಕವನ್ನು, ಸಪ್ನ ಹಾಗು ನವಕರ್ನಾಟಕದ ವೆಬ್‍ಸೈಟುಗಳಲ್ಲಿ ಆನ್‍ಲೈನ್ ಮುಖಾಂತರ ನೀವು ಖರೀದಿಸಬಹುದು. ನೀವು ನಮ್ಮ ಕಮ್ಮಟದ ಅಭ್ಯರ್ಥಿಯಾಗಿದ್ದಿರಿ ಎಂದು ನೆನಪಿಸಿ ಆ ದಿನಗಳ ಸಾರ್ಥಕತೆಯನ್ನು ಮತ್ತೆ ಅನುಭವಿಸುವಂತೆ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್. ಅಂದ ಹಾಗೆ ಫ್ರೀಡಂ ಪಾರ್ಕಲ್ಲಿ 2014ರಲ್ಲಿ ಈ ಹೊತ್ತಿಗೆಯ ಕಥಾ ಕಮ್ಮಟ ಏರ್ಪಡಿಸಿದ್ದೆವು 2016ರಲ್ಲಿ ಅಲ್ಲ. ಘಟನೆಗಳು ನೆನಪಿರುವಷ್ಟು ಇಸವಿಗಳು ನೆನಪಿರುವುದಿಲ್ಲ ಎಂದು ಬಲ್ಲೆ. ಸುಮ್ಮನೆ ನೆನಪಿಸಿದೆ ಅಷ್ಟೆ.

 5. ನಿಮಗೆ ಅನೇಕ ಅಭಿನಂದನೆಗಳು. ಕುತೂಹಲ ‌ಮತ್ತು ಹೆಮ್ಮೆಯಿಂದ ಕಾಯುತ್ತಿರುವೆ

Leave a Reply